ನನಗೆ ರಾಜ್ಯಪಾಲರಾಗುವ ಆಸಕ್ತಿ ಇಲ್ಲ , ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ರಾಷ್ಟ್ರ ರಾಜಕಾರಣಕ್ಕೂ ಹೋಗುವ ಮನಸ್ಸಿಲ್ಲ
ವಿಜಯ್ ಮಲಗಿಹಾಳ
ಬೆಂಗಳೂರು (ಫೆ.16) : ಆಡಳಿತಾರೂಢ ಬಿಜೆಪಿಯಲ್ಲಿರುವ ಮೂವರು ಮಾಜಿ ಮುಖ್ಯಮಂತ್ರಿಗಳ ಪೈಕಿ ಬಿ.ಎಸ್.ಯಡಿಯೂರಪ್ಪ(BS Yadiyurappa) ಅವರೊಬ್ಬರನ್ನು ಬಿಟ್ಟರೆ ಇನ್ನುಳಿದ ಜಗದೀಶ್ ಶೆಟ್ಟರ್ ಹಾಗೂ ಡಿ.ವಿ.ಸದಾನಂದಗೌಡರು ದಿನೇ ದಿನೇ ನೇಪಥ್ಯಕ್ಕೆ ಸರಿಯುತ್ತಿರುವಂತೆ ಮೇಲ್ನೋಟಕ್ಕಂತೂ ಕಾಣುತ್ತಿದೆ. ಇದಕ್ಕೆ ಪೂರಕ ಎಂಬಂತೆ ಶೆಟ್ಟರ್ ಮತ್ತು ಸದಾನಂದಗೌಡರು ಅವರವರ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗುತ್ತಿದ್ದಾರೆ ಅಥವಾ ಸೀಮಿತಗೊಳಿಸಲಾಗುತ್ತಿದೆ. ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದ್ದರೂ ಶೆಟ್ಟರ್ ಅವರನ್ನು ಪಕ್ಷದ ಪ್ರಮುಖ ಹಂತದಲ್ಲಿ ಒಳಗೊಳ್ಳಿಸುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಧಾರವಾಡ ಸಮಾರಂಭದಲ್ಲಿ ಶೆಟ್ಟರ್ ಹೆಸರನ್ನೇ ಕೈಬಿಡಲಾಗಿತ್ತು. ಇದೀಗ ಶೆಟ್ಟರ್ ಅವರಿಗೆ ಮುಂದಿನ ಬಾರಿ ಟಿಕೆಟ್ ನೀಡುವುದಿಲ್ಲ ಎಂಬ ವದಂತಿಯೂ ಹಬ್ಬಿದೆ. ಈ ಹಿನ್ನೆಲೆಯಲ್ಲಿ ‘ಕನ್ನಡಪ್ರಭ’ದೊಂದಿಗೆ ‘ಮುಖಾಮುಖಿ’ಯಾದ ಶೆಟ್ಟರ್ ಅವರು ತಮ್ಮನ್ನು ಪಕ್ಷದಲ್ಲಿ ಸಮರ್ಥವಾಗಿ ಬಳಕೆ ಮಾಡಿಕೊಳ್ಳದೇ ಇರುವುದಕ್ಕೆ ಪರೋಕ್ಷವಾಗಿ ಬೇಸರ ಹೊರಹಾಕಿದ್ದಾರೆ.
ಸಂದರ್ಶನದ ಪೂರ್ಣಪಾಠ ಹೀಗಿದೆ:
ಮೂರ್ನಾಲ್ಕು ಬಾರಿ ಗೆದ್ದವರಿಗೆ ಈ ಬಾರಿ ಟಿಕೆಟ್ ಇಲ್ಲ ಎಂಬ ಮಾತು ಬಿಜೆಪಿ ಪಾಳಯದಲ್ಲಿ ದಟ್ಟವಾಗಿದೆ?
