ಲೇಆಫ್‌ ಯುಗದಲ್ಲಿ ಕೆಲಸ ಉಳಿಸಿಕೊಳ್ಳುವುದು ಹೇಗೆ?

By Suvarna News  |  First Published Dec 23, 2019, 2:41 PM IST

ಆರ್ಥಿಕ ಕುಸಿತದ ನಡುವೆ ಹಲವರ ಜಾಬ್‌ಗಳು ಹೋಗುತ್ತಿವೆ. ನಿಮ್ಮ ಜಾಬ್‌ ಉಳಿಸಿಕೊಳ್ಳಬೇಕೆಂದರೆ ನೀವು ಜಾಬ್‌ ಮಾರ್ಕೆಟ್‌ನಲ್ಲಿ ಅಪ್‌ಗ್ರೇಡ್‌ ಆಗಿರಬೇಕು. ಕೆಲಸ ಉಳಿಸಿಕೊಳ್ಳುವ ದಾರಿಗಳು ನಿಮಗೆ ಗೊತ್ತಾ?
 


ಈಗ ಎಲ್ಲರಿಗೂ ಲೇಆಫ್‌ನ ಭಯ. ದೇಶದ ಇಕಾನಮಿ ಚೆನ್ನಾಗಿಲ್ಲ. ಹಲವಾರು ಸ್ಟಾರ್ಟಪ್‌ಗಳು ಮುಚ್ಚುತ್ತಿವೆ. ಚೆನ್ನಾಗಿ ನಡೆಯುತ್ತಿರುವ ಕಂಪನಿಗಳಲ್ಲಿ ಕೂಡ ಬಡ್ತಿಯಿಲ್ಲ. ಇನ್‌ಕ್ರಿಮೆಂಟ್‌ ಇಲ್ಲ ಅನ್ನುವ ಪರಿಸ್ಥಿತಿ. ಯಾಕೆ ಅಂತ ಕೇಳಿದರೆ ಆದಾಯವೇ ಇಲ್ಲ ಅನ್ನುತ್ತದೆ ಮೇನೇಜ್‌ಮೆಂಟು. ನಿಮ್ಮ ಅಕ್ಕಪಕ್ಕದಲ್ಲೇ ಕುಳಿತಿರುವ ಕೆಲವರು ಕೆಲಸ ಕಳೆದುಕೊಂಡಿರಲೂ ಬಹುದು. ಇಂಥ ಸಂದರ್ಭದಲ್ಲಿ ನಮ್ಮ ಜಾಬ್‌ ಉಳಿಸಿಕೊಳ್ಳೋದು, ಇರೋ ಕಷ್ಟದ ಸ್ಥಿತಿಯಲ್ಲೇ ಹೊಸ ಬೆಳಕು ಕಾಣೋದು ಹೇಗೆ?

EQ ಹೆಚ್ಚಿರುವವರು ಉದ್ಯೋಗದಲ್ಲಿ ಒತ್ತಡ ನಿಭಾಯಿಸುವುದು ಹೀಗೆ

Latest Videos

undefined

ಅಪ್‌ಸ್ಕಿಲ್‌ ಆಗಿರಿ

ಹೆಚ್ಚಿನವರ ಕೆಲಸಗಳು ಹೋಗುವುದು ಅವರು ತಮ್ಮ ಉದ್ಯೋಗ, ವೃತ್ತಿರಂಗಕ್ಕೆ ತಕ್ಕಂತೆ ಟೆಕ್ನಾಲಜಿಯಲ್ಲಿ ಅಪ್‌ಗ್ರೇಡ್‌ ಆಗದೇ ಇರುವುದರಿಂದ. ಕಂಪ್ಯೂಟರ್‌ಗಳು ಬಂದ ಬಳಿಕ ಟೈಪ್‌ರೈಟಿಂಗ್‌ ಸೆಂಟರ್‌ಗಳು ಮುಚ್ಚಿದವು. ಯಾಕೆಂದರೆ ಕೆಲಸದ ಅಗತ್ಯವೇ ಇರಲಿಲ್ಲ. ಹಾಗೇ ಈಗ ಸಿಡಿ, ಡಿವಿಡಿ ಸೆಂಟರ್‌ಗಳೂ ಇಲ್ಲ. ಉದ್ಯೋಗದಲ್ಲಿ ಕೂಡ ಕೆಲವು ಕೌಶಲ್ಯಗಳು ಹಳತಾಗುತ್ತಿವೆ.

