ರೇಣುಕಾಸ್ವಾಮಿ ಹತ್ಯೆ ಸಿಬಿಐ ತನಿಖೆ ಬೇಕಿಲ್ಲ: ಸಚಿವ ಪರಮೇಶ್ವರ್‌

By Kannadaprabha News  |  First Published Jun 19, 2024, 9:58 AM IST

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಸ್ಪಷ್ಟಪಡಿಸಿದ್ದಾರೆ. 


ಚಿತ್ರದುರ್ಗ (ಜೂ.19): ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಸ್ಪಷ್ಟಪಡಿಸಿದ್ದಾರೆ. ನಟ ದರ್ಶನ್‌ ಗ್ಯಾಂಗ್‍ನಿಂದ ಕೊಲೆಗೀಡಾದ ರೇಣುಕಾಸ್ವಾಮಿ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 17 ಮಂದಿಯನ್ನು ಬಂಧಿಸಿರುವ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸುತ್ತಿದ್ದಾರೆ. ಯಾರ ಮುಲಾಜು, ಒತ್ತಡಕ್ಕೆ ಮಣಿದು ಕೆಲಸ ಮಾಡುತ್ತಿಲ್ಲ. ವಾಸ್ತವಾಂಶ ಹೀಗಿರುವಾಗ ಸಿಬಿಐ ತನಿಖೆ ಯಾಕೆ ಬೇಕು ಎಂದರು. ರೇಣುಕಾಸ್ವಾಮಿ ಹತ್ಯೆಯಂತಹ ಘಟನೆ ನಡೆಯಬಾರದಿತ್ತು. ಕೊಲೆ ಆರೋಪಿಗಳಿಗೆ ಶಿಕ್ಷೆಯಾಗಬೇಕು. 

ಇದರಲ್ಲಿ ರಾಜಕೀಯ ಬೆರೆಸುವುದು ಬೇಡ. ದುಃಖತಪ್ತ ಕುಟುಂಬಕ್ಕೆ ನ್ಯಾಯ ಸಿಗಬೇಕು. ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದರು. ಇದರಲ್ಲಿ ಯಾರ ಪ್ರಭಾವವೂ ಇಲ್ಲ. ನಮ್ಮ ರಾಜ್ಯದ ಪೊಲೀಸರೆ ಪ್ರಾಮಾಣಿಕವಾಗಿ ವಿಚಾರಣೆ ನಡೆಸುತ್ತಿದ್ದಾರೆ ಎಂದರು. ಕೊಲೆಗೀಡಾಗಿರುವ ರೇಣುಕಾಸ್ವಾಮಿ ಕುಟುಂಬ ಸಂಕಷ್ಟದಲ್ಲಿದ್ದು, ಜೀವನಕ್ಕಾಗಿ ಸರ್ಕಾರಿ ಉದ್ಯೋಗ ಕೊಡಿಸಿ ಎಂದು ಕೇಳುತ್ತಿದ್ದಾರೆ. ಈ ವಿಚಾರ ಕುರಿತು ಮುಖ್ಯಮಂತ್ರಿ ಜೊತೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕರಾದ ಕೆ.ಸಿ.ವೀರೇಂದ್ರಪಪ್ಪಿ, ಟಿ.ರಘುಮೂರ್ತಿ, ಮಾಜಿ ಸಚಿವ ಎಚ್.ಆಂಜನೇಯ, ಹಿರಿಯ ಪೊಲೀಸ್‌ ಅಧಿಕಾರಿಗಳು ಸಚಿವರ ಜೊತೆಗಿದ್ದರು.

Latest Videos

undefined

ಮಾ.25 ರಂದೇ ರೇಣುಕಾಸ್ವಾಮಿ ವಿರುದ್ಧ ದೂರಿದ್ದರೂ ಪೊಲೀಸರ ನಿರ್ಲಕ್ಷ್ಯ!

