ಐದು ವರ್ಷಗಳ ನಂತರದ ಚಿತ್ರಣ ಅದೇ ಊರು, ಅದೇ ಮೈದಾನ, ಸ್ನೇಹಿತರು ಮಾತ್ರ ಬದಲು!

By Kannadaprabha News  |  First Published Apr 14, 2024, 4:33 PM IST

2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಈಗ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ. ಐದು ವರ್ಷಗಳ ಹಿಂದೆ ಸಿದ್ದು, ಈಗ ಮೋದಿ ಜೊತೆ ವೇದಿಕೆ ಹಂಚಿಕೊಳ್ಳಲಿರುವ ಎಚ್.ಡಿ. ದೇವೇಗೌಡ.


ಅಂಶಿ ಪ್ರಸನ್ನಕುಮಾರ್

ಮೈಸೂರು (ಏ.14): 2019ರ ಲೋಕಸಭಾ ಚುನಾವಣೆ ವೇಳೆಗೆ ರಾಜ್ಯದಲ್ಲಿ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿತ್ತು. ಜೆಡಿಎಸ್ಸಿನ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ಸಿನ ಡಾ.ಜಿ. ಪರಮೇಶ್ವರ ಉಪ ಮುಖ್ಯಮಂತ್ರಿಯಾಗಿದ್ದರು. ಆಗ ಮಾಜಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಬಿಜೆಪಿ ವಿರುದ್ಧ ಕಣಕ್ಕಿಳಿದಿದ್ದವು.

Tap to resize

Latest Videos

ಮೈಸೂರನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲಾಗಿತ್ತು. ಕಾಂಗ್ರೆಸ್ಸಿಂದ ಸಿ.ಎಚ್. ವಿಜಯಶಂಕರ್ ಹಾಗೂ ಬಿಜೆಪಿಯಿಂದ ಪ್ರತಾಪ್ ಸಿಂಹ ಕಣದಲ್ಲಿದ್ದರು. ಹೀಗಾಗಿ ಆ ವರ್ಷದ ಏ.12 ರಂದು ಸಂಜೆ 5 ಗಂಟೆಗೆ ಇದೇ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದಿದ್ದ ಜಂಟಿ ಪ್ರಚಾರ ಸಭೆಯಲ್ಲಿ ಎಚ್.ಡಿ. ದೇವೇಗೌಡ ಹಾಗೂ ಸಿದ್ದರಾಮಯ್ಯ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು.

ಬಿಜೆಪಿ ಅಡಿಪಾಯವೇ ಇಲ್ಲದ ತಮಿಳುನಾಡಿಗೆ ಮೋದಿ 'ಪ್ರಣಾಳಿಕೆ' ವಾಗ್ದಾನ, ಪೆರಿಯಾರ್‌ ಪಾಲಿಟಿಕ್ಸ್‌ಗೆ ತಿರುವಳ್ಳುವರ್ ರಣತಂತ್ರ!

ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಈ ಬಾರಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಮೈಸೂರನ್ನು ಬಿಜೆಪಿಗೆ ಬಿಟ್ಟುಕೊಡಲಾಗಿದ್ದು, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಭ್ಯರ್ಥಿಯಾಗಿದ್ದಾರೆ. ಮಂಡ್ಯದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಹಾಸನದಲ್ಲಿ ಸಂಸದ ಪ್ರಜ್ವಲ್ ರೇವಣ್ಣ- ಜೆಡಿಎಸ್, ಚಾಮರಾಜನಗರದಿಂದ ಮಾಜಿ ಶಾಸಕ ಎಸ್. ಬಾಲರಾಜ್- ಬಿಜೆಪಿ ಕಣದಲ್ಲಿದ್ದಾರೆ. ಇವರ ಪರ ಮತಯಾಚಿಸಲು ಏ.14 ರಂದು ಸಂಜೆ 4ಕ್ಕೆ ಏರ್ಪಡಿಸಿರುವ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕಳೆದ ಬಾರಿ ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟದ ವಿರುದ್ಧ ಮೈಸೂರು, ಚಾಮರಾಜನಗರದಲ್ಲಿ ಬಿಜೆಪಿ ಗೆದ್ದಿತ್ತು. ಈ ಬಾರಿ ಬಿಜೆಪಿ- ಜೆಡಿಎಸ್ ಮೈತ್ರಿಕೂಟದ ವಿರುದ್ಧ ಕಾಂಗ್ರೆಸ್ ಗೆಲ್ಲುತ್ತಾ? ಅಥವಾ ಮೈತ್ರಿಕೂಟ ಮೇಲುಗೈ ಸಾಧಿಸುತ್ತಾ? ಎಂಬ ಕುತುಹೂಲ ಉಂಟಾಗಿದೆ.

