ರೇಪ್ ಕೇಸಲ್ಲಿ ರಮೇಶ್‌ ಜಾರಕಿಹೊಳಿ, ಭ್ರಷ್ಟಾಚಾರದ ಕೇಸಲ್ಲಿ ಈಶ್ವರಪ್ಪ: 2ನೇ ಸಚಿವರ ತಲೆದಂಡ!

By Suvarna News  |  First Published Apr 15, 2022, 7:30 AM IST

* ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ್‌ ಜಾರಕಿಹೊಳಿ ಅತ್ಯಾಚಾರ ಆರೋಪ ಪ್ರಕರಣದಿಂದಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು

* ಕೆ.ಎಸ್‌.ಈಶ್ವರಪ್ಪ ಅವರು ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ

* ಬಿಜೆಪಿ ಸರ್ಕಾರದಲ್ಲಿ 2ನೇ ತಲೆದಂಡ


ಬೆಂಗಳೂರು(ಏ.15): ಈಶ್ವರಪ್ಪ ಅವರ ರಾಜೀನಾಮೆಯೊಂದಿಗೆ ಬಿಜೆಪಿ ಸರ್ಕಾರ ರಚನೆಯಾದ ನಂತರ ವಿವಾದಗಳಿಗೆ ಸಿಲುಕಿ ಇಬ್ಬರು ಸಚಿವರ ತಲೆದಂಡವಾದಂತಾಗಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ್‌ ಜಾರಕಿಹೊಳಿ ಅವರು ಅತ್ಯಾಚಾರ ಆರೋಪ ಪ್ರಕರಣದಿಂದಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಡಳಿತದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ತೀರ್ಮಾನಿಸಿದ್ದಾರೆ. ಶುಕ್ರವಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಕೆ ಮಾಡಲಿದ್ದಾರೆ.

Tap to resize

Latest Videos

ರಮೇಶ್‌ ಜಾರಕಿಹೊಳಿ ವಿರುದ್ಧ ಯುವತಿಯೊಬ್ಬರು ಅತ್ಯಾಚಾರ ಆರೋಪ ಮಾಡಿದ್ದರಿಂದ ರಾಜ್ಯದಲ್ಲಿ ತೀವ್ರ ಸಂಚಲನ ಉಂಟಾಗಿತ್ತು. ಪ್ರಕರಣದಿಂದ ಬಿಜೆಪಿಗೆ ತೀವ್ರ ಮುಜಗರ ಅನುಭವಿಸಿತು. ಹೀಗಾಗಿ ರಮೇಶ್‌ ಜಾರಕಿಹೊಳಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಅಂತೆಯೇ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾಮಗಾರಿಯಲ್ಲಿ ಶೇ.40ರಷ್ಟು ಕಮಿಷನ್‌ ಕೇಳಿದ್ದರು ಎಂಬ ಆರೋಪವನ್ನು ಗುತ್ತಿಗೆದಾರ ಸಂತೋಷ ಪಾಟೀಲ್‌ ಮಾಡಿದ್ದರು. ಇದು ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿ ಮುಜುಗರವಾಯಿತು. ಇದರಿಂದ ತಪ್ಪಿಸಿಕೊಳ್ಳಲು ಈಶ್ವರಪ್ಪ ರಾಜೀನಾಮೆ ನೀಡಿದರು.

ಕಮಿಷನ್‌ ಆರೋಪ ಕೇಳಿ ಬಂದಾಗ ಪ್ರತಿಪಕ್ಷ ಕಾಂಗ್ರೆಸ್‌ ವಿಧಾನಸಭೆಯಲ್ಲಿ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿತು. ಆದರೂ ಈಶ್ವರಪ್ಪ ರಾಜೀನಾಮೆ ನೀಡಿರಲಿಲ್ಲ. ಆದರೆ, ಸಂತೋಷ್‌ ಪಾಟೀಲ್‌ ಆತ್ಮಹತ್ಯೆಗೆ ಶರಣಾಗುವ ಮುನ್ನ ಈಶ್ವರಪ್ಪ ಹೆಸರನ್ನು ವಾಟ್ಸಪ್‌ನಲ್ಲಿ ಬರೆದಿರುವ ಹಿನ್ನೆಲೆಯಲ್ಲಿ ಪ್ರಕರಣದ ಗಂಭೀರತೆ ಪಡೆದುಕೊಂಡಿದೆ. ಅಲ್ಲದೇ, ಬಿಜೆಪಿಯು ತೀವ್ರ ಮುಖಭಂಗ ಅನುಭವಿಸುವಂತಾಗಿದೆ. ಇದರಿಂದ ತಪ್ಪಿಸಿಕೊಳ್ಳಲು ಈಶ್ವರಪ್ಪ ಅವರು ರಾಜೀನಾಮೆಗೆ ತೀರ್ಮಾನಿಸಿದ್ದಾರೆ.