- ಪಕ್ಷದ ಯಾವುದೇ ವೇದಿಕೆಯಲ್ಲಿ ಇಂಥ ಯಾವುದೇ ಚರ್ಚೆ ನಡೆದಿಲ್ಲ. ವರಿಷ್ಠರು ಈ ಬಗ್ಗೆ ರಾಜ್ಯ ನಾಯಕರೊಂದಿಗೆ ಪ್ರಸ್ತಾಪವನ್ನೂ ಮಾಡಿಲ್ಲ. ನಾಲ್ಕೈದು ಬಾರಿ ಗೆದ್ದವರಿಗೆ ಟಿಕೆಟ್ ನೀಡುವುದಿಲ್ಲ ಎಂಬುದಾಗಿ ಯಾರು ಹೇಳಿದ್ದಾರೆ? ಎಲ್ಲಿ ಹೇಳಿದ್ದಾರೆ? ಕೇವಲ ಗುಸು ಗುಸು ಮಾತುಗಳಷ್ಟೇ. ಗೆಲ್ಲುವುದಿಲ್ಲ ಎಂಬ ಆಂತರಿಕ ವರದಿ ಇದ್ದರೆ ಅಂಥವರಿಗೆ ಸಹಜವಾಗಿಯೇ ಟಿಕೆಟ್ ನೀಡುವುದಿಲ್ಲ. ಗೆಲ್ಲುವ ಸಾಮರ್ಥ್ಯ ಇರುವವರಿಗೆ ಟಿಕೆಟ್ ತಪ್ಪಿಸುವ ಕೆಲಸವನ್ನೂ ಮಾಡುವುದಿಲ್ಲ.
Amit shah interview :ಕುಟುಂಬ ರಾಜಕೀಯಕ್ಕೆ ಕರ್ನಾಟಕ ಗುಡ್‌ಬೈ: ಅಮಿತ್ ಶಾ
ಪಕ್ಷದ ಮೂರೂ ಮಾಜಿ ಸಿಎಂಗಳಿಗೂ ಮುಂದಿನ ಯಾವುದೇ ಚುನಾವಣೆಗಳಲ್ಲಿ ಟಿಕೆಟ್ ಇಲ್ಲವಂತೆ ಹೌದೇ?
-ನೋಡಿ, ಯಡಿಯೂರಪ್ಪ ಅವರೇ ತಾವು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬುದಾಗಿ ಸ್ವತಃ ಘೋಷಣೆ ಮಾಡಿದ್ದಾರೆ. ಸದಾನಂದಗೌಡರು(DV Sadanandagowda) ಸದ್ಯ ಸಂಸದರಾಗಿದ್ದಾರೆ. ಅವರಿಗೆ ಇನ್ನೂ ಒಂದು ವರ್ಷ ಸಮಯವಿದೆ. ಇನ್ನು ನನ್ನ ಬಗ್ಗೆ ವದಂತಿಗಳನ್ನು ಹಬ್ಬಿಸಲಾಗುತ್ತಿದೆ. ನಾನು ಮತ್ತೆ ಹಾಲಿ ಕ್ಷೇತ್ರದಿಂದಲೇ ಚುನಾವಣೆ ಸ್ಪರ್ಧಿಸುತ್ತೇನೆ ಎಂಬುದನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ನಾನು ಸ್ಪರ್ಧಿಸಬಾರದು ಎಂಬ ಸೂಚನೆ ಪಕ್ಷದಿಂದಲೂ ಬಂದಿಲ್ಲ. ಚರ್ಚೆಯೂ ನಡೆದಿಲ್ಲ.
ನಿಮ್ಮ ಬಗ್ಗೆ ಯಾರು ವದಂತಿ ಹಬ್ಬಿಸುತ್ತಿರುವವರು? ಸ್ವಪಕ್ಷೀಯರೆ ಅಥವಾ ಅನ್ಯ ಪಕ್ಷದವರೇ?
ಯಾರಾದರೂ ಕೆಲವರು ಇರುತ್ತಾರೆ. ಪಟ್ಟಭದ್ರ ಹಿತಾಸಕ್ತಿಗಳು. ಅದಕ್ಕೆ ಏನೂ ಮಾಡುವುದಕ್ಕೆ ಆಗುವುದಿಲ್ಲ. ಏನೋ ಒಂದು ಲೆಕ್ಕಾಚಾರ ಇಟ್ಟುಕೊಂಡು ಪ್ರಯತ್ನ ಮಾಡುತ್ತಿರಬಹುದು. ನಾನು ಅದರ ಬಗ್ಗೆ ಹೆಚ್ಚಿಗೆ ಹೇಳಲು ಬಯಸುವುದಿಲ್ಲ.
