ಸಂಘಟಿತ ಪ್ರಯತ್ನದ ಮೂಲಕ ಕಾಂಗ್ರೆಸ್ ಪಕ್ಷವನ್ನು ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ತಂದ ದಿಗ್ಗಜರಾದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವೆ ಮುಖ್ಯಮಂತ್ರಿ ಹುದ್ದೆ ಅಧಿಕಾರಾವಧಿಗಾಗಿ ಭರ್ಜರಿ ಚೌಕಾಸಿ ನಡೆದಿದ್ದು, ಇದು ನಾಡಿನ ಮುಂದಿನ ದೊರೆಯ ಆಯ್ಕೆಯನ್ನು ಕಗ್ಗಂಟು ಮಾಡಿದೆ.
ಎಸ್.ಗಿರೀಶ್‌ಬಾಬು
ಬೆಂಗಳೂರು (ಮೇ.15): ಸಂಘಟಿತ ಪ್ರಯತ್ನದ ಮೂಲಕ ಕಾಂಗ್ರೆಸ್ ಪಕ್ಷವನ್ನು ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ತಂದ ದಿಗ್ಗಜರಾದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವೆ ಮುಖ್ಯಮಂತ್ರಿ ಹುದ್ದೆ ಅಧಿಕಾರಾವಧಿಗಾಗಿ ಭರ್ಜರಿ ಚೌಕಾಸಿ ನಡೆದಿದ್ದು, ಇದು ನಾಡಿನ ಮುಂದಿನ ದೊರೆಯ ಆಯ್ಕೆಯನ್ನು ಕಗ್ಗಂಟು ಮಾಡಿದೆ. ಪಕ್ಷವು ಭಾರಿ ಬಹುಮತ ಪಡೆಯಲು ತಮ್ಮ ಕೊಡುಗೆಯನ್ನು ಮುಂದಿಟ್ಟುಕೊಂಡು ಉಭಯ ನಾಯಕರು ತಾವೇ ಮುಖ್ಯಮಂತ್ರಿಯಾಗಬೇಕು ಎಂಬ ಹಟಕ್ಕೆ ಬಿದ್ದಿದ್ದಾರೆ.
ಶಾಸಕರ ಅಭಿಪ್ರಾಯ ಸಂಗ್ರಹದ ಹೊರತಾಗಿಯೂ ತಮ್ಮನ್ನೇ ಮುಖ್ಯಮಂತ್ರಿ ಮಾಡಬೇಕು ಎಂದು ಈ ನಾಯಕರು ತಾವು ಹಿಡಿದಿರುವ ‘ಉಡದ ಪಟ್ಟನ್ನು’ ಸಡಿಲಿಸಲು ಸುತಾರಾಂ ತಯಾರಿಲ್ಲ. ಹೀಗಾಗಿ, ಈ ವಿಚಾರದಲ್ಲಿ ಹೈಕಮಾಂಡ್ ಮಧ್ಯಪ್ರವೇಶ ಅನಿವಾರ್ಯ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ತನ್ಮೂಲಕ ಕರುನಾಡಿನ ಮುಂದಿನ ದೊರೆ ಯಾರು ಎಂಬುದಿನ್ನು ‘ಓವರ್ ಟು ಡೆಲ್ಲಿ’!
