ಒಮ್ಮೆ ಮಹಾದೇವ್ ರೋಡ್ ಬಂಗ್ಲೆ ತೆಗೆದುಕೊಂಡ್ರೆ ಮುಂದಿನ ಚುನಾವಣೆಯಲ್ಲಿ ಪಕ್ಷದಿಂದ ಟಿಕೆಟ್ ಸಿಗೋದಿಲ್ಲ ಎನ್ನುವಂತಾಗಿದೆ. ಹೆಚ್ಚು ಕಮ್ಮಿ ಈ ಮಹದೇವ್ ರೋಡ್‌ನಲ್ಲಿದ್ದ 8 ಮಂದಿ ಸಂಸದರಿಗೆ ಬಂಗ್ಲೆಯನ್ನು ನೀಡಲಾಗಿತ್ತು. ಐದು ವರ್ಷ ಇಲ್ಲೇ ಇದ್ದು ಬಿಜೆಪಿ ಪಕ್ಷವನ್ನು ಪ್ರತಿನಿಧಿಸಿದ್ದ ಐವರು ಸಂಸದರಿಗೆ ಈ ಬಾರಿ ಟಿಕೆಟ್ ನೀಡಿಲ್ಲ. ಒಬ್ಬರು ಸಂಸದರು ಸ್ವಯಂ ನಿವೃತ್ತಿ ಘೋಷಿಸಿದರು
- ಡೆಲ್ಲಿ ಮಂಜು
ಬಿರುಬಿಸಿಗೆಯ ಸೂರ್ಯ ಶಿಕಾರಿಯ ಈ ಹೊತ್ತಲ್ಲಿ ಮಹದೇವ್‌ನನ್ನು ನೆನೆಯದೆ ಬೇರೆ ದಾರಿ ಇಲ್ಲ ಬಿಡಿ. ಅದರಲ್ಲೂ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸೂರ್ಯ ಭಗವಾನ್ ವಕ್ರದೃಷ್ಠಿ ಬಿಟ್ಟೇ ಇರುತ್ತಾನೆ. ನೆತ್ತಿ ಸುಡುವ ಸಮಯದಲ್ಲಿ ಮಹದೇವನ ನೆನಕೆ ಅತ್ಯಗತ್ಯ ಅನ್ನಿಸುತ್ತೆ. ಇದೇ ಮಹದೇವ ಆರು ಮಂದಿಯ ಸಂಸದರ ರಾಜಕೀಯ ಭವಿಷ್ಯಕ್ಕೆ ಸೊನ್ನೆ ಸುತ್ತಿದ್ದಾನೆ ಅಂದ್ರೆ ನಂಬ್ತಿರಾ..! ಈ ಕಾರಣಕ್ಕೆ ನೆನಪಾಗುತ್ತಿದ್ದಾನೆ ದೆಹಲಿಯ ಈ ಮಾದಪ್ಪ.!
ಅಂದಾಗೆ ದೆಹಲಿ ರಸ್ತೆಯೊಂದರ ವ್ಯಥ್ಯೆಯ ಕಥೆ ಇದು. ಅದರ ಹೆಸರು ಮಹದೇವ್ ರೋಡ್! ನವದೆಹಲಿಯ ಲುಟಿಯನ್ಸ್ ಜೋನ್ ನಲ್ಲಿ ಈ ಹೆಸರು ಬಹಳ ಚಿರಪರಿಚಿತ. ಪ್ರಭಾವಿಗಳು ಇರುವ ಮಾರ್ಗ ಕೂಡ. ಈ ಮಹದೇವ್ ರೋಡ್, ಜಿ.ಆರ್.ಜಿ ಮಾರ್ಗ್, ಬಿಶಂಬರ್ ದಾಸ್ ಮಾರ್ಗ್ ಸಂಸತ್ ಭವನಕ್ಕೆ ತೀರ ಹತ್ತಿರ ಇರುವ ಮಾರ್ಗಗಳು. ಈ ರಸ್ತೆಗಳಲ್ಲಿ ಹೊರಟರೆ ಹೆಚ್ಚೆಂದ್ರೆ ೧೦ ನಿಮಿಷಗಳಲ್ಲಿ ಸಂಸತ್ ಭವನ ತಲುಪ ಬಹುದು. ಇಂಥದ್ದೇ ಕಾರಣಕ್ಕೆ ಈ ಎಲ್ಲಾ ರಸ್ತೆ ಅಥವಾ ಪ್ರದೇಶಗಳಲ್ಲಿ ಸಂಸದರಿಗೆ (ಎಂ.ಪಿ. ಬಂಗ್ಲೋ) ನಿವಾಸಗಳನ್ನು ಮಾಡಿಕೊಡಲಾಗಿದೆ.
