ಬಂಗಾಳದಲ್ಲಿ 5 ವರ್ಷದ ಹಿಂದೆ ಬರೀ 3 ಸೀಟು ಗೆದ್ದಿದ್ದ ‘ಕಮಲ’ ಈಗ ಅರಳುತ್ತಿರುವುದು ಹೇಗೆ?

By Kannadaprabha News  |  First Published Mar 12, 2021, 9:35 AM IST

ಜಾತಿ, ಧರ್ಮ, ಭಾಷೆಗಿಂತ ಹೆಚ್ಚಾಗಿ ಸಿದ್ಧಾಂತ ನೋಡಿ, ಆರ್ಥಿಕ ನೀತಿಗಳ ಮೇಲೆ ಬಂಗಾಳ ವೋಟು ಹಾಕುತ್ತದೆ ಎನ್ನುವ ಒಂದು ಗ್ರಹಿಕೆ ದೇಶದಲ್ಲಿ ಚಾಲ್ತಿಯಿತ್ತು. ಆದರೆ ಈ ಬಾರಿ ಬಂಗಾಳ ನೋಡುತ್ತಿರುವುದು ಪಕ್ಕಾ ಧ್ರುವೀಕರಣದ ರಾಜಕಾರಣ. 


ನವದೆಹಲಿ (ಮಾ. 12): ಪಂಚ ರಾಜ್ಯಗಳ ಚುನಾವಣೆ ಘೋಷಣೆ ಆಗಿದೆ. ಆದರೂ ದೇಶದ ಜನಮಾನಸದಲ್ಲಿ ಅತ್ಯಂತ ಹೆಚ್ಚು ಕುತೂಹಲ ಇರುವುದು ಪಶ್ಚಿಮ ಬಂಗಾಳದ್ದು. ಇದಕ್ಕೆ ಮುಖ್ಯ ಕಾರಣ ಒಂದು ಕಾಲದ ವಾಮಪಂಥೀಯರ ಕೋಟೆಯಲ್ಲಿ ಬಿಜೆಪಿಗೆ ಸಿಗುತ್ತಿರುವ ಸ್ಪಂದನೆ.

ಕೇವಲ 5 ವರ್ಷದ ಹಿಂದೆ 294 ರಲ್ಲಿ ಕೇವಲ 3 ಸೀಟು ಗೆದ್ದಿದ್ದ ಬಿಜೆಪಿ, ಈಗ ಅಧಿಕಾರಕ್ಕೆ ಬಂದೇ ಬಿಟ್ಟೆವು ‘ರೈಟರ್ಸ್‌ ಬಿಲ್ಡಿಂಗ್‌’ ನಮ್ಮದೇ ಎಂಬ ವಿಶ್ವಾಸದಲ್ಲಿದೆ. ಇದಕ್ಕೆ ಸರಿಯಾಗಿ ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿ, ಹತಾಶೆ ಗೊಂಡವರಂತೆ ಮಮತಾ ದೀದಿ ಆಸ್ಪತ್ರೆಯಲ್ಲಿ ಕಾಲಿಗೆ ಪ್ಲಾಸ್ಟರ್‌ ಹಾಕಿಕೊಂಡು ಟಿವಿಯಲ್ಲಿ ಕಾಣಿಸುತ್ತಿದ್ದಾರೆ. ಅರ್ಥ ಸ್ಪಷ್ಟ; ಬಂಗಾಳದಲ್ಲಿ ದೀದಿ-ಮೋದಿ ಯಾರೇ ಗೆದ್ದರೂ ಕಡಿಮೆ ಅಂತರದ ವಿಜಯ ಎನ್ನುವ ಅಂದಾಜಿದೆ. ವಾತಾವರಣ ಸ್ವಲ್ಪ ಬಿಜೆಪಿ ಪರ ಅನ್ನಿಸುತ್ತಿದೆಯಾದರೂ ಕ್ಷೇತ್ರವಾರು ಗಣಿತ ಮಮತಾ ಪರವಾಗಿ ಜಾಸ್ತಿ ಇದೆ.

