ಮಕ್ಕಳಿಗೆ ಹಾಲಿಡೇಸ್ ಶುರುವಾಯ್ತು ಎಂದರೆ ಉದ್ಯೋಗಸ್ಥ ತಾಯಂದಿರಿಗೆ ಟೆನ್ಷನ್. ಮಕ್ಕಳನ್ನು ಮನೆಯಲ್ಲಿ ಒಂಟಿಯಾಗಿ ಅಥವಾ ಡೇ ಕೇರ್‍ನಲ್ಲಿ ಬಿಟ್ಟು ಬರುವಾಗ ಅವರೊಂದಿಗೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲವಲ್ಲ ಎಂಬ ಗಿಲ್ಟ್ ಕಾಡಿಸಿ ಸತಾಯಿಸುತ್ತದೆ.
ಮಕ್ಕಳಾದ ಮೇಲೆ ಉದ್ಯೋಗಸ್ಥ ಮಹಿಳೆ ಅನುಭವಿಸುವ ಸಂಕಟಗಳು, ತೊಳಲಾಟಗಳು ಒಂದೆರಡಲ್ಲ. ಹಾಲುಗಲ್ಲದ ಕಂದನನ್ನು ಡೇ ಕೇರ್ ಅಥವಾ ಮನೆಯಲ್ಲೇ ಕೆಲಸದಾಕೆಯೊಂದಿಗೆ ಬಿಟ್ಟು ಬರುವಾಗ ಆಕೆ ಅದೆಷ್ಟೇ ಗಟ್ಟಿ ಮನಸ್ಸು ಮಾಡಿಕೊಂಡರೂ ಅಪರಾಧಿ ಪ್ರಜ್ಞೆಯೊಂದು ಬೆಂಬಿಡದೆ ಕಾಡುತ್ತದೆ. ಇ
ನ್ನು ಮಕ್ಕಳು ಬೆಳೆದು ಸ್ಕೂಲಿಗೆ ಹೋಗಲು ಪ್ರಾರಂಭಿಸಿದ ಮೇಲೆ ಸ್ವಲ್ಪ ಮಟ್ಟಿಗೆ ಮನಸ್ಸೇನೂ ಹಗುರವಾಗುತ್ತದೆ. ಆದರೆ, ಬೇಸಿಗೆ ರಜೆ, ದಸರಾ ರಜೆ ಅಥವಾ ಕ್ರಿಸ್‍ಮಸ್ ರಜೆ ಪ್ರಾರಂಭವಾದರೆ ಮತ್ತೆ ಮನಸ್ಸು ಭಾರವಾಗುತ್ತದೆ. ನಿತ್ಯದಂತೆ ಡೇ ಕೇರ್‍ಗೆ ಬಿಡುವಾಗ ಮಗುವಿನ ಮುಖದಲ್ಲಿ ಮೂಡುವ ನಿರಾಸೆ ತಾಯಿಯ ಮನಸ್ಸೆಂಬ ಸಾಗರದಲ್ಲಿ ನೂರಾರು ಅಲೆಗಳನ್ನು ಎಬ್ಬಿಸುತ್ತದೆ.
