ಕಾಂಗ್ರೆಸ್, ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯ ಅಭ್ಯರ್ಥಿ ಕಣದಲ್ಲಿರುವುದೇ ದೊಡ್ಡ ಸವಾಲಾಗುತ್ತಿದೆ. ಮರಾಠ ಮತಬೇಟೆಗೆ ಕೈ, ಕಮಲ ಪಡೆ ಇಳಿದಿವೆ. ಮರಾಠರನ್ನೇ ನೆಚ್ಚಿಕೊಂಡಿರುವ ಎಂಇಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿರುವುದು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ತಲೆನೋವಾಗಿದೆ.
ಶ್ರೀಶೈಲ ಮಠದ
ಬೆಳಗಾವಿ(ಏ.05): ಗಡಿ, ಭಾಷಾ ರಾಜಕಾರಣದ ವಿಚಾರದಲ್ಲಿ ಮೌನಕ್ಕೆ ಶರಣಾಗುವ ಕಾಂಗ್ರೆಸ್, ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯ ಅಭ್ಯರ್ಥಿ ಕಣದಲ್ಲಿರುವುದೇ ದೊಡ್ಡ ಸವಾಲಾಗುತ್ತಿದೆ. ಮರಾಠ ಮತಬೇಟೆಗೆ ಕೈ, ಕಮಲ ಪಡೆ ಇಳಿದಿವೆ. ಮರಾಠರನ್ನೇ ನೆಚ್ಚಿಕೊಂಡಿರುವ ಎಂಇಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿರುವುದು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ತಲೆನೋವಾಗಿದೆ.
ಎಂಇಎಸ್ ಚುನಾವಣೆ ಅಖಾಡಕ್ಕಿಳಿಯುವುದರಿಂದ ಮರಾಠ ಮತಗಳು ವಿಭಜನೆಯಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪುತ್ರ ಮೃಣಾಲ್ ಹೆಬ್ಬಾಳಕರ್ ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಿದ್ದರೆ, ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಕಣಕ್ಕಿಳಿಯಲಿದ್ದಾರೆ. ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳಿಗೆ ಮಹಾರಾಷ್ಟ್ರ ಏಕೀಕರಣ ಸಮಿತಿ ಪೈಪೋಟಿಯೊಡ್ಡಲು ಸಜ್ಜಾಗಿದೆ. ಅಲ್ಲದೆ, ಒಮ್ಮತದ ಏಕೈಕ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ.
ಶೆಟ್ಟರ್ ಬಗ್ಗೆ ಹೆಬ್ಬಾಳ್ಕರ್ ಹಗುರ ಮಾತು ಸರಿಯಲ್ಲ: ಮಂಗಲಾ ಅಂಗಡಿ
ರಮಾಕಾಂತ ಕೊಂಡೊಸ್ಕರ್ ಮತ್ತು ಶುಭಂ ಶೆಳಕೆ ಹೆಸರು ಎಂಇಎಸ್‌ನಿಂದ ಪ್ರಮುಖವಾಗಿ ಕೇಳಿಬರುತ್ತಿದೆ. ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮರಾಠಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಮೂರು ಕ್ಷೇತ್ರಗಳಲ್ಲಿ ಮರಾಠಿ ಮತ ಬೇಟೆಗೆ ಕೈ,ಕಮಲ ಪಡೆ ಶತಾಯಗತಾಯ ಪ್ರಯತ್ನ ಮಾಡುತ್ತಿವೆ. ಇಲ್ಲಿಯವರೆಗೆ ಹಿಂದುತ್ವಪರ ನಿಲುವು ಹೊಂದಿರುವ ಮರಾಠಿ ಭಾಷಿಕರು ಬಿಜೆಪಿಗೆ ಬೆಂಬಲ ನೀಡುತ್ತ ಬಂದಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮರಾಠ ಮತಗಳನ್ನು ಗಟ್ಟಿಯಾಗಿ ಹಿಡಿದುಕೊಳ್ಳುವಲ್ಲಿ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಯಶಸ್ವಿಯಾಗಿದ್ದರು. ಆದರೆ, ವಿಧಾನಸಭಾ ಚುನಾವಣೆಯೇ ಬೇರೆ. ಲೋಕಸಭಾ ಚುನಾವಣೆಯೇ ಬೇರೆ. ವಿಧಾನಸಭಾ ಚುನಾವಣೆ ಸ್ಥಳೀಯ ವಿಷಯಾಧಾರಿತವಾಗಿ ನಡೆಯುತ್ತದೆ. ಆದರೆ, ಲೋಕಸಭಾ ಚುನಾವಣೆ ಕೇಂದ್ರದ ನಾಯಕತ್ವ, ದೇಶದ ವಿಷಯಗಳ ಮೇಲೆ ನಡೆಯುತ್ತದೆ.
