ಸಂಬಳ ಜಾಸ್ತಿ ಮಾಡಿಕೊಳ್ಳಬೇಕೆಂದು ಬಯಸುವವರು ಈಗ ಬೆಂಗಳೂರಿಗೆ ಶಿಫ್ಟ್ ಆಗುವುದು ಬೆಸ್ಟ್. ಏಕೆಂದರೆ, ದೇಶದಲ್ಲೇ ಅತಿ ಹೆಚ್ಚು ಸಂಬಳ ನೀಡುವ ನಗರವೆಂದರೆ ಅದೇ ನಮ್ಮ ಐಟಿಸಿಟಿ ಬೆಂಗಳೂರು. ಅದರಲ್ಲೂ ಡಿಜಿಟಲ್ ಕೌಶಲ್ಯ ಹೊಂದಿರುವವರನ್ನು ಎಳೆದುಕೊಂಡು ಸಂತೋಷದಿಂದಲೇ ಸಂಬಳ ನೀಡುತ್ತವೆ ಕಂಪನಿಗಳು.
ನೀವು ಬೇಕಿದ್ದರೆ ದೇಶದ ಯಾವುದೇ ಮೂಲೆಯನ್ನು ಸುತ್ತಿ, ಅಲ್ಲಿ ಉದ್ಯೋಗ ನಿರ್ವಹಿಸಿ ಪರೀಕ್ಷಿಸಿ ಬನ್ನಿ. ಬೆಂಗಳೂರಿನಂತೆ ಕೈತುಂಬಾ ಸಂಬಳ ನೀಡುವ ಉದಾರತೆಯನ್ನು ಬೇರೆಲ್ಲೂ ಕಾಣಲಾರಿರಿ. ಹಾಗಂಥ ನಾವು ಹೇಳ್ತಿಲ್ಲ ಸ್ವಾಮಿ, ಇತ್ತೀಚೆಗೆ ನಡೆದ ಸರ್ವೆ ಹೇಳ್ತಿದೆ.
ಸರ್ವೆ
ಡಚ್ ಮೂಲದ ಜಾಗತಿಕ ಎಚ್‌ಆರ್ ಸೇವಾ ಸಂಸ್ಥೆ ರ್ಯಾಂಡ್‌ಸ್ಟಡ್ ಇನ್‌ಸೈಟ್ಸ್ ಸ್ಯಾಲರಿ ಟ್ರೆಂಡ್ಸ್ ವರದಿ 2019ರ ಪ್ರಕಾರ, ಬೆಂಗಳೂರಿನಲ್ಲಿರುವ ಉದ್ಯೋಗಿಗಳಿಗೆ ಕಂಪನಿಗಳು ನೀಡುವ ವಾರ್ಷಿಕ ಸಿಟಿಸಿಯು ಇತರೆ ನಗರಗಳಲ್ಲಿರುವ ಕಂಪನಿಗಳು ನೀಡುವುದಕ್ಕಿಂತಾ ಸಿಕ್ಕಾಪಟ್ಟೆ ಹೆಚ್ಚು. ದೇಶದ ಪ್ರಮುಖ 8 ನಗರಗಳಲ್ಲಿ ಸುಮಾರು 15 ರೀತಿಯ ಇಂಡಸ್ಟ್ರಿಗಳ 1 ಲಕ್ಷ ಉದ್ಯೋಗಗಳನ್ನು ಅಧ್ಯಯನಕ್ಕೊಳಪಡಿಸಿ ಈ ವರದಿ ಸಿದ್ಧಪಡಿಸಲಾಗಿದೆ.
ವರದಿಯು ಯಾವ ಪ್ರದೇಶದಲ್ಲಿ ಯಾವ ರೀತಿಯ ಉದ್ಯೋಗಿಗಳಿಗೆ ಹೆಚ್ಚು ಸ್ಯಾಲರಿ ಇದೆ ಎಂಬುದನ್ನು ಪಟ್ಟಿ ಮಾಡಿದೆ. ವರದಿ ಕುರಿತ ಇನ್ನಷ್ಟು ವಿವರಗಳು ಇಲ್ಲಿವೆ.
ಕಳೆದ ವರ್ಷ ಕೂಡಾ ಬೆಂಗಳೂರೇ ಮುಂದಿತ್ತು!
