Shivamogga: ಬಿಎಸ್‌ವೈ, ಈಶ್ವರಪ್ಪ, ಕಾಗೋಡು ಚುನಾವಣೆ ನಿವೃತ್ತಿಯ ಬಳಿಕದ ಮೊದಲ ಚುನಾವಣೆ: ಮ್ಯಾಜಿಕ್‌ ನಿರೀಕ್ಷೆ

By Kannadaprabha News  |  First Published Apr 24, 2023, 5:53 AM IST

ಸಮಾಜವಾದಿ ನೆಲೆಗೆ ಮುನ್ನುಡಿ ಬರೆದು, ಬಳಿಕ ಕಾಂಗ್ರೆಸ್‌ ತೆಕ್ಕೆಗೆ ಜಾರಿ, ನಂತರ ಬಂಗಾರಪ್ಪ ಮೇನಿಯಾದಲ್ಲಿ ಮಿಂದೆದ್ದು, ಅಂತಿಮವಾಗಿ ಬಿಜೆಪಿ ಭದ್ರಕೋಟೆಯಾಗಿ ರೂಪುಗೊಂಡ ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಚುನಾವಣೆಯಲ್ಲಿ 7 ಕ್ಷೇತ್ರಗಳ ಪೈಕಿ 6ರಲ್ಲಿ ಕಮಲ ಅರಳಿತ್ತು.


ಗೋಪಾಲ್‌ ಯಡಗೆರೆ

ಶಿವಮೊಗ್ಗ (ಏ.24): ಸಮಾಜವಾದಿ ನೆಲೆಗೆ ಮುನ್ನುಡಿ ಬರೆದು, ಬಳಿಕ ಕಾಂಗ್ರೆಸ್‌ ತೆಕ್ಕೆಗೆ ಜಾರಿ, ನಂತರ ಬಂಗಾರಪ್ಪ ಮೇನಿಯಾದಲ್ಲಿ ಮಿಂದೆದ್ದು, ಅಂತಿಮವಾಗಿ ಬಿಜೆಪಿ ಭದ್ರಕೋಟೆಯಾಗಿ ರೂಪುಗೊಂಡ ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಚುನಾವಣೆಯಲ್ಲಿ 7 ಕ್ಷೇತ್ರಗಳ ಪೈಕಿ 6ರಲ್ಲಿ ಕಮಲ ಅರಳಿತ್ತು. ಯಡಿಯೂರಪ್ಪ, ಈಶ್ವರಪ್ಪ, ಕಾಗೋಡು ತಿಮ್ಮಪ್ಪನವರಂತಹ ನಾಯಕರ ನಿವೃತ್ತಿಯ ಬಳಿಕದ ಮೊದಲ ಚುನಾವಣೆ ಇದಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಹಿರಿಯ ನಾಯಕರ ನಿವೃತ್ತಿ, ಬಂಡಾಯ ಅಭ್ಯರ್ಥಿಗಳ ಬಿಸಿ ತಾಗಿದೆ. ಕೇಸರಿ ನಾಡಲ್ಲಿ ‘ಕೈ’ ಎತ್ತಲು ಕಾಂಗ್ರೆಸ್‌, ‘ತೆನೆ’ ಕಟ್ಟಲು ಜೆಡಿಎಸ್‌ ತೀವ್ರ ಕಸರತ್ತು ನಡೆಸಿದ್ದರೆ, ನಾಯಕರನ್ನು ಕಳೆದುಕೊಂಡ ಬಿಜೆಪಿ, ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದೆ.

Tap to resize

Latest Videos

ಹೊಸ ರಾಜಕೀಯ ಸಮೀಕರಣಕ್ಕೆ ಮುನ್ನುಡಿ
ಶಿವಮೊಗ್ಗ ನಗರ:
ಬಿಜೆಪಿಯ ಭದ್ರಕೋಟೆ, ಹಿಂದುತ್ವದ ಪ್ರಯೋಗ ಶಾಲೆ ಎಂದೆನಿಸಿಕೊಂಡ ಈ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಪಾಳಯದಲ್ಲಿ ಸಣ್ಣ ಕಂಪನ ಉಂಟಾಗಿದೆ. ಪ್ರಬಲ ನಾಯಕ ಕೆ.ಎಸ್‌.ಈಶ್ವರಪ್ಪನವರ ರಾಜಕೀಯ ನಿವೃತ್ತಿ ಮತ್ತು ಅವರ ಕುಟುಂಬಕ್ಕೆ ಟಿಕೆಟ್‌ ನಿರಾಕರಿಸಿರುವುದು ಹೊಸ ರಾಜಕೀಯ ಸಮೀಕರಣಕ್ಕೆ ಮುನ್ನುಡಿ ಬರೆದಿದೆ. ಹೊಸ ಮುಖವಾಗಿ ಎಸ್‌.ಎನ್‌.ಚನ್ನಬಸಪ್ಪರನ್ನು ಬಿಜೆಪಿ ಕಣಕ್ಕೆ ಇಳಿಸಿದೆ. ಸಂಘ ಪರಿವಾರದ ಬೆಂಬಲ, ಈಶ್ವರಪ್ಪ ಯುದ್ಧದ ಸೇನಾಧಿಪತಿಯಾಗಲು ಸನ್ನದ್ಧರಾಗಿರುವುದು ಇವರಿಗೆ ನೆಮ್ಮದಿಯ ಸಂಗತಿ. ಬಿಜೆಪಿಯ ಹಿರಿಯ ನಾಯಕ ಆಯನೂರು ಮಂಜುನಾಥ್‌ ಪಕ್ಷ ತೊರೆದು ಜೆಡಿಎಸ್‌ ಸೇರ್ಪಡೆಗೊಂಡಿರುವುದು ರಾಜಕೀಯ ಲೆಕ್ಕಾಚಾರವನ್ನು ಉಲ್ಟಾಪಲ್ಟಾಮಾಡುತ್ತಿದೆ. ಇದುವರೆಗೆ ಇಲ್ಲಿ ಗೆಲುವು ಸಾಧಿಸದ ಜೆಡಿಎಸ್‌ಗೆ ಈಗ ಹೊಸ ಹುರುಪು ಬಂದಿದೆ. 

ಇಂದು ಗುಂಡ್ಲುಪೇಟೆ, ಆಲೂರಲ್ಲಿ ಅಮಿತ್‌ ಶಾ ಬೃಹತ್‌ ರೋಡ್‌ ಶೋ

ಕಾಂಗ್ರೆಸ್‌ನ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್‌ ಕೂಡ ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರಿರುವುದು ಆಯನೂರಿಗೆ ಲಾಭವಾಗಿದೆ. ಬ್ರಾಹ್ಮಣ ಮತ್ತು ಮುಸ್ಲಿಂ ಸಮುದಾಯದ ಒಂದಿಷ್ಟುಮತಗಳನ್ನು ಹಿಡಿದಿಟ್ಟುಕೊಂಡಿರುವ ಪ್ರಸನ್ನಕುಮಾರ್‌ ಮತ್ತು ಲಾಗಾಯ್ತಿನಿಂದಲೂ ತಮ್ಮದೇ ಆದ ಮತ ಬ್ಯಾಂಕ್‌ ಸೃಷ್ಟಿಸಿಕೊಂಡ ಜೆಡಿಎಸ್‌ ಅಧ್ಯಕ್ಷ ಎಂ.ಶ್ರೀಕಾಂತ್‌ ಇದನ್ನು ಆಯನೂರುಗೆ ಹೇಗೆ ವರ್ಗಾಯಿಸುತ್ತಾರೆ ಎಂಬುದರ ಮೇಲೆ ಫಲಿತಾಂಶ ನಿಂತಿದೆ. ಕಾಂಗ್ರೆಸ್‌ ಅಭ್ಯರ್ಥಿಯಾಗಿ ಪಾಲಿಕೆ ಸದಸ್ಯ, ಬಲಾಢ್ಯ ಸಾಧು ಲಿಂಗಾಯಿತ ಜಾತಿಯ ಎಚ್‌.ಸಿ.ಯೋಗೀಶ್‌ ಸ್ಪರ್ಧಿಸಿದ್ದು, ಇದು ಜಾತಿ ಲೆಕ್ಕಾಚಾರಕ್ಕೆ ಮುನ್ನುಡಿ ಬರೆದಿದೆ. ಪ್ರಖರ ಹಿಂದುತ್ವವಾದಿ ಚನ್ನಬಸಪ್ಪಗೆ ಬಿಜೆಪಿ ಟಿಕೆಟ್‌ ನೀಡಿರುವುದರಿಂದ ಮುಸ್ಲಿಂ ಸಮುದಾಯ ಸಾರಾಸಗಟಾಗಿ ತಮ್ಮನ್ನು ಬೆಂಬಲಿಸಲಿದೆ ಎಂಬುದು ಯೋಗೀಶ್‌ ಲೆಕ್ಕಾಚಾರ.

