ಅವರು ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. 1994ರಿಂದಲೂ ಅವರು ಜೆಡಿಎಸ್ಸೇ. ಗ್ರಾಮ ಪಂಚಾಯತಿಗೆ ಮೂರು ಬಾರಿ ಸ್ಪರ್ಧಿಸಿ ಗೆದ್ದಿದ್ದಾರೆ. ಸ್ಥಳೀಯವಾಗಿ ಅವರಿಗೆ ಭಾರಿ ಬೆಂಬಲ ಇದ್ದರೂ ಅವರು ಜೆಡಿಎಸ್ ಬಿಟ್ಟು ಅಲುಗಾಡಿಲ್ಲ
ಅವರು ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. 1994ರಿಂದಲೂ ಅವರು ಜೆಡಿಎಸ್ಸೇ. ಗ್ರಾಮ ಪಂಚಾಯತಿಗೆ ಮೂರು ಬಾರಿ ಸ್ಪರ್ಧಿಸಿ ಗೆದ್ದಿದ್ದಾರೆ. ಸ್ಥಳೀಯವಾಗಿ ಅವರಿಗೆ ಭಾರಿ ಬೆಂಬಲ ಇದ್ದರೂ ಅವರು ಜೆಡಿಎಸ್ ಬಿಟ್ಟು ಅಲುಗಾಡಿಲ್ಲ. ಕಾಂಗ್ರೆಸ್- ಬಿಜೆಪಿ ಕಡೆ ಮುಖ ಮಾಡಿಲ್ಲ. ಸ್ಥಳೀಯ ಸಹಕಾರಿ ಸಂಸ್ಥೆಯಲ್ಲಿ ಎರಡನೇ ಅವಧಿಗೆ ಏಕಾಂಗಿಯಾಗಿ ಸ್ಪರ್ಧಿಸಿ ನಿರ್ದೇಶಕರಾದವರು. ಚುನಾವಣೆ ವೇಳೆ ಜೆಡಿಎಸ್ ಪರವಾಗಿ ಆಕ್ಟೀವ್ ಆಗಿರುತ್ತಿದ್ದ ಇವರು ಈಗ ನಿರ್ಲಿಪ್ತರು.
ಏಕೆಂದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ಬಿಜೆಪಿ -ಜೆಡಿಎಸ್ ಮೈತ್ರಿಯಾಗಿದೆ.
ಈ ಬಾರಿ ಚುನಾವಣೆಯಲ್ಲಿ ನಿಮ್ಮ ಕತೆ ಏನು ಎಂದು ಇವರನ್ನು ಪತ್ರಕರ್ತರು ಕೇಳಿದರೆ... ‘ನಾನು ಇನ್ನೂ ಜೆಡಿಎಸ್.. ಮೇಲ್ಮಟ್ಟದಲ್ಲಿ ಮೈತ್ರಿ ಮಾಡಿಕೊಂಡಿದ್ದಾರೆ’ ಎನ್ನುತ್ತಾರೆ.
ಫೀಲ್ಡ್‌ಗೆ ಹೋಗುವುದಿಲ್ಲವಾ ಎಂದು ಮರು ಪ್ರಶ್ನೆ ಹಾಕಿದರೆ ‘ಫೀಲ್ಡ್‌ಗೆ ಬಿಜೆಪಿಯವರು ಹೋಗುತ್ತಾರೆ, ಜೆಡಿಎಸ್ ಕಾರ್ಯಕರ್ತರದ್ದು ವರ್ಕ್ ಫ್ರಮ್ ಹೋಮ್’ ಎನ್ನುವುದೇ!
ರಿಪೋರ್ಟರ್ಸ್ ಡೈರಿ: ಸಿದ್ದು ಸ್ಟ್ರಾಂಗ್, ಅವರಿಗೆ ಮಾಟ-ಮಂತ್ರ ತಟ್ಟಲ್ಲ!
