ರೇಷ್ಮೆ ನಾಡು ರಾಮನಗರ, ಓರ್ವ ಪ್ರಧಾನಿ ಹಾಗೂ ನಾಲ್ವರು ಮುಖ್ಯಮಂತ್ರಿಗಳನ್ನು ಕೊಡುಗೆಯಾಗಿ ನೀಡಿದ ಹಿರಿಮೆ ಹೊಂದಿದೆ. ಸದ್ಯಕ್ಕೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಘಟಾನುಘಟಿ ನಾಯಕರ ತವರೂರು.
ಎಂ.ಅಫ್ರೋಜ್ ಖಾನ್
ರಾಮನಗರ (ಡಿ.02): ರೇಷ್ಮೆ ನಾಡು ರಾಮನಗರ, ಓರ್ವ ಪ್ರಧಾನಿ ಹಾಗೂ ನಾಲ್ವರು ಮುಖ್ಯಮಂತ್ರಿಗಳನ್ನು ಕೊಡುಗೆಯಾಗಿ ನೀಡಿದ ಹಿರಿಮೆ ಹೊಂದಿದೆ. ಸದ್ಯಕ್ಕೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಘಟಾನುಘಟಿ ನಾಯಕರ ತವರೂರು. ಜತೆಗೆ ರಾಜಕೀಯ ಜಿದ್ದಾಜಿದ್ದಿಗೆ ಹೆಸರಾದ ಜಿಲ್ಲೆ. ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿರುವುದು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್‌ನ ಪ್ರಚಾರದ ಸಂಪೂರ್ಣ ಹೊಣೆಗಾರಿಕೆ ಹೊತ್ತಿರುವುದು ಮತ್ತು ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್ ಅವರು ಹಳೆ ಮೈಸೂರು ಭಾಗದಲ್ಲಿ ಪಕ್ಷದ ಜವಾಬ್ದಾರಿ ಹೊತ್ತಿರುವ ಕಾರಣ ಜಿಲ್ಲೆಯ ರಾಜಕಾರಣ ರಾಜ್ಯದ ಗಮನ ಸೆಳೆದಿದೆ.
ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಒಕ್ಕಲಿಗರು, ದಲಿತರು ಹಾಗೂ ಮುಸ್ಲಿಮರ ಮತಗಳೇ ನಿರ್ಣಾಯಕ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳ ಪೈಕಿ ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಜೆಡಿಎಸ್‌ನ ಕುಮಾರಸ್ವಾಮಿ ಗೆದ್ದಿದ್ದರು. ಮಾಗಡಿಯಲ್ಲಿ ಜೆಡಿಎಸ್‌ನ ಎ.ಮಂಜುನಾಥ್, ಕನಕಪುರದಲ್ಲಿ ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್ ಗೆಲುವು ಸಾಧಿಸಿದ್ದರು. ಕುಮಾರಸ್ವಾಮಿಯವರು ಚನ್ನಪಟ್ಟಣ ಕ್ಷೇತ್ರ ಉಳಿಸಿಕೊಂಡಿದ್ದರಿಂದ ರಾಮನಗರದಲ್ಲಿ ಉಪಚುನಾವಣೆ ನಡೆದು, ಅವರ ಪತ್ನಿ ಅನಿತಾ ಕುಮಾರಸ್ವಾಮಿ ಜಯಭೇರಿ ಬಾರಿಸಿದರು.
Ticket Fight: ಬಿಜೆಪಿ ಪಾರುಪಾತ್ಯಕ್ಕೆ ಬ್ರೇಕ್ ಹಾಕುತ್ತಾ ಕಾಂಗ್ರೆಸ್?
