ರಾಜ್ಯ ಕಾಂಗ್ರೆಸ್ ಭಿನ್ನಮತ ಸ್ಫೋಟಗೊಂಡಿದೆ. ಸಿದ್ದರಾಮಯ್ಯನವರ ನಡೆಗೆ ಮೂಲ ಕಾಂಗ್ರೆಸ್ ನಾಯಕರು ಒಬ್ಬರಾಗಿ ಸಿಡಿದೆದ್ದು ನಿಲ್ಲುತ್ತಿದ್ದಾರೆ. ಸೋಮವಾರ ಅಷ್ಟೇ ಬಹಿರಂಗವಾಗಿ ಡಿಕೆಶಿ, ಪರಂ ಅಸಮಾಧಾನ ಹೊರಹಾಕಿದ್ದರು. ಇದೀಗ ಮತ್ತಿಬ್ಬರು ಮೂಲಕ ಕಾಂಗ್ರೆಸ್ಸಿಗರು ಸಿದ್ದರಾಮಯ್ಯ ನಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು, (ಜ.21): KPCC ಅಧ್ಯಕ್ಷ, ಕಾರ್ಯಾಧ್ಯಕ್ಷ, ವಿರೋಧಪಕ್ಷ ಮತ್ತು ಶಾಸಕಾಂಗ ಪಕ್ಷದ ನಾಯಕರ ನೇಮಕದ ವಿಚಾರದಲ್ಲಿ ಮತ್ತೆ ರಾಜ್ಯ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಶುರುವಾಗಿದ್ದು, ಭಿನ್ನಮತ ಭುಗಿಲೆದ್ದಿದೆ.
ವಿಧಾನಸಭೆ ವಿರೋಧಪಕ್ಷದ ನಾಯಕ ಮತ್ತು ಶಾಸಕಾಂಗ ಪಕ್ಷದ ನಾಯಕ (ಸಿಎಲ್‌ಪಿ) ಸ್ಥಾನಗಳನ್ನು ಬೇರ್ಪಡಿಸಬಾರದು ಎನ್ನುವುದು ಸಿದ್ದರಾಮಯ್ಯನವರ ವಾದ. ಜತೆಗೆ ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಿಸಬೇಕೆನ್ನುವುದು ಸಿದ್ದರಾಮಯ್ಯನವರ ಅಭಿಪ್ರಾಯ.
ಬಣ ರಾಜಕೀಯ ಮತ್ತೆ ಮುನ್ನೆಲೆಗೆ: ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿದ ಪರಂ
ಆದ್ರೆ, ಇದೀಗ ಇದಕ್ಕೆ ಮೂಲ ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯನವರ ನಡೆಗೆ ವಿರೋಧ ವ್ಯಕ್ತಡಿಸುತ್ತಿದ್ದಾರೆ. ಕಾರ್ಯಧ್ಯಕ್ಷ ಸ್ಥಾನವನ್ನು ತಮ್ಮ ಆಪ್ತರಿಗೆ ಕೊಡಿಸಲು ಸಿದ್ದರಾಮಯ್ಯ ಕಸರತ್ತು ನಡೆಸುತ್ತಿದ್ದಾರೆ. ಅದಕ್ಕೆ ಇದಕ್ಕೆ ಮೂಲ ಕಾಂಗ್ರೆಸ್ಸಿಗರು ಸಿದ್ದರಾಮಯ್ಯ ವಿರುದ್ಧ ನೇರವಾಗಿ ಕಿಡಿಕಾರುತ್ತಿದ್ದಾರೆ.
ಕೆಪಿಸಿಸಿಗೆ ಹೊಸ ಅಧ್ಯಕ್ಷರ ನೇಮಕದ ಜತೆಗೆ ನಾಲ್ಕು ಕರ್ಯಾಧ್ಯಕ್ಷರನ್ನು ನೇಮಕ ಮಾಡಬೇಕು ಹಾಗೂ ಪ್ರತಿಪಕ್ಷ ನಾಯಕ ಹಾಗೂ ಶಾಸಕಾಂಗ ಪಕ್ಷ ನಾಯಕ ಎಂಬ ಎರಡು ಪ್ರತ್ಯೇಕ ಹುದ್ದೆ ಸೃಜಿಸಬಾರದು ಎಂಬ ಸಿದ್ದರಾಮಯ್ಯ ಅವರ ವಾದಕ್ಕೆ ಪರಮೇಶ್ವರ್ ಹಾಗೂ ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ. ಸೋಮವಾರ ಉಭಯ ನಾಯಕರು ಪ್ರತ್ಯೇಕ ಹೇಳಿಕೆ ನೀಡಿದ್ದು, ಸಿದ್ದರಾಮಯ್ಯ ನಿಲುವಿಗೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಹುದ್ದೆ: ಡಿಕೆಶಿ ಸುತ್ತ 4 ಗೋಡೆ ಕಟ್ಟಿದ ಸಿದ್ದರಾಮಯ್ಯ
ಇಂದು (ಮಂಗಳವಾರ) ಪ್ರತ್ಯೇಕವಾಗಿ ಮಾತನಾಡಿರುವ ಕಾಂಗ್ರೆಸ್‌ನ ಹಿರಿಯ ನಾಯಕರಾದ ಎಚ್.ಕೆ.ಪಾಟೀಲ್ ಹಾಗೂ ಕೆ.ಎಚ್. ಮುನಿಯಪ್ಪ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಈ ಮೂಲಕ ಮೂಲ ಕಾಂಗ್ರೆಸ್ಸಿಗರು ಸಿದ್ದು ವಿರುದ್ಧ ಸಿಡಿದೆದ್ದು ನಿಂತಂತಾಗಿದ್ದು, ಮತ್ತೆ ಮೂಲ, ವಲಸಿಗ ಎನ್ನುವ ಗುಂಪುಗಾರಿ ಮುನ್ನೆಲೆಗೆ ಬಂದಿದೆ.