Tap to resize

Latest Videos

ಸ್ವಲ್ಪ ಆಶ್ಚರ್ಯ ಎಂಬಂತೆ ಗ್ರಾಮೀಣ ಅಶಿಕ್ಷಿತ ಬಂಗಾಳಿಗರು ‘ಮೋದಿ... ಮೋದಿ’ ಎನ್ನುತ್ತಿದ್ದಾರೆ, ಕೋಲ್ಕತ್ತಾದ ಶಿಕ್ಷಿತ ಭದ್ರಲೋಕದ ವಿಚಾರವಂತರಿಗೆ ದೀದಿ ಮೇಲೆ ಜಾಸ್ತಿ ಮೋಹವಿದೆ. ಫಲಿತಾಂಶ ಏನೇ ಇರಲಿ ಕೆಂಪಾಗಿದ್ದ ಜನಮಾನಸ 5 ವರ್ಷದಲ್ಲಿ ಕೇಸರಿಮಯವಾಗಿರುವುದು ರಾಜಕಾರಣದ ಒಂದು ದೊಡ್ಡ ಸೋಜಿಗ ಬಿಡಿ.

ಮುಸ್ಲಿಂ ದೀದಿ, ಹಿಂದು ಮೋದಿ

ಜಾತಿ, ಧರ್ಮ, ಭಾಷೆಗಿಂತ ಹೆಚ್ಚಾಗಿ ಸಿದ್ಧಾಂತ ನೋಡಿ, ಆರ್ಥಿಕ ನೀತಿಗಳ ಮೇಲೆ ಬಂಗಾಳ ವೋಟು ಹಾಕುತ್ತದೆ ಎನ್ನುವ ಒಂದು ಗ್ರಹಿಕೆ ದೇಶದಲ್ಲಿ ಚಾಲ್ತಿಯಿತ್ತು. ಆದರೆ ಈ ಬಾರಿ ಬಂಗಾಳ ನೋಡುತ್ತಿರುವುದು ಪಕ್ಕಾ ಧ್ರುವೀಕರಣದ ರಾಜಕಾರಣ. ಮೋದಿ ಹಿಂದು ಮತಗಳ ಕ್ರೋಢೀಕರಣದ ಮೇಲೆ ಅವಲಂಬಿತರಾದರೆ, ದೀದಿ 27 ಪ್ರತಿಶತ ಮುಸ್ಲಿಂ ಮತದಾರರ ಮೇಲೆ ನಿರ್ಭರ.

ಪಶ್ಚಿಮ ಬಂಗಾಳದ ಸುಮಾರು 85 ಕ್ಷೇತ್ರಗಳಲ್ಲಿ 45 ಪ್ರತಿಶತ ಮುಸ್ಲಿಂ ಜನಸಂಖ್ಯೆ ಇದೆ. ಇವುಗಳಲ್ಲಿ 60 ಗೆದ್ದರೂ ಸಾಕು ದೀದಿಗೆ ಬಹುಮತದ ಗೆರೆ ಹತ್ತಿರ. ದೀದಿಯ ಅತಿಯಾದ ಮುಸ್ಲಿಂ ಪ್ರೀತಿ ಉಳಿದ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಮೋದಿ ಸಾಹೇಬರ ಹಿಂದುತ್ವಕ್ಕೆ ಆಮ್ಲಜನಕ. 40 ವರ್ಷಗಳ ವರೆಗೆ ಎಡ ಪ್ರಭಾವದಿಂದ ಬೀಸದೇ ಇದ್ದ ಬಲಪಂಥೀಯ ಗಾಳಿ ಜೋರಾಗಿ ಬೀಸತೊಡಗಿದೆ. ಅಂತಿಮವಾಗಿ ಚುನಾವಣೆಯ ದಿನದವರೆಗೆ ಯಾರು ಹೆಚ್ಚು ಧ್ರುವೀಕರಣ ಗೊಳಿಸಬಲ್ಲರೋ ಬಂಗಾಳ ಅವರಿಗೆ ಎಂದು ಅನಿಸುತ್ತಿದೆ.

