India Gate: ಅಲೆ ಇಲ್ಲದ ಚುನಾವಣೆಯ ಝಳದಲ್ಲಿ

By Prashant Natu  |  First Published Apr 28, 2023, 10:31 AM IST

ಬಿಜೆಪಿಯ ಘಟಾನುಘಟಿಗಳಿಗೆ, ಹಾಲಿ ಶಾಸಕರಿಗೆ ಟಿಕೆಟ್‌ ತಪ್ಪುವುದಕ್ಕೂ ಮುನ್ನ ದಿಲ್ಲಿಯಲ್ಲಿ ನಡೆದಿದ್ದೇನು?


ಬೆಂಗಳೂರು(ಏ.28): ಯಾವುದೋ ಕಣ್ಣಿಗೆ ಕಾಣದ ಯಾರದ್ದಾದರೂ ಪರ ಅಥವಾ ವಿರುದ್ಧದ ಅಲೆ ಜನರ ಮಧ್ಯೆ ಕೆಲಸ ಮಾಡುತ್ತಿದ್ದರೆ ಮಾತ್ರ ಈ ಬಾರಿ ರಾಜ್ಯದಲ್ಲಿ ಪೂರ್ಣ ಬಹುಮತದ ಸರ್ಕಾರ ಬರುವ ಸಾಧ್ಯತೆ ಇದೆ. ಒಂದು ವೇಳೆ ಯಾವುದೇ ಅಲೆ ಕೆಲಸ ಮಾಡದೆ ಇದ್ದರೆ ಮತ್ತೊಮ್ಮೆ ಕರ್ನಾಟಕ ಅತಂತ್ರ ಅಷ್ಟೆ. ಕೊನೆಯ 10 ದಿನಗಳ ಮೋದಿ ಪ್ರಚಾರದಿಂದ ಮತದಾರ ಯಾವ ಕಡೆ ತಿರುಗುತ್ತಾನೆಂಬುದು ಕೂಡ ಸಸ್ಪೆನ್ಸ್‌.