ಇತ್ತೀಚಿಗೆ ನಿಮ್ಮ ಮತ್ತು ಬಿಜೆಪಿ ನಡುವೆ ಕಂದಕ ಉಂಟಾಗುತ್ತಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ?
-ನಾನು ಹಿಂದೆ ಮುಖ್ಯಮಂತ್ರಿಯಾಗಿದ್ದೆ. ಬಳಿಕ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಕೈಗಾರಿಕಾ ಸಚಿವನಾಗಿದ್ದೆ. ಹೀಗಾಗಿ, ನಾನು ಇಲಾಖೆಯ ಕೆಲಸಗಳ ಭರಾಟೆಯಲ್ಲಿ ಸಹಜವಾಗಿಯೇ ಹೈಲೈಟ್ ಆಗುತ್ತಿದ್ದೆ. ನಂತರ ನಾನು ಸಚಿವ ಸ್ಥಾನದಿಂದ ಹಿಂದೆ ಸರಿದೆ. ಈಗ ನಾನು ನನ್ನ ಕ್ಷೇತ್ರಕ್ಕೆ ಸೀಮಿತವಾಗಿ ಕೆಲಸ ಮಾಡುತ್ತಿದ್ದೇನೆ. ಪಕ್ಷ ಕೊಟ್ಟಜವಾಬ್ದಾರಿ ನಿಭಾಯಿಸಿದ್ದೇನೆ.
ನಿಮ್ಮನ್ನು ಪಕ್ಷ ಸಮರ್ಥವಾಗಿ ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಸಮಾಧಾನ ಇದೆಯೇ?
-ನಾನೊಬ್ಬ ಮಾಜಿ ಮುಖ್ಯಮಂತ್ರಿ. ರಾಜ್ಯದಲ್ಲಿ ಅದರಲ್ಲೂ ಉತ್ತರ ಕರ್ನಾಟಕ(Uttara karnataka) ಭಾಗದಲ್ಲಿ ಹೆಚ್ಚು ಕೆಲಸ ಮಾಡಿ ಪಕ್ಷ ಬೆಳೆಸುವಲ್ಲಿ ನನ್ನ ಕೊಡುಗೆ ನೀಡಿದ್ದೇನೆ. ಇನ್ನೂ ಎಷ್ಟುಬಳಕೆ ಮಾಡಿಕೊಳ್ಳಬಹುದಿತ್ತೋ ಅಷ್ಟುಮಾಡಿಲ್ಲ. ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ನನ್ನನ್ನು ಪಕ್ಷಕ್ಕೆ ಎಷ್ಟುಸಾಧ್ಯವೋ ಅಷ್ಟುಬಳಕೆ ಮಾಡಿಕೊಳ್ಳಿ ಎಂಬ ಮಾತನ್ನು ಪಕ್ಷದ ವರಿಷ್ಠರಿಗೆ ಹೇಳಿದ್ದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ನನ್ನನ್ನು ಪಕ್ಷದ ಕೆಲಸದಲ್ಲಿ ಬಳಸಿಕೊಳ್ಳುತ್ತಿಲ್ಲ ಎಂಬ ಭಾವನೆ ಇದೆ.
ಮುಖ್ಯಮಂತ್ರಿಯಾಗಿದ್ದ ನಿಮ್ಮನ್ನು ಪಕ್ಷ ಹೇಗೆ ಬಳಕೆ ಮಾಡಿಕೊಳ್ಳಬೇಕು?
ಪಕ್ಷದ ಸಂಘಟನೆ ಕೆಲಸ ಮಾಡುವುದಕ್ಕೆ ನನ್ನನ್ನು ಬಳಸಿಕೊಳ್ಳಲಿ. ಜವಾಬ್ದಾರಿ ಕೊಡಲಿ. ಕರ್ನಾಟಕ ಅಷ್ಟೇ ಅಲ್ಲ. ಬೇರೆ ರಾಜ್ಯಗಳಲ್ಲಿನ ಪಕ್ಷದ ಕೆಲಸವಾದರೂ ಸರಿ.
