ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕಾಗಿ ಮತಬೇಟೆ ಶುರುವಾಗಿದೆ. ಹಾಲಿ-ಮಾಜಿ ಶಾಸಕರು ಕ್ಷೇತ್ರದಲ್ಲಿ ಬಿರುಸಿನ ತಿರುಗಾಟ ಆರಂಭಿಸಿದ್ದಾರೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಹಾಗೂ ಆಪ್ ನಿಂದ ಮತಬೇಟೆ, ಬಿರುಸಿನ ತಿರುಗಾಟ ಶುರು ಮಾಡಿದ್ದಾರೆ. ಅಭಿವೃದ್ಧಿ ಕಾರ್ಯಗಳ ಹೆಸರಿನಲ್ಲಿ ಹಾಲಿ ಶಾಸಕರು ಓಡಾಟ. ಪಕ್ಷದ ಸಂಘಟನೆ ಮತ್ತು ಸರ್ಕಾರದ ಸಾಧನೆ ತಿಳಿಸುತ್ತಾ ಮಾಜಿ ಶಾಸಕರು ತಿರುಗಾಟ.
ವರದಿ : ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್
ರಾಯಚೂರು (ಡಿ.6): ರಾಜ್ಯಕ್ಕೆ ಬೆಳಕು ನೀಡುವ ಶಾಖೋತ್ಪನ್ನ ಘಟಕಗಳು ಹೊಂದಿರುವ ಕ್ಷೇತ್ರವೇ ರಾಯಚೂರು ಗ್ರಾಮೀಣ. ಎಸ್.ಟಿ. ಮೀಸಲು ಕ್ಷೇತ್ರವಾದ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ 2023ರ ಚುನಾವಣೆಗಾಗಿ ತಯಾರಿ ಶುರುವಾಗಿದೆ. ಈ ಕ್ಷೇತ್ರದಲ್ಲಿ ಪ್ರತಿ ಬಾರಿಯಂತೆ ಈ ಬಾರಿಯೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಬಿಗ್ ಫೈಟ್ ಇದೆ. ಅದರ ಮಧ್ಯೆ ಜೆಡಿಎಸ್ ಅಭ್ಯರ್ಥಿ ಸಣ್ಣ ನರಸಿಂಹ ನಾಯಕ ಬಿಜೆಪಿ ಬಿಟ್ಟು, ಜೆಡಿಎಸ್ ಸೇರಿ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸಿದ್ದಾರೆ. ಇನ್ನೊಂದು ಕಡೆ ನಿವೃತ್ತ ಇಂಜಿನಿಯರ್ ಆಪ್ ಪಕ್ಷದಿಂದ ಸ್ಪರ್ಧೆ ಮಾಡುವುದಾಗಿ ಹೇಳಿ ಕ್ಷೇತ್ರದಲ್ಲಿ ಬಿರುಸಾಗಿ ಓಡಾಟ ಮಾಡುತ್ತಾ ಆಪ್ ನ ಸಿದ್ಧಾಂತಗಳು ಜನರಿಗೆ ತಿಳಿಸಲು ಶುರು ಮಾಡಿದ್ದಾರೆ. ಇನ್ನೂ ಈ ಕ್ಷೇತ್ರದ ಮತ್ತೊಂದು ವಿಶೇಷ ಅಂದ್ರೆ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲಿ ಒಮ್ಮೆ ಆಯ್ಕೆಗೊಂಡ ಅಭ್ಯರ್ಥಿ ಸತತವಾಗಿ ಎರಡನೇ ಬಾರಿಗೆ ಆಯ್ಕೆ ಆಗಿದ್ದು ಇತಿಹಾಸವೇ ಇಲ್ಲ. ಒಂದು ಬಾರಿ ಸೋತು ಮತ್ತೆ ಚುನಾವಣೆ ಸ್ಪರ್ಧೆ ಮಾಡಿ ಗೆಲುವು ಸಾಧಿಸಬಹುದು. ಆದ್ರೆ ನಿರಂತರವಾಗಿ ಆಯ್ಕೆ ಯಾರು ಈವರೆಗೆ ಆಗಿಲ್ಲವೆಂಬುವುದೇ ಈ ಕ್ಷೇತ್ರದ ವಿಶೇಷವಾಗಿದೆ. ಹೀಗಾಗಿ ಇಡೀ ಕ್ಷೇತ್ರದಲ್ಲಿ ಈ ಬಾರಿ ವಿಧಾನಸಭೆಗೆ ಯಾರು ಆಯ್ಕೆ ಆಗುತ್ತಾರೆ ಎಂಬ ಚರ್ಚೆ ಶುರುವಾಗಿದೆ.
ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಪರಿಚಯ:
ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರವೂ ಇಡೀ ಜಿಲ್ಲೆಯಲ್ಲಿಯೇ ವಿಶಾಲವಾದ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಈವರೆಗಿನ ಸರ್ವೇ ಪ್ರಕಾರ 2 ಲಕ್ಷ 21 ಸಾವಿರ 808 ಮತದಾರರು ಇದ್ದಾರೆ. ಅದರಲ್ಲಿ 1 ಲಕ್ಷ 9 ಸಾವಿರದ 42 ಪುರುಷ ಮತದಾರರು ಇದ್ದು, 1ಲಕ್ಷದ 12 ಸಾವಿರದ 766 ಮಹಿಳಾ ಮತದಾರರು ಇದ್ದಾರೆ. ಇನ್ನೂ 1957ರಿಂದ ನಡೆದ ವಿಧಾನಸಭಾ ಚುನಾವಣೆಯಲ್ಲಿ 8 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು 2 ಬಾರಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ಒಮ್ಮೆಯೂ ಕೂಡ ಈ ಕ್ಷೇತ್ರದಲ್ಲಿ ತನ್ನ ಖಾತೆ ತೆರೆದಿಲ್ಲ. ಮುಖ್ಯವಾಗಿ ಈ ಕ್ಷೇತ್ರದಲ್ಲಿ ಪರಿಶಿಷ್ಟರು ಹೆಚ್ಚಾಗಿರುವ ಕ್ಷೇತ್ರವಾಗಿದ್ರೂ, ಕುರುಬ ಮತಗಳೇ ಇಲ್ಲಿ ನಿರ್ಣಾಯಕವಾಗಿವೆ. ಹೀಗಾಗಿ ಎಲ್ಲಾ ಮುಖಂಡರು ಆ ಮತ ಸೆಳೆಯಲು ಹರಸಾಹಸ ನಡೆಸುವುದು ಕ್ಷೇತ್ರದಲ್ಲಿ ಕಾಣಬಹುದಾಗಿದೆ.
ಕಾಂಗ್ರೆಸ್ ಟಿಕೆಟ್ ಗಾಗಿ ಮೂವರ ನಡುವೆ ಬಿಗ್ ಫೈಟ್:
ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರವೂ ಕಾಂಗ್ರೆಸ್ ನ ಭದ್ರಕೋಟೆ ಅಂದ್ರೆ ತಪ್ಪಾಗಲಾರದು. ಏಕೆಂದರೆ 14 ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 8 ಬಾರಿ ಗೆಲುವು ಸಾಧಿಸಿದೆ. ಹೀಗಾಗಿ ಈ ಬಾರಿ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಾಗಿ ಮೂವರು ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಬಸನಗೌಡ ದದ್ದಲ್ ಇದ್ದಾರೆ. ಆದ್ರೂ ಸಹ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮತ್ತು ಮಾಜಿ ಸಂಸದ ಬಿ.ವಿ.ನಾಯಕ ನನಗೂ ರಾಯಚೂರು ಗ್ರಾಮೀಣ ವಿಧಾನಸಭಾ ಟಿಕೆಟ್ ನೀಡಿ ಅಂತ ಕೆಪಿಸಿಸಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅದೇ ರೀತಿಯಾಗಿ ಸ್ಥಳೀಯರಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಮುಖಂಡ ಚಂದ್ರಶೇಖರ್ ನಾಯಕ ಅರ್ಜಿ ಸಲ್ಲಿಕೆ ಮಾಡಿ ಹೈಕಮಾಂಡ್ ನಿಂದ ಟಿಕೆಟ್ ಪಡೆಯಲು ಲಾಬಿ ನಡೆಸಿದ್ದಾರೆ.
