ಮೈಸೂರು ಮುಡಾ ಹಗರಣ ಹಾಗೂ ಮಹರ್ಷಿ ವಾಲ್ಮೀಕಿ ನಿಗಮದಲ್ಲಾಗಿರುವ ಲೂಟಿಕೋರತನದ ವಿರುದ್ಧ ನಡೆದ 8 ದಿನಗಳ ಮೈಸೂರು ಚಲೋ ಬೃಹತ್ ಪಾದಯಾತ್ರೆ ರಾಜಕೀಯ ಲೆಕ್ಕಾಚಾರಗಳನ್ನು ಮೀರಿ ಕಾರ್ಯಕರ್ತರು ಮತ್ತು ಜನರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದೇ ರಾಜಕೀಯ ಪಂಡಿತರು ವ್ಯಾಖ್ಯಾನಿಸುತ್ತಿದ್ದಾರೆ.
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷ: ಆರ್.ರಘು ಕೌಟಿಲ್ಯ
ಬೆಂಗಳೂರು(ಆ.17): ರಾಜ್ಯದಲ್ಲಿ ಆಡಳಿತಕ್ಕೆ ಬಂದು ಒಂದೂವರೆ ವರ್ಷ ಪೂರೈಸುತ್ತಿರುವ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧ ಸಡ್ಡು ಹೊಡೆಯುವಲ್ಲಿ ಪ್ರತಿಪಕ್ಷವಾಗಿ ಭಾರತೀಯ ಜನತಾ ಪಾರ್ಟಿ ಪರಿಣಾಮಕಾರಿಯಾದ ಹೆಜ್ಜೆಯನ್ನೇ ಇಟ್ಟಿದೆ. ಸಿದ್ದರಾಮಯ್ಯ ಸರ್ಕಾರದ ನಿಷ್ಕ್ರಿಯತೆ ಹಾಗೂ ಭ್ರಷ್ಟಾಚಾರದ ಮೈಚಳಿ ಬಿಡಿಸಲು ಪ್ರಬಲ ಪ್ರತಿಪಕ್ಷ ಬಿಜೆಪಿ ಚಿಕಿತ್ಸೆ ನೀಡಲೇಬೇಕು ಎಂಬ ಆಕಾಂಕ್ಷೆ-ನಿರೀಕ್ಷೆಗಳನ್ನು ಪೂರೈಸಿದೆ.
ಮೈಸೂರು ಮುಡಾ ಹಗರಣ ಹಾಗೂ ಮಹರ್ಷಿ ವಾಲ್ಮೀಕಿ ನಿಗಮದಲ್ಲಾಗಿರುವ ಲೂಟಿಕೋರತನದ ವಿರುದ್ಧ ನಡೆದ 8 ದಿನಗಳ ಮೈಸೂರು ಚಲೋ ಬೃಹತ್ ಪಾದಯಾತ್ರೆ ರಾಜಕೀಯ ಲೆಕ್ಕಾಚಾರಗಳನ್ನು ಮೀರಿ ಕಾರ್ಯಕರ್ತರು ಮತ್ತು ಜನರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದೇ ರಾಜಕೀಯ ಪಂಡಿತರು ವ್ಯಾಖ್ಯಾನಿಸುತ್ತಿದ್ದಾರೆ.
ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ಕೊಡಿ: ಕೇಂದ್ರ ಸಚಿವ ಸೋಮಣ್ಣ
ಜೆಡಿಎಸ್ ಜೊತೆಗೂಡಿ ಯಶಸ್ವಿಯಾಗಿ ನಡೆದ ಈ ಪಾದಯಾತ್ರೆ ತನ್ನ ಶುರುವಿಗೆ ಮುನ್ನ, ನಿಜವಾಗಿಯೂ ನಡೆಯುತ್ತೋ ಇಲ್ಲವೋ ಎಂಬ ಅನುಮಾನಗಳನ್ನು ಹುಟ್ಟಿಸುವಂಥ ಬೆಳವಣಿಗೆಗಳಿಗೂ ಸಾಕ್ಷಿಯಾಯಿತು. ಸರ್ಕಾರ ಕೂಡ ಪಾದಯಾತ್ರೆಗೆ ತಡೆಯೊಡ್ಡುವ ಹುನ್ನಾರ ನಡೆಸಿತ್ತು. ಒಂದರ್ಥದಲ್ಲಿ ಯಾತ್ರೆಗೆ ಅನುಮತಿ ಸಿಗುವ ಕುರಿತೇ ಅನುಮಾನದ ಗೆರೆಗಳು ಮೂಡಿದ್ದವು. ಆದರೆ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪಕ್ಷದ ವರಿಷ್ಠರಿಂದ ಯಾತ್ರೆಗೆ ಅಸ್ತು ಎನಿಸಿಕೊಂಡು, ಜೆಡಿಎಸ್ ಬಾಂಧವ್ಯವನ್ನು ಗಟ್ಟಿಗೊಳಿಸಿಕೊಂಡು ಮೈಸೂರು ಚಲೋ ಪಾದಯಾತ್ರೆಗೆ ಹೆಜ್ಜೆಯಿಟ್ಟಾಗ, ಅಡಿಗಡಿಗೆ ಬಂಡೆಗಲ್ಲು- ಸೈಜುಗಲ್ಲುಗಳೇ! ಈ ಎಲ್ಲ ಅಡಚಣೆಗಳನ್ನು ನಿವಾರಿಸಿಕೊಂಡೇ ವಿಜಯೇಂದ್ರ ಅವರು ‘ಮೈಸೂರು ಚಲೋ’ ನಡಿಗೆಗೆ ಮುಂದಾದಾಗ, ಇದು ಅವರಿಗೆ ಸತ್ವ ಪರೀಕ್ಷೆಯೇ ಆಗಿತ್ತು.
