ಪಂಚರಾಜ್ಯಗಳ ಪೈಕಿ ಅಸ್ಸಾಂನಲ್ಲಿ ಬಿಜೆಪಿ ಮುಂದಿದೆ. ಕೇರಳದಲ್ಲಿ ಎಡರಂಗ ಮುಂದಿದೆ. ಪುದುಚೇರಿಯಲ್ಲಿ ಕಾಂಗ್ರೆಸ್‌ಗೆ ಬಹಳ ಸಮಸ್ಯೆಯಿದೆ. ಬಂಗಾಳದಲ್ಲಿ ಕಾಂಗ್ರೆಸ್ 4ನೇ ಸ್ಥಾನದಲ್ಲಿದೆ.
ನವದೆಹಲಿ (ಮಾ. 19): ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಮೋದಿ ಸರ್ಕಾರಕ್ಕೆ ಎಷ್ಟುಲಾಭ ನಷ್ಟಮಾಡುತ್ತೋ, ಬಿಡುತ್ತೋ. ಆದರೆ ಕಾಂಗ್ರೆಸ್ ಪಕ್ಷ ಒಡೆಯುತ್ತೋ ಇಲ್ಲವೋ ಎನ್ನುವುದನ್ನು ಮಾತ್ರ ಇದು ಸ್ಪಷ್ಟಪಡಿಸಲಿದೆ. ಈಗಿನ ಪ್ರಕಾರ ಗುಲಾಂ ನಬಿ ಆಜಾದ್, ಕಪಿಲ್ ಸಿಬಲ್, ಆನಂದ ಶರ್ಮಾ, ಭೂಪಿಂದರ್ ಹೂಡಾ ಅವರ ಮಾತು ಮತ್ತು ನಡೆ ಗಮನಿಸಿದರೆ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ.
ಮೇ 2ರಂದು ಒಂದು ವೇಳೆ ಕಾಂಗ್ರೆಸ್‌ನ ಸ್ಥಿತಿ ಇನ್ನಷ್ಟುಖರಾಬುಗೊಂಡರೆ, ಗುಲಾಂ ನಬಿ ಮತ್ತು 22 ಬಂಡಾಯಗಾರರು ಕೂಡಲೇ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ನಡೆಸುವಂತೆ ಸೋನಿಯಾ ಗಾಂಧಿ ಮೇಲೆ ಬಹಿರಂಗ ಒತ್ತಡ ಹೇರಲಿದ್ದಾರೆ. ಆಗ ಗಾಂಧಿ ಪರಿವಾರ ಚುನಾವಣೆಯಿಂದ ಹೊರಗುಳಿಯಲು ತೀರ್ಮಾನಿಸಿದರೆ ತಮ್ಮ ಬಣದ ಹಿರಿಯರೊಬ್ಬರನ್ನು ಇವರು ಚುನಾವಣೆಗೆ ಇಳಿಸುತ್ತಾರೆ. ಅಂದರೆ ಗಾಂಧಿ ರಹಿತ ಅಧ್ಯಕ್ಷರನ್ನು ತರಲು ಪ್ರಯತ್ನಿಸುವುದು ಮೊದಲ ವಿಕಲ್ಪ.
ಇಲ್ಲದಿದ್ದರೆ ಒಂದು ವೇಳೆ ರಾಹುಲ್ ತಾನೇ ಚುನಾವಣೆಗೆ ನಿಂತರೆ ಪ್ರತಿಯಾಗಿ ಒಬ್ಬ ಅಭ್ಯರ್ಥಿ ಹಾಕಿ ಚುನಾವಣೆ ಕಾವು ಏರಿಸುವುದು ಪರ್ಯಾಯ ವಿಕಲ್ಪ. ಅಂದರೆ ಏನಕೇನ ಬಂಡಾಯದ ಶಂಖ ಊದುವುದು ಇವರ ಅಜೆಂಡಾದಲ್ಲಿದೆ. ಒಟ್ಟಾರೆ ಯಾವುದೇ ಸ್ವರೂಪದಲ್ಲಿ ಚುನಾವಣೆ ನಡೆದರೂ ಕೂಡ ಪಕ್ಷ ಮೇಲಿನಿಂದ ಇಬ್ಭಾಗ ಆಗುವುದು ನಿಶ್ಚಿತ. ಒಂದು ವೇಳೆ ಕಾಂಗ್ರೆಸ್ ಇಬ್ಭಾಗವಾದರೆ ಲಾಭ ಯಾರಿಗೆ ಎಂದು ಬಿಡಿಸಿ ಹೇಳಬೇಕಿಲ್ಲ ತಾನೇ?
