ಶಿಗ್ಗಾವಿಯಲ್ಲಿ ಬೊಮ್ಮಾಯಿ ವಿರುದ್ಧ ವಿನಯ್ ಕುಲಕರ್ಣಿ ನಿಲ್ಲಿಸಲು ಸುರ್ಜೇವಾಲಾ ಯತ್ನಿಸುತ್ತಿರೋದೇಕೆ?

By Kannadaprabha NewsFirst Published Feb 24, 2023, 1:37 PM IST
Highlights

ದಿಲ್ಲಿಯಲ್ಲಿ ಕುಳಿತಿರುವ ಬಿಜೆಪಿ ನಾಯಕರಿಗೆ ಆಡಳಿತ ವಿರೋಧಿ ಅಲೆ ಎದುರಿಸಲು ಇರುವ ಏಕೈಕ ಮಾರ್ಗ ಎಂದರೆ ಗುಜರಾತಿನಲ್ಲಿ ಮಾಡಿದಂತೆ ಕ್ಷೇತ್ರದಲ್ಲಿ ಜನಪ್ರಿಯತೆ ಕಳೆದುಕೊಂಡಿರುವ ಶಾಸಕರನ್ನು ಬಿಟ್ಟು ಹೊಸಬರಿಗೆ ಟಿಕೆಟ್ ಕೊಡಬೇಕು ಎಂಬುದು. 

ಪ್ರಶಾಂತ್ ನಾತು, ಹಿರಿಯ ಪತ್ರಕರ್ತರು, ರಾಜಕೀಯ ವಿಶ್ಲೇಷಕರು

ಶಿಗ್ಗಾವಿಯಲ್ಲಿ ಬೊಮ್ಮಾಯಿ ವಿರುದ್ಧ ಮುಸ್ಲಿಂ ಅಭ್ಯರ್ಥಿ ಹಾಕುತ್ತಿದ್ದ ಕಾಂಗ್ರೆಸ್ ಈ ಬಾರಿ ಪಂಚಮಸಾಲಿ ಅಭ್ಯರ್ಥಿಯ ಹುಡುಕಾಟದಲ್ಲಿದೆ. ಧಾರವಾಡದಲ್ಲಿ ಕಳೆದ ಬಾರಿ ಬೆಲ್ಲದ್ ವಿರುದ್ಧ ಮುಸ್ಲಿಂ ಅಭ್ಯರ್ಥಿ ಹಾಕಿದ್ದ ಕಾಂಗ್ರೆಸ್ ಈ ಬಾರಿ ಪಂಚಮಸಾಲಿ ಅಥವಾ ಮರಾಠಾ ಅಭ್ಯರ್ಥಿಯ ತಯಾರಿಯಲ್ಲಿದೆ. ಕುಂದಗೋಳದಲ್ಲಿ ಕುರುಬ ಅಭ್ಯರ್ಥಿ ಬದಲಿಸಿ ಲಿಂಗಾಯತರನ್ನು ಇಳಿಸಬೇಕು ಎಂಬ ಯೋಚನೆ ಇದೆಯಾದರೂ ಸಿದ್ದು ಇನ್ನೂ ಒಪ್ಪಿಲ್ಲ.