ಹಿಂದೆ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ವೇಳೆ ನಿಮ್ಮ ಹೆಸರು ತೇಲಿಬಿಡಲಾಗಿತ್ತು? ರಾಷ್ಟ್ರ ರಾಜಕಾರಣಕ್ಕೆ ತಳ್ಳುವ ಪ್ರಯತ್ನ ನಡೆಯುತ್ತಿದೆಯೇ?
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನನ್ನ ಹೆಸರು ಎಲ್ಲಿಂದ ತೇಲಿ ಬಂತು ಎಂಬುದು ನನಗೂ ಗೊತ್ತಿಲ್ಲ. ನನಗೆ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿಯಿಲ್ಲ ಎಂಬುದನ್ನು ಹಿಂದೆ 1991 ಮತ್ತು 2004ರ ಲೋಕಸಭಾ ಚುನಾವಣೆ ವೇಳೆ ನನ್ನನ್ನು ಸ್ಪರ್ಧಿಸುವಂತೆ ಸಲಹೆ ನೀಡಿದ್ದ ಪಕ್ಷದ ವರಿಷ್ಠರಿಗೆ ಸ್ಪಷ್ಟಪಡಿಸಿದ್ದೆ. ಈಗಲೂ ನನ್ನ ಅಭಿಪ್ರಾಯ ಬದಲಾಗಿಲ್ಲ.
ಒಂದು ವೇಳೆ ಈ ಬಾರಿ ನಿಮಗೆ ವಿಧಾನಸಭೆ(Assembly election)ಯ ಟಿಕೆಟ್ ನಿರಾಕರಿಸಿ ಮುಂದೆ ರಾಜ್ಯಪಾಲ ಹುದ್ದೆ ನೀಡುವುದಾಗಿ ವರಿಷ್ಠರು ಹೇಳಿದರೆ?
-ನನಗೆ ರಾಜ್ಯಪಾಲರಾಗುವ ಆಸಕ್ತಿಯೂ ಇಲ್ಲ ಎಂದು ಪಕ್ಷದ ವರಿಷ್ಠರಿಗೆ ಹೇಳಿದ್ದೇನೆ. ರಾಜ್ಯಪಾಲರಾದರೆ ಐದು ವರ್ಷಗಳ ಕಾಲ ಒಂದು ರಾಜ್ಯದಲ್ಲಿ ಇರಬೇಕಾಗುತ್ತದೆ. ಜನರಿಂದ ದೂರ ಇರುವುದರಲ್ಲಿ ನನಗೆ ಆಸಕ್ತಿಯಿಲ್ಲ. ನಾನು ಜನರ ಮಧ್ಯದಲ್ಲಿ ಇದ್ದು ಬೆಳೆದವನು. ಹಿಂದೆ ವಿಧಾನಸಭೆಯ ಸ್ಪೀಕರ್ ಆಗಿದ್ದಾಗ ಸಾಕಷ್ಟುಹಿಂಸೆ ಅನುಭವಿಸಿದೆ. ಒಂದು ವರ್ಷದ ಬಳಿಕ ಆ ಹುದ್ದೆಯಿಂದ ಕೆಳಗಿಳಿಯುವುದಾಗಿ ಮೊದಲೇ ಹೇಳಿದ್ದೆ. ಅದರಂತೆ ಒಂದು ವರ್ಷದ ಬಳಿಕ ಸ್ಪೀಕರ್ ಹುದ್ದೆಯಿಂದ ನಿರ್ಗಮಿಸಿದೆ.
ಯಾವುದೇ ಹುದ್ದೆ ಅಥವಾ ಅಧಿಕಾರ ಇಲ್ಲದೆ ಹೀಗೆ ಶಾಸಕರಾಗಿಯೇ ಮುಂದುವರೆಯುತ್ತೀರಾ?
ನನಗೆ ಏನೂ ಇರದಿದ್ದರೂ ಜನರ ಜತೆ ಇರುವುದೇ ಸಂತೋಷ.
ಮುಂಬರುವ ವಿಧಾನಸಭಾ ಚುನಾವಣೆಗೆ ನಿಮ್ಮ ಪಕ್ಷ ಸರ್ವಸನ್ನದ್ಧವಾಗಿದೆ?