ಯಡಿಯೂರಪ್ಪ ನಿವೃತ್ತಿ ನಂತರದ ಚುನಾವಣೆ
ಶಿಕಾರಿಪುರ:
ಯಡಿಯೂರಪ್ಪ ಅವರ ರಾಜಕೀಯ ಕರ್ಮಭೂಮಿಯಾಗಿ, ಅವರ ರಾಜಕೀಯ ಜೀವನದ ಉತ್ತುಂಗಕ್ಕೆ ಸಾಕ್ಷಿಯಾದ ಈ ಕ್ಷೇತ್ರದಲ್ಲೀಗ ಬಿಜೆಪಿ, ಕಾಂಗ್ರೆಸ್‌ ಮತ್ತು ಪಕ್ಷೇತರ ಅಭ್ಯರ್ಥಿಯ ನಡುವೆ ಜಿದ್ದಾಜಿದ್ದಿ ಸ್ಪರ್ಧೆ ನಡೆಯಲಿದೆ. ಬಿಜೆಪಿಯಿಂದ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಸ್ಪರ್ಧಿಸಿದ್ದು, ರಾಜ್ಯಮಟ್ಟದ ನಾಯಕನ ವರ್ಚಸ್ಸಿನ ಕಾರಣಕ್ಕೆ ವಿಜಯೇಂದ್ರ ಪ್ರಬಲ ಅಭ್ಯರ್ಥಿಯಾಗಿ ಹೊರ ಹೊಮ್ಮಲಿದ್ದಾರೆ. ಜೊತೆಗೆ ಯಡಿಯೂರಪ್ಪ ಕುಟುಂಬ ಜೊತೆಯಾಗಿ ನಿಲ್ಲಲಿದೆ. 40 ವರ್ಷದ ರಾಜಕೀಯ ತಂತ್ರಗಾರಿಕೆಯ ಗರಿಷ್ಟಪ್ರಯೋಗ ಈ ಬಾರಿ ನಡೆಯಲಿದೆ.

ಕಾಂಗ್ರೆಸ್‌ನಿಂದ ಹಿಂದಿನ ಬಾರಿ ಸ್ಪರ್ಧಿಸಿ ಸೋಲು ಕಂಡಿದ್ದ ಗೋಣಿ ಮಾಲತೇಶ್‌ ಪುನ: ಸ್ಪರ್ಧೆಗೆ ಇಳಿದಿದ್ದು, ಒಂದಿಷ್ಟುಕಠಿಣ ಸ್ಪರ್ಧೆ ಒಡ್ಡುವ ಸಾಧ್ಯತೆ ಇದೆ. ಇನ್ನು, ಈ ಬಾರಿ ಕಾಂಗ್ರೆಸ್‌ ಟಿಕೆಟ್‌ ವಂಚಿತ ನಾಗರಾಜಗೌಡ ಅವರು ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದಾರೆ. ಇವರಿಗೆ ಇನ್ನೋರ್ವ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ರಾಘವೇಂದ್ರ ನಾಯ್‌್ಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ, ಒಂದು ಕಾಲದಲ್ಲಿ ಬಿಎಸ್‌ವೈ ಆಪ್ತರೂ ಆಗಿದ್ದ ಶಾಂತವೀರಪ್ಪ ಗೌಡ ಕೂಡ ಕಾಂಗ್ರೆಸ್‌ ತೊರೆದು ನಾಗರಾಜಗೌಡರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಇವರು ವಿಜಯೇಂದ್ರಗೆ ಪೈಪೋಟಿ ನೀಡುವುದು ಖಚಿತ. ಇಲ್ಲೀಗ ತ್ರಿಕೋಣ ಸ್ಪರ್ಧೆ ಏರ್ಪಟ್ಟಿದ್ದು, ಇದರ ಲಾಭ ಯಾರಿಗೆ ಎಂಬುದನ್ನು ಕಾದು ನೋಡಬೇಕು. ಜೆಡಿಎಸ್‌ ನಾಯಕ ಬಳಿಗಾರ್‌ ಬಿಜೆಪಿ ಸೇರಿದ್ದು, ಜೆಡಿಎಸ್‌ಗೆ ಕಾರ್ಯಕರ್ತರೇ ಇಲ್ಲ. ಆದರೂ, ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದೆ.

