ಕಾಗೇರಿಯವರಿಗೆ ಸ್ಪೀಕರ್ ಹುದ್ದೆ ಅಲಂಕರಿಸಿದ ನಂತರದ ಮೊದಲ ಚುನಾವಣೆಯಿದು. ರಾಜೀನಾಮೆ ಪತ್ರ ಪಡೆದು, ಪಡೆದು ಪಾಪ, ಕಾಗೇರಿ ಸಾಹೇಬರು ಕೂತಲ್ಲೇ ಸುಸ್ತಾಗಿದ್ದಾರೆ. ರಾಜೀನಾಮೆ ಪರ್ವ ಮುಗಿದರೆ ಸಾಕು ಅಂತ ಕಾಯುತ್ತಿದ್ದಾರಂತೆ.
ವರದಿಗಾರರ ಡೈರಿ
ನಮ್ ಮೈಸೂರಿನಲ್ಲಿ ಅಯೂಬ್ ಖಾನ್ ಎಂಬ ಗಜಬ್ ವ್ಯಕ್ತಿತ್ವದ ರಾಜಕಾರಣಿಯೊಬ್ಬರಿದ್ದಾರೆ. ಮೈಸೂರಿನಲ್ಲಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಮೇಲ್ಮನೆಗೆ ನಡೆದ ಚುನಾವಣೆ ಸೇರಿದಂತೆ ಯಾವುದೇ ಚುನಾವಣೆ ಎದುರಾದರೂ ಸ್ಪರ್ಧಿಸುತ್ತಾರೆ. ಹೀಗೆ ಎಷ್ಟೊಂದು ಚುನಾವಣೆಯಲ್ಲಿ ಸ್ಪರ್ಧಿಸಬೇಕಲ್ಲ. ಅದಕ್ಕಾಗಿ ಒಂದು ಪಕ್ಷ ಬೇಕಲ್ಲ. ಹೀಗಾಗಿ ಈ ಅಯೂಬ್‌ಖಾ ಅವರೇ ಸ್ವತಃ ‘ಇಂಡಿಯನ್ ನ್ಯಾಷನಲ್ ನ್ಯೂ ಕಾಂಗ್ರೆಸ್’ ಎಂಬ ರಾಷ್ಟ್ರೀಯ ಪಕ್ಷವನ್ನು ಹುಟ್ಟು ಹಾಕಿದ್ದರು. ಅದಕ್ಕೆ ಅವರೇ ರಾಷ್ಟ್ರೀಯ ಅಧ್ಯಕ್ಷರು! ವಾರಕ್ಕೊಮ್ಮೆ ಮೈಸೂರಿನ ಪತ್ರಕರ್ತರ ಭವನದಲ್ಲಿ ಪ್ರೆಸ್‌ಮೀಟ್ ಮಾಡೋದು ಗ್ಯಾರೆಂಟಿ!
ಆದರೆ, ಇತ್ತೀಚೆಗೆ ಅದೇನಾಯಿತೋ ಗೊತ್ತಿಲ್ಲ. ತಾವೇ ಹುಟ್ಟುಹಾಕಿದ ಪಕ್ಷಕ್ಕೆ ತಾವೇ ರಾಜೀನಾಮೆ ನೀಡಿ ಜೆಡಿಎಸ್ ಸೇರಿಕೊಂಡರು.
ಈಗ ವಿಧಾನಸಭೆ ಚುನಾವಣೆ(Karnataka assembly election 2023) ಬಂತಲ್ಲ. ಇನ್ನು ಬಿ-ಫಾರಂ ಸಿಗೋಕು ಮೊದಲೇ ಜೆಡಿಎಸ್ ಪಕ್ಷ(JDS)ದ ಹೆಸರಿನಲ್ಲಿ ಮೈಸೂರಿನ ನರಸಿಂಹರಾಜ ಕ್ಷೇತ್ರ(Narasimharaa assembly constituency)ಕ್ಕೆ ನಾಮಿನೇಷನ್ ಮಾಡಿದರು. ಜತೆಗೆ, ಯಾವುದಕ್ಕೂ ಇರಲಿ ಅಂತ ಇಂಡಿಯ ನ್ ನ್ಯೂ ಕಾಂಗ್ರೆಸ್ ಹೆಸರಿನಲ್ಲಿಯೂ ನಾಮಪತ್ರ ಹಾಕಿದ್ದಾರೆ. ಜೆಡಿಎಸ್‌ನವರು ಟಿಕೆಟ್ ಕೊಡದಿದ್ದರೇ ಸ್ಪರ್ಧಿಸಲು ಒಂದು ಪಾರ್ಟಿ ಬೇಕಲ್ಲ? ಎಂಥಾ ಮುಂದಾಲೋಚನೆ!