ಸಿಎಲ್‌ಪಿ ಮತ್ತು ವಿಪಕ್ಷ ಸ್ಥಾನ ಪ್ರತ್ಯೇಕವಾಗಲಿ ಎಂದ HKP
ವಿಪಕ್ಷ ನಾಯಕ ಮತ್ತು ಸಿಎಲ್‌ಪಿ ನಾಯಕ ಹುದ್ದೆ ಪ್ರತ್ಯೇಕವಾಗಲಿ. ಮಹಾರಾಷ್ಟ್ರದಲ್ಲೂ ಹಿಂದೆ ಸಿಎಲ್‌ಪಿ ಮತ್ತು ವಿಪಕ್ಷ ಸ್ಥಾನ ಹಂಚಿಕೆ ಆಗಿದೆ. ಮಹಾರಾಷ್ಟ್ರ ಮತ್ತು ಯುಪಿಎ ಮಾದರಿಯಲ್ಲೆ ರಾಜ್ಯದಲ್ಲೂ ಸ್ಥಾನ ಹಂಚಿಕೆ ಆಗಲಿ. ನಮ್ಮದು ರಾಷ್ಟ್ರೀಯ ಪಕ್ಷ. ದೇಶಕ್ಕೆ ಒಂದೇ ಮಾದರಿ ಇರಬೇಕು. ರಾಜ್ಯದಲ್ಲೂ ವಿಪಕ್ಷ ಮತ್ತು ಸಿಎಲ್‌ಪಿ ಸ್ಥಾನ ಪ್ರತ್ಯೇಕವಾಗಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಎಚ್‌ಕೆ ಪಾಟೀಲ್ ಹೇಳಿದ್ದಾರೆ.
ಸಿದ್ದರಾಮಯ್ಯ ಬಗ್ಗೆ ಪರಂ, ಡಿಕೆಶಿ ಬಹಿರಂಗ ಆಕ್ಷೇಪ
ಕೆಎಚ್ ಮುನಿಯಪ್ಪ ಸಹ ಅದೇ ಮಾತು
ಮಾಜಿ ಸಂಸದ ಕೆಎಚ್ ಮುನಿಯಪ್ಪ ಸಹ ವಿರೋಧ ವ್ಯಕ್ತಪಡಿಸಿದ್ದಾರೆ. ಸಮನ್ವಯ ಸಮಿತಿ ಹಿಂದೆಯೂ ಇದ್ದ ಉದಾರಣೆ ಇದೆ. ಸಮನ್ವಯ ಸಮಿತಿ ರಚಿಸಬೇಕು ಎನ್ನುವ ಬೇಡಿಕೆ ಹೊಸತಲ್ಲ. ಮೂವರು ಕಾರ್ಯಾಧ್ಯಕ್ಷರ ಅಗತ್ಯವಿದೆ. ಆದರೆ ಸಿಎಲ್‌ಪಿ ಮತ್ತು ವಿರೋಧಪಕ್ಷದ ನಾಯಕನ ಸ್ಥಾನ ಪ್ರತ್ಯೇಕಿಸಿದರೆ ಒಳಿತು. ಹಲವು ನಾಯಕರು ನನ್ನ ಹೆಸರ ಪ್ರಸ್ತಾಪ ಮಾಡಿದ್ದಾರೆ. ಎಲ್ಲರೂ ಅಧ್ಯಕ್ಷರಾಗೊಲ್ಲ, ಸಿಎಲ್‌ಪಿ ನಾಯಕರಾಗೊಲ್ಲ. ಹಾಗೆಯೇ ಎಲ್ಲರೂ ವಿರೋಧಪಕ್ಷದ ನಾಯಕರಾಗುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪರಂ-ಡಿಕೆಶಿ ಹೇಳಿದ್ದೇನು..?
ಕೆಪಿಸಿಸಿಗೆ ಕಾರ್ಯಾಧ್ಯಕ್ಷರು ನೇಮಕವಾಗಬಾರದು. ಹೀಗಾದಲ್ಲಿ ಗುಂಪುಗಾರಿಕೆ ಹೆಚ್ಚುತ್ತದೆ ಎನ್ನುವ ಮೂಲಕ ಸಿದ್ದರಾಮಯ್ಯ ನಿಲುವಿಗೆ ಪರಮೇಶ್ವರ್ ನೇರಾನೇರ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ತಮ್ಮ ಬೆಂಬಲಿಗರೊಂದಿಗೆ ಇತ್ತೀಚೆಗೆ ದೆಹಲಿಗೆ ತೆರಳಿದ್ದ ಸಿದ್ದರಾಮಯ್ಯ ನಡವಳಿಕೆಯನ್ನು ಪರೋಕ್ಷವಾಗಿ ಪ್ರಸ್ತಾಪಿಸಿರುವ ಡಿ.ಕೆ. ಶಿವಕುಮಾರ್, ನಾನು ಗುಂಪು ಕಟ್ಟಿಕೊಂಡು ಹೋಗುವುದಿಲ್ಲ ಎಂದು ಟಾಂಗ್ ನೀಡಿದ್ದಾರೆ.