ಕಿಮ್ಮನೆ, ಆರಗ ನಡುವೆ ನೇರ ಹಣಾಹಣಿ
ತೀರ್ಥಹಳ್ಳಿ:
ತೀರ್ಥಹಳ್ಳಿಯಲ್ಲಿ ಈ ಬಾರಿ ಕಾಂಗ್ರೆಸ್‌ನ ಕಿಮ್ಮನೆ ರತ್ನಾಕರ್‌ ಮತ್ತು ಬಿಜೆಪಿಯ ಬಿಜೆಪಿಯ ಆರಗ ಜ್ಞಾನೇಂದ್ರ ನಡುವೆ ನೇರ ಹಣಾಹಣಿ ನಡೆಯಲಿದೆ. ಇಲ್ಲಿ ಲಾಗಾಯ್ತಿನಿಂದಲೂ ಕಿಮ್ಮನೆ ರತ್ನಾಕರ್‌, ಆರಗ ಜ್ಞಾನೇಂದ್ರ ಮತ್ತು ಆರ್‌.ಎಂ.ಮಂಜುನಾಥಗೌಡ ಬದ್ಧ ರಾಜಕೀಯ ವೈರಿಗಳು. ಆದರೆ, ಈ ಬಾರಿ ಕಾಂಗ್ರೆಸ್‌ ಟಿಕೆಟ್‌ ವಂಚಿತ ಆರ್‌. ಎಂ. ಮಂಜುನಾಥಗೌಡ ಅವರು ಪಕ್ಷದ ಹಿರಿಯ ನಾಯಕರಿಗೆ ಮಾತುಕೊಟ್ಟಂತೆ ಕಾಂಗ್ರೆಸ್‌ ಅಭ್ಯರ್ಥಿ ಕಿಮ್ಮನೆ ರತ್ನಾಕರ್‌ ಅವರನ್ನು ಬೆಂಬಲಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಕಿಮ್ಮನೆ ಮತ್ತು ಮಂಜುನಾಥಗೌಡ ಅವರು ರಾಜಕೀಯ ದ್ವೇಷ ಮರೆತು ಒಂದಾಗಿದ್ದಾರೆ.

10ನೇ ಬಾರಿ ಒಂದೇ ಪಕ್ಷ ಮತ್ತು ಒಂದೇ ಚಿಹ್ನೆಯಡಿ ಸ್ಪರ್ಧಿಸುತ್ತಿರುವ ಆರಗ ಜ್ಞಾನೇಂದ್ರಗೆ ಕೂಡ ಸರಳ, ಸಜ್ಜನ ಎಂಬ ಹೆಸರಿದೆ. ಮೊದಲ ಬಾರಿಗೆ ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕ್ಷೇತ್ರಕ್ಕೆ ತಂದ ಅನುದಾನ, ಮಾಡಿದ ಕೆಲಸ ಇವರಿಗೆ ನೆರವಾಗಲಿದೆ. ಜೊತೆಗೆ, ಮೋದಿಯವರ ವರ್ಚಸ್ಸು, ಪಕ್ಷ ಸಂಘಟನೆ ಕೂಡ ಜೊತೆಯಾಗಲಿದೆ ಎಂದು ಭಾವಿಸಿದ್ದಾರೆ. ಜೆಡಿಎಸ್‌ನಿಂದ ಯಡೂರು ರಾಜಾರಾಮ್‌ ಕಣಕ್ಕೆ ಇಳಿದಿದ್ದಾರೆ. ಇದೇ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದ್ದು, ಕುಮಾರಸ್ವಾಮಿ ವರ್ಚಸ್ಸನ್ನು ಪಣಕ್ಕಿಟ್ಟು ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ.

