ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿರುವ ಕ್ಷೇತ್ರ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್. ಕಳೆದ 6 ಅವಧಿಯಿಂದ ಮಾಜಿ ಸಿಎಂ ಜಗದೀಶ ಶೆಟ್ಟರ್ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಈ ಸಲವೂ ಬಿಜೆಪಿಯಿಂದ ಅವರ ಸ್ಪರ್ಧೆ ಬಹುತೇಕ ಖಚಿತ.
ಶಿವಾನಂದ ಗೊಂಬಿ
ಹುಬ್ಬಳ್ಳಿ (ಮಾ.6) : ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿರುವ ಕ್ಷೇತ್ರ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್. ಕಳೆದ 6 ಅವಧಿಯಿಂದ ಮಾಜಿ ಸಿಎಂ ಜಗದೀಶ ಶೆಟ್ಟರ್ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಈ ಸಲವೂ ಬಿಜೆಪಿಯಿಂದ ಅವರ ಸ್ಪರ್ಧೆ ಬಹುತೇಕ ಖಚಿತ.
ಶೆಟ್ಟರ್ (Jagadish shettar)ಗೆ ಪಕ್ಷದಲ್ಲಿ ಎದುರಾಳಿಗಳಾಗಲಿ, ಆಕಾಂಕ್ಷಿಗಳಾಗಲಿ ಇರಲಿಲ್ಲ. ಈ ಮಧ್ಯೆ, ಗುಜರಾತ್ ಹಾಗೂ ಉತ್ತರ ಪ್ರದೇಶ ಮಾದರಿ(Gujarat and UP model)ಯಲ್ಲಿ ಹಿರಿಯರಿಗೆ ವಿಶ್ರಾಂತಿ ನೀಡಿ ಹೊಸಬರಿಗೆ ಅವಕಾಶ ನೀಡಲಾಗುತ್ತದೆ ಎಂಬ ಗುಲ್ಲು ಹಬ್ಬಿದೆ. ಹಾಗೊಂದು ವೇಳೆ ಶೆಟ್ಟರ್ ಬದಲು ಪರ್ಯಾಯ ಅಭ್ಯರ್ಥಿ ಬಗ್ಗೆ ಯೋಚಿಸಿದರೆ, ನಮಗೂ ಅವಕಾಶ ಕೊಡಿ ಎಂಬ ಬೇಡಿಕೆ ಪಕ್ಷದಲ್ಲಿ ಹಲವರಿಂದ ಕೇಳಿ ಬಂದಿದೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ(Mahesh tenginayi), ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಕಾಂಗ್ರೆಸ್ಸಿನಿಂದ 2 ಬಾರಿ ಸ್ಪರ್ಧಿಸಿ ಶೆಟ್ಟರ್ ವಿರುದ್ಧವೇ ಸೋತು ಬಿಜೆಪಿ ಸೇರಿರುವ ಡಾ.ಮಹೇಶ ನಾಲವಾಡ, ಆರ್‌ಎಸ್‌ಎಸ್ ಮೂಲದ ಜಯತೀರ್ಥ ಕಟ್ಟಿಹೆಸರುಗಳು ಚಾಲ್ತಿಗೆ ಬಂದಿವೆ.
Interview: ನಿರೀಕ್ಷೆಯಂತೆ ಪಕ್ಷ ನನ್ನನ್ನು ಬಳಸಿಕೊಳ್ತಿಲ್ಲ: ಜಗದೀಶ ಶೆಟ್ಟರ್
ಕಳೆದ 2 ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಡಾ.ಮಹೇಶ ನಾಲವಾಡ ಈಗ ಬಿಜೆಪಿ ಸೇರಿದ್ದಾರೆ. ಶೆಟ್ಟರ್ ವಿರುದ್ಧ ಈ ಹಿಂದೆ ಸ್ಪರ್ಧಿಸಿದವರೆಲ್ಲರೂ ಇದೀಗ ಬಿಜೆಪಿಯಲ್ಲಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಶಂಕರಣ್ಣ ಮುನವಳ್ಳಿ, ಮಹೇಶ ನಾಲವಾಡ, ರಾಜಣ್ಣ ಕೊರವಿ ಇವರಲ್ಲಿ ಪ್ರಮುಖರು. ಕಳೆದ 6 ಅವಧಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಎಂತಹುದೇ ಪ್ರಯೋಗ ಮಾಡಿದರೂ ಶೆಟ್ಟರ್ ಗೆಲುವಿಗೆ ಧಕ್ಕೆ ಬಂದಿಲ್ಲ.