ಕ್ಯಾಮೆರಾ ಬೇಕು ಸ್ವಾಮಿ ಕ್ಯಾಮೆರಾ
ಈ ಮಹಾಮಹಿಮರ ಸುದ್ದಿ ಟಿವಿಗಳಲ್ಲಿ ಪ್ರಸಾರವಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಸಾಹೇಬರು ಪ್ರೆಸ್ ಕಾನ್ಫರೆನ್ಸ್ ಮಾಡಿದಾಗ ಮಾತ್ರ ಎದುರುಗಡೆ ಕ್ಯಾಮೆರಾ ಇರಲೇ ಬೇಕು. ಕ್ಯಾಮೆರಾ ನೋಡಿದರೆ ಮಾತ್ರ ಮಾತು ಹೊರ ಬರುವುದು. ಇಲ್ಲದಿದ್ದರೆ, ಪತ್ರಿಕಾಗೋಷ್ಠಿಯೇ ಕ್ಯಾನ್ಸಲ್.
ಈ ಧೋರಣೆಯ ಮಹಾಮಹಿಮರು ಇತ್ತೀಚೆಗೆ ಮತ್ತೆ ಪ್ರೆಸ್ ಕಾನ್ಫರೆನ್ಸ್ ಕರೆದಿದ್ದರು. ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆ ವಿಚಾರವಾಗಿ ರಾಜ್ಯ ಸರ್ಕಾರದ ಪರ ಮಾತನಾಡಲು ಮನಸ್ಸು ಮಾಡಿದ್ದರು.
ಸೋ. ಸ್ವಲ್ಪ ತಡವಾಗಿಯೇ ಗೋಷ್ಠಿಗೆ ಬಂದರು. ಕೇಂದ್ರ ಹಾಗೂ ರಾಜ್ಯದ ನಡುವಿನ ಸಂಘರ್ಷ ಕುರಿತ ಗೋಷ್ಠಿಯಾಗಿದ್ದರಿಂದ ಮುದ್ರಣ ಮಾಧ್ಯಮದ ಪತ್ರಕರ್ತರು ಫುಲ್ ಸ್ಟ್ರೆಂತ್‌ನಲ್ಲಿ ಹಾಜರಿದ್ದರು.
ಆದರೆ, ಕ್ಯಾಮೆರಾಗಳೇ ಇರಲಿಲ್ಲ. ಇದ ಕಂಡ ಮಹಾಮಹಿಮರು ಕೂಡಲೇ ದೂರವಾಣಿ ಕರೆಯೊಂದನ್ನು ಮಾಡಿ ‘ಜನನೇ ಬಂದಿಲ್ಲ ರೀ ಇಲ್ಲಿ. ಪ್ರೆಸ್‌ಮೀಟ್ ಕ್ಯಾನ್ಸಲ್ ಮಾಡುತ್ತೇನೆ’ ಎಂದರು. ಪತ್ರಕರ್ತರನ್ನು ಉದ್ದೇಶಿಸಿ ‘ಇದು ಅತ್ಯಂತ ಮಹತ್ವದ ವಿಷಯ. ರಾಜ್ಯದ ಜನರಿಗೆ ತಲುಪಬೇಕು. ಮೀಡಿಯಾದವರು ಇಲ್ಲದಿದ್ದರೆ ಪ್ರೆಸ್ ಮೀಟ್ ಕ್ಯಾನ್ಸಲ್ ಮಾಡಿಬಿಡೋಣಾ ಅಲ್ವಾ, ಬೇಕಾದ್ರೆ ಬೇರೆ ದಿನ ಇಟ್ಟುಕೊಂಡರಾಯಿತು’ ಎಂದರು.