ಬಂಗಾಳದಲ್ಲಿ 5 ವರ್ಷದ ಹಿಂದೆ ಬರೀ 3 ಸೀಟು ಗೆದ್ದಿದ್ದ 'ಕಮಲ' ಈಗ ಅರಳುತ್ತಿರುವುದು ಹೇಗೆ..?
ಗುಲಾಂ ಜತೆ ಬಿಜೆಪಿ ಕೈ ಜೋಡಿಸುತ್ತಾ?
ಕಾಗೆ ಕೂರುವುದು ಮತ್ತು ಟೊಂಗೆ ಮುರಿಯುವುದು ಯಾವಾಗಲೂ ಕಾಕತಾಳೀಯವಾಗಿ ಇರಲೇಬೇಕು ಎಂದೇನೂ ಇಲ್ಲ. ಆದರೆ ಪಾಲಿಟಿಕ್ಸ್‌ನಲ್ಲಿ ಹಾಗೆಲ್ಲ ಯಾವುದೂ ಕೂಡ ಅಚಾನಕ್ಕಾಗಿ ನಡೆಯುವುದಿಲ್ಲ. ಇತ್ತೀಚೆಗೆ ಕಾಣುತ್ತಿರುವ ಮೋದಿ, ಗುಲಾಂ ನಬಿ ಗೆಳೆತನ ಮತ್ತು ಗಾಂಧಿಗಳ ವಿರುದ್ಧ ಆಜಾದ್ ಬಂಡಾಯ, ಎರಡನ್ನೂ ಪ್ರತ್ಯೇಕ ಘಟನೆಗಳಾಗಿ ನೋಡುವುದಕ್ಕೆ ಸಾಧ್ಯವಿಲ್ಲ.
ಒಂದು ಕ್ರಿಯೆ, ಇನ್ನೊಂದು ಪ್ರತಿಕ್ರಿಯೆ ಅಷ್ಟೆ. ಮೂಲಗಳ ಪ್ರಕಾರ ಜಮ್ಮು-ಕಾಶ್ಮೀರ ಪ್ರತ್ಯೇಕ ಕೇಂದ್ರಾಡಳಿತಗಳಾಗಿ ವಿಭಜನೆ ಆದ ಬಳಿಕ ಬಿಜೆಪಿ ಮತ್ತು ಆರ್‌ಎಸ್‌ಎಸ್ ಎರಡು ರಾಜ್ಯಗಳಲ್ಲಿ ಪ್ರಭಾವ ಬೀರಬಲ್ಲ, ಜೊತೆಗೆ ಪ್ರತ್ಯೇಕತಾವಾದಿ ಅಲ್ಲದ ರಾಷ್ಟ್ರದ ಮುಖ್ಯವಾಹಿನಿಯನ್ನು ಒಪ್ಪಿಕೊಳ್ಳುವ ಮುಸ್ಲಿಂ ನಾಯಕತ್ವದ ಹುಡುಕಾಟದಲ್ಲಿದೆ. ಮುಫ್ತಿ ಮತ್ತು ಅಬ್ದುಲ್ಲಾರಿಗೆ ಸಡ್ಡು ಹೊಡೆದು ಕಣಿವೆಯ ಮುಸ್ಲಿಮರ ಎದುರು ನಿಲ್ಲುವ ಶಕ್ತಿ ಅಲ್ಲಿರುವುದು ಗುಲಾಂ ನಬಿಗೆ ಮಾತ್ರ. ಒಂದು ವೇಳೆ ಗುಲಾಂ ನಬಿ ಕಾಂಗ್ರೆಸ್‌ನಿಂದ ಹೊರಗೆ ಬಂದು ಕೇಂದ್ರ ಸರ್ಕಾರದ ನೆರವಿನಿಂದ ಪ್ರಾದೇಶಿಕ ಪಕ್ಷ ರಚಿಸಿ, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೆ ಹೇಗೆ ಎಂಬ ಸಮೀಕರಣಗಳ ಚರ್ಚೆಯಂತೂ ದಿಲ್ಲಿಯಲ್ಲಿ ನಡೆಯುತ್ತಿದೆ.
