ಎಚ್‌ಕೆಪಾ, ಸಿಸಿಪಾ, ಕಳಕಪ್ಪರಿಂದ ರಂಗೇರಿರುವ ಗದಗ ಎಲೆಕ್ಷನ್ ಅಖಾಡ

By Kannadaprabha NewsFirst Published May 5, 2023, 8:53 AM IST
Highlights

ಗದಗದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ, ಎಐಸಿಸಿ ಉನ್ನತ ಸಮಿತಿ ಸದಸ್ಯ ಎಚ್‌.ಕೆ. ಪಾಟೀಲ ಹಾಗೂ ನರಗುಂದದಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲರ ಸ್ಪರ್ಧೆಯಿಂದ ಗದಗ ಜಿಲ್ಲೆ ರಾಜ್ಯದ ಗಮನ ಸೆಳೆಯುತ್ತಿದೆ. 

ಶಿವಕುಮಾರ ಕುಷ್ಟಗಿ

ಗದಗ (ಮೇ.05): ಗದಗದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ, ಎಐಸಿಸಿ ಉನ್ನತ ಸಮಿತಿ ಸದಸ್ಯ ಎಚ್‌.ಕೆ.ಪಾಟೀಲ ಹಾಗೂ ನರಗುಂದದಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲರ ಸ್ಪರ್ಧೆಯಿಂದ ಗದಗ ಜಿಲ್ಲೆ ರಾಜ್ಯದ ಗಮನ ಸೆಳೆಯುತ್ತಿದೆ. ಜಿಲ್ಲೆಯ 4 ಕ್ಷೇತ್ರಗಳ ಪೈಕಿ ಶಿರಹಟ್ಟಿ, ಮೀಸಲು ಕ್ಷೇತ್ರವಾಗಿದ್ದು, ಇಲ್ಲಿ ಬಿಜೆಪಿ, ಕಾಂಗ್ರೆಸ್‌ಗಳೆರಡೂ ಹೊಸಮುಖಗಳಿಗೆ ಮಣೆ ಹಾಕಿವೆ. 2018ರಲ್ಲಿ ಜಿಲ್ಲೆಯ 4 ಕ್ಷೇತ್ರಗಳ ಪೈಕಿ 3ರಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ತನ್ನ ಪ್ರಾಬಲ್ಯ ಮೆರೆದಿದೆ. ಒಂದು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್‌ ಗೆಲುವಿನ ನಗೆ ಬೀರಿದೆ. ಜಿಲ್ಲೆಯ ಎಲ್ಲಾ ನಾಲ್ಕು ಕ್ಷೇತ್ರಗಳಲ್ಲಿ ಲಿಂಗಾಯತರೇ ನಿರ್ಣಾಯಕ ಮತದಾರರು.

ಗದಗ
ಎಚ್‌.ಕೆ.ಪಾಟೀಲರಿಗೆ ಸೋಲುಣಿಸಲು ಬಿಜೆಪಿ ಉತ್ಸುಕ:
ಕಾಂಗ್ರೆಸ್‌ನ ಹಿರಿಯ ನಾಯಕ ಎಚ್‌.ಕೆ.ಪಾಟೀಲ, ಈ ಬಾರಿಯೂ ‘ಕೈ’ ಅಭ್ಯರ್ಥಿ. ಇವರಿಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ಅನಿಲ ಮೆಣಸಿನಕಾಯಿ ಸ್ಪರ್ಧಿಸಿದ್ದಾರೆ. ಸತತ 2 ಚುನಾವಣೆಗಳಲ್ಲಿ ಇಬ್ಬರೂ ಪರಸ್ಪರ ಎದುರಾಳಿಗಳಾಗಿದ್ದು, ಈ ಬಾರಿ 3ನೇ ಬಾರಿಗೆ ಇವರಿಬ್ಬರ ನಡುವೆ ಫೈಟ್‌ ನಡೆಯುತ್ತಿದೆ. ಇಲ್ಲಿ ಲಿಂಗಾಯತರೇ ನಿರ್ಣಾಯPರು. ಅದರಲ್ಲಿಯೂ ಪಂಚಮಸಾಲಿ ಮತಗಳೆ ಅತಿ ಹೆಚ್ಚು. ನಂತರದ ಸ್ಥಾನದಲ್ಲಿ ಮುಸ್ಲಿಂ ಮತ್ತು ಕುರುಬ ಸಮುದಾಯದ ಮತಗಳಿವೆ. ಕಳೆದ 45 ವರ್ಷಗಳಿಂದ ಇಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸುತ್ತಾ ಬಂದಿದ್ದು, 45 ವರ್ಷಗಳಿಂದಲೂ ಹುಲಕೋಟಿಯ ಪಾಟೀಲ ಮನೆತನದವರೇ ಶಾಸಕರಾಗಿ ಆಯ್ಕೆಯಾಗಿದ್ದು ವಿಶೇಷ. ಈಗಾಗಲೇ ಎರಡು ಬಾರಿ ಎಚ್‌.ಕೆ.ಪಾಟೀಲ ವಿರುದ್ಧ ಸೋಲು ಅನುಭವಿಸಿರುವ ಅನಿಲ ಮೆಣಸಿನಕಾಯಿ ಪರವಾಗಿ ಈ ಬಾರಿ ಅನುಕಂಪದ ಅಲೆ ವ್ಯಾಪಕವಾಗಿ ಕಂಡು ಬರುತ್ತಿದೆ.