ಇತ್ತ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಕಾಂಗ್ರೆಸ್ ಹೈಕಮಾಂಡ್ ಹಾಲಿ ಶಾಸಕರಿಗೆ ಟಿಕೆಟ್ ನೀಡುತ್ತಾರೆ. ನಾನು ಐದು ವರ್ಷ ರಾಯಚೂರು ಗ್ರಾಮೀಣ ಕ್ಷೇತ್ರದ ಜನರ ಸೇವೆ ಪ್ರಾಮಾಣಿಕವಾಗಿ ಮಾಡಿದ್ದೇನೆ. ಹೈಕಮಾಂಡ್ ನನ್ನ ಕೈಬಿಡಲ್ಲ. ನನಗೆ ಕ್ಷೇತ್ರದಲ್ಲಿ ಓಡಾಟ ಮಾಡಲು ಹೈಕಮಾಂಡ್ ನಾಯಕರು ತಿಳಿಸಿದ್ದಾರೆ. ಅದರಂತೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಾ ಸಭೆ, ಸಮಾರಂಭ ಭಾಗಿಯಾಗುತ್ತಾ ಮತಬೇಟೆ ಶುರು ಮಾಡಿದ್ದಾರೆ. ಅಷ್ಟೇ ಅಲ್ಲದೇ ಕ್ಷೇತ್ರದ ಜನರೊಂದಿಗೆ ಉತ್ತಮ ಒಡನಾಟ ಹೊಂದಿದ್ದು, ಮತದಾರರ ಮನಸೆಳೆಯಲು ಎಲ್ಲಾ ಕಸರತ್ತು ನಡೆಸಿದ್ದಾರೆ.
ಬಿ.ವಿ.ನಾಯಕ, ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಅರಕೇರಾ ಗ್ರಾಮದವರು. 2014ರಲ್ಲಿ ರಾಯಚೂರು ಲೋಕಸಭೆಗೆ ಸ್ಪರ್ಧೆ ಮಾಡಿ ಸಂಸದರಾಗಿ ಆಯ್ಕೆ ಆಗಿದ್ರು. 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದ ಇವರು ಜಿಲ್ಲೆಯಾದ್ಯಂತ ಕಾಂಗ್ರೆಸ್ ಪಕ್ಷ ಕಟ್ಟುವಲ್ಲಿ ತೊಡಗಿದರು. ಹೀಗಾಗಿ ಇಡೀ ಜಿಲ್ಲೆಯಾದ್ಯಂತ ಚಿರಪರಿಚಿತ ಮುಖಂಡರಾದ ಬಿ.ವಿ.ನಾಯಕ ಅವರು ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆದ್ರೆ ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಓಡಾಟ ಮಾಡುತ್ತಿಲ್ಲ.
ಮತ್ತೊಬ್ಬ ಕಾಂಗ್ರೆಸ್ ಮುಖಂಡ ಚಂದ್ರಶೇಖರ್ ನಾಯಕ, ಇವರು ಮೂಲತಃ ರಾಯಚೂರು ತಾಲೂಕಿನ ಇಡಪನೂರು ಗ್ರಾಮದವರು, ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅರ್ಜಿ ಸಲ್ಲಿಕೆ ಮಾಡಿದ ಚಂದ್ರಶೇಖರ್ ನಾಯಕ ಕೈ ಟಿಕೆಟ್ ಗಾಗಿ ಬೆಂಗಳೂರಿನ ಹೈಕಮಾಂಡ್ ನಾಯಕರ ಮನೆಗಳ ಸುತ್ತಮುತ್ತ ಓಡಾಟ ನಡೆಸಿದ್ದಾರೆ.
ಇನ್ನೂ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ರಾಯಚೂರು ಗಾಂಧಿ ಪಾದಯಾತ್ರೆ ವೇಳೆಯಲ್ಲಿ ಸಾವಿರಾರು ಜನರು ಸೇರಿದ್ರೂ, ಹೀಗಾಗಿ ಈ ಬಾರಿಯೂ ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವೂ ಅಧಿಕಾರಕ್ಕೆ ಬರುತ್ತೆ ಅಂತ ಹೇಳುತ್ತಾ ಕೈ ಮುಖಂಡರು ಮತ್ತು ಕಾರ್ಯಕರ್ತರು ಓಡಾಟ ಶುರು ಮಾಡಿದ್ದಾರೆ.