ನರೇಂದ್ರ ಮೋದಿ ರಾಷ್ಟ್ರೀಯ ರಾಜಕಾರಣಕ್ಕೆ ಪ್ರವೇಶ ಮಾಡಿದ ಮೇಲಿನ ಮೂರು ಚುನಾವಣೆಗಳು ಅಂದರೆ 2014ರ ಲೋಕಸಭೆ 2018ರ ವಿಧಾನಸಭೆ ಮತ್ತು 2019ರ ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿ ರಾಜ್ಯದಲ್ಲಿ ಏರಿಕೆ ಹಾದಿಯಲ್ಲಿಯೇ ಇದೆ. ಆದರೆ 2014ರಲ್ಲಿ ಮೋದಿ ಜೊತೆ ಜೊತೆಗೆ ಯಡಿಯೂರಪ್ಪ ಮರಳಿ ಬಂದ ಫ್ಯಾಕ್ಟರ್‌ ಕೆಲಸ ಮಾಡಿತ್ತು. 2018ರಲ್ಲಿ ಮೋದಿ ಫ್ಯಾಕ್ಟರ್‌ ಜೊತೆ ಜೊತೆಗೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಬೇಕು ಎಂಬ ಕಾರಣದಿಂದ ಲಿಂಗಾಯತ ಫ್ಯಾಕ್ಟರ್‌ ಜೊತೆಗೆ 5 ವರ್ಷದ ಸಿದ್ದರಾಮಯ್ಯ ಆಡಳಿತದ ಕಾರಣದಿಂದ ಇದ್ದ ಆಡಳಿತ ವಿರೋಧಿ ಅಲೆ ಕೂಡ ಬಿಜೆಪಿಗೆ ಲಾಭ ತಂದಿತ್ತು. ಇನ್ನು 2019ರಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯ ತಪ್ಪು ನಿರ್ಧಾರದಿಂದಾಗಿ ಬಿಜೆಪಿ ಶೇ.50ಕ್ಕಿಂತ ಜಾಸ್ತಿ ವೋಟು ತೆಗೆದುಕೊಂಡಿತ್ತು. ಈ ಬಾರಿ ಕೂಡ ಮೋದಿ ಅಬ್ಬರ ಯಥಾಪ್ರಕಾರ ಇದೆ. ಆದರೆ 2018ರಲ್ಲಿ ಕಾಂಗ್ರೆಸ್‌ ಇದ್ದ ಸ್ಥಿತಿಯಲ್ಲಿ ಈಗ ಬಿಜೆಪಿ ಇದೆ. ಲಿಂಗಾಯತರನ್ನು ಉಪಜಾತಿ ಎಂದು ನೋಡದೆ ವೋಟು ಹಾಕುವಂತೆ ಮಾಡುತ್ತಿದ್ದ ಯಡಿಯೂರಪ್ಪ ಈಗ ತಂಡದ ಕ್ಯಾಪ್ಟನ್‌ ಅಲ್ಲ. ಹೀಗಿರುವಾಗ ಮೋದಿ ಅಬ್ಬರ ನಿಜಕ್ಕೂ ಎಷ್ಟುಪರಿಣಾಮ ಬೀರುತ್ತದೆ ಅನ್ನುವುದು ಫಲಿತಾಂಶ ಬಂದ ಬಳಿಕವೇ ಗೊತ್ತಾಗಬೇಕು. ಇವತ್ತಿನ ಪ್ತಕಾರ ಕರ್ನಾಟಕದಲ್ಲಿ 1ರಿಂದ 5 ಪ್ರತಿಶತ ಮತಗಳಿಂದ ಫಲಿತಾಂಶ ನಿರ್ಧಾರ ಆಗುವ 63 ಕ್ಷೇತ್ರಗಳಿವೆ. ಯಾವುದೋ ಒಂದು ಪರ ಅಥವಾ ವಿರುದ್ಧದ ಗಾಳಿ ಕೆಲಸ ಮಾಡಿದರೆ ಈ ಸೀಟುಗಳಲ್ಲಿ ಯಾರು ಹೆಚ್ಚು ಗೆಲ್ಲುತ್ತಾರೋ ಅವರು ಮುಂದೆ ಇರುತ್ತಾರೆ. ಒಂದು ವೇಳೆ ಎಲ್ಲ ಕ್ಷೇತ್ರಗಳ ಫಲಿತಾಂಶ ಸ್ಥಳೀಯವಾಗಿಯೇ ನಿರ್ಧಾರ ಆದರೆ ಎಲ್ಲರೂ ಊಹಿಸಿದ್ದಕ್ಕೆ ವ್ಯತಿರಿಕ್ತವಾದ ಫಲಿತಾಂಶವೂ ಬರಬಹುದು.

Tap to resize

Latest Videos

undefined

From the India Gate: ಕೇರಳದಲ್ಲಿ 'ದೋಸೆ' ರಾಜಕೀಯ; ಬಿಜೆಪಿ ಸಂಸದರಿಗೆ ಡಬಲ್‌ ಡ್ಯೂಟಿಯದ್ದೇ ದೊಡ್ಡ ಚಿಂತೆ!

