ಕಾಂಗ್ರೆಸ್ ತನ್ನ ಮೊದಲ ಅಭ್ಯರ್ಥಿ ಗಳ ಪಟ್ಟಿ ಬಿಡುಗಡೆಯಾಗಿದ್ದು, ತುಮಕೂರು ಜಿಲ್ಲೆಯ 11 ವಿಧಾನಸಭೆ ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳಿಗೆ ಹೆಸರು ಅಂತಿಮಗೊಳಿಸಿ ಪಕ್ಷದ ಹೈಕಮಾಂಡ್ ಪಟ್ಟಿ ಬಿಡುಗಡೆ ಮಾಡಿದೆ. ಯಾರಿಗೆ ಯಾವ ಕ್ಷೇತ್ರ ಎಂಬ ಸಂಪೂರ್ಣ ವಿವರ ಇಲ್ಲಿದೆ.
ವರದಿ : ಮಹಂತೇಶ್ ಕುಮಾರ್ ಏಷ್ಯನೆಟ್ ಸುವರ್ಣ ನ್ಯೂಸ್ ತುಮಕೂರು.
ತುಮಕೂರು (ಮಾ.25) : ರಾಜ್ಯದಲ್ಲಿ ಮುಂಬರುವ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಗಳ ಪಟ್ಟಿ ಬಿಡುಗಡೆಯಾಗಿದ್ದು, ಜಿಲ್ಲೆಯ 11 ವಿಧಾನಸಭೆ ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳಿಗೆ ಹೆಸರು ಅಂತಿಮಗೊಳಿಸಿ ಪಕ್ಷದ ಹೈಕಮಾಂಡ್ ಪಟ್ಟಿ ಬಿಡುಗಡೆ ಮಾಡಿದೆ. ಇದ್ರಿಂದಾಗಿ ಒಂದು ರೀತಿ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಕಾಂಗ್ರೆಸ್ ಅಭ್ಯರ್ಥಿ ಗಳ ಹೆಸರು ಅಂತಿಮವಾಗುತ್ತಿದ್ದಂತೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷದಲ್ಲಿಯೂ ಸೂಕ್ತ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಎರಡೂ ಪಕ್ಷಗಳು ವ್ಯೂಹ ರಚಿಸುತ್ತಿವೆ. ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಗುಬ್ಬಿ, ತುಮಕೂರು ನಗರ ಮತ್ತು ತುಮಕೂರು ಗ್ರಾಮಾಂತರ ಕ್ಷೇತ್ರಗಳನ್ನ ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳ ಅಭ್ಯರ್ಥಿಗಳಿಗೆ ಅಭ್ಯರ್ಥಿಗಳ ಹೆಸರನ್ನು ಬಿಡಗಡೆ ಮಾಡಲಾಗಿದೆ.
ಚಿಕ್ಕನಾಯಕನಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ ಕೆ.ಎಸ್. ಕಿರಣ್ ಕುಮಾರ್ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ. ಕಿರಣ್ ಕುಮಾರ್ ಅನೇಕ ವರ್ಷಗಳಿಂದ ಬಿಜೆಪಿ ಮತ್ತು ಆರ್ ಎಸ್ ಎಸ್ ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದವರು, ಒಮ್ಮೆ ಬಿಜೆಪಿ ಶಾಸಕರಾಗಿಯೂ ಆಯ್ಕೆಯಾಗಿದ್ದರು, ಇತ್ತೀಚೆಗಷ್ಟೆ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಪ್ರಸ್ತುತ ಶಾಸಕರಾಗಿರುವ ಸಚಿವ ಮಾಧುಸ್ವಾಮಿಗೆ ಬಿಜೆಪಿ ಟಿಕೆಟ್ ನೀಡಲಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಂಡಿದ್ದ ಕಿರಣ್ ಕುಮಾರ್ ಇತ್ತೀಚೆಗಷ್ಟೆ ಪಕ್ಷ ತೊರೆದಿದ್ದರು. ಕಾಂಗ್ರೆಸ್ ಟಿಕೆಟ್ ಪಡೆದಿರುವ ಕಿರಣ್ ಕುಮಾರ್ ಅವರು ಬಿಜೆಪಿಯ ಮಾಧುಸ್ವಾಮಿ ವಿರುದ್ದ ಮತ್ತೊಬ್ಬ ಪ್ರಬಲ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ. ಇನ್ನು ಜೆಡಿಎಸ್ ಪಕ್ಷದ ಮಾಜಿ ಶಾಸಕ ಸುರೇಶ್ ಬಾಬು ಬಹುತೇಕ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ. ಈ ಮೂಲ್ಕ ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆಏರ್ಪಡುವ ಸಂಭವ ಹೆಚ್ಚಿದೆ.