ಬಂಗಾಳದ ಹೊಸ ‘ಓವೈಸಿ’

ದೇಶದಲ್ಲೆಲ್ಲಾ ಮಾತೆತ್ತಿದರೆ ಸೆಕ್ಯುಲರ್‌ (ಜಾತ್ಯತೀತತೆ), ಏಕತೆ ಎಂದು ಮಾತನಾಡುವ ಕಾಂಗ್ರೆಸ್‌ ಮತ್ತು ಎಡ ಪಕ್ಷಗಳ ಬಂಗಾಳದ ಏಕ ಮಾತ್ರ ಅಜೆಂಡಾ ಎಂದರೆ ಮಮತಾ ರನ್ನು ಸೋಲಿಸುವುದು. ಇದರಿಂದ ಬಿಜೆಪಿ ಗೆದ್ದರೂ ಪರವಾಗಿಲ್ಲ. ಇದಕ್ಕಾಗಿಯೇ ಪ್ರಸಿದ್ಧ ಫುರಫುರಾ ಷರೀಫ್‌ನ ಪೀರಜಾದೆ ಅಬ್ಬಾಸ್‌ ಸಿದ್ಧಿಕಿ ಅವರ ಇಂಡಿಯನ್‌ ಸೆಕ್ಯುಲರ್‌ ಫ್ರಂಟ್‌ ಜೊತೆ ಕಾಂಗ್ರೆಸ್‌ ಮತ್ತು ಎಡ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಓವೈಸಿ ತರಹವೇ ಅಬ್ಬಾಸ್‌ ಸಿದ್ಧಿಕಿ ಮುಸ್ಲಿಂರ ವಿಷಯ ಇಟ್ಟುಕೊಂಡು ಬಂಗಾಳದಲ್ಲಿ ಬೆಂಕಿ ಉಗುಳುತ್ತಾರೆ.

ದಕ್ಷಿಣ ಬಂಗಾಳದ ಹೂಗ್ಲಿ ಅಕ್ಕಪಕ್ಕದ 6 ಜಿಲ್ಲೆಗಳಲ್ಲಿ ಅಬ್ಬಾಸ್‌ ಮುಸ್ಲಿಂ ಯುವಕರ ವೋಟು ಪಡೆದರೆ ನಷ್ಟನೇರವಾಗಿ ಮಮತಾ ದೀದಿಗೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌, ಎಡ ಪಕ್ಷಗಳು ಸೇರಿ ಗಳಿಸಿದ ವೋಟು ಕೇವಲ 12 ಪ್ರತಿಶತ. ಈ ಮೈತ್ರಿಕೂಟ 3ರಿಂದ 4 ಪ್ರತಿಶತ ಮುಸ್ಲಿಂ ವೋಟು ಗಳಿಸಿಕೊಂಡರೂ ಸಾಕು ಫಲಿತಾಂಶದ ಅಂದಾಜು ಪೂರ್ತಿ ಏರು ಪೇರಾಗಲಿದೆ. ಓವೈಸಿ ಕೂಡ ಜೋರಾಗಿ ಸ್ಪರ್ಧೆಗೆ ಇಳಿಯಬಹುದು. ಆದರೆ ಬಂಗಾಳಿ ಮಾತನಾಡುವ ಮುಸ್ಲಿಮರ ಮೇಲೆ, ಉರ್ದು ಮಾತನಾಡುವ ಓವೈಸಿ ಪ್ರಭಾವ ಎಷ್ಟಾಗಬಹುದು ಎಂದು ಈಗಲೇ ಹೇಳುವುದು ಕಷ್ಟ. ಆದರೆ ಒಂದಂತೂ ನಿಜ ಮಮತಾ ದೀದಿ ಅವರ ಗೆಲುವು-ಸೋಲು ನಿರ್ಧಾರ ಆಗುವುದು ಮುಸ್ಲಿಂ ಮತಗಳು ಒಟ್ಟಾಗಿರು ತ್ತವೆಯೋ ಅಥವಾ ಒಡೆಯುತ್ತವೆಯೋ ಎಂಬುದರ ಮೇಲೆ.