ಶೇಕಡಾವಾರು ಮತದ ಲೆಕ್ಕಾಚಾರ

ಇಲ್ಲಿಯವರೆಗೆ - ಅಂದರೆ 2004ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಉಚ್ಛ್ರಾಯ ಶುರುವಾದ ನಂತರ ಇಲ್ಲಿಯವರೆಗೆ - ಬಿಜೆಪಿಗೆ ವೋಟು ಹಾಕಿದ ಮತದಾರ ಕಾಂಗ್ರೆಸ್‌ಗೆ ವರ್ಗಾವಣೆ ಆಗಿಲ್ಲ. 2013ರಲ್ಲಿ ಯಡಿಯೂರಪ್ಪ ಮತ್ತು ಶ್ರೀರಾಮುಲು ಕಾರಣದಿಂದ 13 ಪ್ರತಿಶತ ವೋಟುಗಳನ್ನು ಬಿಜೆಪಿ ಕಳೆದುಕೊಂಡಿತಾದರೂ ನೇರವಾಗಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ಗುಳೆ ಹೋದ ಮತದಾರರು ಕೇವಲ ಒಂದು ಪ್ರತಿಶತ ಮಾತ್ರ. ಈ ಬಾರಿ ಬಿಜೆಪಿಯ ಅಬ್ಬರದ ಪ್ರಚಾರ ಏನೇ ಇದ್ದರೂ ಕೂಡ ಬಿಜೆಪಿಯ ಹಾಲಿ ಶಾಸಕರ ಬಗ್ಗೆ ಕೆಲವೆಡೆ ಬೇಸರ ಹಾಗೂ ಅಸಮಾಧಾನಗಳಿವೆ. ಅದು ಮತದಾನದಲ್ಲಿ ಪ್ರತಿಫಲಿತವಾದರೆ ಎಷ್ಟುಪ್ರತಿಶತ ಮತದಾರ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಗುಳೆ ಹೋಗುತ್ತಾನೆ ಎನ್ನುವುದು ಬಿಜೆಪಿ ಮತ್ತು ಕಾಂಗ್ರೆಸ್‌ನ ಸೀಟುಗಳನ್ನು ನಿರ್ಧರಿಸಲಿದೆ. ರಾಜ್ಯದ 224 ಕ್ಷೇತ್ರಗಳಲ್ಲಿ ಗಟ್ಟಿಅಸ್ತಿತ್ವ ಹೊಂದಿರುವ ಕಾರಣ ಎರಡನೇ ಸ್ಥಾನಕ್ಕೆ ಹೋದರೂ ಕಾಂಗ್ರೆಸ್‌ ಮತ ಪ್ರಮಾಣ ಬಿಜೆಪಿಗಿಂತ ಜಾಸ್ತಿ ಇರುತ್ತದೆ. ಒಂದು ಅಂದಾಜಿನ ಪ್ರಕಾರ ಬಿಜೆಪಿ-ಕಾಂಗ್ರೆಸ್‌ ಶೇಕಡಾವಾರು ಮತಗಳ ಅಂತರ 2 ಪ್ರತಿಶತಕ್ಕಿಂತ ಕಡಿಮೆ ಇದ್ದರೆ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಒಂದು ವೇಳೆ ಮತಗಳ ಅಂತರ 2ರಿಂದ 4 ಪ್ರತಿಶತ ಇದ್ದರೆ ಕಾಂಗ್ರೆಸ್‌ ಅತಿ ದೊಡ್ಡ ಪಾರ್ಟಿ ಆಗಲಿದೆ. ಒಂದು ವೇಳೆ ಬಿಜೆಪಿ ಮತ್ತು ಕಾಂಗ್ರೆಸ್‌ನ ಮತಗಳ ಅಂತರ 5 ಪ್ರತಿಶತಕ್ಕಿಂತ ಜಾಸ್ತಿ ಆದರೆ ಕಾಂಗ್ರೆಸ್‌ 120ಕ್ಕಿಂತ ಮೇಲೆ ಕೂಡ ಹೋಗಬಹುದು. ಬಹುತೇಕ ಈ ಬಾರಿಯ ಚುನಾವಣಾ ಫಲಿತಾಂಶ ಕಾಂಗ್ರೆಸ್‌ ಎಷ್ಟು ಬಿಜೆಪಿ ಮತದಾರರನ್ನು ಮನವೊಲಿಸಿ ಸೆಳೆದುಕೊಳ್ಳುತ್ತದೆ ಎಂಬುದರ ಜೊತೆಗೆ ಮೋದಿ ಕೊನೆಯ 10 ದಿನ ಎಷ್ಟುಬಿಜೆಪಿ ಮತದಾರರನ್ನು ಗುಳೆ ಹೋಗದಂತೆ ತಡೆಯುತ್ತಾರೆ ಅನ್ನುವುದರ ಮೇಲೆ ಅವಲಂಬಿತವಾಗಿದೆ.