ಕೊರಟಗೆರೆ ವಿಧಾನ ಸಭಾ ಕ್ಷೇತ್ರಕ್ಕೆ ನಿರೀಕ್ಷೆಯಂತೆ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರದಲ್ಲಿ ತೊಡಗಿರುವ ಪರಮೇಶ್ವರ್ ಈ ಬಾರಿ ಚುನಾವಣೆಯು ಸುಲಭವಾಗಿರುವುದಿಲ್ಲ. ಏಕೆಂದ್ರೆ ಜೆಡಿಎಸ್ ಪಕ್ಷದಿಂದ ಬಹುತೇಕ ಅಭ್ಯರ್ಥಿಯಾಗಲಿರುವ ಮಾಜಿ ಶಾಸಕ ಸುಧಾಕರ್ ಲಾಲ್ ಕೂಡ ಸದ್ದಿಲ್ಲದೆ ಕ್ಷೇತ್ರದಲ್ಲಿ ನಿರಂತರ ಪ್ರಚಾರದಲ್ಲಿ ತೊಡಗಿದ್ದಾರೆ. ಈಗಾಗಲೇ ಒಮ್ಮೆ ಜೆಡಿಎಸ್ ನ ಪಂಚರತ್ನ ರಥಯಾತ್ರೆಯನ್ನು ನಡೆಸುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರೊಂದಿಗೆ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದಾರೆ. ಇನ್ನು ಬಿಜೆಪಿ ಅಭ್ಯರ್ಥಿಯಾಗಿ ನಿವೃತ್ತ ಐಪಿಎಸ್ ಅಧಿಕಾರಿ ಅನಿಲ್ ಕುಮಾರ್ ಕೂಡ ತಮ್ಮ ಜಾತಿ ಬೆಂಬಲದೊಂದಿಗೆ ಪ್ರಚಾರದಲ್ಲಿ ತೊಡಗಿದ್ದಾರೆ. ಅಲ್ಲದೆ ಈಗಾಗಲೇ ಎರಡು ಬಾರಿ ಜನಸಂಕಲ್ಪ ಯಾತ್ರೆಯನ್ನು ಕ್ಷೇತ್ರದಲ್ಲಿ ನಡೆಸಿದ್ದಾರೆ. ಅಲ್ಲದೆ ಎರಡು ಬಾರಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಮತ್ತು ಸಚಿವ ಸಂಪುಟದ ಅನೇಕ ಮಂದಿ ಸಚಿವರು ಬಂದು ಪ್ರಚಾರ ನಡೆಸಿದ್ದಾರೆ. ನಿರಂತರವಾಗಿ ಸಂಘಟನೆಯಲ್ಲಿ ತೊಡಗಿದ್ದಾರೆ. ಹೀಗಾಗಿ ಕೊರಟಗೆರೆ ವಿಧಾನಸಭೆ ಕ್ಷೇತ್ರದಲ್ಲಿಯೂ ತ್ರಿಕೋನ ಸ್ಪಧೆ ಏರ್ಪಡುವುದು ಬಹುತೇಕ ಖಚಿತವಾಗಿದೆ.
