ಲೋಕಸಭೆಯ ಸಾರ್ವತ್ರಿಕ ಚುನಾವಣೆ ದಿನಾಂಕ ಚುನಾವಣೆ ಘೋಷಣೆ ಆಗದಿರಬಹುದು. ಆದರೆ ರಾಜಕೀಯ ಪಕ್ಷಗಳಂತೂ ಒಳಗೊಳಗೆ ತಯಾರಿ ಆರಂಭಿಸಿವೆ. ಚುನಾವಣಾ ಅಖಾಡ ರಂಗೇರಲು ವೇದಿಕೆ ಸಜ್ಜಾಗಿರುವ ಹೊತ್ತಿನಲ್ಲಿ ‘ಟಿಕೆಟ್ ಫೈಟ್’ ಸರಣಿ ಮೂಲಕ ರಾಜ್ಯದ ಪ್ರಮುಖ ಲೋಕಸಭಾ ಕ್ಷೇತ್ರಗಳಲ್ಲಿ ವಿವಿಧ ಪಕ್ಷಗಳ ಟಿಕೆಟ್ ಲಾಬಿ ಹೇಗಿದೆ? ಯಾವ ಕ್ಷೇತ್ರದ ಹಂಚಿಕೆ ಯಾವ ದೋಸ್ತಿ ಪಕ್ಷದ ಪಾಲಾಗುವ ಸಾಧ್ಯತೆ ಇದೆ? ಎಂಬಿತ್ಯಾದಿ ವಿವರಗಳನ್ನುನೀಡುತ್ತಿದ್ದೇವೆ. ಸರಣಿಯ ಮೊದಲ ಭಾಗವಾಗಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಪ್ರತಿನಿಧಿಸುತ್ತಿರುವ ಬೆಂಗಳೂರು ಉತ್ತರ ಕ್ಷೇತ್ರದ ಚಿತ್ರಣ ನೀಡಲಾಗಿದೆ.
ಮಹಾಭಾರತ ಸಂಗ್ರಾಮ: ಕ್ಷೇತ್ರ ಬೆಂಗಳೂರು ಉತ್ತರ
ಬೆಂಗಳೂರು[ಜ.26]: ರಾಜಧಾನಿ ಬೆಂಗಳೂರಿನ 4 ಕ್ಷೇತ್ರಗಳ ಪೈಕಿ ಈ ಬಾರಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ರಾಜಕೀಯ ಚಿತ್ರಣ ವಿಭಿನ್ನವಾಗುವ, ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾಗಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಒಗ್ಗೂಡಿರುವುದರಿಂದ ಚುನಾವಣಾ ಕಣ ರಂಗೇರುವ ಸಾಧ್ಯತೆ ಹೆಚ್ಚಾಗಿದೆ
1951ರಿಂದ 2004ರವರೆಗೆ ಈ ಕ್ಷೇತ್ರ ಕಾಂಗ್ರೆಸ್ ಹಿಡಿತದಲ್ಲಿತ್ತು. ಮಧ್ಯೆ 1996ರಲ್ಲಿ ಒಂದು ಬಾರಿ ಜನತಾ ದಳ ಈ ಕ್ಷೇತ್ರವನ್ನು ತನ್ನ ವಶಕ್ಕೆ ತೆಗೆದುಕೊಂಡಿತ್ತು. 2004ರಿಂದ ಸತತ ವಾಗಿ 3 ಬಾರಿ ಬಿಜೆಪಿ ತೆಕ್ಕೆಯಲ್ಲಿರುವ ಕ್ಷೇತ್ರ 2019ರ ಚುನಾವಣೆಯಲ್ಲಿ ಯಾವ ಪಕ್ಷದ ಪಾಲಾಗುತ್ತದೆ ಎಂಬುದನ್ನು ಕಾದು ನೋಡಬೇಕು
ಬಿಜೆಪಿಯಿಂದ ಈ ಕ್ಷೇತ್ರ ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರು ಮತ್ತೊಮ್ಮೆ ಸ್ಪರ್ಧಿಸುವುದು ಬಹುತೇಕ ನಿಶ್ಚಿತವಾಗಿದ್ದರೂ, ಸಣ್ಣ ಅಪಸ್ವರ ಅವರದೇ ಪಕ್ಷದಿಂದ ಕೇಳಿಬರುತ್ತಿದೆ. ಈ ನಡುವೆ, ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್. ಡಿ.ದೇವೇಗೌಡರು ಈ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂಬ ವದಂತಿ ಕ್ಷೇತ್ರದಾದ್ಯಂತ ಮಿಂಚಿನ ಸಂಚಲನ ಉಂಟುಮಾಡಿದೆ. ಒಟ್ಟಾರೆ, ಸದಾನಂದಗೌಡರನ್ನು ಎದುರಿಸಲು ಯಾವ ಪಕ್ಷದಿಂದ ಯಾರು ಅಭ್ಯರ್ಥಿಯಾಗಲಿದ್ದಾರೆ ಎಂಬುದು ರಾಜಕೀಯ ವಲಯದಲ್ಲಿ ಕುತೂಹಲಕಾರಿ ಚರ್ಚೆಗೆ ಕಾರಣವಾಗಿದೆ.