ಪಂಚ ರಾಜ್ಯಗಳಲ್ಲಿ ಕಾಂಗ್ರೆಸ್ ಭವಿಷ್ಯ
5 ರಾಜ್ಯಗಳಲ್ಲಿ ಒಂದು ವೇಳೆ ಆಡಳಿತ ವಿರೋಧಿ ಅಲೆಯನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಅಸ್ಸಾಂ ಮತ್ತು ಕೇರಳದಲ್ಲಿ ಕಾಂಗ್ರೆಸ್ ಪಕ್ಷ ಈ ಬಾರಿ ಗೆಲ್ಲಬೇಕು. ಆದರೆ ಅಸ್ಸಾಂನಿಂದ ಬರುತ್ತಿರುವ ತಳಮಟ್ಟದ ವರದಿಗಳ ಪ್ರಕಾರ ಸದ್ಯಕ್ಕಂತೂ ಬಿಜೆಪಿ ಮುಂದಿದೆ. ಅಷ್ಟೇ ಅಲ್ಲ ತರುಣ್ ಗೊಗೋಯ್ ನಿಧನದ ನಂತರ ಕಾಂಗ್ರೆಸ್‌ನಲ್ಲಿ ಮೂರು, ನಾಲ್ಕು ಗುಂಪುಗಳಿವೆ. ಏಕ ವ್ಯಕ್ತಿ ನಾಯಕತ್ವ ಇಲ್ಲ. ಇನ್ನು ಕೇರಳದಲ್ಲಿ ಎಡರಂಗಕ್ಕೆ ಇನ್ನೊಂದು ಅವಕಾಶ ಪುನರಪಿ ಸಿಗುವ ಸಾಧ್ಯತೆಯಿದ್ದು, ಬಿಜೆಪಿಯ ವಿಸ್ತಾರದಿಂದ ಅಲ್ಪಸಂಖ್ಯಾತರು ಜಾಸ್ತಿ ಸಿಪಿಎಂನತ್ತ ವಾಲುತ್ತಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ನಾಲ್ಕನೇ ಸ್ಥಾನದಲ್ಲಿದ್ದು, ಪುದುಚೇರಿಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಜೋರಾಗಿದೆ. ತಮಿಳುನಾಡಿನಲ್ಲಿ ಡಿಎಂಕೆ ಅಲೆಯ ಬೆನ್ನೇರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಾಧ್ಯತೆ ಇದ್ದು, ಕಾಂಗ್ರೆಸ್ ಪಕ್ಷಕ್ಕೆ ಅದೊಂದೇ ಗುಡ್ ನ್ಯೂಸ್ ತರಬಹುದಾದ ರಾಜ್ಯ. ಸೋಲಿನ ಸರಮಾಲೆ ಹೀಗೆಯೇ ಮುಂದುವರಿದರೆ ಕಾಂಗ್ರೆಸ್ ಒಡೆಯುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.