ಯಡಿಯೂರಪ್ಪ ಭೇಟಿ ಮಾಡಿ ಹೊರಹೋಗುತ್ತಿದ್ದಂತೆ ಉಲ್ಟಾ ಹೊಡೆದ ಶ್ರೀನಿವಾಸ ಪ್ರಸಾದ್!

14 ವರ್ಷಗಳ ನಂತರ ಒಂದೇ ವೇದಿಕೆಯಲ್ಲಿ: ಎಚ್.ಡಿ. ದೇವೇಗೌಡ ಹಾಗೂ ಸಿದ್ದರಾಮಯ್ಯ ಒಂದು ಕಾಲಕ್ಕೆ ಗುರು- ಶಿಷ್ಯರು. 1983 ರಿಂದ 2006 ರವರೆಗೆ ಒಂದೇ ಪಕ್ಷದಲ್ಲಿ ಇದ್ದವರು. ನಂತರ ಬೇರ್ಪಟ್ಟು 2018 ರ ವಿಧಾನಸಭಾ ಚುನಾವಣೆವರೆಗೂ ಎಣ್ಣೆ- ಸೀಗೆಕಾಯಿ ರೀತಿಯ ಸಂಬಂಧ. ಕೋಮುವಾದಿಗಳನ್ನು ದೂರ ಇಡುವ ಉದ್ದೇಶದಿಂದ 2019 ಮತ್ತೆ ಮತ್ತೆ ಒಂದಾಗಿದ್ದರು.

ಹಳೆಯ ಮೈಸೂರು ಪ್ರಾಂತ್ಯದಲ್ಲಿ ಕಾಂಗ್ರೆಸ್ ಹಾಗೂ ಜನತಾ ಪರಿವಾರ ಬದ್ಧವೈರಿಗಳು. 2004 ರ ನಂತರ ಬಿಜೆಪಿ ತಲೆ ಎತ್ತಿದ್ದರೂ ಕೂಡ ಇವತ್ತಿಗೂ ಮಂಡ್ಯ, ಮೈಸೂರು, ಹಾಸನ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಮೊದಲಾದ ಕಡೆ ಎರಡೂ ಪಕ್ಷಗಳಿಗೂ ಭದ್ರವಾದ ನೆಲೆ ಇದೆ. 2004. 2018 ರ ವಿಧಾನಸಭಾ ಚುನಾವಣೆಯಲ್ಲಿ ಪರಸ್ಪರ ಕಾದಾಡಿದ್ದ ಇವರು ನಂತರ ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ಅಧಿಕಾರ ಹಿಡಿದಿದ್ದರು.

ಎಂಬತ್ತರ ದಶಕದ ನಂತರ ಅಂದರೆ ರಾಜ್ಯದಲ್ಲಿ ಪ್ರಥಮ ಕಾಂಗ್ರೆಸ್ಸೇತರ ಸರ್ಕಾರ ರಚನೆಯಾದ ನಂತರ ಹಳೆಯ ಮೈಸೂರು ಪ್ರಾಂತ್ಯದಲ್ಲಿ 1983, 1985, 1994, 2004 ರಲ್ಲಿ ಜನತಾ ಪರಿವಾರ, 1989, 1999, 2008, 2013. 2023 ರಲ್ಲಿ ಕಾಂಗ್ರೆಸ್ ಮೇಲುಗೈ. 1989 ರಲ್ಲಿ ಜನತಾಪಕ್ಷ ಇಬ್ಭಾಗವಾಗಿ, ಸಿದ್ದರಾಮಯ್ಯ ಅವರು ರಾಮಕೃಷ್ಣ ಹೆಗಡೆ, ಜೆ.ಎಚ್. ಪಟೇಲರ ಜೊತೆ ಗುರುತಿಸಿಕೊಂಡಿದ್ದರು. 1999 ರಲ್ಲಿ ದೇವೇಗೌಡರ ಜೆಡಿಎಸ್ ಜೊತೆ ಗುರುತಿಸಿಕೊಂಡರು.

