ಸವದತ್ತಿಯಲ್ಲೇಕೆ ಗೆಲ್ಲಲಿಲ್ಲ ಅನುಕಂಪದ ಅಲೆ?: ಕುಟುಂಬ ರಾಜಕಾರಣವೇ ಬಿಜೆಪಿಗೆ ಮುಳುವಾಯಿತೇ?

By Kannadaprabha News  |  First Published May 21, 2023, 1:13 PM IST

ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಜಯದ ಮಾಲೆ ಹಾಕುವ ಮೂಲಕ ವಿಶ್ವಾಸ ವೈದ್ಯ ಅವರನ್ನು ಮತಕ್ಷೇತ್ರದ ಹೊಸ ಶಾಸಕರನ್ನಾಗಿ ಚುನಾಯಿಸಿ ಬದಲಾವಣೆ ತಂದಿದ್ದಾರೆ.


ಸವದತ್ತಿ(ಮೇ.21):  ಸುಮಾರು 2 ದಶಕಗಳಿಂದ ಮಾಮನಿ ಕುಟುಂಬ ಹಾಗೂ ಬಿಜೆಪಿಗೆ ಸುಕ್ಷೇತ್ರ, ಭದ್ರಕೋಟೆಯಾಗಿದ್ದ ಸವದತ್ತಿ ಯಲ್ಲಮ್ಮ ಮತಕ್ಷೇತ್ರ ಇಂದು ‘ಕೈ’ ವಶವಾಗಿದೆ. ಟಿಕೆಟ್‌ ಹಂಚಿಕೆ ವೇಳೆ ಬಿಜೆಪಿ ಅನುಕಂಪದ ಅಲೆಯ ತಂತ್ರ ಅನುಸರಿಸಿದರೆ ಮತದಾನದ ವೇಳೆ ಮತದಾರರು ಬೇರೆಯದ್ದೇ ತಿರುಮಂತ್ರ ಹಾಕಿಬಿಟ್ಟಿದ್ದಾರೆ.

ಮಾಮನಿ ಕುಟುಂಬವು ಸವದತ್ತಿಯಲ್ಲಿ ಆರು ಬಾರಿ ಅಧಿಕಾರಕ್ಕೆ ಬಂದಿದ್ದು, ದಿ.ಸಿ.ಎಂ.ಮಾಮನಿಯವರು ಎರಡು ಬಾರಿ, ದಿ.ರಾಜಣ್ಣ ಮಾಮನಿಯವರು ಒಂದು ಬಾರಿ ಹಾಗೂ ದಿ.ಆನಂದ ಮಾಮನಿಯವರು ಮೂರು ಬಾರಿ ಶಾಸಕರಾಗುವ ಮೂಲಕ ಮಾಮನಿ ಕುಟುಂಬ ಸವದತ್ತಿ ಕ್ಷೇತ್ರದಲ್ಲಿ ಶಾಸಕತ್ವದ ಗುತ್ತಿಗೆ ಹಿಡಿದಂತಿತ್ತು.

Latest Videos

undefined

ವೀರಶೈವ-ಲಿಂಗಾಯತ ಲೆಕ್ಕಾಚಾರ ತಿರುಗುಬಾಣ: ಬಿಜೆಪಿಗೆ ಉಲ್ಟಾ ಹೊಡೆದ ತಂತ್ರಗಾರಿಕೆ

ವಿಧಾನಸಭೆ ಉಪಸಭಾಧ್ಯಕ್ಷರಾಗಿದ್ದ ದಿ.ಆನಂದ ಮಾಮನಿಯವರ ರಾಜಕೀಯ ತಂತ್ರಗಳು ಹಾಗೂ ಅವರಲ್ಲಿದ್ದಂತಹ ವಿಶೇಷ ಸಂಘಟನಾತ್ಮಕ ಚಟುವಟಿಕೆಗಳು ಅವರ ನಿಧನದ ನಂತರ ಬಹಳಷ್ಟು ಮಟ್ಟಿಗೆ ಬಿಜೆಪಿ ವಲಯದಲ್ಲಿ ಕ್ಷೀಣಿಸುತ್ತ ಬಂದಿತು. ಇದರಿಂದಾಗಿ ಬಿಜೆಪಿ ಪ್ರಾಬಲ್ಯ ಕ್ಷೇತ್ರದಲ್ಲಿ ಕುಗ್ಗತೊಡಗಿತು ಎಂದೇ ವಿಶ್ಲೇಷಿಸುತ್ತಿದ್ದಾರೆ ಸ್ಥಳೀಯ ರಾಜಕಾರಣ ಬಲ್ಲವರು.