ಪತ್ರಕರ್ತರಿಗೂ ಸಹನೆ ಕೆಟ್ಟಿತ್ತು. ನಾವೆಲ್ಲ ನಿಮಗೆ ಕಾಣಿಸುತ್ತಿಲ್ಲವೇ? ಎಂದು ಖಾರವಾಗಿಯೇ ಪ್ರಶ್ನಿಸಿದರು. ಜತೆಗೆ, ತಾವು ಯಾವ ಪತ್ರಿಕೆಗಳನ್ನು ಪ್ರತಿನಿಧಿಸುತ್ತೇವೆ ಎಂಬ ಮಾಹಿತಿಯನ್ನು ಮಹಾಮಹಿಮರಿಗೆ ನೀಡಿ, ‘ಟಿವಿ ಕ್ಯಾಮೆರಾ ಇಲ್ಲದೇ ಮಾತು ಹೊರಡಲ್ವಾ’ ಎಂದೂ ಪ್ರಶ್ನಿಸಿದಾಗ ಮಹಾಮಹಿಮರ ಬಾಲ ಸ್ವಲ್ಪ ಮುದುರಿತು.
‘ಹೇ, ಹೇ, ಹೇ... ಹಾಗೇನಿಲ್ಲ ಎಲ್ಲರೂ ಬರಲಿ ಎಂದು ಅಪೇಕ್ಷಿಸಿದ್ದೆ’ ಎಂದವರೇ ಗೋಷ್ಠಿ ಆರಂಭಿಸಿದರು.
ಆದರೆ, ಅವರ ಕಣ್ಣುಗಳು ಮಾತ್ರ ಆಗಾಗ ಕ್ಯಾಮೆರಾಗಳು ಬಂದವೇ ಎಂದು ಹುಡುಕುತ್ತಿದ್ದಂತೆ ಕಂಡು ಬಂತು.
ವಿಚಾರಣೆ ತಡವಾದಷ್ಟು ಬೆಲೆ ಹೆಚ್ಚಳವಾಗುತ್ತೇ ಬಿಡಿ
ಸಾರ್ವಜನಿಕ ಹಿತಾಸಕ್ತಿ, ಜನರ ಜೀವನಕ್ಕೆ ಧಕ್ಕೆ ಇಲ್ಲವೇ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುವ ಪ್ರಕರಣವನ್ನು ಸಾಮಾನ್ಯವಾಗಿ ಹೈಕೋರ್ಟ್ ತುರ್ತಾಗಿ ವಿಚಾರಣೆ ನಡೆಸುತ್ತದೆ. ಆದರೆ ವಕೀಲರೊಬ್ಬರು ಜಮೀನು ವ್ಯಾಜ್ಯ ಪ್ರಕರಣವನ್ನು ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕೆಂದು ಮನವಿ ಮಾಡಿದಾಗ, ಕೊಂಚ ಅವಕ್ಕಾದ ನ್ಯಾಯಮೂರ್ತಿಗಳು, ವಿಚಾರಣೆ ವಿಳಂಬವಾದಷ್ಟು ಜಮೀನಿನ ಬೆಲೆ ಹೆಚ್ಚಾಗುತ್ತದೆ ಬಿಡಿ. ಬೇಸರ ಪಡಬೇಡಿ. ಬೇಸಿಗೆ ರಜೆಯ ನಂತರ ವಿಚಾರಣೆ ಮಾಡೋಣ ಎಂದು ನಗುತ್ತಾ ಹೇಳುತ್ತಿದ್ದಂತೆ, ಪಾಪ, ವಕೀಲರು ಏನು ಹೇಳಬೇಕೆಂದು ತೋಚದೆ ಕಡತ ತೆಗೆದುಕೊಂಡು ಕೋರ್ಟ್ ಹಾಲ್‌ನಿಂದ ಹೊರ ನಡೆದ ಪ್ರಸಂಗವಿದು.