ಮತ್ತೆ ಸೋದರರ ಸವಾಲ್‌
ಸೊರಬ:
ಬಂಗಾರಪ್ಪನವರ ಭದ್ರಕೋಟೆಯಲ್ಲಿ ಮತ್ತದೇ ಕುಟುಂಬದ ಸೋದರರು ಸವಾಲ್‌. ಬಿಜೆಪಿಯಿಂದ ಕುಮಾರ್‌ ಬಂಗಾರಪ್ಪ ಮತ್ತು ಕಾಂಗ್ರೆಸ್‌ನಿಂದ ಮಧು ಬಂಗಾರಪ್ಪ 5ನೇ ಬಾರಿಗೆ ಮುಖಾಮುಖಿಯಾಗಲಿದ್ದಾರೆ. 2018ರಲ್ಲಿ ಬಿಜೆಪಿ ಸೇರಿ ಗೆಲುವು ಕಂಡ ಕುಮಾರ್‌ ಬಂಗಾರಪ್ಪ, ಈ ಬಾರಿಯೂ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ನಮೋ ವೇದಿಕೆ ಇವರಿಗೆ ಟಿಕೆಟ್‌ ನೀಡಲೇಬಾರದು, ಟಿಕೆಟ್‌ ನೀಡಿದರೆ ಬಂಡಾಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಾಗಿ ಎಚ್ಚರಿಕೆ ನೀಡಿತ್ತು. ಈ ಸನ್ನಿವೇಶವನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ನೋಡಬೇಕಿದೆ.

ಸೋದರ ಕುಮಾರ್‌ ಬಂಗಾರಪ್ಪ ಅವರನ್ನು ವಿರೋಧಿಸುತ್ತಾ ಬಂದ ಮಧು ಬಂಗಾರಪ್ಪ ಅವರಿಗೆ ಬಂಗಾರಪ್ಪ ಕುಟುಂಬ ಸಾಥ್‌ ನೀಡುತ್ತಿದೆ. ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದು ಸ್ಪರ್ಧಿಸಿರುವ ಮಧು ಬಂಗಾರಪ್ಪ, ತಮ್ಮ ಪರ ಅನುಕಂಪ ಕೆಲಸ ಮಾಡಬಹುದು, ಬಹುಸಂಖ್ಯಾತ ಈಡಿಗ ಸಮಾಜ ತಮ್ಮ ಜೊತೆಗಿದೆ ಎಂಬ ಲೆಕ್ಕಾಚಾರ ಇಟ್ಟುಕೊಂಡಿದ್ದಾರೆ. ಜೆಡಿಎಸ್‌ ಅಭ್ಯರ್ಥಿಯಾಗಿ ಲಿಂಗಾಯಿತ ಸಮಾಜದ ಬಾಸೂರು ಚಂದ್ರೇಗೌಡ ಕಣಕ್ಕೆ ಇಳಿದಿದ್ದಾರೆ. ಇಲ್ಲಿ ಜೆಡಿಎಸ್‌ ಪ್ರಬಲ ಸಂಘಟನೆ ಹೊಂದಿಲ್ಲವಾದರೂ ಲಿಂಗಾಯಿತ ಸಮುದಾಯದ ಮತಗಳು ಸಾಕಷ್ಟಿವೆ. ಎಲ್ಲದಕ್ಕಿಂತ ಮುಖ್ಯವಾಗಿ ನಮೋ ವೇದಿಕೆ ಬಂಡಾಯ ಅಭ್ಯರ್ಥಿಯನ್ನು ನಿಲ್ಲಿಸಿಲ್ಲ. ಹೀಗಾಗಿ, ಬಾಸೂರು ಚಂದ್ರೇಗೌಡ ಅವರನ್ನು ಬೆಂಬಲಿಸುವ ಸಾಧ್ಯತೆ ದಟ್ಟವಾಗಿದೆ.

