Arranged Marriage: ದಾಂಪತ್ಯದಲ್ಲಿ ಸಮಸ್ಯೆಯಾದಾಗ ಬಗೆಹರಿಸಿಕೊಳ್ಳುವುದು ಹೇಗೆ ?

By Suvarna NewsFirst Published Jan 24, 2022, 7:07 PM IST
Highlights

ಆರೇಂಜ್ಡ್ ಮ್ಯಾರೇಜ್ (Arranged Marriage) ಅಂದ್ರೆ ಕೇಳ್ಬೇಕಾ. ಇಷ್ಟಕಷ್ಟ, ಮನೆ, ಫ್ಯಾಮಿಲಿ (Family) ಯಾವುದರ ಬಗ್ಗೆನೂ ಹೆಚ್ಚು ಗೊತ್ತಿರಲ್ಲ. ಹಿರಿಯರು ನೋಡಿದ್ರೂ ಮದ್ವೆನೂ ಆಯ್ತು. ಹೀಗಿದ್ದಾಗ ದಾಂಪತ್ಯದಲ್ಲಿ ಒಂದಷ್ಟು ಸಮಸ್ಯೆ (Problem) ಬರೋದು ಸಹಜ. ಹೀಗಾದಾಗ ಏನ್ಮಾಡೋದು ?

ಭಾರತೀಯ ಸಂಸ್ಕೃತಿಯಲ್ಲಿ ಮದುವೆ (Marriage)ಯನ್ನು ಪವಿತ್ರ ಬಂಧವೆಂದು ಪರಿಗಣಿಸಲಾಗುತ್ತದೆ. ಮದುವೆಯು ಇಬ್ಬರು ವ್ಯಕ್ತಿಗಳು ತಮ್ಮ ಸಂಬಂಧವನ್ನು ಸಾರ್ವಜನಿಕ, ಅಧಿಕೃತ ಮತ್ತು ಶಾಶ್ವತಗೊಳಿಸುವ ಪ್ರಕ್ರಿಯೆಯಾಗಿದೆ. ಮದುವೆ ಎಂಬುದು ತಾಳಿಕಟ್ಟುವ ಪ್ರಕ್ರಿಯೆಯ ಮೂಲಕ ಇಬ್ಬರು ವ್ಯಕ್ತಿಗಳನ್ನು ಬಂಧದಲ್ಲಿ ಸೇರಿಸುತ್ತದೆ, ಇಬ್ಬರ ಅಪೂರ್ಣ ವ್ಯಕ್ತಿತ್ವವನ್ನು ಪೂರ್ಣಗೊಳಿಸುತ್ತದೆ. ಮದುವೆಯ ಮೂಲಕ ಕೇವಲ ಹುಡುಗ-ಹುಡುಗಿ ಮಾತ್ರವಲ್ಲ ಎರಡೂ ಕುಟುಂಬಗಳು ಒಂದಾಗುತ್ತವೆ. ಮದುವೆಯ ವಿಷಯಕ್ಕೆ ಬಂದಾಗ ಲವ್ ಮ್ಯಾರೇಜ್, ಆರೇಂಜ್ಡ್ ಮ್ಯಾರೇಜ್ (Arranged Marriage)ಎರಡು ರೀತಿಯಲ್ಲಿ ಮದುವೆಯಾಗುವುದನ್ನು ನೋಡಬಹುದು. ಹುಡುಗ-ಹುಡುಗಿ ಪರಸ್ಪರ ಪ್ರೀತಿಸಿ ಮದುವೆಯಾಗುವುದು ಒಂದೆಡೆಯಾದರೆ, ಹಿರಿಯರೇ ಮಾತನಾಡಿ ಮದುವೆ ಮಾಡಿಸುವುದು ಇನ್ನೊಂದು ರೀತಿ. 