ಕಾಗೇರಿಗೆ ಇದೇಂತಹ ಕಾಟ!
ಈ ಸ್ಪೀಕರ್ ಹುದ್ದೆ ಭಾರಿ ಪೀಕಲಾಟ ತರತ್ತೆ ಸ್ವಾಮಿ! ಅಧಿವೇಶನವಿದ್ದಾಗ ಶಾಲಾ ಮಾಸ್ತರರಂತೆ ಆಡಳಿತ, ವಿರೋಧಿ ಎನ್ನದೇ ಪ್ರತಿಯೊಬ್ಬ ಶಾಸಕರನ್ನು ನಿಭಾಯಿಸಿ ಸಾಕಾಗಿಹೋಗುತ್ತದೆ. ಅಧಿವೇಶನ ಮುಗಿದು ಚುನಾವಣೆ ಬಂದರೆ ಹೊಸ ಕಾಟ ಶುರುವಾಗಿಬಿಡುತ್ತದೆ.
ಅದು ರಾಜೀನಾಮೆ ಕೊಡುವವರ ಕಾಟ. ನಮ್ಮ ಸ್ಪೀಕರ್ ಕಾಗೇರಿ ಸಾಹೇಬರು ಇಂತಹುದೇ ಕಾಟದಿಂದ ಬಾಧಿಸಲ್ಪಟ್ಟಿದ್ದಾರೆ! ಏಕೆಂದರೆ, ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೇವಲ ಸ್ಪೀಕರ್ ಮಾತ್ರವಲ್ಲ. ಶಿರಸಿ ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೂಡ. ವಿಶಾಲವಾದ ಈ ಕ್ಷೇತ್ರದಲ್ಲಿ ಪ್ರಚಾರಕ್ಕೆ ಸಾಕಷ್ಟುಸಮಯ ಬೇಕಾಗುತ್ತದೆ. ಪಾಪ ಸ್ಪೀಕರ್ ಕಾಗೇರಿ ಪ್ರಚಾರಕ್ಕೆ ಹೋಗಬೇಕು ಅಂತ ರೆಡಿಯಾಗುತ್ತಿದ್ದಂತೆ ಮೆಸೇಜ್ ಬರತ್ತದೆ.
ಅದು- ‘ಇಂತಹ ಪಕ್ಷದ ಇಂತಹವರು, ಇಂತಹ ಕಾರಣಕ್ಕಾಗಿ ರಾಜೀನಾಮೆ ನೀಡಿ, ಅಂತಹ ಪಕ್ಷವನ್ನು ಸೇರಲು ಅಣಿಯಾಗಿದ್ದಾರೆ. ಹೀಗಾಗಿ ಶಾಸಕ ಸ್ಥಾನದ ರಾಜೀನಾಮೆ ಪಡೆದುಕೊಳ್ಳಲು ತಾವು ಎಲ್ಲಿಗೂ ಹೋಗದೆ ಇದ್ದಲ್ಲೇ ಇದ್ದು ರಾಜೀನಾಮೆ ಅಂಗೀಕರಿಸಿ ಕೃತಾರ್ಥರನ್ನಾಗಿ...’
ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ, ಕೂಡ್ಲಿಗಿ ಬಿಜೆಪಿ ಶಾಸಕ ಎನ್.ವೈ. ಗೋಪಾಲಕೃಷ್ಣ, ದೇವದುರ್ಗ ಶಾಸಕ ಗೂಳಿಹಟ್ಟಿಶೇಖರ, ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ, ಧಾರವಾಡದ ಜಗದೀಶ್ ಶೆಟ್ರು ಇದೇ ರೀತಿ ಬಂದು ರಾಜೀನಾಮೆ ಸಲ್ಲಿಸಿದರು.
ರಾಜೀನಾಮೆ ನೀಡಿ ತಕ್ಷಣ ಹೊರಟಾದರೂ ಹೊರಡುತ್ತಾರ? ಊಹುಂ... ಕೂತು ಉಭಯ ಕುಶಲೋಪರಿ ಮಾತನಾಡಿ, ತಾವು ಯಾಕೆ ರಾಜೀನಾಮೆ ಕೊಡಬೇಕಾಯಿತು. ಮುಂದೇನು ಮಾಡುತ್ತೇವೆ ಎಂಬ ಬಗ್ಗೆ ಗಂಟೆ ಕಾಲ ಸಮಾಲೋಚನೆ ನಡೆಸುತ್ತಾರೆ. ದೂರದಿಂದ ತಮ್ಮ ಬೆಂಬಲಿಗರೊಂದಿಗೆ ಬಂದ ಶಾಸಕರುಗಳಿಗೆ ಆತಿಥ್ಯವನ್ನೂ ನೀಡಬೇಕು. ಇದಕ್ಕೆಲ್ಲ ತುಂಬಾ ಸಮಯ ಹಿಡಿಯುವ ಕೆಲಸ.