ಭದ್ರಲೋಕ ಅಲುಗಾಡುತ್ತಿದೆ

ಬಂಗಾಳದಲ್ಲಿ ಕಾಂಗ್ರೆಸ್‌ ಇರಲಿ, ಎಡ ಪಕ್ಷಗಳು ಬರಲಿ; ಕೊನೆಗೆ ಮಮತಾ ದೀದಿ ಕುರ್ಚಿಗೆ ಬರಲಿ ಅಧಿಕಾರ ನಡೆಸಿದ್ದು ಮಾತ್ರ ಕೋಲ್ಕತ್ತದ ಪ್ರಭಾವಿ ಭದ್ರಲೋಕ. ಅಂದರೆ ಬ್ರಿಟಿಷರ ಕಾಲದಲ್ಲಿ ಆರ್ಥಿಕ ನಿಚ್ಚಣಿಕೆ ಏರಿದ ಮೇಲ್ಜಾತಿಗಳ ಸಮೂಹ. ಬ್ರಹ್ಮೋ ಸಮಾಜದ ಸ್ಥಾಪನೆಯಿಂದ ಹಿಡಿದು ಮಮತಾ ಕಾಲದವರೆಗೂ ಬ್ರಾಹ್ಮಣ, ಕ್ಷತ್ರಿಯ, ಬನಿಯಾ ಸಮುದಾಯಗಳನ್ನು ಒಳಗೊಂಡ ಆಂಗ್ಲ ಮಿಶ್ರಿತ ಬಂಗಾಳಿ ಮಾತನಾಡುವ ಭದ್ರಲೋಕದ ಪ್ರಭಾವವಿದೆ. ಆದರೆ ಬಿಜೆಪಿ ಪ್ರಭಾವಳಿಯಲ್ಲಿ ಭದ್ರಲೋಕಕ್ಕೆ ಸ್ಥಾನವಿದ್ದಂತೆ ಇಲ್ಲ.

ಬಿಜೆಪಿ ನಾಯಕರಾದ ದಿಲೀಪ್‌ ಘೋಷ್‌, ಬಾಬುಲ್ ಸುಪ್ರಿಯೋ, ಮುಕುಲ್ ರಾಯ್ ಇವರ್ಯಾರೂ ಭದ್ರಲೋಕದ ರಾಜಕಾರಣ, ಕಲೆ, ಸಂಸ್ಕೃತಿಯ ಹಿನ್ನೆಲೆಯವರಲ್ಲ. ಜೊತೆಗೆ ಬಿಜೆಪಿ ಗ್ರಾಮೀಣ ಹಿಂದುಳಿದ ದಲಿತ ಆದಿವಾಸಿ ಸಮುದಾಯಗಳಲ್ಲಿ ಹಠಾತ್‌ ಜನಪ್ರಿಯತೆ ಕಾಣುತ್ತಿದೆ. ಆದರೆ ಕೋಲ್ಕತ್ತದ ಕೆಫೆಗಳಲ್ಲಿ ಕುಳಿತು ಸಿದ್ಧಾಂತ, ಸಂಸ್ಕೃತಿ, ಜಾತ್ಯತೀತತೆ ಮಾತನಾಡುವ ಸಮುದಾಯಗಳಲ್ಲಿ ಇನ್ನೂ ಬಿಜೆಪಿಗೆ ಪ್ರವೇಶ ಸಿಕ್ಕಿಲ್ಲ. ಬಿಜೆಪಿ ಪರಂಪರಾಗತವಾಗಿ ಬ್ರಾಹ್ಮಣರ, ಮೇಲ್ಜಾತಿಗಳ, ಸುಶಿಕ್ಷಿತರ ಪಾರ್ಟಿ. ಆದರೆ ಬಂಗಾಳದಲ್ಲಿ ಮಾತ್ರ ಮೋದಿಯ, ಬಿಜೆಪಿಯ ವೋಟ್‌ಬ್ಯಾಂಕ್‌ನ ಸ್ವರೂಪದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಬಿಜೆಪಿ ಬಂದರೆ ಭದ್ರಲೋಕ ಅಲುಗಾಡುತ್ತದೆ ಎಂಬ ಭೀತಿಯಂತೂ ಎದ್ದು ಕಾಣುತ್ತಿದೆ.