ಈಶ್ವರಪ್ಪ ವಿರುದ್ಧ ಮಹಾನಾಯಕ ಷಡ್ಯಂತ್ರ

 

ಈ ಹಿಂದೆ ನನ್ನ ವಿರುದ್ಧ ಸಿಡಿ ತಯಾರಿಸಿದ ಮಹಾನಾಯಕನ ತಂಡದಿಂದಲೇ ಈಗ ಸಚಿವ ಕೆ.ಎಸ್‌.ಈಶ್ವರಪ್ಪ ಷಡ್ಯಂತ್ರ ರೂಪಿಸಲಾಗಿದೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಜೊತೆಗೆ ಹೈಕಮಾಂಡ್‌ ಒಪ್ಪಿಗೆ ನೀಡಿದರೆ ಸೋಮವಾರ ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿ ಎಲ್ಲ ಘಟನೆಗಳ ಕುರಿತು ಮಾಹಿತಿ ನೀಡುವುದಾಗಿಯೂ ಅವರು ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ವಿಚಾರದಲ್ಲಿ ಸಚಿವ ಈಶ್ವರಪ್ಪ ವಿರುದ್ಧ ಷಡ್ಯಂತ್ರ ಮಾಡಲಾಗಿದೆ. ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದ ಟೀಂ ಇದೀಗ ಈಶ್ವರಪ್ಪ ವಿರುದ್ಧ ಷಡ್ಯಂತ್ರ ಮಾಡಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಡಿ.ಕೆ.ಶಿವಕುಮಾರ್‌ ಮತ್ತು ಶಾಸಕಿ ಲಕ್ಷ್ಮೇ ಹೆಬ್ಬಾಳಕರ ವಿರುದ್ಧ ಕಿಡಿಕಾರಿದರು.

ಸಾವಲ್ಲೂ ಕಾಂಗ್ರೆಸ್‌ ರಾಜಕೀಯ: ಕಳೆದ ಒಂದು ವರ್ಷದಿಂದ ನನ್ನನ್ನು ಷಡ್ಯಂತ್ರದಲ್ಲಿ ಸಿಲುಕಿಸಿದರು. ಅದನ್ನು ನಾನು ಎದುರಿಸಿದ್ದೇನೆ. ಸಂತೋಷ ಪಾಟೀಲ ಸಾಯಬಾರದಿತ್ತು. ಬಿಲ್‌ ಸಂಬಂಧ ಗ್ರಾಪಂ ಅಧ್ಯಕ್ಷ ನಾಗೇಶ ನನಗೆ ದೂರವಾಣಿ ಕರೆ ಮಾಡಿದ್ದ. ಆದರೆ ಸಂತೋಷ ಸಾವಿನ ವಿಚಾರದಲ್ಲಿ ಕಾಂಗ್ರೆಸ್‌ ನಾಯಕರು ರಾಜಕೀಯ ಮಾಡಿದರು. ನನ್ನ ಹೆಸರನ್ನು ಎಳೆದು ತರಲಾಯಿತು. ನನ್ನ ವಿರುದ್ಧ ಷಡ್ಯಂತ್ರ ರೂಪಿಸಿದ ಅದೇ ಮಹಾನಾಯಕರೇ ಈಗ ಈಶ್ವರಪ್ಪ ಷಡ್ಯಂತ್ರ ರೂಪಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

click me!