ಎಐಸಿಸಿ ಹಾಲಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ರಾಜಕೀಯ ಆರಂಭವಾಗಿದ್ದೇ ಯಾದಗಿರಿ ಜಿಲ್ಲೆಯಿಂದ. ಕಲಬುರಗಿ ಲೋಕಸಭಾ ಕ್ಷೇತದ ವ್ಯಾಪ್ತಿಗೊಳಪಡುವ ಗುರುಮಠಕಲ್ ಹಾಗೂ ರಾಯಚೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೊಳಪಡುವ ಯಾದಗಿರಿ, ಸುರಪುರ (ಶೋರಾಪುರ- ಪರಿಶಿಷ್ಟ ಪಂಗಡಕ್ಕೆ ಮೀಸಲು) ಹಾಗೂ ಶಹಾಪುರ ಇವು ಜಿಲ್ಲೆಯಲ್ಲಿರುವ ನಾಲ್ಕು ವಿಧಾನಸಭಾ ಕ್ಷೇತ್ರಗಳು.
ಆನಂದ್ ಎಂ.ಸೌದಿ
ಯಾದಗಿರಿ (ಡಿ.07): ಎಐಸಿಸಿ ಹಾಲಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ರಾಜಕೀಯ ಆರಂಭವಾಗಿದ್ದೇ ಯಾದಗಿರಿ ಜಿಲ್ಲೆಯಿಂದ. ಕಲಬುರಗಿ ಲೋಕಸಭಾ ಕ್ಷೇತದ ವ್ಯಾಪ್ತಿಗೊಳಪಡುವ ಗುರುಮಠಕಲ್ ಹಾಗೂ ರಾಯಚೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೊಳಪಡುವ ಯಾದಗಿರಿ, ಸುರಪುರ (ಶೋರಾಪುರ- ಪರಿಶಿಷ್ಟ ಪಂಗಡಕ್ಕೆ ಮೀಸಲು) ಹಾಗೂ ಶಹಾಪುರ ಇವು ಜಿಲ್ಲೆಯಲ್ಲಿರುವ ನಾಲ್ಕು ವಿಧಾನಸಭಾ ಕ್ಷೇತ್ರಗಳು.
undefined
ಕಳೆದ ಬಾರಿ ಯಾದಗಿರಿ, ಸುರಪುರದಲ್ಲಿ ಬಿಜೆಪಿ ಶಾಸಕರು ಗೆದ್ದಿದ್ದರೆ, ಗುರುಮಠಕಲ್‌ನಲ್ಲಿ ಜೆಡಿಎಸ್ ಹಾಗೂ ಶಹಾಪುರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದು ಶಾಸಕರಾಗಿದ್ದಾರೆ. ವೀರಶೈವ-ರೆಡ್ಡಿ, ಲಿಂಗಾಯತ, ಕೋಲಿ, ಕುರುಬ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಬಂಜಾರಾ, ಮುಸ್ಲಿಂ ಮತಗಳು ಈ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ. ಗುರುಮಠಕಲ್ ಹೊರತುಪಡಿಸಿ ಉಳಿದೆಡೆ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಬಹುತೇಕ ನೇರ ಸ್ಪರ್ಧೆ ಇದೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಘಟಾನುಘಟಿಗಳ ಪಕ್ಷಾಂತರ ಪರ್ವದ ಸಾಧ್ಯತೆ ಇದ್ದು, ಆಗ ಟಿಕೆಟ್ ಲೆಕ್ಕಾಚಾರಗಳು ಬದಲಾಗಬಹುದು.
Ticket Fight: ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಮಲ ಪಾಳಯ ಭೇದಿಸಲು ಕಾಂಗ್ರೆಸ್ ಯತ್ನ
1.ಯಾದಗಿರಿ: ಡಾ.ಮಾಲಕರೆಡ್ಡಿ ಘರ್ ವಾಪ್ಸಿ?
