ಶೋಲೆ ಬೆಟ್ಟದ ರಣಹದ್ದುಗಳಿಗೆ ಮಾರಕವಾದ ರಸ್ತೆ!

By Kannadaprabha NewsFirst Published Nov 6, 2019, 8:09 AM IST
Highlights

ರಾಮನಗರದ ಪ್ರಸಿದ್ಧ ಶೋಲೆ ಬೆಟ್ಟದ ರಣಹದ್ದುಗಳಿಗೆ ಆತಂಕ ಎದುರಾಗಿದೆ. ಇಲ್ಲಿನ ರಸ್ತೆ ನಿರ್ಮಾಣ ಕಾಮಗಾರಿಯಿಂದ ಸಂಕಷ್ಟದ ಸಂಭವ ಹೆಚ್ಚಾಗಿದೆ. 

ಬೆಂಗಳೂರು (ನ.06):  ಕರ್ನಾಟಕದ ಏಕೈಕ ರಣಹದ್ದು ಸಂರಕ್ಷಿತ ಅರಣ್ಯ ಪ್ರದೇಶವೆನಿಸಿದ ರಾಮನಗರದ ಪ್ರಖ್ಯಾತ ಶೋಲೆ ಬೆಟ್ಟ(ಬಾಲಿವುಡ್‌ನ ಪ್ರಸಿದ್ಧ ಸಿನಿಮಾ ಶೋಲೆ ಚಿತ್ರೀಕರಣಗೊಂಡ ಪ್ರದೇಶ)ಕ್ಕೆ ಇದೀಗ ಮತ್ತೆ ಆತಂಕ ಎದುರಾಗಿದೆ. ಈ ಮಹತ್ವದ ಅರಣ್ಯದ ವ್ಯಾಪ್ತಿಯ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಸರ್ಕಾರ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದು ಅಳಿವಿನಂಚಿನಲ್ಲಿರುವ ರಣ ಹದ್ದುಗಳ ಸಂತತಿಗೆ ಪೆಟ್ಟು ಬೀಳುವ ಸಾಧ್ಯತೆಯಿದೆ.

ಬೆಂಗಳೂರು- ಮೈಸೂರು ಹೆದ್ದಾರಿಯನ್ನು ರಾಮನಗರ ಪಟ್ಟಣದಲ್ಲಿನ ಕಟ್ಟಡಗಳನ್ನು ರಕ್ಷಣೆ ಮಾಡುವ ಸಲುವಾಗಿ ನಿರ್ಮಿಸುತ್ತಿರುವ ಹೊರ ವರ್ತುಲ ರಸ್ತೆ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಹಾದುಹೋಗುತ್ತಿದೆ. ಈ ರಸ್ತೆ ನಿರ್ಮಾಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಮತಿ ನೀಡಿದ್ದು, ಇಡೀ ರಣಹದ್ದು ಸಂತತಿಯನ್ನು ನಾಶ ಮಾಡುವುದಕ್ಕೆ ಮುಂದಾಗಿದ್ದಾರೆ ಎಂದು ಪಕ್ಷಿ ಮತ್ತು ವನ್ಯ ಜೀವಿ ಪ್ರೇಮಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.

ವನ್ಯಜೀವಿ ಸಂರಕ್ಷಿತ ಪ್ರದೇಶದಲ್ಲಿ 300 ಮೀಟರ್‌ನಿಂದ 1.8 ಕಿಲೋಮೀಟರ್‌ವರೆಗೂ ಪರಿಸರ ಸೂಕ್ಷ್ಮ ಪ್ರದೇಶವಾಗಿರುತ್ತದೆ. ಈ ಭಾಗಗಳಲ್ಲಿ ಯಾವುದೇ ರೀತಿಯಲ್ಲಿ ಅಭಿವೃದ್ಧಿ ಕೆಲಸಗಳು ನಡೆಸಬಾರದು ಎಂಬ ನಿರ್ಬಂಧವಿದೆ. ಆದರೆ, ರಾಮನಗರದ ಹೊರವರ್ತುಲ ರಸ್ತೆ ನಿರ್ಮಿಸುವ ಸಲುವಾಗಿ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ (ರಣ ಹದ್ದುಗಳ ಸಂರಕ್ಷಿತ ಪ್ರದೇಶದಿಂದ 400 ಮೀಟರ್‌) ಕಾಮಗಾರಿ ಪ್ರಾರಂಭವಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಾಮದೇವರ ಬೆಟ್ಟವು ಅಳಿವಿನಂಚಿನಲ್ಲಿರುವ ಉದ್ದ ಕೊಕ್ಕಿನ ರಣಹದ್ದು (ಲಾಂಗ್‌ ಬಿಲ್ಡ್‌ ವಲ್ಚರ್‌) ಮತ್ತು ಕುಂಬಾರಕೋಳಿ (ಈಜಿಪ್ಟಿಯನ್‌ ವಲ್ಚರ್‌)ಗಳ ವಾಸ ತಾಣವಾಗಿವೆ. ಈ ಹಿಂದೆ ಸುಮಾರು 50ಕ್ಕೂ ಹೆಚ್ಚು ರಣ ಹದ್ದುಗಳು ಈ ಭಾಗದಲ್ಲಿದ್ದವು. ಅವುಗಳ ಸಂಖ್ಯೆ ಇದೀಗ 10ಕ್ಕೆ ಇಳಿದಿದೆ. ಈ ಸಂದರ್ಭದಲ್ಲಿ ಅಭಿವೃದ್ಧಿ ಕಾರ್ಯ ನಡೆಸುವ ಮೂಲಕ ಅವುಗಳ ಸಂತತಿಗೆ ವೃದ್ಧಿಗೆ ಅಡ್ಡಿ ಪಡಿಸಲಾಗುತ್ತಿದೆ ಎಂದು ಪಕ್ಷಿ ಸಂತತಿ ಕುರಿತು ಸಂಶೋಧನೆ ನಡೆಸುತ್ತಿರುವ ಬಿ.ಶಶಿಕುಮಾರ್‌ ಆರೋಪಿಸುತ್ತಾರೆ.