ತಡೆಯೊಡ್ಡಲು ಹೆದರಿದ ಸರ್ಕಾರ
ಈ ಮೊದಲು ಮುಡಾ ಹಗರಣದ ಚರ್ಚೆಗೆ ಸದನದಲ್ಲಿ ಅವಕಾಶ ನೀಡದೇ, ಅಧಿವೇಶನವನ್ನೇ ಮುಂದೂಡಿಸಿದ್ದ ಕಾಂಗ್ರೆಸ್ ಸರ್ಕಾರ, ಪಾದಯಾತ್ರೆಗೆ ಅನುಮತಿ ನೀಡದಿದ್ದರೆ ತಾನೊಂದು ಪ್ರಜಾತಂತ್ರ ವಿರೋಧಿ ಎಂಬುದು ಸಾರ್ವಜನಿಕವಾಗಿ ಮತ್ತೆ ದೃಢವಾಗುತ್ತದೆ ಎಂಬ ಭಯ ಆ ಪಕ್ಷವನ್ನು ಕಾಡಿತು. ಜತೆಗೆ, ಪ್ರತಿಪಕ್ಷದ ಚಳವಳಿಗೆ ಜನಬೆಂಬಲ ಕ್ರೋಢೀಕರಣವಾದೀತು ಎಂಬ ಎಚ್ಚರಿಕೆಯನ್ನೂ ಅದು ಅರಿತಿತ್ತು. ಹಾಗಾಗಿ ಕಾರ್ಯಕ್ರಮಕ್ಕೆ ನಿರಾಕರಣೆಯ ಅಸ್ತ್ರ ಪ್ರಯೋಗಿಸುವ ಹೆಜ್ಜೆ ಇಡದೇ ಸುಮ್ಮನಾಯಿತು ಎಂದು ಹೇಳಲಾಗುತ್ತಿದೆ.
ಆದರೆ ಬಿಜೆಪಿ ಕಾರ್ಯಕರ್ತರ ಹುಮ್ಮಸ್ಸು, ‘ಮೈಸೂರು ಚಲೋʼ ಯಶಸ್ವಿಗೊಳಿಸುವ ಸವಾಲು ಸ್ವೀಕರಿಸಿದ್ದ ವಿಜಯೇಂದ್ರ ಯಡಿಯೂರಪ್ಪ ಅವರ ಸಂಘಟನಾ ಕೌಶಲ್ಯ ಹಾಗೂ ಇದಕ್ಕೆ ಜೊತೆಗೂಡುವ ನಿಟ್ಟಿನಲ್ಲಿ ಜೆಡಿಎಸ್ ತೋರಿದ ಬದ್ಧತೆ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಪಾಲ್ಗೊಳ್ಳುವಿಕೆ, ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರ ಉತ್ಸಾಹ, ಇದೆಲ್ಲದರ ಒಟ್ಟು ಪರಿಣಾಮದಿಂದ ಪಾದಯಾತ್ರೆ ಯಶಸ್ವಿಯಾಗುತ್ತದೆ ಎಂಬುದು ಕಾಂಗ್ರೆಸ್‌ಗೆ ಗೊತ್ತಾಯಿತು. ಹಾಗಾಗಿ ತನ್ನ ಸರ್ಕಾರಿ ಬಲವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಪಾದಯಾತ್ರೆಯ ಹಾದಿಯ ಪ್ರಮುಖ ಸ್ಥಳಗಳಲ್ಲಿ ಪ್ರತಿ ಸಮಾವೇಶ ಏರ್ಪಾಡು ಮಾಡಿತು. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಪ್ರತಿಪಕ್ಷದ ಚಳವಳಿಗೆ ಹೆದರಿ, ಆಡಳಿತ ಪಕ್ಷವೇ ಸರ್ಕಾರಿ ಪ್ರಾಯೋಜಿತ ಪ್ರತಿ ಸಮಾವೇಶ ನಡೆಸಿದ್ದು- ಇದೇ ಮೊದಲಿರಬೇಕು!