ಆಸಕ್ತಿಕರ ವಿಷಯವೆಂದರೆ ಬೆಂಗಳೂರು ಈ ಕಿರೀಟವನ್ನು ಪಡೆಯುತ್ತಿರುವುದು ಇದೇನು ಮೊದಲ ಬಾರಿಯಲ್ಲ. ಮೂರನೇ ಬಾರಿಗೆ ಹೆಸರು ಉಳಿಸಿಕೊಳ್ಳುವಲ್ಲಿ ನಗರ ಸಫಲವಾಗಿದೆ. ದೇಶದ ಐಟಿ ರಾಜಧಾನಿ ಎಂದೇ ಹೆಸರಾಗಿರುವ ಬೆಂಗಳೂರು, ಈ ಪಟ್ಟಕ್ಕೆ ತಕ್ಕಂತೆ ದೇಶದ ಹೈಯೆಸ್ಟ್ ಪೇಯಿಂಗ್ ನಗರ ಎಂಬ ಹೆಗ್ಗಳಿಕೆ ಗಳಿಸಿದೆ. ವರದಿಯಂತೆ, ಬೆಂಗಳೂರಿನಲ್ಲಿ ಜೂನಿಯರ್ ಲೆವೆಲ್‌ನಲ್ಲಿ ಕೆಲಸ ಮಾಡುವ ಉದ್ಯೋಗಿಗಳೇ ವಾರ್ಷಿಕ ಸರಾಸರಿ 5.27 ಲಕ್ಷಗಳಷ್ಟು ಸಂಬಳ ಪಡೆಯುತ್ತಿದ್ದಾರೆ. ಇನ್ನು ಮಧ್ಯಮ ಮಟ್ಟದ ಉದ್ಯೋಗಿಗಳು ವಾರ್ಷಿಕ ಸರಾಸರಿ 16.45 ಲಕ್ಷದಷ್ಟು ಸಿಟಿಸಿ ಹೊಂದಿದ್ದರೆ, ಸೀನಿಯರ್ ಲೆವೆಲ್‌ನಲ್ಲಿ ಇರುವವರು ಸುಮಾರು 35.45 ಲಕ್ಷ ಹಾಗೂ ಅದಕ್ಕಿಂತಾ ಹೆಚ್ಚು ಸಂಬಳವನ್ನು ವಾರ್ಷಿಕವಾಗಿ ಪಡೆಯುತ್ತಿದ್ದಾರೆ.
ಇತರೆ ನಗರಗಳ ವರದಿ
ಎಂಟ್ರಿ ಲೆವೆಲ್ ಉದ್ಯೋಗಗಳಿಗೆ ಸರಾಸರಿ ವಾರ್ಷಿಕ ಸಿಟಿಟಿ 5 ಲಕ್ಷ ಹಾಗೂ 4.59 ಲಕ್ಷ ಹೊಂದಿರುವ ಹೈದರಾಬಾದ್ ಹಾಗೂ ಮುಂಬೈ ನಗರ ನಂತರದ ಅತಿ ಹೆಚ್ಚು ಸಂಬಳ ನೀಡುವ ನಗರಗಳಾಗಿವೆ. ಮಧ್ಯಮ ಮಟ್ಟದ ಜಾಬ್‌ಗಳಿಗೆ ಬೆಂಗಳೂರು ಬಿಟ್ಟರೆ ಮುಂಬೈ ನಗರದಲ್ಲಿ ಸರಾಸರಿ 15.07 ಲಕ್ಷ ವಾರ್ಷಿಕ ಸಂಬಳ ನೀಡಲಾಗುತ್ತಿದ್ದರೆ, ಮೂರನೇ ಸ್ಥಾನದಲ್ಲಿರುವ ದೆಲ್ಲಿಯಲ್ಲಿ 14.5 ಲಕ್ಷದಷ್ಟು ಸಂಬಳ ದೊರೆಯುತ್ತಿದೆ. ಇನ್ನು ಸೀನಿಯರ್ ಲೆವೆಲ್ ಉದ್ಯೋಗಿಗಳಿಗೆ ಹೆಚ್ಚು ಸಂಬಳ ನೀಡುವಲ್ಲಿ ಮುಂಬೈ ಹಾಗೂ ಪುಣೆ ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ.
ಲೇಆಫ್ ಯುಗದಲ್ಲಿ ಕೆಲಸ ಉಳಿಸಿಕೊಳ್ಳುವುದು ಹೇಗೆ?
