ಬೆಂಗಳೂರು (ನ.10): ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ (Election) ಪಕ್ಷ ಜಯ ಗಳಿಸುತ್ತದೆ ಎಂಬ ನಂಬಿಕೆಯೋ ಅಥವಾ ಪರಿಷತ್ತಿಗಿಂತ ವಿಧಾನಸಭೆಗೆ ಸದಸ್ಯರಾಗುವ ಗೀಳಿನ ಪರಿಣಾಮವೋ ಏನೋ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಘೋಷಣೆಯಾಗಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ನ (congress) ಹಾಲಿ ಸದಸ್ಯರು ಹಿಂದೇಟು ಹಾಕಿದ್ದಾರೆ.
ರಾಜ್ಯದ 20 ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಈ ಪೈಕಿ 15 ಸ್ಥಾನಗಳಲ್ಲಿ ಕಾಂಗ್ರೆಸ್ (Congress) ಸದಸ್ಯರು ಇದ್ದರು. ಈ ಪೈಕಿ ಏಳು ಮಂದಿ (ಹಾನಗಲ್ ವಿಧಾನಸಭೆ ಉಪ ಚುನಾವಣೆಯಲ್ಲಿ (Karnataka Assembly By Election) ಗೆದ್ದ ಶ್ರೀನಿವಾಸ ಮಾನೆ ಸೇರಿ) ಪರಿಷತ್ ಚುನಾವಣೆಗೆ (MLC Election) ಸ್ಪರ್ಧಿಸಲು ಹಿಂಜರಿಕೆ ತೋರಿದ್ದಾರೆ. ಹೀಗಾಗಿ ತಾನು ಕಳೆದ ಬಾರಿ ಗೆದ್ದಿದ್ದ ಕ್ಷೇತ್ರಗಳಲ್ಲಿ ಸೂಕ್ತ ಅಭ್ಯರ್ಥಿ ಹುಡುಕಾಟ ನಡೆಸುವುದು ಪಕ್ಷದ ನಾಯಕತ್ವಕ್ಕೆ ತಲೆನೋವಾಗಿ ಪರಿಣಮಿಸಿದೆ.
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಚುನಾವಣೆ (Election) ಘೋಷಣೆಯಾಗಿರುವ 25 ಕ್ಷೇತ್ರಗಳ ಪೈಕಿ ಕಳೆದ ಬಾರಿ ಕಾಂಗ್ರೆಸ್‌ನಿಂದ (Congress) 14 ಮಂದಿ ಜಯಗಳಿಸಿದ್ದರು. ಇದರ ಜತೆಗೆ ಬೆಳಗಾವಿಯಲ್ಲಿ (Belagavai) ಪಕ್ಷೇತರರಾಗಿ ಗೆದ್ದಿದ್ದ ವಿವೇಕರಾವ್ ವಸಂತ ರಾವ್ ಪಾಟೀಲ್ ಅವರು ಅನಂತರ ಕಾಂಗ್ರೆಸ್ (Congress) ಸೇರ್ಪಡೆಯಾಗಿದ್ದರು. ಈ 15 ಮಂದಿ ಪೈಕಿ ಧಾರವಾಡದ ಶ್ರೀನಿವಾಸ ಮಾನೆ ಅವರು ಹಾನಗಲ್ ವಿಧಾನಸಭಾ ಉಪ ಚುನಾವಣೆಯಲ್ಲಿ ಜಯ ಗಳಿಸಿರುವುದರಿಂದ ಅವರು ಪರಿಷತ್ತಿಗೆ ಮರು ಸ್ಪರ್ಧೆ ಮಾಡುತ್ತಿಲ್ಲ.
ಉಳಿದ 14 ಕ್ಷೇತ್ರಗಳ ಪೈಕಿ 6 ಮಂದಿ ಹಾಲಿ ಸದಸ್ಯರು ಟಿಕೆಟ್ ಒಲ್ಲೆ ಎನ್ನುತ್ತಿದ್ದಾರೆ ಎಂದು ಕಾಂಗ್ರೆಸ್ (Congress) ಮೂಲಗಳು ತಿಳಿಸಿವೆ. ಈ ಪೈಕಿ ಕೆ. ಪ್ರತಾಪ ಚಂದ್ರ ಶೆಟ್ಟಿಅವರು ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಸಕ್ತಿ ತೋರಿದ್ದಾರೆ ಎನ್ನಲಾಗಿದೆ. ಉಳಿದಂತೆ ಉತ್ತರ ಕನ್ನಡದ (uttara kannada) ಎಸ್.ಎಲ್.