ದೀದಿ ಸಾಮರ್ಥ್ಯ, ದೌರ್ಬಲ್ಯ

10 ವರ್ಷದ ಆಡಳಿತದ ನಂತರವೂ ಬಂಗಾಳದ ಬೀದಿಗಳಲ್ಲಿ ನಿಂತು ಪಾಲಿಟಿಕ್ಸ್‌ ಮಾಡಬಲ್ಲರು ಎಂಬುದೇ ಮಮತಾ ದೀದಿಯ ಅತ್ಯಂತ ದೊಡ್ಡ ಸಾಮರ್ಥ್ಯ. ಬಿಜೆಪಿ ಇರಲಿ, ಕಾಂಗ್ರೆಸ್‌, ಎಡ ಪಕ್ಷಗಳಿರಲಿ ದೀದಿ ಜನಪ್ರಿಯತೆಗೆ ಠಕ್ಕರ್‌ ಕೊಡಬಲ್ಲ ಜನನಾಯಕರು ಇಲ್ಲ. ಜೊತೆಗೆ ಮಮತಾ ಜಾರಿಗೊಳಿಸಿದ ಹುಡುಗಿಯರ ಶಿಕ್ಷಣ ಮತ್ತು ಮದುವೆಯ ಸಂದರ್ಭದ ನೇರ ಹಣ ಪಾವತಿಯ ಕನ್ಯಾಶ್ರೀ ಮತ್ತು ರೂಪಶ್ರೀ ಯೋಜನೆಗಳ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯವಿದೆ.

ಮಮತಾ ಪ್ರಾಮಾಣಿಕ ರಾಜಕಾರಣಿ ಎಂಬುದು ದೀದಿಗೆ ಇರುವ ಪ್ಲಸ್‌ ಪಾಯಿಂಟ್‌. ಆದರೆ ಮಮತಾರ ಕಾಲದಲ್ಲಿ ಆಡಳಿತ ಸುಧಾರಣೆ ಮತ್ತು ಉದ್ಯೋಗ ಸೃಷ್ಟಿವಿಚಾರದಲ್ಲಿ ಕಣ್ಣಿಗೆ ಕಾಣುವ ಅಭಿವೃದ್ಧಿ ಕೆಲಸ ಏನೂ ಆಗಿಲ್ಲ. ಮಮತಾ ಅಣ್ಣನ ಮಗ ಅಭಿಷೇಕ್‌ ಬ್ಯಾನರ್ಜಿ ಹಸ್ತಕ್ಷೇಪವೇ ಮುಕುಲ್  ರಾಯ್, ಸುವೆಂದು ಅಧಿಕಾರಿ ಇವರೆಲ್ಲ ಬಿಟ್ಟು ಹೋಗಲು ಮುಖ್ಯ ಕಾರಣ. 2021ರಲ್ಲೂ ಪಶ್ಚಿಮ ಬಂಗಾಳದಲ್ಲಿ ಕೋಲ್ಕತ್ತ ಬಿಟ್ಟರೆ ಇನ್ನೊಂದು ಒಳ್ಳೆಯ ನಗರ ಇಲ್ಲ. ಎಲ್ಲವೂ ಗ್ರಾಮೀಣ ಹಿಂದುಳಿದ ಜಿಲ್ಲೆಗಳು. ಕಮ್ಯುನಿಸ್ಟರು ಇದಕ್ಕೆ ಮುಖ್ಯ ಕಾರಣ ಹೌದಾದರೂ ಪರಿಸ್ಥಿತಿ ಸುಧಾರಿಸಲು ಮಮತಾ ಬ್ಯಾನರ್ಜಿ ಏನೂ ಮಾಡಿಲ್ಲ. ವಾಮಪಂಥೀಯರು ಬೇಡ, ಬಿಜೆಪಿ ಬೇಡ ಎಂದು ಹೇಳುವುದಕ್ಕಿಂತ ಬೇರೆ ಪ್ರಚಾರ ಸಾಮಗ್ರಿ ದೀದಿ ಬಳಿ ದಂಡಿಯಾಗಿ ಕಾಣುತ್ತಿಲ್ಲ.