ಕಾಗೇರಿ ಸತತ ಆರು ಬಾರಿ ಗೆದ್ದಿದ್ದಾರೆ. ಚುನಾವಣೆ ಎದುರಿಸುವುದು ಹೊಸದಲ್ಲ. ಆದರೆ, ಸ್ಪೀಕರ್ ಹುದ್ದೆ ಅಲಂಕರಿಸಿದ ನಂತರದ ಮೊದಲ ಚುನಾವಣೆಯಿದು. ಪಾಪ, ಕಾಗೇರಿ ಸಾಹೇಬರು ಕೂತಲ್ಲೇ ಸುಸ್ತಾಗಿದ್ದಾರೆ. ರಾಜೀನಾಮೆ ಪರ್ವ ಮುಗಿದರೆ ಸಾಕು ಅಂತ ಕಾಯುತ್ತಿದ್ದಾರಂತೆ.
ಯಾರದ್ದೋ ಹೆಸರಿನಲ್ಲಿ ವಲಸೆ ಹಕ್ಕಿ ಪ್ರಚಾರ!
ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಸಭೆ, ಸಮಾರಂಭ ಅಷ್ಟೇ ಏಕೆ, ನಾಲ್ಕು ಜನರನ್ನು ಸೇರಿಸಿ ಮಾತನಾಡಲು ಆಯೋಗದ ಪರ್ಮಿಷನ್ ಪಡೆಯಬೇಕು ಎಂಬ ಸ್ಥಿತಿಯಿದೆ. ರಾಜಕಾರಣಿಗಳು ನಾನಾ ವೇಷ ಹಾಕಿ ಇಂತಹ ಸಭೆ, ಸಮಾವೇಶ ನಡೆಸಲು ಮುಂದಾದರೆ ಅದನ್ನು ತಡೆಯಲು ತರಹೇವಾರಿ ಪ್ಲಾನ್ ಅನ್ನು ಚುನಾವಣಾಧಿಕಾರಿಗಳು ಮಾಡುತ್ತಾರೆ. ಆದರೆ, ನಮ್ ರಾಮನಗರದಲ್ಲಿ ಚುನಾವಣಾಧಿಕಾರಿಗಳು ಚಾಪೆ ಕೆಳಗೆ ತೂರಿದರೆ, ರಾಜಕಾರಣಿಗಳು ರಂಗೋಲಿ ಕೆಳಗೆ ತೂರ ತೊಡಗಿದ್ದಾರೆ.
ಹೀಗೆ ಚುನಾವಣಾಧಿಕಾರಿಗಳನ್ನೇ ಯಾಮಾರಿಸಿ, ಅವರ ಮೂಗಿನಡಿಯಲ್ಲಿಯೇ ಸಮಾವೇಶ ನಡೆಸಿ ತೋರಿಸಿದವರು ರಾಮನಗರ ಜಿಲ್ಲೆಯಲ್ಲಿ ವಲಸೆ ಹಕ್ಕಿ ಎಂದೇ ಕರೆಯಲ್ಪಡುವ ಪ್ರಭಾವಿ ರಾಜಕಾರಣಿ. ಹೈನುಗಾರಿಕೆ ಕ್ಷೇತ್ರದಲ್ಲಿ ಹೆಸರು ಮಾಡಿರುವ ಆ ವಲಸೆ ಹಕ್ಕಿಗೆ ಚುನಾವಣೆ ಬಂದಾಗಲೆಲ್ಲ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹಾರುವ ಖಯಾಲಿ. ಇದಕ್ಕಾಗಿ ಹೈನುಗಾರರನ್ನು ಒಂದೆಡೆ ಸೇರಿಸಿ ತನ್ನ ಇಮೇಜ್ ತೋರಿಸುವ ಜೊತೆಗೆ ತೂಕ ಹೆಚ್ಚಿಸಿಕೊಳ್ಳುವುದು ವಾಡಿಕೆ.
