ಬಿಯಾಂಡ್ ಬೆಂಗಳೂರು ಸಮಾವೇಶ, ಸಹಭಾಗಿತ್ವದಲ್ಲಿ ಅಮೆರಿಕವನ್ನು ನೋಡಿ ಕಲಿಯಬೇಕಿದೆ: ಅಶ್ವತ್ಥನಾರಾಯಣ

By Gowthami K  |  First Published Oct 2, 2022, 11:53 PM IST

ಉದ್ಯಮರಂಗ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ ನಡುವಿನ ಅತ್ಯುತ್ತಮ ಸಹಭಾಗಿತ್ವದಿಂದ ಮಾತ್ರ ರಾಜ್ಯ ಹಾಗೂ ದೇಶದ ಆರ್ಥಿಕ ಬೆಳವಣಿಗೆಯನ್ನು ಸಾಧಿಸಲು ಸಾಧ್ಯ. ಈ ವಿಚಾರದಲ್ಲಿ ನಾವು ಅಮೆರಿಕವನ್ನು ನೋಡಿ ಕಲಿಯಬೇಕಾದ್ದು ಸಾಕಷ್ಟಿದೆ ಎಂದು ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.


ಹುಬ್ಬಳ್ಳಿ (ಅ.2): ಉದ್ಯಮರಂಗ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ ನಡುವಿನ ಅತ್ಯುತ್ತಮ ಸಹಭಾಗಿತ್ವದಿಂದ ಮಾತ್ರ ರಾಜ್ಯ ಹಾಗೂ ದೇಶದ ಆರ್ಥಿಕ ಬೆಳವಣಿಗೆಯನ್ನು ಸಾಧಿಸಲು ಸಾಧ್ಯ. ಈ ವಿಚಾರದಲ್ಲಿ ನಾವು ಅಮೆರಿಕವನ್ನು ನೋಡಿ ಕಲಿಯಬೇಕಾದ್ದು ಸಾಕಷ್ಟಿದೆ. ನಮ್ಮಲ್ಲಿ ಇಂತಹ ಸಹಭಾಗಿತ್ವದ ಸಂಸ್ಕೃತಿ ಇನ್ನೂ ಸಾಕಷ್ಟು ಬೆಳೆಯಬೇಕಾದ ಅಗತ್ಯವಿದೆ ಎಂದು ಐಟಿ ಮತ್ತು ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ. ಸೋಮವಾರ ಇಲ್ಲಿ ನಡೆಯಲಿರುವ 'ಬಿಯಾಂಡ್ ಬೆಂಗಳೂರು' ಸಮಾವೇಶಕ್ಕೆ ಪೂರ್ವಭಾವಿಯಾಗಿ, ವಿವಿಧ ಕಂಪನಿಗಳ ಸಿಇಒಗಳೊಂದಿಗೆ ಭಾನುವಾರ ಸಂಜೆ  ಏರ್ಪಡಿಸಲಾಗಿದ್ದ ದುಂಡು ಮೇಜಿನ ಸಭೆಯಲ್ಲಿ ಅವರು ಮಾತನಾಡಿದರು. ಉದ್ಯಮಗಳ ಬೆಳವಣಿಗೆಯಲ್ಲಿ ಸಂವಹನ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಂಪರ್ಕ ವ್ಯವಸ್ಥೆ ಮುಖ್ಯ ಪಾತ್ರ ವಹಿಸುತ್ತವೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ರಾಜ್ಯದಲ್ಲಿ ನೂತನವಾಗಿ 6 ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಜೊತೆಗೆ ಹೆದ್ದಾರಿಗಳ ಕ್ಷೇತ್ರದಲ್ಲಿ ಮೂಲಸೌಲಭ್ಯ ಅಭಿವೃದ್ಧಿ ತ್ವರಿತ ಗತಿಯಲ್ಲಿ ಆಗುತ್ತಿದೆ ಎಂದು ಅವರು ಉದ್ಯಮಿಗಳ ಗಮನಕ್ಕೆ ತಂದರು. 'ಒಂದು ಜಿಲ್ಲೆ, ಒಂದು ಉತ್ಪನ್ನ' ಉಪಕ್ರಮದಡಿ ರಾಜ್ಯದ 31 ಜಿಲ್ಲೆಗಳಿಂದಲೂ ಆಯಾ ಪ್ರದೇಶದ ವಿಶಿಷ್ಟ ಉತ್ಪನ್ನಗಳನ್ನು ಗುರುತಿಸಲಾಗಿದೆ. ಇದರಡಿಯಲ್ಲಿ ಮಾರುಕಟ್ಟೆ ವಿಸ್ತರಣೆ ಮತ್ತಿತರ ನೆರವು ನೀಡಲಾಗುವುದು. ಈ ಮೂಲಕ ರಾಜ್ಯದ ನಿವ್ವಳ ಆರ್ಥಿಕ ಬೆಳವಣಿಗೆಗೆ ನಿರ್ಣಾಯಕ ಕೊಡುಗೆ ಸಿಗುವಂತೆ ಮಾಡಲಾಗುವುದು ಎಂದು ಅವರು ವಿವರಿಸಿದರು.

ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಸಾಕಷ್ಟು ಒಳ್ಳೆಯ ನೀತಿಗಳಿವೆ. ಆದರೆ ನಮ್ಮಲ್ಲಿರುವ ಉದ್ದಿಮೆಗಳು ಈಗಲೂ ಬೇರೆಬೇರೆ ದೇಶದ ಕಂಪನಿಗಳಿಗೆ ಬೇಕಾದ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿ ಕೊಡುತ್ತಿವೆ. ಇದರ ಬದಲಿಗೆ ನಮ್ಮ ಕಂಪನಿಗಳೇ ಇವುಗಳ ಮಾಲೀಕತ್ವವನ್ನು ಹೊಂದುವಂತಹ ಉದ್ಯಮಶೀಲತೆ ಬೆಳೆಯಬೇಕು ಎಂದು ಅವರು ಆಶಿಸಿದರು.

Latest Videos

undefined

ನಮ್ಮಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ ಚೆನ್ನಾಗಿದೆ. ಇದರ ಜತೆಯಲ್ಲೇ ಈ ಕ್ಷೇತ್ರಕ್ಕೆ ಬೇಕಾದ ಹಣಕಾಸು ವ್ಯವಸ್ಥೆಯೂ ಚೆನ್ನಾಗಿ ಆಗಬೇಕು. ಆದರೆ ಸದ್ಯಕ್ಕೆ ಇದರಲ್ಲಿ ಕೊರತೆ ಇದೆ. ಉದ್ದಿಮೆಗಳು ಆರ್ಥಿಕ ಲಾಭದ ಜತೆಗೆ ಸಮಾಜದ ಬಗ್ಗೆಯೂ ಕಳಕಳಿ ರೂಢಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ನಮ್ಮಲ್ಲಿ ಶಿಕ್ಷಣ ಸಂಸ್ಥೆಯಿಂದ ಹೊರಬಿದ್ದ ನಂತರ ವಿದ್ಯಾರ್ಥಿಗಳು ಆ ಸಂಸ್ಥೆಯತ್ತ ತಿರುಗಿಯೂ ನೋಡುವುದಿಲ್ಲ. ಆದರೆ, ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹೀಗಿಲ್ಲ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಈ ನಿಟ್ಟಿನಲ್ಲಿ ದೊಡ್ಡ ಪರಿವರ್ತನೆ ತರಲಿದ್ದು, ನವಭಾರತ ನಿರ್ಮಾಣಕ್ಕೆ ಮುನ್ನುಡಿ ಬರೆಯುತ್ತಿದೆ. ಈ ವಿಚಾರದಲ್ಲಿ ರಾಜ್ಯವು ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ ಎಂದು ಅವರು ಬಣ್ಣಿಸಿದರು.

ಸಿಂಗಪುರವನ್ನು ಬಿಟ್ಟರೆ ಡಿಜಿಟಲ್ ಎಕಾನಮಿ ಮಿಷನ್ ತರಹದ ಸಂಸ್ಥೆ ರಾಜ್ಯದಲ್ಲಿ ಮಾತ್ರ ಇದೆ. ಇದರ ಜತೆಯಲ್ಲೇ ರಾಜ್ಯದ ಎಲ್ಲ ವಲಯಗಳಲ್ಲೂ ಉದ್ದಿಮೆಗಳ ವಿಕೇಂದ್ರೀಕರಣ ಆಗಬೇಕೆಂಬ ಉದ್ದೇಶದಿಂದ ಬಿಯಾಂಡ್ ಬೆಂಗಳೂರು ತರಹದ ಅನನ್ಯ ಕ್ರಮಗಳನ್ನು ರೂಪಿಸಲಾಗಿದೆ. ಇದರಿಂದಾಗಿ ಒಂದೇ ಕಡೆಯಲ್ಲಿ ಸೃಷ್ಟಿಯಾಗುವ ಒತ್ತಡ ಕಡಿಮೆಯಾಗಿ, ಸಮತೋಲಿತ ಕೈಗಾರಿಕಾ ಬೆಳವಣಿಗೆ ಸಾಧ್ಯವಾಗಲಿದೆ ಎಂದು ಸಚಿವರು ನುಡಿದರು.