ಶಾ ಮತ್ತು ಶಹನ್‌ ಷಾ

ಬಂಗಾಳ ಬಿಜೆಪಿ ಗೆಲ್ಲಬೇಕಾದರೆ ಇಬ್ಬರೇ ವ್ಯಕ್ತಿಗಳಿಂದ. ಒಬ್ಬರು ಶಾ, ಇನ್ನೊಬ್ಬರು ಶಹನ್‌ ಷಾ ಅಂದರೆ ಮೋದಿ ಎಂಬ ಜೋಕು ಬಿಜೆಪಿ ವಲಯದಲ್ಲಿ ಚಾಲ್ತಿಯಲ್ಲಿದೆ. ಬಿಹಾರದಿಂದ ದೂರವಿದ್ದ ಅಮಿತ್‌ ಭಾಯಿ ಪಶ್ಚಿಮ ಬಂಗಾಳದ ಪ್ರತಿಯೊಂದು ಹೆಜ್ಜೆಯನ್ನೂ ತಾವೇ ನಿರ್ಧರಿಸುತ್ತಿದ್ದು, ಕೇವಲ ಮೋದಿ ಫೋಟೋ ಹಾಕಿಕೊಂಡು ಚುನಾವಣೆಗೆ ದೇಶದ ಬಿಜೆಪಿ ಪಡೆಯನ್ನೇ ಇಳಿಸಿದ್ದಾರೆ. ಉತ್ತರ ಪ್ರದೇಶ, ಬಿಹಾರ, ಗುಜರಾತ್‌, ಕರ್ನಾಟಕ, ಮಹಾರಾಷ್ಟ್ರ, ಒರಿಸ್ಸಾದ ಸಾವಿರಾರು ಕಾರ್ಯಕರ್ತರು ಜನವರಿಯಿಂದಲೇ ಬಂಗಾಳದ ಕ್ಷೇತ್ರಗಳಿಗೆ ಹೋಗಿ ಕುಳಿತಿದ್ದಾರೆ.

ಒಂದು ಕಾಲದ ವಾಮಪಂಥೀಯ ಕೋಟೆ ಗೆಲ್ಲಲು ಸಂಘ ಕೂಡ ಪೂರ್ತಿ ಕೈಜೋಡಿಸುತ್ತಿದೆ. ಕಳೆದ 6 ವರ್ಷಗಳಲ್ಲಿ ಅತ್ಯಂತ ತುರುಸಿನ ಸ್ಪರ್ಧೆಗಳನ್ನು ಗೆಲ್ಲುವ ಕಲೆ ಮೋದಿ ಮತ್ತು ಶಾ ಇಬ್ಬರಿಗೂ ಸಿದ್ಧಿಸಿದೆ. ಪರಂಪರಾಗತ ರಾಜನೀತಿಯ ಕಲೆಗಳಾದ ಸಾಮ, ದಾಮ, ದಂಡ, ಬೇಧ ಗೊತ್ತಿರುವುದು, ಇತ್ತೀಚಿನ ದಿನಗಳಲ್ಲಿ ಕರಗತವಾಗಿರುವುದು ಅಮಿತ್‌ ಶಾ ಅವರಿಗೆ ಮಾತ್ರ. ಒಂದಂತೂ ನಿಜ ಅಸ್ಸಾಂ ಉಳಿಸಿಕೊಂಡು ಬಿಜೆಪಿ ಪಶ್ಚಿಮ ಬಂಗಾಳ ಏನಾದರೂ ಗೆದ್ದರೆ ಮೋದಿ ಮತ್ತು ಶಾರನ್ನು ಇನ್ನೊಂದು ವರ್ಷ ಕಟ್ಟಿಹಾಕುವುದು ಕಷ್ಟ.