ನಮ್ಮ ಸರ್ಕಾರ ಬಂದರೆ ಕಾರ‍್ಯಕರ್ತರು ನಾಯಕರಿಗೂ ಸ್ಥಾನಮಾನ: ರಾಹುಲ್ ಗಾಂಧಿ
ಈ ವಾಡಿಕೆಯಂತೆ ಮೊನ್ನೆ 7 ರಿಂದ 8 ಸಾವಿರ ಜನರು ಭಾಗಿಯಾಗಿದ್ದ ರೇಷ್ಮೆ, ಮಾವು ಬೆಳೆಗಾರರು ಹಾಗೂ ಹಾಲು ಉತ್ಪಾದಕ ರೈತ ಸಮಾವೇಶ ಆಯೋಜಿಸಿದ್ದರು. ನೂರಾರು ಖಾಸಗಿ ಬಸ್ ಗಳು ಚೆಕ್ ಪೋಸ್ಟ್ ಗಳನ್ನು ದಾಟಿ ಬಂದಿದ್ದವು. ವಿಸ್ತಾರವಾದ ಶಾಮಿಯಾನದಡಿ ಕುರ್ಚಿಗಳನ್ನು ಹಾಕಲಾಗಿತ್ತು. ಸಮಾವೇಶಕ್ಕೆ ಬಂದವರಿಗೆಲ್ಲ ಕುಡಿಯುವ ನೀರು, ಮಜ್ಜಿಗೆ ಹಾಗೂ ನಿಗದಿತ ಹೋಟೆಲ್ ಗಳಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು.
ಚುನಾವಣಾ ಆಯೋಗದ ಕಟ್ಟುಪಾಡುಗಳನ್ನು ಗಾಳಿಗೆ ತೂರಿ ಇಷ್ಟೆಲ್ಲ ಚಟುವಟಿಕೆಗಳು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ಮುಂಭಾಗದ ಮೈದಾನದಲ್ಲಿಯೇ ನಡೆಯಿತು. ಪೊಲೀಸರೇ ರಕ್ಷಣೆ ಒದಗಿಸಿದರು. ಇದು ರಾಜಕೀಯ ಹಿನ್ನೆಲೆಯುಳ್ಳ ಸಮಾವೇಶ ಎಂಬ ಸಣ್ಣ ಸುಳಿವೂ ಸಿಗದಂತೆ ಕಾರ್ಯಕ್ರಮ ಆಯೋಜಿಸಿ ತಮ್ಮ ಚಾಣಾಕ್ಷತನ ಮೆರೆಯಲಾಯಿತು.
ಹೇಗೆ ಅಂತಿರಾ, ಈ ಸಮಾವೇಶಕ್ಕೆ ಬೇರೊಬ್ಬರ ಹೆಸರಿನಲ್ಲಿ ಅನುಮತಿ ಪಡೆದು ರೈತ ಸಮಾವೇಶದ ಹೆಸರಿನಲ್ಲಿ ಕಾರ್ಯಕ್ರಮ ನಡೆಸಿತು ಈ ವಲಸೆ ಹಕ್ಕಿ.
ದೋಣಿ ಬದಲಾಗಲಿ...
ದೋಣಿ ಬದಲಾಗಲಿ, ಟಿಕೆಟ್ ಸಿಗಲಿ, ವಿಧಾನಸೌಧದ ತೀರವ ಸೇರಲಿ...
ಹೀಗೆ ಹಾಡುತ್ತಿದ್ದ ನಮ್ಮ ಪುತ್ತೂರಿನ ಮಹಿಳಾ ರಾಜಕಾರಣಿಯೊಬ್ಬರು ಬಲೇ ಚಾಲಾಕಿ. ನಮ್ ಈ ಮೇಡಂಗೆ ದೂರಾಲೋಚನೆ ಸಿಕ್ಕಾಪಟ್ಟೆಸ್ಟ್ರಾಂಗು. ಯಾಕೆ ಅಂತೀರಾ? ಸಾಮಾನ್ಯವಾಗಿ ರಾಜಕಾರಣಿಗಳು ಟಿಕೆಟ್‌ಗಾಗಿ ಒಂದು ರಾಜಕೀಯ ಪಕ್ಷ ಎಂಬ ದೋಣಿಯಲ್ಲಿ ನಿಯತ್ತಾಗಿ ಸಾಗುತ್ತಿರುತ್ತಾರೆ. ಸ್ವಲ್ಪ ಡೌಟ್ ಬಂತೋ ಮತ್ತೊಂದು ದೋಣಿಯ ಜತೆ ಸಂಪರ್ಕ ಸಾಧಿಸುತ್ತಾರೆ. ತಾನಿದ್ದ ದೋಣಿ ಅಲುಗಾಡುತ್ತ ಮುಳುಗುವ ಮುನ್ಸೂಚನೆ ದೊರೆತಾಗ ಛಂಗನೆ ಮತ್ತೊಂದು ದೋಣಿಗೆ ಹಾರಿಬಿಡ್ತಾರೆ.
