
ಬೆಂಗಳೂರು (ಜು.09): ರಾಜ್ಯದ ಬಡವರಿಗೆ ಆಗುತ್ತಿರುವ ಅನ್ಯಾಯ ತಪ್ಪಿಸಲು ಹೊರಗುತ್ತಿಗೆ ಆಧಾರಿತ ಹುದ್ದೆಗಳ ನೇಮಕಾತಿಯಲ್ಲೂ ಮೀಸಲಾತಿ ತರುವ ಚಿಂತನೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ವಸಂತ ನಗರದಲ್ಲಿರುವ ದೇವರಾಜು ಅರಸು ಭವನದಲ್ಲಿ ಶನಿವಾರ ಜನಮನ ಪ್ರತಿಷ್ಠಾನ ಮತ್ತು ಸಮತಾ ಅಧ್ಯಯನ ಕೇಂದ್ರ ಹಮ್ಮಿಕೊಂಡಿದ್ದ ಪ್ರಬುದ್ಧ ಕರ್ನಾಟಕ ಜನಮನ ಸಮಾವೇಶದ ಸಂವಾದದ ವೇಳೆ ಈ ಮಾಹಿತಿ ನೀಡಿದರು. ರಾಜ್ಯದಲ್ಲಿ ಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚು ಸರ್ಕಾರಿ ಉದ್ಯೋಗಗಳು ಖಾಲಿಯಿವೆ.
ಸರ್ಕಾರದ ಶೇ.33ರಷ್ಟು ಹುದ್ದೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಲಾಗಿದ್ದು, ನಮ್ಮ ಅವಧಿಯಲ್ಲಿ ಇದಕ್ಕೆ ಕಡಿವಾಣ ಬೀಳಲಿದೆ. ಹೊರಗುತ್ತಿಗೆ ಆಧಾರಿತ ಹುದ್ದೆಗಳ ನೇಮಕಾತಿಯಲ್ಲಿ ಯಾವುದೇ ಮೀಸಲಾತಿ ಇಲ್ಲ, ಇದರಿಂದ ನಾವು ಸಾಮಾಜಿಕ ನ್ಯಾಯವನ್ನು ಕಾಣಲು ಸಾಧ್ಯವಿಲ್ಲ. ಈ ರೀತಿಯ ನೇಮಕಾತಿ ರಾಜ್ಯದ ಬಡವರಿಗೆ ಅನ್ಯಾಯವಾಗಲಿದ್ದು, ನಾವು ಹೊರಗುತ್ತಿಗೆ ನೇಮಕಾತಿಗೂ ಮೀಸಲಾತಿಯನ್ನು ತರುವ ಚಿಂತನೆ ನಡೆಸಿದ್ದೇವೆ ಎಂದು ಹೇಳಿದರು. ಈ ಸಂವಾದದಲ್ಲಿ ಪ್ರಗತಿಪರ ಚಿಂತಕರು, ಲೇಖಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದು, ಅವರು ಕೇಳಿದ ಪ್ರಶ್ನೆಗಳಿಗೆ ಸಿದ್ದರಾಮಯ್ಯ ಅವರು ಉತ್ತರಿಸಿದ್ದು ಹೀಗೆ
15 ಮಹಿಳೆಯರ ಮದುವೆಯಾಗಿ ವಂಚಿಸಿದ್ದವನ ಬಂಧನ: ವಿಧವೆ, ಮದುವೆ ಆಗದ ಮಧ್ಯ ವಯಸ್ಕರೇ ಈತನ ಟಾರ್ಗೆಟ್
* ಪಠ್ಯಪುಸ್ತಕ ಗೊಂದಲ ನಿವಾರಣೆಗೆ ಏನು ಕ್ರಮ?
ವಿದ್ಯಾರ್ಥಿಗಳು ಹೆಚ್ಚು ಜಾತಿವಾದಿಗಳು ಆಗುತ್ತಿದ್ದು, ಮೌಢ್ಯಾಚರಣೆಗೆ ಒಳಗಾಗುತ್ತಿದ್ದಾರೆ. ಜಾತಿ ಅಸಮಾನತೆ ಅಳಿಸಬೇಕಾದರೆ ಶಿಕ್ಷಣದಲ್ಲಿ ವೈಚಾರಿಕತೆ ಅಗತ್ಯ. ನಾವು ಅಧಿಕಾರಕ್ಕೆ ಬರುವ ಮೊದಲು ಪಠ್ಯ ತಿರುಚಿದ್ದರು. ಆ ಪಠ್ಯಗಳನ್ನು ತಾತ್ಕಾಲಿಕವಾಗಿ ಬೋಧನೆ ಮಾಡದಿರಲು ಸೂಚಿಸಿದ್ದು, ಒಂದು ಕಮಿಟಿಯನ್ನೂ ರಚನೆ ಮಾಡಲಾಗಿದೆ. ಜಾತಿ ಸೋಂಕು ತಗುಲಿದ್ದರೆ, ಜಾತ್ಯಾತೀತ ರಾಷ್ಟ್ರ ಮಾಡಲು ಸಾಧ್ಯವಿಲ್ಲ. ಮಕ್ಕಳು ವಿಶ್ವಪ್ರಜ್ಞೆ ಬೆಳೆಸಿಕೊಂಡು ವೈಚಾರಿಕವಾಗಿ ಸನ್ನದ್ಧಗೊಳ್ಳುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಲಸ ಮಾಡಲಿದೆ.