ಸೈನಿಕನನ್ನು ಮಕಾಡೆ ಮಲಗಿಸಿದ ದಳಪತಿ: ಯೋಗೇಶ್ವರ್ ವಿರುದ್ಧ ಎರಡನೇ ಬಾರಿ ಗೆದ್ದ ಎಚ್‌ಡಿಕೆ
5 ವರ್ಷ ನನಗೇ ಸಿಎಂ ಹುದ್ದೆ ಬೇಕು- ಸಿದ್ದು: ಶಾಸಕರ ಬೆಂಬಲ ತಮ್ಮೊಂದಿಗೆ ಇದೆ ಎಂಬ ಅಚಲ ನಂಬಿಕೆ ಹೊಂದಿರುವ ಸಿದ್ದರಾಮಯ್ಯ, ಸಂಪ್ರದಾಯದಂತೆ ನೂತನ ಶಾಸಕರು ಹೊಸ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲಿ. ಹೀಗೆ ಆಯ್ಕೆಯಾದ ಶಾಸಕಾಂಗ ಪಕ್ಷದ ನಾಯಕ ಅರ್ಥಾತ್ ಮುಖ್ಯಮಂತ್ರಿಗೆ ಪರಿಪೂರ್ಣ ಅವಧಿ ಅಂದರೆ ಐದು ವರ್ಷಗಳ ಅಧಿಕಾರ ನೀಡಬೇಕು ಎಂಬ ಪಟ್ಟು ಹಿಡಿದಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ತಮ್ಮದೂ ಸೇರಿದಂತೆ ಎಲ್ಲರ ಕೊಡುಗೆಯಿದೆ. ಆದರೆ, ತನ್ನನ್ನು ನಾಯಕನನ್ನಾಗಿ ಸ್ವೀಕರಿಸಿರುವ ಅಹಿಂದ ಅದರಲ್ಲೂ ವಿಶೇಷವಾಗಿ ಕುರುಬ, ಹಿಂದುಳಿದ ಜಾತಿಗಳು ಹಾಗೂ ಅಲ್ಪಸಂಖ್ಯಾತರ ಅವಿಚ್ಛಿನ್ನ ಬೆಂಬಲ ಪಕ್ಷಕ್ಕೆ ದೊರಕಿದೆ. ಸಮೂಹ ನಾಯಕನಾಗಿರುವ ನನ್ನ ವರ್ಚಸ್ಸನ್ನು ಪಕ್ಷಕ್ಕಾಗಿ ಧಾರೆಯೆರೆದಿರುವೆ.
ಆಡಳಿತಾರೂಢ ಬಿಜೆಪಿ ವಿರುದ್ಧ ಸದನದ ಒಳಗೆ ಹಾಗೂ ಹೊರಗೆ ಹೋರಾಟ ನಡೆಸಿದ್ದರಿಂದಲೇ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ನಿರ್ಮಾಣವಾಗಿತ್ತು. ಈ ಹೋರಾಟ ಹಾಗೂ ವರ್ಚಸ್ಸಿನ ಬಲದಿಂದ ಅತಿ ದೊಡ್ಡ ಸಂಖ್ಯೆಯಲ್ಲಿ ಕಾಂಗ್ರೆಸ್ಸಿನ ಅಭ್ಯರ್ಥಿಗಳು ಆಯ್ಕೆಯಾಗಿ ಶಾಸಕರಾಗಿದ್ದಾರೆ. ಅಲ್ಲದೆ, ಪಕ್ಷದ ಹೈಕಮಾಂಡ್ ಸೂಚಿಸಿದಂತೆ ಪುತ್ರ ಯತೀಂದ್ರನ ಕ್ಷೇತ್ರದಲ್ಲಿ ಸ್ಪರ್ಧಿಸಿದೆ. ಯತೀಂದ್ರ ತನ್ನ ಕ್ಷೇತ್ರವನ್ನು ಹೈಕಮಾಂಡ್ ಸೂಚನೆಯಿಂದಾಗಿ ತ್ಯಾಗ ಮಾಡಿದ್ದಾನೆ. ಇದು ನನ್ನ ಕಡೆಯ ಚುನಾವಣೆ ಎಂದು ಘೋಷಿಸಿದ್ದೆ. ಇದೆಲ್ಲದರ ಪರಿಣಾಮವಾಗಿ ಜನರು ಕಾಂಗ್ರೆಸ್ ಪರ ನಿಂತಿದ್ದಾರೆ ಎಂಬ ನಿಲುವು ಹೊಂದಿದ್ದಾರೆ.