ಕರಾವಳಿ ಮತ್ತು ಕಿತ್ತೂರು ಕರ್ನಾಟಕ

2018ರಲ್ಲಿ ಕರಾವಳಿಯ 19 ಸೀಟುಗಳಲ್ಲಿ ಯು.ಟಿ.ಖಾದರ್‌ ಮತ್ತು ಆರ್‌.ವಿ.ದೇಶಪಾಂಡೆ ಗೆದ್ದ ಸೀಟುಗಳನ್ನು ಬಿಟ್ಟರೆ 17 ಕ್ಷೇತ್ರಗಳನ್ನು ಮತ್ತು ಲಿಂಗಾಯತ ಕ್ರೋಢೀಕರಣದಿಂದ ಕಿತ್ತೂರು ಕರ್ನಾಟಕದ 50ರಲ್ಲಿ 30 ಸೀಟುಗಳನ್ನು ಬಿಜೆಪಿ ಗೆದ್ದುಕೊಂಡಿತ್ತು. ಅಂದರೆ ಒಟ್ಟು 69ರಲ್ಲಿ 47 ಸೀಟು. ಈ ಬಾರಿ ಬಿಜೆಪಿ ಪುನರಪಿ ಕಳೆದ ಬಾರಿಯ ಸೀಟುಗಳ ಹತ್ತಿರ ಹತ್ತಿರ ಹೋಗಬೇಕಾದರೆ ಈ 69ರಲ್ಲಿ ಕನಿಷ್ಠ 45ನ್ನು ಮರಳಿ ಗೆಲ್ಲಬೇಕು. ಒಂದು ವೇಳೆ ಕಾಂಗ್ರೆಸ್‌ ಏನಾದರೂ ಏಕಾಂಗಿಯಾಗಿ ಅಧಿಕಾರಕ್ಕೆ ಬರಬೇಕಾದರೂ ಕೂಡ ಕರಾವಳಿಯಲ್ಲಿ ಕನಿಷ್ಠ 19ರಲ್ಲಿ 8ರಿಂದ 9 ಮತ್ತು ಕಿತ್ತೂರು ಕರ್ನಾಟಕದಲ್ಲಿ 50ರಲ್ಲಿ 27ರಿಂದ 28 ಸೀಟು ಪಡೆಯಲೇಬೇಕು. ಒಂದು ವೇಳೆ ಕರಾವಳಿಯಲ್ಲಿ ಏನಾದರೂ ಹಿಂದುತ್ವದ ಕಾರಣದಿಂದ ಮರಳಿ ಬಿಜೆಪಿ ಭರ್ಜರಿಯಾಗಿ ಗೆದ್ದರೆ ಕಾಂಗ್ರೆಸ್‌ ಮ್ಯಾಜಿಕ್‌ ನಂಬರ್‌ ತಲುಪುವುದು ಕಷ್ಟಆಗುತ್ತದೆ. ಇದರ ಸರಳ ಅರ್ಥ ಏನಪ್ಪಾ ಅಂದರೆ, ಯಾವುದೋ ಕಣ್ಣಿಗೆ ಕಾಣದ ಯಾರದೇ ಪರ ಅಥವಾ ವಿರುದ್ಧದ ಅಲೆ ಜನರ ಮಧ್ಯೆ ಕೆಲಸ ಮಾಡುತ್ತಿದ್ದರೆ ಮಾತ್ರ ಪೂರ್ಣ ಬಹುಮತದ ಸರ್ಕಾರ ಬರುವ ಸಾಧ್ಯತೆ ಇದೆ. ಒಂದು ವೇಳೆ ಯಾವುದೇ ಅಲೆ ಕೆಲಸ ಮಾಡದೆ ಇದ್ದರೆ ಮತ್ತೊಮ್ಮೆ ಕರ್ನಾಟಕ ಅತಂತ್ರ ಅಷ್ಟೆ.