-ಒಂದು ರಾಜಕೀಯ ಪಕ್ಷವಾಗಿ ನಮ್ಮ ಬಿಜೆಪಿ ಚುನಾವಣೆಗೆ ತಯಾರಿ ಇದ್ದೇ ಇರುತ್ತದೆ. ಪ್ರತಿ ಹಂತದಲ್ಲಿ ಚುನಾವಣಾ ತಯಾರಿ ಮಾಡಿಯೇ ಮಾಡುತ್ತೇವೆ. ಜತೆಗೆ ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ, ಹಿಂದೆ ಅಮಿತ್ ಶಾ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ, ಈಗ ಜೆ.ಪಿ.ನಡ್ಡಾ ರಾಷ್ಟ್ರೀಯ ಅಧ್ಯಕ್ಷರಾದ ಮೇಲೆ ಚುನಾವಣೆಗಳನ್ನು ಗಂಭೀರವಾಗಿ ತೆಗೆದುಕೊಂಡು ತಂತ್ರ ರೂಪಿಸುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಮುಂಬರುವ ಚುನಾವಣೆಗೆ ಪಕ್ಷ ಭರದ ಸಿದ್ಧತೆ ನಡೆಸಿದೆ.
ಮೋದಿ ಮಂತ್ರ ಜಪಿಸುವುದು ಬಿಟ್ಟು ಬಿಜೆಪಿಯ ರಾಜ್ಯ ನಾಯಕರಿಗೆ ಚುನಾವಣೆ ಎದುರಿಸುವುದು ಸಾಧ್ಯವೇ ಇಲ್ಲವೇ? ಮೋದಿ ಇಲ್ಲದಿದ್ದರೆ ಬಿಜೆಪಿಗೆ ಬಲ ಇಲ್ಲದಂತಾಗುತ್ತದೆಯೇ?
-ಚುನಾವಣೆ ವೇಳೆ ಪಕ್ಷದ ರಾಷ್ಟ್ರೀಯ ನಾಯಕರು ಪ್ರವಾಸ ಕೈಗೊಳ್ಳುವುದು ಸಾಮಾನ್ಯ. ಇದರಲ್ಲಿ ವಿಶೇಷ ಏನಿಲ್ಲ. ಹಿಂದೆ ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದ ವೇಳೆ ಎಲ್ಲ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಆಗಮಿಸಿ ಅವರ ಕಾಂಗ್ರೆಸ್ ಪಕ್ಷದ ಪರ ಪ್ರಚಾರ ನಡೆಸುತ್ತಿದ್ದರು. ಅದೇ ರೀತಿ ಈಗ ಪ್ರಧಾನಿಯಾಗಿರುವ ಮೋದಿ ಅವರು ಜನರನ್ನು ಹೆಚ್ಚು ಆಕರ್ಷಣೆ ಮಾಡುವಂಥ ಸಾಮರ್ಥ್ಯ ಹೊಂದಿದವರು. ಅದರಲ್ಲೂ ಕರ್ನಾಟಕದಲ್ಲಿ ಮೋದಿ ಅವರ ವರ್ಚಸ್ಸು, ಜನಪ್ರಿಯತೆ ಜಾಸ್ತಿ ಇದೆ. ಹೀಗಾಗಿ, ನಮ್ಮ ಚುನಾವಣೆ ಗೆಲ್ಲಲು ಅವರನ್ನು ಬಳಕೆ ಮಾಡಿಕೊಂಡರೆ ತಪ್ಪೇನಿದೆ. ಇದು ಸಹಜ ಪ್ರಕ್ರಿಯೆ. ಪಕ್ಷದ ರಾಷ್ಟ್ರ ನಾಯಕರ ವರ್ಚಸ್ಸಿನ ಜತೆಗೆ ರಾಜ್ಯದ ನಾಯಕರು ಕೈಜೋಡಿಸಿ ಪಕ್ಷಕ್ಕೆ ಹೆಚ್ಚಿನ ಶಕ್ತಿ ತಂದು ಕೊಡುತ್ತೇವೆ.
ಪ್ರತಿಪಕ್ಷ ಕಾಂಗ್ರೆಸ್ ಸತತವಾಗಿ ಮಾಡುತ್ತಿರುವ ಭ್ರಷ್ಟಾಚಾರ ಆರೋಪದಿಂದ ಬಿಜೆಪಿಗೆ ಹಿನ್ನಡೆ ಆಗುವುದಿಲ್ಲವೇ?
