ಮೀಸಲು ಕ್ಷೇತ್ರವಾಗಿರುವ ಸುಳ್ಯದಲ್ಲಿ ಈ ಬಾರಿ ಪ್ರಮುಖ ರಾಜಕೀಯ ಪಕ್ಷಗಳು ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡರಿಂದಲೂ ಹೊಸ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂಬುದೇ ಕುತೂಹಲದ ಸಂಗತಿ.
ದುರ್ಗಾಕುಮಾರ್ ನಾಯರ್‌ಕೆರೆ
ಮಂಗಳೂರು (ಫೆ.22): ಮೀಸಲು ಕ್ಷೇತ್ರವಾಗಿರುವ ಸುಳ್ಯದಲ್ಲಿ ಈ ಬಾರಿ ಪ್ರಮುಖ ರಾಜಕೀಯ ಪಕ್ಷಗಳು ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡರಿಂದಲೂ ಹೊಸ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂಬುದೇ ಕುತೂಹಲದ ಸಂಗತಿ. ಏಳು ಬಾರಿ ಸ್ಪರ್ಧಿಸಿ, 1994ರಿಂದ ಆರು ಬಾರಿ ಗೆದ್ದು, ಈ ಬಾರಿ ಸಚಿವರೂ ಆಗಿರುವ ಎಸ್.ಅಂಗಾರ ಅವರಿಗೆ ಈ ಬಾರಿ ಟಿಕೆಟ್ ಇಲ್ಲ ಎಂಬ ಸುದ್ದಿ ಬಿಜೆಪಿಯೊಳಗೇ ಹರಡಿದೆ.
ಒಂದು ವೇಳೆ ಅಂಗಾರರನ್ನು ಬದಲಾಯಿಸಿದರೆ ಇನ್ಯಾರು ಎಂಬ ಪ್ರಶ್ನೆಗೆ ಹಲವರ ಹೆಸರುಗಳು ಕೇಳಿ ಬರುತ್ತಿವೆ. ಕಳೆದ ಬಾರಿಯೇ ಜಿ.ಪಂ.ಮಾಜಿ ಸದಸ್ಯೆ ಭಾಗೀರಥಿ ಮುರುಳ್ಯ ಅವರ ಹೆಸರು ಚರ್ಚೆಯಲ್ಲಿತ್ತು. ಬಳಿಕ, ಆ ಪಟ್ಟಿಗೆ ತಾ.ಪಂ.ಮಾಜಿ ಅಧ್ಯಕ್ಷರಾದ ಶಂಕರ್ ಪೆರಾಜೆ, ಚನಿಯ ಕಲ್ಲಡ್ಕ, ಜಿ.ಪಂ. ಮಾಜಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹೆಸರುಗಳೂ ಕೇಳಿ ಬಂದಿದ್ದವು. ಈ ಬಾರಿ ಒಂದಷ್ಟು ಯುವಕರ ಹೆಸರುಗಳು ಕೇಳಿ ಬರುತ್ತಿವೆ. ಉಪನ್ಯಾಸಕರು ಹಾಗೂ ಎಬಿವಿಪಿಯಲ್ಲಿ ಸಕ್ರಿಯರಾಗಿರುವ ಪದ್ಮಕುಮಾರ್ ಗುಂಡಡ್ಕ, ಶಿವಪ್ರಸಾದ್ ಪೆರುವಾಜೆ, ಲತೀಶ್ ಗುಂಡ್ಯ, ನವೀನ್ ನೆರಿಯ, ಪಿ.ಎಂ.ರವಿ ಮೊದಲಾದವರ ಹೆಸರು ಚಾಲ್ತಿಯಲ್ಲಿದೆ.
ಲಾ ಸ್ಕೂಲ್‌ನಲ್ಲಿ ಕನ್ನಡಿಗರ ಮೀಸಲಿಗೆ ಬದ್ಧ: ಸಚಿವ ಮಾಧುಸ್ವಾಮಿ
ಕಾಂಗ್ರೆಸ್‌ನಿಂದ ಸತತ ನಾಲ್ಕು ಸೋಲು ಕಂಡ ಡಾ.ರಘು ಅವರಿಗೆ ಈ ಬಾರಿ ಟಿಕೆಟ್ ಇಲ್ಲ ಎನ್ನುವುದು ನಿಶ್ಚಿತ. ನಾಲ್ಕನೇ ಸೋಲಿನ ಸಂದರ್ಭವೇ ಡಾ.ರಘು, ಇನ್ನು ಸ್ಪರ್ಧೆಗೆ ನಾನಿಲ್ಲ ಎಂದೂ ಘೋಷಿಸಿದ್ದರು. ಹೀಗಾಗಿ, ಕಳೆದ ಬಾರಿಯೇ ಟಿಕೆಟ್‌ಗೆ ಯತ್ನಿಸಿ ಕ್ಷೇತ್ರದಾದ್ಯಂತ ಓಡಾಡುತ್ತಾ ಕ್ರಿಯಾಶೀಲರಾಗಿರುವ, ಕೆಪಿಸಿಸಿ ಸಂಯೋಜಕರೂ ಆಗಿರುವ ಎಚ್.ಎಂ. ನಂದಕುಮಾರ್ ಅಥವಾ ಜಿ.