ರಾಮಕೃಷ್ಣ ಹೆಗಡೆ ಅವರ ಸಂಪುಟದಲ್ಲಿ ರೇಷ್ಮೆ, ಪಶುಸಂಗೋಪನೆ, ಬೊಮ್ಮಾಯಿ ಅವರ ಸಂಪುಟದಲ್ಲಿ ಸಾರಿಗೆ ಸಚಿವರಾಗಿದ್ದ ಸಿದ್ದರಾಮಯ್ಯ ಅವರಿಗೆ ತುಂಬಾ ಮಹತ್ವ ಸಿಕ್ಕಿದ್ದು 1994 ರಲ್ಲಿ ದೇವೇಗೌಡರು ಮುಖ್ಯಮಂತ್ರಿ ಆದಾಗ. ಏಕೆಂದರೆ ಸಿದ್ದರಾಮಯ್ಯ ಅವರಿಗೆ ಹಣಕಾಸು ಖಾತೆ ಸಿಕ್ಕಿತು. 1996 ರಲ್ಲಿ ದೇವೇಗೌಡರು ಅನಿರೀಕ್ಷಿತವಾಗಿ ಪ್ರಧಾನಿಯಾದಾಗ ಜೆ.ಎಚ್. ಪಟೇಲ್ ಮುಖ್ಯಮಂತ್ರಿ, ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ. 1999 ರಲ್ಲಿ ಸಿದ್ದರಾಮಯ್ಯ ಸೋತರೂ ದೇವೇಗೌಡರ ಜೊತೆ ಸೇರಿ ರಾಜ್ಯಾದ್ಯಂತ ಓಡಾಡಿ ಪಕ್ಷ ಸಂಘಟಿಸಿದರು. ಹೀಗಾಗಿ 2004ರ ಚುನಾವಣೆಯಲ್ಲಿ ಜೆಡಿಎಸ್ 58 ಸ್ಥಾನ ಪಡೆಯಲು ಸಾಧ್ಯವಾಯಿತು. 65 ಸ್ಥಾನ ಪಡೆದಿದ್ದ ಕಾಂಗ್ರೆಸ್ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿದರೂ ಮುಖ್ಯಮಂತ್ರಿ ಗಾದಿ ಸಿಗಲಿಲ್ಲ. ಧರಂಸಿಂಗ್ ಸಿಎಂ ಆದಾಗ ಸಿದ್ದರಾಮಯ್ಯ ಎರಡನೇ ಬಾರಿ ಡಿಸಿಎಂ ಆಗಬೇಕಾಯಿತು.

ಇದಾದ ನಂತರ ಹುಬ್ಬಳ್ಳಿಯಲ್ಲಿ ಅಹಿಂದ ಸಮಾವೇಶ ಸಂಘಟಿಸುವ ವಿಚಾರದಲ್ಲಿ ದೇವೇಗೌಡ-ಸಿದ್ದರಾಮಯ್ಯ ನಡುವೆ ವಿರಸ ಉಂಟಾಯಿತು. ಆಗ ಸಿದ್ದರಾಮಯ್ಯ ಪಕ್ಷದಿಂದ ಹೊರಹೋಗಬೇಕಾಯಿತು. 2006 ರಲ್ಲಿ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರಿದರು. ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ದೇವೇಗೌಡ ಹಾಗೂ ಅಂದು ಜೆಡಿಎಸ್- ಬಿಜೆಪಿ- ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿದ್ದ ಎಚ್.ಡಿ. ಕುಮಾರಸ್ವಾಮಿ ಸಾಕಷ್ಟು ಶ್ರಮಿಸಿದರು. ಪರಿಣಾಮ ಸಿದ್ದರಾಮಯ್ಯ ಅವರು ಜೆಡಿಎಸ್ಸಿನ ಶಿವಬಸಪ್ಪ ಎಂಬ ಅನಾಮಧೇಯರ ಎದುರು ಕೇವಲ 257 ಮತಗಳ ಕೂದಲೆಳೆಯ ಅಂತರದಿಂದ ಗೆದ್ದರು. ಅಂದಿನಿಂದ ದೇವೇಗೌಡ ಹಾಗೂ ಸಿದ್ದರಾಮಯ್ಯ ರಾಜಕೀಯವಾಗಿ ಬೇರೆ ಬೇರೆ ದಿಕ್ಕಿನಲ್ಲಿದ್ದರು.