ಕುಣಿಗಲ್ ವಿಧಾನ ಸಭಾ ಕ್ಷೇತ್ರಕ್ಕೆ ಹಾಲಿ ಶಾಸಕ ಡಾ.ರಂಗನಾಥ್ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ. ಸರಕಾರ ಇಲ್ಲದಿದ್ದರೂ ನಿರಂತರವಾಗಿ ಕ್ಷೇತ್ರದಲ್ಲಿ ಜನರೊಂದಿಗೆ ಬೆರೆತು ಅವರ ವಿಶ್ವಾಸ ಗಳಿಸಲು ತಮ್ಮ ಅವಧಿಯಲ್ಲಿ ಹರಸಾಹಸ ಪಟ್ಟಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಲಿರುವ ಡಾ. ರಂಗನಾಥ್ ವಿರುದ್ಧ ಸೆಣೆಸಲು ಜೆಡಿಎಸ್ ಮತ್ತು ಬಿಜೆಪಿ ಪಕ್ಷದಲ್ಲಿ ಅಭ್ಯರ್ಥಿಗಳ ಹುಡುಕಾಟ ನಡೆದಿದ್ದು , ಎರಡೂ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿದೆ. ಕುಣಿಗಲ್ ವಿಧಾನಸಭೆ ಕ್ಷೆತ್ರವು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರಲಿದೆ, ಅಲ್ಲದೆ ಡಿ.ಕೆ. ಶಿವಕುಮಾರ್ ಸಂಬಂಧಿಯೂ ಆಗಿರುವ ಡಾ. ರಂಗನಾಥ್ ಗೆ ಡಿ.ಕೆ. ಶಿವಕುಮಾರ್ ಸಹೋದರರ ಬೆಂಬಲ ಸಂಪೂರ್ಣ ಇದೆ. ಅಲ್ಲದೆ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರದಲ್ಲಿಯೂ ಡಾ. ರಂಗನಾಥ್ ಗೆ ಚುನಾವಣೆಯಲ್ಲಿ ಸಹಕಾರಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಬಿಜೆಪಿಯಿಂದ ಮುದ್ದಹನುಮೇಗೌಡ, ಕೃಷ್ಣಕುಮಾರ್, ಹಾಗೂ ರಾಜೇಶ್ ಗೌಡ ಮತ್ತು ಜೆಡಿಎಸ್ ಡಿ.ನಾಗರಾಜಯ್ಯ ಪ್ರಬಲ ಆಕಾಂಕ್ಷಿಯಾಗಲಿದ್ದಾರೆ. ಇಲ್ಲಿಯೂ ಕೂಡ ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ.
ಶಿರಾ ವಿಧಾನ ಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ಹಿರಿಯ ಕಾಂಗ್ರೆಸ್ ನಾಯಕ ಟಿ.ಬಿ.ಜಯಚಂದ್ರ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸಿದೆ. ಕಳೆದ ಬಾರಿಯ ಉಪಚುನಾವಣೆಯಲ್ಲಿ ಬಿಜೆಪಿಯ ಡಾ. ರಾಜೇಶ್ ಗೌಡ ಎದುರು ಪರಾಭವಗೊಂಡಿದ್ದ ಟಿ.ಬಿ. ಜಯಚಂದ್ರ ಈ ಬಾರಿ ಮತ್ತೊಮ್ಮೆ ಕಾಂಗ್ರೆಸ್ ಅಭ್ಯೃಥಿಯಾಗಿ ಕಣದಲ್ಲಿ ಸೆಣೆಸಲಿದ್ದಾರೆ. ಈಗಾಗಲೇ ಪ್ರಸ್ತುತ ಶಾಸಕ ಡಾ. ರಾಜೇಶ್ ಗೌಡ ಅವರಿಗೆ ಪಕ್ಷವು ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿದೆ. ಜೆಡಿಎಸ್ ನಲ್ಲಿಯೂ ಟಿಕೇಟ್ ಪಡೆಯಲು ಇಬ್ಬರು ಮುಖಂಡರ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ.
ಮಧುಗಿರಿ ವಿಧಾನ ಸಭಾ ಕ್ಷೇತ್ರಕ್ಕೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ಹೆಸರನ್ನು ಕಾಂಗ್ರೆಸ್ ಪಕ್ಷ ಅಂತಿಮಗೊಳಿಸಿದೆ. ಕಳೆದ ಎರಡು ಬಾರಿಯ ಚುನಾವಣೆಯಲ್ಲಿ ಪರಾಭವಗೊಂಡಿರುವ ಕೆ.ಎನ್. ರಾಜಣ್ಣ ಇದೀಗ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಒಡ್ಡಿದ್ದಾರೆ. ಪ್ರಸ್ತುತ ಜೆಡಿಎಸ್ ಶಾಸಕರಾಗಿರುವ ವೀರಭದ್ರಪ್ಪ ಅವರಿಗೆ ಜೆಡಿಎಸ್ ಪಕ್ಷವು ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿದೆ. ಇನ್ನು ಬಿಜೆಪಿ ಟಿಕೇಟ್ ಗಾಗಿ ನಿವೃತ್ತ ಕೆಎಎಸ್ ಅಧಿಕಾರಿಯೊಬ್ಬರು ಪ್ರಯತ್ನ ಪಡುತ್ತಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಜೆಡಿಎಸ್ ನ ಪಂಚರತ್ನ ರಥಯಾತ್ರೆಯನ್ನು ಎಚ್ ಡಿಕೆ ನೇತೃತ್ವದಲ್ಲಿ ನಡೆಸಲಾಗಿದೆ.
