ಸಾಮೂಹಿಕ ನಾಯಕತ್ವದಲ್ಲಿ ಹೋದಾಗ್ಲೇ ಕಾಂಗ್ರೆಸ್‌ ಜಯ: ಡಿಕೆಶಿ

By Kannadaprabha News  |  First Published Feb 23, 2023, 4:40 AM IST

ನನಗೆ 40 ವರ್ಷದ ರಾಜಕಾರಣದ ಅನುಭವ ಇದೆ. ಇಷ್ಟು ವರ್ಷಗಳಲ್ಲಿ ನಾನೆಂದೂ ಈ ಪ್ರಮಾಣದ ಆಡಳಿತ ವಿರೋಧಿ ಅಲೆಯನ್ನು ನೋಡಿರಲಿಲ್ಲ. ಜನರು ಈ ಭ್ರಷ್ಟ ಬಿಜೆಪಿ ಸರ್ಕಾರ ತೆಗೆಯಲೇಬೇಕು ಎಂದ ತೀರ್ಮಾನಿಸಿದಂತಿದೆ. ದೆಹಲಿ ಹಾಗೂ ಕರ್ನಾಟಕದಲ್ಲಿ ಡಬಲ್ ಎಂಜಿನ್‌ ಸರ್ಕಾರ ಬಂದ ಮೇಲೆ ನಮ್ಮ ಜೀವನದಲ್ಲಿ ಸಂಕಷ್ಟಹೆಚ್ಚಾಯಿತು ಎಂದು ಜನ ಆಕ್ರೋಶಗೊಂಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ: ಡಿ.ಕೆ. ಶಿವಕುಮಾರ್‌


ಎಸ್‌.ಗಿರೀಶ್‌ಬಾಬು

ಬೆಂಗಳೂರು(ಫೆ.23): ಕಾಂಗ್ರೆಸ್‌ನಲ್ಲೀಗ ಪ್ರವಾಸ ಪರ್ವ. ಜಂಟಿ ಯಾತ್ರೆ ನಂತರ ಒಂಟಿ ಯಾತ್ರೆ ನಡೆಸುತ್ತಿದ್ದಾರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ. ಆಡಳಿತ ವಿರೋಧಿ ಅಲೆಯಿದೆ ಎಂದು ಬಿಂಬಿಸುತ್ತಾ ತಮ್ಮ ನಾಯಕತ್ವ ವಿಜೃಂಭಿಸುವಂತೆ ಮಾಡಲು ಸಕಲ ಪ್ರಯತ್ನಗಳನ್ನು ಉಭಯ ನಾಯಕರು ನಡೆಸಿದ್ದಾರೆ. 

Tap to resize

Latest Videos

ಈ ಪೈಕಿ ಡಿ.ಕೆ.ಶಿವಕುಮಾರ್‌ ಅವರು ಹಳೆ ಮೈಸೂರು ಭಾಗದಲ್ಲಿ ಮಿಂಚಿನಂತೆ ಸಂಚರಿಸಿದ್ದಾರೆ. ದಿನದಲ್ಲಿ ಪ್ರಚಾರ, ರಾತ್ರಿ ವೇಳೆ ಕ್ಷೇತ್ರದ ಟಿಕೆಟ್‌ ಕುರಿತು ಆಕಾಂಕ್ಷಿಗಳೊಂದಿಗೆ ಮುಖಾಮುಖಿ ಮಾತುಕತೆ ಮೂಲಕ ಪ್ರಬಲರನ್ನು ಕಣಕ್ಕೆ ಇಳಿಸಲು ಸರ್ವಪ್ರಯತ್ನ ನಡೆಸಿದ್ದಾರೆ. ತನ್ಮೂಲಕ ಹಳೆ ಮೈಸೂರು ಭಾಗದಲ್ಲಿ ಪಕ್ಷ ಹೆಚ್ಚು ಸ್ಥಾನ ಗಳಿಸುವಂತೆ ಮಾಡಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ. ವಿಧಾನಸೌಧದ ಮೂರನೇ ಮಹಡಿಗೆ ಹೋಗಲು ಆಶೀರ್ವದಿಸಿ ಎಂದು ನೇರವಾಗಿ ಸಮುದಾಯವನ್ನು ಕೇಳುತ್ತಿದ್ದಾರೆ. ಇದು ಏಕೆ? ಇದರಿಂದ ಪಕ್ಷಕ್ಕೆ, ವೈಯಕ್ತಿಕವಾಗಿ ಆಗುವ ಲಾಭಗಳೇನು? ಈ ಪ್ರಶ್ನೆಗಳಿಗೆ ಉತ್ತರಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ.

ಇಂದು ಸಂಡೂರಿಗೆ ಕೇಂದ್ರ ಸಚಿವ ಅಮಿತ್‌ ಶಾ

ಜಂಟಿ ಯಾತ್ರೆ ನಂತರ ಹಳೆ ಮೈಸೂರು ಭಾಗದಲ್ಲಿ ಒಂಟಿ ಯಾತ್ರೆ ನಡೆಸಿದ್ದೀರಿ. ಜನಾಭಿಪ್ರಾಯ ಹೇಗಿದೆ?

ನನಗೆ 40 ವರ್ಷದ ರಾಜಕಾರಣದ ಅನುಭವ ಇದೆ. ಇಷ್ಟು ವರ್ಷಗಳಲ್ಲಿ ನಾನೆಂದೂ ಈ ಪ್ರಮಾಣದ ಆಡಳಿತ ವಿರೋಧಿ ಅಲೆಯನ್ನು ನೋಡಿರಲಿಲ್ಲ. ಜನರು ಈ ಭ್ರಷ್ಟ ಬಿಜೆಪಿ ಸರ್ಕಾರ ತೆಗೆಯಲೇಬೇಕು ಎಂದ ತೀರ್ಮಾನಿಸಿದಂತಿದೆ. ದೆಹಲಿ ಹಾಗೂ ಕರ್ನಾಟಕದಲ್ಲಿ ಡಬಲ್ ಎಂಜಿನ್‌ ಸರ್ಕಾರ ಬಂದ ಮೇಲೆ ನಮ್ಮ ಜೀವನದಲ್ಲಿ ಸಂಕಷ್ಟಹೆಚ್ಚಾಯಿತು ಎಂದು ಜನ ಆಕ್ರೋಶಗೊಂಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ನಮ್ಮ ಎಲ್ಲ ಯಾತ್ರೆ, ಸಮಾವೇಶಗಳಿಗೆ ಜನರು ಸ್ವಯಂ ಪ್ರೇರಣೆಯಿಂದ ಭಾರಿ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ನಾವು ನಿರೀಕ್ಷೆ ಮಾಡದ ಸ್ಪಂದನೆ ಸಿಗುತ್ತಿದೆ.

ಈ ಭಾಗದ ಫಲಿತಾಂಶವು ಮುಂದಿನ ಸರ್ಕಾರ ಸಮ್ಮಿಶ್ರವೋ ಅಥವಾ ಏಕ ಪಕ್ಷದ್ದೋ ಎಂದು ನಿರ್ಧರಿಸುತ್ತದೆಯಂತೆ?

ಇಲ್ಲ, ಚಾನ್ಸೇ ಇಲ್ಲ. ಸಮ್ಮಿಶ್ರ ಸರ್ಕಾರ ಬರುವ ಸಾಧ್ಯತೆ ಸ್ವಲ್ಪವೂ ಇಲ್ಲ. ಈ ಬಾರಿ ಕಾಂಗ್ರೆಸ್‌ನ ಪರಿಪೂರ್ಣ ಸರ್ಕಾರ ಅಸ್ತಿತ್ವಕ್ಕೆ ಬರತ್ತೆ. ಜೆಡಿಎಸ್ಸೂ ಬರಲ್ಲ, ಬಿಜೆಪಿಯೂ ಬರಲ್ಲ. ಕಾಂಗ್ರೆಸ್ಸೇ ಪರಿಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರತ್ತೆ.

ಈ ಆತ್ಮವಿಶ್ವಾಸಕ್ಕೆ ಕಾರಣ?

ಜನಸ್ಪಂದನೆ ಆ ರೀತಿಯಿದೆ. ಜನರು ಈ ಸರ್ಕಾರದ ಆಡಳಿತಕ್ಕೆ ಬೇಸತ್ತು ಹೋಗಿದ್ದಾರೆ. ಬಿಜೆಪಿ ಸರ್ಕಾರವನ್ನು ತೆಗೆದುಹಾಕಬೇಕು ಎಂದು ಸಂಕಲ್ಪ ಮಾಡಿದ್ದಾರೆ.

ಈ ಆತ್ಮವಿಶ್ವಾಸದಲ್ಲೇ ವಿಧಾನಸೌಧದ ಮೂರನೇ ಮಹಡಿಗೆ ನನ್ನನ್ನು ಕಳುಹಿಸಲು ಬೆಂಬಲ ನೀಡಿ ಎಂದು ಸಮಾವೇಶಗಳಲ್ಲಿ ಕರೆ ನೀಡಿದಿರಾ?