ಸಿದ್ದರಾಮಯ್ಯ ಅವರು 2008 ರಲ್ಲಿ ಕಾಂಗ್ರೆಸ್ ನಿಂದ ಪ್ರತಿಪಕ್ಷ ನಾಯಕ, 2013 ರಲ್ಲಿ ಮುಖ್ಯಮಂತ್ರಿಯೂ ಆದರು. ಡಿ. ದೇವರಾಜ ಅರಸರ ನಂತರ ಐದು ವರ್ಷ ಸಿಎಂ ಆಗಿ ಅಧಿಕಾರ ಪೂರ್ಣಗೊಳಿಸಿದರು.

ಕಳೆದ ಬಾರಿಯ ಲೋಕಸಭಾ ಚುನಾವಣೆ ಚಿತ್ರಣ: 2018ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಚಾಮುಂಡೆಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ಸಿನ ಜಿ.ಟಿ. ದೇವೇಗೌಡ ಸೋಲಿಸಿದ್ದರು. ಈ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಾರದಿದ್ದರಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ಸರ್ಕಾರ ರಚಿಸಿದವು. ಜೆಡಿಎಸ್ಸಿನ ಎಚ್.ಡಿ. ಕುಮಾರಸ್ವಾಮಿ ಸಿಎಂ, ಕಾಂಗ್ರೆಸ್ಸಿನ ಡಾ.ಜಿ. ಪರಮೇಶ್ವರ ಡಿಸಿಎಂ ಆದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಕ್ರಮವಾಗಿ 21 ಹಾಗೂ 7 ಸ್ಥಾನಗಳಲ್ಲಿ ಸ್ಪರ್ಧಿಸಿದವು. ನಾಯಕರ ಹಂತದಲ್ಲಿ ಮೈತ್ರಿಯಾದರೂ ಕಾರ್ಯಕರ್ತರ ಮಟ್ಟದಲ್ಲಿ ಸಾಕಷ್ಟು ಗೊಂದಲಗಳಿದ್ದವು. ಹೀಗಾಗಿ ನಾಯಕರು ಒಂದಾಗೋಣ ಬಾ ಎಂದರೂ ಕಾರ್ಯಕರ್ತರು ನಾನೊಂದು ತೀರ, ನೀನೊಂದು ತೀರ ಎಂಬಂತೆ ಇದ್ದರು. ಮೇಲ್ನೋಟಕ್ಕೆ ಒಂದಾದಂತೆ ಕಂಡರೂ ಮಾನಸಿಕವಾಗಿ ಒಗ್ಗೂಡಿಸಲು ಸಾಧ್ಯವಾಗಲಿಲ್ಲ. ಪರಿಣಾಮ ಹಾಸನ, ಮಂಡ್ಯ, ಮೈಸೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಸಮಸ್ಯೆಗಳು ಕಾಣಿಸಿಕೊಂಡವು. ಜೆಡಿಎಸ್ ಕಣದಲ್ಲಿದ್ದ ಶಿವಮೊಗ್ಗ ಹೊರತುಪಡಿಸಿ, ಉಡುಪಿ- ಚಿಕ್ಕಮಗಳೂರು, ಉತ್ತರ ಕನ್ನಡ, ವಿಜಯಪುರದಲ್ಲೂ ಕಾರ್ಯಕರ್ತರು ಒಂದಾಗಲಿಲ್ಲ.