-ಕೆಲವು ಭ್ರಷ್ಟಾಚಾರದ ಆರೋಪಗಳು ಬಂದಿದ್ದರೂ ಅವುಗಳನ್ನು ಎದುರಿಸುವ ಕೆಲಸವನ್ನು ಪಕ್ಷ ಮತ್ತು ಸರ್ಕಾರ ಮಾಡಿದೆ. ಆದರೆ, ಆರೋಪಗಳನ್ನು ಮಾಡುವವರು ತಮ್ಮ ಬಳಿಯಿರುವ ದಾಖಲೆಗಳನ್ನು ಲೋಕಾಯುಕ್ತರಿಗೆ ಸಲ್ಲಿಸಬೇಕು. ಆದರೆ, ಪ್ರತಿಪಕ್ಷಗಳ ನಾಯಕರು ಕೇವಲ ಆರೋಪ ಮಾಡುತ್ತಾರೆಯೇ ಹೊರತು ದಾಖಲೆಗಳನ್ನು ಬಿಡುಗಡೆ ಮಾಡುವುದಿಲ್ಲ. ಅವರ ಉದ್ದೇಶ ಅಪಪ್ರಚಾರ ಮಾಡುವುದಕ್ಕೆ ಮಾತ್ರ ಸೀಮಿತವಾಗಿದೆ.
ಬಿಜೆಪಿ ಸರ್ಕಾರದ ವಿರುದ್ಧದ 40 ಪರ್ಸೆಂಟ್ ಕಮೀಷನ್ ಆರೋಪ ಗಂಭೀರವಲ್ಲವೇ?
-ನೋಡಿ, ಈ 40 ಪರ್ಸೆಂಟ್ ಭ್ರಷ್ಟಾಚಾರ ಆರೋಪದ ಬಗ್ಗೆ ದಾಖಲೆಗಳು ಇದ್ದಿದ್ದರೆ ಅವುಗಳನ್ನು ಇಟ್ಟುಕೊಂಡು ಅಧಿವೇಶನದಲ್ಲಿ ಪ್ರಸ್ತಾಪಿಸಬಹುದಿತ್ತು. ಅಂಥ ಯಾವುದೇ ಪ್ರಯತ್ನ ಪ್ರತಿಪಕ್ಷದ ನಾಯಕರಿಂದ ಇದುವರೆಗೆ ಆಗಿಲ್ಲ. ಕೇವಲ ಪ್ರಸ್ತಾಪ ಮಾಡುವುದನ್ನು ಮಾತ್ರ ಬಿಟ್ಟು ದಾಖಲೆಗಳನ್ನು ಮುಂದಿಡುವ ಕೆಲಸ ಮಾಡಿದರೆ ಅವರ ಆರೋಪಗಳನ್ನು ಒಪ್ಪಬಹುದು. ಕೇವಲ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಆಡಿದ ಮಾತನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯ ಅವರು ಮಾತನಾಡಿದರೆ ಅವರೆಂಥ ಪ್ರತಿಪಕ್ಷದ ನಾಯಕರು.
ಕರ್ನಾಟಕದಲ್ಲಿ ಬಿಜೆಪಿ ಗೆಲುವು ಪಕ್ಕಾ, ಅಮಿತ್ ಶಾ ಸಂದರ್ಶನಕ್ಕೆ ಹೆಚ್‌ಡಿಕೆ ಕಿಡಿ!
ಬ್ರಾಹ್ಮಣ ಸಮುದಾಯದವರೊಬ್ಬರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಚರ್ಚೆ ಪಕ್ಷ ಅಥವಾ ಸಂಘ ಪರಿವಾರದಲ್ಲಿ ನಡೆದಿದೆಯಂತೆ?
ಅಂಥ ಯಾವುದೇ ಚರ್ಚೆ ನಡೆದಿಲ್ಲ. ಏನೇ ಇದ್ದರೂ ಚುನಾವಣೆ ನಡೆದು ಫಲಿತಾಂಶ ಹೊರಬಿದ್ದ ಬಳಿಕ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬುದರ ಚರ್ಚೆ ನಡೆಯುತ್ತದೆ.