ಕಾಂಗ್ರೆಸ್ ಜೊತೆಗೆ ಸ್ಥಾನ ಹೊಂದಾಣಿಕೆಯಾದಲ್ಲಿ ಬೆಂಗಳೂರು ಉತ್ತರವನ್ನು ಜೆಡಿಎಸ್‌ಗೆ ಬಿಟ್ಟು ಕೊಡಬೇಕು ಎಂಬ ಪಟ್ಟು ಮುಂದಿಡಲು ದೇವೇಗೌಡರು ಉದ್ದೇಶಿಸಿದ್ದಾರೆ. ಮೇಲಾಗಿ ತಾವು ಈಗ ಪ್ರತಿನಿಧಿಸುತ್ತಿರುವ ಹಾಸನ ಕ್ಷೇತ್ರದಿಂದ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿರುವುದರಿಂದ ಬೇರೊಂದು ಕ್ಷೇತ್ರದ ಹುಡುಕಾಟದಲ್ಲಿದ್ದಾರೆ.
ಒಕ್ಕಲಿಗ ಮತದಾರರು ಹೆಚ್ಚು
ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 2 ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರು ಇರುವುದರಿಂದ ಮತ್ತು ಕ್ಷೇತ್ರದಾದ್ಯಂತ ಒಕ್ಕಲಿಗ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ದೇವೇಗೌಡರು ಬೆಂಗಳೂರು ಉತ್ತರದಿಂದಲೇ ಸ್ಪರ್ಧಿಸಲಿ ಎಂಬ ಆಶಯ ಅವರ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿದೆ. ಆದರೆ, ಈ ಬಗ್ಗೆ ದೇವೇಗೌಡರು ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.
ಸದ್ದಿಲ್ಲದೆ ಡಿವಿಎಸ್ ತಯಾರಿ ಈ ಹಿಂದೆ 2009ರಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಸದಾನಂದ ಗೌಡರು 2014ರಲ್ಲಿ ಆ ಕ್ಷೇತ್ರದಿಂದ ಕಣಕ್ಕಿಳಿಯಲು ಹಿಂಜರಿದಿದ್ದರು. ಅವರು ಮೈಸೂರಿಗೆ ವಲಸೆ ಹೋಗುವ ಪ್ರಯತ್ನವೂ ನಡೆಯಿತು. ಅಂತಿಮವಾಗಿ ಬೆಂಗಳೂರಿನ ಪಕ್ಷದ ‘ಸಾಮ್ರಾಟರ’ ವಿರೋಧದ ನಡುವೆಯೂ ರಾಜಧಾನಿಗೆ ಕಾಲಿಟ್ಟು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವಿನ ನಗೆ ಬೀರಿದರು. ಮುಂದೆ ಕೇಂದ್ರ ಸಚಿವರೂ ಆದರು. ಆದರೆ, ಐದು ವರ್ಷಗಳ ನಂತರ ಎದುರಾಗಿರುವ ಈ ಬಾರಿಯ ಚುನಾವಣೆ ಸದಾನಂದಗೌಡರಿಗೆ ಸುಲಭವಾಗಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ನಿರೀಕ್ಷಿತ ಮಟ್ಟದ ಕೆಲಸಗಳಾಗಿಲ್ಲ ಎಂಬ ಆರೋಪವೂ ಅಲ್ಲಲ್ಲಿ ಕೇಳಿಬರುತ್ತಿದೆ. ಇದರ ನಡುವೆಯೇ ಸದಾನಂದ ಗೌಡರು ಮತ್ತೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ವಾಪಸ್ ಹೋಗಲು ಪ್ರಯತ್ನಿಸುತ್ತಿದ್ದಾರೆ ಎಂಬ ವದಂತಿ ಹಬ್ಬಿದೆ. ಆದರೆ, ಸದಾನಂದಗೌಡರು ಈ ಬಾರಿ ಬೆಂಗಳೂರು ಉತ್ತರ ಕ್ಷೇತ್ರದಿಂದಲೇ ಸ್ಪರ್ಧಿಸಲಿ ದ್ದಾರೆ. ಈಗಾಗಲೇ ಕ್ಷೇತ್ರದಾದ್ಯಂತ ಚುನಾ ವಣೆಯ ಸಿದ್ಧತೆಗಳನ್ನು ಆರಂಭಗೊಳಿಸಿದ್ದಾರೆ ಎಂದು ಅವರ ಆಪ್ತರು ಖಚಿತಪಡಿಸಿದ್ದಾರೆ. ಜೊತೆಗೆ ಈ ಕ್ಷೇತ್ರ ಬದಲಾವಣೆಯ ವದಂತಿಯ ಹಿಂದೆಯೂ ‘ಸಾಮ್ರಾಟರ’ ಕೈವಾಡವಿದೆ ಎಂದೂ ಅವರು ಕಿಡಿಕಾರುತ್ತಾರೆ
ಕಾಂಗ್ರೆಸ್ಸಿಗೂ ಸ್ಪರ್ಧೆ ಉಮೇದು
ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಉಮೇದಿನಲ್ಲಿದೆ. ಜೆಡಿಎಸ್ ಜತೆ ಮೈತ್ರಿಯಾದರೂ ಈ ಕ್ಷೇತ್ರ ಕಾಂಗ್ರೆಸ್‌ಗೆ ಲಭಿಸಬೇಕು ಎಂಬ ಕಾಂಗ್ರೆಸ್ ವಾದಕ್ಕೆ ಕ್ಷೇತ್ರದಲ್ಲಿ ಪಕ್ಷದ ಐವರು ಪ್ರಭಾವಿ ಶಾಸಕರು ಇರುವುದುಕಾರಣ. ಸಚಿವ ಕೃಷ್ಣ ಬೈರೇಗೌಡ, ಬಿಡಿಎ ಅಧ್ಯಕ್ಷ ಎಸ್.ಟಿ. ಸೋಮಶೇಖರ್, ಎರಡು ಪ್ರಭಾವಿ ನಿಗಮಗಳ ಅಧ್ಯಕ್ಷರಾದ ಬೈರತಿ ಸುರೇಶ್ ಹಾಗೂ ಬೈರತಿ ಬಸವರಾಜು ಮತ್ತು
ಅಖಂಡ ಶ್ರೀನಿವಾಸ್ ಅವರು ಈಗಾಗಲೇ ಸಮರ್ಥ ಅಭ್ಯರ್ಥಿ ನೀಡಿದರೆ ಅವರನ್ನು ಗೆಲ್ಲಿಸಿಕೊಂಡು ಬರುವ ಹೊಣೆ ತಮ್ಮದು ಎಂದು ರಾಜ್ಯ ನಾಯಕತ್ವಕ್ಕೆ ಹೇಳಿದ್ದಾರೆ. ಹೀಗಾಗಿಯೇ ಕಾಂಗ್ರೆಸ್‌ನಲ್ಲಿ ಈ ಕ್ಷೇತ್ರಕ್ಕಾಗಿ ಭಾರಿ ಪೈಪೋಟಿಯಿದೆ. ಎಚ್.ಎಂ. ರೇವಣ್ಣ, ನಾರಾಯಣ ಸ್ವಾಮಿ, ಹಿರಿಯ ಮುಖಂಡರಾದ ಬಿ.ಎಲ್. ಶಂಕರ್, ರವಿಶಂಕರ್ ಶೆಟ್ಟಿ, ಚೆಲುವರಾಯಸ್ವಾಮಿ, ಯುವ ಮುಖಂಡ ರಕ್ಷಾ ಸೀತಾರಾಂ ಅವರು ಆಕಾಂಕ್ಷಿಗಳಾಗಿದ್ದರೆ, ಸಚಿವರಾದ ಕೃಷ್ಣ ಬೈರೇಗೌಡ, ಎಂ.