ಎಂಇಎಸ್ ಅಭ್ಯರ್ಥಿ ಚುನಾವಣೆ ಆಖಾಡಕ್ಕೆ ಧುಮುಕಿರುವುದರಿಂದ ಮರಾಠ ಮತಗಳು ವಿಭಜನೆಯಾಗಲಿವೆ. ಇದರ ಲಾಭ ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕರೆ, ಬಿಜೆಪಿಗೆ ಹಿನ್ನೆಡೆಯಾಗಲಿದೆ ಎನ್ನುವ ಲೆಕ್ಕಾಚಾರಗಳು ರಾಜಕೀಯ ವಲಯದಲ್ಲಿ ಶುರುವಾಗಿವೆ. ಮರಾಠ ಮತ ಬ್ಯಾಂಕ್ ಗಟ್ಟಿಮಾಡಿಕೊಳ್ಳಲು ಬಿಜೆಪಿ, ಕಾಂಗ್ರೆಸ್ ತೀವ್ರ ಪೈಪೋಟಿ ನಡೆಸುತ್ತಿವೆ.
ಬೆಳಗಾವಿ ಗಡಿ ವಿವಾದವನ್ನೇ ತನ್ನ ಬಂಡವಾಳ ಮಾಡಿಕೊಂಡು ಲೋಕಸಭಾ ಚುನಾವಣೆ ಎದುರಿಸಲು ಎಂಇಎಸ್ ಸಜ್ಜಾಗಿದೆ. ಈ ಹಿಂದಿನ ಎಲ್ಲ ಚುನಾವಣೆಗಳಲ್ಲಿ ಸೋತು ಸುಣ್ಣವಾಗಿ, ತೀವ್ರ ಮುಖಭಂಗ ಅನುಭವಿಸಿದರೂ ಎಂಇಎಸ್ ಮಾತ್ರ ತನ್ನ ಹಳೆಯ ಚಾಳಿ ಬಿಡುತ್ತಿಲ್ಲ.ಮತ್ತೆ ಲೋಕಸಭಾ ಚುನಾವಣೆ ಆಖಾಡಕ್ಕೆ ಇಳಿಯಲು ಸಜ್ಜಾಗಿದೆ.
ಚುನಾವಣೆ ಆಯೋಗಕ್ಕೆ ತಲೆನೋವಾಗಿದ್ದ ಎಂಇಎಸ್
1996ರ ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಬರೋಬ್ಬರಿ 452 ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಕೇಂದ್ರ ಚುನಾವಣಾ ಆಯೋಗಕ್ಕೂ ತಲೆನೋವಾಗಿತ್ತು. ಚುನಾವಣಾ ಮತಪತ್ರ ಮುದ್ರಣ ಮಾಡುವುದೇ ಆಯೋಗಕ್ಕೆ ಸವಾಲಾಗಿತ್ತು. ಆಗ ಎರಡು ತಿಂಗಳಕಾಲ ಚುನಾವಣೆ ಮುಂದೂಡಲಾಗಿತ್ತು. ಈಗ ಮತ್ತೆ ಆ ದಾಖಲೆ ಮುರಿಯಲು 500 ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿತ್ತು. ಗಲ್ಲಿಗೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಚಿಂತನೆ ನಡೆಸಿತ್ತು. ಆದರೆ, ಮರಾಠಿ ಭಾಷಿಕರೇ ಈ ನಿರ್ಧಾರಕ್ಕೆ ತೀವ್ರವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಒಮ್ಮತದ ಏಕೈಕ ಅಭ್ಯರ್ಥಿ ಕಣಕ್ಕಿಳಿಸಲು ಮುಂದಾಗಿದೆ.
ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದ ಎಂಇಎಸ್
ಕಾಂಗ್ರೆಸ್, ಬಿಜೆಪಿ ಈ ಎರಡೂ ರಾಷ್ಟ್ರೀಯ ಪಕ್ಷಗಳು ಎಂಇಎಸ್ ನಿರ್ಲಕ್ಷಿಸುವ ಸ್ಥಿತಿಯಲ್ಲಿಲ್ಲ. ಎಂಇಎಸ್ ಸ್ಪರ್ಧೆ ರಾಷ್ಟ್ರೀಯ ಪಕ್ಷಗಳ ಸೋಲು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮರಾಠಿ ಭಾಷಿಕ ಮತದಾರರು ಸಾಂಪ್ರದಾಯಿಕವಾಗಿ ಬಿಜೆಪಿ ಬೆಂಬಲಿಗರು. ಇಲ್ಲಿ ಎಂಇಎಸ್ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದು, ತೀವ್ರ ಪೈಪೋಟಿಯೊಡ್ಡುತ್ತದೆ.
Lok Sabha Election 2024: ಚುನಾವಣೆ ಬಳಿಕ ಸಿದ್ದರಾಮಯ್ಯ ರಾಜೀನಾಮೆ: ಜಗದೀಶ ಶೆಟ್ಟರ್
2021ರ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಎಂಇಎಸ್ ಬೆಂಬಲಿತ ಅಭ್ಯರ್ಥಿಯಾಗಿದ್ದ ಶುಭಂ ಶೆಳಕೆ 1,17,174 ಮತ ಪಡೆದಿದ್ದರು. ಇದರ ಪರಿಣಾಮ ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸತೀಶ ಜಾರಕಿಹೊಳಿ ವಿರುದ್ಧ 5240 ಅತ್ಯಲ್ಪ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಮಂಗಲ ಅಂಗಡಿಗೆ 4,40,327 ಮತ ಬಿದ್ದಿದ್ದರೆ, ಸತೀಶ ಜಾರಕಿಹೊಳಿಗೆ 4,35,087 ಮತಗಳು ಬಿದ್ದಿದ್ದವು. ಈ ಚುನಾವಣೆಯಲ್ಲಿ ಎಂಇಎಸ್ ಮರಾಠಿ ವೋಟ್ ಬ್ಯಾಂಕ್ ಹಿಡಿತದಲ್ಲಿಟ್ಟುಕೊಂಡಿತ್ತು. ಹಾಗಾಗಿ, ಬಿಜೆಪಿ ಗೆಲುವಿನ ಅಂತರ ಭಾರೀ ಪ್ರಮಾಣದಲ್ಲಿ ಕುಸಿಯುವಂತಾಯಿತು. ಬಿಜೆಪಿ ಭದ್ರಕೋಟೆಯಾದ ಬೆಳಗಾವಿಯಲ್ಲಿ 2019ರ ಚುನಾವಣೆಯಲ್ಲಿ ಬಿಜೆಪಿಯ ಸುರೇಶ ಅಂಗಡಿ ಅವರು ಕಾಂಗ್ರೆಸ್ ಅಭ್ಯರ್ಥಿ ಡಾ.ವಿ.ಎಸ್. ಸಾಧುನವರ ವಿರುದ್ಧ 3,87,042 ದಾಖಲೆ ಮತಗಳ ಅಂತರದಿಂದ ಗೆಲುವು ಸಾಧಿಸಿ, ದಾಖಲೆ ಸೃಷ್ಟಿಸಿದ್ದರು.
ನಮ್ಮ ಮತಗಳು ಬೇರೆಡೆ ಚದುರಿ ಹೋಗಬಾರದು ಎಂಬ ಉದ್ದೇಶದಿಂದ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಎಂಇಎಸ್ ಸ್ಪರ್ಧಿಸುವುದು ನಿಶ್ಚಿತ. ನಾವು ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳನ್ನು ಬೆಂಬಲಿಸುವುದಿಲ್ಲ. ಒಮ್ಮತದಿಂದ ಏಕೈಕ ಅಭ್ಯರ್ಥಿ ಕಣಕ್ಕಿಳಿಸಲಾಗುವುದು ಎಂದು ಮಾಜಿ ಶಾಸಕ ಮನೋಹರ ಕಿಣೇಕರ್ ತಿಳಿಸಿದ್ದಾರೆ.