ಬ್ಯಾಂಕ್‌ಗಳಲ್ಲಿ ಕೂಡ ಪಾಸ್‌ಬುಕ್‌ ಬರೆದುಕೊಡುವವರು, ಕ್ಯಾಶ್‌ ಕೌಂಟರ್‌ಗಳು ಕಡಿಮೆಯಾಗುತ್ತಿವೆ. ಅಂದರೆ ಗ್ರಾಹಕರ ಹೊಸ ಬೇಡಿಕೆಗಳಿಗೆ ತಕ್ಕಂತೆ ಉದ್ಯೋಗಿಯೂ ಅಪ್‌ಗ್ರೇಡ್‌ ಆದಾಗ ಉಳಿದುಕೊಳ್ಳುತ್ತಾನೆ. ಇದಕ್ಕೆ ನೀವು ಮಾಡಬೇಕಾದ್ದು ಏನೆಂದರೆ, ಹೊಸದಾಗಿ ಬರುತ್ತಿರುವ ಯುವ ಉದ್ಯೋಗಿಗಳ ಬಳಿ ನೀವು ಕಲಿಯಬಹುದಾದ ಅಂಶಗಳು ಏನಿವೆ ಎಂದು ತಿಳಿದು, ಅಬವುಗಳನ್ನು ಕಲಿಯಲು ಯತ್ನಿಸಿ. ಕಂಪೆನಿಯೇ ನಡೆಸುವ ವೃತ್ತಿಕೌಶಲ, ಓರಿಯೆಂಟೇಶನ್‌ಗಳಿಗೆ ಸೇರಿಕೊಳ್ಳಿ. ನಿಮ್ಮ ಫೀಲ್ಡ್‌ನಲ್ಲಿ ಹೊಸ ಕಸ್ಟಮರ್‌ಗಳ ಬೇಡಿಕೆಗಳು ಏನು ಅಂತ ತಿಳಿದು ಅದಕ್ಕೆ ತಕ್ಕಂತೆ ನಿಮ್ಮ ಸ್ಕಿಲ್‌ ಅನ್ನೂ ಅಭಿವೃದ್ಧಿಪಡಿಸಿಕೊಳ್ಳಿ.

ಕಾರ್ಪೋರೇಟ್‌ ಜಗತ್ತಿನಲ್ಲಿ ಸರ್ವೈವ್‌ ಆಗಲು ಬೇಕು ಚಾಣಕ್ಯನ ಈ ಪಾಠಗಳು!

