7ನೇ ಗೆಲುವಿನ ನಿರೀಕ್ಷೆಯಲ್ಲಿ ಕಾಗೇರಿ, ದೇಶಪಾಂಡೆ ವಿರುದ್ಧ ತೊಡೆತಟ್ಟಿದ ಶಿಷ್ಯಂದಿರು, ಕುಮಟಾದಲ್ಲಿ ಕಾಂಗ್ರೆಸ್‌ಗೆ ಬಂಡಾಯ ಬಿಸಿ.
ವಸಂತಕುಮಾರ ಕತಗಾಲ
ಉತ್ತರಕನ್ನಡ(ಏ.27): ಉತ್ತರ ಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಕಳೆದ ಬಾರಿ ಕಾರವಾರ, ಕುಮಟಾ, ಭಟ್ಕಳ, ಶಿರಸಿ-ಸಿದ್ದಾಪುರ ಹಾಗೂ ಯಲ್ಲಾಪುರ ಸೇರಿ 5 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಹಳಿಯಾಳದಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿತ್ತು. ಆದರೆ, ಈ ಬಾರಿ ಕಾರವಾರ, ಭಟ್ಕಳ, ಶಿರಸಿ-ಸಿದ್ದಾಪುರ, ಯಲ್ಲಾಪುರ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ. ಹಳಿಯಾಳ ಹಾಗೂ ಕುಮಟಾದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಜಿಲ್ಲೆಯಲ್ಲಿ ಹೆಚ್ಚಿನ ಗ್ರಾ.ಪಂ.ಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರದಲ್ಲಿ ಇರುವುದರಿಂದ ತಳಮಟ್ಟದಲ್ಲಿ ಬಿಜೆಪಿ ಪ್ರಬಲವಾಗಿದೆ. ಪಕ್ಷದ ಕಾರ್ಯಕರ್ತರ ಪಡೆಯೂ ಸಾಕಷ್ಟುದೊಡ್ಡದಾಗಿದೆ. ಇದು ಈ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲಕರವಾಗಿದೆ. ಕಾಂಗ್ರೆಸ್, ಬಿಜೆಪಿಗಿಂತ ಮೊದಲೇ ಟಿಕೆಟ್ ಘೋಷಣೆ ಮಾಡಿದ್ದರಿಂದ ಅಭ್ಯರ್ಥಿಗಳಿಗೆ ಪ್ರಚಾರ ನಡೆಸಲು ಸಾಕಷ್ಟುಸಮಯ ಸಿಕ್ಕಿದ್ದು, ಅನುಕೂಲವೆನಿಸಿದೆ.
ಡಿಕೆಶಿಗೆ ಠಕ್ಕರ್ ಕೊಡಬಲ್ಲ ವ್ಯಕ್ತಿ ನಾನೇ ಆಗಿದ್ದು, ಕನಕಪುರ ಪಾರು ಮಾಡುವೆ: ಸಚಿವ ಅಶೋಕ್
ಕಾರವಾರ:
ರೂಪಾಲಿ, ಸತೀಶ ಸೈಲ್ ನಡುವೆ ಫೈಟ್:
ಹಾಲಿ ಶಾಸಕಿ ಬಿಜೆಪಿಯ ರೂಪಾಲಿ ನಾಯ್ಕ ಹಾಗೂ ಕಾಂಗ್ರೆಸ್‌ನ ಮಾಜಿ ಶಾಸಕ ಸತೀಶ ಸೈಲ್ ನಡುವೆ ನೇರ ಹೋರಾಟ ಇದೆ. ಕಳೆದ ಚುನಾವಣೆಯಲ್ಲಿ 2ನೇ ಸ್ಥಾನದಲ್ಲಿದ್ದ ಜೆಡಿಎಸ್‌ನ ಆನಂದ ಅಸ್ನೋಟಿಕರ್ ಈ ಬಾರಿ ಚುನಾವಣಾ ಕಣದಲ್ಲಿಲ್ಲ. ಜೆಡಿಎಸ್‌ನಿಂದ ಸ್ಪರ್ಧಿಸಿರುವ ಚೈತ್ರಾ ಕೊಟಾರಕರ ಹಾಗೂ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿರುವ ಗಂಗಾಧರ ಭಟ್ ಎಷ್ಟುಮತಗಳನ್ನು ಗಳಿಸಲಿದ್ದಾರೆ ಎನ್ನುವುದಷ್ಟೇ ಕುತೂಹಲದ ಸಂಗತಿ.