ಬಿಜೆಪಿ ಟಿಕೆಟ್‌ನ ದಿಲ್ಲಿ ಒಳಸುಳಿ

ಬೊಮ್ಮಾಯಿ, ಯಡಿಯೂರಪ್ಪ, ನಳಿನ್‌ ಕಟೀಲ್‌, ಪ್ರಹ್ಲಾದ ಜೋಶಿ, ಬಿ.ಎಲ….ಸಂತೋಷ್‌ ಜೊತೆ ಕರ್ನಾಟಕದ ಪಟ್ಟಿ ಹಿಡಿದು ಅಮಿತ್‌ ಶಾ ಮತ್ತು ಜೆ.ಪಿ.ನಡ್ಡಾ ಕುಳಿತಾಗ ಹುಬ್ಬಳ್ಳಿ ಸೆಂಟ್ರಲ್ ವಿಷಯ ಬಂದಿತ್ತು. ಬೊಮ್ಮಾಯಿ ಮತ್ತು ಪ್ರಹ್ಲಾದ ಜೋಶಿ ಶೆಟ್ಟರ್‌ಗೆ ಕೊಡಲೇಬೇಕು, ಸೀನಿಯರ್‌ ಲೀಡರ್‌ ಇದ್ದಾರೆ ಎಂದು ಹೇಳಿದಾಗ, ‘2013ರಲ್ಲಿ ಮುಖ್ಯಮಂತ್ರಿ ಆಗಿ ಚುನಾವಣೆಯಲ್ಲಿ ಯಾವುದೇ ಸಹಕಾರ ಕೊಡಲಿಲ್ಲ. ಮುಖ್ಯಮಂತ್ರಿ ಆಗಿದ್ದವರು ಈಗ ಕೇವಲ ಶಾಸಕರಾಗಿ ಏನು ಮಾಡುತ್ತಾರೆ? ಹೊಸಬರಿಗೆ ಕೊಡೋಣ’ ಎಂಬ ಪ್ರಸ್ತಾಪ ಜೆ.ಪಿ.ನಡ್ಡಾ ಮತ್ತು ಅರುಣ್ ಸಿಂಗ್‌ರಿಂದ ಬಂದಿತ್ತಂದೆ. ಅದಕ್ಕೆ ಅಮಿತ್‌ ಶಾ, ‘ಸರಿ 50-50 ಇಟ್ಕೊಳ್ಳಿ. ಆಮೇಲೆ ನೋಡೋಣ’ ಎಂದು ಹೇಳಿದರಂತೆ. ಮುಂದೆ ಶಿವಮೊಗ್ಗ ಕ್ಷೇತ್ರ ಬಂದಾಗ ಶೆಟ್ಟರ್‌ಗೆ ಕೊಟ್ಟರೆ ಈಶ್ವರಪ್ಪಗೆ ಕೊಡೋಣ, ಇಲ್ಲ ಅಂತಾದಲ್ಲಿ ಇಬ್ಬರಿಗೂ ಬೇಡ ಎಂದು ನಡ್ಡಾ ಹೇಳಿದರಂತೆ. ಕೊನೆಗೆ ರಾಮದಾಸ್‌, ಲಿಂಬಾವಳಿ ಹೆಸರು ಬಂದಾಗ ಅಮಿತ್‌ ಶಾ ಅವರೇ ಬೇಡ ಎಂದು ಹೇಳಿ, ಕೊನೆಗೆ ಪುತ್ತೂರು, ಸುಳ್ಯ, ಉಡುಪಿ, ಕಾಪು ಸೇರಿದಂತೆ ಒಟ್ಟು 10 ಶಾಸಕರನ್ನು ಕೈ ಬಿಡುವುದು. ಉಳಿದವರಿಗೆಲ್ಲ ಕೊಡುವುದು ಎಂದು ತೀರ್ಮಾನ ಆಗಿ ಪಟ್ಟಿ ಪಾರ್ಲಿಮೆಂಟರಿ ಬೋರ್ಡ್‌ಗೆ ಹೋಯಿತಂತೆ. ಅಲ್ಲಿ ಪ್ರಧಾನಿ ಮೋದಿ ಕೇಳಿದ ಮೊದಲ ಪ್ರಶ್ನೆ- ಮೂರು ದಿನ ಪೂರ್ತಿ ಕುಳಿತು ಬರೀ ಇಷ್ಟೇ ಬದಲಾವಣೆ ಮಾಡಿದ್ರಾ ಎಂದು. ಅಲ್ಲಿಗೆ ಸಭೆ ಬರ್ಖಾಸ್ತು ಆಯಿತು. ಆಮೇಲೆ ಮೋದಿ, ಅಮಿತ್‌ ಶಾ ಮತ್ತು ಜೆ.ಪಿ.ನಡ್ಡಾ ಮೂವರೇ ಕುಳಿತು ಅರ್ಧ ಗಂಟೆ ಮಾತ ನಾಡಿದ ನಂತರ 50-50 ಎಂದು ಇಟ್ಟಿದ್ದ ಎಲ್ಲ ಹೆಸರುಗಳನ್ನು ಕೈಬಿಟ್ಟು, ಅಲ್ಲಿ ಹೊಸ ಕಾರ್ಯಕರ್ತರಿಗೆ ಕೊಡುವುದು ಎಂದು ತೀರ್ಮಾನ ಆಗಿ, ರಾಜ್ಯದ ನಾಯಕರಿಗೆ ಹೊಸ ಪಟ್ಟಿ ನೀಡಿದ ಅಮಿತ್‌ ಶಾ, ಇನ್ನೇನಿದ್ದರೂ ಜೆ.ಪಿ.ನಡ್ಡಾ ಜೊತೆ ಕುಳಿತು ಮಾತನಾಡಿ ಎಂದು ಹೇಳಿ ಮರುದಿನ ಬೆಳಿಗ್ಗೆ ಈಶಾನ್ಯ ರಾಜ್ಯಕ್ಕೆ ಹೋದರಂತೆ. ದಿಲ್ಲಿ ನಾಯಕರಿಗೆ ಲಕ್ಷ್ಮಣ ಸವದಿ ಬಿಜೆಪಿ ಬಿಟ್ಟು ಹೋಗುತ್ತಾರೆ ಎಂದು ಅಂದಾಜು ಇತ್ತಂತೆ. ಅದಕ್ಕೆ ಜೇವರ್ಗಿಗೆ ಹೋಗಿ ನಿಲ್ಲಿ ಎಂದು ನಡ್ಡಾ ಕರೆದು ಹೇಳಿದರೂ ಸವದಿ ಒಪ್ಪಲಿಲ್ಲವಂತೆ. ಆದರೆ ದಿಲ್ಲಿ ನಾಯಕರಿಗೆ ಜಗದೀಶ್‌ ಶೆಟ್ಟರ್‌ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಸೇರಿಕೊಂಡು ಬಿಡುತ್ತಾರೆ ಎಂಬ ಅಂದಾಜು ಇರಲಿಲ್ಲವಂತೆ. ಮೊದಲ ದಿನವೇ ಧರ್ಮೇಂದ್ರ ಪ್ರಧಾನ್‌ ಬದಲಿಗೆ ಅಮಿತ್‌ ಶಾ ಫೋನ್‌ ಮಾಡಿ ದಿಲ್ಲಿಗೆ ಕರೆಸಿಕೊಂಡು ತಿಳಿಸಿ ಹೇಳಿದ್ದರೆ ಅಥವಾ ಹುಬ್ಬಳ್ಳಿಯ ಆರ್‌ಎಸ್‌ಎಸ್‌ ಪ್ರಮುಖರ ಮೂಲಕ ಮನವರಿಕೆ ಮಾಡಿದ್ದರೆ ಶೆಟ್ಟರ್‌ ಅವರನ್ನು ರಮಿಸಬಹುದಿತ್ತು ಎಂದು ದಿಲ್ಲಿ ನಾಯಕರು ಆಮೇಲೆ ಅಂದುಕೊಳ್ಳುತ್ತಿದ್ದಾರೆ.

