ಒಂದು ಕಡೆ ಮುಖ್ಯಮಂತ್ರಿ ಹುದ್ದೆಗಾಗಿ ಭರ್ಜರಿ ಫೈಟ್ ನಡೆಯುತ್ತಿದ್ದರೆ ಇತ್ತ ಸಚಿವ ಸ್ಥಾನಕ್ಕಾಗಿ ಘಟಾನುಘಟಿಗಳಿಂದಲೂ ತೀವ್ರ ಪೈಪೋಟಿ ಆರಂಭಗೊಂಡಿದೆ.
ಬೆಂಗಳೂರು (ಮೇ.15): ಒಂದು ಕಡೆ ಮುಖ್ಯಮಂತ್ರಿ ಹುದ್ದೆಗಾಗಿ ಭರ್ಜರಿ ಫೈಟ್ ನಡೆಯುತ್ತಿದ್ದರೆ ಇತ್ತ ಸಚಿವ ಸ್ಥಾನಕ್ಕಾಗಿ ಘಟಾನುಘಟಿಗಳಿಂದಲೂ ತೀವ್ರ ಪೈಪೋಟಿ ಆರಂಭಗೊಂಡಿದೆ. ಹಿರಿಯರು, ಅನುಭವಸ್ಥರು ಸೇರಿದಂತೆ ಸಮಾಜದಲ್ಲಿ ಪ್ರಭಾವ ಹೊಂದಿರುವ 20ಕ್ಕೂ ಹೆಚ್ಚು ಘಟಾನುಘಟಿ ನಾಯಕರೇ ಈ ಬಾರಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ. ಇವರಲ್ಲದೆ, ತಮ್ಮ ಜಾತಿ ಹಾಗೂ ಶಾಸಕರಾಗಿ ಹಿರಿತನದ ಆಧಾರದ ಮೇಲೆ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವವರ ಸಂಖ್ಯೆಯೂ ಕಡಿಮೆಯಿಲ್ಲ. ಹೀಗಾಗಿ ಕಾಂಗ್ರೆಸ್ ಸುಮಾರು 50ಕ್ಕೂ ಹೆಚ್ಚು ಮಂದಿ ಶಾಸಕರು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟು ಲಾಬಿ ಆರಂಭಿಸಿದ್ದಾರೆ.
ಸಿದ್ದರಾಮಯ್ಯ ಅವರ ನೇತೃತ್ವದ 2018ರ ಸರ್ಕಾರದ ಸಂಪುಟದಲ್ಲಿದ್ದ ಡಿ.ಕೆ.ಶಿವಕುಮಾರ್, ಡಾ.ಜಿ.ಪರಮೇಶ್ವರ್, ಟಿ.ಬಿ.ಜಯಚಂದ್ರ, ಆರ್.ವಿ.ದೇಶಪಾಂಡೆ, ಶಾಮನೂರು ಶಿವಶಂಕರಪ್ಪ ಸೇರಿದಂತೆ ಸುಮಾರು 20 ಮಂದಿ ಮಂದಿ ಘಟಾನುಘಟಿ ನಾಯಕರು ಮತ್ತೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇವರಲ್ಲದೆ ಎರಡು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವವರು ಬೈರತಿ ಸುರೇಶ್, ಶಿವರಾಜ ತಂಗಡಗಿ, ನರೇಂದ್ರಸ್ವಾಮಿ, ಎನ್.ಎ.ಹ್ಯಾರಿಸ್, ಕೂಡ್ಲಿಗಿ ನಾಗೇಂದ್ರ, ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಮಂದಿ ಈ ಬಾರಿ ಸಚಿವ ಸ್ಥಾನ ಕೇಳುವ ತವಕದಲ್ಲಿದ್ದಾರೆ.