ಐಟಿನೇ ಬೆಸ್ಟ್
ವರದಿಯಂತೆ, ಐಟಿ ಇಂಡಸ್ಟ್ರಿಯಲ್ಲಿಯೇ ಜೂನಿಯರ್ ಹಾಗೂ ಸೀನಿಯರ್ ಲೆವೆಲ್ ಉದ್ಯೋಗಿಗಳಿಗೆ ಅತಿ ಹೆಚ್ಚು ಸಂಬಳವಿರುವುದು. ಅದರಂತೆ ಕ್ರಮವಾಗಿ ಈ ಇಂಡಸ್ಟ್ರಿಯಲ್ಲಿ ಜೂನಿಯರ್‌ಗಳಿಗೆ ವಾರ್ಷಿಕ 4.56 ಲಕ್ಷದಷ್ಟು ಸಿಟಿಸಿ ಇದ್ದರೆ ಸೀನಿಯರ್‌ಗಳಿಗೆ 35.84ರಷ್ಟಿದೆ. ಮಿಡ್ ಲೆವೆಲ್ ಉದ್ಯೋಗಿಗಳಿಗೆ ಮಾತ್ರ ಐಟಿಗಿಂತ ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ಅತ್ಯುತ್ತಮ ಸಂಬಳ ದೊರೆಯುತ್ತಿದೆ. ಐಟಿ ಬಿಟ್ಟರೆ ಕಾಮರ್ಸ್ ವಲಯ ಹೆಚ್ಚು ಸಂಬಳ ನೀಡುತ್ತಿದೆ. ಅಂದರೆ ಜಿಎಸ್‌ಟಿ ಕಾಂಪ್ಲಯನ್ಸ್ ಸ್ಪೆಶಲಿಸ್ಟ್ಸ್, ಅಕೌಂಟೆಂಟ್ಸ್, ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ಸ್ ಹಾಗೂ ಲಾಯರ್ಸ್ ನಂತರದಲ್ಲಿ ಬಹಳ ಡಿಮ್ಯಾಂಡ್ ಹೊಂದಿದ್ದಾರೆ.
ಡಿಜಿಟಲ್ ಕೌಶಲ್ಯ ಹೊಂದಿದವರಿಗೆ ಡಿಮ್ಯಾಂಡ್
ಕ್ಲೌಡ್, ಪ್ರಾಡಕ್ಟ್ ಮ್ಯಾನೇಜ್‌ಮೆಂಟ್, ಅನಲಿಟಿಕ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹಾಗೂ ಆಟೋಮೇಶನ್‌ನಂಥ ಡಿಜಿಟಲ್ ಕೌಶಲ್ಯ ಹೊಂದಿರುವವರಿಗೆ ಡಿಮ್ಯಾಂಡ್ ಹೆಚ್ಚಿರುವುದನ್ನು ವರದಿ ತಿಳಿಸಿದೆ. ರ್ಯಾಂಡ್‌ಸ್ಟಡ್ ಇಂಡಿಯಾದ ಎಂಡಿ ಹಾಗೂ ಸಿಇಒ ಪೌಲ್ ಡುಪಿಸ್ ಹೇಳುವಂತೆ, ಸರಿಯಾದ ಕೌಶಲ್ಯ ಹೊಂದಿದ ಪ್ರತಿಭಾವಂತರು ಕಡಿಮೆ ಸಮಯದಲ್ಲಿ ಹೆಚ್ಚು ಸಂಬಳ ಪಡೆಯುವಂತಾಗುತ್ತಾರೆ.
ಕಾರ್ಪೋರೇಟ್ ಜಗತ್ತಿನಲ್ಲಿ ಸರ್ವೈವ್ ಆಗಲು ಬೇಕು ಚಾಣಕ್ಯನ ಈ ಪಾಠಗಳು!
ಕಾಂಪ್ಲಯನ್ಸ್ ಸ್ಪೆಶಲಿಸ್ಟ್‌ಗಳು ಹೆಚ್ಚು ಸಂಬಳ ಪಡೆಯುವ ಉದ್ಯೋಗಿಗಳ ಪಟ್ಟಿಯಲ್ಲಿ ಟಾಪ್‌ನಲ್ಲಿದ್ದು, ವಾರ್ಷಿಕ 31.09 ಲಕ್ಷ ಸಿಟಿಸಿ ಹೊಂದಿದ್ದಾರೆ. ನಂತರದಲ್ಲಿ ಪೈತಾನ್ ತಜ್ಞರಿದ್ದಾರೆ. ಇವರ ಸರಾಸರಿ ವಾರ್ಷಿಕ ಸಂಬಳ 20.24 ಲಕ್ಷಗಳು. ಹಡೂಪ್ ತಜ್ಞರು ಹಾಗೂ ತಜ್ಞ ವೈದ್ಯರು ನಂತರದ ಸ್ಥಾನಗಳಲ್ಲಿದ್ದು ಕ್ರಮವಾಗಿ 19.01 ಲಕ್ಷ ಹಾಗೂ 18 ಲಕ್ಷ ಸಿಟಿಸಿ ಹೊಂದಿದ್ದಾರೆ.