2018ರ ಚುನಾವಣೆಯಲ್ಲಿ ಪರೇಶ ಮೇಸ್ತ ಸಾವಿನಿಂದ ಉಂಟಾದ ಹಿಂದುತ್ವದ ಅಲೆ, ಮೋದಿಯ ಮೋಡಿ ರೂಪಾಲಿ ನಾಯ್ಕ ಅವರನ್ನು ಗೆಲ್ಲಿಸಿತ್ತು. ಈ ಬಾರಿ ಕ್ಷೇತ್ರದಲ್ಲಿ ಕೆಲಸ ಮಾಡಿರುವ ರೂಪಾಲಿ ಅಭಿವೃದ್ಧಿಯನ್ನೇ ಮುಂದಿಟ್ಟು ಮತಯಾಚಿಸುತ್ತಿದ್ದಾರೆ. ರೂಪಾಲಿ ವಿರುದ್ಧ ಕಾಂಗ್ರೆಸ್ ಬೆಂಬಲಿತರು ವಿವಿಧ ಆರೋಪ ಮಾಡಿದ್ದರೂ ಯಾವುದೇ ದಾಖಲೆ ನೀಡಿಲ್ಲ. ಕಾಂಗ್ರೆಸ್‌ನ ಸತೀಶ ಸೈಲ್ ಹಿಂದೆ ಶಾಸಕರಿದ್ದಾಗ ಕಬ್ಬಿಣದ ಅದಿರು ವಹಿವಾಟಿನಲ್ಲಿ ನಡೆದ ಅವ್ಯವಹಾರದಲ್ಲಿ ಆರೋಪಿಯಾಗಿ ಒಂದೂವರೆ ವರ್ಷ ಜೈಲಿನಲ್ಲಿದ್ದರು. ಈಗಲೂ ಅವರ ಮೇಲೆ ಪ್ರಕರಣ ವಿಚಾರಣೆಯ ಹಂತದಲ್ಲಿದೆ.
ಕಳೆದ ಚುನಾವಣೆಯಲ್ಲಿ ರೂಪಾಲಿ ನಾಯ್ಕ, ಸತೀಶ ಸೈಲ್-ಆನಂದ್ ನಡುವೆ ತ್ರಿಕೋನ ಸ್ಪರ್ಧೆ ಇತ್ತು. ಈ ಬಾರಿ ಅಸ್ನೋಟಿಕರ್ ಚುನಾವಣಾ ಕಣದಿಂದ ವಿಮುಖರಾಗಿದ್ದರಿಂದ ರೂಪಾಲಿ ಹಾಗೂ ಸೈಲ್ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯಲಿದೆ. ಅಸ್ನೋಟಿಕರ್ ಮತಬ್ಯಾಂಕ್ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಹಂಚಿ ಹೋಗಿದೆ. ಹಾಲಕ್ಕಿ ಒಕ್ಕಲಿಗರ ಒಲವು ಬಿಜೆಪಿ ಕಡೆಗಿದ್ದರೆ, ಕೊಂಕಣ ಮರಾಠಾ, ಕೋಮಾರಪಂತ, ನಾಮಧಾರಿ, ಮೀನುಗಾರರ ಮತಗಳು ಉಭಯ ಪಕ್ಷಗಳಿಗೂ ಹೋಗಲಿದೆ.