ಚುನಾವಣೆ ಘೋಷಣೆಗೂ ಮುಂಚೆ ಬಿಜೆಪಿ ವಲಯದಲ್ಲಿ ಹಲವಾರು ಗೊಂದಲಗಳು ಸೃಷ್ಟಿಯಾದಾಗ ಶಮನಗೊಳಿಸಲು ಬಿಜೆಪಿ ಮುಖಂಡರು ಪ್ರಯತ್ನಿಸಿದರಾದರೂ ಯಶಸ್ಸು ಕಾಣಲಿಲ್ಲ. 2004ರಿಂದ 2018ರವರೆಗೆ ಈ ಕ್ಷೇತ್ರದಲ್ಲಿ ಮಾಮನಿ ಕುಟುಂಬದ ರಾಜಕಾರಣ ಹೊಂದಾಣಿಕೆ ರಾಜಕಾರಣವಾಗಿತ್ತು. ಆನಂದ ಮಾಮನಿಯವರ ನಿಧನದ ನಂತರವೂ ಈ ಹೊಂದಾಣಿಕೆ ಮುಂದುವರೆದಿತ್ತು.

2023ರ ಈ ಚುನಾವಣೆಯಲ್ಲಿ ರತ್ನಾ ಮಾಮನಿ ಅವರಂತೆ ಮಾಜಿ ಶಾಸಕ ದಿ.ರಾಜಣ್ಣ ಮಾಮನಿಯವರ ಸಹೋದರ ವಿರೂಪಾಕ್ಷ ಮಾಮನಿ ಸಹ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಅಲ್ಲದೆ, ಮಾಮನಿ ಕುಟುಂಬದಲ್ಲಿ ಯಾರಿಗೇ ಟಿಕೆಟ್‌ ಕೊಟ್ಟರೂ ಸರಿ. ಬಂಡಾಯ ಏಳದೆ ಅವರ ಪರವಾಗಿ ನಿಲ್ಲುವುದಾಗಿ ವಿರೂಪಾಕ್ಷ ಮಾಮನಿ ಹೇಳಿದ್ದರಿಂದ ಬಿಜೆಪಿ ಟಿಕೆಟ್‌ ರತ್ನಾ ಮಾಮನಿ ಅವರ ಪಾಲಾಗಿತ್ತು. ಅಲ್ಲದೇ, ಕೊಟ್ಟಮಾತಿನಂತೆ ಚುನಾವಣೆ ನಿಭಾಯಿಸ ತೊಡಗಿದ್ದರು.
ಇದಕ್ಕೂ ಮುನ್ನ ವಿರೂಪಾಕ್ಷ ಮಾಮನಿಯವರನ್ನೇ ಬಿಜೆಪಿ ಅಭ್ಯರ್ಥಿಯನ್ನಾಗಿಸಿ ಗೆಲ್ಲಿಸಿಕೊಳ್ಳಲು ಕಾರ್ಯಕರ್ತರು ತಯಾರಿ ನಡೆಸಿದ್ದರು. ಆದರೆ, ವಿರೂಪಾಕ್ಷ ಮಾಮನಿ ಅವರಿಗೆ ಟಿಕೆಟ್‌ ಕೈ ತಪ್ಪಿದ ತಕ್ಷಣ ಬಿಜೆಪಿಯ ಕೆಲವರು ತಮ್ಮ ನಿಲುವು ಬದಲಿಸಿ ಕಾಂಗ್ರೆಸ್‌ ಪಕ್ಷದತ್ತ ವಾಲಿದರು. ಇನ್ನು ಕೆಲವರು ತಟಸ್ಥ ಉಳಿದುಬಿಟ್ಟರು.