ಬಿಜೆಪಿಯಿಂದ ತಿಪ್ಪರಾಜು ಹವಾಲ್ದಾರ್ ಸ್ಪರ್ಧೆ :
ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ 2023ರ ವಿಧಾನಸಭಾ ಚುನಾವಣೆಗಾಗಿ ಭಾರೀ ಪೈಪೋಟಿ ಶುರುವಾಗಿದೆ. ಬಿಜೆಪಿ ಅಭ್ಯರ್ಥಿ ತಿಪ್ಪರಾಜು ಹವಾಲ್ದಾರ್. ಶಿಕ್ಷಕ ವೃತ್ತಿಗೆ ರಾಜೀನಾಮೆ ನೀಡಿ ರಾಜಕೀಯ ಪ್ರವೇಶ ಮಾಡಿದ್ರು. 2013ರಲ್ಲಿ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ ತಿಪ್ಪರಾಜು ಹವಾಲ್ದಾರ್ ಗೆ ಕ್ಷೇತ್ರದ ಜನರು 50,497 ಮತಗಳು ನೀಡಿ ಗೆಲ್ಲಿಸಿದ್ರು. ಅಧಿಕಾರಕ್ಕೆ ಬಂದ ತಿಪ್ಪರಾಜು ಹವಾಲ್ದಾರ್ ತನ್ನ ರಾಜಕೀಯ ಗುರು ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಮಾರ್ಗದರ್ಶನದಲ್ಲಿ ಕ್ಷೇತ್ರದಲ್ಲಿ ಹತ್ತಾರು ಅಭಿವೃದ್ಧಿ ಕೆಲಸಗಳು ಮಾಡಿದ್ರು. ಆ ಬಳಿಕ 2018ರಲ್ಲಿ ನಡೆದ ಚುನಾವಣೆಯಲ್ಲಿ 56,692 ಮತಗಳು ಪಡೆದರು ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ದದ್ದಲ್ ವಿರುದ್ಧ ಸೋಲು ಅನುಭವಿಸಿದರು. ಕಳೆದ ಚುನಾವಣೆಯಲ್ಲಿ ತಿಪ್ಪರಾಜು ಹವಾಲ್ದಾರ್ ಸೋತರು ಸಹ ಬಿಜೆಪಿ ನೀಡಿದ ಪಕ್ಷ ಸಂಘಟನೆ ಕಾರ್ಯದಲ್ಲಿ ತೊಡಗಿದರು. ತಿಪ್ಪರಾಜು ಹವಾಲ್ದಾರ್ ಎಸ್. ಟಿ. ಮೋರ್ಚಾ ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ರಾಜ್ಯದ ವಿವಿಧೆಡೆ ಸಭೆ ಸಮಾರಂಭಗಳಲ್ಲಿ ಭಾಗಿಯಾಗಿದ್ರು. ಎಸ್ ಸಿ ಮತ್ತು ಎಸ್ ಟಿ ಸಮುದಾಯದ ಮೀಸಲಾತಿಗಾಗಿ ನಡೆದ ಹೋರಾಟದಲ್ಲಿ ಭಾಗಿಯಾಗಿದ್ರು. ಅದರ ಭಾಗವಾಗಿ ಈಗ ಎಸ್ ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳವಾಗಿದೆ.
ಕಳೆದ 30- 40 ವರ್ಷಗಳಿಂದ ನಡೆದ ಮೀಸಲಾತಿ ಹೋರಾಟಕ್ಕೆ ನಮ್ಮ ಬಿಜೆಪಿ ಸರ್ಕಾರ ನ್ಯಾಯ ಒದಗಿಸಿದೆ. ಪರಿಶಿಷ್ಟ ಪಂಗಡ ಜನಾಂಗವು ಹೆಚ್ಚಾಗಿರುವ ರಾಯಚೂರು ಗ್ರಾಮೀಣ ಕ್ಷೇತ್ರಕ್ಕಾಗಿ ನಾನು ಹತ್ತಾರು ಅಭಿವೃದ್ಧಿ ಕೆಲಸಗಳು ಮಾಡಿದ್ದೇನೆ. ಅಧಿಕಾರದಲ್ಲಿ ಇಲ್ಲದಿದ್ದರೂ ಸಹ ಕ್ಷೇತ್ರದ ಜನರ ಜೊತೆಗೆ ಉತ್ತಮ ಒಡನಾಟ ಹೊಂದಿದ್ದೇನೆ. ನಾನು ಶಾಸಕನಾದ ವೇಳೆಯಲ್ಲಿ ನನ್ನ ಕ್ಷೇತ್ರಕ್ಕೆ 9 ಹೈಟೆಕ್ ಆಸ್ಪತ್ರೆಗಳನ್ನು ತಂದಿದ್ದೇನೆ. ನಾನು ಅಧಿಕಾರದಲ್ಲಿ ಇಲ್ಲದ ವೇಳೆಯಲ್ಲಿಯೂ ನಮ್ಮ ಸರ್ಕಾರದಿಂದ 7 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮಾಡಿಸುವಲ್ಲಿ ನನ್ನ ಪಾತ್ರ ಮುಖ್ಯವಾಗಿದೆ. ಇನ್ನೂ ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ವಿದ್ಯುತ್ ಉತ್ಪಾದನೆ ಆಗಿದ್ರೂ, ಕರೆಂಟ್ ಸಮಸ್ಯೆ ಆಗುತ್ತಿತ್ತು. ಇದರ ವಿರುದ್ಧ ನಾನು ಶಾಸಕನಾದ ವೇಳೆ ಪಾದಯಾತ್ರೆ ಮಾಡಿ ರೈತರಿಗೆ ದಿನದ 24 ಗಂಟೆ ವಿದ್ಯುತ್ ಸಿಗುತ್ತೆ ಮಾಡಿದ್ದೇನೆ. ಕ್ಷೇತ್ರದ 157 ಗ್ರಾಮಗಳಲ್ಲಿ ಸಿಸಿ ರಸ್ತೆ ಮಾಡಿಸಿದ್ದಾನೆ. ಅಷ್ಟೇ ಅಲ್ಲದೇ ಕ್ಷೇತ್ರದಲ್ಲಿ ಶಿಕ್ಷಣಕ್ಕಾಗಿ ಹೆಚ್ಚು ಒತ್ತು ನೀಡಿದ್ದೇನೆ.