ಕೇರಳ ಬಿಜೆಪಿಗೆ ಗುಂಪುಗಾರಿಕೆ ಸಮಸ್ಯೆ
ಶಬರಿಮಲೆ ವಿವಾದದ ನಂತರ ನಿಸ್ಸಂದೇಹವಾಗಿ ಕೇರಳದಲ್ಲಿ ಬಿಜೆಪಿ ಪ್ರಬಲವಾಗಿದೆ. ಹೀಗಾಗಿ ಪಕ್ಷದ ಶೇಕಡಾವಾರು ಮತ ಗಳಿಕೆ ಜಾಸ್ತಿಯಾಗುತ್ತದೆ. ಆದರೆ ಈಗಾಗಲೇ ಕೇರಳದಲ್ಲಿ ಬಿಜೆಪಿ ಗುಂಪುಗಾರಿಕೆಯಿಂದ ತತ್ತರಿಸುತ್ತಿದ್ದು, 3ರಿಂದ 4 ಸೀಟು ಗೆದ್ದರೆ ಹೆಚ್ಚು ಎಂಬ ವಾದವೂ ಇದೆ. ಇದೇ ಒಳಜಗಳದಿಂದ ಮೋದಿ ಮತ್ತು ಅಮಿತ್ ಶಾ ಸ್ಥಳೀಯರನ್ನು ಬಿಟ್ಟು ನಾಯರ್ ಸಮುದಾಯದ ಮೆಟ್ರೊ ಶ್ರೀಧರನ್‌ರನ್ನು ಮುಖ್ಯಮಂತ್ರಿ ಅಭ್ಯರ್ಥಿ ಮಾಡಿದ್ದು. ಕೇಂದ್ರ ಸಚಿವ ವಿ.ಮುರಳೀಧರನ್ ಅವರದ್ದು ಒಂದು ಬಣವಾದರೆ, ರಾಜ್ಯಾಧ್ಯಕ್ಷ ಸುರೇಂದ್ರನ್‌ರದು ಇನ್ನೊಂದು ಬಣ.
ತಮಿಳ್ನಾಡಿನಲ್ಲಿ ಮತ್ತೆ ಡಿಎಂಕೆ ಯುಗಾರಂಭ: ಸಮೀಕ್ಷೆ ಭವಿಷ್ಯ
ಮಾಜಿ ರಾಜ್ಯಪಾಲ ಕುಂಬನಂ ರಾಜಶೇಖರ್ ಅವರದ್ದು ಒಂದು ಬಣವಾದರೆ, ಪಿ.ಕೆ.ಕೃಷ್ಣದಾಸ್ ಅವರದ್ದು ಮತ್ತೊಂದು ಬಣ. ತಿರುವನಂತಪುರಂ ಹತ್ತಿರ ಇರುವ ಕಡಂಕುತ್ಲಾದಲ್ಲಿ ಶೋಭಾ ಸುರೇಂದ್ರನ್ ಗೆಲ್ಲುತ್ತಾರೆ ಎಂದು ಸರ್ವೆಗಳು ಹೇಳುತ್ತಿದ್ದರೂ, ಅವರಿಗೆ ಟಿಕೆಟ್ ಕೊಡಬಾರದು ಎಂದು 2 ಬಣಗಳು ಪಟ್ಟು ಹಿಡಿದಿದ್ದರಿಂದ ಟಿಕೆಟ್ ಘೋಷಣೆಯೇ ವಿಳಂಬವಾಯಿತು. ಈಗೇನೋ ಮೋದಿ ನೇತೃತ್ವ ಇದೆ ಸರಿ, ಗುಂಪುಗಾರಿಕೆ ಮುಚ್ಚಿ ಹೋಗುತ್ತಿದೆ. ಅದು ಹಾಗೆಯೇ - ಉಚ್ಛ್ರಾಯದಲ್ಲಿ ದೊಡ್ಡದು ಸಣ್ಣದಾಗಿ ಕಾಣುತ್ತದೆ. ಪತನದಲ್ಲಿ ಸಣ್ಣದು ದೊಡ್ಡದಾಗಿ ಕಾಣತೊಡಗುತ್ತದೆ.
ಬಂಗಾಳದಲ್ಲಿ ಬಿಜೆಪಿ ಗೆದ್ದರೆ?