ಆನಂದ ಮಾಮನಿ ಜತೆ ಇದ್ದಂಥ ಹಲವು ಮುಖಂಡರು ಮತ್ತು ಬೆಂಬಲಿಗರನ್ನು ನೇರವಾಗಿ ಸಂಪರ್ಕಿಸಲು ಇವರಿಂದ ಸಾಧ್ಯವಾಗಲಿಲ್ಲ. ರತ್ನಾ ಮಾಮನಿಯವರು ಬಿಜೆಪಿಯ ಪ್ರಮುಖರನ್ನು ಭೇಟಿಯಾಗುವುದರೊಳಗೆ ಅನೇಕರು ಕಾಂಗ್ರೆಸ್‌ ಬೆಂಬಲಕ್ಕೆ ನಿಂತು ಬಿಟ್ಟಿದ್ದರು. ಬಿಜೆಪಿ ಬಿಟ್ಟು ಹೋದವರು ಮರಳಿ ಬರುವ ಸಾಧ್ಯತೆಯೇ ಇರಲಿಲ್ಲ. ತಕ್ಷಣ ಎಚ್ಚೆತ್ತುಕೊಂಡ ವಿರೂಪಾಕ್ಷ ಮಾಮನವಿ ಅವರು ಕೆಲ ಪುರಸಭೆ ಸದಸ್ಯರು ಮತ್ತು ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್‌ ಕಡೆ ಮುಖ ಮಾಡಿದ್ದನ್ನು ಗಮನಿಸಿ ತಡೆದು ಕ್ಷೇತ್ರದಾದ್ಯಂತ ರತ್ನಾ ಮಾಮನಿ ಅವರ ಪರ ಪ್ರಚಾರ ಪ್ರಾರಂಭಿಸಿದರು. ಆದರೆ, ಅಷ್ಟೊತ್ತಿಗಾಗಲೇ ಬಿಜೆಪಿಯ ಭದ್ರಕೋಟೆಯ ಅಲ್ಲಲ್ಲಿ ಬಿರುಕು ಬಿಟ್ಟಿತ್ತು, ಅಸಮಾಧಾನದ ಹೊಗೆಯಾಡಲಾರಂಭಿಸಿತು. ಇದೇ ಕಾಂಗ್ರೆಸ್‌ಗೆ ವರದಾನವಾಯಿತು.

ಬೆಳಗಾವಿ: ತಪ್ಪಿದ ಡಿಸಿಎಂ, ಸತೀಶ್‌ ಜಾರಕಿಹೊಳಿಗೆ ನಾಲ್ಕನೇ‌ ಬಾರಿಗೆ ಮಂತ್ರಿಗಿರಿ..!

ಜೆಡಿಎಸ್‌ ಅಭ್ಯರ್ಥಿ ಕಾಂಗ್ರೆಸ್‌ ಮತಗಳನ್ನು ವಿಭಜನೆ ಮಾಡಬಹುದು ಎಂಬ ಲೆಕ್ಕಾಚಾರ ಬಿಜೆಪಿಯಲ್ಲಿತ್ತು. ಹಾಗೇನಾದರೂ ಆದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ಬಿಜೆಪಿ ಸರಳವಾಗಿ ಜಯ ಸಾಧಿಸಬಹುದು ಎಂಬ ಊಹೆ, ಲೆಕ್ಕಾಚಾರ ಈ ಬಾರಿ ಸಂಪೂರ್ಣ ಉಲ್ಟಾ ಹೊಡೆದಿದೆ.

ಹೈಕಮಾಂಡ್‌ ಲೆಕ್ಕಾಚಾರ ಉಲ್ಟಾ!

ಆನಂದ ಮಾಮನಿಯವರು ಮೂರು ಅವಧಿಯಲ್ಲಿ ಮಾಡಿರುವ ಸಾಧನೆಗಳು ಮತ್ತು ಅವರ ನಿಧನದ ನಂತರ ಅನುಕಂಪದ ಅಲೆಯಲ್ಲಿ ಬಿಜೆಪಿ ಗೆಲವು ಸಾಧಿಸಬಹುದು ಎಂಬುದು ಬಿಜೆಪಿ ಮುಖಂಡರ ಲೆಕ್ಕಾಚಾರವಾಗಿತ್ತು. ಹಾಗಾಗಿಯೇ ರತ್ನಾ ಮಾಮನಿ ಅವರಿಗೆ ಟಿಕೆಟ್‌ ನೀಡಿದ್ದರು. ಆದರೆ, ಬಿಜೆಪಿಯ ಈ ಲೆಕ್ಕಾಚಾರವನ್ನು ಮತಕ್ಷೇತ್ರದ ಜನರು ತಲೆಕೆಳಗೆ ಮಾಡಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಜಯದ ಮಾಲೆ ಹಾಕುವ ಮೂಲಕ ವಿಶ್ವಾಸ ವೈದ್ಯ ಅವರನ್ನು ಮತಕ್ಷೇತ್ರದ ಹೊಸ ಶಾಸಕರನ್ನಾಗಿ ಚುನಾಯಿಸಿ ಬದಲಾವಣೆ ತಂದಿದ್ದಾರೆ.

click me!