Latest Videos

ದಿಲ್ಲಿಯಲ್ಲಿ ಕುಳಿತಿರುವ ಬಿಜೆಪಿ ನಾಯಕರಿಗೆ ಆಡಳಿತ ವಿರೋಧಿ ಅಲೆ ಎದುರಿಸಲು ಇರುವ ಏಕೈಕ ಮಾರ್ಗ ಎಂದರೆ ಗುಜರಾತಿನಲ್ಲಿ ಮಾಡಿದಂತೆ ಕ್ಷೇತ್ರದಲ್ಲಿ ಜನಪ್ರಿಯತೆ ಕಳೆದುಕೊಂಡಿರುವ ಶಾಸಕರನ್ನು ಬಿಟ್ಟು ಹೊಸಬರಿಗೆ ಟಿಕೆಟ್ ಕೊಡಬೇಕು ಎಂದು ಅನ್ನಿಸುತ್ತಿದೆ. ಆದರೆ ಇದಕ್ಕೆ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ಬೆಂಬಲ ಇಲ್ಲ. ಹಾಗೇನಾದರೂ ಮಾಡಲು ಹೋದರೆ ದೊಡ್ಡ ಪ್ರಮಾಣದಲ್ಲಿ ಬಂಡಾಯ ಭುಗಿಲೇಳುತ್ತದೆ. ಅದನ್ನು ಸರಿಪಡಿಸುವುದು ಕಷ್ಟದ ಕೆಲಸ. ಆಗ ಹಿಮಾಚಲದಂತೆ ಇಲ್ಲಿ ಕೂಡ ಬಂಡಾಯ ಅಭ್ಯರ್ಥಿಗಳು ನಿಂತರೆ ಗೆಲ್ಲುವುದು ಕಷ್ಟ ಎಂಬ ಸಲಹೆಯನ್ನು ಯಡಿಯೂರಪ್ಪ ಮತ್ತು ಬೊಮ್ಮಾಯಿ ನೀಡಿದ್ದಾರೆ. ಆದರೆ ಸ್ಥಳೀಯ ಆರ್‌ಎಸ್‌ಎಸ್ ನಾಯಕರ ಮನಸ್ಸಿನಲ್ಲಿ ಆರ್‌ಎಸ್‌ಎಸ್ ಸಂಘಟನೆ ಗಟ್ಟಿ ಇರುವ, ಹಿಂದುತ್ವದ ಆಧಾರದ ಮೇಲೆ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಅಭ್ಯರ್ಥಿ ಬದಲಿಸಿ ಸಂಘಟನೆ ಹಿನ್ನೆಲೆ ಇರುವ ಹೊಸ ಅಭ್ಯರ್ಥಿಯನ್ನು ತರುವ ಬಗ್ಗೆ ಒಲವು ಇದೆ. ಹೀಗಾಗಿ ಸುಳ್ಯದಲ್ಲಿ ಅಂಗಾರ, ಪುತ್ತೂರಿನಲ್ಲಿ ಸಂಜೀವ್ ಮಠಂದೂರು, ಕಾಪುವಿನ ಲಾಲಾಜಿ ಮೆಂಡನ್, ಚಿತ್ರದುರ್ಗದ ತಿಪ್ಪಾರೆಡ್ಡಿ, ದಾವಣಗೆರೆಯಲ್ಲಿ ಎಸ್.ಎ.ರವೀಂದ್ರನಾಥ್, ಶಿವಮೊಗ್ಗದಲ್ಲಿ ಈಶ್ವರಪ್ಪ, ರೋಣದಲ್ಲಿ ಕಳಕಪ್ಪ ಬಂಡಿ, ಶಿರಹಟ್ಟಿಯ ರಾಮಣ್ಣ ಲಮಾಣಿ, ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್, ಕಲಘಟಗಿಯಲ್ಲಿ ಸಿ.ಎಂ.ನಿಂಬಣ್ಣವರ್, ಮಹದೇವಪುರದಲ್ಲಿ ಅರವಿಂದ ಲಿಂಬಾವಳಿ ಅವರ ಬದಲು ಹೊಸಬರಿಗೆ ಟಿಕೆಟ್ ನೀಡುವ ಕುರಿತು ಆರ್‌ಎಸ್‌ಎಸ್‌ನ ಕೆಲ ನಾಯಕರಲ್ಲಿ ಅತಿಯಾದ ಉತ್ಸಾಹ ಇದೆಯಾದರೂ ಟಿಕೆಟ್ ಹಂಚಿಕೆಯ ನಿರ್ದಿಷ್ಟ ವಿಷಯದಲ್ಲಿ ಅಮಿತ್ ಶಾ ಮತ್ತು ಬಿ.ಎಲ್.