‘ನಾನು ಮುಖ್ಯಮಂತ್ರಿಯಾದರೆ ಡಿ.ಕೆ. ಶಿವಕುಮಾರ್ ಡಿಸಿಎಂ ಹುದ್ದೆ ಪಡೆದು ಪ್ರಮುಖ ಖಾತೆಗಳನ್ನು ಹೊಣೆ ಹೊರಬಹುದು. ತನ್ಮೂಲಕ ಶಿವಕುಮಾರ್ ಅವರ ಕೊಡುಗೆಗೂ ನ್ಯಾಯ ಸಿಗುತ್ತದೆ. ಆದರೆ, ಶಿವಕುಮಾರ್ ಬೇಡಿಕೆಯಂತೆ ಅವರನ್ನೇ ಮುಖ್ಯಮಂತ್ರಿ ಮಾಡಿದರೆ ನನಗೆ ಯಾವ ಹುದ್ದೆಯನ್ನೂ ನೀಡಲು ಸಾಧ್ಯವಿಲ್ಲ. ಹೀಗಾದಾಗ ನನ್ನ ನಾಯಕತ್ವ ನಂಬಿ ಪಕ್ಷವನ್ನು ಬೆಂಬಲಿಸಿದ ಸಮುದಾಯಗಳು ಬೇಸರಗೊಳ್ಳಬಹುದು. ಹೀಗಾದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಅವರು ನಿಲ್ಲಬಹುದು’ ಎಂಬ ವಾದ ಸಿದ್ದರಾಮಯ್ಯ ಅವರದ್ದಾಗಿದೆ ಎನ್ನಲಾಗಿದೆ.
ನಾನೇ ಸಿಎಂ ಆಗಬೇಕು- ಡಿಕೆಶಿ: ಆದರೆ, ಈ ವಾದವನ್ನು ಒಪ್ಪಲು ಶಿವಕುಮಾರ್ ಸಿದ್ಧರಿಲ್ಲ. ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಚುನಾವಣೆ ಎದುರಿಸಿರುವುದರಿಂದ ಸಂಪ್ರದಾಯದಂತೆ ನನಗೆ ಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂಬ ಪ್ರಬಲ ವಾದ ಮಂಡನೆ ಮಾಡಿದ್ದಾರೆ. ಏಕೆಂದರೆ, ‘1999ರಲ್ಲಿ ಎಸ್.ಎಂ. ಕೃಷ್ಣ ಅಧ್ಯಕ್ಷರಾಗಿದ್ದಾಗ ಪಕ್ಷ ಗೆದ್ದಿದ್ದರಿಂದ ಅವರೇ ಮುಖ್ಯಮಂತ್ರಿ ಆಗಿದ್ದರು. ನಂತರ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾಗಿದ್ದಾಗ ಪಕ್ಷ ಗೆದ್ದಿಲ್ಲ, 2013ರಲ್ಲಿ ಡಾ.ಜಿ. ಪರಮೇಶ್ವರ್ ಅಧ್ಯಕ್ಷರಾಗಿದ್ದಾಗ ಪಕ್ಷ ಗೆದ್ದಿದ್ದರೂ ಅವರು ಗೆದ್ದಿರಲಿಲ್ಲ. ಹೀಗಾಗಿ ಮುಖ್ಯಮಂತ್ರಿಯಾಗಲಿಲ್ಲ. ಆದರೆ, ಈ ಬಾರಿ ನನ್ನ ಅಧ್ಯಕ್ಷತೆಯಲ್ಲೇ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದೆ. ಹೀಗಾಗಿ ಹುದ್ದೆಗೆ ನಾನು ಅರ್ಹ’ ಎಂಬುದು ಡಿಕೆಶಿ ವಾದ.