ಇನ್ನೂ ಹತ್ತಾರು ಅಭಿವೃದ್ಧಿ ಕೆಲಸಗಳು ಮಾಡಿದ್ದರಿಂದ ರಾಯಚೂರು ಗ್ರಾಮೀಣ ಕ್ಷೇತ್ರದ ಜನರು ನನಗೆ 2018ರ ಚುನಾವಣೆಯಲ್ಲಿ 56,692 ಮತಗಳು ನೀಡಿದ್ರು. ಕಳೆದ ಚುನಾವಣೆಯಲ್ಲಿ ನನ್ನ ಸೋಲಿಗೆ ನನ್ನ ಆತ್ಮವಿಶ್ವಾಸವೇ ಕಾರಣವಾಯ್ತು. ಮತ್ತೊಂದು ಕಡೆ ಕಾಂಗ್ರೆಸ್ ಅಭ್ಯರ್ಥಿ ಮಾಡಿದ ಭಾವನಾತ್ಮಕ ಪ್ರಚಾರದಿಂದ ನನ್ನ ಸೋಲು ಆಗಿದೆ. ನಾನು ಸೋತರು ಬಿಜೆಪಿ ಹೈಕಮಾಂಡ್ ನನ್ನ ಜೊತೆಗೆ ನಿಂತಿದೆ. ಅದರಂತೆ ಇಡೀ ರಾಜ್ಯದಲ್ಲಿ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದಲ್ಲೇ ಸಿಎಂ ಬಸವರಾಜ್ ಬೊಮ್ಮಾಯಿ ಬಿಜೆಪಿ ಜನಸಂಕಲ್ಪ ಯಾತ್ರೆಯೂ ಶುರು ಮಾಡಿದ್ದಾರೆ. ಇದು ನನ್ನ ಗೆಲುವಿನ ಆಸೆ ಇಮ್ಮಡಿಗೊಳಿಸಿದೆ. 2023ರ ಚುನಾವಣೆಯಲ್ಲಿ ನಾನು ಮತ್ತೆ ಅಧಿಕಾರಕ್ಕೆ ಬರುತ್ತೇನೆ. ಕ್ಷೇತ್ರದ ಜನರು ನನಗೆ ಗೆಲ್ಲಿಸುತ್ತಾರೆ ಎಂಬ ಆತ್ಮವಿಶ್ವಾಸದಿಂದ ಕ್ಷೇತ್ರದಲ್ಲಿ ನಾನು ಓಡಾಟ ನಡೆಸಿದ್ದೇನೆ. ಜನರು ಸಹ ನಾನು ಹೋದ ಕಡೆ ನನಗೆ ಆತ್ಮೀಯವಾಗಿ ಸ್ವಾಗತಿಸುತ್ತಾ ಇದ್ದಾರೆ. ಜೊತೆಗೆ ನಮ್ಮ ಬಿಜೆಪಿ ಪಕ್ಷದ ಅಭಿವೃದ್ಧಿ ಕೆಲಸಗಳು ನನ್ನ ಗೆಲುವಿಗೆ ಶ್ರೀರಕ್ಷ ಆಗಲಿವೆ. ರಾಯಚೂರು ಗ್ರಾಮೀಣ ಜನರು ಈ ಸಲ ನನ್ನ ಕೈ ಹಿಡಿಯುತ್ತಾರೆ ಅಂತ ಹೇಳುತ್ತಾ ತಿಪ್ಪರಾಜು ಹವಾಲ್ದಾರ್ ಕ್ಷೇತ್ರದಲ್ಲಿ ಪಕ್ಷ ಸಂಘಟನೆ, ಸಭೆ, ಸಮಾರಂಭ ಮತ್ತು ಸಮಾವೇಶ ನಡೆಸುತ್ತಾ ಇದ್ದಾರೆ.