ಸಂತೋಷ್ ಜೊತೆ ಆರ್‌ಎಸ್‌ಎಸ್ ಸಹ ಸರಕಾರ್ಯವಾಹ ಮುಕುಂದರ ಮಾತುಕತೆ ನಡೆಯುವವರೆಗೆ ಯಾವುದಕ್ಕೂ ಹೀಗೇ ಆಗುತ್ತದೆ ಎಂದು ಹೇಳುವ ಸ್ಥಿತಿಯಲ್ಲಿ ಯಾರೂ ಇಲ್ಲ. ಒಂದೊಂದು ಕ್ಷೇತ್ರ ಗೆಲ್ಲುವುದು ಕೂಡ ಮುಖ್ಯ ಮತ್ತು ಪ್ರತಿಷ್ಠೆ ಆಗಿರುವಾಗ ಹೊಸ ಪ್ರಯೋಗಗಳು ಬೇಕೋ ಬೇಡವೋ ಎಂಬ ತೀರ್ಮಾನ ಅಂತಿಮವಾಗಿ ಮೋದಿ ಸಾಹೇಬರೇ ತೆಗೆದುಕೊಳ್ಳಬಹುದು. ಆದರೆ ಅದು ನಿರ್ಣಯ ಆಗುವವರೆಗೆ ಇಲ್ಲಿನ ಕೆಲ ಹಾಲಿ ಶಾಸಕರ ಎದೆಗೆ ಢವ ಢವ ಭಾಗ್ಯ ತಪ್ಪಿದ್ದಲ್ಲ ಬಿಡಿ. ಕರ್ನಾಟಕ ಬಿಜೆಪಿಯಲ್ಲಿ ಟಿಕೆಟ್ ತಪ್ಪುವ ಭೀತಿ ಹೊರಗಿನಿಂದ ಬಂದವರಿಗೆ ಇಲ್ಲ. ಇದು ಇರುವುದು ಒಳಗಿನವರಿಗೆ ಮಾತ್ರ. ವಿಚಿತ್ರ ಆದರೂ ಇದು ಸತ್ಯ.

Assembly election: ಅಫಜಲ್ಪುರ ಅಸೆಂಬ್ಲಿಯಲ್ಲಿ ಕದನ ಕುತೂಹಲ

ಈ ಚುನಾವಣೆಯ 4 ಫ್ಯಾಕ್ಟರ್‌ಗಳು
ಜಾತಿವಾರು ದೃಷ್ಟಿಯಿಂದ ನೋಡಿದರೆ 2023ರ ಚುನಾವಣಾ ಫಲಿತಾಂಶ ನಿರ್ಧರಿಸುವುದು ಮೂರು ಅಂಶಗಳು: 1.ಬಿಜೆಪಿಯಿಂದ ಎಷ್ಟು ಶೇಕಡಾವಾರು ಲಿಂಗಾಯತರು ಮುನಿಸಿಕೊಳ್ಳಬಹುದು ಮತ್ತು ಹಾಗೆ ಮುನಿಸಿಕೊಂಡವರಲ್ಲಿ ಎಷ್ಟು ಶೇಕಡಾ ಮನೆಯಲ್ಲಿ ಕುಳಿತುಕೊಳ್ಳಬಹುದು ಮತ್ತು ಎಷ್ಟು ಶೇಕಡಾ ಕಾಂಗ್ರೆಸ್‌ಗೆ ಶಿಫ್ಟ್ ಆಗಬಹುದು. 2.ದಲಿತ ಎಡಗೈ, ಲಂಬಾಣಿ, ಭೋವಿ ಮತ್ತು ಸಣ್ಣ ಹಿಂದುಳಿದ ಜಾತಿಗಳಲ್ಲಿ ಎಷ್ಟು ಶೇಕಡಾವಾರು ವೋಟುಗಳು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹಂಚಿಕೆ ಆಗುತ್ತವೆ. 3.ಡಿ.ಕೆ.ಶಿವಕುಮಾರ್ ವರ್ಚಸ್ಸು ಎಷ್ಟು ಶೇಕಡಾವಾರು ಒಕ್ಕಲಿಗರು ಜೆಡಿಎಸ್‌ನಿಂದ ಹೊರಗೆ ಸೆಳೆದು ತರಬಲ್ಲದು. ಚುನಾವಣೆಯ 4ನೇ ಫ್ಯಾಕ್ಟರ್ ಎಂದರೆ ದುಡ್ಡು. ಇದು ಕಾಲಾತೀತ, ಪಕ್ಷಾತೀತ ಹಾಗೂ ಸಿದ್ಧಾಂತಕ್ಕೂ ಅತೀತ. ಇದಕ್ಕೆ ಆಡಳಿತ ವಿರೋಧಿ ಅಲೆಯನ್ನು ಸೋಲಿಸುವ ಶಕ್ತಿಯೂ ಇದೆ, ಮಾಡಿರುವ ಅಭಿವೃದ್ಧಿಯನ್ನು ನಗಣ್ಯಗೊಳಿಸುವ ಸಾಮರ್ಥ್ಯವೂ ಇದೆ.