ಸಭೆಯಲ್ಲಿ ರಾಜ್ಯ ಐಟಿ ಇಲಾಖೆಯ ನಿರ್ದೇಶಕಿ ಮೀನಾ ನಾಗರಾಜ್, ಕೆಡಿಇಎಂ ಮುಖ್ಯಸ್ಥ ಬಿ ವಿ ನಾಯ್ಡು, ಸಿಇಒ ಸಂಜೀವ್ ಗುಪ್ತ, ದೇಶಪಾಂಡೆ ಫೌಂಡೇಶನ್‌ನ ಸಿಇಒ ವಿವೇಕ್ ಪವಾರ್, ಎನ್ನೆಸ್ ಇನ್ಫೋಟೆಕ್‌ ಸಿಇಒ ಸಂತೋಷ್‌ ಹುರಳಿಕೊಪ್ಪ, ಇನ್ಫೋಮ್ಯಾಪ್‌ ಗ್ಲೋಬಲ್‌ ಸಿಇಒ ಸತೀಶ್ ಗ್ರಾಮಪುರೋಹಿತ, ಕೆನ್‌ ಅಗ್ರಿಟೆಕ್‌ನ ಎಂಡಿ ವಿವೇಕ್‌ ನಾಯಕ್, ಇಂಡಿವಿಲೇಜ್ ಟೆಕ್‌ ಸೊಲ್ಯೂಷನ್ಸ್‌ ಸಿಇಒ ಸ್ಮಿತಾ ಮಾಲಿ ಪಾಟೀಲ್ ಸೇರಿದಂತೆ 60ಕ್ಕೂ ಹೆಚ್ಚು ಉದ್ಯಮಿಗಳು ಉಪಸ್ಥಿತರಿದ್ದರು.

ಉತ್ಕೃಷ್ಟತಾ ಕೇಂದ್ರಗಳ ಸ್ಥಾಪನೆ, ಉದ್ಯೋಗ ಸೃಷ್ಟಿ  
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್‌ನ ಮೂಲಕ ಕಳೆದ 10 ತಿಂಗಳಲ್ಲಿ ಹುಬ್ಬಳ್ಳಿ-ಧಾರವಾಡ-ಬೆಳಗಾವಿ ಕ್ಲಸ್ಟರ್‍‌ನಲ್ಲಿಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಡೇಟಾ ಎಂಜಿನಿಯರಿಂಗ್, ಅಗ್ರಿಟೆಕ್ ಮತ್ತು ಫುಡ್‌ಟೆಕ್‌ ವಲಯಗಳಿಗೆ ಸಂಬಂಧಿಸಿದ ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಜತೆಗೆ ಇಎಸ್‌ಡಿಎಂ ವಲಯದ ಉತ್ಪನ್ನಗಳ ವಿನ್ಯಾಸ ಮತ್ತು ಮೂಲಮಾದರಿಗಳ ಉತ್ಪಾದನೆಗೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸಲಾಗಿದ್ದು, ಈ ಕ್ಲಸ್ಟರ್‍‌ನಲ್ಲಿರುವ ಉದ್ದಿಮೆಗಳಿಗೆ ನೆರವು ನೀಡಲು 'ಹುಬ್ಬಳ್ಳಿ ಕ್ಲಸ್ಟರ್ ವೆಂಚರ್ ಫಂಡ್' ಆರಂಭಿಸಲಾಗಿದೆ ಎಂದು ಐಟಿಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ವಿವರಿಸಿದರು. 

ಇದಲ್ಲದೆ, ಒಂದು ವರ್ಷಕ್ಕೂ ಕಡಿಮೆ ಅವಧಿಯಲ್ಲಿ ಇಲ್ಲಿ 25ಕ್ಕೂ ಹೆಚ್ಚು ಉದ್ದಿಮೆಗಳು ನೆಲೆಯೂರುವಂತೆ ಮಾಡಲಾಗಿದೆ. ಇದರಿಂದ 1,200ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ. ಇದಕ್ಕೆ ಪೂರಕವಾಗಿ 80ಕ್ಕೂ ಹೆಚ್ಚು ನವೋದ್ಯಮಗಳಿಗೆ ಆರ್ಥಿಕ ನೆರವು ನೀಡಿದ್ದು, ಇಲ್ಲಿ ಶೇಕಡ 30ರಷ್ಟು ಮಹಿಳಾ ಉದ್ಯಮಿಗಳೇ ಇದ್ದಾರೆ. ಒಟ್ಟಾರೆಯಾಗಿ 65ಕ್ಕೂ ಹೆಚ್ಚು ಟ್ರೇಡ್‌ಮಾರ್ಕ್‌ಗಳ ನೋಂದಣಿ ಮಾಡಲಾಗಿದೆ ಎಂದು ಅವರು ಹೇಳಿದರು.

click me!