ಲವ್ (Love)ಮ್ಯಾರೇಜ್ ಆಗಿದ್ದಲ್ಲಿ ಹುಡುಗ-ಹುಡುಗಿ ಪರಸ್ಪರ ತಿಳಿದಿರುತ್ತಾರೆ. ಆದರೆ, ಆರೇಂಜ್ಡ್ ಮ್ಯಾರೇಜ್ ಆಗಿದ್ದಾಗ ಹೆಚ್ಚು ಗುರುತು ಪರಿಚಯವಿಲ್ಲದ ಕಾರಣ ದಾಂಪತ್ಯದಲ್ಲಿ ಹಲವು ಬಾರಿ ಬಿರುಕು ಕಾಣಿಸಿಕೊಳ್ಳುವುದಿದೆ. ಯಶಸ್ವಿ ದಾಂಪತ್ಯಕ್ಕೆ ಸಂಗಾತಿಗಳ ನಡುವೆ ಪ್ರೀತಿ, ಗೌರವ ಇರಬೇಕಾದುದು ಅಗತ್ಯ. ದಾಂಪತ್ಯದಲ್ಲಿ ಸಿಟ್ಟು, ಅಸಮಾಧಾನಗಳು ಕಂಡು ಬಂದರೂ ದ್ವೇಷವನ್ನು ಇಟ್ಟುಕೊಳ್ಳಬಾರದು. ದ್ವೇಷದಿಂದ ದಾಂಪತ್ಯವನ್ನು ಮುಂದಕ್ಕೆ ಕೊಂಡೊಯ್ಯಲು ಸಾಧ್ಯವಿಲ್ಲ. ಸಮಸ್ಯೆಯನ್ನು ಮಾತನಾಡಿ ಬಗೆಹರಿಸಿಕೊಳ್ಳಬೇಕು. ಹಾಗಿದ್ರೆ, ಅರೇಂಜ್ಡ್ ಮ್ಯಾರೇಜ್‌ನಲ್ಲಿ  ದಾಂಪತ್ಯವನ್ನು ಸುಲಭವಾಗಿ ನಿಭಾಯಿಸುವುದು ಹೇಗೆ ?

Before Marriage: ಮದುವೆ ಮುನ್ನ ಮಾಡಬೇಕಾದ ಆ ಎಂಟು ಕೆಲಸಗಳು!

ಯಾವುದೇ ವಿಷಯವನ್ನು ಮುಚ್ಚಿಡಬೇಡಿ
ದಾಂಪತ್ಯ ಎಂದಾಗ ಪ್ರೀತಿ, ನಂಬಿಕೆ, ಭರವಸೆ ಅದಕ್ಕೆ ಭದ್ರ ಬುನಾದಿ. ಇದಿಲ್ಲದೆ ದಾಂಪತ್ಯ ಸುಗಮವಾಗಿ ಮುಂದಕ್ಕೆ ಹೋಗಲು ಸಾಧ್ಯವಿಲ್ಲ. ಆರೋಗ್ಯಕರ ದಾಂಪತ್ಯವನ್ನು ನಿರ್ಮಿಸಲು ಮತ್ತು ನಿರ್ವಹಿಸುವಲ್ಲಿ ನಂಬಿಕೆಯು ಅನಿವಾರ್ಯ ಅಂಶವಾಗಿದೆ. ಹೀಗಾಗಿ ನಿಮ್ಮ ಸಂಗಾತಿಯ ಮೇಲೆ ಯಾವತ್ತೂ ಗಾಢವಾದ ನಂಬಿಕೆ (Trust)ಯಿರಲಿ. ಅವರಿಂದ ಯಾವುದೇ ವಿಷಯವನ್ನು ಮುಚ್ಚಿಡಬೇಡಿ. ನಂಬಿಕೆಯಿಲ್ಲದಿದ್ದಾಗ ದಾಂಪತ್ಯ ಬುನಾದಿ ದಿನದಿಂದ ದಿನಕ್ಕೆ ಕುಸಿಯುತ್ತಲೇ ಹೋಗುತ್ತದೆ.

ಯಾವಾಗಲೂ ತ್ವರಿತವಾಗಿ ಕ್ಷಮೆಯಾಚಿಸಿ
ದಾಂಪತ್ಯದಲ್ಲಿ ಸಿಟ್ಟು, ಅಹಂಕಾರ ಹೆಚ್ಚಿದ್ದಾಗ ಖುಷಿಯಿಂದ ಜೀವನ ನಡೆಸಲು ಸಾಧ್ಯವಿಲ್ಲ. ಹೀಗಾಗಿ, ಉತ್ತಮ ದಾಂಪತ್ಯಕ್ಕಾಗಿ ಯಾವಾಗಲೂ ತ್ವರಿತವಾಗಿ ಕ್ಷಮೆಯಾಚಿಸುವುದನ್ನು ಮರೆಯಬೇಡಿ. ಗಂಡ-ಹೆಂಡತಿ ಯಾರಾದರೂ ಸರಿ, ಯಾವಾಗಲೂ ತಪ್ಪಿದ್ದಾಗ, ತಪ್ಪು ಮಾಡಿದಾಗ ಕ್ಷಮೆ (Apology) ಕೇಳಲು ಹಿಂಜರಿಯಬೇಡಿ. ಹೀಗಾಗಿ ಯಾವಾಗಾಲೂ ನಿಮ್ಮ ಕಡೆಯಿಂದ ತಪ್ಪಾದಾಗ, ಸಂಪೂರ್ಣವಾಗಿ ವಿವರಿಸಿ, ತಪ್ಪಾಯಿತೆಂದು ಕ್ಷಮೆ ಕೇಳಿ. ಮುಂದೆ ಯಾವತ್ತೂ ಇದು ಪುನರಾವರ್ತನೆಯಾಗುವುದಿಲ್ಲ ಎಂದು ಭರವಸೆ ನೀಡಿ. 