ಆರ್. ಸೀತಾರಾಂ, ರಾಜ್ಯಸಭಾ ಸದಸ್ಯ ರಾಜೀವ್‌ಗೌಡ, ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ಅವರನ್ನು ಕಣಕ್ಕೆ ಇಳಿಸುವಂತೆ ಪಕ್ಷದ ಕಾರ‌್ಯಕರ್ತರಿಂದ ಒತ್ತಡವಿದೆ. ಕ್ಷೇತ್ರವನ್ನು ಪ್ರತಿನಿಧಿಸುವ ಕಾಂಗ್ರೆಸ್ ಶಾಸಕರು ಈ ಬಾರಿ ಚುನಾವಣೆಯನ್ನು ಜೆಡಿಎಸ್ ಜತೆ ಮೈತ್ರಿಯೊಂದಿಗೆ ಎದುರಿಸಬೇಕು ಎಂಬ ವಾದ ಮುಂದಿಟ್ಟಿದ್ದಾರೆ. ಹಾಲಿ ಸಂಸದ ಸದಾ ನಂದಗೌಡ ಆಯ್ಕೆಯಾದ ನಂತರ ಕ್ಷೇತ್ರಕ್ಕೆ ಹೆಚ್ಚು ಗಮನ ನೀಡಿಲ್ಲವಾದ್ದರಿಂದ ಈ ಬಾರಿ ಕಾಂಗ್ರೆಸ್‌ಗೆ ಭರ್ಜರಿ ಅವಕಾಶವಿದೆ. ಪ್ರಬಲ ಅಭ್ಯರ್ಥಿಯನ್ನು ಪಕ್ಷ ನೀಡಬೇಕು ಎಂದು ವಾದಿಸುತ್ತಿದ್ದಾರೆ. ಆದರೆ, ಈ ಕ್ಷೇತ್ರವನ್ನು ಜೆಡಿಎಸ್ ತನಗೆ ಬಿಟ್ಟುಕೊಡುವಂತೆ ವಾದ ಮಾಡಿರುವುದು ಹಾಗೂ ದೇವೇಗೌಡರೇ ಈ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾದರೆ ಏನು ಮಾಡಬೇಕು ಎಂಬ ಚಿಂತೆ ಕಾಂಗ್ರೆಸ್ ನಾಯಕರಿಗೆ ಇದೆ.
ಕಾಂಗ್ರೆಸ್‌ನಿಂದ ರಮ್ಯಾ ಅಸ್ತ್ರ?
ಒಂದು ವೇಳೆ ದೇವೇಗೌಡರೇ ಕಣಕ್ಕೆ ಇಳಿಯಲು ಮುಂದಾದರೆ ಆಗ ಕ್ಷೇತ್ರವನ್ನು ಉಳಿಸಿಕೊಳ್ಳಲು ರಮ್ಯಾ ಅಸ್ತ್ರವೂ ಕಾಂಗ್ರೆಸ್‌ನಿಂದ ಪ್ರಯೋಗವಾಗುವ ಸಾಧ್ಯತೆಯಿದೆ. ವಾಸ್ತವವಾಗಿ ನಟಿ, ರಾಜಕಾರಣಿ ರಮ್ಯಾ ಅವರು ರಾಜ್ಯಸಭೆ ಪ್ರವೇಶ ಮಾಡುವ ಉಮೇದಿ ಹೊಂದಿದ್ದರೂ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಉಳಿಸಿಕೊಳ್ಳಬೇಕು ಎಂದಾದಾಗ ರಾಜ್ಯ ನಾಯಕತ್ವವು ರಮ್ಯಾ ಅವರನ್ನು ಕಣಕ್ಕೆ ಇಳಿಸುವಂತೆ ಹೈಕಮಾಂಡ್‌ಗೆ ಸಲಹೆ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರೇ ನೇರವಾಗಿ ದೇವೇಗೌಡರೊಂದಿಗೆ ಮಾತನಾಡಿ ಇಲ್ಲಿ ರಮ್ಯಾರನ್ನು ಕಣಕ್ಕಿಳಿಸುವ ಸಲುವಾಗಿ ಬಿಟ್ಟುಕೊಡುವಂತೆ ಕೇಳಿಕೊಂಡರೆ ಆಗ ದೇವೇಗೌಡರು ಒಪ್ಪುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಕೆಂಗಲ್, ಷರೀಫ್ ಕ್ಷೇತ್ರವಿದು ಇತ್ತೀಚೆಗೆ ಅಗಲಿದ ಕೇಂದ್ರದ ಮಾಜಿ ಸಚಿವರಾಗಿದ್ದ ಸಿ.