ಮಹದೇವ್ ರೋಡ್ ನೆನೆಯೋಕೆ ಈಗೊಂದು ಸಕಾರಣವೂ ಇದೆ. ಮೋದಿ ೨.೦ ನಲ್ಲಿ ಐದು ವರ್ಷಗಳ ಕಾಲ ಇದೇ ಮಹದೇವ್ ರೋಡ್ ನಲ್ಲಿ ಸಂಸದರ ನಿವಾಸ ಪಡೆದು, ಎಂಟು ಮಂದಿ ಸಂಸದರು ತಮ್ಮ ಕರ್ತವ್ಯ ನಿರ್ವಹಿಸಿದ್ದರು. ಆದ್ರೆ ಸಾರ್ವತ್ರಿಕ ಚುನಾವಣೆ ಘೋಷಣೆ ಯಾವಾಗ ಆಯ್ತೋ ಆಗಿಂದಲೂ ಕೂಡ ಈ ಮಹದೇವ್ ರೋಡ್ ಒಂದು ರೀತಿಯಲ್ಲಿ `ಖಾಲಿ ದೇವ್ ರೋಡ್' ಆಗಿ ಮಾರ್ಪಟ್ಟಿದೆ! ಬಿಕೋ ಎನ್ನುತ್ತಿದೆ. ಈ ಮಹದೇವ್, ಹೀಗೆ ಖಾಲಿ ದೇವ್ ಆಗಿರೋದರ ಹಿಂದೆ ಒಂದು ಸೋಜಗದ ಸಂಗತಿಯೂ ಇದೆ.
8 ಮತ್ತು 3 :
ಹೆಚ್ಚು ಕಮ್ಮಿ ಈ ಮಹದೇವ್ ರೋಡ್‌ನಲ್ಲಿದ್ದ 8 ಮಂದಿ ಸಂಸದರಿಗೆ ಬಂಗ್ಲೆಯನ್ನು ನೀಡಲಾಗಿತ್ತು. ಐದು ವರ್ಷ ಇಲ್ಲೇ ಇದ್ದು ಬಿಜೆಪಿ ಪಕ್ಷವನ್ನು ಪ್ರತಿನಿಧಿಸಿದ್ದ ಐವರು ಸಂಸದರಿಗೆ ಈ ಬಾರಿ ಟಿಕೆಟ್ ನೀಡಿಲ್ಲ. ಒಬ್ಬರು ಸಂಸದರು ಸ್ವಯಂ ನಿವೃತ್ತಿ ಘೋಷಿಸಿದರು. ಕೆಲವರ ವಿರುದ್ಧ ವಿರೋಧಿ ಅಲೆ, ಕೆಲವರು ತುಂಬಾ ಚನ್ನಾಗಿ ಸಂಸದರ ಕೆಲಸ ಮಾಡಿದವರು ಇದ್ರೂ ಕೂಡ ಕಮಲ ಪಕ್ಷ ಅಥವಾ ಕಮಲ ನಾಯಕರು ಟಿಕೆಟ್ ನೀಡಲು ನಿರಾಕರಿಸಿದ್ದಾರೆ.
ಈ 6 ಮಂದಿಯಲ್ಲಿ ಕರ್ನಾಟಕ ಇಬ್ಬರ ಸಂಸದರು ಇದ್ದಾರೆ. ಇನ್ನು ಒಬ್ಬರು ಸ್ವಯಂ ನಿವೃತ್ತಿ ಘೋಷಿಸಿದ್ದಾರೆ. ಅದರಲ್ಲೂ ಒಂದೇ ಲೇನ್‌ನಲ್ಲಿ ಅಕ್ಕಪಕ್ಕದಲ್ಲಿದ್ದ ಕರ್ನಾಟಕದ ಇಬ್ಬರು ಸಂಸದರಿಗೆ ಈ ಬಾರಿ ಟಿಕೆಟ್ ಸಿಕ್ಕಿಲ್ಲ. ಕರ್ನಾಟಕ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮೈಸೂರು ಸಂಸದ ಪ್ರತಾಪ್ ಸಿಂಹ್ ಟಿಕೆಟ್ ನಿರಾಕರಿಸಲಾಯಿತು. ಇಷ್ಟರ ನಡುವೆ ಹಾವೇರಿ ಸಂಸದ ಶಿವಕುಮಾರ್ ಉದಾಸಿ ತಮಗೆ ಟಿಕೆಟ್ ಬೇಡ ಅಂಥ ಸ್ವಯಂ ನಿವೃತ್ತಿ ಘೋಷಿಸಿ, ಚುನಾವಣಾ ರಾಜಕೀಯದಿಂದ ದೂರ ಇರುವುದಾಗಿ ಹೇಳಿದರು. ಇವರ ಈ ನಿರ್ಣಯವನ್ನು ಬಿಜೆಪಿ ಹೈಕಮಾಂಡ್‌ನ್ನು ಕೂಡ ಒಪ್ಪಿತು.