ಬಂಗಾಳದಲ್ಲಿ ಬಿಜೆಪಿಗೂ ಮಮತಾಗೂ ಹೆಚ್ಚೆಂದರೆ ಇವತ್ತಿಗೆ 2ರಿಂದ 3 ಪ್ರತಿಶತ ಮತ ಅಂತರವಿದೆ. ಅಂದರೆ 18ರಿಂದ 20 ಸೀಟುಗಳ ವ್ಯತ್ಯಾಸ. ಸರ್ವೆ ತಂಡಗಳು ಹೇಳುವ ಪ್ರಕಾರ ಮಮತಾ ಕೂದಲು ಎಳೆಯಷ್ಟುಮುಂದಿದ್ದಾರೆ. ಆದರೆ ಬಿಜೆಪಿ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಈಗ ತೃಣಮೂಲ ಕಾಂಗ್ರೆಸ್ ಎಸೆಯುತ್ತಿರುವ ಕೊನೆಯ ಅಸ್ತ್ರ ಎಂದರೆ ಮಮತಾ ಎದುರು ಯಾರು ಎಂದು. ಇದಕ್ಕೆ ಉತ್ತರ ಕೊಡಲಾಗದೆ ಬಿಜೆಪಿ ಮೋದಿ ಚಿತ್ರ ಮಾತ್ರ ತೋರಿಸುತ್ತಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್, ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ, ಮುಕುಲ್ ರಾಯ್ ಸುವೇಂದು ಅಧಿಕಾರಿ ಹೀಗೆ ಎಲ್ಲರೂ ಮುಖ್ಯಮಂತ್ರಿ ಆಗಲು ತುದಿಗಾಲಿನಲ್ಲಿ ನಿಂತಿದ್ದಾರೆ. ಹೀಗಾಗಿ ಧ್ವಜ ಹಿಡಿಯಲು ಜನ ಇರದೇ ಇದ್ದ ರಾಜ್ಯದಲ್ಲಿ ಟಿಕೆಟ್‌ಗಾಗಿ ಹೊಡೆದಾಟ ಬಡಿದಾಟ ಶುರು ಆಗಿದೆ. ಮೋದಿ ಮತ್ತು ಶಾ ಯಾರ ಹೆಸರೂ ಹೇಳುತ್ತಿಲ್ಲ. ಮಮತಾರನ್ನು ಬದಲಿಸಿ ಎಂದು ಮಾತ್ರ ಘೋಷಣೆ ಹಾಕಿಸುತ್ತಿದ್ದಾರೆ.
ಕೇರಳದ ಜಾತಿ ಪಾಲಿಟಿಕ್ಸ್ ಜಂಜಡ
ಕೇರಳ ಕಾಂಗ್ರೆಸ್‌ನಲ್ಲಿ 30 ವರ್ಷಗಳಿಂದ ಎರಡು ಗುಂಪುಗಳಿವೆ. ನಾಯರ್ ಸಮುದಾಯದ ದಿಗ್ಗಜ ಕೆ.ಕರುಣಾಕರನ್‌ರ ‘ಐ’ ಗುಂಪು ಮತ್ತು ಹೈಕಮಾಂಡ್‌ಗೆ ನಿಷ್ಠ ಎ.ಕೆ.ಆಂಟೋನಿ ಅವರ ‘ಎ’ ಗುಂಪು. ಈಗ ಊಮ್ಮನ್ ಚಾಂಡಿ, ಆಂಟೋನಿ ಗುಂಪು ಮುನ್ನಡೆಸುತ್ತಿದ್ದು, ರಮೇಶ ಚೆನ್ನಿತ್ತಲ ಬಳಿ ಕರುಣಾಕರನ್ ಅವರ ಐ ಗುಂಪಿನ ನಾಯಕತ್ವ ಇದೆ. ಆಶ್ಚರ್ಯ ಎಂದರೆ ಸ್ವತಃ ಕರುಣಾಕರನ್ ಪುತ್ರ ಮುರಳೀಧರನ್ ಅವರದ್ದೇ ಕೇರಳ ಕಾಂಗ್ರೆಸ್‌ನಲ್ಲಿ ಪ್ರತ್ಯೇಕ ಗುಂಪು ಇದೆ. ಕೇರಳದಲ್ಲಿ ಹಿಂದಿನಿಂದಲೂ ಭೂಮಿ ಒಡೆತನ ಹೊಂದಿದ್ದ ನಾಯರ್‌ಗಳು ಮತ್ತು ಕ್ರಿಶ್ಚಿಯನ್ನರು ಕಾಂಗ್ರೆಸ್‌ನ ಗಟ್ಟಿವೋಟ್ ಬ್ಯಾಂಕ್.