ಬಿಜೆಪಿಗೆ ತೊಡಕಾದ ಒಳ ಮೀಸಲಾತಿ ಕಿಚ್ಚು
ಶಿವಮೊಗ್ಗ ಗ್ರಾಮಾಂತರ:
ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರವಾದ ಇಲ್ಲಿ ಜೆಡಿಎಸ್‌, ಕಾಂಗ್ರೆಸ್‌ ಮತ್ತು ಬಿಜೆಪಿ ಮೂರೂ ಪಕ್ಷಗಳು ಸ್ಪರ್ಧಿಸಿದ್ದು, ಜಿದ್ದಾಜಿದ್ದಿಯ ಪೈಪೋಟಿ ನಡೆಸಲು ಸಜ್ಜಾಗಿವೆ. ಬಿಜೆಪಿಯಿಂದ ಹಾಲಿ ಶಾಸಕ ಕೆ.ಬಿ.ಅಶೋಕ್‌ ನಾಯ್‌್ಕ ಸ್ಪರ್ಧಿಸಿದ್ದು, ಈ ಬಾರಿಯೂ ಯಡಿಯೂರಪ್ಪ ಆಶೀರ್ವಾದೊಂದಿಗೆ ಗೆಲುವು ನನ್ನದೇ ಎನ್ನುತ್ತಿದ್ದಾರೆ. ಆದರೆ, ಸಾಮಾನ್ಯರೊಂದಿಗೆ ಬೆರೆಯುವುದಿಲ್ಲ ಎಂಬ ಅಪಸ್ವರದ ಮಾತುಗಳ ಜೊತೆಗೆ ಒಳ ಮೀಸಲಾತಿಯ ಕಿಚ್ಚು ಇವರಿಗೆ ತೊಡಕನ್ನು ಉಂಟು ಮಾಡಬಹುದು. ಆದರೆ, ಲಿಂಗಾಯತ ಸಮಾಜ ಇವರ ಕೈ ಹಿಡಿದರೆ ಹಾದಿ ಸುಲಭ.

ಜೆಡಿಎಸ್‌ನಿಂದ ಮಾಜಿ ಶಾಸಕಿ ಶಾರದಾ ಪೂರಾರ‍ಯನಾಯ್‌್ಕ ಕಣದಲ್ಲಿದ್ದು, ಸರಳ, ಸಜ್ಜನಿಕೆ ಇವರಿಗೆ ಇರುವ ಪ್ಲಸ್‌ ಪಾಯಿಂಟ್‌. ಜೊತೆಗೆ, 2018ರಲ್ಲಿ ಸೋತ ಬಳಿಕ ಮನೆಯಲ್ಲಿ ಕೂರದೆ ಇಡೀ ಐದು ವರ್ಷ ಕ್ಷೇತ್ರದಲ್ಲಿ ಜನರ ಕಷ್ಟಸುಖದಲ್ಲಿ ಭಾಗಿಯಾದರು ಎಂಬುದು ಅವರಿಗೆ ಇರುವ ಹೆಗ್ಗಳಿಕೆ. ಮೀಸಲಾತಿ ಕಿಚ್ಚಿನ ಲಾಭ, ಜೊತೆಗೆ, ಲಿಂಗಾಯಿತ ಸಮಾಜದ ಆಯನೂರು ಮಂಜುನಾಥ್‌ ಅವರು ಜೆಡಿಎಸ್‌ಗೆ ಬಂದಿರುವುದು ತಮಗೆ ಗ್ರಾಮಾಂತರ ಭಾಗದಲ್ಲಿ ಪ್ರಬಲವಾಗಿರುವ ಲಿಂಗಾಯಿತ ಸಮಾಜ ಜೊತೆಯಾಗಲು ಸಹಕಾರಿಯಾಗುತ್ತದೆ ಎಂಬುದು ಅವರ ಲೆಕ್ಕಾಚಾರ. ಕಾಂಗ್ರೆಸ್‌ ಅಭ್ಯರ್ಥಿ ಡಾ.ಶ್ರೀನಿವಾಸ್‌ ಕರಿಯಣ್ಣಗೆ ಬಂಡಾಯ ಅಭ್ಯರ್ಥಿಗಳದ್ದೇ ಸಮಸ್ಯೆ. ನಾರಾಯಣಸ್ವಾಮಿ, ಎಸ್‌.ರವಿಕುಮಾರ್‌, ಪಲ್ಲವಿ ಅವರ ಬಂಡಾಯ ಶಮನವಾದರೆ ಅಲ್ಪಸ್ವಲ್ಪ ನೆರವಾದೀತು.