ಯಡಿಯೂರಪ್ಪ ಸ್ಟೈಲ್‌

ಟಿಕೆಟ್‌ ಫೈನಲ್‌ ಮಾಡಲು ದಿಲ್ಲಿಗೆ ಬಂದಾಗ ಗಂಟು ಮುಖ ಹಾಕಿಕೊಂಡಿದ್ದ ಯಡಿಯೂರಪ್ಪ, ದಿಲ್ಲಿಯ ಸಭೆಯಲ್ಲಿ ಯಾವಾಗ ಶಿಕಾರಿಪುರದ ಚರ್ಚೆ ಬಂದಾಗ ಯಾರ ವಿರೋಧವೂ ಇಲ್ಲದೇ ಬಿ.ವೈ.ವಿಜಯೇಂದ್ರ ಹೆಸರು ಪಾಸಾಯಿತೋ ಸ್ವಲ್ಪ ನಕ್ಕು ಮಾತನಾಡಲು ಶುರುಮಾಡಿದರಂತೆ. ತಮ್ಮ ಬೆಂಬಲಿಗರ ಹೆಸರು ಚೀಟಿಯಲ್ಲಿ ಬರೆದುಕೊಂಡು ಬಂದಿದ್ದ ಯಡಿಯೂರಪ್ಪ ಆಯಾ ಕ್ಷೇತ್ರದ ಹೆಸರು ಬಂದಾಗ ಒಂದೊಂದೇ ಚೀಟಿ ತೆಗೆದು ಅಮಿತ್‌ ಶಾ ಕೈಗೆ ಕೊಡುತ್ತಿದ್ದರಂತೆ. ಆದರೆ ಯಾವಾಗ ಬ್ಯಾಟರಾಯನಪುರದ ಚರ್ಚೆ ಆಯಿತೋ ತಮ್ಮೇಶಗೌಡಗೆ ಕೊಡಿ 100 ಪರ್ಸೆಂಟ್‌ ಗೆಲ್ಲುತ್ತಾನೆ ಎಂದು ಮುನೀಂದ್ರ ಹೆಸರು ತೆಗೆದು ಹಾಕಿಸಿದರಂತೆ. ಏನೇ ಇರಲಿ 80 ವರ್ಷಕ್ಕೂ ಯಡಿಯೂರಪ್ಪಗಿರುವ ಆಸಕ್ತಿ, ಹಟ, ಸಕ್ರಿಯತೆ ಮೆಚ್ಚತಕ್ಕದ್ದೇ.