ರೋಚಕ ಲಿಂಗಾಯತ ಜಿದ್ದಾಜಿದ್ದಿ
ಕಾಂಗ್ರೆಸ್ 2008ರಿಂದಲೂ ಮೂರು ವಿಧಾನಸಭೆಗಳಲ್ಲಿ ಶೇಕಡಾ 36ರಿಂದ 38ರಷ್ಟು ವೋಟು ಪಡೆಯುತ್ತಿದೆ. ಒಂದು ವೇಳೆ ಕಾಂಗ್ರೆಸ್ ಹೇಳಿಕೊಳ್ಳುವಂತೆ 130 ಸೀಟು ಪಡೆಯಬೇಕಾದರೆ ಶೇಕಡಾ 42ರಿಂದ 43ರಷ್ಟು, ಅಂದರೆ ಮೊದಲಿಗಿಂತ ಸುಮಾರು 3ರಿಂದ 4 ಪ್ರತಿಶತ ಹೆಚ್ಚುವರಿ ವೋಟು ಪಡೆಯಬೇಕು. ಇದು ಆಗಬೇಕಾದರೆ ಕಾಂಗ್ರೆಸ್‌ನ ಪರಂಪರಾಗತ ಮತಗಳನ್ನು ಪೂರ್ತಿಯಾಗಿ ಉಳಿಸಿಕೊಳ್ಳುವುದರ ಜೊತೆಗೆ ಬಿಜೆಪಿ ಜೊತೆ ಇರುವ ಲಿಂಗಾಯತರು ಮತ್ತು ಜೆಡಿಎಸ್ ಜೊತೆಗಿರುವ ಒಕ್ಕಲಿಗರ ಮತಗಳನ್ನು ಒಂದಷ್ಟು ಪಡೆಯಬೇಕು. ಆದರೆ ಮುಂಬೈ ಕರ್ನಾಟಕ ಮತ್ತು ಮಧ್ಯ ಕರ್ನಾಟಕದಲ್ಲಿ ಮೀಸಲು ಕ್ಷೇತ್ರಗಳನ್ನು ಬಿಟ್ಟು ಉಳಿದ ಕ್ಷೇತ್ರಗಳಲ್ಲಿ ಬಿಜೆಪಿ ಲಿಂಗಾಯತ ಅಭ್ಯರ್ಥಿಗೆ ಟಿಕೆಟ್ ನೀಡುತ್ತಿರುವಾಗ ಕಾಂಗ್ರೆಸ್ ಕೂಡ ಇನ್ನೂ ಹೆಚ್ಚು ಲಿಂಗಾಯತರಿಗೆ ಟಿಕೆಟ್ ನೀಡಬಹುದಾ ಎಂಬ ಬಗ್ಗೆ ತಂತ್ರ ರೂಪಿಸುತ್ತಿದೆ. 2018ರಲ್ಲಿ ಕಾಂಗ್ರೆಸ್ 36 ಲಿಂಗಾಯತರಿಗೆ ಟಿಕೆಟ್ ನೀಡಿದ್ದರೆ, 7 ರೆಡ್ಡಿ ಲಿಂಗಾಯತರಿಗೆ ಟಿಕೆಟ್ ನೀಡಿತ್ತು. ಅದರಲ್ಲಿ ಲಿಂಗಾಯತರು 14 ಗೆದ್ದರೆ, ರೆಡ್ಡಿ ಲಿಂಗಾಯತರು ಗೆದ್ದಿದ್ದು 2 ಸೀಟು ಮಾತ್ರ. ಆದರೆ 55 ಸೀಟಿನಲ್ಲಿ ಲಿಂಗಾಯತರಿಗೆ ಟಿಕೆಟ್ ನೀಡಿದ್ದ ಬಿಜೆಪಿ ಗೆದ್ದಿದ್ದು ಬರೋಬ್ಬರಿ 