ಬಂಡಾಯವೇಳುವ ಪ್ರವೃತ್ತಿ ಬೇಡ

ಕೆಲವರು ಸಣ್ಣಸಣ್ಣ ಕಾರಣಕ್ಕೂ ರೊಚ್ಚಿಗೇಳುತ್ತಾರೆ. ಆದರೆ ಕಚೇರಿಯಲ್ಲಿ ಇದು ದುಬಾರಿಯಾಗಬಹುದು. ತನ್ನ ಕೆಲಸಕ್ಕೆ ಸರಿಯಾದ ಮನ್ನಣೆ ಸಿಗಲಿಲ್ಲ, ತನಗೆ ಬೇಕಾದ ಐಡೆಂಟಿಟಿ ದೊರೆಯುತ್ತಿಲ್ಲ, ತನಗಿಂತ ಕಿರಿಯರಿಗೆ ಬೇಗನೆ ಬಡ್ತಿ ಸಿಕ್ಕಿತು, ನಿನ್ನೆ ಮೊನ್ನೆ ಬಂದವರೆಲ್ಲಾ ತನಗಿಂತ ಹೆಚ್ಚು ಸಂಬಳ ತಗೋತಿದಾರೆ- ಎನ್ನುವ ವಿಷಯಗಳೆಲ್ಲ ಸಿಟ್ಟು ತರಿಸುವುದು ಸಹಜವೇ. ಆದರೆ ಇಂದಿನ ಕಾಲವೇ ಹಾಗಿದೆ. ಸೀನಿಯರ್‌ ಒಬ್ಬ ಕೆಲಸ ಬಿಟ್ಟರೆ ಆತನ ಸಂಬಳದಲ್ಲಿ ಇಬ್ಬರು ಯುವಕರನ್ನು ತರಬಹುದಲ್ಲಾ ಎಂದೇ ಉದ್ಯೋಗದಾತರು ಯೋಚಿಸುತ್ತಾರೆ. ಸಿಟ್ಟು ಗಲಾಟೆಗಳಿಂದ ನೀವು ನೋಟೆಡ್‌ ಆಗುವುದು, ಸಹೋದ್ಯೋಗಿಗಳ ಕಣ್ಣಲ್ಲಿ ಕಿರಿಕಿರಿ ಮನುಷ್ಯ ಅನಿಸಿಕೊಳ್ಳುವುದು, ಬಾಸ್‌ಗೆ ರಿಪೋರ್ಟ್‌ ಹೋಗುವುದು ಇವೆಲ್ಲ ಬೇಕಾ?

ಸಕಾರಾತ್ಮಕ ಅಭಿಪ್ರಾಯ

ಕಂಪನಿಯ ಬಗ್ಗೆ, ಬಾಸ್‌ನ ಬಗ್ಗೆ, ಸಹೋದ್ಯೋಗಿಗಳ ಬಗೆಗೆ ಯಾವುದೇ ನೆಗೆಟಿವ್‌ ಅಭಿಪ್ರಾಯಗಳನ್ನು ಆಡದಿರಿ. ಕಚೇರಿಯಲ್ಲೂ ಬೇಡ, ಹೊರಗೂ ಬೇಡ. ಕಂಪೆನಿಯ ಬ್ಯುಸಿನೆಸ್‌ನಲ್ಲಿ ನಕಾರಾತ್ಮಕ ಅಂಶಗಳಿದ್ದರೆ ಅದನ್ನು ನಯವಾಗಿ ಬಾಸ್‌ ಗಮನಕ್ಕೆ ತಂದು, ಅದರಿಂದ ಆಗಬಹುದಾದ ನಷ್ಟದ ಬಗ್ಗೆ ಎಚ್ಚರಿಸಿ, ಪರ್ಯಾಯ ಮಾರ್ಗವನ್ನೂ ಸೂಚಿಸುವುದು ಒಳ್ಳೆಯದು. ಹೊಸ ಐಡಿಯಾಗಳನ್ನು ಬಾಸ್‌ ಹೇಳಿದ ಕೂಡಲೇ ಉತ್ಸಾಹದಿಂದ ಸ್ವಾಗತಿಸುವುದು, ಕೂಡಲೇ ಅದನ್ನು ಜಾರಿ ಮಾಡುವುದು, ನೀವೇ ಒಳ್ಳೆಯ ಐಡಿಯಾಗಳನ್ನು ಹುಡುಕಿ ಅದನ್ನು ಬಾಸ್‌ಗೆ ಹೇಳುವುದು- ಇವೆಲ್ಲಾ ಮುಖ್ಯ. ಅಂತೂ ನೀವು ಉತ್ಸಾಹಿ ಪ್ರೋಆ್ಯಕ್ಟಿವ್‌ ಕೆಲಸಗಾರ ಅನ್ನುವುದು ಬಾಸ್‌ ಗಮನದಲ್ಲಿರಬೇಕು.

ಕೆಲಸದ ವೇಳೆ ಮನಸ್ಸನ್ನು ಪ್ರಶಾಂತವಾಗಿಟ್ಟುಕೊಳ್ಳುವುದು ಹೇಗೆ?