1.ರಾಮನಗರ: ನಿಖಿಲ್ ಹೆಸರೂ ಚಾಲ್ತಿಯಲ್ಲಿ
ರಾಜ್ಯಕ್ಕೆ ಮೂವರು ಸಿಎಂಗಳನ್ನು ನೀಡಿದ ಕ್ಷೇತ್ರವಿದು. ಮತ್ತೊಮ್ಮೆ ಈ ಕ್ಷೇತ್ರದಿಂದ ಸ್ಪರ್ಧಿಸಲು ಪಟ್ಟು ಹಿಡಿದಿರುವ ಹಾಲಿ ಶಾಸಕಿ ಅನಿತಾ ಕುಮಾರಸ್ವಾಮಿ ಪರವಾಗಿ ಸ್ವ ಪಕ್ಷದವರಲ್ಲಿಯೇ ಒಲವಿಲ್ಲ. ಕುಮಾರಸ್ವಾಮಿಗೆ ಕುಟುಂಬದವರನ್ನು ಹೊರತುಪಡಿಸಿ ಬೇರೆಯವರಿಗೆ ಮಣೆ ಹಾಕಲು ಇಷ್ಟವಿಲ್ಲ. ಹಾಗಾಗಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿಯ ಹೆಸರೂ ಪ್ರಮುಖವಾಗಿ ಚಾಲ್ತಿಯಲ್ಲಿದೆ. ಕೊನೆ ಘಳಿಗೆಯಲ್ಲಿ ಕುಮಾರಸ್ವಾಮಿಯೇ ಅಭ್ಯರ್ಥಿಯಾದರೆ ಅಚ್ಚರಿ ಇಲ್ಲ. ಕುಮಾರಸ್ವಾಮಿಗೆ ಸವಾಲು ಒಡ್ಡಲು ಕಾಂಗ್ರೆಸ್‌ನಿಂದ ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್ ಸಜ್ಜಾಗಿದ್ದಾರೆ. ಸಂಸದ ಡಿ.ಕೆ.ಸುರೇಶ್ ಹೆಸರೂ ಚಾಲ್ತಿಗೆ ಬರುತ್ತಿದೆ. ಬಿಜೆಪಿಯಿಂದ ರಾಜ್ಯರೇಷ್ಮೆ ಉದ್ಯಮಗಳ ನಿಗಮದ ಅಧ್ಯಕ್ಷ ಗೌತಮ್ ಮರಿಲಿಂಗೇಗೌಡ, ಗ್ರೇಟರ್ ಬೆಂಗಳೂರು-ಬಿಡದಿ ಸ್ಮಾರ್ಚ್ ಸಿಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವರದರಾಜಗೌಡ ಹಾಗೂ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಡಿ.ನರೇಂದ್ರ ಹೆಸರುಗಳು ಚಾಲ್ತಿಯಲ್ಲಿವೆ.
2.ಚನ್ನಪಟ್ಟಣ: ಎಚ್‌ಡಿಕೆ ವಿರುದ್ಧ ಮತ್ತೆ ಯೋಗೇಶ್ವರ್ ಕಣಕ್ಕೆ
ಚನ್ನಪಟ್ಟಣ, ದೇವೇಗೌಡರ ಕುಟುಂಬದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಕ್ಷೇತ್ರ. ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಪೈಪೋಟಿ ಇದ್ದ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಕೂಡ ಎರಡೂ ಪಕ್ಷಗಳಿಗೆ ಟಾಂಗ್ ಕೊಡಲು ಹೊರಟಿದೆ. ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿರುವ ಕುಮಾರಸ್ವಾಮಿ, ಈ ಬಾರಿ ಚನ್ನಪಟ್ಟಣ ಕ್ಷೇತ್ರದಿಂದಲೇ ಅದೃಷ್ಟಪರೀಕ್ಷೆಗೆ ಮುಂದಾಗಲು ನಿರ್ಧರಿಸಿದ್ದಾರೆ. ಇನ್ನು, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಮೂಲಕ ಹಳೆ ಮೈಸೂರು ಪ್ರಾಂತ್ಯದಲ್ಲಿ ಪ್ರಾಬಲ್ಯ ಮೆರೆಯಲು ಬಿಜೆಪಿ ಕಾತರವಾಗಿದೆ. ಈ ನಡುವೆ, ಕಾಂಗ್ರೆಸ್‌ನ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಡಿಕೆ ಸಹೋದರರು ಮುಂದಾಗಿದ್ದಾರೆ. ಡಿಕೆ ಸಹೋದರರ ಸೋದರ ಸಂಬಂಧಿ ಶರತ್ ಚಂದ್ರ, ಪ್ರಸನ್ನ ಪಿ.ಗೌಡ ಸೇರಿದಂತೆ 8 ಮಂದಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ.