ಸಿಎಂ ಹುದ್ದೆಗೆ ಡಿ.ಕೆ.ಶಿವಕುಮಾರ್-ಸಿದ್ದರಾಮಯ್ಯ ಬಿಗಿಪಟ್ಟು: ನೂತನ ಸಿಎಂ ಆಯ್ಕೆ ಕಾಂಗ್ರೆಸ್ಸಿಗೆ ಕಗ್ಗಂಟು
ಜತೆಗೆ 9 ಬಾರಿ ಸಂಸದರಾಗಿ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಕೆ.ಎಚ್.ಮುನಿಯಪ್ಪ ಅವರಂತಹ ಹಿರಿಯ ನಾಯಕರು ಶಾಸಕರಾಗಿ ಬಂದಿರುವುದರಿಂದ ಸಚಿವ ಸ್ಥಾನ ನೀಡಬೇಕಾದ ಅನಿವಾರ್ಯತೆ ಇದೆ. ಲಕ್ಷ್ಮಣ ಸವದಿ, ಶಿವಲಿಂಗೇಗೌಡ ಮತ್ತಿತರ ಹಿರಿಯ ವಲಸಿಗ ನಾಯಕರು ಸಚಿವ ಸ್ಥಾನ ಕೇಳುವ ಸಾಧ್ಯತೆ ಇದೆ. ಇವರಷ್ಟೇ ಅಲ್ಲದೆ ಮಹಿಳಾ ಕೋಟಾದಿಂದ ಲಕ್ಷ್ಮೇ ಹೆಬ್ಬಾಳ್ಕರ್, ಹೈಕಮಾಂಡ್‌ಗೆ ಬಹಳ ಹತ್ತಿರವಾಗಿರುವ ಹಾಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಕೂಡ ಸಂಪುಟ ಸೇರುವ ಮಹದಾಸೆ ಇಟ್ಟುಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಎಲ್ಲ ಕಾರಣಗಳಿಂದ ಈ ಬಾರಿ ರಚನೆಯಾಗಲಿರುವ ಕಾಂಗ್ರೆಸ್ ಸರ್ಕಾರದಲ್ಲಿ 50ರಿಂದ 60ರಷ್ಟುಸಚಿವ ಸ್ಥಾನದ ಆಕಾಂಕ್ಷಿಗಳಿಂದ ಪೈಪೋಟಿ ಎದುರಾಗಲಿದೆ ಎನ್ನುತ್ತಿವೆ ಪಕ್ಷದ ಮೂಲಗಳು.
ಮಹತ್ವದ ಖಾತೆಗಳಿಗೆ ತೀವ್ರ ಪೈಪೋಟಿ: ಅಷ್ಟೇ ಅಲ್ಲ, ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಘಟಾನುಘಟಿಗಳೇ ಹೆಚ್ಚಾಗಿರುವುದರಿಂದ ಕಂದಾಯ, ಗೃಹ, ಇಂಧನ, ಜಲಸಂಪನ್ಮೂಲ, ಬೆಂಗಳೂರು ನಗರಾಭಿವೃದ್ಧಿ, ಲೋಕೋಪಯೋಗಿ, ಶಿಕ್ಷಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸೇರಿದಂತೆ ಪ್ರಮುಖವಾದ ಪ್ರತಿ ಖಾತೆಗೂ ಹಲವು ನಾಯಕರ ನಡುವೆ ಪೈಪೋಟಿ ಎದುರಾಗುವ ಲಕ್ಷಣಗಳಿವೆ. ಮಾಹಿತಿ ಪ್ರಕಾರ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದರೆ ಹಣಕಾಸು, ಸಿಬ್ಬಂದಿ ಆಡಳಿತ ಸುಧಾರಣೆ ಸೇರಿದಂತೆ ಇನ್ನಿತರೆ ಇಲಾಖೆಗಳು ಅವರಲ್ಲೇ ಉಳಿಯಲಿವೆ.
ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾದರೂ ಹಣಕಾಸು ಜತೆಗೆ ಇಂಧನ ಸೇರಿದಂತೆ ಇನ್ನು ಕೆಲ ಇಲಾಖೆಗಳು ಅವರಲ್ಲೇ ಉಳಿಯುವು ಸಾಧ್ಯತೆ ಇದೆ. ಇನ್ನು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಈ ಬಾರಿ ಕಂದಾಯ ಖಾತೆಯ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ಜತೆಗೆ ಕೆ.ಎಚ್.ಮುನಿಯಪ್ಪ, ಎಚ್.ಡಿ.ಮಹದೇವಪ್ಪ ಕೂಡ ಈ ಖಾತೆಯ ಆಕಾಂಕ್ಷಿಗಳಾಗಿದ್ದಾರೆ ಎನ್ನಲಾಗುತ್ತಿದೆ. ಕೆ.ಜೆ.ಜಾಜ್‌ರ್, ರಾಮಲಿಂಗಾರೆಡ್ಡಿ, ಕೃಷ್ಣ ಭೈರೇಗೌಡ ಅವರಲ್ಲದೆ ಬೈರತಿ ಸುರೇಶ್ ಕೂಡ ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಕೇಳಬಹುದು ಎಂಬ ಮಾತು ಕೇಳಿಬರುತ್ತಿವೆ. ಇನ್ನು, ಬೃಹತ್ ನೀರಾವರಿ ಖಾತೆ ಪಡೆಯಲು ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲ್, ಸತೀಶ್ ಜಾರಕಿಹೊಳಿ ಪ್ರಯತ್ನ ನಡೆಸಬಹುದು.
ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಸಿಗದೆ ಹೋದರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಜತೆಗೆ ಕೃಷ್ಣ ಬೈರೇಗೌಡ ಬೇಡಿಕೆ ಇಡಬಹುದು. ಜತೆಗೆ ಅರ್ಹ ವ್ಯಕ್ತಿ ಎನ್ನುವ ಕಾರಣಕ್ಕೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆಯನ್ನೂ ಅವರಿಗೇ ನೀಡಬಹುದು ಎನ್ನಲಾಗುತ್ತಿದೆ. ಆದರೆ ಈ ಎರಡೂ ಖಾತೆಗಳ ಮೇಲೆ ಹಿರಿಯ ಶಾಸಕರಾದ ಎಚ್.ಕೆ.ಪಾಟೀಲ್ ಕೂಡ ಕಣ್ಣಿಟ್ಟಿದ್ದಾರಂತೆ. 9ನೇ ಬಾರಿಗೆ ಶಾಸಕರಾಗಿರುವ ಆರ್.ವಿ.ದೇಶಪಾಂಡೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಖಾತೆ, ಪ್ರಿಯಾಂಕ ಖರ್ಗೆ ಸಮಾಜ ಕಲ್ಯಾಣ ಇಲಾಖೆ, ಕೆ.ಎನ್.ರಾಜಣ್ಣ ಸಹಕಾರ ಇಲಾಖೆ, ಶಿವಲಿಂಗೇಗೌಡ ಸಣ್ಣನೀರಾವರಿ, ಲಕ್ಷ್ಮಣ ಸವದಿ ಸಾರಿಗೆ ಖಾತೆ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಾಲಿಗದೆ. ಹೀಗೆ ಒಬ್ಬೊಬ್ಬ ಆಕಾಂಕ್ಷಿಗಳೂ ಒಂದೊಂದು ಖಾತೆಗಳ ಮೇಲೆ ಕಣ್ಣಿಟ್ಟಿದ್ದಾರೆ ಎನ್ನುತ್ತವೆ ಪಕ್ಷದ ಮೂಲಗಳು.
ಸಿದ್ದು VS ಡಿಕೆಶಿ: ಮುಖ್ಯಮಂತ್ರಿ ಆಯ್ಕೆ ಹೈಕಮಾಂಡ್ ಅಂಗಳಕ್ಕೆ
ಪ್ರಮುಖ ಸಚಿವ ಸ್ಥಾನದ ಆಕಾಂಕ್ಷಿಗಳು: ಡಾ.ಜಿ.ಪರಮೇಶ್ವರ್, ಆರ್.ವಿ.ದೇಶಪಾಂಡೆ, ಸಲೀಂ ಅಹಮದ್, ಬೈರತಿ ಸುರೇಶ್, ಎಂ.ಬಿ.ಪಾಟೀಲ್, ಶಾಮನೂರು ಶಿವಶಂಕರಪ್ಪ/ಎಸ್.ಎಸ್.ಮಲ್ಲಿಕಾರ್ಜುನ್, ಕೆ.ಎಚ್.ಮುನಿಯಪ್ಪ, ಎಚ್.ಸಿ.ಮಹದೇವಪ್ಪ, ಎಚ್.ಕೆ.ಪಾಟೀಲ್, ಸತೀಶ್ ಜಾರಕಿಹೊಳಿ, ಟಿ.ಬಿ.ಜಯಚಂದ್ರ, ರಾಮಲಿಂಗಾರೆಡ್ಡಿ, ಕೆ.ಜೆ.ಜಾಜ್‌ರ್, ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್, ನರೇಂದ್ರಸ್ವಾಮಿ, ಶಿವರಾಜ ತಂಗಡಗಿ, ಯು.ಟಿ.ಖಾದರ್, ಪ್ರಿಯಾಂಕ್ ಖರ್ಗೆ, ಬಿ.ಕೆ.ಹರಿಪ್ರಸಾದ್, ಶಿವಾನಂದ ಪಾಟೀಲ್, ಈಶ್ವರ್ ಖಂಡ್ರೆ, ಜಮೀರ್ ಅಹಮದ್ ಖಾನ್, ತನ್ವೀರ್ ಸೇಠ್, ಇ.ತುಕಾರಾಂ, ಲಕ್ಷ್ಮಿ ಹೆಬ್ಬಾಳ್ಕರ್, ಸಂತೋಷ್ ಲಾಡ್, ಕೆ.ಎನ್.ರಾಜಣ್ಣ, ಎನ್.ಎ.ಹ್ಯಾರಿಸ್, ಸಲೀಂ ಅಹಮದ್, ಟಿ.ಡಿ. ರಾಜೇಗೌಡ, ಶಿವಲಿಂಗೇಗೌಡ, ಚಲುವರಾಯಸ್ವಾಮಿ, ಎ.ಎಸ್. ಪೊನ್ನಣ್ಣ, ಮಧು ಬಂಗಾರಪ್ಪ, ಕೂಡ್ಲಿಗಿ ನಾಗೇಂದ್ರ, ಚಿಂತಾಮಣಿ ಸುಧಾಕರ್, ವಿನಯ್ ಕುಲಕರ್ಣಿ, ಪ್ರಸಾದ್ ಅಬ್ಬಯ್ಯ ಹಾಗೂ ರಘು ಮೂರ್ತಿ.