ಭೀಮಾತೀರದಲ್ಲಿ ಟಿಕೆಟ್‌ಗಾಗಿ ಕುಟುಂಬದೊಳಗೇ ಕಾದಾಟ: ಅಖಾಡಕ್ಕೆ ಎಸ್‌ಐ ಹಗರಣದ ಕಿಂಗ್‌ಪಿನ್‌ ಸಜ್ಜು

By Kannadaprabha News  |  First Published Mar 12, 2023, 9:02 AM IST

ಟಿಕೆಟ್‌ ಪೈಪೋಟಿ ಕಾಂಗ್ರೆಸ್‌ ಹೈಕಮಾಂಡ್‌ಗೆ ತಲೆನೋವಾಗಿದೆ. ಹಾಲಿ ಶಾಸಕ ಎಂ.ವೈ.ಪಾಟೀಲ್‌ ಪರಿವಾರದಲ್ಲೇ ಅವರ ಪುತ್ರರಾದ ಅರುಣ ಎಂ.ವೈ. ಪಾಟೀಲ್‌, ಡಾ.ಸಂಜು ಎಂ.ವೈ. ಪಾಟೀಲ್‌ ಹಾಗೂ ಇವರ ಸಹೋದರ ಸಂಬಂಧಿ ಅಮರ್‌ ಎಸ್‌.ವೈ.ಪಾಟೀಲ್‌ ನಡುವೆ ಪೈಪೋಟಿ ನಡೆದಿದೆ.


ಶೇಷಮೂರ್ತಿ ಅವಧಾನಿ

ಕಲಬುರಗಿ (ಮಾ.12): ಭೀಮಾತೀರದ ಅಫಜಲ್ಪುರ ಅಸೆಂಬ್ಲಿ ಮತಕ್ಷೇತ್ರದಲ್ಲೀಗ ಬಿಜೆಪಿ ಹಾಗೂ ಕಾಂಗ್ರೆಸ್‌ನ ಟಿಕೆಟ್‌ಗಾಗಿ ಭಾರಿ ಪೈಪೋಟಿ ಏರ್ಪಟ್ಟಿದೆ. ಹಾಲಿ ಶಾಸಕರಿಗೆ ಟಿಕೆಟ್‌ ನೀಡಲಾಗುವುದು ಎಂಬ ಕಾಂಗ್ರೆಸ್‌ ಹೈಕಮಾಂಡ್‌ ಘೋಷಣೆಯಿಂದಾಗಿ ಮತ್ತೊಮ್ಮೆ ಅಫಜಲ್ಪುರದಿಂದ ಎಂ.ವೈ.ಪಾಟೀಲ್‌ ಕಣಕ್ಕಿಳಿಯುವುದು ಬಹುತೇಕ ಖಚಿತ.

Latest Videos

undefined

ಆದಾಗ್ಯೂ, ಇಲ್ಲಿನ ಟಿಕೆಟ್‌ ಪೈಪೋಟಿ ಕಾಂಗ್ರೆಸ್‌ ಹೈಕಮಾಂಡ್‌ಗೆ ತಲೆನೋವಾಗಿದೆ. ಹಾಲಿ ಶಾಸಕ ಎಂ.ವೈ.ಪಾಟೀಲ್‌ ಪರಿವಾರದಲ್ಲೇ ಅವರ ಪುತ್ರರಾದ ಅರುಣ ಎಂ.ವೈ. ಪಾಟೀಲ್‌, ಡಾ.ಸಂಜು ಎಂ.ವೈ. ಪಾಟೀಲ್‌ ಹಾಗೂ ಇವರ ಸಹೋದರ ಸಂಬಂಧಿ ಅಮರ್‌ ಎಸ್‌.ವೈ.ಪಾಟೀಲ್‌ ನಡುವೆ ಪೈಪೋಟಿ ನಡೆದಿದೆ. ಜೊತೆಗೆ, ಕುರುಬ ಸಮಾಜದ ಜಯಪ್ಪ ಎಂ. ಕೊರಬು, ಅಲ್ಪಸಂಖ್ಯಾತ ಸಮುದಾಯದ ಮಕ್ಬೂಲ್‌ ಪಟೇಲ್‌, ಪಪ್ಪು ಪಟೇಲ್‌, ಲಿಂಗಾಯತ ಸಮುದಾಯದ ರಾಜೇಂದ್ರ ಪಾಟೀಲ್‌ ರೇವೂರ್‌ ಕೂಡಾ ‘ಕೈ’ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ.

