
ಬೆಂಗಳೂರು, (ಮೇ.22): ಗ್ರಾಮ ಪಂಚಾಯಿತಿ ಚುನಾವಣೆ ಆಡಳಿತ ಹಾಗೂ ವಿಪಕ್ಷ ನಡುವೆ ರಾಜಕೀಯ ಚದುರಂಗದಾಟ ನಡೆದಿದೆ.
ಇದಕ್ಕೆ ಪೂರಕವೆಂಬಂತೆ ಗ್ರಾಮ ಪಂಚಾಯಿತಿ ಚುನಾವಣೆಯನ್ನು ನಿಗದಿತ ಅವಧಿಗೆ ನಡೆಸುವಂತೆ ಕಾಂಗ್ರೆಸ್ ನಿಯೋಗ ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.
ಗ್ರಾಮ ಪಂಚಾಯಿತಿ ಅವಧಿ ಮುಕ್ತಾಯ: ಬಿಎಸ್‌ವೈಗೆ ಸಿದ್ದು ಪ್ರಜಾಪ್ರಭುತ್ವ, ಸಂವಿಧಾನದ ಪಾಠ
ಗ್ರಾಮ ಪಂಚಾಯಿತಿಗಳಿಗೆ ಸದಸ್ಯರನ್ನು ನಾಮ ನಿರ್ದೇಶನ ಮಾಡಲು ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿದ್ದು, ಇದಕ್ಕೆ ಅವಕಾಶ ನೀಡದಂತೆ ಹಾಗೂ ಪಂಚಾಯಿತಿಗಳಿಗೆ ಚುನಾವಣೆ ನಡೆಸುವಂತೆ ಇಂದು (ಶುಕ್ರವಾರ) ಚುನಾವಣಾ ಆಯುಕ್ತರನ್ನು ಭೇಟಿಮಾಡಿದ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ನಿಯೋಗ ಒತ್ತಾಯಿಸಿದೆ..
ಗ್ರಾಮ ಪಂಚಾಯತಿಗಳ ಅಧಿಕಾರಾವಧಿಯು ಮುಕ್ತಾಯಗೊಳ್ಳುತ್ತಿದ್ದರೂ ರಾಜ್ಯ ಚುನಾವಣಾ ಆಯೋಗವು ರಾಜ್ಯದ ಗ್ರಾಮ ಪಂಚಾಯತಿಗಳ ಚುನಾವಣಾ ಪ್ರಕ್ರಿಯೆಗಳ ಬಗ್ಗೆ ಪ್ರಾಮಾಣಿಕವಾಗಿ ಪ್ರಕ್ರಿಯೆಯನ್ನು ಭಾರತೀಯ ಸಂವಿಧಾನ 1950 ಮತ್ತು ಕರ್ನಾಟಕ ಗ್ರಾಮ ಸ್ವರಾಜ್ ಪಂಚಾಯತ್ ರಾಜ್ ಕಾಯ್ದೆ 1993 ರ ಆಶಯದಂತೆ ಆರಂಭಿಸಿಲ್ಲದಿರುವುದು ಸಂವಿಧಾನ ವಿರೋಧಿಯಾದ ನಡೆಯಾಗಿದೆ ಎಂದು ದೂರಿದರು.
ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ ನಡೆಯಬೇಕಾದ ಚುನಾವಣಾ ಪ್ರಕ್ರಿಯೆಗೆ ಮೇಲಿನ ಮೇಲ್ವಿಚಾರಣೆ, ಮತದಾರರ ಪಟ್ಟಿ ತಯಾರಿಸುವಿಕೆ ಮತ್ತು ನಿಯಂತ್ರಣಗಳನ್ನು ರಾಜ್ಯ ಚುನಾವಣಾ ಆಯೋಗದ ಅಧಿಕಾರ ವ್ಯಾಪ್ತಿಗೆ ನೀಡಲಾಗಿದೆ. ಸಂವಿಧಾನದ 243ಇ ವಿಧಿಯಂತೆ ಗ್ರಾಮ ಪಂಚಾಯತಿಯೊಂದು ಮೊದಲ ಸಭೆ ನಡೆಸಿದ ದಿನಾಂಕದಿಂದ 5 ವರ್ಷಗಳ ಅವಧಿಯವರೆಗೆ ಅಧಿಕಾರ ಹೊಂದಿದೆ.
ಅದರಂತೆ 2015 ನೇ ಇಸವಿಯಲ್ಲಿ ನಮ್ಮ ರಾಜ್ಯದ 6024 ಗ್ರಾಮ ಪಂಚಾಯತಿಗಳ ಸದಸ್ಯರ ಸ್ಥಾನಗಳಿಗಾಗಿ ಚುನಾವಣೆಯು ನಡೆದಿದೆ. ಬಹುಪಾಲು ಗ್ರಾಮ ಪಂಚಾಯತಿಗಳ ಅಧಿಕಾರಾದ ಅವಧಿಯು ಇದೇ ಜೂನ್ ಮತ್ತು ಜುಲೈ ತಿಂಗಳಲ್ಲಿ ಮುಕ್ತಾಯವಾಗುತ್ತದೆ.
ಆದ್ದರಿಂದ ಸಂವಿಧಾನದ 73 ನೇ ತಿದ್ದುಪಡಿಯ ಉದ್ದೇಶಕ್ಕೆ ವಿರುದ್ಧವಾಗಿ ರಾಜ್ಯ ಚುನಾವಣಾ ಆಯೋಗವು ರಾಜ್ಯದ ಗ್ರಾಮ ಪಂಚಾಯತಿಗಳಿಗೆ ನಿಗಧಿತ ಅವಧಿಯಲ್ಲಿ ಚುನಾವಣೆಗಳನ್ನು ನಡೆಸದೆ ಇರುವುದರಿಂದ ಗ್ರಾಮಗಳ ವಿಕೇಂದ್ರೀಕೃತ ಸ್ಥಳೀಯ ಸ್ವಯಂ ಆಡಳಿತ ವ್ಯವಸ್ಥೆಯನ್ನು ದಮನ ಮಾಡಿದಂತಾಗುತ್ತದೆ. ಇದರಿಂದ ಸಂವಿಧಾನದ 73 ನೇ ತಿದ್ದುಪಡಿಯ ಧ್ಯೇಯೋದ್ದೇಶಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಅವರು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.