ಬಿಜೆಪಿಯ ಹಾಲಿ ಶಾಸಕ ರೇಣುಕಾಚಾರ್ಯ ಈಗಾಗಲೇ 3 ಬಾರಿ ಶಾಸಕರಾಗಿದ್ದು, ಮತ್ತೊಮ್ಮೆ ಬಿಜೆಪಿ ಟಿಕೆಟ್‌ಗಾಗಿ ಲಾಬಿ ನಡೆಸಿದ್ದಾರೆ.
ನಾಗರಾಜ.ಎಸ್. ಬಡದಾಳ್
ದಾವಣಗೆರೆ(ಫೆ.28): ಒಂದಿಲ್ಲೊಂದು ವಿಚಾರವಾಗಿ ಸದಾ ಸುದ್ದಿಯಲ್ಲಿರುವ ಬಿಜೆಪಿ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಪ್ರತಿನಿಧಿಸುತ್ತಿರುವ ಕ್ಷೇತ್ರ, ಮಲೆನಾಡಿನ ಸೆರಗು, ಹೊನ್ನಾಳಿ. ಮೂರು ಬಾರಿ ಇಲ್ಲಿ ವಿಜಯ ಸಾಧಿಸಿರುವ ರೇಣುಕಾಚಾರ್ಯ, 4ನೇ ಬಾರಿಗೆ ಶಾಸಕರಾಗುವತ್ತ ಚಿತ್ತ ನೆಟ್ಟಿದ್ದಾರೆ. ಹೇಗಾದರೂ ಮಾಡಿ ಕ್ಷೇತ್ರವನ್ನು ಕೈವಶ ಮಾಡಿಕೊಳ್ಳಲು ಯತ್ನಿಸುತ್ತಿರುವ ಕಾಂಗ್ರೆಸ್‌ಗೆ, ಟಿಕೆಟ್ ಆಕಾಂಕ್ಷಿಗಳ ಶೀತಲ ಸಮರ ಸಂಕಷ್ಟ ತಂದೊಡ್ಡಿದೆ.
ಅವಿಭಜಿತ ಶಿವಮೊಗ್ಗ ಜಿಲ್ಲೆಯ ಭಾಗವಾಗಿದ್ದ ಹೊನ್ನಾಳಿ ಕ್ಷೇತ್ರ, 1957ರಿಂದ ಈವರೆಗೆ 15 ಚುನಾವಣೆ ಕಂಡಿದೆ. ಕಾಂಗ್ರೆಸ್ 7, ಬಿಜೆಪಿ 3, ಕೆಸಿಪಿ, ಜೆಎನ್‌ಪಿ, ಪಿಎಸ್‌ಪಿ ತಲಾ ಒಂದೊಂದು ಬಾರಿ ಹಾಗೂ ಪಕ್ಷೇತರರು 2 ಬಾರಿ ಜಯ ಸಾಧಿಸಿದ್ದಾರೆ. ಬಿಜೆಪಿಯ ಹಾಲಿ ಶಾಸಕ ರೇಣುಕಾಚಾರ್ಯ ಈಗಾಗಲೇ 3 ಬಾರಿ ಶಾಸಕರಾಗಿದ್ದು, ಮತ್ತೊಮ್ಮೆ ಬಿಜೆಪಿ ಟಿಕೆಟ್‌ಗಾಗಿ ಲಾಬಿ ನಡೆಸಿದ್ದಾರೆ.