ಜನರ ಬಳಿ ಹೊಸ ಆಲೋಚನೆಗಳಿವೆ. ಯುವ ಪೀಳಿಗೆ ಹೊಸ ಬದಲಾವಣೆ ಬಯಸುತ್ತಿರುತ್ತದೆ. ಈ ಪೀಳಿಗೆಯ ಆಶೋತ್ತರಗಳಿಗೆ ಅನುಗುಣವಾಗಿ ಪಕ್ಷ ಕಟ್ಟುತ್ತೇನೆ ಎಂದೇ ಹೈಕಮಾಂಡ್‌ ನನಗೆ ಜವಾಬ್ದಾರಿ ಕೊಟ್ಟಿದೆ. ಹೀಗಾಗಿ, ವಿಧಾನಸೌಧದ ಮೂರನೇ ಮಹಡಿಗೆ ಕಾರ್ಯಕರ್ತರು ಹಾಗೂ ಜನರು ಬರಲಿ ಎಂಬುದು ನನ್ನ ಆಸೆ.

ಜನರ ಸ್ಪಂದನೆ ಹೇಗಿತ್ತು?

ಅತ್ಯುತ್ತಮವಾಗಿತ್ತು. ಬೇಕಿದ್ದರೆ ನಾನು ಪ್ರವಾಸ ಮಾಡಿ ಬಂದ ಕ್ಷೇತ್ರದ ಡಾ.ಎಚ್‌.ಸಿ.ಮಹದೇವಪ್ಪ ಅವರನ್ನು ಕೇಳಿ. ಅವರ ಟಿ.ನರಸೀಪುರ ಕ್ಷೇತ್ರದಲ್ಲಿ ನಾನು ಹೋದಾಗ ಸ್ಪಂದನೆ ಹೇಗಿತ್ತು. ಮಳವಳ್ಳಿಯ ನರೇಂದ್ರಸ್ವಾಮಿ ಅವರ ಕ್ಷೇತ್ರಕ್ಕೆ ಹೋಗಿ ಕೇಳಿ ನೋಡಿ. ಮದ್ದೂರಿನಲ್ಲಿ ಕೇಳಿ ನೋಡಿ. ಕಾಂಗ್ರೆಸ್‌ ಕಳೆದ ಚುನಾವಣೆ ವೇಳೆ ಯಾವ್ಯಾವ ಕ್ಷೇತ್ರಗಳಲ್ಲಿ ದೊಡ್ಡ ಅಂತರದಲ್ಲಿ ಸೋಲು ಕಂಡಿತ್ತೋ ಆ ಕ್ಷೇತ್ರಗಳಿಗೆ ನಾನು ಹೋದಾಗ ಸ್ಪಂದನೆ ಹೇಗಿತ್ತು ಎಂದು ಆ ನಾಯಕರನ್ನೇ ಕೇಳಿ.

ಅಂದರೆ, ಒಕ್ಕಲಿಗ ಬೆಲ್ಟ್‌ನಲ್ಲಿ ಹೊಸ ನಾಯಕತ್ವ...

(ಪ್ರಶ್ನೆ ತುಂಡರಿಸಿ) ನೋಡಿ, ನನ್ನನ್ನು ಒಕ್ಕಲಿಗ ಸಮುದಾಯ ಮಾತ್ರ ಅಲ್ಲ. ಎಲ್ಲ ಸಮಾಜದವರು ಒಪ್ಪಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಬರಬೇಕು ಎಂದು ಎಲ್ಲ ಸಮುದಾಯ ಹಾಗೂ ಸಮಾಜದ ಜನರು ಈ ಬಾರಿ ತೀರ್ಮಾನಿಸಿದ್ದಾರೆ. ಬ್ಲಡ್‌ ಇಸ್‌ ಥಿಕರ್‌ ದೆನ್‌ ವಾಟರ್‌ ನಿಜ. ಆದರೂ, ಅದು ಬೇರೆ ವಿಚಾರ. ನಾವು ಇಡೀ ರಾಜ್ಯವನ್ನು ನೋಡುವವರು. ಚಾಮರಾಜನಗರದಿಂದ ಬೀದರ್‌ವರೆಗೂ ಹೊಣೆ ಹೊತ್ತಿರುವ ನಾಯಕ ನಾನು. ಎಲ್ಲ ಕಡೆ ಬದಲಾವಣೆ ತರಬೇಕು ಎಂಬುದು ನನ್ನ ಉದ್ದೇಶ.

ಅಲ್ಲ, ಸಾಮೂಹಿಕ ನಾಯಕತ್ವ ಅಂತೀರಿ. ಇದು ಮತದಾರರಲ್ಲಿ ಗೊಂದಲ ಮೂಡಿಸುವುದಿಲ್ಲವೇ?

ಇಲ್ಲ ಇದರಿಂದ ಪಕ್ಷಕ್ಕೆ ಬೆನಿಫಿಟ್‌ ಇದೆ.

ಅದು ಹೇಗೆ?