ಕಾಗೋಡು ನಿವೃತ್ತಿ ಬಳಿಕದ ಮೊದಲ ಚುನಾವಣೆ:
ಸಾಗರ:
5 ದಶಕಗಳ ಕಾಲ ಕ್ಷೇತ್ರದಲ್ಲಿ ಪ್ರಭಾವಿ ನಾಯಕನಾಗಿ ಬೆಳೆದ ಕಾಗೋಡು ತಿಮ್ಮಪ್ಪ, ಇದೀಗ ಚುನಾವಣಾ ನಿವೃತ್ತಿ ಪಡೆದಿದ್ದಾರೆ. ಕಾಂಗ್ರೆಸ್‌ ಟಿಕೆಟ್‌ ಪಡೆಯಲು ಕಾಗೋಡು ಪುತ್ರಿ ಡಾ.ರಾಜನಂದಿನಿ ಯತ್ನ ನಡೆಸಿದ್ದರು. ಬೇಳೂರು ಗೋಪಾಲಕೃಷ್ಣ ಅವರಿಗೆ ಟಿಕೆಟ್‌ ನೀಡಬಾರದೆಂದು ವರಿಷ್ಟರ ಮುಂದೆ ಅಹವಾಲು ಇಟ್ಟಿದ್ದರು. ಆದರೆ, ಬೇಳೂರು ಅವರಿಗೇ ಪಕ್ಷ ಟಿಕೆಟ್‌ ಪ್ರಕಟಿಸಿದೆ. ಆದರೂ, ಪಕ್ಷನಿಷ್ಠೆಗೆ ಒಳಗಾಗಿ, ಕಾಗೋಡು ಅವರು ತಮ್ಮ ಅಳಿಯ ಬೇಳೂರು ಗೋಪಾಲಕೃಷ್ಣಗೆ ಬೆಂಬಲ ಘೋಷಿಸಿದ್ದಾರೆ. ಟಿಕೆಟ್‌ ಸಿಗದ್ದಕ್ಕೆ ಅಸಮಾಧಾನಗೊಂಡು, ಬಿಜೆಪಿಗೆ ಸೇರಿದ ಪುತ್ರಿ ರಾಜನಂದಿನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚದುರಿದ ನಾಯಕರ ಬೆಂಬಲ ಪಡೆಯುವ ಸವಾಲು ಬೇಳೂರು ಮೇಲಿದೆ. ಯುವ ಸಮುದಾಯ ಮತ್ತು ಈಡಿಗ ಸಮಾಜ ತಮ್ಮ ಜೊತೆಗೆ ಇರುವುದು ಲಾಭ ಎಂಬುದು ಅವರ ಲೆಕ್ಕಾಚಾರ.

ಬಿಜೆಪಿಯಿಂದ ಹಾಲಿ ಶಾಸಕ ಹರತಾಳು ಹಾಲಪ್ಪ ಸ್ಪರ್ಧಿಸಿದ್ದು, ತಂತ್ರಗಾರಿಕೆಯಲ್ಲಿ ನಿಪುಣರು. ಇಡೀ ಕ್ಷೇತ್ರದಲ್ಲಿ ಎಲ್ಲರ ಜೊತೆ ಬಾಂಧವ್ಯ ವೃದ್ಧಿಸಿಕೊಂಡಿದ್ದಾರೆ. ಆರಂಭದಲ್ಲಿ ಒಂದಿಷ್ಟುಮಂದಿ ಇವರ ಉಮೇದುವಾರಿಕೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಇದೆಲ್ಲವನ್ನೂ ತಣ್ಣಗೆ ಮಾಡಿ, ಡಾ.ರಾಜನಂದಿನಿ ಜೊತೆಗೆ ಹಲವಾರು ಪ್ರಮುಖರನ್ನು ಬಿಜೆಪಿಗೆ ಕರೆ ತಂದು ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿದ್ದಾರೆ. ಬ್ರಾಹ್ಮಣ ಸಮಾಜ ಕೂಡ ಬೆಂಬಲ ವ್ಯಕ್ತಪಡಿಸುವಂತೆ ನೋಡಿಕೊಂಡಿದ್ದಾರೆ. ಆಪ್‌ ಅಭ್ಯರ್ಥಿ ಕೆ.ದಿವಾಕರ್‌, ತಮ್ಮ ಅಸ್ತಿತ್ವ ಸಾಬೀತುಪಡಿಸುವ ಯತ್ನದಲ್ಲಿದ್ದಾರೆ. ಇನ್ನು, ಜೆಡಿಎಸ್‌ ಅಭ್ಯರ್ಥಿಯಾಗಿ ಸೈಯದ್‌ ಜಾಕೀರ್‌ ಉಮೇದುವಾರಿಕೆ ಸಲ್ಲಿಸಿದ್ದರೂ ಪ್ರಬಲ ಪೈಪೋಟಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ.