ದೀದಿ-ಅಟಲ್‌ ಪ್ರಸಂಗ

ಮೂಗಿನ ಮೇಲೆ ಸಿಟ್ಟು ಸೆಡವು ಇಟ್ಟುಕೊಂಡೇ ತಿರುಗಾಡುವ ಮಮತಾರನ್ನು ಸಂಭಾಳಿಸುವುದು ಯಾರಿಗಾದರೂ ಕಷ್ಟವೇ. ಆದರೆ ಮುತ್ಸದ್ದಿ ಅಟಲ್ ಜಿ ಒಂದು ಕಡೆ ಮಮತಾ ಇನ್ನೊಂದು ಕಡೆ ಜಯಲಲಿತಾರನ್ನು ಹೇಗೋ ಸರ್ಕಸ್‌ ಮಾಡಿ ಸಂಭಾಳಿಸಿ ಇಟ್ಟಿದ್ದರು. ಒಮ್ಮೆ ಏನಕ್ಕೋ ಸಿಟ್ಟಿಗೆದ್ದು ಮಮತಾ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಆ ಪತ್ರವನ್ನು ಪ್ರಧಾನಿಗೆ ಕಳುಹಿಸಿ ಕೊಟ್ಟರಂತೆ. 4 ದಿನ ಬಿಟ್ಟು ಕೋಲ್ಕತ್ತದಲ್ಲಿ ಯಾವುದೋ ಕಾರ್ಯಕ್ರಮ ಹಾಕಿಕೊಂಡ ಅಟಲ… ಬಿಹಾರಿ ಅಲ್ಲಿ ಹೋಗಿ ಮಮತಾ ಬ್ಯಾನರ್ಜಿ ತಾಯಿಗೆ ಫೋನ್‌ ಮಾಡಿ, ‘ನಿಮ್ಮ ಮನೆಗೆ ಊಟಕ್ಕೆ ಬರುತ್ತೇನೆ. ಒಳ್ಳೆ ಮೀನು ತಯಾರಿಸಿ’ ಎಂದು ಹೇಳಿದ್ದರಂತೆ. ದೀದಿ ತಾಯಿಗೆ ಅಟಲ್ ಜಿ ಎಂದರೆ ಭಾರೀ ಇಷ್ಟ.

ಮೀನು ತಿನ್ನುವಾಗ ಪಕ್ಕದಲ್ಲಿ ಕುಳಿತಿದ್ದರೂ ದೀದಿ ಅಟಲ್ ಜಿ ಜೊತೆ ಒಂದು ಅಕ್ಷರವೂ ಮಾತಾಡಲಿಲ್ಲ. ಊಟವಾದ ಮೇಲೆ ದೀದಿಯ ತಾಯಿ, ‘ಮಮತಾ ಮಂತ್ರಿಯಾಗಿ ಕೆಲಸ ಹೇಗಿದೆ?’ ಎಂದು ಕೇಳಿದಾಗ ವಾಜಪೇಯಿ, ‘ತುಂಬಾ ಚೆನ್ನಾಗಿದೆ. ಆದರೆ ಸಣ್ಣ ಸಣ್ಣ ವಿಷಯಕ್ಕೆ ಸಿಟ್ಟು ಬರುವುದು ಜಾಸ್ತಿ; ಅದಕ್ಕೆಲ್ಲ ಅಷ್ಟುಮಹತ್ವ ಕೊಡಬಾರದು’ ಎಂದು ಹೇಳಿ ವಿಮಾನ ನಿಲ್ದಾಣಕ್ಕೆ ಹೋದರಂತೆ. ಅಟಲ… ಜಿ ದಿಲ್ಲಿಯಲ್ಲಿ ಇಳಿಯುವಷ್ಟರಲ್ಲಿ ಮಮತಾ ದೀದಿ ತಮ್ಮ ರಾಜೀನಾಮೆ ಪತ್ರ ವಾಪಸ್‌ ತೆಗೆದುಕೊಂಡಿದ್ದರು.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

click me!