ಕುಮಟಾ:
ಕಾಂಗ್ರೆಸ್ ಬಂಡಾಯ ಶಮನ, ತ್ರಿಕೋನ ಸ್ಪರ್ಧೆ:
ಹಾಲಿ ಶಾಸಕ ದಿನಕರ ಶೆಟ್ಟಿ, ಕಾಂಗ್ರೆಸ್‌ನ ನಿವೇದಿತ್ ಆಳ್ವ, ಜೆಡಿಎಸ್‌ನ ಸೂರಜ ನಾಯ್ಕ ಸೋನಿ ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ದಿನಕರ ಶೆಟ್ಟಿಅಭೂತಪೂರ್ವ ಗೆಲುವು ಸಾಧಿಸಿದ್ದರು. ಆಗ ಕಾಂಗ್ರೆಸ್‌ನ ಶಾರದಾ ಶೆಟ್ಟಿಎದುರಾಳಿಯಾಗಿದ್ದರು. ಈ ಬಾರಿ ಕಾಂಗ್ರೆಸ್ ಟಿಕೆಟ್ ನಿವೇದಿತ್ ಆಳ್ವ ಪಾಲಾಗಿದೆ. ಬಂಡಾಯವಾಗಿ ಸ್ಪರ್ಧಿಸಿದ್ದ ಶಾರದಾ ಶೆಟ್ಟಿಚುನಾವಣಾ ಕಣದಿಂದ ಹಿಂದಕ್ಕೆ ಸರಿದಿರುವುದು ನಿವೇದಿತ್‌ಗೆ ಅನುಕೂಲವಾಗಿದೆ. ಜೆಡಿಎಸ್‌ನ ಸೂರಜ್ ನಾಯ್ಕ ಸೋನಿ ಇನ್ನೊಬ್ಬ ಪ್ರಬಲ ಅಭ್ಯರ್ಥಿಯಾಗಿದ್ದು, ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಇದೆ. ಹಾಲಕ್ಕಿ ಒಕ್ಕಲಿಗರು, ನಾಮಧಾರಿಗಳು, ಹವ್ಯಕರು ಇಲ್ಲಿನ ಪ್ರಬಲ ಜಾತಿಗಳಾಗಿದ್ದು, ಈ ಜಾತಿಗಳ ಮತಕ್ಕಾಗಿ ಮೂವರೂ ಅಭ್ಯರ್ಥಿಗಳು ಪರಸ್ಪರ ಪೈಪೋಟಿಗೆ ಇಳಿದಿದ್ದಾರೆ. ಅಲ್ಪಸಂಖ್ಯಾತರ ಮತಗಳು ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಹಂಚಿಕೆಯಾಗುವ ಸಾಧ್ಯತೆಯಿದೆ.
ಭಟ್ಕಳ:
ಸುನೀಲ, ಮಂಕಾಳ ವೈದ್ಯ ನಡುವೆ ಜಿದ್ದಾಜಿದ್ದಿ:
ಬಿಜೆಪಿಯ ಹಾಲಿ ಶಾಸಕ ಸುನೀಲ ನಾಯ್ಕ ಹಾಗೂ ಕಾಂಗ್ರೆಸ್‌ನ ಮಾಜಿ ಶಾಸಕ ಮಂಕಾಳ ವೈದ್ಯ ನಡುವೆ ತೀವ್ರ ಪೈಪೋಟಿ ಇದೆ. ಈ ಬಾರಿ ತಂಜಿಮ್ ಸಂಘಟನೆ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಇರುವುದರಿಂದ ಚುನಾವಣಾ ಕಣ ಇಬ್ಬರ ನಡುವೆಯೇ ಕೇಂದ್ರೀಕೃತವಾಗಿದೆ.
ಭಟ್ಕಳದಲ್ಲಿ ನಾಮಧಾರಿಗಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ. ಸುನೀಲ ನಾಯ್ಕ ನಾಮಧಾರಿ ಸಮಾಜದವರು. ಅಲ್ಪಸಂಖ್ಯಾತರೂ ಗಮನಾರ್ಹ ಪ್ರಮಾಣದಲ್ಲಿದ್ದಾರೆ. ಈ ಮತಗಳು ಕಾಂಗ್ರೆಸ್‌ಗೆ ಗ್ಯಾರಂಟಿ ಎನ್ನಲಾಗಿದೆ. ಜೆಡಿಎಸ್‌ನಿಂದ ವಕೀಲ ನಾಗೇಂದ್ರ ನಾಯ್ಕ ಸ್ಪರ್ಧಿಸಿದ್ದಾರೆ. ಭಟ್ಕಳ ಕ್ಷೇತ್ರದಲ್ಲಿ ಈ ಬಾರಿ ಸುನೀಲ ನಾಯ್ಕ ಅವರಿಗೆ ಮಂಕಾಳ ವೈದ್ಯ ಪ್ರಬಲ ಸ್ಪರ್ಧೆ ಒಡ್ಡಿದ್ದಾರೆ. ಯಾರೇ ಗೆದ್ದರೂ ಅಲ್ಪ ಮತಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಹೆಚ್ಚು.
ಶಿರಸಿ-ಸಿದ್ದಾಪುರ:
ಕಾಗೇರಿ ಗೆಲುವಿನ ಓಟಕ್ಕೆ ಬ್ರೇಕ್ ಬೀಳುತ್ತಾ?
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸತತ ಆರು ಬಾರಿ ಗೆಲುವು ಸಾಧಿಸಿ, ದಾಖಲೆ ಮಾಡಿದ ಕ್ಷೇತ್ರವಿದು. ಈ ಬಾರಿ 7ನೇ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಕಾಂಗ್ರೆಸ್‌ನ ಭೀಮಣ್ಣ ನಾಯ್ಕ ಈ ಬಾರಿಯೂ ಇವರ ಎದುರಾಳಿ.