ಏನೋ ತಪ್ಪು ಮಾಡುತ್ತಿದ್ದೇನೆ ಎಂಬ ಅಪರಾಧಿ ಪ್ರಜ್ಞೆ ಆಕೆಯನ್ನು ಆ ಕ್ಷಣಕ್ಕೆ ಕಾಡಿ ಬಿಡುತ್ತದೆ. ಅದರಲ್ಲೂ ಗೃಹಿಣಿಯಾಗಿರುವ ಪಕ್ಕದ ಮನೆಯಾಕೆ ಮಕ್ಕಳೊಂದಿಗೆ ಪಾರ್ಕ್, ಝೋ, ಮಾಲ್ ಅಂತಹ ಸುತ್ತುವುದನ್ನು ನೋಡಿದಾಗ ಹೊಟ್ಟೆಯೊಳಗೆಲ್ಲ ಏನೋ ಸಂಕಟ ಹಾಲಿಡೇ ಟೆನ್ಷನ್: ಮಕ್ಕಳಿಗೆ ಸ್ಕೂಲಿಗೆ ಸುದೀರ್ಘ ರಜೆ ಸಿಕ್ಕಾಗಲೆಲ್ಲ ಉದ್ಯೋಗಸ್ಥ ತಾಯಂದಿರಲ್ಲಿ ಹತಾಶೆಯ ಭಾವನೆ ಮೂಡುತ್ತದೆ ಎನ್ನುವುದು ಅಮೆರಿಕದ ಫಸ್ಟ್ ಫಾರ್ ವಿಮೆನ್ ಇನ್‍ಶ್ಯುರನ್ಸ್ ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ. ರಜೆಯಿರುವಾಗ ಮಕ್ಕಳನ್ನು ಖುಷಿಯಾಗಿರಿಸಲು, ಮನರಂಜನೆ ಒದಗಿಸಲು ಉದ್ಯೋಗಸ್ಥ ಮಹಿಳೆಗೆ ಹೆಚ್ಚಿನ ಅವಕಾಶಗಳಿರುವುದಿಲ್ಲ. ಇದು ಆಕೆಯಲ್ಲಿ ಒತ್ತಡ, ಉದ್ವೇಗವನ್ನು ಸೃಷ್ಟಿಸುತ್ತದೆ ಎಂದಿದೆ ಈ ಅಧ್ಯಯನ.
ಈ ಪ್ರಾಬ್ಲಂಗೆ ಸಲ್ಯೂಶನ್ ಏನು?: ಮಕ್ಕಳಿಗೆ ಸಮಯ ನೀಡಲಾಗುತ್ತಿಲ್ಲ, ಅವರನ್ನು ಹೊರಗೆಲ್ಲೂ ಸುತ್ತಾಡಲು ಕರೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ ಎಂಬ ನೋವು ಉದ್ಯೋಗಸ್ಥ ಅಮ್ಮಂದಿರಿಗೆ ಕಾಡುವುದು ಸಹಜ. ಆದರೆ, ಎಲ್ಲ ಸಮಸ್ಯೆಗಳಿಗೂ ಒಂದು ಪರಿಹಾರ ಇದ್ದೇಇರುತ್ತದೆ. ಅದೇರೀತಿ ಯೋಚಿಸಿದರೆ ಇದಕ್ಕೂ ಒಂದಿಷ್ಟು ಪರಿಹಾರಗಳು ಖಂಡಿತ ಸಿಗುತ್ತವೆ. ಬಹುತೇಕ ಉದ್ಯೋಗಸ್ಥ ಅಮ್ಮಂದಿರು ರಜೆ ಪ್ರಾರಂಭವಾಗುವ ತನಕ ಈ ಬಗ್ಗೆ ಯೋಚಿಸುವುದಿಲ್ಲ.
undefined
ಇದೇ ಅವರು ಮಾಡುವ ದೊಡ್ಡ ತಪ್ಪು. ರಜೆಗೆ ಸ್ವಲ್ಪ ದಿನವಿರುವಾಗಲೇ ಈ ಕುರಿತು ಯೋಚಿಸಿ ಏನೆಲ್ಲ ಮಾಡಬಹುದು ಎಂಬ ಬಗ್ಗೆ ಒಂದು ಪ್ಲ್ಯಾನ್ ಸಿದ್ಧಪಡಿಸಬೇಕು. ಮಕ್ಕಳ ಬಳಿಯೂ ಈ ಕುರಿತು ಚರ್ಚಿಸಬೇಕು. ಇದರಿಂದ ಅನಗತ್ಯ ಒತ್ತಡ, ಪಾಪಪ್ರಜ್ಞೆ ಎಲ್ಲವುದರಿಂದಲೂ ಮುಕ್ತಿ ಪಡೆಯಬಹುದು. ಹಾಗಾದ್ರೆ ಮಕ್ಕಳಿಗೆ ರಜೆಯ ಮಜಾ ಸಿಗುವಂತೆ ಮಾಡೋದು ಹೇಗೆ?