ಕರ್ನಾಟಕದಲ್ಲಿ ನಾವು ಬಿಲ್ಲವರು ಎನ್ನುವ ಹಿಂದುಳಿದ ಈಳವ ಸಮುದಾಯ ಕೇರಳದಲ್ಲಿ ಸಿಪಿಎಂ ಜೊತೆಗಿದೆ. ಒಂದು ಕಾಲದಲ್ಲಿ ನಂಬೂದರಿಪಾಡ್‌ರಂಥ ಬ್ರಾಹ್ಮಣರ ಬಳಿ ಇದ್ದ ಸಿಪಿಎಂ ನೇತೃತ್ವ ಈಗ ಈಳವ ಸಮುದಾಯದ ಪಿಣರಾಯಿ ವಿಜಯನ್, ಕೊಡಿಯೇರಿ ಬಾಲಕೃಷ್ಣನ್ ಬಳಿಯಿದೆ. ಅಚ್ಯುತಾನಂದನ್ ಕೂಡ ಇದೇ ಈಳವ ಸಮುದಾಯಕ್ಕೆ ಸೇರಿದವರು. ಬಿಜೆಪಿ ನಾಯರ್‌ಗಳ ವೋಟು ಒಡೆಯಲು ಶ್ರೀಧರನ್ ಅವರನ್ನು ತಂದು ನಿಲ್ಲಿಸಿದೆ.
ಎಲ್ಲಿದೆ ಕಾನೂನು ತಂಡ?
2018ರ ವಿಧಾನಸಭೆ ಚುನಾವಣೆ ಬಳಿಕ ದಿಲ್ಲಿಯಲ್ಲಿ ಕರ್ನಾಟಕದ ಒಂದು ಕಾನೂನು ತಂಡವೇ ಇಲ್ಲ. ಫಾಲಿ ನಾರಿಮನ್‌ರಿಗೆ ವಯಸ್ಸಾಯಿತು ಸರಿ. ಆದರೆ ಮೊದಲು ಕುಮಾರಸ್ವಾಮಿ ಸರ್ಕಾರ ಹಾಗೂ ಈಗಿನ ಯಡಿಯೂರಪ್ಪ ಸರ್ಕಾರ ಹೊಸ ಕಾನೂನು ತಂಡ ರಚಿಸುವ ಗೋಜಿಗೆ ಹೋಗಲಿಲ್ಲ. ಒಂದು ರೀತಿಯಲ್ಲಿ ಬೆಂಕಿ ಹೊತ್ತಿದಾಗ ಬಾವಿ ತೋಡಿದರಾಯಿತು ಎನ್ನುವ ಮನಸ್ಥಿತಿ. ನಿಗಮ ಮಂಡಳಿಗಳಿಗೆ ಬೇಕಾದಷ್ಟುಹಣ ನೀಡುವ ಸರ್ಕಾರಗಳು ರಾಜ್ಯದ ನೆಲ-ಜಲದ ಹಿತ ಕಾಯುವ ವಿಚಾರದಲ್ಲಿ ಒಂದು ಪಕ್ಕಾ ವ್ಯವಸ್ಥೆ ರೂಪಿಸಲು ಮೀನಮೇಷ ಎಣಿಸುವುದು ಜಾಣತನ ಅಲ್ಲ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