ಪ್ರತಿ ವರ್ಷ ನವೆಂಬರ್‌ ತಿಂಗಳಿನಿಂದ ಮಾರ್ಚ್ ತಿಂಗಳವರೆಗೂ ರಣಹದ್ದುಗಳು ಸಂತಾನ ಪ್ರಕ್ರಿಯೆ ನಡೆಯುತ್ತದೆ. ರಾಮದೇವರ ಬೆಟ್ಟದಲ್ಲಿ ಕಳೆದ ಮೂರು ವರ್ಷಗಳಿಂದ ರಣಹದ್ದುಗಳ ಸಂತತಿ ವೃದ್ಧಿಯಾಗಿಲ್ಲ. ಹೀಗಿದ್ದರೂ ರಣಹದ್ದುಗಳ ಸಂರಕ್ಷಿತ ಪ್ರದೇಶ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಅಭಿವೃದ್ಧಿ ನಡೆಸಲಾಗುತ್ತಿದೆ. ಇದಕ್ಕೆ ತಕ್ಷಣ ಕಡಿವಾಣ ಹಾಕಬೇಕು ಎಂದು ಅವರು ಆಗ್ರಹಿದ್ದಾರೆ.

ಷರತ್ತು ಉಲ್ಲಂಘಿಸಿ ಕಲ್ಲಿನ ಸ್ಫೋಟ:

ರಸ್ತೆ ನಿರ್ಮಿಸುತ್ತಿರುವ ಮಾರ್ಗದ ಕೆಲ ಭಾಗಗಳಲ್ಲಿ ಕಲ್ಲು ಬಂಡೆಗಳಿವೆ. ಇವುಗಳನ್ನು ತೆರವುಗೊಳಿಸಲು ಸ್ಫೋಟಕಗಳನ್ನು ಬಳಕೆ ಮಾಡಲಾಗುತ್ತಿದೆ. ಇದರ ಶಬ್ದಕ್ಕೆ ರಣ ಹದ್ದುಗಳು ತೀವ್ರ ತರಹದ ತೊಂದರೆಗೆ ಗುರಿಯಾಗುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಶಶಿಕುಮಾರ್‌ ಆರೋಪಿಸಿದರು.

ಈ ಸಂಬಂಧ ಪ್ರತಿಕ್ರಿಯಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು, ರಸ್ತೆ ಕಾಮಗಾರಿ ಮಾಡಲು ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಇಲಾಖೆ ಅನುಮತಿ ನೀಡಿದ್ದು, ದೊಡ್ಡ ಪ್ರಮಾಣದ ಸ್ಫೋಟ ಮಾಡದಂತೆ ಷರತ್ತು ವಿಧಿಸಲಾಗಿದೆ. ಆದರೆ, ಷರತ್ತನ್ನು ಉಲ್ಲಂಘಿಸಲಾಗಿದೆ ಎಂದು ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಳಿಸಲು ಸೂಚನೆ ನೀಡಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಸ್ತೆ ನಿರ್ಮಾಣಕ್ಕೆ ಅನುಮತಿ ನೀಡುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಕಲ್ಲುಗಳನ್ನು ಸ್ಫೋಟಗೊಳಿಸಬಾರದು ಎಂದು ಷರತ್ತು ವಿಧಿಸಲಾಗಿತ್ತು. ಆದರೆ, ಷರತ್ತು ಉಲ್ಲಂಘಿಸಿರುವ ಸಂಬಂಧ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಕಲ್ಲುಗಳಿರುವ ಭಾಗದಲ್ಲಿ ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚನೆ ನೀಡಲಾಗಿದೆ.

-ದೇವರಾಜ್‌, ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ, ರಾಮನಗರ. ಅಕ್ಟೋಬರ್‌ 31ರಂದು ನಿವೃತ್ತಿಯಾಗಿದ್ದಾರೆ

click me!