ಉಳಿದಂತೆ, ಕಾಂಗ್ರೆಸ್(Congress)ನಲ್ಲಿ ಟಿಕೆಟ್‌ಗಾಗಿ 9 ಜನ ಪೈಪೋಟಿ(Ticket fight)ಗೆ ಇಳಿದಿದ್ದಾರೆ. ಇವರಲ್ಲಿ ಅನಿಲಕುಮಾರ ಪಾಟೀಲ ಅವರನ್ನು ಹೊರತುಪಡಿಸಿ ಉಳಿದವರೆಲ್ಲರೂ ಹೊಸಬರೇ. ಇವರಲ್ಲಿ ಮಾಜಿ ಮೇಯರ್ ಅನಿಲಕುಮಾರ ಪಾಟೀಲ, ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷ ಸದಾನಂದ ಡಂಗನವರ, ಸಿದ್ದರಾಮಯ್ಯ ಅಭಿಮಾನಿಗಳ ಸಂಘದ ಅಧ್ಯಕ್ಷ ಗಿರೀಶ ಗದಿಗೆಪ್ಪಗೌಡರ, ಶಾಸಕಿ ಲಕ್ಷ್ಮೇ ಹೆಬ್ಬಾಳಕರ ಅಳಿಯ ರಜತ್ ಉಳ್ಳಾಗಡ್ಡಿಮಠ, ಮೆಹಬೂಬ ಬಾಷಾ, ಯೂಸೂಫ್ ಸವಣೂರು, ಸತೀಶ ಮೆಹರವಾಡೆ ಸೇರಿದ್ದಾರೆ.
ಇನ್ನು ಆಪ್, ಎಐಎಂಐಎಂ, ಜೆಡಿಎಸ್‌ಗಳು ಕೂಡ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತಯಾರಿ ನಡೆಸಿವೆ. ಬಸವರಾಜ ಹೊರಟ್ಟಿ, ರಾಜಣ್ಣ ಕೊರವಿ, ಜೆಡಿಎಸ್ ಬಿಟ್ಟು ಬಿಜೆಪಿ ಸೇರಿರುವುದರಿಂದ ಆ ಪಕ್ಷ ಇದ್ದೂ ಇಲ್ಲದಂತಾಗಿದೆ. ಈ ಮಧ್ಯೆ, ರಾಜು ನಾಯಕವಾಡಿ, ತುಳಸಿಕಾಂತ ಖೋಡೆ ಜೆಡಿಎಸ್‌ನ ಪ್ರಮುಖ ಟಿಕೆಟ್ ಆಕಾಂಕ್ಷಿಗಳು. ಆಪ್‌ನಿಂದ ಕಣಕ್ಕಿಳಿಯಲು ವಿಕಾಸ ಸೊಪ್ಪಿನ ಹಾಗೂ ಓವೈಸಿಯ ಎಐಎಂಐಎಂನಿಂದ ಕಣಕ್ಕಿಳಿಯಲು ಮುನ್ನಾ ಕಿತ್ತೂರ ಯತ್ನ ನಡೆಸುತ್ತಿದ್ದಾರೆ.