ಯಾದಗಿರಿ ಕ್ಷೇತ್ರದಿಂದ ಮಾಜಿ ಸಚಿವ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದಿ.ವಿಶ್ವನಾಥರೆಡ್ಡಿ ಮುದ್ನಾಳ್ ಅವರ ಪುತ್ರ ವೆಂಕಟರೆಡ್ಡಿ ಕಳೆದ ಬಾರಿ ಬಿಜೆಪಿಯಿಂದ ಗೆದ್ದು ಶಾಸಕರಾಗಿದ್ದಾರೆ. ಈ ಬಾರಿಯೂ ಅವರು ಬಿಜೆಪಿಯಿಂದ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಮಾಜಿ ಎಂಎಲ್ಸಿ ಹಾಗೂ ಮಲ್ಲಿಕಾರ್ಜುನ ಖರ್ಗೆಯವರ ಕಟ್ಟಾಬೆಂಬಲಿಗ ತುನ್ನೂರು ಚೆನ್ನಾರೆಡ್ಡಿಗೌಡ ಕಾಂಗ್ರೆಸ್ ಟಿಕೆಟ್‌ನ ಪ್ರಬಲ ಆಕಾಂಕ್ಷಿ. ಈ ಮಧ್ಯೆ ಮಾಜಿ ಸಚಿವ ಡಾ.ಮಾಲಕರೆಡ್ಡಿ ಅವರ ‘ಘರ್ ವಾಪ್ಸಿ’ ಸುದ್ದಿಗಳು ಕ್ಷೇತ್ರದಲ್ಲಿ ಹರಿದಾಡುತ್ತಿವೆ. ಕಳೆದ ಬಾರಿ ಬಿಜೆಪಿ ಸೇರಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಗೆ ಕಾರಣರಾದರು ಎಂಬ ಆರೋಪವಿದ್ದರೂ ಮಾಲಕರೆಡ್ಡಿ ಮತ್ತೆ ಕಾಂಗ್ರೆಸ್‌ಗೆ ವಾಪಸ್ ಬರುವ ಸಾಧ್ಯತೆಗಳು ಹೆಚ್ಚಿವೆ. ಮಾಲಕರೆಡ್ಡಿ ಈ ಭಾಗದ ಪ್ರಮುಖ ಕಾಂಗ್ರೆಸ್ ನಾಯಕ. ಸಾಕಷ್ಟುಸಂಖ್ಯೆಯಲ್ಲಿ ಬೆಂಬಲಿಗರನ್ನೂ ಹೊಂದಿದ್ದಾರೆ. ಕಾಂಗ್ರೆಸ್‌ಗೆ ವಾಪಸಾಗುವ ಕುರಿತು ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜತೆಗೆ ಒಂದು ಸುತ್ತಿನ ಮಾತುಕತೆಯನ್ನೂ ನಡೆಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಮಾಲಕರೆಡ್ಡಿ ವಾಪಸ್ ಪಕ್ಷಕ್ಕೆ ಬಂದರೆ ಅವರ ಪುತ್ರಿ ಡಾ. ಅನುರಾಗ ಅವರಿಗೆ ಟಿಕೆಟ್ ಕೇಳಬಹುದು ಎನ್ನಲಾಗಿದೆ. ಕ್ಷೇತ್ರದಲ್ಲಿ ರೆಡ್ಡಿ-ಲಿಂಗಾಯತ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರ ಮತಗಳು ಹೆಚ್ಚಿವೆ.