1.ಅಜ್ಜಿ ಮನೆಯೆಂಬ ಆಲದ ಮರ: ಆಧುನಿಕತೆ ಎಷ್ಟೇ ಮುಂದುವರಿದಿದ್ದರೂ ಇಂದಿಗೂ ಮಕ್ಕಳಿಗೆ ಅಜ್ಜಿಮನೆ ಎಂದರೆ ಹಾಟ್ ಫೇವರೆಟ್ ಫ್ಲೇಸ್. ರಜೆಯ ಮಜಾ ಸವಿಯಲು ಮಕ್ಕಳಿಗೆ ಅಜ್ಜ-ಅಜ್ಜಿಯ ಸಾಂಗತ್ಯಕ್ಕಿಂತ ಉತ್ತಮವಾದ ಸ್ಥಳ ಮತ್ತೊಂದಿಲ್ಲ. ಹೀಗಾಗಿ ರಜೆ ಸಿಕ್ಕ ತಕ್ಷಣ ಮಕ್ಕಳೊಂದಿಗೆ ನಿಮ್ಮ ತವರು ಮನೆ ಇಲ್ಲವೆ ಪತಿಯ ಮನೆಗೆ ಹೋಗಿ. ಅಲ್ಲಿ ನೀವು ಒಂದೆರಡು ದಿನ ಕಾಲ ಕಳೆದು ಆ ಬಳಿಕ ಮಕ್ಕಳು ಬಯಸಿದರೆ ಅವರನ್ನು ಅಲ್ಲಿಯೇ ಬಿಟ್ಟು ಬನ್ನಿ. ಮಕ್ಕಳು ಯಾವಾಗ ಹಿಂತಿರುಗಿ ಬರಲು ಬಯಸುತ್ತಾರೋ ಆಗ ಹೋಗಿ ಕರೆದುಕೊಂಡು ಬನ್ನಿ.
ಈ ಜಗತ್ತಿನಲ್ಲಿ ನಿಮ್ಮನ್ನು ಬಿಟ್ಟರೆ ನಿಮ್ಮ ಮಕ್ಕಳನ್ನು ಅತ್ಯಂತ ಜತನದಿಂದ ಕಾಯುವ ಇನ್ನೊಂದು ಜೀವವಿದ್ದರೆ ಅದು ಖಂಡಿತಾ ನಿಮ್ಮ ತಾಯಿಯೇ ಆಗಿರುತ್ತಾರೆ. ಆದಕಾರಣ ಅಮ್ಮನ ಮಡಿಲಲ್ಲಿ ಮಕ್ಕಳನ್ನು ನಿಶ್ಚಿಂತೆಯಿಂದ ಬಿಟ್ಟು ಬರಬಹುದು. ಡೇ ಕೇರ್‍ಗಿಂತ ಅಜ್ಜಿ ಮನೆಯಲ್ಲಿ ಮಕ್ಕಳು ಹೆಚ್ಚು ಸಂತೋಷವಾಗಿರುತ್ತಾರೆ. ಈ ಬಗ್ಗೆ ಅನುಮಾನವೇ ಬೇಡ.
2.ಶಿಬಿರಗಳು, ಕ್ಲಾಸ್‍ಗಳಿಗೆ ಸೇರಿಸಿ: ಬೇಸಿಗೆ ರಜೆ ಸಮಯದಲ್ಲಿ ಅನೇಕ ಕಡೆ ಬೇಸಿಗೆ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ನಿಮ್ಮ ಮನೆ ಸಮೀಪದಲ್ಲೇ ಅಥವಾ ನಿಮ್ಮ ಮಗು ಹೋಗುತ್ತಿರುವ ಸ್ಕೂಲ್‍ನಲ್ಲಿ ಅಂಥ ಶಿಬಿರವಿದ್ದರೆ ಸೇರಿಸಿ. ಇದರಿಂದ ಮಕ್ಕಳಿಗೆ ಹೊಸ ವಿಷಯಗಳನ್ನು ಕಲಿಯಲು ಸಾಧ್ಯವಾಗುವ ಜೊತೆಗೆ ರಜೆಯ ಬೋರ್ ಕಾಡುವುದಿಲ್ಲ. ಈಜು, ಕ್ರಿಕೆಟ್, ಪೇಂಟಿಂಗ್, ಸಂಗೀತ, ಡ್ಯಾನ್ಸ್ ಮುಂತಾದ ಮಕ್ಕಳಿಗೆ ಆಸಕ್ತಿಯಿರುವ ಕ್ಲಾಸ್‍ಗಳಿಗೂ ಸೇರಿಸಬಹುದು.