ಅದೇ ರೀತಿ ಇದೇ ರಸ್ತೆಯಲ್ಲಿದ್ದ ಹೊಸ ದೆಹಲಿ ಕ್ಷೇತ್ರ ಸಂಸದೆ ಮೀನಾಕ್ಷಿ ಲೇಖಿ, ವಿದೇಶಾಂಗ ಇಲಾಖೆಯ ರಾಜ್ಯ ಸಚಿವೆಯಾಗಿ ಕೆಲಸ ಮಾಡಿದವರು. ಇವರಿಗೂ ಕೂಡ ಬಿಜೆಪಿ ಟಿಕೆಟ್ ಕಟ್ ಮಾಡಿ, ಮಾಜಿ ಸಚಿವೆ ಸುಷ್ಮಾಸ್ವರಾಜ್ ಪುತ್ರಿ ಬಾನ್ಸೂರಿ ಸ್ವರಾಜ್‌ಗೆ ಟಿಕೆಟ್ ನೀಡಿದೆ. ರಾಜಸ್ತಾನದ ಜಾಲೋರ್ ಕ್ಷೇತ್ರದ ಸಂಸದರಾಗಿದ್ದ ದೇವ್ ಜಿ ಪಟೇಲ್ ಅವರಿಗೆ ಬಿಜೆಪಿ ಟಿಕೆಟ್ ಕಟ್ ಮಾಡಿದೆ. ಗುಜರಾತಿನ ಅಮರೇಲಿ ಕ್ಷೇತ್ರದ ಸಂಸದ ನಾರಾಯನ್ ಬಾಯ್ ಕಚಾಡಿಗೂ ಬಿಜೆಪಿ ಟಿಕೆಟ್ ನಿರಾಕರಿಸಿದೆ. ಹರಿಯಾಣದ ಸಿರ್ಸಾ ಕ್ಷೇತ್ರದ ಸಂಸದೆ ಸುನೀತಾ ದುಗ್ಗಲ್ ಅವರಿಗೂ ಬಿಜೆಪಿ ಟಿಕೆಟ್ ಕೊಡಲು ನಿರಾಕರಿಸಿದೆ. ಇನ್ನು ೨೦೧೯ರಲ್ಲಿ ಟಿಡಿಪಿ ಅಭ್ಯರ್ಥಿಯಾಗಿ ವಿಜಯವಾಡ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಗೆದ್ದಿದ್ದ ಕೆ.ಸಿ.ನೇನಿ ನಾಣಿ ಅವರಿಗೂ ಈ ಬಾರಿ ಟಿಡಿಪಿ ಪಕ್ಷ ಟಿಕೆಟ್ ನಿರಾಕರಿಸಿದೆ. ಆದ್ರೆ ಅದೇ ಕ್ಷೇತ್ರದಿಂದ ವೈಎಸ್‌ಆರ್‌ಸಿಪಿ ಪಕ್ಷ ನೇನಿ ನಾಣಿ ಅವರಿಕೆ ಟಿಕೆಟ್ ನೀಡಿ ಚುನಾವಣಾ ಕಣದಲ್ಲಿ ಇರಿಸಿದೆ.
ಹೀಗೆ ಮಹದೇವ್ ರೋಡ್‌ನಲ್ಲಿದ್ದ ಒಟ್ಟು 8 ಮಂದಿ ಸಂಸದರಲ್ಲಿ ಕರ್ನಾಟಕದ ಶಿವಕುಮಾರ್ ಉದಾಸಿ ಅವರು ಹೊರತು ಪಡಿಸಿ ಉಳಿದವರಿಗೆ ಬಿಜೆಪಿ, ಟಿಡಿಪಿ ಪಕ್ಷಗಳು ಟಿಕೆಟ್ ನೀಡಲು ನಿರಾಕರಿಸಿವೆ. ಈ ನಿರಾಕರಣೆ ಗೆದ್ದು ಬಂದು ಸಂಸದರಾಗುವವರಲ್ಲೂ ಕೂಡ ಮಹದೇವ್ ರೋಡ್ ಆತಂಕ ಹುಟ್ಟಿಸಿದೆ. ಒಮ್ಮೆ ಇಲ್ಲಿ ಬಂಗ್ಲೆ ತೆಗೆದುಕೊಂಡ್ರೆ ಮುಂದಿನ ಚುನಾವಣೆಯಲ್ಲಿ ಪಕ್ಷದಿಂದ ಟಿಕೆಟ್ ಸಿಗೋದಿಲ್ಲ ಎನ್ನುವಂತಾಗಿದೆ.