ದಾವಣಗೆರೆ: ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿಲ್ಲವೆಂದು ಸಾಬೀತುಪಡಿಸಿ: ಎಂ.ಪಿ.ರೇಣುಕಾಚಾರ್ಯ ಸವಾಲ್
ಕೊರೋನಾ ಸಂಕಷ್ಟವಿರಲಿ, ಹಬ್ಬ-ಹರಿದಿನ, ಜಾತ್ರೆ, ಸಭೆ, ಸಮಾರಂಭ, ಮದುವೆ...ಹೀಗೆ ಯಾವುದೇ ಕಾರ್ಯಕ್ರಮವಿದ್ದರೂ ಅಧಿಕಾರ ಇರಲಿ, ಇಲ್ಲದಿರಲಿ, ಹೋಗಿ, ಭಾಗಿಯಾಗುವುದು ರೇಣುಕಾಚಾರ್ಯ ರೂಢಿ. ಅಷ್ಟೇ ಅಲ್ಲ, ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಲ್ಲಿ ಎಲ್ಲಿಯೇ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಿದರೂ ಹಾಜರಾಗಿ, ಸಂಘಟಕರು, ಗ್ರಾಮಸ್ಥರು, ಯುವಕರ ಉತ್ಸಾಹ ಹೆಚ್ಚಿಸುತ್ತಾ ಬಂದಿದ್ದಾರೆ. ಈ ಸ್ಪಂದನೆಯೇ ರೇಣುಕಾಚಾರ್ಯ ಅವರ ರಾಜಕೀಯ ಜೀವನಕ್ಕೆ ಭದ್ರ ಬುನಾದಿ ಹಾಕಿದೆ ಎಂಬುದು ಅವರ ಹಿಂಬಾಲಕರ ಅನಿಸಿಕೆ.
ಹೊನ್ನಾಳಿ, ಹಿಂದೆ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. 2004ರಲ್ಲಿ ಮಾಜಿ ಸಿಎಂ ಯಡಿಯೂರಪ್ಪನವರ ಮಾನಸ ಪುತ್ರನೆಂದೇ ಗುರುತಿಸಲ್ಪಟ್ಟಿದ್ದ ರೇಣುಕಾಚಾರ್ಯ, ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿದರು. ಕಾಂಗ್ರೆಸ್‌ನ ಡಿ.ಜಿ.ಶಾಂತನಗೌಡ ವಿರುದ್ಧ 7,474 ಮತಗಳ ಅಂತರದಲ್ಲಿ ಜಯ ದಾಖಲಿಸಿದರು. 2008ರಲ್ಲಿಯೂ ಶಾಂತನಗೌಡರನ್ನು ಸೋಲಿಸಿದರು. 2013ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ, ಶಾಂತನಗೌಡ ವಿರುದ್ಧ ಪರಾಭವಗೊಂಡರು. 2018ರಲ್ಲಿ ಮತ್ತೆ ಬಿಜೆಪಿಯಿಂದ ಸ್ಪರ್ಧಿಸಿ, 4,233 ಮತಗಳ ಅಂತರದಲ್ಲಿ ಜಯ ಸಾಧಿಸಿದರು.
ಬಿಜೆಪಿಯಿಂದ ರೇಣುಕಾಚಾರ್ಯ ಅವರ ಸ್ಪರ್ಧೆ ಬಹುತೇಕ ಖಚಿತವಾದರೆ, ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಶೀತಲ ಸಮರ ಏರ್ಪಟ್ಟಿದೆ. ಶಾಂತನಗೌಡ ಮತ್ತೆ ಸ್ಪರ್ಧಿಸುವ ಉತ್ಸಾಹದಲ್ಲಿದ್ದರೆ, ಒಂದು ಕಾಲದಲ್ಲಿ ಶಾಂತನಗೌಡರ ನೆರಳಾಗಿ ನಿಲ್ಲುತ್ತಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ಟಿಕೆಟ್ ಪಡೆಯಲು ತೀವ್ರ ಕಸರತ್ತು ನಡೆಸಿದ್ದಾರೆ. ಕ್ಷೇತ್ರದಲ್ಲಿ ವೀರಶೈವ-ಲಿಂಗಾಯತರು ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಕುರುಬ ಸಮಾಜದವರು 2ನೇ ಸ್ಥಾನದಲ್ಲಿದ್ದಾರೆ. ಹೀಗಾಗಿ, ಲಿಂಗಾಯತ ಸಮುದಾಯದ ಶಾಂತನಗೌಡರನ್ನು ಕಣಕ್ಕಿಳಿಸಬೇಕೋ ಅಥವಾ ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕುರುಬ ಸಮಾಜದ ಎಚ್.ಬಿ.ಮಂಜಪ್ಪರನ್ನು ಅಖಾಡಕ್ಕಿಳಿಸಬೇಕೋ ಎಂಬ ಲೆಕ್ಕಾಚಾರದಲ್ಲಿ ಕೈಪಾಳೆಯವಿದೆ.
