ಜೋಡೆತ್ತು ಇಲ್ಲ ಚುನಾವಣೆ: ರಾಯಚೂರು ಗೆಲುವಿಗಾಗಿ ಬಿಜೆಪಿ- ಕಾಂಗ್ರೆಸ್ ರಣತಂತ್ರ..!

Published : Apr 27, 2024, 08:53 AM IST
ಜೋಡೆತ್ತು ಇಲ್ಲ ಚುನಾವಣೆ: ರಾಯಚೂರು ಗೆಲುವಿಗಾಗಿ ಬಿಜೆಪಿ- ಕಾಂಗ್ರೆಸ್ ರಣತಂತ್ರ..!

ಸಾರಾಂಶ

ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ದೇವದುರ್ಗ ಮಾಜಿ ಶಾಸಕ ಕೆ.ಶಿವನಗೌಡ ನಾಯಕ ಹಾಗೂ ರಾಜುಗೌಡ ಜೋಡೆತ್ತುಗಳು ಇದ್ದಂತೆ. ಕಳೆದ 2019ರ ಚುನಾವಣೆಯಲ್ಲಿ ರಾಜಾ ಅಮರೇಶ್ವರ ನಾಯಕ ಗೆಲುವಿಗೆ ಈ ಇಬ್ಬರ ನಾಯಕ ಕೊಡುಗೆ ಅಪಾರವಾಗಿದೆ. ಈ ಇಬ್ಬರು ನಾಯಕರು ಇಡೀ ಕ್ಷೇತ್ರದ ಜವಾಬ್ದಾರಿ ಹೊತ್ತುಕೊಂಡು ರಾಜಾ ಅಮರೇಶ್ವರ ‌ನಾಯಕಗೆ ಗೆಲ್ಲಿಸಿದ್ರು. ಆದ್ರೆ ಈ ಸಲ ಇಬ್ಬರೂ ನಾಯಕರು ಲೋಕಸಭಾ ಚುನಾವಣೆ ಪ್ರಚಾರದಿಂದ ಭಾರೀ ಅಂತರ ಕಾಯ್ದುಕೊಂಡಿದ್ದಾರೆ. 

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ರಾಯಚೂರು

ರಾಯಚೂರು(ಏ.27):  ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ಈಗ ರಂಗೇರುತ್ತಿದೆ. ಮೊದಲ ಹಂತದ ಚುನಾವಣೆ ಮುಗಿಸಿಕೊಂಡ ಹೈಕಮಾಂಡ್ ನಾಯಕರು ಈಗ ಉತ್ತರ ಕರ್ನಾಟಕದ ಕಡೆ ಮುಖ ಮಾಡಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಸಿದ್ಧತೆ ಮಾಡಿಕೊಂಡು ಕಣಕ್ಕೆ ಇಳಿದಿದ್ದಾರೆ. ಆದ್ರೆ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಈ ಸಲ ಜೋಡೆತ್ತುಗಳು ಇಲ್ಲದೆ ಅಭ್ಯರ್ಥಿಗಳು ಹೊಸ ಎತ್ತುಗಳು ಇಟ್ಟುಕೊಂಡು ಚುನಾವಣೆಗೆ ಮಾಡಲು ಮುಂದಾಗಿದ್ದಾರೆ. 

ಪ್ರಚಾರದಿಂದ ದೂರು ಉಳಿದ ರಾಯಚೂರು ಜೋಡೆತ್ತುಗಳು:

ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ದೇವದುರ್ಗ ಮಾಜಿ ಶಾಸಕ ಕೆ.ಶಿವನಗೌಡ ನಾಯಕ ಹಾಗೂ ರಾಜುಗೌಡ ಜೋಡೆತ್ತುಗಳು ಇದ್ದಂತೆ. ಕಳೆದ 2019ರ ಚುನಾವಣೆಯಲ್ಲಿ ರಾಜಾ ಅಮರೇಶ್ವರ ನಾಯಕ ಗೆಲುವಿಗೆ ಈ ಇಬ್ಬರ ನಾಯಕ ಕೊಡುಗೆ ಅಪಾರವಾಗಿದೆ. ಈ ಇಬ್ಬರು ನಾಯಕರು ಇಡೀ ಕ್ಷೇತ್ರದ ಜವಾಬ್ದಾರಿ ಹೊತ್ತುಕೊಂಡು ರಾಜಾ ಅಮರೇಶ್ವರ ‌ನಾಯಕಗೆ ಗೆಲ್ಲಿಸಿದ್ರು. ಆದ್ರೆ ಈ ಸಲ ಇಬ್ಬರೂ ನಾಯಕರು ಲೋಕಸಭಾ ಚುನಾವಣೆ ಪ್ರಚಾರದಿಂದ ಭಾರೀ ಅಂತರ ಕಾಯ್ದುಕೊಂಡಿದ್ದಾರೆ. ಇದಕ್ಕೆ ಕಾರಣವೂ ಬಹಳಷ್ಟು ಇವೆ. ಕೆ.ಶಿವನಗೌಡ ನಾಯಕ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ ಬೆಂಗಳೂರು ಸೇರಿ ಬಿಟ್ಟಿದ್ದಾರೆ. ಬಿಜೆಪಿಯಲ್ಲಿ ಬಂಡಾಯ ಎದ್ದಾಗ ಬಂಡಾಯ ಶಮನಕ್ಕಾಗಿ ಹೈಕಮಾಂಡ್ ನಾಯಕರು ರಾಯಚೂರಿಗೆ ಬಂದಾಗ ಕಾಣಿಸಿಕೊಂಡ ಕೆ‌.ಶಿವನಗೌಡ ‌ನಾಯಕ ಮತ್ತೆ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಮತ್ತೊಂದು ಕಡೆ ಸುರಪುರದಲ್ಲಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನಡೆದಿದೆ. ಆ ಉಪಚುನಾವಣೆಯಲ್ಲಿ ರಾಜುಗೌಡ ಕಣಕ್ಕೆ ಇಳಿದ್ದು, ತಮ್ಮ ಗೆಲ್ಲುವಿಗಾಗಿ ಕ್ಷೇತ್ರದಲ್ಲಿ ಸುತ್ತಾಟ ಮಾಡುತ್ತಿದ್ದಾರೆ. ಹೀಗಾಗಿ ರಾಜುಗೌಡ ಬೇರೆ ಎಲ್ಲಿಯೂ ಓಡಾಟ ಮಾಡುತ್ತಿಲ್ಲ. 