ಕಾಂಗ್ರೆಸ್‌ ಭದ್ರಕೋಟೆ ಚಾಮರಾಜನಗರದಲ್ಲಿ ಸೋಮಣ್ಣರಿಂದ ಬಿಜೆಪಿ ರಣಕಹಳೆ

ನರಗುಂದ
ಸಿ.ಸಿ.ಪಾಟೀಲ, ಯಾವಗಲ್ಲ ಮುಖಾಮುಖಿ:
ರೈತ ಬಂಡಾಯಕ್ಕೆ ಹೆಸರಾಗಿದ್ದ, 80ರ ದಶಕದ ಕರ್ನಾಟಕದ ರೈತ ಚಳವಳಿಯ ಮೂಲ ಸ್ಥಾನವಾದ ನರಗುಂದದಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಅವರು ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್‌ನಿಂದ ಮಾಜಿ ಸಚಿವ ಬಿ.ಆರ್‌.ಯಾವಗಲ್ಲ ಕಣದಲ್ಲಿದ್ದಾರೆ. ಪ್ರಸ್ತುತ ಚುನಾವಣೆ ಸೇರಿದಂತೆ ಒಟ್ಟು 6 ಚುನಾವಣೆಗಳಲ್ಲಿ ಸಿ.ಸಿ.ಪಾಟೀಲ ಮತ್ತು ಬಿ.ಆರ್‌.ಯಾವಗಲ್ಲ ಪರಸ್ಪರ ಎದುರಾಳಿಗಳಾಗಿದ್ದಾರೆ. ಇದು ಲಿಂಗಾಯತ ಪ್ರಾಬಲ್ಯದ ಕ್ಷೇತ್ರವಾಗಿದ್ದು, ಪಂಚಮಸಾಲಿ ಸಮುದಾಯ ಒಟ್ಟು ಮತದಾರರ ಪೈಕಿ 37%ರಷ್ಟುಪಾಲು ಹೊಂದಿದೆ. ಸಿ.ಸಿ.ಪಾಟೀಲ, ಅದೇ ಪಂಚಮಸಾಲಿ ಸಮುದಾಯದಿಂದ ಬಂದವರು. ಬಿ.ಆರ್‌.ಯಾವಗಲ್ಲ, ರಡ್ಡಿ ಸಮುದಾಯವನ್ನು ಪ್ರತಿನಿಧಿಸುತ್ತಿದ್ದಾರೆ. ಒಳಮೀಸಲಾತಿ ಮತ್ತು ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ 2ಡಿ ನೀಡಿಕೆ ಇಲ್ಲಿ ಬಿಜೆಪಿಗೆ ದೊಡ್ಡ ವರವಾಗಿ ಪರಿಣಮಿಸುತ್ತಿದೆ.