ಪಾವಗಡ ವಿಧಾನ ಸಭಾ ಕ್ಷೇತ್ರಕ್ಕೆ ಎಚ್.ವಿ.ವೆಂಕಟೇಶ್ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಪಕ್ಷವು ಅಂತಿಮಗೊಳಿಸಿದೆ. ಪ್ರಸ್ತುತ ಕಾಂಗ್ರೆಸ್ ಶಾಸಕರಾಗಿರುವ ವೆಂಕಟರಮಣಪ್ಪ ಅವರ ಮಗನಾಗಿರುವ ವೆಂಕಟೇಶ್ ಕ್ಷೇತ್ರದಲ್ಲಿ ತಂದೆಯೊಂದಿಗೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲದೆ ತಂದೆಯ ನೆರಳಲ್ಲಿಯೇ ರಾಜಕಾರಣ ಮಾಡಿರೋ ವೆಂಕಟೇಶ್ ಅವರಿಗೆ ಈ ಬಾರಿ ಕಾಂಗ್ರೆಸ್ ಟಿಕೇಟ್ ನೀಡಿದೆ. ಕಳೆದ ಬಾರಿ ಅತಿ ಕಡಿಮೆ ಅಂತರದಲ್ಲಿ ಜೆಡಿಎಸ್ ಅಭ್ಯರ್ಥಿ ತಿಮ್ಮರಾಯಪ್ಪ ಅವರನ್ನು ವೆಂಕಟರಮಣಪ್ಪ ಪರಾಭಗೊಳಿಸಿದ್ದರು. ಇನ್ನು ಬಿಜೆಪಿ ಕ್ಷೇತ್ರದಲ್ಲಿ ಅಷ್ಟೇನು ಪ್ರಬಲವಾಗಿಲ್ಲ. ಹೀಗಾಗಿ ಮೇಲ್ನೋಟಕ್ಕೆ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಡಲಿದೆ.
ತಿಪಟೂರು ವಿಧಾನಸಭಾ ಕ್ಷೇತ್ರಕ್ಕೆ ಕೆ. ಷಡಕ್ಷರಿ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ. 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಷಡಕ್ಷರಿ ಅವರು, ತಿಪಟೂರು ಕ್ಷೇತ್ರದಲ್ಲಿ ಸಾಗಿದ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದರು. ಅಲ್ಲದೆ ಕಾಂಗ್ರೆಸ್ ನ ಜನಧ್ವನಿ ಯಾತ್ರೆಯನ್ನು ನಡೆಸಿದ್ದರು. ಪ್ರಸ್ತುತ ಬಿಜೆಪಿ ಶಾಸಕರಾಗಿರುವ ಸಚಿವ ನಾಗೇಶ್ ಕಾಂಗ್ರೆಸ್ ಪಕ್ಷದ ಷಡಕ್ಷರಿ ಎದುರು ಸೆಣೆಸಲಿದ್ದಾರೆ.