ಈ ಹಿಂದೆ ನಾವು ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ನಾಯಕತ್ವದಲ್ಲಿ ಚುನಾವಣೆಗೆ ಹೋದೆವು. ಅನಂತರ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸಿದೆವು. ಎರಡು ಬಾರಿಯೂ ಸೋತೆವು. ನೀವೇ ಹೇಳಿ ಎಸ್‌.ಎಂ.ಕೃಷ್ಣ ಸರ್ಕಾರ ಹಾಗೂ ಸಿದ್ದರಾಮಯ್ಯ ಸರ್ಕಾರ ಕೆಲಸ ಮಾಡಿರಲಿಲ್ಲವೇ? ಮಾಡಿದ್ದವು. ಕಾರಣಾಂತರಗಳಿಂದ ಈ ಎರಡು ಬಾರಿಯೂ ಸೋತೆವು. ಹೀಗಾಗಿಯೇ ಈ ಬಾರಿ ನಮ್ಮ ಪಕ್ಷ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಹೋಗುತ್ತಿದೆ.

ಹಿಂದೆ ಎಸ್‌.ಎಂ.ಕೃಷ್ಣ ಅವರು ಪಕ್ಷದ ಅಧ್ಯಕ್ಷರಾಗಿದ್ದಾಗ ಪಾಂಚಜನ್ಯ ಯಾತ್ರೆ ನಡೆಸಿ ಅವರ ನಾಯಕತ್ವದಲ್ಲೇ ತಾನೇ ಚುನಾವಣೆಗೆ ಹೋಗಿದ್ದು?

ನಾನು ಹೇಳುತ್ತಿರುವುದು ಮುಖ್ಯಮಂತ್ರಿಯಾಗಿದ್ದ ಅವಧಿ ವಿಚಾರ. ಆಗ ಕೃಷ್ಣ ನೇತೃತ್ವದಲ್ಲೇ ಚುನಾವಣೆಗೆ ಹೋದ ವಿಚಾರ. ಇನ್ನು ಪಾಂಚಜನ್ಯ ನಡೆದಾಗಲೂ ಕೂಡ ಮಲ್ಲಿಕಾರ್ಜುನ ಖರ್ಗೆ ಪ್ರತಿಪಕ್ಷ ನಾಯಕರಾಗಿದ್ದರು. ಎಸ್‌.ಎಂ.ಕೃಷ್ಣ ಪಕ್ಷದ ಅಧ್ಯಕ್ಷರಾಗಿದ್ದರು.ಪರಮೇಶ್ವರ್‌ ಅವರು ನಮ್ಮ ಪಕ್ಷದಲ್ಲಿ 10 ಮಂದಿ ಸಿಎಂ ಕ್ಯಾಂಡಿಡೇಟ್‌ ಇದ್ದಾರೆ ಎಂದಿದ್ದಾರೆ. ನಾಯಕರು ಆಸೆ ವ್ಯಕ್ತಪಡಿಸೋದು ತಪ್ಪು ಅಂತ ಹೇಳಲು ಆಗುವುದಿಲ್ಲ.

ಇಂತಹ ಆಸೆ ಪ್ರೇರಿತ ಹೇಳಿಕೆಗಳಿಂದ ಜನರಿಗೆ ಗೊಂದಲವಾಗುವುದಿಲ್ಲವೇ?

ಇಲ್ಲ ಆ ಗೊಂದಲಕ್ಕೆ ಅವಕಾಶವಿಲ್ಲ. ರಾಹುಲ್‌ ಗಾಂಧಿ ಅವರು ಎಲ್ಲವನ್ನು ಸ್ಪಷ್ಟಪಡಿಸಿದ್ದಾರೆ. ಯಾರ ಮುಖ ಮುಂದಿಟ್ಟುಕೊಂಡು ಚುನಾವಣೆಗೆ ಹೋಗಬೇಕು, ಯಾರ ನಾಯಕತ್ವದಲ್ಲಿ ಚುನಾವಣೆಗೆ ಹೋಗಬೇಕು ಎಂದು ತಿಳಿಸಿದ್ದಾರೆ.