ರಾಜ್ಯದಲ್ಲಿ ಮೈತ್ರಿ ಸರ್ಕಾರ ಇದ್ದರೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಫ್ರೆಂಡ್ಲಿ ಫೈಟ್ ಆಗಬೇಕಿತ್ತು ಎಂಬುದು ಹಲವರ ಅನಿಸಿಕೆ. ಈ ರೀತಿಯಾದಾಗ ಜೆಡಿಎಸ್ ಹಾಗೂ ಕಾಂಗ್ರೆಸ್ ಭದ್ರ ನೆಲೆ ಇರುವ ಹಳೆಯ ಮೈಸೂರು ಪ್ರಾಂತ್ಯದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುತ್ತಿತ್ತು. ಇಬ್ಬರಲ್ಲಿ ಒಬ್ಬರು ಗೆಲ್ಲುತ್ತಿದ್ದರು. ಆದರೆ ಮೈತ್ರಿ ಮಾಡಿಕೊಂಡಿದ್ದರಿಂದ ಕಾಂಗ್ರೆಸ್ ಸ್ಪರ್ಧಿಸಿರುವ ಕಡೆ ಜೆಡಿಎಸ್, ಜೆಡಿಎಸ್ ಸ್ಪರ್ಧಿಸಿರುವ ಕಡೆ ಕಾಂಗ್ರೆಸ್ ಮತಗಳು ಬಿಜೆಪಿಗೆ ವರ್ಗಾವಣೆಯಾದವು.

ಅದರಲ್ಲೂ ವಿಶೇಷವಾಗಿ ಮೈಸೂರು ಹಾಗೂ ಮಂಡ್ಯ ಕ್ಷೇತ್ರಗಳ ಫಲಿತಾಂಶ ಒಂದಕ್ಕೊಂದು ಅವಲಂಬಿಸಿದ್ದವು. ಮಂಡ್ಯದಲ್ಲಿ ಕಾಂಗ್ರೆಸ್ಸಿನವರು ಸಹಕರಿಸಲಿಲ್ಲ ಎಂಬುದು ಜೆಡಿಎಸ್ಸಿನವರ ಆರೋಪ. ಹೀಗಾಗಿ ಮೈಸೂರಿನಲ್ಲಿ ಜೆಡಿಎಸ್ಸಿನ ಮತಗಳು ನಮಗೆ ಬರುತ್ತವೆವೋ ಇಲ್ಲವೋ ಎಂಬ ಕಾಂಗ್ರೆಸ್ಸಿನವರ ಆತಂಕ ನಿಜವಾಯಿತು. ಎರಡು ಕಡೆಯ ಸೋತರು. ಮೈಸೂರಿನಲ್ಲಿ ಬಿಜೆಪಿಯ ಪ್ರತಾಪ್ ಸಿಂಹ, ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಸುಮಲತಾ ಅಂಬರೀಶ್ ಗೆದ್ದರು. ಚಾಮರಾಜನಗರದಲ್ಲೂ ಬಿಜೆಪಿಯ ವಿ. ಶ್ರೀನಿವಾಸಪ್ರಸಾದ್ ಗೆದ್ದರು. ರಾಜ್ಯದಲ್ಲಿ ಬಿಜೆಪಿ- - 25, ಕಾಂಗ್ರೆಸ್, ಜೆಡಿಎಸ್, ಪಕ್ಷೇತರರು ತಲಾ 1 ಸ್ಥಾನ ಪಡೆದಿದ್ದರು.

2023ರ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಸಿದ್ದರಾಮಯ್ಯ ಎರಡನೇ ಬಾರಿ ಸಿಎಂ ಆಗಿದ್ದಾರೆ. ಈ ಬಾರಿ ಕಾಂಗ್ರೆಸ್ ಎಲ್ಲಾ 28 ಸ್ಥಾನಗಳಿಗೂ ಸ್ಪರ್ಧಿಸಿದೆ. ಮೈತ್ರಿ ಕೂಟದ ಪರವಾಗಿ ಬಿಜೆಪಿ 25, - ಜೆಡಿಎಸ್ 3 ಕಡೆ ಸ್ಪರ್ಧಿಸಿವೆ. ಫಲಿತಾಂಶ ಕಾದು ನೋಡಬೇಕಿದೆ.

click me!