ತುರುವೇಕೆರೆ ವಿಧಾನಸಭಾ ಕ್ಷೇತ್ರ ಕ್ಕೆ ಬೆಮೆಲ್ ಕಾಂತರಾಜು ಕಾಂಗ್ರೆಸ್ ಅಭ್ಯಥಿಯಾಗಲಿದ್ದಾರೆ. ಈ ಹಿಂದೆ ಜೆಡಿಎಸ್ ನ ವಿಧಾನಪರಿಷತ್ ಸದಸ್ಯರಾಗಿದ್ದರು. ನಂತರ ಜೆಡಿಎಸ್ ನಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಪ್ರಾರಂಭದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರಿಂದ ಭಾರೀ ಪ್ರತಿರೋಧ ಎದುರಿಸಿದ್ದರು. ನಂತರದ ದಿನದಲ್ಲಿ ತಿಪಟೂರು ಕ್ಷೇತ್ರದಲ್ಲಿ ಸಾಗಿದ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯನ್ನು ಸಮರ್ಥ ವಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದರು. ಅಲ್ಲದೆ ಕಾಂಗ್ರೆಸ್ ನ ಜನಧ್ವನಿ ಯಾತ್ರೆಯನ್ನು ನಡೆಸಿದ್ದರು. ಬಿಜೆಪಿಯಿಂದ ಹಾಲಿ ಶಾಸಕ ಮಾಸಲೆ ಜಯರಾಂ ಹಾಗೂ ಜೆಡಿಎಸ್ ನಿಂದ ಮಾಜಿ ಶಾಸಕ ಎಂ ಟಿ ಕೃಷ್ಣಪ್ಪ ಅವರಿಗೆ ಬಹುತೇಕ ಟಿಕೇಟ್ ಘೋಷಣೆಯಾಗುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಜಾತಿವಾರು ಟಿಕೆಟ್ ಹಂಚಿದ ಕಾಂಗ್ರೆಸ್! ಯಾವ ಜಾತಿಗೆ ಎಷ್ಟು ಟಿಕೆಟ್ ಲಭಿಸಿದೆ? ವ್ಯಾಪಕ ಚರ್ಚೆ
ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್.ಶ್ರೀನಿವಾಸ್ ಇನ್ನೂ ಕಾಂಗ್ರೆಸ್ ಸೇರ್ಪಡೆಯಾಗದ ಹಿನ್ನೆಲೆ, ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್ ಟಿಕೇಟ್ ಘೋಷಣೆಯಾಗಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ. ಜೆಡಿಎಸ್ ತೊರೆದ ನಂತರ ಎಸ್. ಆರ್ . ಶ್ರೀನಿವಾಸ್ ಕಾಂಗ್ರೆಸ್ ಪಕ್ಷದ ಮುಖಂಡರೊಂದಿಗೆ ಸಕ್ರಿಯವಾಗಿ ಕಾಣಿಸಿಕೊಂಡಿದ್ದರು. ಅನೇಕ ಬಾರಿ ಕಾಂಗ್ರೆಸ್ ಮುಖಂಡರೊಂದಿಗೆ ಮಾತುಕತೆ ಕೂಡ ನಡೆಸಿದ್ದಾರೆ. ಅಲ್ಲದೆ ಇದ್ರೊಂದಿಗೆ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇಲ್ಲಿ ಎಸ್. ಆರ್. ಶ್ರೀನಿವಾಸ್ ವೈಯಕ್ತಿಕ ವರ್ಚಸ್ಸು ವೃದ್ದಿಸಿಕೊಂಡಿರುವುದು ಗಮನಾರ್ಹವಾಗಿದೆ.
ಕೈ ಟಿಕೆಟ್ ಘೋಷಣೆ ಬೆನ್ನಲ್ಲೇ ಬೆಳಗಾವಿಯಲ್ಲಿ ಭಿನ್ನಮತ ಸ್ಫೋಟ, ಸಿದ್ದರಾಮಯ್ಯ ನಿವಾಸಕ್ಕೆ ಸ್ವಾಮೀಜಿಗಳ ದೌಡು!
ಅದೇ ರೀತಿಯಲ್ಲಿ ತುಮಕೂರು ನಗರ ಮತ್ತು ತುಮಕೂರು ಗ್ರಾಮಾಂತರ ಕ್ಷೇತ್ರಗಳಿಗೂ ಯಾವುದೇ ಕಾಂಗ್ರೆಸ್ ಅಭ್ಯರ್ಥಿಯನ್ನು ಪಕ್ಷವು ಘೋಷಣೆ ಮಾಡದಿರುವುದು ಒಂದು ರೀತಿ ಕಾದು ನೋಡುವ ತಂತ್ರ ಅನುಸರಿಸುತ್ತಿದೆ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ. ಒಟ್ಟಾರೆ ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳಲ್ಲಿ ಮೂರೂ ಪಕ್ಷಗಳಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ಆರಂಭವಾಗಿದೆ.