ಟಿಕೆಟ್‌ ಹಂಚಿಕೆ ವೇಳೆ ನಾಯಕರ ನಡುವಿನ ಜಗಳ?
ಎಲ್ಲಿ ಆಗಿದೆ? ಇದುವರೆಗೂ ಎರಡು ಚುನಾವಣಾ ಸಮಿತಿ ಸಭೆ ನಡೆಯಿತು. ಅದಾದ ಮೇಲೆ ಸ್ಕ್ರೀನಿಂಗ್‌ ಕಮಿಟಿ ಸಭೆ ನಡೆಯಿತು. ಇಷ್ಟಾದರೂ ಒಂದು ಅಪಸ್ವರ ಎಲ್ಲಿಯಾದರೂ ಕೇಳಿ ಬಂತಾ? ಸ್ಕ್ರೀನಿಂಗ್‌ ಕಮಿಟಿಯಲ್ಲಿ 40-50 ಜನ

ಸದಸ್ಯರಿದ್ದಾರೆ. ಅದರಲ್ಲಿ ಯಾರಾದರೂ ಒಬ್ಬರು ಭಿನ್ನರಾಗ ಎಳೆದರಾ? ನಮ್ಮ ಅಭಿಪ್ರಾಯ ಬೇರೆ ಇತ್ತು ಅಂತ ಮಾತನಾಡಿದ್ದಾರಾ?

ಮೊದಲೆಲ್ಲ ನಿಮ್ಮದು ಒಂದು, ಸಿಎಲ್‌ಪಿ ನಾಯಕರದ್ದೊಂದು ಅಂತ ಪ್ರತ್ಯೇಕ ಪಟ್ಟಿಹೋಗುತ್ತಿತ್ತಲ್ಲ. ಈ ಬಾರಿ ಹೊಂದಾಣಿಕೆಯಾಗಿದೆಯೇ?
ಯಾವ ಎರಡು ಪಟ್ಟಿಯೂ ಇಲ್ಲ. ಇರುವುದೆಲ್ಲ ಒಂದೇ ಪಟ್ಟಿ.

ಮೊದಲ ಹಂತದ ಟಿಕೆಟ್‌ ಹಂಚಿಕೆ ಯಾವಾಗ ಆಗುತ್ತೆ?

ಎಐಸಿಸಿ ಮಹಾಧಿವೇಶನ ಇದೆ. ಅದಾದ ನಂತರ ಸಭೆ ಸೇರಿ ಮೊದಲ ಪಟ್ಟಿಬೇಗ ಪ್ರಕಟಿಸಬೇಕು ಎಂದು ತೀರ್ಮಾನ ಮಾಡಿದ್ದೇವೆ.
ಈ ಬಾರಿ ಬಿಜೆಪಿ ಚುನಾವಣೆಗೂ ಮುನ್ನ ಆಪರೇಷನ್‌ ಕಮಲ ನಡೆಸುತ್ತದೆಯಂತೆ?

ಅಂದರೆ?

ಬಿಜೆಪಿ ತನ್ನ 30 ಮಂದಿ ಹಾಲಿ ಶಾಸಕರಿಗೆ ಟಿಕೆಟ್‌ ಕೊಡದೇ, ಕಾಂಗ್ರೆಸ್‌ನ ಗೆಲ್ಲುವ ಕುದುರೆಗಳನ್ನು ಸೆಳೆಯುತ್ತಂತೆ?

ಹೌದು, ಅವರು ಸತತವಾಗಿ ಇಂತಹ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಅದೇನೂ ನಮಗೆ ಹೊಸ ಸುದ್ದಿಯಲ್ಲ. ಆರಂಭದಿಂದಲೂ ನಮ್ಮ ಗೆಲ್ಲುವ ಶಾಸಕರನ್ನು ಸೆಳೆಯುವ ಪ್ರಯತ್ನ ಬಿಜೆಪಿಯವರು ನಡೆಸುತ್ತಲೇ ಇದ್ದಾರೆ.
ಅದಕ್ಕೆ ಸಿಲುಕಿ ನಿಮ್ಮ ಗೆಲ್ಲುವ ಶಾಸಕರು ಆ ಕಡೆ ಹೋದರೆ...
ಹೋಗಬೇಕಾದವರೆಲ್ಲ ಈಗಾಗಲೇ ಹೋಗಿಯಾಗಿದೆ. ಇನ್ನೇನಿದ್ದರೂ ಆ ಕಡೆಯಿಂದ ನಮ್ಮ ಕಡೆಗೆ ಬರುವ ಲೆಕ್ಕ ಮಾತ್ರ ಬಾಕಿಯಿದೆ.
ಹೌದೇ, ಹಾಗಿದ್ದರೆ ಆ ಕಡೆಯಿಂದ ಎಷ್ಟುಜನ ಬರ್ತಾರೆ?
ಟೈಂ ಬರಲಿ ಹೇಳುತ್ತೇನೆ.
ಬಿಜೆಪಿ ಸರ್ಕಾರದ ಸಚಿವರು ಬರ್ತಾರೆ ಅಂತಾರಲ್ಲ?
ಅದನ್ನೆಲ್ಲ ಈಗ ನಾನು ಬಹಿರಂಗ ಪಡಿಸಲು ಆಗುವುದಿಲ್ಲ.
ಕಾಂಗ್ರೆಸ್‌ನಿಂದ ಹೋಗಿರುವವರು ಬರ್ತಾರಾ?
ಅದನ್ನೂ ಈಗಲೇ ಹೇಳಲು ಹೋಗಲ್ಲ.