ಜೆಡಿಎಸ್ ನಿಂದ ಸಣ್ಣ ನರಸಿಂಹ ನಾಯಕ ಸ್ಪರ್ಧೆಗೆ ಸಿದ್ಧತೆ:
ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡಲು ಬಿಜೆಪಿ ತೊರೆದು ಜೆಡಿಎಸ್ ಸೇರಿದ ಸಣ್ಣ ನರಸಿಂಹನಾಯಕ, ಸ್ಥಳೀಯ ಟ್ರಪ್ ಕಾರ್ಡ್ ಹಿಡಿದು ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಓಡಾಟ ಶುರು ಮಾಡಿದ್ದಾರೆ. ರಾಯಚೂರು ನಗರದ ಐಡಿಎಂಸಿ ಲೇಔಟ್ ನಲ್ಲಿ ಬಾಡಿಗೆ ಮನೆವೊಂದು ಮನೆ ಮಾಡಿ ನಿತ್ಯ ಕ್ಷೇತ್ರದಲ್ಲಿ ಜನರ ಸಭೆ ನಡೆಸುತ್ತಾ ಜೆಡಿಎಸ್ ಮತ ಹಾಕಿ, ಸ್ಥಳೀಯರಿಗೆ ಅವಕಾಶ ನೀಡಿ ಅಂತ ಪ್ರಚಾರ ನಡೆಸಿದ್ದಾರೆ.
ಎಎಪಿಯಿಂದ ಸುಭಾಶಚಂದ್ರ ಸಂಭಾಜೀ ಓಡಾಟ:
ಸುಭಾಶಚಂದ್ರ ಸಂಭಾಜೀ ಮೂಲತಃ ಬೀದರ್ ಜಿಲ್ಲೆಯವರು. ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರ ಎಸ್. ಟಿ. ಮೀಸಲು ಕ್ಷೇತ್ರ ಇರುವುದರಿಂದ ಇಲ್ಲಿ ಸ್ಪರ್ಧೆ ಮಾಡಲು ಬಂದಿದ್ದಾರೆ. ಸುಭಾಶಚಂದ್ರ ಸಂಭಾಜೀ ರಾಯಚೂರು ಜಿಲ್ಲೆಯಲ್ಲಿ ನೀರಾವರಿ ಇಲಾಖೆಯಲ್ಲಿ 20 ವರ್ಷಗಳ ಕಾಲ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ ಅನುಭವವಿದೆ. ಅಷ್ಟೇ ಅಲ್ಲದೆ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಕುರುಬ ಸಮುದಾಯ ಹೆಚ್ಚಾಗಿದೆ. ಆ ಸಮುದಾಯದ ಮುಖಂಡರ ಜೊತೆಗೆ ಉತ್ತಮ ಒಡನಾಟ ಹೊಂದಿದ್ದಾರೆ. ಸದ್ಯ ಆಪ್ ಪಕ್ಷದ ಸಿದ್ದಾಂತ ತಿಳಿಸುತ್ತಾ ಕ್ಷೇತ್ರದಲ್ಲಿ ನಿತ್ಯ ಓಡಾಟ ಮಾಡುತ್ತಾ ಗ್ರಾಮೀಣ ಜನರ ಮನೆ - ಮನೆಗಳಿಗೆ ಹೋಗಿ ಆಪ್ ಪಕ್ಷದ ಮುಖಂಡ ಅರವಿಂದ ಕೇಜ್ರಿವಾಲ್ ಸರ್ಕಾರದ ಸಾಧನೆಗಳು ಮತ್ತು ಆಡಳಿತ ವೈಖರಿ ತಿಳಿಸುತ್ತಾ ಆಪ್ ಬಲವರ್ಧನೆಗೆ ಮುಂದಾಗಿದ್ದಾರೆ. ಇವರ ಓಡಾಟ ನೋಡಿದ ಕೆಲವರು ಚುನಾವಣೆಗಾಗಿ ಇವರು ಬಂದಿದ್ದಾರೆ ಎಂದು ಆರೋಪ ಮಾಡಿದ್ರು.