2.ಗುರುಮಠಕಲ್: ಜೆಡಿಎಸ್-ಚಿಂಚನಸೂರು ಮಧ್ಯೆ ಸ್ಪರ್ಧೆ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ಪರಮಾಪ್ತ ನಾಗನಗೌಡ ಕಂದಕೂರ ಗುರುಮಠಕಲ್ ಕ್ಷೇತ್ರದ ಹಾಲಿ ಶಾಸಕರು. ಇವರ ಪುತ್ರ, ಯುವ ಮುಖಂಡ ಶರಣಗೌಡ ಮುಂದಿನ ಜೆಡಿಎಸ್ ಅಭ್ಯರ್ಥಿ ಎಂದೇ ಬಿಂಬಿಸಲಾಗುತ್ತಿದೆ. ಇದಕ್ಕೆ ಎಚ್.ಡಿ.ಕುಮಾರಸ್ವಾಮಿ ಅವರ ಅಭಯವೂ ಸಿಕ್ಕಿದೆ. ಇನ್ನು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದ ಈ ಭಾಗದ ಹಿರಿಯ ಮುಖಂಡ ಬಾಬುರಾವ್ ಚಿಂಚನಸೂರ್ ಅವರು ಲೋಕಸಭಾ ಚುನಾವಣೆ ವೇಳೆಗೆ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸಿಡಿದೆದ್ದು ಬಿಜೆಪಿ ಸೇರಿದ್ದರು. ಜೆಡಿಎಸ್ ಅಭ್ಯರ್ಥಿಗೆ ಪ್ರಬಲ ಪೈಪೋಟಿ ನೀಡಲು ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಕೋಲಿ ಸಮಾಜದ ಬಾಬುರಾವ್ ಅವರಿಗೇ ಟಿಕೆಟ್ ನೀಡುವುದು ಸೂಕ್ತ ಎನ್ನುವ ಮಾತು ಹರಿದಾಡುತ್ತಿದೆ. ಹೀಗಾಗಿ ಬಿಜೆಪಿಯಿಂದ ಬಾಬೂರಾವ್‌ಗೆ ಟಿಕೆಟ್ ನೀಡಿದರೂ ಅಚ್ಚರಿ ಇಲ್ಲ. ಉಳಿದಂತೆ ಈ ಹಿಂದೆ ಬೆಂಗಳೂರಿನ ಉದ್ಯಮಿ ಡಾ.ಯೋಗೇಶ ಬೆಸ್ತರ್ ಹಾಗೂ ಪರಿಷತ್ ಸದಸ್ಯ ಎನ್.ರವಿಕುಮಾರ್ ಹೆಸರು ಕೆಲಕಾಲ ತೇಲಿಬಂದಿತ್ತಾದರೂ ಈಗ ಅಂಥ ಯಾವುದೇ ಪ್ರಸ್ತಾಪ ಇಲ್ಲ. ಇನ್ನು ಮಹಿಳಾ ಮೋರ್ಚಾ ನಾಯಕಿ ನಾಗರತ್ನಾ ಕುಪ್ಪಿ ಸಹ ಪಕ್ಷದ ಟಿಕೆಟ್ ಆಕಾಂಕ್ಷಿ. ಇನ್ನು ಶರಣಪ್ಪ ಮಾನೇಗಾರ್, ಬಸರೆಡ್ಡಿ ಅನಪುರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು. ಕ್ಷೇತ್ರದಲ್ಲಿ ಕೋಲಿ, ರೆಡ್ಡಿ ಲಿಂಗಾಯತ ಹಾಗೂ ಬಂಜಾರಾ ಮತಗಳೇ ನಿರ್ಣಾಯಕವಾಗಿವೆ.