ಅಶೋಕ ವಿರೋಧ ಪಕ್ಷದಲ್ಲೇ ಕೂರಲಿ: ಮಧುಗಿರಿ ತಾಲೂಕಿನ ಚಿನ್ನೇನಹಳ್ಳಿಯಲ್ಲಿ ವಾಂತಿ-ಬೇಧಿ ಕಾಣಸಿಕೊಂಡು 6 ಜನ ಮೃತಪಟ್ಟಿರುವ ವಿಚಾರವನ್ನು ನಾವೇ ಕೊಟ್ಟಿದ್ದೇವೆ. ಆದರೂ ವಿಪಕ್ಷ ನಾಯಕ ಇತ್ತೀಚೆಗೆ ಚಿನ್ನೇನಹಳ್ಳಿಗೆ ಭೇಟಿ ನೀಡಿ "ಕೈ ಸರ್ಕಾರ ಸಾವನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿದೆ" ಎಂಬ ಆರೋಪಿಸಿರುವುದರಲ್ಲಿ ಯಾವುದೇ ಹುರುಳಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಆರ್‌. ಅಶೋಕಗೆ ತಿರುಗೇಟು ನೀಡಿದರು.

ಚಿನ್ನೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಚರ್ಚಿಸಿ ಮಾಹಿತಿ ಪಡೆದು ಮಾತನಾಡಿದರು. ವಿಪಕ್ಷ ನಾಯಕ ಆರ್‌.ಅಶೋಕ್‌ ಅತ್ಯಂತ ಜವಾಬ್ದಾರಿಯುತವಾಗಿ ಮಾತನಾಡಬೇಕು. ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು. ಇದರಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ. ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ವಾಂತಿ- ಬೇಧಿ ಕಾಣಿಸಿಕೊಂಡು 6 ಜನ ಮೃತಪಟ್ಟಿದ್ದು, ಈ ಪೈಕಿ ಇಬ್ಬರು ಕರುಳು ಬೇನೆಗೆ ತುತ್ತಾಗಿ ಸಾವನ್ನಪ್ಪಿರುವುದು ದೃಡಪಟ್ಟಿದೆ. ಇನ್ನೂಳಿದ 4 ಜನರು ಯಾವ ಕಾರಣಕ್ಕೆ ಮೃತಪಟ್ಟಿದ್ದಾರೆ ಎಂಬುದನ್ನು ಜಿಲ್ಲಾಡಳಿತ ಎಫ್‌ಎಸ್‌ಎಲ್‌ಗೆ ಕಳಿಸಿದ್ದು ಪತ್ತೆ ಹಚ್ಚುವ ಕೆಲಸ ಮಾಡುತ್ತಿದೆ. ವರದಿ ಬಂದ ನಂತರ ಸತ್ಯಾಂಶ ಹೊರ ಬೀಳಲಿದೆ. ವಿಪಕ್ಷ ನಾಯಕರು ವಿರೋಧ ಪಕ್ಷದಲ್ಲೇ ಕೂರಲಿ ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ಗೆ ತಿರುಗೇಟು ನೀಡಿದರು.

ರೇಣುಕಾಸ್ವಾಮಿ ಹತ್ಯೆ ದಿನ ದರ್ಶನ್‌ ಧರಿಸಿದ್ದ ಶೂ ಪತ್ನಿ ವಿಜಯಲಕ್ಷ್ಮೀ ಮನೆಯಲ್ಲಿ ಪತ್ತೆ!

ಘಟನೆ ವಿವರ: ತಾಲೂಕಿನ ಚಿನ್ನೇನಹಳ್ಳಿಯಲ್ಲಿ ಜಾತ್ರಾ ಮಹೋತ್ಸವದ ಹಿನ್ನಲೆಯಲ್ಲಿ ಕಲುಷಿತ ನೀರು ಸೇವಿಸಿ 158 ಕ್ಕೂ ಅಧಿಕ ಜನರಿಗೆ ವಾಂತಿ-ಬೇಧಿ ಕಾಣಿಸಿಕೊಂಡು ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದಿದ್ದರು. ಈ ಪೈಕಿ 84 ಜನ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಈಗ 23 ಮಂದಿ ಚಿಕಿತ್ಸೆ ಪಡೆಯುತ್ತಿದ್ದು ಇದರಲ್ಲಿ 19 ಜನ ಶ್ರೀದೇವಿ ಆಸ್ಪತ್ರೆ, ಇಬ್ಬರು ಮಧುಗಿರಿ ಸಾರ್ವಜನಿಕ ಆಸ್ಪತ್ರೆ, ಹಾಗೂ ಒಬ್ಬರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎಲ್ಲರಿಗೂ ಜಿಲ್ಲಾಡಳಿತ ಊಟದ ವ್ಯವಸ್ಥೆ ಮಾಡಿದೆ ಎಂದರು.

click me!