ರಾಹುಲ್‌ ಗಾಂಧಿ ಲಿಂಗಾಯತ ಮತ ಬೇಟೆ: ಬಸವಣ್ಣ ಬಗ್ಗೆ ಶ್ರೀಗಳಿಂದ ಮಾಹಿತಿ ಸಂಗ್ರಹ

ಅನುಕಂಪದ ಮತ ಬಂದರಷ್ಟೇ ಶಾರದಾಗೆ ಗೆಲುವು
ಭದ್ರಾವತಿ:
ಉಕ್ಕಿನ ನಗರಿ ಭದ್ರಾವತಿಯಲ್ಲಿ ಪಕ್ಷಕ್ಕಿಂತ ವ್ಯಕ್ತಿಯ ಪ್ರಭಾವವೇ ನಿರ್ಣಾಯಕ. ಬಿ.ಕೆ.ಸಂಗಮೇಶ್‌ ಮತ್ತು ಎಂ.ಜೆ.ಅಪ್ಪಾಜಿಗೌಡರ ಜಿದ್ದಾಜಿದ್ದಿನ ಕ್ಷೇತ್ರವಾಗಿದ್ದು, ಸದ್ಯ, ಅಪ್ಪಾಜಿಗೌಡ ನಿಧನದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಹೇಗಿರಬಹುದು ಎಂಬುದು ಎಲ್ಲರ ಕುತೂಹಲ ಕೂಡ. ಕಾಂಗ್ರೆಸ್‌ನಿಂದ ಹಾಲಿ ಶಾಸಕ ಬಿ.ಕೆ.ಸಂಗಮೇಶ್‌ ಪುನ: ಸ್ಪರ್ಧಿಸಿದ್ದಾರೆ. ಅಪ್ಪಾಜಿಗೌಡರ ನಿಧನದ ಬಳಿಕ ಜೆಡಿಎಸ್‌ ಅಭ್ಯರ್ಥಿಯಾಗಿ ಅವರ ಧರ್ಮಪತ್ನಿ ಶಾರದಾ ಅಪ್ಪಾಜಿಗೌಡ ಕಣದಲ್ಲಿದ್ದಾರೆ. ಕ್ಷೇತ್ರದಲ್ಲಿ ಲಿಂಗಾಯಿತ ಮತ್ತು ಒಕ್ಕಲಿಗ ಸಮಾಜ ಪ್ರಬಲವಾಗಿದೆ. 

ಬಿ.ಕೆ.ಸಂಗಮೇಶ್‌ ಲಿಂಗಾಯಿತ ಸಮುದಾಯದವರು. ಸಂಘಟನಾತ್ಮಕವಾಗಿಯೂ ಅಷ್ಟೇ ಪ್ರಬಲರಾಗಿದ್ದಾರೆ. ಜೊತೆಗೆ, ಅಪ್ಪಾಜಿಗೌಡ ಇಲ್ಲದಿರುವುದು ತಮಗೆ ದೊಡ್ಡ ಪ್ಲಸ್‌ ಎಂದು ಭಾವಿಸಿದ್ದಾರೆ. ಶಾರದಾ ಒಕ್ಕಲಿಗ ಸಮಾಜದವರು. ಅನುಕಂಪ ಇಲ್ಲಿ ಮತವಾಗಿ ಪರಿವರ್ತನೆಯಾಗುವುದನ್ನು ನಿರೀಕ್ಷಿಸುತ್ತಿದ್ದಾರೆ. ಬಿಜೆಪಿ ಈ ಬಾರಿ ಸಾಮಾನ್ಯ ಕಾರ್ಯಕರ್ತ ಎಂದು ಮಂಗೋಟೆ ರುದ್ರೇಶ್‌ ಅವರಿಗೆ ಟಿಕೆಟ್‌ ನೀಡಿದೆ. ಭದ್ರಾವತಿ ರಾಜಕಾರಣಕ್ಕೆ ಹೊಸ ಪರಿಭಾಷೆ ಬರೆಯಬೇಕಾದ ಅನಿವಾರ್ಯತೆ ಇವರ ಹೆಗಲೇರಿದೆ. ಇನ್ನು ಕರ್ನಾಟಕದಲ್ಲಿ ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಪರಿಶೀಲನೆ ಕೂಡ ಮುಗಿದಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.

click me!