3.ಮಾಗಡಿ: ಕೈ ಟಿಕೆಟ್ ಮೇಲೆ ರೇವಣ್ಣ-ಬಾಲಕೃಷ್ಣ ಕಣ್ಣು
ಮಾಗಡಿಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ನೇರ ಕದನವಿದೆ. 2018ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಮೊದಲ ಬಾರಿಗೆ ಎ.ಮಂಜುನಾಥ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಬಿಜೆಪಿಯಿಂದ ಒಮ್ಮೆ, ಜೆಡಿಎಸ್‌ನಿಂದ ಮೂರು ಅವಧಿಗೆ ಶಾಸಕರಾಗಿದ್ದ ಎಚ್.ಸಿ. ಬಾಲಕೃಷ್ಣ ಅವರು ಕಳೆದ ಬಾರಿ ಕಾಂಗ್ರೆಸ್‌ನಿಂದ ಅಖಾಡ ಪ್ರವೇಶಿಸಿ ಸೋಲು ಅನುಭವಿಸಿದ್ದರು. ಈಗ ಇಬ್ಬರೂ ಮತ್ತೆ ಸ್ಪರ್ಧೆಗಿಳಿಯುವುದು ನಿಶ್ಚಿತವಾಗಿದೆ. ಈ ಮಧ್ಯೆ, ಮಾಜಿ ಸಚಿವ ಎಚ್.ಎಂ.ರೇವಣ್ಣನವರು ಕ್ಷೇತ್ರದ ಹೆಸರು ಉಲ್ಲೇಖಿಸದೆ ಟಿಕೆಟ್‌ಗಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿರುವುದು ಕುತೂಹಲ ಮೂಡಿಸಿದೆ. ಬಿಜೆಪಿಯಿಂದ ಯುವ ಮುಖಂಡ ಪ್ರಸಾದ್ ಗೌಡ, ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ರಂಗಧಾಮಯ್ಯ ಹಾಗೂ ಕೆಂಪೇಗೌಡ ಅಭಿವೃದ್ಧಿ ಸಮಿತಿ ನಿರ್ದೇಶಕ ಎಚ್.ಎಂ.ಕೃಷ್ಣಮೂರ್ತಿ ಅವರು ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಕಳೆದ ಬಾರಿ ಬಸವನಗುಡಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದ ಕೆ.ಬಾಗೇಗೌಡ ಅವರು ಬಿಜೆಪಿಯಿಂದ ಕಣಕ್ಕಿಳಿಯುತ್ತಾರೆಂಬ ವದಂತಿ ಹರಿದಾಡುತ್ತಿದೆ. ಇದು ನಿಜವಾದರೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ.
Ticket Fight: ಯತ್ನಾಳ ವಿರುದ್ಧ ಸ್ಪರ್ಧೆಗೆ ಕಾಂಗ್ರೆಸ್‌ನಲ್ಲಿ 20 ಆಕಾಂಕ್ಷಿಗಳು
4.ಕನಕಪುರ: ಸೋಲಿಲ್ಲದ ಸರದಾರನಿಗೆ ಎದುರಾಳಿಗಳೇ ಇಲ್ಲ
ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ಅವರು ಸತತ 3 ಬಾರಿ ಗೆಲುವು ಸಾಧಿಸಿ, ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದಾರೆ. ಕ್ಷೇತ್ರ ಪುನರ್‌ವಿಂಗಡಣೆಗೂ ಮುಂಚೆ ಅವರು ಸಾತನೂರು ಕ್ಷೇತ್ರದ ಶಾಸಕರಾಗಿದ್ದರು. 1983, 1985ರಲ್ಲಿ ಜನತಾಪಕ್ಷ, 1989, 1994ರಲ್ಲಿ ಜನತಾ ದಳ, 1999ರಲ್ಲಿ ಜೆಡಿ(ಯು) ಹಾಗೂ 2004ರಲ್ಲಿ ಜೆಡಿಎಸ್‌ನಿಂದ ಶಾಸಕರಾಗಿದ್ದ ಪಿಜಿಆರ್ ಸಿಂಧ್ಯಾ, ಈಗ ಕಾಂಗ್ರೆಸ್ನಲ್ಲಿದ್ದಾರೆ. ಹೀಗಾಗಿ, ಡಿ.ಕೆ.ಶಿವಕುಮಾರ್ಗೆ ಎದುರಾಳಿಗಳೇ ಇಲ್ಲದಂತಾಗಿದೆ. ಜೆಡಿಎಸ್‌ನಿಂದ ಪಕ್ಷದ ತಾಲೂಕು ಅಧ್ಯಕ್ಷ ಬಿ.ನಾಗರಾಜು, ಮುಖಂಡ ಕಬ್ಬಾಳೇಗೌಡ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಅಲ್ಲದೆ, ವಸತಿ ಸಚಿವ ವಿ.ಸೋಮಣ್ಣ ಸಂಬಂಧಿಯಾಗಿರುವ ವಾಣಿಜ್ಯ ತೆರಿಗೆ ಅಧಿಕಾರಿ ರಾಜೇಂದ್ರ ಅವರನ್ನು ಜೆಡಿಎಸ್‌ನಿಂದ ಕಣಕ್ಕಿಳಿಸುವ ಮಾತುಗಳೂ ಕೇಳಿ ಬರುತ್ತಿವೆ. ಬಿಜೆಪಿಯಿಂದ ಕನಕಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗನ್ನಾಥ್, ನಂದಿನಿಗೌಡ ಆಕಾಂಕ್ಷಿಗಳಾಗಿದ್ದಾರೆ.