ಇತ್ತೀಚೆಗೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿಯಿರುವ ಹಲವು ಪ್ರಕರಣಗಳ ತುರ್ತು ವಿಚಾರಣೆ ಕೋರಿ ವಕೀಲರು ಮನವಿ ಮಾಡುತ್ತಿದ್ದರು. ನ್ಯಾಯಮೂರ್ತಿಗಳು ಪ್ರಕರಣಗಳ ವಿಷಯದ ಗಂಭೀರತೆ, ಜನರ ಹಿತಾಸಕ್ತಿ ಪರಿಗಣಿಸಿ ಒಂದೆರಡು ದಿನಗಳ ಅಂತರದಲ್ಲೇ ವಿಚಾರಣೆ ನಿಗದಿಪಡಿಸುತ್ತಿದ್ದರು. ಈ ಮಧ್ಯೆ ವಕೀಲರೊಬ್ಬರು ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ತುರ್ತು ವಿಚಾರಣೆಗೆ ಕೋರಿದಾಗ ಒಂದು ಕ್ಷಣ ನ್ಯಾಯಮೂರ್ತಿಗಳು ಅವಕ್ಕಾದರು.
ಇಂದಿನಿಂದ ಎಚ್‌ಡಿಕೆ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್ ಸಜ್ಜು!
ಆಗ ನ್ಯಾಯಮೂರ್ತಿಗಳು ಪ್ರತಿಕ್ರಿಯಿಸಿ, ‘ರೀ ವಕೀಲರೇ.. ತುರ್ತು ವಿಚಾರಣೆಗೆ ಕೋರಬೇಕೆಂದರೆ ಪ್ರಕರಣದಲ್ಲಿ ಸಾರ್ವಜನಿಕ ಹಿತಾಸಕ್ತಿ ಇರಬೇಕು. ಇಲ್ಲವೇ ಜನರ ಜೀವನಕ್ಕೆ ಧಕ್ಕೆಯಾಗುತ್ತಿರುವ, ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿರುವ ಬೆಳವಣಿಗೆ ಇರಬೇಕು. ಅಂತಹ ವಿಚಾರವನ್ನು ನ್ಯಾಯಾಲಯ ತುರ್ತು ವಿಚಾರಣೆಗೆ ಪರಿಗಣಿಸುತ್ತದೆ. ಆದರೆ, ನೀವು ಜಮೀನು ವ್ಯಾಜ್ಯವನ್ನು ತಂದು ತುರ್ತು ವಿಚಾರಣೆಗೆ ಕೋರುತ್ತಿದ್ದೀರಲ್ಲಾ?’ ಎಂದು ಕೇಳಿತು. ಅಲ್ಲದೆ, ನಿಮ್ಮ ಪ್ರಕರಣವನ್ನು ತುರ್ತು ವಿಚಾರಣೆ ನಡೆಸುವ ಅಗತ್ಯವೇನಿಲ್ಲ. ಬೇಸಿಗೆ ರಜೆಯ ನಂತರ ವಿಚಾರಣೆ ಮಾಡೋಣ. ನೀವೇನು ಬೇಸರವಾಗಬೇಡಿ. ವಿಚಾರಣೆ ವಿಳಂಬವಾದರೂ ಜಮೀನು ದರ ಹೆಚ್ಚಾಗುತ್ತೆ ಬಿಡಿ ಎಂದು ನುಡಿದು ಗಟ್ಟಿಯಾಗಿ ನಕ್ಕರು. ಕೋರ್ಟ್ ಹಾಲ್‌ನಲ್ಲಿ ನೆರೆದಿದ್ದ ಇತರೆ ವಕೀಲರು, ಕಕ್ಷಿದಾರರು, ಅಧಿಕಾರಿಗಳು ಗೊಳ್ ಎಂದು ನಗತೊಡಗಿದರು.
ಕಾಚಿಗಾಂ ಎಂಬ ಕಾನ್ಶಿರಾಂ!
ಸ್ನೇಹಿತನೊಬ್ಬ ಮದುವೆ ಆಹ್ವಾನ ಪತ್ರಿಕೆ ಹಂಚಿಕೆ ಮಾಡಲು ಹೊರಟಿದ್ದ. ಬೆಂಗಳೂರಿನ ಸಂಭ್ರಮ ಕಾಲೇಜು ಸಮೀಪ ಇರುವ ಕಾನ್ಶಿರಾಂ ನಗರದಲ್ಲಿರುವ (ಸದ್ಗುರು ನಗರ) ಮನೆಯೊಂದು ಆತನ ಗಮ್ಯ.