‘ಇನ್ನು ‘ನಾನು ಮುಖ್ಯಮಂತ್ರಿ ಆಗುತ್ತೇನೆ’ ಎಂಬ ಕಾರಣಕ್ಕೆ ಒಕ್ಕಲಿಗ ಮತಗಳು ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ವರ್ಗವಾಗಿವೆ. ದಕ್ಷಿಣ ಕರ್ನಾಟಕ ಭಾಗದಲ್ಲಿ 33 ಸ್ಥಾನ ಗೆಲ್ಲುವ ಮೂಲಕ ನಿರೀಕ್ಷೆಗಿಂತ ಹೆಚ್ಚು ಸ್ಥಾನಗಳನ್ನು ನೀಡಿದ್ದಾರೆ. ಜೆಡಿಎಸ್‌ಗೆ ಶೇ. 5 ರಷ್ಟುಮತಗಳು ನಷ್ಟವಾಗಿದ್ದು, ಅದು ಕಾಂಗ್ರೆಸ್‌ಗೆ ಬಂದಿರುವುದೇ ಒಕ್ಕಲಿಗ ಸಮುದಾಯ ನನಗೆ ಬೆಂಬಲ ನೀಡಿದೆ ಎಂಬುದಕ್ಕೆ ಸಾಕ್ಷಿ’ ಎಂದೂ ಡಿಕೆಶಿ ಹೇಳಿದ್ದಾರೆನ್ನಲಾಗಿದೆ. ಅಲ್ಲದೆ, ‘ಕಳೆದ ಬಾರಿಯ ಸೋಲಿನಿಂದ ಸಿದ್ದರಾಮಯ್ಯ ಹಾಗೂ ಹಿಂದಿನ ಅಧ್ಯಕ್ಷ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ ಸಂಕಷ್ಟಸಂದರ್ಭದಲ್ಲಿ ಪಕ್ಷವನ್ನು ಮುನ್ನೆಡೆಸಿದೆ. ದೇಶದಲ್ಲೇ ಕಾಂಗ್ರೆಸ್ ಸಂಕಷ್ಟದಲ್ಲಿರುವಾಗ ರಾಜ್ಯದಲ್ಲಿ ಪಕ್ಷವನ್ನು ಅತ್ಯುತ್ತಮವಾಗಿ ಸಂಘಟಿಸಿ ಅಧಿಕಾರಕ್ಕೆ ತಂದಿದ್ದೇನೆ.
ದೇವೇಗೌಡರ 3ನೇ ತಲೆಮಾರಿನ ಎಂಟ್ರಿಗೆ ‘ಕೈ’ ಬ್ರೇಕ್: ನಿಖಿಲ್ ಸೋಲಿಗೆ ಕಾರಣಗಳೇನು?
ಪಕ್ಷ ಸಂಘಟನೆಗೆ ಬೇಕಾದ ಸಂಪನ್ಮೂಲ ಸಂಗ್ರಹ ಮಾಡಿದ್ದೇನೆ. ಎಲ್ಲ ಜಿಲ್ಲೆಗಳಲ್ಲಿ ಪಕ್ಷಕ್ಕೆ ಕಚೇರಿ ನಿರ್ಮಾಣ ಮಾಡಿದ್ದೇನೆ. ನನ್ನ ಅವಧಿಯಲ್ಲೇ ಪಕ್ಷಕ್ಕೆ ಅತಿ ದೊಡ್ಡ ಸಂಖ್ಯೆಯಲ್ಲಿ ಹೊಸಬರ ನೋಂದಣಿಯಾಗಿದೆ’ ಎಂದು ಡಿಕೆಶಿ ವಾದಿಸಿದ್ದಾರೆ ಎಂದು ಗೊತ್ತಾಗಿದೆ. ‘ಇನ್ನು ಒಕ್ಕಲಿಗ ಸಮುದಾಯ ಈ ಬಾರಿ ದೇವೇಗೌಡ ಕುಟುಂಬಕ್ಕೆ ಬದಲಾಗಿ ನನ್ನನ್ನು ನಾಯಕ ಎಂದು ಪರಿಗಣಿಸಿದೆ. ನಾನು ಸಿಎಂ ಆಗುತ್ತೇನೆ ಎಂದು ನಂಬಿ ಪಕ್ಷಕ್ಕೆ ಬೆಂಬಲ ನೀಡಿದೆ. ಈ ಹುದ್ದೆ ತಪ್ಪಿದಲ್ಲಿ ಒಕ್ಕಲಿಗ ಸಮುದಾಯ ಪಕ್ಷದ ವಿರುದ್ಧ ಮುನಿಸಿಕೊಳ್ಳಬಹುದು. ಇದರಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಬಹುದು’ ಎಂದು ವಾದ ಮಂಡಿಸಿದ್ದಾರೆ ಎನ್ನಲಾಗಿದೆ.