ಕೇಂದ್ರದಿಂದ ಉದ್ದೇಶಪೂರಕವಾಗಿಯೇ ಕರ್ನಾಟಕಕ್ಕೆ ಅನ್ಯಾಯ: ಸಚಿವ ಬೋಸರಾಜು

ಪಕ್ಷದ ಜವಾಬ್ದಾರಿ ನಿಭಾಯಿಸಲು ಜಿಲ್ಲಾಧ್ಯಕ್ಷ ಭಾರೀ ಕಸರತ್ತು

ರಾಯಚೂರು ಲೋಕಸಭಾ ಕ್ಷೇತ್ರ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಚುನಾವಣಾ ಗೆಲುವಿಗಾಗಿ ಎರಡು ಪಕ್ಷದ ಅಭ್ಯರ್ಥಿಗಳು ಭಾರೀ ಓಡಾಟ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿ ಹಾಲಿ ಸಂಸದ ರಾಜಾ ಅಮರೇಶ್ವರ ‌ನಾಯಕಗೆ ಕ್ಷೇತ್ರದಲ್ಲಿ ವಿರೋಧಿ ಅಲೆ ಎದ್ದು ಕಾಣುತ್ತಿದೆ. ಜೆಡಿಎಸ್ ಜೊತೆಗೆ ಮೈತ್ರಿಯಾದ ಬಳಿಕ ಕಳೆದ ಚುನಾವಣೆಗಿಂತ ಡಬಲ್ ಮತಗಳಿಂದ ನಾನು ಗೆಲುವು ಸಾಧಿಸುತ್ತೇನೆ ಎಂದು ರಾಜಾ ಅಮರೇಶ್ವರ ‌ನಾಯಕ ಹೇಳುತ್ತಿದ್ದಾರೆ. ಆದ್ರೆ ಕ್ಷೇತ್ರದಲ್ಲಿ ಬೇರೆನೇ ಲೆಕ್ಕಾಚಾರವಿದೆ. ರಾಜಾ ಅಮರೇಶ್ವರ ‌ನಾಯಕ ಐದು ವರ್ಷ ಸಂಸದರು ಆಗಿದ್ರು, ಜನರ ಸಂಪರ್ಕಕ್ಕೆ ಸಿಕ್ಕಿಲ್ಲ. ಕಳೆದ‌ ಬಾರಿ ಚುನಾವಣೆ ಮಾಡಿದಂತೆ ಈ ಬಾರಿ ಚುನಾವಣಾ ಮಾಡಲು ರಾಜಾ ಅಮರೇಶ್ವರ ‌ನಾಯಕಗೆ ಆಗುತ್ತಿಲ್ಲ. ಕಳೆದ ಬಾರಿ ಮೋದಿ ಅಲೆ ಇತ್ತು. ಹೊಸ ಅಭ್ಯರ್ಥಿ ಎಂಬ ಕಾರಣಕ್ಕೆ ಇಡೀ ಕ್ಷೇತ್ರದಲ್ಲಿ ರಾಜಾ ಅಮರೇಶ್ವರ ನಾಯಕ ಪರ ಒಲವು ಇತ್ತು. ಆದ್ರೆ ಈ ಸಲ ಕಳೆದ ಬಾರಿ ಚುನಾವಣೆ ಮಾಡಿದ ನಾಯಕರು ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ.  ಪಕ್ಷದ ಜವಾಬ್ದಾರಿ ನಿಭಾಯಿಸಲು ಕೆಲ ನಿಷ್ಠಾವಂತ ಕಾರ್ಯಕರ್ತರು ಮೋದಿ ಗೆಲುವಿಗಾಗಿ ರಾಜಾ ಅಮರೇಶ್ವರ ‌ನಾಯಕ ಪರ ಪ್ರಚಾರ ‌ನಡೆಸಿದ್ದಾರೆ. ಮತ್ತೊಂದು ‌ಕಡೆ ನೂತನವಾಗಿ ಆಯ್ಕೆಗೊಂಡ ಯಾದಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಅಮಿನ್ ರೆಡ್ಡಿ ಯಾಳಗಿ ಹಾಗೂ ರಾಯಚೂರು ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಶಿವರಾಜ್ ಪಾಟೀಲ್ ಪಕ್ಷದ ಜವಾಬ್ದಾರಿ ನಿಭಾಯಿಸಲು ‌ನಾನಾ ಕಸರತ್ತು ನಡೆಸಿದ್ದಾರೆ.

