ಸಚಿವರಾಗಿರುವ ಸತೀಶ ಅವರಿಗೆ ಬೆಳಗಾವಿ ಉಸ್ತುವಾರಿ ಸಚಿವರಾಗುವುದು ಬಹುತೇಕ ಖಚಿತ ಎನ್ನುವ ಮಾತುಗಳು ಬಲವಾಗಿವೆ. ಈ ಮೂಲಕ ಸತೀಶ ಜಾರಕಿಹೊಳಿ ಹಾದಿ ಸುಗಮವಾಗಿದೆ.
ಶ್ರೀಶೈಲ ಮಠದ
ಬೆಳಗಾವಿ(ಜೂ.03): ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಹೊಣೆ ಯಾರಿಗೆ ಎನ್ನುವ ಬಗ್ಗೆ ತೀವ್ರ ಕುತೂಹಲ, ಚರ್ಚೆ ಜೋರಾಗಿದೆ. ಹಿರಿಯ ಸಚಿವರಾಗಿರುವ ಸತೀಶ ಜಾರಕಿಹೊಳಿ ಅವರಿಗೆ ಬೆಳಗಾವಿ ಉಸ್ತುವಾರಿ ಪಟ್ಟಸಿಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ಜಿಲ್ಲೆಯ ಇನ್ನೊಬ್ಬರು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಈಗ ಬೇರೆ ಜಿಲ್ಲೆಯತ್ತ ಆಸಕ್ತಿ ತೋರಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳ ಪೈಕಿ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಸ್ಪಷ್ಟಬಹುಮತದೊಂದಿಗೆ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೂ ಬಂದಿದೆ. ಇಬ್ಬರಿಗೆ ಸಚಿವ ಸ್ಥಾನವೂ ದೊರೆತಿದೆ. ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಲೋಕೋಪಯೋಗಿ ಖಾತೆ ಸಚಿವರಾಗಿದ್ದರೇ, ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವರಾಗಿದ್ದಾರೆ. ಆದರೆ, ಇಲ್ಲಿ ಹಿರಿಯ ಸಚಿವರಾಗಿರುವ ಸತೀಶ ಅವರಿಗೆ ಬೆಳಗಾವಿ ಉಸ್ತುವಾರಿ ಸಚಿವರಾಗುವುದು ಬಹುತೇಕ ಖಚಿತ ಎನ್ನುವ ಮಾತುಗಳು ಬಲವಾಗಿವೆ. ಈ ಮೂಲಕ ಸತೀಶ ಜಾರಕಿಹೊಳಿ ಹಾದಿ ಸುಗಮವಾಗಿದೆ.
ಅತ್ತೆ, ಸೊಸೆ ಇಬ್ಬರಿಗೂ ಗೃಹಲಕ್ಷ್ಮಿ ಯೋಜನೆ ಕೊಡುವಂತೆ ಒತ್ತಾಯ!
ಆದರೆ, ಧಾರವಾಡ ಜಿಲ್ಲೆಯ ಉಸ್ತುವಾರಿ ಆಗಲು ಮೊದಲ ಬಾರಿಗೆ ಸಚಿವೆಯಾಗಿರುವ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ. ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರವರ ಆಪ್ತೆಯಾಗಿರುವ ಲಕ್ಷ್ಮೇ ಅವರ ಮೂಲಕವೇ ತೀವ್ರ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ಆದರೆ, ಧಾರವಾಡ ಉಸ್ತುವಾರಿ ಸ್ಥಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಸಂತೋಷ ಲಾಡ್ ಪ್ರಮುಖ ಆಕಾಂಕ್ಷಿಯಾಗಿದ್ದಾರೆ. ಇನ್ನು ಡಿ.ಕೆ.ಶಿವಕುಮಾರ ಆಪ್ತರಾಗಿರುವ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಬೆಳಗಾವಿ ಉಸ್ತುವಾರಿ ಸಿಗುವ ಸಾಧ್ಯತೆಗಳು ತೀರಾ ಕಡಿಮೆ. ಏಕೆಂದರೆ ಹಿರಿಯ ಸಚಿವ ಸತೀಶ ಜಾರಕಿಹೊಳಿ ತಮ್ಮ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಬಿಟ್ಟುಕೊಡಲು ಒಪ್ಪುವುದು ತೀರಾ ಕಷ್ಟಸಾಧ್ಯ. ಹಾಗಾಗಿ, ಹೆಬ್ಬಾಳಕರ ಅವರು ಡಿ.ಕೆ.ಶಿವಕುಮಾರ ಮೂಲಕ ಧಾರವಾಡ ಜಿಲ್ಲಾ ಉಸ್ತುವಾರಿಗೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ರಾಜಕಾರಣದಲ್ಲಿ ತಾಳ್ಮೆ ಮುಖ್ಯ, ಡಿಕೆಶಿ ಜತೆ ಸೌಜನ್ಯಯುತ ಭೇಟಿ: ಲಕ್ಷ್ಮಣ ಸವದಿ
ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದ ಬಿಜೆಪಿ:
ಸಂಪ್ರದಾಯದಂತೆ ಪ್ರತಿ ಸರ್ಕಾರದಲ್ಲಿ ಜಿಲ್ಲೆಯ ಸಚಿವರೇ ಉಸ್ತುವಾರಿಗಳಾಗುವುದು ವಾಡಿಕೆ ಇತ್ತು. ಜಿಲ್ಲೆಯವರು ಯಾರೂ ಸಚಿವರಿಲ್ಲದ ವೇಳೆ ಮಾತ್ರ ಬೇರೆ ಜಿಲ್ಲೆಯ ಸಚಿವರಿಗೆ ಉಸ್ತುವಾರಿ ಹೊಣೆ ನೀಡಲಾಗುತ್ತಿತ್ತು. ಆದರೆ, ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಸಚಿವರಾಗಿದ್ದಾಗಲೂ ಬೇರೆ ಜಿಲ್ಲೆಯ ಸಚಿವರನ್ನೇ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿಹಾಡಿತ್ತು.
ಆದರೆ, ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದರು. ಬೇರೆ ಜಿಲ್ಲೆಯರಾದ ಗೋವಿಂದ ಕಾರಜೋಳ ಅವರಿಗೆ ಉಸ್ತುವಾರಿ ಪಟ್ಟವಹಿಸಲಾಗಿತ್ತು. ಆದರೆ, ಅವರು ಜಿಲ್ಲೆಗೆ ಅಪರೂಪದ ಅತಿಥಿಯಾಗಿದ್ದರು. ರಾಜಕೀಯ ಚಟುವಟಿಕೆಗಳು ಸ್ತಬ್ಧವಾಗಿದ್ದವು. ರಮೇಶ ಜಾರಕಿಹೊಳಿ ಉಸ್ತುವಾರಿ ಸಚಿವರಾಗಿದ್ದ ವೇಳೆ ಜಿಲ್ಲೆಯಲ್ಲಿ ಸಕ್ರಿಯ ರಾಜಕೀಯ ಚಟುವಟಿಕೆ ನಡೆಯುತ್ತಿದ್ದವು. ಆದರೆ, ಅವರು ಸಚಿವ ಸ್ಥಾನ ಕಳೆದುಕೊಂಡಿದ್ದರಿಂದ ಉಸ್ತುವಾರಿ ಹೊಣೆಯನ್ನು ಗೋವಿಂದ ಕಾರಜೋಳ ಅವರಿಗೆ ವಹಿಸಲಾಗಿತ್ತು. ಪ್ರಭಾವಿ ನಾಯಕರಾಗಿದ್ದ ದಿ.ಉಮೇಶ ಕತ್ತಿ ಅವರಿಗೆ ಬಾಗಲಕೋಟೆ ಹಾಗೂ ಶಶಿಕಲಾ ಜೊಲ್ಲೆ ಅವರಿಗೆ ವಿಜಯಪುರ ಜಿಲ್ಲಾ ಉಸ್ತುವಾರಿ ಹೊಣೆ ನೀಡಲಾಗಿತ್ತು. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಈ ಹಿಂದೆ ತಾನು ಅನುಸರಿಸುತ್ತಿದ್ದ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗುತ್ತದೆಯೋ ? ಇಲ್ಲವೋ ಎಂಬುದನ್ನು ಕಾದು ನೋಡಬೇಕು.