ಉದ್ದೇಶ ಸ್ಪಷ್ಟಗೊಳಿಸಿದ ನಾಯಕರು
ಪಾದಯಾತ್ರೆಯ ಆರಂಭದ ದಿನ ಯಡಿಯೂರಪ್ಪನವರ ಬಾಯಿಂದ ಈ ಹೋರಾಟಕ್ಕೆ ರಣಕಹಳೆ ಮೊಳಗಿಸುವ ಮಾತು ಹೊರಬಂದರೆ, ಕುಮಾರಸ್ವಾಮಿ ಅವರು ಈ ಹೋರಾಟ ಬಂಡೆಯೊಳಗೆ ಅಡಗಿರುವ ಭ್ರಷ್ಟತೆಯನ್ನು ಹೊರತೆಗೆದು ಪುಡಿ ಪುಡಿ ಮಾಡುವ ಪಾದಯಾತ್ರೆ ಆಗಲಿದೆ ಎಂಬ ಎಚ್ಚರಿಕೆಯ ಮಾತು ಹೇಳಿದರು.
ಕಾಂಗ್ರೆಸ್ ಹಗರಣಗಳ ಚಕ್ರವ್ಯೂಹ ಭೇದಿಸುವ ಅದಮ್ಯ ಉತ್ಸಾಹದ ಮಾತಾಡಿದ ವಿಜಯೇಂದ್ರ, ಈ ಹೋರಾಟ ವ್ಯಕ್ತಿಗತವಲ್ಲ, ಭ್ರಷ್ಟತೆಯ ಕರಾಳ ನೆರಳಿನಿಂದ ಕರ್ನಾಟಕವನ್ನು ಮುಕ್ತಗೊಳಿಸುವ ಹಾಗೂ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಹಗರಣಗಳನ್ನು ಬಯಲು ಮಾಡುವ ವಿಧಾಯಕ ಕಾರ್ಯ ಎಂಬ ಸಂದೇಶ ರವಾನಿಸಿದರು.
ವಿಧಾನಮಂಡಲದ ಉಭಯ ಸದನಗಳ ನಾಯಕರಾದ ಆರ್.ಅಶೋಕ, ಛಲವಾದಿ ನಾರಾಯಣಸ್ವಾಮಿ ಜೊತೆಗೂಡುವಿಕೆ, ಪಕ್ಷದ ಪ್ರಮುಖರಾದ ಡಾ.ಅಶ್ವತ್ಥನಾರಾಯಣ, ಸುನಿಲ್ ಕುಮಾರ್, ಸಿ.ಟಿ.ರವಿ, ಎನ್.ರವಿಕುಮಾರ್, ಇನ್ನೂ ಅನೇಕ ಸಂಸದರು, ಶಾಸಕರು ಪಕ್ಷದ ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಹಾಗೂ ವಿವಿಧ ಪದಾಧಿಕಾರಿಗಳು ಎಲ್ಲರ ಅಂದಿನ ಸಮಾಗಮ ಪಾದಯಾತ್ರೆಯ ಸಾರ್ಥಕ ಯಶಸ್ಸಿಗೆ ಮುನ್ನುಡಿ ಬರೆದಂತಿತ್ತು.
ಪಾದಯಾತ್ರೆ ಈಗ ನಡೆಸಿದ್ದು ಏಕೆ?
ಪಾದಯಾತ್ರೆಗಳು ಮತ್ತು ಸಮಾವೇಶಗಳನ್ನು ಯಾವುದೇ ಚುನಾವಣೆಗಳ ಹೊಸ್ತಿಲಲ್ಲಿ ಹಮ್ಮಿಕೊಳ್ಳುವುದು ರಾಜಕೀಯ ಪಕ್ಷಗಳ ತಂತ್ರಗಾರಿಕೆ. ಇದೇ ತಂತ್ರ ಬಳಸಿ ರಾಜಕೀಯ ಅಧಿಕಾರದ ಸನಿಹಕ್ಕೆ ತಲುಪಿದ ಸಿದ್ದರಾಮಯ್ಯನವರ ಬಳ್ಳಾರಿ ಪಾದಯಾತ್ರೆ ಹಾಗೂ ಚನ್ನಪಟ್ಟಣದ ವಿಠಲೇನಹಳ್ಳಿಯ ಗೋಲಿಬಾರ್ ಘಟನೆಗೆ ಸಂಬಂಧಿಸಿದಂತೆ ದೇವೆಗೌಡರು ನಡೆಸಿದ ