ಬೆಂಗಳೂರು ಗ್ರಾಮಾಂತರ ಪ್ರಬಲ ನಾಯಕರಿಗೂ ಸೋಲುಣಿಸಿದ ಕ್ಷೇತ್ರ: ಎಚ್‌ಡಿಡಿ, ಎಚ್‌ಡಿಕೆ, ಅಂಬಿ, ಡಿಕೆಶಿ ಸೋತವರೇ!

By Kannadaprabha NewsFirst Published Apr 20, 2024, 1:07 PM IST
Highlights

ದೇಶ-ರಾಜ್ಯ ಆಳಿದ ಮಣ್ಣಿನ ಮಕ್ಕಳು, ತಾರಾಮಣಿಗಳು ಸಹಿತ ಘಟಾನುಘಟಿ ನಾಯಕರು ಈ ನೆಲದಲ್ಲಿ ಮುಗ್ಗರಿಸಿದ್ದಾರೆ. 

ಎಂ.ಅಫ್ರೋಜ್ ಖಾನ್

ರಾಮನಗರ(ಏ.20): ಮುಲಾಜೇ ಇಲ್ಲ. ಎಲ್ಲಿಂದ ಬಂದವರಾದರೇನು ವೋಟು ಕೊಟ್ಟು ಗೆಲ್ಲಿಸೋಕೂ ಜೈ. ಅತಿರಥ ಮಹಾರಥರಾದರೇನು ಸೋಲಿಸೋಕೂ ಸೈ. ಇದು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಮತದಾರರ ಮಹಿಮೆ! ಬೆಂಗಳೂರು ಗ್ರಾಮಾಂತರ ಸಂಸತ್ ಕ್ಷೇತ್ರ ಚುನಾವಣೆ ಮಾತ್ರವಲ್ಲದೆ ರಾಮನಗರ ಜಿಲ್ಲೆ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಮತದಾರರು ಜಾತಿ, ಧರ್ಮ, ಸ್ಥಳೀಯರು, ಹೊರಗಿನವರೆನ್ನದೆ ನೆಚ್ಚಿಕೊಂಡು ಬಂದವರನ್ನು ಮೆಚ್ಚಿ ಮೆರೆದಾಡಿ ಗೆಲ್ಲಿಸಿದ್ದಾರೆ. ಅಂತೆಯೇ ಗೆದ್ದು ಬೀಗಿದವರಿಗೆ ಸೋಲಿನ ಪಾಠ ಕಲಿಸಿದ್ದೂ ಉಂಟು.

ದೇಶ-ರಾಜ್ಯ ಆಳಿದ ಮಣ್ಣಿನ ಮಕ್ಕಳು, ತಾರಾಮಣಿಗಳು ಸಹಿತ ಘಟಾನುಘಟಿ ನಾಯಕರು ಈ ನೆಲದಲ್ಲಿ ಮುಗ್ಗರಿಸಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ರಾಮನಗರ ರಾಜಕೀಯವಾಗಿ ಮರು ಹುಟ್ಟುಕೊಟ್ಟಿದೆ. ಇಲ್ಲಿಂದ ಒಮ್ಮೆ ಲೋಕಸಭೆ, 2 ಬಾರಿ ವಿಧಾನಸಭೆಗೆ ಆರಿಸಿ ಹೋಗಿದ್ದಾರೆ. 1994ರಲ್ಲಿ ರಾಮನಗರದಿಂದಲೇ ಗೆದ್ದು ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದರು. ಆದರೂ 1985ರಲ್ಲಿ ವಿಧಾನಸಭೆಗೆ ಹೊಳೆನರಸೀಪುರ ಮತ್ತು ಸಾತನೂರು ಎರಡೂ ಕಡೆ ಗೆದ್ದು, ಸಾತನೂರು ತೊರೆದರು.

ಬೆಂಗಳೂರು ಗ್ರಾಮಾಂತರದಲ್ಲಿ ಮತದಾರನ ಒಲವು ಯಾರ ಪರ ? ಗೆಲುವು ಯಾರಿಗೆ ?

1989ರಲ್ಲಿ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಸಿಂಧ್ಯಾ ಎದುರು ದೇವೇಗೌಡ ಸೋತರಲ್ಲದೆ 3ನೇ ಸ್ಥಾನಕ್ಕೆ ದೂಡಲ್ಪಟ್ಟರು. 2002ರಲ್ಲಿ ಎಂ.ವಿ.ಚಂದ್ರಶೇಖರಮೂರ್ತಿ ನಿಧನದಿಂದ ತೆರವಾದ ಕನಕಪುರ ಲೋಕಸಭಾ ಕ್ಷೇತ್ರದ ಮರು ಚುನಾವಣೆಯಲ್ಲಿ ಗೆಲುವು ಸಾಧಿಸಿದರು. 2004ರ ಲೋಕಸಭೆ ಚುನಾವಣೆಯಲ್ಲಿ ಹಾಸನದಲ್ಲಿ ಗೆದ್ದರಾದರೂ ಕನಕಪುರದಲ್ಲಿ ಮುಗ್ಗರಿಸಿ, ಮೂರನೇ ಸ್ಥಾನಕ್ಕಿಳಿದರು.

ಕುಮಾರಸ್ವಾಮಿಗೂ ಸೋಲು :

1996ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಕನಕಪುರದಿಂದ ಚೊಚ್ಚಲ ಯತ್ನದಲ್ಲೇ ಕುಮಾರಸ್ವಾಮಿ ಗೆದ್ದು ಸಂಸತ್ ಪ್ರವೇಶಿಸಿದರು. 1998ರಲ್ಲಿ ಪರಾಭವಗೊಂಡರು. 1999ರಲ್ಲಿ ಕನಕಪುರ ಲೋಕಸಭೆ ಮತ್ತು ಸಾತನೂರು ವಿಧಾನಸಭೆ ಎರಡೂ ಕಡೆ ಸ್ಪರ್ಧಿಸಿ ಸೋತರು. 2004ರಲ್ಲಿ ಮತ್ತೆ ಅದೃಷ್ಟ ಒಲಿದದ್ದು ರಾಮನಗರದಲ್ಲಿ. ವಿಧಾನಸಭೆ ಪ್ರವೇಶಿಸಿದ ಚೊಚ್ಚಲ ಯತ್ನದಲ್ಲೇ ಮುಖ್ಯಮಂತ್ರಿ ಹುದ್ದೆಗೂ ಏರಿದ ಕುಮಾರಸ್ವಾಮಿ ಅವರಿಗೆ ಅಲ್ಲಿಂದ ಗೆಲುವಿನ ಅಭಿಯಾನ ಶುರುವಾಯಿತು. 2008ರಲ್ಲಿ ಮರು ಆಯ್ಕೆಗೊಂಡರು. 2009ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಭರ್ಜರಿ ಗೆಲುವಿನೊಂದಿಗೆ 2ನೇ ಬಾರಿ ಲೋಕಸಭೆ ಪ್ರವೇಶಿಸಿದರು.

ಸೈನಿಕ ಕೂಡ ತಿರಸ್ಕೃತ:

''''ಸೈನಿಕ'''' ಖ್ಯಾತಿಯ ನಟ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಆಪರೇಷನ್ ಕಮಲದಿಂದ ಅಧಿಕಾರದ ಆಸೆ ಈಡೇರಿಸಿಕೊಂಡರು. ಆದರೆ, ಪಕ್ಷಾಂತರಕ್ಕೆ 2 ಬಾರಿ ಬೆಲೆ ತೆತ್ತರು. 2009ರಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸೋಲು ಕಂಡರಲ್ಲದೆ ಸ್ವಕ್ಷೇತ್ರ ಚನ್ನಪಟ್ಟಣದಲ್ಲೇ 20 ಸಾವಿರ ಮತಗಳ ಹಿನ್ನಡೆ ಅನುಭವಿಸಿದರು. ಅದಾದ ನಂತರ 2010ರಲ್ಲಿ ತಮ್ಮದೇ ರಾಜಿನಾಮೆಯಿಂದ ತೆರವಾಗಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮರು ಚುನಾವಣೆಯಲ್ಲೂ ಸೋಲು ಅನುಭವಿಸಿದರು. 2018 ಹಾಗೂ 2023ರ ಚುನಾವಣೆಗಳಲ್ಲಿಯೂ ಪರಾಭವಗೊಂಡರು.

ಅಂಬಿ ಗರ್ವ ಭಂಗ:

1996ರಲ್ಲಿ ಪ್ರಧಾನಿ ಹುದ್ದೆಗೇರಿದ ದೇವೇಗೌಡರ ರಾಜಿನಾಮೆಯಿಂದ ತೆರವಾಗಿದ್ದ ರಾಮನಗರ ಕ್ಷೇತ್ರದ ಮರು ಚುನಾವಣೆಯಲ್ಲಿ ಜನತಾದಳ ಅಭ್ಯರ್ಥಿಯಾಗಿ ಚಿತ್ರನಟ ರೆಬೆಲ್‌ಸ್ಟಾರ್ ಅಂಬರೀಷ್ ಕಣಕ್ಕಳಿದಿದ್ದರು. ದೇವೇಗೌಡರ ನಾಮಬಲ, ಜನತಾದಳದ ಅಲೆ ನೆಚ್ಚಿಕೊಂಡ ಅಂಬರೀಷ್ ಉಡಾಫೆತನಕ್ಕೆ ''''ಮಂಡ್ಯದ ಗಂಡು'''' ನಮಗೆ ಬೇಡವೆಂದು ಮತದಾರರು ಧಿಕ್ಕರಿಸಿದ್ದರು.

ಡಿಕೆಶಿಗೆ 2 ಸೋಲು :

ಕಾಂಗ್ರೆಸ್‌ ನ ಪ್ರಭಾವಿ ನಾಯಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ''''ಸೋಲಿಲ್ಲದ ಸರದಾರ'''' ಅಲ್ಲ. 1985ರಲ್ಲಿ ಸಾತನೂರು ವಿಧಾನಸಭಾ ಕ್ಷೇತ್ರದಲ್ಲಿ ಎಚ್.ಡಿ.ದೇವೇಗೌಡ ಎದುರು ಚೊಚ್ಚಲ ಯತ್ನದಲ್ಲೇ ಸೋತವರು.
2002ರ ಕನಕಪುರ ಲೋಕಸಭಾ ಕ್ಷೇತ್ರ ಮರು ಚುನಾವಣೆಯಲ್ಲಿ ದೇವೇಗೌಡರಿಗೆ ಪ್ರಬಲ ಪೈಪೋಟಿ ಒಡ್ಡಿದರಾದರೂ ಅವರಿಗೆ ಗೆಲುವು ದಕ್ಕಲಿಲ್ಲ.

ಫಲಿಸದ ಸಿಂಧ್ಯಾ ಯತ್ನ:

ಕನಕಪುರ ವಿಧಾನಸಭಾ ಕ್ಷೇತ್ರದ ಮಟ್ಟಿಗೆ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಹಿಂದಿರುಗಿ ನೋಡಿದ್ದೇ ಇಲ್ಲ. ಆದರೆ, ಅದೇ ಕನಕಪುರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಲು 2 ಬಾರಿ ನಡೆಸಿದ ಯತ್ನ ಕೈಗೂಡಲಿಲ್ಲ. 1985ರಲ್ಲಿ ಜನತಾಪಕ್ಷ ಮತ್ತು 1991ರಲ್ಲಿ ಜನತಾದಳದಿಂದ ಕಣಕ್ಕಿಳಿದಿದ್ದ ಸಿಂಧ್ಯಾ ಸೋತರು.

ಪ್ರಮುಖರ ಪ್ರಯತ್ನ:

ಕನಕಪುರ ಲೋಕಸಭಾ ಕ್ಷೇತ್ರವನ್ನು ಎಂ.ವಿ.ರಾಜಶೇಖರನ್, ಸಿ.ಕೆ.ಜಾಫರ್ ಷರೀಫ್ ತಲಾ ಒಮ್ಮೆ ಪ್ರತಿನಿಧಿಸಿದ್ದಾರೆ. ಸತತ 5 ಬಾರಿ ಗೆದ್ದು, ಕೇಂದ್ರದಲ್ಲಿ ಸಚಿವರಾಗಿದ್ದ ಎ.ವಿ.ಚಂದ್ರಶೇಖರಮೂರ್ತಿ 1996ರಲ್ಲಿ ಸೋಲನುಭವಿಸಿ, 1999ರಲ್ಲಿ ಮತ್ತೆ ಗೆಲುವಿನ ಲಯ ಕಂಡುಕೊಂಡರು.

ಮೋದಿಯಿಂದ ದೇಶದ ಆರ್ಥಿಕತೆ ವಿನಾಶ: ಸಿಎಂ ಸಿದ್ದರಾಮಯ್ಯ

ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವರಾದ ಎಚ್.ಎಂ.ರೇವಣ್ಣ, ಎಚ್.ಜಿ. ಚನ್ನಪ್ಪ ತಲಾ 2 ಗೆಲುವು ಮತ್ತು ಸೋಲು ಕಂಡಿದ್ದಾರೆ. ರಾಮನಗರದಲ್ಲಿ 2008ರಲ್ಲಿ ಕುಮಾರಸ್ವಾಮಿ ಎದುರು ಕಾಂಗ್ರೆಸ್ ಹುರಿಯಾಳಾಗಿದ್ದ ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಪುತ್ರಿ ಮಮತಾ ನಿಚ್ಚಾನಿ ಯತ್ನವೂ ಫಲಿಸಲಿಲ್ಲ.

ಚನ್ನಪಟ್ಟಣದಲ್ಲಿ ಸಾದತ್ ಆಲಿ ಖಾನ್, ಡಿ.ಟಿ.ರಾಮು, ರಾಮನಗರದಲ್ಲಿ ಅಬ್ದುಲ್ ಸಮದ್ ಆಯ್ಕೆ ಒಂದೇ ಬಾರಿಗೆ ಸೀಮಿತ. ರಾಮನಗರದಲ್ಲಿ ಸಿ.ಎಂ.ಲಿಂಗಪ್ಪ ತಲಾ 3 ಗೆಲುವು-ಸೋಲು, ಚನ್ನಪಟ್ಟಣದ ಬಿ.ಜೆ.ಲಿಂಗೇಗೌಡ, ಕನಕಪುರದ ಕರಿಯಪ್ಪ ಸಿಹಿ-ಕಹಿ ಎರಡೂ ಉಂಡವರು. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸೋತಿದ್ದ ನಿಖಿಲ್ ಕುಮಾರಸ್ವಾಮಿ 2023ರ ರಾಮನಗರ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿಯೂ ಸೋಲು ಅನುಭವಿಸಿದರು.

click me!