ಆದರೆ, ಕಾನ್ಶಿರಾಂ ನಗರ ಜನರ ಬಾಯಲ್ಲಿ ಕಾಚಿಗಾಂ ನಗರವಾಗಿತ್ತು. ಗೆಳಯನಿಗೆ ಗೂಗಲ್ ಮ್ಯಾಪ್ ನೆರವಿನಿಂದ ಕಾಚಿಗಾಂ ನಗರ ಸಲೀಸಾಗಿ ಹುಡುಕುವ ಆತ್ಮವಿಶ್ವಾಸವಿತ್ತು. ಸೋ, ಗೂಗಲ್ ಮ್ಯಾಪ್‌ನಲ್ಲಿ ಕಾಚಿಗಾಂ ನಗರ ಎಂದು ಟೈಪ್ ಮಾಡಿದ. ಬೆಚ್ಚಿಬಿದ್ದ.
ಕಾಚಿಗಾಂ ನಗರ ಮುಂಬೈನ ದಾದರ್‌ನಲ್ಲಿ ಇರುವುದಾಗಿ ಮ್ಯಾಪ್ ತೋರಿಸುತ್ತಿತ್ತು. ಸುಮಾರು 1125 ಕಿ.ಮೀ ದೂರ, ಬೈಕ್‌ನಲ್ಲಿ ಬಿಡುವಿಲ್ಲದೆ ಸಾಗಿದರೆ ಆ ಸ್ಥಳ ತಲುಪಲು ಒಂದು ದಿನವಿಡೀ ಬೇಕಾಗುತ್ತದೆ.
ಎಷ್ಟು ಬಾರಿ ಹುಡುಕಿದರೂ ಕಾಚಿಗಾಂ ನಗರ ಮುಂಬೈ, ಗುಜರಾತ್ ನಲ್ಲೇ ಸುತ್ತು ಹಾಕುತ್ತಿದ್ದರಿಂದ ತಲೆಕೆಡಿಸಿಕೊಂಡ ಆತ ಆಹ್ವಾನ ಪತ್ರಿಕೆ ಕೊಡೋದೇ ಬೇಡ ಎಂದು ವಾಪಸ್ ಹೋಗಲು ನಿರ್ಧರಿಸಿದ.
ಕಡೆಗೇ ಕಾಚಿಗಾಂ ನಗರಕ್ಕೆ ಹೋಗೋದು ಹೆಂಗೇ ಅಂತ ಆಟೋ ರಿಕ್ಷಾ ಚಾಲಕರೊಬ್ಬರನ್ನು ಕೇಳಿದ್ದ. ‘ಯಾವುದು? ಸಂಭ್ರಮ ಕಾಲೇಜು ಹತ್ರ ಐತಲ್ಲ ಅದಾ?’ ಎಂದು ಕೇಳಿ ದಾರಿ ತೋರಿಸಿದ ರಿಕ್ಷಾ ಚಾಲಕ. ಹೌದು, ಎಂದಾಗ ದಾರಿ ಹೇಳಿದ.
ಸ್ಥಳಕ್ಕೆ ಹೋಗುವಾಗ ಬಸ್‌ನಿಲ್ದಾಣದಲ್ಲಿ ಹಾಕಿದ್ದ ಬೋರ್ಡ್ ನೋಡಿ ನಕ್ಕಿದ ಗೆಳೆಯನಿಗೆ ಅದು ಕಾಚಿಗಾಂ ನಗರ ಅಲ್ಲ ಕಾನ್ಶಿರಾಂ ನಗರ ಅನ್ನೋದು ಗೊತ್ತಾಗಿದ್ದು.