ಮೀಸಲಿನಿಂದ ಉಳಿಯುತ್ತಾ ವೋಟ್‌ಬ್ಯಾಂಕ್‌?: ಚುನಾವಣೆಗೂ ಮುನ್ನ ದೊಡ್ಡ ಸಾಹಸಕ್ಕೆ ಕೈಹಾಕಿದ ಬೊಮ್ಮಾಯಿ

ವರುಣ ಕ್ಷೇತ್ರದ ಲೆಕ್ಕಾಚಾರಗಳು

ವರುಣದಲ್ಲಿ ವಿಜಯೇಂದ್ರರನ್ನು ನಿಲ್ಲಿಸುತ್ತೀರಾ ಎಂದು ಅಮಿತ್‌ ಶಾ ಕೇಳಿದಾಗ ಯಡಿಯೂರಪ್ಪ ‘ಬೇಡ, ಶಿಕಾರಿಪುರ ಒಂದೇ ಸಾಕು’ ಎಂದು ಹೇಳಿದರಂತೆ. ಕೊನೆಗೆ ಸೋಮಣ್ಣರನ್ನು ದಿಲ್ಲಿಗೆ ಕರೆಸಿ ಕೇಳಿದಾಗ ಸರಿ ನಿಲ್ಲುತ್ತೇನೆ ಎಂದರಂತೆ. ವರುಣ ಕ್ಷೇತ್ರಕ್ಕೆ ಸೀಮಿತವಾಗಿ ನೋಡಿದಾಗ ಬಿಜೆಪಿಯಲ್ಲಿ ಎರಡು ಲೆಕ್ಕಾಚಾರಗಳಿವೆ.

1.ಸಿದ್ದರಾಮಯ್ಯ ಅವರನ್ನು ಕ್ಷೇತ್ರದಲ್ಲೇ ಹೆಚ್ಚು ದಿನ ಕಟ್ಟಿಹಾಕುವುದು. 2.ಲಿಂಗಾಯತರು ಗಟ್ಟಿಯಾಗುತ್ತಾ ಹೋದರೆ ಇನ್ನಷ್ಟುಪ್ರಭಾವ ಬೀರಿ ಕಾಂಗ್ರೆಸ್ಸನ್ನು ಸೋಲಿಸಲು ಪ್ರಯತ್ನ ಹಾಕುವುದು. ಒಂದು ವೇಳೆ ಸಿದ್ದರಾಮಯ್ಯ ಇಷ್ಟಾಗಿಯೂ ಗೆದ್ದರೆ ಬಿಜೆಪಿಗೇನೂ ನಷ್ಟಆಗುವುದಿಲ್ಲ. ಆದರೆ ಕಾಂಗ್ರೆಸ್‌ ನಾಯಕರ ಒಳ ಹೊಡೆತದಿಂದ ಸಿದ್ದು ಏನಾದರೂ ಸೋತರೆ 2024ರಲ್ಲಿ ಕುರುಬರು ಕಾಂಗ್ರೆಸ್‌ ಜೊತೆಗೆ ನಿಲ್ಲುವುದಿಲ್ಲ ಎಂಬ ಲೆಕ್ಕಾಚಾರ ಇದ್ದಹಾಗೆ ಮೇಲುನೋಟಕ್ಕೆ ಕಾಣುತ್ತಿದೆ. ರಾಜಕೀಯ ಲೆಕ್ಕಾಚಾರಗಳು ಕಾಣುವಷ್ಟು ಸುಲಭ ಸರಳವಾಗಿ ಇರುವುದಿಲ್ಲ ಬಿಡಿ.

click me!