ಕ್ಷೇತ್ರದ ಹಿನ್ನೆಲೆ:
ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರವಾಗಿದ್ದ ಇದು, 2008ರಲ್ಲಿ ನಡೆದ ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಸೆಂಟ್ರಲ್ ಕ್ಷೇತ್ರವಾಗಿದೆ. 1957ರಿಂದ ಇಲ್ಲಿ ನಡೆದ 14 ಚುನಾವಣೆಯಲ್ಲಿ ಕಾಂಗ್ರೆಸ್ 5 ಬಾರಿ ಗೆದ್ದರೆ, 3 ಬಾರಿ ಜನತಾ ಪಕ್ಷ (ಜೆಎನ್‌ಪಿ) ಗೆಲುವು ಕಂಡಿದೆ. 1994ರಿಂದ ಈವರೆಗೆ ನಡೆದ 6 ಚುನಾವಣೆಗಳಲ್ಲಿ ಬಿಜೆಪಿಯೇ ಗೆಲುವು ಕಂಡಿದ್ದು, ಶೆಟ್ಟರ್ ಅವರೇ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ, ಈ ಕ್ಷೇತ್ರ ಬಿಜೆಪಿಯ ಭದ್ರಕೋಟೆ ಎನಿಸಿದೆ. ರಾಜ್ಯಕ್ಕೆ ಎಸ್.ಆರ್.ಬೊಮ್ಮಾಯಿ ಹಾಗೂ ಜಗದೀಶ ಶೆಟ್ಟರ್‌ರನ್ನು ಮುಖ್ಯಮಂತ್ರಿಯಾಗಿ ನೀಡಿದ ಕ್ಷೇತ್ರವಿದು.
ಜಾತಿ ಲೆಕ್ಕಾಚಾರ:
ಕ್ಷೇತ್ರದಲ್ಲಿ 2.43 ಲಕ್ಷಕ್ಕೂ ಅಧಿಕ ಮತದಾರರಿದ್ದಾರೆ. ಇವರಲ್ಲಿ ಲಿಂಗಾಯತರು 75 ಸಾವಿರ, ಮುಸ್ಲಿಮರು 45 ಸಾವಿರ, ಎಸ್‌ಎಸ್‌ಕೆ 25 ಸಾವಿರ, ಬ್ರಾಹ್ಮಣರು 10 ಸಾವಿರ, ಒಬಿಸಿ 33 ಸಾವಿರ, ಎಸ್ಸಿ/ಎಸ್ಟಿ 40 ಸಾವಿರ, ಕ್ರಿಶ್ಚಿಯನ್ನರು 15 ಸಾವಿರ ಇದ್ದಾರೆ. ಲಿಂಗಾಯತ ಮತದಾರರೇ ಇಲ್ಲಿ ನಿರ್ಣಾಯಕ.
ವಿಧಾನಸಭೆ: ಆಟೋ ಚಾಲಕರಿಗೆ ನಿಗಮ ಸ್ಥಾಪಿಸಿ: ಜಗದೀಶ್ ಶೆಟ್ಟರ್
ಆಕಾಂಕ್ಷಿಗಳ ಪೈಕಿ ಕೆಲವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ(DK Shivakumar) ಬಣದವರಾಗಿದ್ದರೆ, ಕೆಲವರು ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಜತೆ ಗುರುತಿಸಿಕೊಂಡವರು. ಟಿಕೆಟ್ ತರುವಲ್ಲಿ ಯಾವ ಬಣ ಮೇಲುಗೈ ಸಾಧಿಸುತ್ತದೆ ಎಂಬುದು ಈಗಿನ ಕುತೂಹಲ. ಆದರೆ, ಅನಿಲಕುಮಾರ, ಡಂಗನವರ, ಗದಿಗೆಪ್ಪಗೌಡರ, ಉಳ್ಳಾಗಡ್ಡಿಮಠ, ಯೂಸೂಫ್ ಸವಣೂರು, ಮೆಹಬೂಬ ಬಾಷಾ ಈಗಿನಿಂದಲೇ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಹೀಗಾಗಿ, ಈ ಬಾರಿ ಶೆಟ್ಟರ್ ಎದುರಾಳಿಯಾಗಿ ಹಳಬರು ನಿಲ್ಲುತ್ತಾರಾ? ಅಥವಾ ಹೊಸಬರು ತೊಡೆ ತಟ್ಟುತ್ತಾರಾ? ಎಂಬುದು ಟಿಕೆಟ್ ಘೋಷಣೆ ನಂತರವೇ ಗೊತ್ತಾಗಲಿದೆ.