39. ಹೀಗಾಗಿ ಇನ್ನೂ ಹೆಚ್ಚು ಲಿಂಗಾಯತರು, ಅದರಲ್ಲೂ ಮೀಸಲಾತಿ ಕಾರಣದಿಂದ ಸ್ವಲ್ಪ ಮುನಿಸಿಕೊಂಡಿರಬಹುದು ಎಂದು ಹೇಳಲಾಗುವ ಪಂಚಮಸಾಲಿಗಳಿಗೆ ಇನ್ನಷ್ಟು ಟಿಕೆಟ್ ನೀಡಿದರೆ ಹೇಗೆ ಎಂಬ ಆಲೋಚನೆ ಕಾಂಗ್ರೆಸ್ ಪ್ರಭಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಮತ್ತು ಡಿ.ಕೆ.ಶಿವಕುಮಾರ್‌ಗೆ ಇದೆ. ಹೇಗೂ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರೂ ಪಾರ್ಟಿಯ ಅಭ್ಯರ್ಥಿಗಳು ಲಿಂಗಾಯತರೇ ಇದ್ದಾಗ ಮತ ವಿಭಜನೆ ಆಗುತ್ತದೆ. ಆಗ ಕುರುಬರು, ಮುಸ್ಲಿಮರು, ದಲಿತ ಬಲಗೈ ಮತ ಗಟ್ಟಿಯಾಗಿ ಬಿದ್ದರೆ ಬಿಜೆಪಿಯನ್ನು ಸೋಲಿಸಬಹುದು ಅನ್ನೋ ತಂತ್ರವನ್ನು ಕಾಂಗ್ರೆಸ್ ಹೆಣೆಯುತ್ತಿದೆ. ಹೀಗಾಗಿ ಶಿಗ್ಗಾವಿಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ವಿರುದ್ಧ ಮುಸ್ಲಿಂ ಅಭ್ಯರ್ಥಿ ಹಾಕುತ್ತಿದ್ದ ಕಾಂಗ್ರೆಸ್ ಈ ಬಾರಿ ಪಂಚಮಸಾಲಿ ಅಭ್ಯರ್ಥಿಯ ಹುಡುಕಾಟದಲ್ಲಿದೆ. ಧಾರವಾಡದಲ್ಲಿ ಕಳೆದ ಬಾರಿ ಅರವಿಂದ ಬೆಲ್ಲದ ವಿರುದ್ಧ ಮುಸ್ಲಿಂ ಅಭ್ಯರ್ಥಿ ಹಾಕಿದ್ದ ಕಾಂಗ್ರೆಸ್ ಈ ಬಾರಿ ಪಂಚಮಸಾಲಿ ಅಥವಾ ಮರಾಠಾ ಅಭ್ಯರ್ಥಿ ಹಾಕುವ ತಯಾರಿಯಲ್ಲಿದೆ. ಕುಂದಗೋಳದಲ್ಲಿ ಕೂಡ ಕುರುಬ ಅಭ್ಯರ್ಥಿ ಬದಲಾಯಿಸಿ ಲಿಂಗಾಯತರಿಗೆ ಟಿಕೆಟ್ ಕೊಡಬೇಕು ಎಂಬ ಯೋಚನೆ ಇದೆಯಾದರೂ ಇದಕ್ಕೆ ಸಿದ್ದು ಇನ್ನೂ ಒಪ್ಪಿಲ್ಲ. ದೊಡ್ಡ ಸಮುದಾಯಗಳ ಒಂದು ರಾಜಕೀಯ ಗುಣಧರ್ಮ ಎಂದರೆ ಅವು ಅಧಿಕಾರದಲ್ಲಿ ಪಾಲು ಕೇಳುತ್ತವೆ. ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಹುದ್ದೆಗೆ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಭರ್ಜರಿ ಮೇಲಾಟ ನಡೆಯುತ್ತಿರುವುದು ಕಣ್ಣ ಮುಂದೆ ಕಾಣುವಾಗ ಲಿಂಗಾಯತರು ಬಿಜೆಪಿ ಬಿಟ್ಟು ಗುಳೆ ಹೊರಡುತ್ತಾರಾ ಎಂಬುದು ಕ್ಷೇತ್ರವಾರು ನಿರ್ಧಾರ ಆಗುವ ಸಾಧ್ಯತೆ ಹೆಚ್ಚು.

ಚಾಮರಾಜನಗರದ 4 ಕ್ಷೇತ್ರಗಳಲ್ಲೂ ಈ ಬಾರಿ ಕಮಲ ಅರಳಿಸಬೇಕು: ಬಿ.ಎಲ್‌.ಸಂತೋಷ್‌

ಸಿದ್ದು ಮತಬ್ಯಾಂಕ್‌ಗೆ ಬಿಜೆಪಿ ಕಣ್ಣು
2014ರ ನಂತರ ದೇಶದ ರಾಜಕಾರಣದಲ್ಲಿ ಮೋದಿ ಉಚ್ಛ್ರಾಯಕ್ಕೆ ಬರಲು ಮುಖ್ಯ ಕಾರಣ ಅತಿ ಸಣ್ಣ ಹಿಂದುಳಿದ ಸಮುದಾಯಗಳು ಬಿಜೆಪಿಗೆ ದಂಡಿಯಾಗಿ ಬಂದಿದ್ದು. ಮಂಡಲ ಪ್ರಭಾವದಲ್ಲಿದ್ದ ಈ ಸಮುದಾಯಗಳು ‘ಕಮಂಡಲ’ದತ್ತ ವಾಲಿದ್ದಕ್ಕೆ ಕಾರಣಗಳು ಮೂರು: 1.ಈ ಸಮುದಾಯಗಳಿಗೆ ಮಂಡಲ ಚಳವಳಿಯ ರಾಜಕೀಯ ಫಲ ಸಿಗಲಿಲ್ಲ. ಹೀಗಾಗಿ ದೊಡ್ಡ ಹಿಂದುಳಿದ ಜಾತಿಗಳ ಬಗೆಗಿನ ಅಸಮಾಧಾನ. 2.ಮೋದಿ ಪದೇ ಪದೇ ನಾನು ಹಿಂದುಳಿದವನು ಎಂದು ಹೇಳಿದ್ದು. 3.ಇಸ್ಲಾಮೋಫೋಬಿಯಾ ಕಾರಣದಿಂದ ಹುಟ್ಟಿಕೊಂಡಿರುವ ಹಿಂದುತ್ವದ ಆಕರ್ಷಣೆ. 