ಸಭೆಗೆ ಮಾತ್ರ ಸೀಮಿತವಾದ ಮೈತ್ರಿ ಬೆಂಬಲ

ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಸಭೆಗಳು ಜೋರಾಗಿ ನಡೆದಿವೆ. ಆದ್ರೆ ಸಭೆಯಾದ ಬಳಿಕ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ‌ನಾಯಕ ಪ್ರಚಾರ ನಡೆಸಿದ್ದಾರೆ. ಆದ್ರೆ ಎಲ್ಲಿಯೂ ಜೆಡಿಎಸ್ ನಾಯಕರು ಜವಾಬ್ದಾರಿ ಹೊತ್ತುಕೊಂಡು ‌ಚುನಾವಣೆ ಪ್ರಚಾರಕ್ಕೆ ‌ಮುಂದಾಗುತ್ತಿಲ್ಲ. ಅಭ್ಯರ್ಥಿ ಆಹ್ವಾನ ಕೊಟ್ಟಾಗ ಮಾತ್ರ ಬರುವುದು, ಆ ಬಳಿಕ ಅಂತರ ಕಾಯ್ದುಕೊಳ್ಳುವುದು ಕ್ಷೇತ್ರದಲ್ಲಿ ನಡೆದಿದೆ. ಈಗಿನ ದುಬಾರಿ ಚುನಾವಣೆ ಎದುರಿಸಲು ಯಾರು ‌ಕೂಡ ಮೈಮೇಲೆ ಎಳೆದುಕೊಂಡು ಚುನಾವಣೆ ಮಾಡಲು ಮುಂದಾಗುತ್ತಿಲ್ಲ. ಇದು ಹೀಗೆ ಮುಂದುವರೆದ್ರೆ ಬಿಜೆಪಿ ಅಭ್ಯರ್ಥಿಗೆ ಭಾರೀ ಹಿನ್ನಡೆಯಾಗುವ ಸಾಧ್ಯತೆ ಹೆಚ್ಚಾಗಿದೆ.

ಬಣರಾಜಕೀಯ ನಡುವೆ ಟಾರ್ಗೆಟ್ ರೀಚ್ ಆಗಲು ಹರಸಾಹಸ

ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಿ.ಕುಮಾರ್ ‌ನಾಯಕ ಕಣಕ್ಕೆ ಇಳಿದಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿಯಾದ ಜಿ.ಕುಮಾರ್ ‌ನಾಯಕ, ಕ್ಷೇತ್ರದಲ್ಲಿ ಭರ್ಜರಿಯಾಗಿ ಮತಬೇಟೆ ‌ನಡೆಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಐದು ಗ್ಯಾರಂಟಿ ‌ಘೋಷಣೆ ಮಾಡಿದೆ. ಆ ಐದು ಗ್ಯಾರಂಟಿ ಹೆಸರಿನಲ್ಲಿ ‌ಕಾಂಗ್ರೆಸ್ ಅಭ್ಯರ್ಥಿ ‌ಮತಬೇಟೆ ಶುರು ಮಾಡಿದ್ದಾರೆ.  ರಾಯಚೂರಿನ ಕಾಂಗ್ರೆಸ್ ನಲ್ಲಿ ಭಾರೀ ಬಣ ರಾಜಕೀಯವಿದೆ. ಈ ಬಣ ರಾಜಕೀಯ ನಡುವೆಯೂ ಚುನಾವಣಾ ‌ಪ್ರಚಾರ ಜೋರಾಗಿದೆ. ಹೈಕಮಾಂಡ್ ‌ನಾಯಕರ ಸೂಚನೆ ‌ಮೇರೆಗೆ ಪ್ರತಿ ವಿಧಾನಸಭಾ ‌ಕ್ಷೇತ್ರದಲ್ಲಿ ಮಾಜಿ ಮತ್ತು ಹಾಲಿ ಶಾಸಕರು ತಾವೇ ಚುನಾವಣಾ ಪ್ರಚಾರಕ್ಕೆ ಮುಂದಾಗಿದ್ದಾರೆ. ಅಭ್ಯರ್ಥಿ ತಾವೇ ಎಂಬಂತೆ ಕಾಂಗ್ರೆಸ್ ನಾಯಕರು ಪ್ರಚಾರ ಶುರು ನಡೆಸಿದ್ದಾರೆ. ಹೀಗಾಗಿ ದಿನೇ ದಿನೇ ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ್ ನಾಯಕ ಅಬ್ಬರ ಜೋರಾಗಿದೆ.

ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ 8 ಮಂದಿ ಸ್ಪರ್ಧೆ; ಬಿಜೆಪಿ ಬಂಡಾಯ ಅಭ್ಯರ್ಥಿ ಬಿ.ವಿ.ನಾಯಕ್ ನಾಮಪತ್ರ ತಿರಸ್ಕತ

ಕಾಂಗ್ರೆಸ್‌‌ನಲ್ಲಿ ಒಂಟಿ ಸಲಗದ್ದೇ ಆರ್ಭಟ

ರಾಯಚೂರು ‌ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ‌ಅಭ್ಯರ್ಥಿ ಜಿ.ಕುಮಾರ್ ‌ನಾಯಕ ನಿವೃತ್ತ ಐಎಎಸ್ ಅಧಿಕಾರಿ. 34-35 ವರ್ಷದ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ತಮ್ಮ ನಿವೃತ್ತಿ ಮುಗಿದು ಆರು ತಿಂಗಳು ಆಗಿಲ್ಲ.‌ ಲೋಕಸಭಾ ಚುನಾವಣೆ ನಿಲ್ಲಬೇಕೆಂದು ನಿರ್ಧಾರ ಮಾಡಿದ್ರು.ಆಗ ಜಿ.ಕುಮಾರ್ ‌ನಾಯಕಗೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಿಂದ ಆಹ್ವಾನ ಇತ್ತು. ಆದ್ರೆ ಯಾವ ಕ್ಷೇತ್ರದಿಂದ ನಿಲ್ಲಬೇಕು ಎಂದು ಬಂದಾಗ ಜಿ.ಕುಮಾರ್ ನಾಯಕ ಆಯ್ಕೆ ಮಾಡಿಕೊಂಡಿದ್ದು, ರಾಯಚೂರು ಲೋಕಸಭಾ ಕ್ಷೇತ್ರ. ಇದೊಂದು ಎಸ್ ಟಿ ಮೀಸಲು ಕ್ಷೇತ್ರ, ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಸಂಸದ ರಾಜಾ ಅಮರೇಶ್ವರ ‌ನಾಯಕ ಇದ್ರು. ಕಾಂಗ್ರೆಸ್ ‌ನಿಂದ ಯಾರು ಸಮರ್ಥ ಅಭ್ಯರ್ಥಿಗಳು ಇರಲಿಲ್ಲ ಎಂಬ ಮಾಹಿತಿ ಪಡೆದ ಜಿ.ಕುಮಾರ್ ‌ನಾಯಕ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ರು. ರಾಯಚೂರಿನಲ್ಲಿ ಜಿ.ಕುಮಾರ್ ನಾಯಕ 3 ವರ್ಷ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದರು. ಈಗ ಇಡೀ ಲೋಕಸಭಾ ಚುನಾವಣೆ ಜವಾಬ್ದಾರಿ ಸಚಿವ ಎನ್.ಎಸ್. ಬೋಸರಾಜುಗೆ ಕೈ ಹೈಕಮಾಂಡ್ ನೀಡಿದೆ. 

ಹೀಗಾಗಿ ಇಡೀ ಕ್ಷೇತ್ರದಲ್ಲಿ ಸಚಿವ ಎನ್‌.ಎಸ್.ಬೋಸರಾಜು ನೇತೃತ್ವದಲ್ಲಿ ಜಿ.ಕುಮಾರ್ ‌ನಾಯಕ ಪ್ರಚಾರ ಶುರು ಮಾಡಿದ್ದಾರೆ. ಆದ್ರೆ ಬಣ ರಾಜಕೀಯ ನಡುವೆ ಕುಮಾರ್ ‌ನಾಯಕಗೆ ರಾಯಚೂರಿನ ಮತದಾರರು ಯಾವ ರೀತಿ ಸ್ಪಂದಿಸುತ್ತಾರೆ ಎಂಬುವುದು ‌ಕಾದು‌ನೋಡಬೇಕಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