ನಿಮ್ಮ ಕೆಲಸ ಬಾಸ್‌ಗೆ ಗೊತ್ತಿರಲಿ

ನೀವು ಕಂಪೆನಿಗಾಗಿ ಕಷ್ಟಪಟ್ಟು ಕೆಲಸ ಮಾಡುವುದು ಬಾಸ್‌ನ ಗಮನದಲ್ಲಿರಲಿ. ಕೆಲವೊಮ್ಮೆ ನೀವು ಕೆಲಸ ಮಾಡುತ್ತಲೇ ಇರುತ್ತೀರಿ, ನಿಮ್ಮ ಮೇಲಿನವರು ಅದು ತಾವು ಮಾಡಿದ ಕೆಲಸವೆಂದು ಬಾಸ್‌ನ ಮುಂದೆ ತೋರಿಸಿಕೊಳ್ಳುತ್ತಿರುತ್ತಾರೆ. ನಿಮಗೆ ಕೊಡುತ್ತಿರುವ ಸಂಬಳಕ್ಕೆ ತಕ್ಕ ಪ್ರತಿಫಲವನ್ನು ಈತ ಕಂಪೆನಿಗೆ ತರುತ್ತಾನೆ ಎಂಬುದು ಮೇಲಿನವರಿಗೆ ತಿಳಿದಿದ್ದರೆ, ನಿಮ್ಮ ಸಂಬಳ ಹೆಚ್ಚಿಸಲು ಅವರು ಹಿಂದೆಮುಂದೆ ನೋಡುವುದಿಲ್ಲ.

ಆಫೀಸ್‌ ಗಾಸಿಪ್‌ ಬೇಡ

ಲೇಆಫ್‌ ಯುಗದಲ್ಲಿ ಹಲವರ ಕೆಲಸ ಹೋಗುವುದು ಸ್ವಾಭಾವಿಕವೇ. ಹಾಗೆಂದು ನೀವು ನಿಮ್ಮ ಸಹೋದ್ಯೋಗಿಗಳ ಜೊತೆ ಅವರ ಕೆಲಸ ಯಾಕೆ ಹೋಯ್ತು, ನೆಕ್ಸ್ಟ್‌ ಕೆಲಸ ಕಳೆದುಕೊಳ್ಳುವವರು ಯಾರು ಅಂತೆಲ್ಲಾ ಗಾಸಿಪ್‌ ಮಾಡಬಾರದು. ಅಂಥ ಮಾತುಕತೆಗಳು ನಿಮ್ಮ ಸ್ಟ್ರೆಸ್‌ ಲೆವೆಲ್‌ ಅನ್ನೂ ಹೆಚ್ಚಿಸುತ್ತವೆ.

ಕಚೇರಿಯ ಕೆಟ್ಟ ಪರಿಸರದಿಂದ ಕೆಟ್ಟವರಾಗುವ ತಾಯಂದಿರು!

ಕೆಟ್ಟದಕ್ಕೆ ತಯಾರಾಗಿರಿ

ಇವೆಲ್ಲವೂ ನಿಜ. ಆದರೆ, ಎಲ್ಲ ರೀತಿಯಲ್ಲೂ ನೀವು ತಯಾರಾಗಿದ್ದರೂ ಕೆಲಸ ಹೋಗಬಹುದು ಅನ್ನುವುದೂ ಗಮನದಲ್ಲಿರಲಿ. ಅದಕ್ಕೆ ನೀವು ಈಗಿನಿಂದಲೇ ತಯಾರಾಗಿರಬೇಕು. ಉದ್ಯೋಗ ಹೋದರೂ ಎರಡು ತಿಂಗಳು ಬದುಕಬಹುದಾದಷ್ಟು ಹಣ ನಿಮ್ಮ ಬ್ಯಾಂಕ್‌ ಬ್ಯಾಲೆನ್ಸ್‌ನಲ್ಲಿರಲಿ. ಹಾಗೇ ಇತರ ಕಂಪೆನಿಗಳಿಗೆ ನೀವು ಹೋಗಬಹುದಾದ ಸಾಧ್ಯತೆಗಳನ್ನೂ ತೆರೆದಿಟ್ಟುಕೊಳ್ಳಿ.

click me!