ಈ ಹಾರುವ ಟೈಮು ಬರೋದು. ಟಿಕೆಟ್ ಸಿಕಿಲ್ಲ ಅಂತ ಗೊತ್ತಾದ ನಂತರ.
ಆದರೆ, ಪುತ್ತೂರ ಮೇಡಂ ಡಿಫರೆಂಟ್ ಮಾರಾಯ್ರೆ. ತನಗೆ ಇನ್ನು ಟಿಕೆಟ್ ಸಿಗಲ್ಲ ಅಂತ ಅಶರೀರವಾಣಿ ಬಂತೋ ಗೊತ್ತಿಲ್ಲ, ಟಿಕೆಟ್ ಘೋಷಣೆ ಮೊದಲೇ ರಾತ್ರೋರಾತ್ರಿ ಹಾರಿ ಪ್ರಾದೇಶಿಕ ಪಕ್ಷದ ಟಿಕೆಟ್ ಗಿಟ್ಟಿಸಿಕೊಂಡಿರು.
ಪುತ್ತೂರಿನ ರಾಷ್ಟ್ರೀಯ ಪಕ್ಷದ ಈ ನಾಯಕಿ ಟಿಕೆಟ್ ಆಕಾಂಕ್ಷಿಯಾಗಿದ್ದವರು ಇವರು. ಸಾಕಷ್ಟುಲಾಬಿಯನ್ನೂ ಮಾಡಿದ್ದರು. ಪಕ್ಷದ ‘ಪ್ರಚಾರ ಚೀಟಿ’ಯನ್ನು ಮನೆ ಮನೆಗೆ ಹಂಚಿ ಅದರ ಸಾಧನೆಯನ್ನೂ ಮುಖಂಡರ ಮುಂದಿಟ್ಟು ಟಿಕೆಟ್ ಕೊಡಿ ಎಂದು ಅಲವತ್ತುಕೊಂಡಿದ್ದಾರೆ. ಈ ನಡುವೆ ಎದುರಾಳಿ ಪಕ್ಷದಲ್ಲಿ ಮಹಿಳೆಗೆ ಟಿಕೆಟ್ ನೀಡಿದ ಮೇಲಂತೂ ಇವರ ‘ಮಹಿಳಾ ಲಾಬಿ’ ಭಲೇ ಜೋರಾಗಿತ್ತು.
ಆದರೆ, ಸ್ವಪಕ್ಷದಲ್ಲಿ ಇವರಿಗಿಂತ ಬಲಿಷ್ಠ ಮಹಿಳಾ ಆಕಾಂಕ್ಷಿ ಜತೆಗೆ ಮತ್ತೊಬ್ಬರು ‘ಹೊಸ’ ಬಲಾಢ್ಯರ ಹೆಸರು ಪಕ್ಷದ ಅಂತಿಮ ತೀರ್ಮಾನಕ್ಕೆ ಹೋಗಿತ್ತು. ಏನೇ ಮಾಡಿದರೂ ಇನ್ನು ತನಗೆ ಟಿಕೆಟ್ ಸಿಗೋದಿಲ್ಲ ಎನ್ನುವುದು ಗೊತ್ತಾಯಿತೋ ಏನೋ ಪ್ರಾದೇಶಿಕ ಪಕ್ಷಕ್ಕೆ ಹಾರಿದ್ದಾರೆ.
ಕಾಂಗ್ರೆಸ್ ವಿಮಾನದಲ್ಲಿ ಶೆಟ್ಟರ್: ಇಂದು 'ಕೈ' ಹಿಡಿಯಲಿರುವ ಕಮಲ ನಾಯಕ
ಪಾಪ, ಇವರ ಹಳೇ ದೋಣಿಯಲ್ಲಿ ಇದ್ದ ಉಳಿದ ‘ಕುಚುಕು ಗೆಳೆಯರು’, ಸಹಪ್ರಯಾಣಿಕರ ಪಾಡು ಏನಾಯ್ತೋ ಗೊತ್ತಿಲ್ಲ.
-ಅಂಶಿ ಪ್ರಸನ್ನಕುಮಾರ್
- ವಸಂತಕುಮಾರ್ ಕತಗಾಲ
- ಎಂ.ಅಫೆä್ರೕಜ್ ಖಾನ್
- ಸಂದೀಪ್ ವಾಗ್ಲೆ ಮಂಗಳೂರು