ಕೆ. ಜಾಫರ್ ಷರೀಫ್ ಅವರು ಬೆಂಗಳೂರು ಉತ್ತರ ಕ್ಷೇತ್ರವನ್ನು ಏಳು ಬಾರಿ ಪ್ರತಿನಿಧಿಸಿದ್ದರು. 1977ರಿಂದ 91ರವರೆಗೆ ಐದು ಬಾರಿ ಸತತವಾಗಿ ಗೆಲುವು ಸಾಧಿಸಿದ್ದ ಷರೀಫ್ ಅವರು 1996ರಲ್ಲಿ ಜನತಾದಳದ ಸಿ.ನಾರಾಯಣಸ್ವಾಮಿ ಅವರ ಎದುರು ಸೋಲು ಅನುಭವಿಸಿದರು. ಅದಾದ ನಂತರ ಮತ್ತೆ ಎರಡು ಬಾರಿ ಜಯಭೇರಿ ಸಾಧಿಸಿದರು. 2004ರಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ಮಾಜಿ ಪೊಲೀಸ್ ಅಧಿಕಾರಿ ಎಚ್.ಟಿ.ಸಾಂಗ್ಲಿಯಾನ ಅವರಿಂದ ಜಾಫರ್ ಪರಾಭವಗೊಂಡರು. ಆ ಬಳಿಕ ರಾಜಕೀಯವಾಗಿ ಅವರು ಮೇಲೇರಲಿಲ್ಲ. ಅದೇ ರೀತಿ ರಾಜ್ಯದ ಎರಡನೇ ಮುಖ್ಯಮಂತ್ರಿ ಹಾಗೂ ವಿಧಾನಸೌಧದ ಶಿಲ್ಪಿ ಕೆಂಗಲ್ ಹನುಮಂತಯ್ಯ ಅವರೂ ಬೆಂಗಳೂರು ಉತ್ತರ ಕ್ಷೇತ್ರದಿಂದ ಸತತ ಮೂರು ಬಾರಿ ಗೆಲುವು ಸಾಧಿಸಿದ್ದರು ಎಂಬುದೂ ಗಮನಾರ್ಹ.
8 ಕ್ಷೇತ್ರ: ದೋಸ್ತಿ ಪಕ್ಷದವರೇ 7 ಶಾಸಕರು
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳು ಇವೆ. ಅವೆಂದರೆ: ಕೆ.ಆರ್.ಪುರ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರ, ಹೆಬ್ಬಾಳ ಮತ್ತು ಪುಲಕೇಶಿನಗರ. ಈ ಪೈಕಿ 5ರಲ್ಲಿ ಕಾಂಗ್ರೆಸ್, 2ರಲ್ಲಿ ಜೆಡಿಎಸ್ ಹಾಗೂ ಕೇವಲ 1 ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇದ್ದಾರೆ.
ರೇಸ್‌ನಲ್ಲಿ ಯಾರು?
ಬಿಜೆಪಿ: ಡಿ.ವಿ. ಸದಾನಂದಗೌಡ
ಜೆಡಿಎಸ್: ಎಚ್.ಡಿ. ದೇವೇಗೌಡ
ಕಾಂಗ್ರೆಸ್: ಎಚ್.ಎಂ. ರೇವಣ್ಣ, ನಾರಾಯಣಸ್ವಾಮಿ, ಬಿ.ಎಲ್. ಶಂಕರ್, ರವಿಶಂಕರ್ ಶೆಟ್ಟಿ, ಚೆಲುವರಾಯಸ್ವಾಮಿ, ಯುವ ಮುಖಂಡ ರಕ್ಷಾ ಸೀತಾರಾಂ. (ಕೃಷ್ಣ ಬೈರೇಗೌಡ, ಎಂ.ಆರ್. ಸೀತಾರಾಂ, ರಾಜ್ಯಸಭಾ ಸದಸ್ಯ ರಾಜೀವ್‌ಗೌಡ, ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ಪರ ಕಾರ್ಯಕರ್ತರ ಬ್ಯಾಟಿಂಗ್