ಹವ್ಯಕ ಬ್ರಾಹ್ಮಣರು ಹಾಗೂ ನಾಮಧಾರಿಗಳ ಪ್ರಾಬಲ್ಯ ಇರುವ ಈ ಕ್ಷೇತ್ರದಲ್ಲಿ ಕಾಗೇರಿಯವರು ಬ್ರಾಹ್ಮಣ ಸಮುದಾಯದವರಾದರೆ, ಭೀಮಣ್ಣ ನಾಯ್ಕ ನಾಮಧಾರಿ ಸಮಾಜದವರು. ಭೀಮಣ್ಣ ನಾಯ್ಕ ಈಗಾಗಲೆ ಎರಡು ಬಾರಿ ಸೋಲು ಕಂಡಿದ್ದಾರೆ. ಯಲ್ಲಾಪುರದಲ್ಲಿ ಒಮ್ಮೆ, ವಿಧಾನ ಪರಿಷತ್ ಚುನಾವಣೆಯಲ್ಲಿ ಒಮ್ಮೆ ಸೋಲು ಅನುಭವಿಸಿದ್ದಾರೆ. ಬಂಡಾಯ ಅಭ್ಯರ್ಥಿಯಾಗಿದ್ದ ವೆಂಕಟೇಶ ಹೆಗಡೆ ಹೊಸಬಾಳೆ ನಾಮಪತ್ರ ವಾಪಸ್ ಪಡೆದಿದ್ದು, ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ್ದಾರೆ. ಜೆಡಿಎಸ್‌ನಿಂದ ಕಳೆದ ಬಾರಿ ಸ್ಪರ್ಧಿಸಿದ್ದ ಶಶಿಭೂಷಣ ಹೆಗಡೆ ಈಗ ಬಿಜೆಪಿಗೆ ಬಂದಿದ್ದಾರೆ. ಕಾಂಗ್ರೆಸ್‌ನಿಂದ ಜೆಡಿಎಸ್ ಸೇರಿ ಉಪೇಂದ್ರ ಪೈ ಕಣಕ್ಕಿಳಿದಿದ್ದಾರೆ.
ಯಲ್ಲಾಪುರ:
ಪಕ್ಷ ಬದಲಾದರೂ ಎದುರಾಳಿಗಳು ಹಳಬರೇ:
‘ಆಪರೇಷನ್ ಕಮಲ’ದಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದಿರುವ ಶಿವರಾಮ ಹೆಬ್ಬಾರ ಈ ಬಾರಿಯೂ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಹೆಬ್ಬಾರ ಪಾಳಯದಲ್ಲಿದ್ದರೆ ಟಿಕೆಟ್ ಲಭಿಸದು ಎಂದು ಮಾಜಿ ಶಾಸಕ ವಿ.ಎಸ್. ಪಾಟೀಲ ಅವರು ಕಾಂಗ್ರೆಸ್ ಸೇರಿ ಹೆಬ್ಬಾರ ಎದುರಾಳಿಯಾಗಿದ್ದಾರೆ. ಪಕ್ಷ ಬದಲಾದರೂ 3 ಚುನಾವಣೆಗಳಿಂದ ಇವರೇ ಎದುರಾಳಿಗಳಾಗುತ್ತಿದ್ದಾರೆ. ಜೆಡಿಎಸ್‌ನಿಂದ ನಾಗೇಶ ನಾಯಕ ಸ್ಪರ್ಧಿಸಿದ್ದಾರೆ.
ಯಲ್ಲಾಪುರ, ಮುಂಡಗೋಡ ಹಾಗೂ ಶಿರಸಿ ತಾಲೂಕಿನ ಬನವಾಸಿ ಹೋಬಳಿಯನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ ಹವ್ಯಕ ಬ್ರಾಹ್ಮಣರು, ನಾಮಧಾರಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೆಬ್ಬಾರ ಹವ್ಯಕ ಬ್ರಾಹ್ಮಣ ಸಮಾಜಕ್ಕೆ ಸೇರಿದವರು. 2018ರಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಹೆಬ್ಬಾರ, ‘ಆಪರೇಷನ್ ಕಮಲ’ದಲ್ಲಿ ಬಿಜೆಪಿ ಸೇರಿ, 2019ರಲ್ಲಿ ಉಪ ಚುನಾವಣೆ ಎದುರಿಸಿ ಗೆಲುವು ದಾಖಲಿಸಿದ್ದರು.