Loving Separately: ಒಟ್ಟಿಲ್ದೇನೂ ದಾಂಪತ್ಯ ಮುಂದುವರೆಸ್ಬೋದು! ಇದು ವೀಕೆಂಡ್ ದಾಂಪತ್ಯ..

ಕೆಲವೊಮ್ಮೆ ಕ್ಷಮಿಸಿ ಎಂದು ಹೇಳುವುದು ನಿಮ್ಮ ಸಂಗಾತಿಯನ್ನು ಸಮಾಧಾನಪಡಿಸದಿರಬಹುದು. ಇಂಥಹಾ ಸಂದರ್ಭದಲ್ಲಿ ಒಂದು ಕಪ್ ಚಹಾ, ಅವರು ಇಷ್ಟಪಡುವ ಹೂವುಗಳು ಅಥವಾ ಅವರ ನೆಚ್ಚಿನ ಸಿಹಿತಿಂಡಿಗಳನ್ನು ತರುವುದು ಮೊದಲಾದ ಕೆಲಸಗಳನ್ನು ಮಾಡಿ. ಇದು ನೀವು ಅವರ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೀರಿ ಎಂಬುದನ್ನು ಅವರಿಗೆ ನೆನಪಿಸಬಹುದು.

ಮಾತನಾಡುವುದನ್ನು ನಿಲ್ಲಿಸಬೇಡಿ
ಮದುವೆಯಾದ ಮೇಲೆ ಹೆಚ್ಚಿನ ದಂಪತಿಗಳು ಇದನ್ನು ಅನುಸರಿಸುತ್ತಾರೆ. ತಾನು ತಪ್ಪು ಮಾಡಿದಾಗ, ಅಥವಾ ಸಂಗಾತಿ ತಪ್ಪು ಮಾಡಿದಾಗ ಇದರಿಂದ ಬೇಸರಗೊಂಡು ಮಾತನಾಡುವುದನ್ನು ನಿಲ್ಲಿಸಿಬಿಡುತ್ತಾರೆ. ಅಥವಾ ಕೆಲವೊಮ್ಮೆ ಇಬ್ಬರೂ ಮಾತನಾಡಿ ಬಗೆಹರಿಸಲು ಯತ್ನಿಸಿ, ಮಾತು ತಾರಕಕ್ಕೇರಿ ವಾದ-ವಿವಾದಗಳಾಗಿ ನಾನೇನು ಮಾತನಾಡಲ್ಲ ಎಂದು ಸುಮ್ಮನಾಗಿ ಬಿಡುತ್ತಾರೆ. ಹೆಚ್ಚಿನ ದಂಪತಿಗಳು ದಾಂಪತ್ಯದಲ್ಲಿ ಜಗಳವಾದಾಗ ದಿನಗಟ್ಟಲೆ, ವಾರಗಟ್ಟಲೆ ಪರಸ್ಪರ ಮಾತನಾಡುವುದನ್ನು ಬಿಟ್ಟು ಬಿಡುತ್ತಾರೆ. ಆದರೆ ತಿಳಿದುಕೊಳ್ಳಿ, ಈ ರೀತಿಯ ಮೌನ ವ್ರತದಿಂದ ಯಾವ ಪ್ರಯೋಜನವೂ ಇಲ್ಲ. ಬದಲಾಗಿ ತಪ್ಪು ಗ್ರಹಿಸಿಗಳು ಇನ್ನಷ್ಟು ಹೆಚ್ಚಾಗುತ್ತದೆ. ಸಮಸ್ಯೆ ಇನ್ನಷ್ಟು ಬಿಗಡಾಯಿಸುತ್ತದೆ.

ಹೀಗಾಗಿ ಮಾತನಾಡುವುದರಿಂದ ನಾನು ಸೋತು ಬಿಟ್ಟೆ. ನನ್ನದೇ ತಪ್ಪು ಎಂಬಂತಾಗುತ್ತದೆ ಎಂಬ ಭಾವನೆಯಿಂದ ಹೊರ ಬನ್ನಿ. ತಪ್ಪು (Mistake) ಯಾರದ್ದೇ ಆಗಿದ್ದರೂ ಮುಕ್ತವಾಗಿ ಮಾತನಾಡಿ ಬಗೆಹರಿಸಿಕೊಳ್ಳಿ. ಮೌನವನ್ನು ಮುರಿಯಲು ಮತ್ತು ನಿಮ್ಮ ಸಂಗಾತಿಯ ಮುಂದೆ ದುರ್ಬಲರಾಗಲು ಹಿಂಜರಿಯದಿರಿ. 

click me!