ರೋಣ
ಕಳಕಪ್ಪ ಬಂಡಿಗೆ ಕ್ಷೇತ್ರ ಉಳಿಸಿಕೊಳ್ಳುವ ಸವಾಲು:
ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಶಾಸಕ ಕಳಕಪ್ಪ ಬಂಡಿ ಕಣಕ್ಕೆ ಇಳಿದಿದ್ದಾರೆ. ಕಾರ್ಯಕರ್ತರ ವಿರೋಧದ ನಡುವೆಯೂ ಕೊನೆಯ ಕ್ಷಣದಲ್ಲಿ ಇವರಿಗೆ ಬಿಜೆಪಿ ಟಿಕೆಟ್‌ ನೀಡಿದೆ. ಹೀಗಾಗಿ, ಕಳಕಪ್ಪ ಬಂಡಿಯವರಿಗೆ ಕ್ಷೇತ್ರ ಉಳಿಸಿಕೊಳ್ಳುವ ಸವಾಲಿದೆ. ಹಾಲಿ ಶಾಸಕರ ಸಹೋದರ, ಟಿಕೆಟ್‌ ಆಕಾಂಕ್ಷಿಯಾಗಿದ್ದ ಸಿದ್ಧಪ್ಪ ಬಂಡಿಯವರು ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಿದ್ದು, ಕಾಂಗ್ರೆಸ್‌ಗೆ ವರವಾಗಲಿದೆ. ಬಿದರೂರ ಅವರ ಅಕಾಲಿಕ ನಿಧನದಿಂದಾಗಿ ಸಹಜವಾಗಿಯೇ ಕಾಂಗ್ರೆಸ್‌ ಟಿಕೆಟ್‌ ಜಿ.ಎಸ್‌.ಪಾಟೀಲರ ಪಾಲಾಯಿತು. ಇನ್ನು, ಬೆಂಗಳೂರಿನ ಉದ್ಯಮಿ, ಆನೇಕಲ್‌ ದೊಡ್ಡಯ್ಯನವರು ಆಮ್‌ ಆದ್ಮಿಯಿಂದ ಕಣಕ್ಕೆ ಇಳಿದಿದ್ದಾರೆ. ಹೀಗಾಗಿ, ಕ್ಷೇತ್ರದಲ್ಲಿ ಮೊದಲ ಬಾರಿಗೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಈ ಕ್ಷೇತ್ರದಲ್ಲಿಯೂ ಲಿಂಗಾಯತ ಮತಗಳೇ ನಿರ್ಣಾಯಕ.

ಶೆಟ್ಟರ್‌ ಬಿಟ್ಟು ಚುನಾವಣೆ ಎದುರಿಸುತ್ತಿರುವ ಬಿಜೆಪಿ: ಜಗದೀಶ್‌ ಸಾಥ್‌ ನೀಡಿರುವುದು ಕಾಂಗ್ರೆಸ್‌ಗೆ ದೊಡ್ಡ ಶಕ್ತಿ

ಶಿರಹಟ್ಟಿ
ಕಾಂಗ್ರೆಸ್‌ಗೆ ಬಂಡಾಯ ಬಿಸಿ:
ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರ, ಶಿರಹಟ್ಟಿ. ಬಿಜೆಪಿ, ಹಾಲಿ ಶಾಸಕ ರಾಮಣ್ಣ ಲಮಾಣಿ ಅವರನ್ನು ಬಿಟ್ಟು ಯುವ ಕಾರ್ಯಕರ್ತ ಡಾ.ಚಂದ್ರು ಲಮಾಣಿಗೆ ಟಿಕೆಟ್‌ ನೀಡಿದೆ. ಕಾಂಗ್ರೆಸ್‌, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರ ಬದಲಿಗೆ ಮೊಟ್ಟಮೊದಲ ಬಾರಿಗೆ ಮಹಿಳೆಯರಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿ, ಸುಜಾತಾ ದೊಡ್ಡಮನಿ ಅವರಿಗೆ ಟಿಕೆಟ್‌ ನೀಡಿದೆ. ಹೀಗಾಗಿ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿಯವರು ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಆಮ್‌ ಆದ್ಮಿ, ಜೆಡಿಎಸ್‌ ಸೇರಿದಂತೆ ಒಟ್ಟು 14 ಜನ ಕಣದಲ್ಲಿದ್ದು, ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ರಾಮಕೃಷ್ಣ ದೊಡ್ಡಮನಿ ಸ್ಪರ್ಧೆಯಿಂದಾಗಿ ಮೊದಲ ಬಾರಿಗೆ ಇಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಈ ಕ್ಷೇತ್ರದಲ್ಲಿಯೂ ಲಿಂಗಾಯತ ಮತಗಳೇ ನಿರ್ಣಾಯಕವಾಗಿದ್ದು, ನಂತರದ ಸ್ಥಾನದಲ್ಲಿ ದಲಿತರ ಮತಗಳಿವೆ. ಒಳಮೀಸಲಾತಿ ಈ ಬಾರಿ, ಶಿರಹಟ್ಟಿಕ್ಷೇತ್ರದಲ್ಲಿ ಬಿಜೆಪಿಗೆ ವರವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

click me!