ಆಯ್ತು. ಪ್ರವಾಸದ ವೇಳೆ ಆಡಳಿತ ವಿರೋಧಿ ಅಲೆ ಕಂಡಿತು ಎನ್ನುತ್ತೀರಿ. ಅದೊಂದೇ ಕಾಂಗ್ರೆಸ್‌ಗೆ ಬಲವೇ?

ಆಡಳಿತ ವಿರೋಧಿ ಅಲೆ ಅತ್ಯಂತ ಸ್ಪಷ್ಟವಾಗಿ ಕಾಣುತ್ತಿದೆ. ಹಾಗಂತ ಅದೊಂದರ ಮೇಲೆ ನಾವು ನೆಚ್ಚಿ ಕುಳಿತಿಲ್ಲ. ಈ ಭ್ರಷ್ಟಸರ್ಕಾರ ತೆಗೆದ ಮೇಲೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ನಾವೇನು ಮಾಡುತ್ತೇವೆ ಎಂಬುದರ ಕಮಿಟ್‌ಮೆಂಟ್‌ ಅನ್ನು ಜನರಿಗೆ ಮುಟ್ಟಿಸಲು ದುಡಿಯುತ್ತಿದ್ದೇವೆ. ನೋಡಿ, ನಾನು ಕೆಪಿಸಿಸಿ ಅಧ್ಯಕ್ಷನಾಗುವ ಮುಂಚಿನ ಬೈ ಎಲೆಕ್ಷನ್‌ಗಳಲ್ಲಿ ಕಾಂಗ್ರೆಸ್‌ ಸೋತಿತ್ತು. ಆಗ ಕಾಂಗ್ರೆಸ್‌ನಿಂದ ಇನ್ನೇನೂ ಸಾಧ್ಯ ಇಲ್ಲ ಎಂದೇ ಎಲ್ಲ ಬಿಂಬಿಸಿದ್ದರು. ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ದಿನೇಶ್‌ ಗುಂಡೂರಾವ್‌ ರಾಜೀನಾಮೆ ನೀಡಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ್ದರು. ಅನಂತರ ಪಕ್ಷದ ಹೈಕಮಾಂಡ್‌ ನನ್ನನ್ನು ಪಕ್ಷದ ಹುದ್ದೆಗೆ ತೆಗೆದುಕೊಡು ಬಂತು. ಸಿದ್ದರಾಮಯ್ಯ ಅವರಿಗೂ ಮುಂದುವರೆಯುವಂತೆ ಸೂಚಿಸಿತು. ಅಲ್ಲಿಂದ ಇಲ್ಲಿಯವರೆಗೆ ಪಕ್ಷದ ಸಂಘಟನೆ ದೊಡ್ಡ ಮಟ್ಟದಲ್ಲಿ ಆಗಿದೆ. ಹೀಗಾಗಿಯೇ ಬಿಜೆಪಿಯವರು, ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಜಗಳ ನಡೆಯುತ್ತಿದೆ ಎನ್ನುತ್ತಿದ್ದಾರೆ. ಮಾಧ್ಯಮದವರು ಕೂಡ ಸಿಎಂ ಹುದ್ದೆಗೆ ಕಾಂಗ್ರೆಸ್‌ನಲ್ಲಿ ಫೈಟ್‌ ಅಂತ ತೋರಿಸುತ್ತಾರೆ. ಅಂದರೆ ಏನರ್ಥ? ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ ಎಂದು ಬಿಜೆಪಿ ಹಾಗೂ ಮಾಧ್ಯಮಗಳಿಗೆ ಅನಿಸಿದೆ ಅಂತಲ್ಲವೇ? ಹೀಗೆ ಅನ್ನಿಸಲು ನಮ್ಮ ಸಂಘಟನೆ ಹಾಗೂ ಆಡಳಿತ ವಿರೋಧಿ ಅಲೆ ಎರಡೂ ಇರುವುದು ಕಾರಣ.

ಆಡಳಿತ ವಿರೋಧಿ ಅಲೆಯನ್ನು ಮೀರಿ ನಿಲ್ಲುವ ಬೂತ್‌ ಲೆವೆಲ್‌ ನೆಟ್‌ವರ್ಕ್ ನಮ್ಮಲ್ಲಿದೆ, ಕಾಂಗ್ರೆಸ್ಸಿಗಿಲ್ಲ ಅಂತಾರೆ ಬಿಜೆಪಿಯವರು?