ಕೃಷ್ಣಪ್ಪ ಇವರಲ್ಲಿ ಒಬ್ಬರು ಟಿಕೆಟ್ ಗಿಟ್ಟಿಸಿಕೊಳ್ಳಬಹುದಾದ ಸಾಧ್ಯತೆ ಇದೆ. ಇವರ ಜೊತೆ ಮಂಗಳೂರಿನ ಮಾಜಿ ಕಾರ್ಪೋರೇಟರ್ ಕೆ.ಅಪ್ಪಿ, ಡಾ.ರಘು ಅವರ ಪುತ್ರರಾದ ಅಭಿಷೇಕ್ ಬೆಳ್ಳಿಪ್ಪಾಡಿ ಮತ್ತು ಪ್ರಹ್ಲಾದ್ ಬೆಳ್ಳಿಪ್ಪಾಡಿ ಕೂಡ ಕಾಂಗ್ರೆಸ್ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಈ ಬಾರಿ ಸುಳ್ಯದಿಂದ ಆಮ್ ಆದ್ಮಿ ಪಾರ್ಟಿ ಕೂಡಾ ಸ್ಪರ್ಧಿಸಲಿದೆ ಎನ್ನುವುದು ಹೊಸ ಬೆಳವಣಿಗೆ. ಸುಳ್ಯದಲ್ಲಿ ಕಾಂಗ್ರೆಸ್‌ನಿಂದ ಎರಡು ಬಾರಿ ಶಾಸಕರಾಗಿದ್ದ ಕೆ.ಕುಶಲರ ಪುತ್ರಿ, ಸುಮನಾ ಬೆಳ್ಳಾರ್ಕರ್ ಆಪ್ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ. ಬಹುತೇಕ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಜೆಡಿಎಸ್, ಕಳೆದ ಬಾರಿ ಸ್ಪರ್ಧಿಸಿರಲಿಲ್ಲ. ಕಳೆದ ಬಾರಿ ಸ್ಪರ್ಧಾ ಕಣದಲ್ಲಿದ್ದ ಸಮಾಜವಾದಿ ಪಾರ್ಟಿ ಅಭ್ಯರ್ಥಿ ಈ ಬಾರಿ ಸ್ಪರ್ಧಿಸಲಿದ್ದಾರೆಯೇ ಎಂಬುದು ಖಚಿತವಾಗಿಲ್ಲ.
ಕ್ಷೇತ್ರ ಹಿನ್ನೆಲೆ: 1952ರಲ್ಲಿ ವಿಧಾನಸಭೆ ಅಸ್ತಿತ್ವಕ್ಕೆ ಬಂದಾಗ ಪುತ್ತೂರು, ಬೆಳ್ತಂಗಡಿ, ಸುಳ್ಯ ಸಹಿತ ದ್ವಿಸದಸ್ಯ ಕ್ಷೇತ್ರವಾಗಿತ್ತು. 1957ರಲ್ಲಿ ಬೆಳ್ತಂಗಡಿ ಪ್ರತ್ಯೇಕಗೊಂಡು ಪುತ್ತೂರು, ಸುಳ್ಯ ಒಳಗೊಂಡ ದ್ವಿಸದಸ್ಯ ಕ್ಷೇತ್ರವಾಗಿತ್ತು. 1962ರಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದು, ಪರಿಶಿಷ್ಟಪಂಗಡಕ್ಕೆ ಮೀಸಲಾಯಿತು. 1967ರಲ್ಲಿ ಪರಿಶಿಷ್ಟಜಾತಿಗೆ ಮೀಸಲಾದ ಕ್ಷೇತ್ರವಾಯಿತು. ಮೂರು ದಶಕದ ಹಿಂದೆ ಈ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಆದರೆ, ನಂತರದ ಪರಿಸ್ಥಿತಿ ಬದಲಾಗಿದೆ. ಕಳೆದ ಆರು ಅವಧಿಗಳಿಂದ ಇಲ್ಲಿ ಬಿಜೆಪಿ ಶಾಸಕರಿದ್ದಾರೆ.
ಏ.1ರಿಂದ ಸ್ತ್ರೀ ನೌಕರರಿಗೆ ಉಚಿತ ಬಸ್‌ಪಾಸ್: ಸಿಎಂ ಬೊಮ್ಮಾಯಿ ಸೂಚನೆ
ಜಾತಿವಾರು ಲೆಕ್ಕಾಚಾರ: ಜಾತಿವಾರು ಪ್ರಾಬಲ್ಯ ನೋಡುವುದಾದರೆ ಇಲ್ಲಿ ಒಕ್ಕಲಿಗರದ್ದೇ ಪ್ರಾಬಲ್ಯ. ಶೇ.65ರಷ್ಟಿರುವ ಗೌಡ ಸಮುದಾಯದ ಮತಗಳೇ ಇಲ್ಲಿ ನಿರ್ಣಾಯಕ. ಅದು ಬಿಟ್ಟರೆ ದಲಿತ ಮತಗಳ ಪ್ರಾಬಲ್ಯ ಹೆಚ್ಚು. ಒಟ್ಟು ಮತದಾರರ ಪೈಕಿ ಗೌಡರು 1,10,000, ಪ.ಜಾ./ಪ.ಪಂ.ದವರು 33,000, ಮುಸ್ಲಿಮರು 20,200, ಕ್ರೈಸ್ತರು 2,300 ಇದ್ದಾರೆ.