3.ಸುರಪುರದಲ್ಲಿ ‘ನಾಯಕ’ರ ಜಿದ್ದಾಜಿದ್ದಿ
ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಮೀಸಲಾದ ಸುರಪುರದಲ್ಲಿ(ಶೋರಾಪುರ) ಬಿಜೆಪಿಯ ನರಸಿಂಹ ನಾಯಕ್ (ರಾಜೂಗೌಡ) ಹಾಲಿ ಶಾಸಕರು. ರಾಜೂಗೌಡ ಎದುರು ಸೋತಿದ್ದ ರಾಜಾ ವೆಂಕಟಪ್ಪ ನಾಯಕ್ ಈ ಬಾರಿಯೂ ಕಾಂಗ್ರೆಸ್‌ನಿಂದ ಕಣಕ್ಕಿಳಿಯುವ ನಿರೀಕ್ಷೆ ಇದೆ. ಹೀಗಾದರೆ ಮತ್ತೊಂದು ಬಾರಿ ರಾಜೂಗೌಡ ಮತ್ತು ವೆಂಕಟಪ್ಪ ನಾಯಕ್ ನಡುವೆ ಜಿದ್ದಾಜಿದ್ದಿ ಕದನ ಏರ್ಪಡಲಿದೆ. ಸದ್ಯದ ಸನ್ನಿವೇಶದಲ್ಲಿ ರಾಜಾ ವೆಂಕಟಪ್ಪ ನಾಯಕ ಹಾಗೂ ರಾಜೂಗೌಡ ಹೊರತುಪಡಿಸಿ, ಮೂರನೇ ಪಕ್ಷ ಅಥವಾ ವ್ಯಕ್ತಿಯ ಪ್ರಭಾವ ಕ್ಷೇತ್ರದಲ್ಲಿ ಅಷ್ಟೊಂದು ಇಲ್ಲ. ವಾಲ್ಮೀಕಿ, ಕುರುಬ ಹಾಗೂ ಲಿಂಗಾಯತ ಮತಗಳು ಈ ಕ್ಷೇತ್ರದಲ್ಲಿ ನಿರ್ಣಾಯಕವಾಗಿವೆ.
4.ಶಹಾಪುರ : ಕಾಂಗ್ರೆಸ್‌ನ ‘ದರ್ಶನ’ಪುರ?
ಶಹಾಪುರ ವಿಧಾನಸಭಾ ಕ್ಷೇತ್ರ ಪ್ರತಿ ಚುನಾವಣೆಯಲ್ಲಿ ಶಾಸಕರನ್ನು ಬದಲಿಸುವುದಕ್ಕಾಗಿಯೇ ಹೆಸರುವಾಸಿ. ಮಾಜಿ ಸಚಿವ ದಿ.ಬಾಪುಗೌಡ ದರ್ಶನಾಪುರ ಅವರ ಪುತ್ರ, ಕಾಂಗ್ರೆಸ್ ಪಕ್ಷದ ಶರಣಬಸಪ್ಪಗೌಡ ದರ್ಶನಾಪುರ ಹಾಲಿ ಶಾಸಕರು. ಇವರೇ ಮುಂದಿನ ಚುನಾವಣೆಯಲ್ಲೂ ಕಣಕ್ಕಿಳಿಯುವ ನಿರೀಕ್ಷೆಯಲ್ಲಿದ್ದಾರೆ. ಇನ್ನು ಬಿಜೆಪಿಯಿಂದ ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ, ಅಮೀನರೆಡ್ಡಿ ಪಾಟೀಲ್ ಯಾಳಗಿ, ಮಲ್ಲನಗೌಡ ಉಕ್ಕಿನಾಳ ಹಾಗೂ ಡಾ.ಚಂದ್ರಶೇಖರ ಸುಬೇದಾರ್ ಆಕಾಂಕ್ಷಿಗಳು. ಗುರು ಪಾಟೀಲ್ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತರು. ಲಿಂಗಾಯತ, ಕುರುಬ, ಮುಸ್ಲಿಂ ಹಾಗೂ ದಲಿತ ಮತದಾರರು ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
Ticket Fight: ದಕ್ಷಿಣ ಕನ್ನಡ ಬಿಜೆಪಿ ಕೋಟೆಯಲ್ಲಿ ಕಾಂಗ್ರೆಸ್ ಪೈಪೋಟಿ
ಬಲಾಬಲ
ಒಟ್ಟು 4
ಬಿಜೆಪಿ 2
ಕಾಂಗ್ರೆಸ್ 1
ಜೆಡಿಎಸ್ 1