ಹಳಿಯಾಳ:
10ನೇ ಬಾರಿಗೆ ಕಣಕ್ಕಿಳಿದಿರುವ ದೇಶಪಾಂಡೆ:
ಹಳಿಯಾಳ, ದಾಂಡೇಲಿ ಹಾಗೂ ಜೋಯಿಡಾ ತಾಲೂಕುಗಳನ್ನು ಒಳಗೊಂಡಿರುವ ಕ್ಷೇತ್ರದಲ್ಲಿ ಇದುವರೆಗೆ 9 ಬಾರಿ ಸ್ಪರ್ಧಿಸಿ, 8 ಬಾರಿ ಗೆಲುವು ಕಂಡಿರುವ ಮಾಜಿ ಸಚಿವ, ಹಾಲಿ ಶಾಸಕ ಆರ್.ವಿ.ದೇಶಪಾಂಡೆ ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿ. ಬಿಜೆಪಿಯಿಂದ ಮಾಜಿ ಶಾಸಕ ಸುನೀಲ್ ಹೆಗಡೆ ಕಣಕ್ಕೆ ಇಳಿದಿದ್ದಾರೆ.
ದೇಶಪಾಂಡೆ ಪಾಳಯದಿಂದ ಹೊರಬಂದ ಎಸ್.ಎಲ್.ಘೋಟ್ನೇಕರ, ಜೆಡಿಎಸ್‌ನಿಂದ ಸ್ಪರ್ಧಿಸಿರುವುದು ಕ್ಷೇತ್ರದ ಚುನಾವಣಾ ಲೆಕ್ಕಾಚಾರವನ್ನು ಬದಲಾಯಿಸಿದೆ. ದೇಶಪಾಂಡೆ, ಸುನೀಲ್ ಹೆಗಡೆ ಹಾಗೂ ಘೋಟ್ನೇಕರ ನಡುವೆ ತ್ರಿಕೋನ ಸ್ಪರ್ಧೆ ನಡೆಯಲಿದೆ.
25 ವರ್ಷ ಶಾಸಕನಾಗಿ ಪಿಕ್ನಿಕ್‌ಗೆ ಹೋಗಿದ್ದ ಅಪ್ಪಚ್ಚುರಂಜನ್: ಅಭಿವೃದ್ಧಿಯೇ ಮಾಡಿಲ್ಲ
ಹಳಿಯಾಳದಲ್ಲಿ ಮರಾಠರ ಪ್ರಾಬಲ್ಯ ಇದೆ. ಘೋಟ್ನೇಕರ ಮರಾಠಾ ಸಮುದಾಯದವರಾಗಿದ್ದರಿಂದ ಮರಾಠಾ ಸಮಾಜ ಸಂಘಟಿತವಾದಲ್ಲಿ ಘೋಟ್ನೇಕರ ಅವರನ್ನು ಎದುರಿಸುವುದು ದೇಶಪಾಂಡೆ ಹಾಗೂ ಸುನೀಲ ಹೆಗಡೆಗೆ ಕಷ್ಟವಾಗಬಹುದು. ಬಿಜೆಪಿಗೆ ಮರಾಠರ ಮತಗಳು ಸಾಂಪ್ರದಾಯಿಕ ಮತಗಳಾಗಿದ್ದವು. ಈ ಮತಗಳು ಘೋಟ್ನೇಕರ ಕಡೆ ವಾಲಿದರೆ ಎಂಬ ಆತಂಕ ಸುನೀಲ ಹೆಗಡೆ ಅವರದ್ದಾಗಿದೆ.
ಸುನೀಲ ಹೆಗಡೆ ಹಾಗೂ ಘೋಟ್ನೇಕರ ಇವರಿಬ್ಬರೂ ಹಿಂದೆ ದೇಶಪಾಂಡೆ ಅವರ ಶಿಷ್ಯರಾಗಿದ್ದರು. ಕಳೆದ ಚುನಾವಣೆಯಲ್ಲಿ ದೇಶಪಾಂಡೆ ಹಾಗೂ ಸುನೀಲ ಹೆಗಡೆ ನಡುವಿನ ನೇರ ಹೋರಾಟದಲ್ಲಿ ದೇಶಪಾಂಡೆ ಗೆಲುವು ಸಾಧಿಸಿದ್ದರು. ಈ ಬಾರಿ ಇಬ್ಬರು ಶಿಷ್ಯರೂ ದೇಶಪಾಂಡೆ ವಿರುದ್ಧ ತಿರುಗಿ ಬಿದ್ದಿದ್ದಾರೆ.