3.ಟೂರ್ ಹೋಗಿ: ಮಕ್ಕಳಿಗೆ ರಜೆ ಯಾವಾಗ ಪ್ರಾರಂಭವಾಗುತ್ತದೆ ಎಂಬುದನ್ನು ಸ್ಕೂಲ್‍ನಲ್ಲಿ ಮೊದಲೇ ವಿಚಾರಿಸಿ. ಅದಕ್ಕೆ ಅನುಗುಣವಾಗಿ ನೀವು ಆಫೀಸ್‍ನಲ್ಲಿ ಒಂದು ವಾರ ಅಥವಾ 10 ದಿನಗಳ ಸುದೀರ್ಘ ರಜೆಗೆ ಅಪ್ಲೈ ಮಾಡಿ. ಮಕ್ಕಳೊಂದಿಗೆ ಎಲ್ಲಾದರೂ ಲಾಂಗ್ ಟ್ರಿಪ್ ಹೋಗಿ ಬನ್ನಿ.
4.ವಾರಾಂತ್ಯದಲ್ಲಿ ಔಟಿಂಗ್: ಮಕ್ಕಳಿಗೆ ರಜೆಯಿರುವಾಗ ವಾರಾಂತ್ಯದಲ್ಲಿ ಇಡೀ ದಿನವನ್ನು ಅವರಿಗೇ ಮೀಸಲಿಡಲು ಪ್ರಯತ್ನಿಸಿ. ಮಕ್ಕಳೊಂದಿಗೆ ಝೋ, ವಾಟರ್ ಪಾರ್ಕ್, ಮಾಲ್ ಅಥವಾ ಅವರಿಗೆ ಖುಷಿ ನೀಡುವ ತಾಣಕ್ಕೆ ಕರೆದುಕೊಂಡು ಹೋಗಿ.
5.ಬಂಧುಗಳ ಮನೆಯಲ್ಲಿ ಬಿಡಿ: ಸುದೀರ್ಘ ರಜೆಯಿರುವಾಗ ಮಕ್ಕಳಿಗೆ ಪ್ರತಿದಿನ ಡೇಕೇರ್‍ಗೆ ಹೋಗಲು ಬೋರ್ ಅಂದೆನಿಸಬಹುದು. ಇಂಥ ಸಂದರ್ಭದಲ್ಲಿ ನಿಮ್ಮ ಹತ್ತಿರದ ಬಂಧುಗಳ ಮನೆ ನಿಮ್ಮ ಮನೆಗೆ ಸನಿಹದಲ್ಲಿದ್ದರೆ ಬೆಳಗ್ಗೆ ಆಫೀಸ್‍ಗೆ ಹೋಗುವಾಗ ಮಕ್ಕಳನ್ನು ಅವರ ಮನೆಯಲ್ಲಿ ಬಿಟ್ಟು ಸಂಜೆ ಹಿಂತಿರುಗುವಾಗ ಕರೆದುಕೊಂಡು ಬರಬಹುದು.
6.ಮಕ್ಕಳ ಗೆಟ್ ಟುಗೆದರ್ ಏರ್ಪಡಿಸಿ: ಬೇರೆ ಊರಿನಲ್ಲಿರುವ ನಿಮ್ಮ ಅಣ್ಣ, ಅಕ್ಕ ಅಥವಾ ಅತ್ತಿಗೆ, ನಾದಿನಿಯನ್ನು ರಜೆಗೆ ನಿಮ್ಮ ಮನೆಗೆ ಆಹ್ವಾನಿಸುವ ಬಗ್ಗೆ ಯೋಚಿಸಿ. ಅವರು ಮಕ್ಕಳೊಂದಿಗೆ ನಾಲ್ಕೈದು ದಿನ ನಿಮ್ಮ ಮನೆಯಲ್ಲೇ ಉಳಿದರೆ ನಿಮ್ಮ ಮಕ್ಕಳಿಗೂ ಒಳ್ಳೆಯ ಕಂಪೆನಿ ಸಿಗುತ್ತದೆ.