ಸತೀಶ್‌ ಜಾರಕಿಹೊಳಿ ಗೆಲುವಿನ ಓಟಕ್ಕೆ ಬಿಜೆಪಿ ಪಡೆ ಬ್ರೇಕ್‌ ಹಾಕುತ್ತಾ?

ಆರೋಗ್ಯ ಹಾಗೂ ವಯಸ್ಸಿನ ಕಾರಣ ಮುಂದಿಟ್ಟುಕೊಂಡು ಅದಾಗಲೇ ಎಂ.ವೈ. ಪಾಟೀಲ್‌ ರಾಜಕೀಯ ನಿವೃತ್ತಿ ಮಾತುಗಳನ್ನಾಡಿದ್ದರೂ, ಕ್ಷೇತ್ರದಲ್ಲಿನ ಟಿಕೆಟ್‌ ಆಕಾಂಕ್ಷಿಗಳ ದಂಡು ಕಂಡೇ ಬೆಚ್ಚಿದ್ದಾರೆ. ತಾವು ನಿವೃತ್ತಿಯ ಮಾತನ್ನಾಡಿದರೆ ಅದೆಲ್ಲಿ ಕ್ಷೇತ್ರ ಅನ್ಯರ ಪಾಲಾಗುವುದೋ ಎಂಬ ಭೀತಿಯಿಂದ ಇದೀಗ ಹೈಕಮಾಂಡ್‌ ಬಯಸಿದರೆ ತಾವೇ ಕಣಕ್ಕಿಳಿಯುವ ಆಸಕ್ತಿ ತೋರಿದ್ದಾರೆ. ಪುತ್ರರಿಬ್ಬರಲ್ಲಿ ಯಾರನ್ನಾದರೂ ಒಬ್ಬರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡುವ ಇರಾದೆ ಅವರದು.

ಬಿಜೆಪಿ ಟಿಕೆಟ್‌ಗಾಗಿ ಇಲ್ಲಿ ಗುತ್ತೇದಾರ್‌ ಕುಟುಂಬದಲ್ಲೇ ಪೈಪೋಟಿ ನಡೆದಿದೆ. ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಮಂತ್ರಿ ಮಾಲೀಕಯ್ಯ ಗುತ್ತೇದಾರ್‌ ಹಾಗೂ ಅವರ ಕಿರಿಯ ಸಹೋದರ, ಮಾಜಿ ಜಿ.ಪಂ.ಅಧ್ಯಕ್ಷ ನಿತಿನ್‌ ಗುತ್ತೇದಾರ್‌ ಮಧ್ಯೆ ಫೈಟ್‌ ನಡೆದಿದೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ 2018ರಲ್ಲಿ ಕಾಂಗ್ರೆಸ್‌ನಲ್ಲಿದ್ದ ಈಡಿಗ ಸಮಾಜದ ಹಿರಿಯ ಮುಖಂಡ ಮಾಲೀಕಯ್ಯ ಗುತ್ತೇದಾರ್‌ ಬಿಜೆಪಿಗೆ ಸೇರ್ಪಡೆಯಾದಾಗ, ಅವರ ರಾಜಕೀಯ ಎದುರಾಳಿ ಎಂ.ವೈ.ಪಾಟೀಲ್‌ ಬಿಜೆಪಿ ತೊರೆದು ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು.