2018ರಲ್ಲಿ ಕೂಡ ಸಿದ್ದರಾಮಯ್ಯ ತಮ್ಮ ಭಾಗ್ಯಗಳ ಹೊರತಾಗಿಯೂ ಸಣ್ಣ ಹಿಂದುಳಿದ ಸಮುದಾಯಗಳನ್ನು ಕಳೆದುಕೊಂಡಿದ್ದು ಅತಿಯಾದ ಕುರುಬ ಮತ್ತು ಮುಸ್ಲಿಂ ಓಲೈಕೆ ಹಣೆಪಟ್ಟಿಯಿಂದ. ೨೦೧೮ರಲ್ಲಿ ಕಾಂಗ್ರೆಸ್ ಹಿಂದುಳಿದವರಿಗೆ ಟಿಕೆಟ್ ನೀಡಿದ್ದು 49. ಅದರಲ್ಲಿ ಕುರುಬರಿಗೆ 19, ಉಳಿದವರಿಗೆ 30. ಅದರಲ್ಲಿ ಕುರುಬರು 8 ಮಂದಿ ಗೆದ್ದರೆ, ಉಳಿದವರು ಗೆದ್ದಿದ್ದು 7 ಮಾತ್ರ. ಆದರೆ ಅದೇ ಬಿಜೆಪಿಯಲ್ಲಿ ಹಿಂದುಳಿದವರು ಗೆದ್ದಿದ್ದು 15. ಅದರಲ್ಲಿ ಕುರುಬರು ಬರೀ ಒಂದು, ಅದು ಶಿವಮೊಗ್ಗದಲ್ಲಿ ಈಶ್ವರಪ್ಪ ಮಾತ್ರ. ಒಬ್ಬ ಮೀನುಗಾರ, ಒಬ್ಬ ಕಮ್ಮ, ಒಬ್ಬ ಮರಾಠಾ, 6 ನಾಮಧಾರಿಗಳು, ಒಬ್ಬ ಗಾಣಿಗ, ಒಬ್ಬ ರೆಡ್ಡಿ ಸೇರಿ ಒಟ್ಟು 14 ಸಣ್ಣ ಹಿಂದುಳಿದ ಸಮುದಾಯಕ್ಕೆ ಸೇರಿದ ಬಿಜೆಪಿ ಶಾಸಕರು ಗೆದ್ದಿದ್ದರು. ಹೀಗಾಗಿ ಈ ಬಾರಿ ಕೂಡ ಬಿಜೆಪಿ ಲೋಕಸಭಾ ಕ್ಷೇತ್ರಕ್ಕೆ ಒಂದರಂತೆ ಹಿಂದುಳಿದ ವರ್ಗಗಳಿಗೆ ಟಿಕೆಟ್ ನೀಡಬೇಕು ಅಂದುಕೊಂಡಿದೆ. ಕಾಂಗ್ರೆಸ್ ಹೇಗೆ ಬಿಜೆಪಿಯ ಲಿಂಗಾಯತ ವೋಟ್‌ಬ್ಯಾಂಕ್ ಮೇಲೆ ಕಣ್ಣು ಹಾಕಿ ಸೆಳೆಯಲು ನೋಡುತ್ತಿದೆಯೋ ಬಿಜೆಪಿ ಕೂಡ ಕಾಂಗ್ರೆಸ್‌ನ, ಅದರಲ್ಲೂ ಸಿದ್ದರಾಮಯ್ಯ ಜೊತೆಗಿರುವ, ಸಣ್ಣ ಹಿಂದುಳಿದ ಸಮುದಾಯಗಳನ್ನು ಸೆಳೆಯಲು ಪ್ರಯತ್ನ ಮಾಡುತ್ತಿದೆ.

ಬೊಮ್ಮಾಯಿ ವಿರುದ್ಧ ವಿನಯ್ ಕುಲಕರ್ಣಿ ನಿಲ್ಲಿಸಲು ಸುರ್ಜೆವಾಲಾ ಕಸರತ್ತು?