ನಿಜ, ಬಿಜೆಪಿಗೆ ನೆಟ್‌ವರ್ಕಿಂಗ್‌ ಇದೆ. ಬಿಜೆಪಿಗೆ ಕೇಡರ್‌ ಬೇಸ್ಡ್‌ ವರ್ಕರ್ಸ್‌ ಇದ್ದಾರೆ. ನಮ್ಮದು ಮಾಸ್‌ ಬೇಸ್ಡ್‌ ಪಾರ್ಟಿ. ಈಗ ನಾವು ನಮ್ಮ ಪಾರ್ಟಿಯನ್ನು ಕೆಡರ್‌ ಬೇಸ್‌ ಪಾರ್ಟಿ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ. ಪಕ್ಷದ ಸದಸ್ಯತ್ವ ನೋಂದಣಿಯನ್ನು ದಾಖಲೆ ಪ್ರಮಾಣದಲ್ಲಿ ಮಾಡಿದ್ದೇವೆ. ಇಡೀ ದೇಶದಲ್ಲೇ ಅತಿ ಹೆಚ್ಚು ಸದಸ್ಯತ್ವ ನಮ್ಮ ರಾಜ್ಯದಲ್ಲಿ ಆಗಿದೆ. ಅಂದರೆ, 78 ಲಕ್ಷ ಜನರನ್ನು ಸದಸ್ಯರನ್ನಾಗಿ ಮಾಡಿದ್ದೇವೆ.

ಚುನಾವಣೆ ಸಮೀಪದಲ್ಲಿದೆ. ಕೇಡರ್‌ ಬೇಸ್‌ ಮಾಡುವ ಪ್ರಯತ್ನ ತುಂಬಾ ತಡವಾಯ್ತ?

ಹಾಗೇನಿಲ್ಲ. ಒಂದು ಕಡೆ ನಾನು ಹಾಗೂ ಸಿದ್ದರಾಮಯ್ಯ ಅವರು ಪ್ರಜಾಧ್ವನಿ ಯಾತ್ರೆ ಮೂಲಕ ರಾಜ್ಯ ಪ್ರವಾಸ ಮಾಡುತ್ತಿದ್ದೇವೆ. ಪ್ರತಿಯೊಬ್ಬ ಮತದಾರರನ್ನು ಮುಟ್ಟಲು ಗ್ಯಾರಂಟಿ ಕಾರ್ಡ್‌ ಯೋಜನೆ ಹಮ್ಮಿಕೊಂಡಿದ್ದೇವೆ. ಪ್ರತಿ ಜಿಲ್ಲೆಗೆ ಎಐಸಿಸಿ ಜನರಲ್‌ ಸೆಕ್ರೆಟರಿ ನಿಯುಕ್ತಿಯಾಗಿದ್ದಾರೆ. ಅವರ ನೇತೃತ್ವದಲ್ಲಿ ನಮ್ಮ ಕಾರ್ಯಕರ್ತರ ಪಡೆ ಗ್ಯಾರಂಟಿ ಕಾರ್ಡ್‌ ಅನ್ನು ಮನೆ ಮನೆಗೆ ಮುಟ್ಟಿಸುವ ಆಂದೋಲನ ನಡೆಸುತ್ತಿದ್ದಾರೆ.

ನಮಗೆ ರಾಷ್ಟ್ರೀಯ ನಾಯಕರ ವರ್ಚಸ್ಸಿನ ಬೆಂಬಲವಿದೆ, ಅದು ನಮ್ಮನ್ನು ಗೆಲ್ಲಿಸತ್ತೆ ಅಂತಾರೆ ಬಿಜೆಪಿಯವರು?

ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ರಾಜ್ಯಕ್ಕೆ ಬಂದಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮುಂದಿನ ಚುನಾವಣೆಯನ್ನು ಬೊಮ್ಮಾಯಿ ನಾಯಕತ್ವದಲ್ಲಿ ಎದುರಿಸುತ್ತೇವೆ ಎಂದರು. ಆದರೆ, ಇತ್ತೀಚೆಗೆ ಬಂದಿದ್ದಾಗ ಅವರು ಬೊಮ್ಮಾಯಿ ಹೆಸರು ಬಿಟ್ಹಾಕಿ ಮೋದಿ ಹೆಸರಿನಲ್ಲಿ ಮತ ಕೇಳುವುದಾಗಿ ಹೇಳುತ್ತಾರೆ. ಅಭಿವೃದ್ಧಿ ವಿಷಯ ಬಿಟ್ಹಾಕಿ ಜನರ ಭಾವನೆಗಳನ್ನು ಕೆರಳಿಸಲು ಮುಂದಾಗುತ್ತಾರೆ. ಟಿಪ್ಪು ಬಗ್ಗೆ, ಲವ್‌ ಜೆಹಾದ್‌, ರಾಮಮಂದಿರ ಇತ್ಯಾದಿ ಮಾತನಾಡುತ್ತಾರೆ. ನಾವು ಬದುಕಿನ ಬಗ್ಗೆ ಮಾತನಾಡಿದರೆ ಅವರು ಭಾವನೆ ವಿಷಯ ಮುಂದಿಡುತ್ತಾರೆ. ಜನರ ಕಷ್ಟಪರಿಹಾರವಾಗಬೇಕು ಎಂಬುದು ನಮ್ಮ ರಾಜಕಾರಣವಾದರೆ ಅವರದ್ದು ತಲೆ ತೆಗೆಯುವ ರಾಜಕಾರಣ.