ಬಿಜೆಪಿಯಿಂದ ಎಂಎಲ್‌ಸಿ ಆಗುವ ಗುತ್ತೇದಾರ್‌ ಆಸೆ ಈಡೇರಿಲ್ಲ. ಇದೀಗ ಟಿಕೆಟ್‌ ನೀಡಿ ಎಂದು ಮಾಲೀಕಯ್ಯನವರು ಹೈಕಮಾಂಡ್‌ ಮುಂದೆ ನೇರವಾಗಿಯೇ ತಮ್ಮ ಬೇಡಿಕೆ ಮಂಡಿಸಿದ್ದಾರೆ. ಇತ್ತ ಅವರ ಕಿರಿಯ ಸಹೋದರ ನಿತೀನ್‌ ಗುತ್ತೇದಾರ್‌ ಕೂಡ ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದು, ಹೈಕಮಾಂಡ್‌ ಮಟ್ಟದಲ್ಲಿ ತೀವ್ರ ಲಾಬಿ ನಡೆಸಿದ್ದಾರೆ. ಇನ್ನು, ಜೆಡಿಎಸ್‌ನಿಂದ ಕೋಲಿ ಸಮಾಜಕ್ಕೆ ಸೇರಿದ ಶಿವಕುಮಾರ್‌ ನಾಟೀಕಾರ್‌ ಹೆಸರು ಘೋಷಣೆಯಾಗಿದೆ. ಈ ಮಧ್ಯೆ, ಪಿಎಸ್‌ಐ ಹಗರಣದ ಕಿಂಗ್‌ಪಿನ್‌, ಜೈಲು ಪಾಲಾಗಿರುವ ಆರ್‌.ಡಿ. ಪಾಟೀಲ್‌ ಕೂಡ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಕಾಂಗ್ರೆಸ್‌ನಿಂದ ಟಿಕೆಟ್‌ ಸಿಗದಿದ್ದರೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ತಿಳಿಸಿದ್ದಾರೆ.

ಕ್ಷೇತ್ರದ ಹಿನ್ನೆಲೆ: ಮಾಲಿಕಯ್ಯ ಗುತ್ತೇದಾರ್‌ ಅವರು ಕಾಂಗ್ರೆಸ್‌ನಿಂದ ನಾಲ್ಕು ಬಾರಿ, ಕೆಸಿಪಿಯಿಂದ ಒಂದು ಬಾರಿ, ಜೆಡಿಎಸ್‌ನಿಂದ ಒಂದು ಬಾರಿ ಸೇರಿ ಒಟ್ಟು 6 ಬಾರಿ ಗೆಲುವು ಸಾಧಿಸಿದ್ದಾರೆ. ಕೇಸರಿ ಪಡೆಯ ಹುರಿಯಾಳಾಗಿ ಮತ್ತೆ ಕಣಕ್ಕಿಳಿಯುವ ಉಮೇದಿನಲ್ಲಿದ್ದಾರೆ. ಇನ್ನು, ಹಾಲಿ ಕಾಂಗ್ರೆಸ್‌ ಶಾಸಕರಾಗಿರುವ ಎಂ.ವೈ. ಪಾಟೀಲ ಅವರು ಜನತಾದಳದಿಂದ ಒಂದು ಬಾರಿ, ಜೆಡಿಎಸ್‌ನಿಂದ ಒಂದು ಬಾರಿ, ಕಾಂಗ್ರೆಸ್‌ನಿಂದ ಒಂದು ಬಾರಿ ಸ್ಪರ್ಧಿಸಿ ಗೆಲುವು ಸಾಧಿಸಿದವರು. ಇದೀಗ ಪುನರಾಯ್ಕೆ ಬಯಸಿದ್ದು, ಕಾಂಗ್ರೆಸ್‌ನಿಂದಲೇ ಕಣಕ್ಕಿಳಿಯುವ ಸಾಧ್ಯತೆಗಳು ದಟ್ಟವಾಗಿವೆ.

400 ರೂಪಾಯಿ ಕುಕ್ಕರ್‌ಗೆ 1400 ರೂಪಾಯಿ ಸ್ಟಿಕ್ಕರ್‌, ಮತದಾರರನ್ನ ಕುರಿ ಮಾಡಿದ್ರಾ ರಾಜೇಗೌಡ್ರು!

ಜಾತಿ ಲೆಕ್ಕಾಚಾರ: ಕ್ಷೇತ್ರದಲ್ಲಿ ಲಿಂಗಾಯಿತ, ಕೋಲಿ ಸಮಾಜದ ಮತಗಳೇ ನಿರ್ಣಾಯಕ. ಆದಿ, ದೀಕ್ಷ, ಪಂಚಮಸಾಲಿ ಉಪ ಪಂಗಡಗಳು ಸೇರಿ 65 ಸಾವಿರ ಲಿಂಗಾಯಿತ ಮತಗಳಿವೆ. ಕೋಲಿ ಸಮಾಜದ 35 ಸಾವಿರ, ಮುಸ್ಲಿಂ ಸಮಾಜದ 32 ಸಾವಿರ ಹಾಗೂ ಕುರುಬ ಸಮಾಜದ 21 ಸಾವಿರದಷ್ಟುಮತಗಳು ಇಲ್ಲಿವೆ.

click me!