ಘೋಟ್ನೇಕರ್, ಬೆಂಗಳೂರು ಗ್ರಾಮಾಂತರದ (Bengaluru) ಎಂ. ನಾರಾಯಣ ಸ್ವಾಮಿ, ಹಾಸನದ (Hassan) ಗೋಪಾಲಸ್ವಾಮಿ, ಬೀದರ್‌ನ (Bidar) ವಿಜಯ್ ಸಿಂಗ್ ಹಾಗೂ ಚಿತ್ರದುರ್ಗದ (Chitradurga) ರಘು ಆಚಾರ್ ಅವರು ಪರಿಷತ್ತಿಗೆ ಸ್ಪರ್ಧಿಸಲು ಹಿಂದೇಟು ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಶಾಸಕರಿಗೆ ವಿಧಾನಪರಿಷತ್ತಿಗೆ ಸ್ಪರ್ಧೆಗಿಂತ ಮುಂದಿನ ಸಾರ್ವತ್ರಿಕ ಚುನಾವಣೆ (election) ವೇಳೆ ವಿಧಾನಸಭೆಗೆ ಸ್ಪರ್ಧಿಸುವ ಬಯಕೆಯಿದೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ, ಘೋಟ್ನೇಕರ್ ಅವರು ಹಳಿಯಾಳ ವಿಧಾನಸಭಾ ಕ್ಷೇತ್ರ, ನಾರಾಯಣ ಸ್ವಾಮಿ ಅವರು ಕೆ.ಆರ್. ಪುರ (KR Puram) ವಿಧಾನಸಭಾ ಕ್ಷೇತ್ರ, ಹಾಸನದ ಗೋಪಾಲಸ್ವಾಮಿ ಅವರು ಶ್ರವಣ ಬೆಳಗೊಳ ವಿಧಾನಸಭಾ ಕ್ಷೇತ್ರ, ಬೀದರ್‌ನ ವಿಜಯಸಿಂಗ್ ಅವರು ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರ ಮತ್ತು ಚಿತ್ರದುರ್ಗದ ರಘು ಆಚಾರ್ ಅವರು ಚಿತ್ರದುರ್ಗ (Chitradurga) ವಿಧಾನಸಭಾ ಕ್ಷೇತ್ರ ಅಥವಾ ಮೈಸೂರು (Mysuru) ಜಿಲ್ಲೆಯ ಯಾವುದಾದರೂ ಒಂದು ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಲು ಬಯಸಿದ್ದು, ಈಗಾಗಲೇ ಟಿಕೆಟ್‌ಗಾಗಿ ನಾಯಕರಿಗೆ ಮನವಿ ಮಾಡಿದ್ದಾರೆ ಎಂದೂ ಹೇಳಲಾಗುತ್ತಿದೆ.
ಹಾನಗಲ್ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿನ ನಂತರ ಮುಂದಿನ ಸಾರ್ವತ್ರಿಕ ಚುನಾವಣೆ ಬಗ್ಗೆ ಕಾಂಗ್ರೆಸ್‌ನಲ್ಲಿ ಉತ್ಸಾಹ ಹೆಚ್ಚಿದೆ. ಕಾಂಗ್ರೆಸ್‌ಗೆ ಮುಂದಿನ ಬಾರಿ ಗೆಲುವಿನ ವಿಶ್ವಾಸ ಮೂಡಿದೆ. ಹೀಗಾಗಿ ವಿಧಾನಸಭೆಗೆ ಸ್ಪರ್ಧಿಸುವ ಬಯಕೆ ಬಹುತೇಕರಲ್ಲಿ ಮೂಡಿದೆ. ಇನ್ನು ಪರಿಷತ್ತಿನಲ್ಲಿ ಎಸ್.ಆರ್. ಪಾಟೀಲ್ ಹಾಗೂ ಬಿ.ಕೆ. ಹರಿಪ್ರಸಾದ್‌ರಂತಹ ಘಟಾನುಘಟಿಗಳು ಇರುವುದರಿಂದ ಭವಿಷ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಪರಿಷತ್ ಕೋಟಾದಿಂದ ಸಚಿವರಾಗುವುದು ಕಷ್ಟ. ಆದರೆ, ವಿಧಾನಸಭಾ ಸದಸ್ಯರಾದರೆ ಅವಕಾಶ ಹೆಚ್ಚು ಎಂಬ ಕಾರಣಕ್ಕೆ ವಿಧಾನಸಭಾ ಸದಸ್ಯರಾಗುವ ಉಮೇದಿ ಉಂಟಾಗಿದೆ.
ಇದರ ಜತೆಗೆ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿನ ಚುನಾವಣೆಯಲ್ಲಿ ‘ಪ್ರಚಾರ’ಕ್ಕೆ ತಗಲುವ ವೆಚ್ಚ ಕೂಡ ಕಾರಣ ಎನ್ನಲಾಗುತ್ತಿದೆ. ವಿಧಾನಸಭೆ ಚುನಾವಣೆಗೆ ಮಾಡುವ ವೆಚ್ಚಕ್ಕಿಂತ ದುಪ್ಪಟ್ಟು ವೆಚ್ಚವನ್ನು ಈ ಚುನಾವಣೆಗೆ ಮಾಡಬೇಕಾಗುತ್ತದೆ ಎಂಬ ಕಾರಣಕ್ಕೂ ಸ್ಪರ್ಧೆಗೆ ಹಿಂಜರಿಯುತ್ತಿದ್ದಾರೆ ಎನ್ನುತ್ತವೆ ಮೂಲಗಳು.
ಸ್ಪರ್ಧೆಗೆ ಹಿಂದೇಟು ಹಾಕುತ್ತಿರುವ ಕಾಂಗ್ರೆಸಿಗರು
ದಕ್ಷಿಣ ಕನ್ನಡದ ಪ್ರತಾಪ ಚಂದ್ರ ಶೆಟ್ಟಿ, ಉತ್ತರ ಕನ್ನಡದ ಎಸ್.ಎಲ್.ಘೋಟ್ನೇಕರ್, ಬೆಂಗಳೂರು ಗ್ರಾಮಾಂತರದ ಎಂ. ನಾರಾಯಣ ಸ್ವಾಮಿ, ಹಾಸನದ ಗೋಪಾಲಸ್ವಾಮಿ, ಬೀದರ್‌ನ ವಿಜಯ್ ಸಿಂಗ್, ಚಿತ್ರದುರ್ಗದ ರಘು ಆಚಾರ್