* ನಿರುದ್ಯೋಗ ಸಮಸ್ಯೆ ನಿವಾರಣೆಗೆ ಏನು ಕ್ರಮ?
ಕೈಗಾರಿಕೋದ್ಯಮಿಗಳ ಜತೆ ಸಭೆ ಮಾಡಿದ್ದೇನೆ. ಅವರಿಗೆ ಯಾವ ರೀತಿಯ ಕೌಶಲ್ಯದ ವಿದ್ಯಾರ್ಥಿಗಳ ಅಗತ್ಯವಿದೆ ಎನ್ನುವ ಬಗ್ಗೆ ಚರ್ಚಿಸಿದ್ದೇನೆ. ಅದಕ್ಕೆ ತಕ್ಕಂತೆ ಶಿಕ್ಷಣವನ್ನು ರೂಪಿಸುವ, ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಅರ್ಹರನ್ನು ಸೃಷ್ಟಿಸಬೇಕಾಗುತ್ತದೆ. ಜಾಗತಿಕ ಮಟ್ಟದ ಬಂಡವಾಳವನ್ನು ಆಕರ್ಷಿಸಬೇಕು ಎಂದು ಶಾಂತಿ, ಸುವ್ಯವಸ್ಥೆ ಮತ್ತು ಉದ್ಯಮ ಸ್ನೇಹಿ ವಾತಾವರಣ ಇರಬೇಕು. ಬಂಡವಾಳ ಹೂಡಿಕೆಯಿಂದ ಉದ್ಯೋಗ ಸೃಷ್ಟಿಯಾಗಿ ಜಿಡಿಪಿ ಹೆಚ್ಚುತ್ತದೆ. ಹೀಗಾಗಿ ಜಾತಿ-ಧರ್ಮದ ಸಂಘರ್ಷ ಇಲ್ಲದ ಶಾಂತಿಯುತ ಸಮಾಜ ಇರಬೇಕು ಎಂದರು.
* ಅನೈತಿಕ ಪೊಲೀಸ್‌ಗಿರಿ ನಿಯಂತ್ರಿಸುವಿರಾ?
ಹಿಂದಿನ ಸರ್ಕಾರದಲ್ಲಿ ಅನೈತಿಕ ಪೊಲೀಸ್ ಗಿರಿ ಅತ್ಯಂತ ನಿರ್ಲಜ್ಜತನದಿಂದ ಆಚರಿಸಲ್ಪಡುತ್ತಿತ್ತು. ನಾವು ಅಧಿಕಾರಕ್ಕೆ ಬರುತ್ತಿದ್ದಂತೆ ಅನೈತಿಕ ಪೊಲೀಸ್ ಗಿರಿಗೆ ಬರೆ ಎಳೆದಿದ್ದೇವೆ. ಸಮ ಸಮಾಜ ನಿರ್ಮಾಣ ಆಗದ ಹೊರತು ದಲಿತರ, ಅಲ್ಪ ಸಂಖ್ಯಾತರ, ಹಿಂದುಳಿದವರ ಮೇಲೆ ದೌರ್ಜನ್ಯ ಹೋಗುವುದಿಲ್ಲ. ಹೀಗಾಗಿ ಕುವೆಂಪು ಅವರ ಮಾತಿನಂತೆ ರಾಜ್ಯವನ್ನು ಶಾಂತಿಯ ತೋಟ ಮಾಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.
* ಶರಾವತಿ ಸಂತ್ರಸ್ತರ ಸಮಸ್ಯೆಗೆ ಶಾಶ್ವತ ಪರಿಹಾರವೇನು?
ಮಲೆನಾಡಿನ ಜಿಲ್ಲೆಗಳಲ್ಲಿ ಹಲವು ವರ್ಷಗಳಿಂದ ಇರುವ ಶರಾವತಿ ಸಂತ್ರಸ್ತರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ. ಈ ಕುರಿತು ಮಾಹಿತಿ ಪಡೆದು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಸರ್ಕಾರಿ ಭೂಮಿ ಒತ್ತುವರಿ ಕುರಿತು ಸಮೀಕ್ಷೆ ಮಾಡಲಾಗುವುದು. ಭೂ ಹೀನರಿಗೆ ಭೂಮಿ ಕೊಡುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.
Bengaluru: ರಾಜಧಾನಿಯಲ್ಲಿ 24 ತಾಸು ಹೋಟೆಲ್ ತೆರೆಯಲು ಅವಕಾಶ ನೀಡಿ: ಡಿಕೆಶಿಗೆ ಮನವಿ
* ಯಾವಾಗ ಅಕಾಡೆಮಿ, ಪ್ರಾಧಿಕಾರಕ್ಕೆ ನೇಮಕ ಮಾಡುವಿರಿ?
ಅಕಾಡೆಮಿ, ಪ್ರಾಧಿಕಾರಗಳಿಗೆ ನೇಮಕ ಮಾಡಲು ಒಂದು ಆಯ್ಕೆ ಸಮಿತಿ ಮಾಡುತ್ತೇವೆ. ಈ ಆಯ್ಕೆ ಸಮಿತಿ ಮತಾಂಧ ಮತ್ತು ಸಮಾಜ ವಿಭಜಿಸುವ ಮನಸ್ಥಿತಿಯವರು ಒಳಗೆ ಪ್ರವೇಶಿಸದಂತೆ ನೇಮಕ ಮಾಡುತ್ತಾರೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.