ಫುಟ್‌ಬಾಲ್ ಆಟದಲ್ಲಿ ಗೋಲು ಹೊಡೆಯುವ ಸ್ಟಾರ್ ಆಟಗಾರನ ಕಾಲಿಗೆ ಚೆಂಡು ಸಿಗಬಾರದೆಂದು ಎದುರಾಳಿ ತಂಡವು ಅವನ ಆಸುಪಾಸಿನಲ್ಲೇ ಒಂದಿಬ್ಬರನ್ನು ನಿಯೋಜನೆ ಮಾಡಿರುತ್ತದೆ. ಹಾಗೆಯೇ ಈ ಬಾರಿ ಕಾಂಗ್ರೆಸ್ ಬೊಮ್ಮಾಯಿ, ಸಿ.ಟಿ.ರವಿ, ಸುನಿಲ್ ಕುಮಾರ್, ಅರವಿಂದ ಬೆಲ್ಲದ ವಿರುದ್ಧ ಪ್ರಬಲ ಅಭ್ಯರ್ಥಿ ಹಾಕುವ ತಯಾರಿ ಮಾಡುತ್ತಿದೆ. ಸುನಿಲ್ ಕುನ್ನಗೋಲು ನೀಡಿದ ಸಲಹೆ ಮೇರೆಗೆ ಕಾಂಗ್ರೆಸ್ ಪ್ರಭಾರಿ ರಣದೀಪ್ ಸುರ್ಜೇವಾಲಾ ವಿನಯ ಕುಲಕರ್ಣಿಯನ್ನು ಕರೆಸಿಕೊಂಡು ಶಿಗ್ಗಾವಿಯಲ್ಲಿ ಬೊಮ್ಮಾಯಿ ವಿರುದ್ಧ ಸ್ಪರ್ಧೆ ಮಾಡುವಂತೆ ಹೇಳಿದ್ದಾರೆ. ಆದರೆ ವಿನಯ ಕುಲಕರ್ಣಿ ಒಪ್ಪುತ್ತಿಲ್ಲ. ಶಿಗ್ಗಾವಿಯಲ್ಲಿ ಸಾದರ ಲಿಂಗಾಯತ ಸಮುದಾಯಕ್ಕೆ ಸೇರಿದ ಮುಖ್ಯಮಂತ್ರಿ ಬೊಮ್ಮಾಯಿ ವಿರುದ್ಧ ಮೂರು ಬಾರಿ ನಿಂತು ಸೋತಿರುವ ಮುಸ್ಲಿಂ ಸಮುದಾಯದ ಅಜ್ಜಂಪೀರ ಖಾದ್ರಿ ಬದಲಿಗೆ ಪಂಚಮಸಾಲಿಗಳಿಗೆ ಟಿಕೆಟ್ ಕೊಟ್ಟರೆ ಪೈಪೋಟಿ ನೀಡಬಹುದು ಎಂಬುದು ಸುರ್ಜೇವಾಲಾ ಲೆಕ್ಕಾಚಾರ. ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ವಿನಯ್‌ಗೆ ಧಾರವಾಡ ಪ್ರವೇಶಿಸುವ ಅನುಮತಿ ಇಲ್ಲ. ಹೀಗಾಗಿ ಅಲ್ಲಿ ಹೆಂಡತಿಗೆ ಟಿಕೆಟ್ ನೀಡುತ್ತೇವೆ, ನೀವು ಇಲ್ಲಿಗೆ ಬನ್ನಿ ಎಂದು ಸ್ವತಃ ಹೈಕಮಾಂಡ್ ಹೇಳಿದರೂ ಕೂಡ ಧಾರವಾಡದಲ್ಲಿ ಪ್ರಬಲ ಶಾಸಕ ಅಮೃತ್ ದೇಸಾಯಿ ವಿರುದ್ಧ ಹೆಂಡತಿ ಸೋತು, ತಾನು ಬೊಮ್ಮಾಯಿ ವಿರುದ್ಧ ಸೋತರೆ ಕಷ್ಟ ಎನ್ನುವ ಕಾರಣಕ್ಕಾಗಿ ನಾ ಒಲ್ಲೆ ನಾ ಒಲ್ಲೆ ಎನ್ನುತ್ತಿದ್ದಾರೆ.

click me!