ದೇವರ ಸನ್ನಿಧಾನದಲ್ಲಿ ಮಾತ್ರ ನೆಮ್ಮದಿ ಸಾಧ್ಯ: ಎಂಪಿ ರೇಣುಕಾಚಾರ್ಯ
ಕ್ಷೇತ್ರ ಹಿನ್ನೆಲೆ:
2004ರವರೆಗೂ ಇದು ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಕಾಂಗ್ರೆಸ್ 7, ಬಿಜೆಪಿ 3 ಬಾರಿ ಜಯಗಳಿಸಿವೆ. ಕೆಸಿಪಿ, ಜೆಎನ್‌ಪಿ, ಪಿಎಸ್‌ಪಿಗೆ ತಲಾ 1, ಪಕ್ಷೇತರರಿಗೆ 2 ಸಲ ಒಲಿದ ಕ್ಷೇತ್ರವಿದು. ಕಳೆದ 5 ಚುನಾವಣೆಯಲ್ಲಿ 2 ಬಾರಿ ಕಾಂಗ್ರೆಸ್ ಗೆದ್ದಿದ್ದರೆ, 3 ಬಾರಿ ಬಿಜೆಪಿ ಗೆದ್ದಿದೆ. 2013ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದಾಗ ಸೋತಿದ್ದು ಬಿಟ್ಟರೆ, ಬಿಜೆಪಿಯಿಂದ ನಿಂತಾಗಲೆಲ್ಲಾ ರೇಣುಕಾಚಾರ್ಯ ಇಲ್ಲಿ ಜಯಭೇರಿ ಭಾರಿಸಿದ್ದಾರೆ. ಇದೀಗ 4ನೇ ಬಾರಿ ಬಿಜೆಪಿಯಿಂದ ಪುನರಾಯ್ಕೆ ಬಯಸಿ, ಟಿಕೆಟ್‌ಗೆ ಕಸರತ್ತು ನಡೆಸುತ್ತಿದ್ದಾರೆ.
ಜಾತಿ ಲೆಕ್ಕಾಚಾರ:
ಕ್ಷೇತ್ರದಲ್ಲಿ ಒಟ್ಟು 1.93 ಲಕ್ಷ ಮತದಾರರಿದ್ದಾರೆ. ಈ ಪೈಕಿ, ವೀರಶೈವ-ಲಿಂಗಾಯತರು 42 ಸಾವಿರ, ಕುರುಬರು 35 ಸಾವಿರ, ಎಸ್ಸಿ, ಎಸ್ಟಿಗಳು 45 ಸಾವಿರ, ಹಿಂದುಳಿದ ವರ್ಗದವರು 15 ಸಾವಿರ, ಕುಂಚಿಟಿಗರು 13 ಸಾವಿರ, ಮುಸ್ಲಿಮರು 12 ಸಾವಿರ ಇದ್ದಾರೆ. ಲಿಂಗಾಯತ, ಕುರುಬರ ಪ್ರಾಬಲ್ಯದ ಕ್ಷೇತ್ರದಲ್ಲಿ ಪರಿಶಿಷ್ಟರು, ಹಿಂದುಳಿದವರು, ಕುಂಚಿಟಿಗರ ಮತಗಳೇ ನಿರ್ಣಾಯಕ.