ಸಚಿವ ಅಶ್ವಥನಾರಾಯಣ ವಜಾಕ್ಕೆ ಕಾಂಗ್ರೆಸ್‌ ಆಗ್ರಹ

ತಲೆ ತೆಗೆಯುವ ರಾಜಕಾರಣ!?

ಅಲ್ಲ, ಯಾರಾದರೂ ಒಬ್ಬ ಪ್ರಜ್ಞಾವಂತ ಸಚಿವ ಒಬ್ಬ ಮಾಜಿ ಮುಖ್ಯಮಂತ್ರಿಯ ತಲೆ ತೆಗೆಯಬೇಕು ಅಂತ ಮಾತನಾಡುತ್ತಾರಾ? ಇದು ಪ್ರಜಾಪ್ರಭುತ್ವದಲ್ಲಿ ಸಾಧ್ಯವೇ? ಇಂತಹ ಹೇಳಿಕೆ ನೀಡಿದರೂ, ಮುಖ್ಯಮಂತ್ರಿ ಹಾಗೂ ಸೆಂಟ್ರಲ… ಹೋಂ ಮಿನಿಸ್ಟರ್‌ ಮೌನವಾಗಿ ಉಳಿದಿದ್ದಾರೆ. ಅಂದರೆ, ಇದಕ್ಕೆ ಅವರ ಸಮ್ಮತಿಯಿದೆ. ಒಬ್ಬ ಸಚಿವನಿಂದ ಇಂತಹ ಹೇಳಿಕೆ ಬರುತ್ತಿದೆ ಎಂದರೆ ಅದರ ಹಿಂದೆ ಮುಖ್ಯಮಂತ್ರಿಯ ಮಾರ್ಗದರ್ಶನವಿದೆ. ಬಿಜೆಪಿ ಅಧ್ಯಕ್ಷ ನಡ್ಡಾ ಅವರ ಬೆಂಬಲವಿದೆ ಎಂದೇ ಅರ್ಥ. ಇದು ಅತ್ಯಂತ ನಾಚಿಕೆಗೇಡಿ ಸರ್ಕಾರ.

ರಾಜ್ಯದಲ್ಲಿನ ಕಾಂಗ್ರೆಸ್‌ ನಾಯಕತ್ವದ ಬಗ್ಗೆ ರಾಹುಲ್‌ ಗಾಂಧಿ ಸ್ಪಷ್ಟತೆ ಕೊಟ್ಟಿದ್ದಾರಾ?

ಹೌದು, ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಹೋಗಿ ಅಂತ ಹೇಳಿದ್ದಾರೆ. ಯಾರ ಮುಖ ಮುಂದಿರಬೇಕು ಎಂದೂ ತಿಳಿಸಿದ್ದಾರೆ. ಅದರಂತೆ ಮುನ್ನಡೆದಿದ್ದೇವೆ. ಅಲ್ಲದೆ, ಒಬ್ಬೊಬ್ಬರಿಗೆ ಒಂದೊಂದು ಪಾತ್ರ ನಿಭಾಯಿಸುವ ಜವಾಬ್ದಾರಿ ಕೊಟ್ಟಿದ್ದಾರೆ. ಪರಮೇಶ್ವರ್‌ ಅವರ ಅನುಭವ, ಹಿರಿತನ ಎಲ್ಲವನ್ನು ಬಳಸಿ ಜನರಿಗೆ ಏನು ಪ್ರಣಾಳಿಕೆ ಕೊಡಬೇಕು ಎಂದು ಹೇಳಿ ಅದನ್ನು ಸಿದ್ಧಪಡಿಸುವಂತೆ ತಿಳಿಸಿದ್ದಾರೆ. ಹರಿಪ್ರಸಾದ್‌ ಕರಾವಳಿ ಭಾಗದ ಪ್ರವಾಸ ಮಾಡುತ್ತಿದ್ದಾರೆ. ಎಲ್ಲರೂ ಒಟ್ಟಿಗೆ ಚುನಾವಣೆ ನಡೆಸುತ್ತಿದ್ದೇವೆ.

click me!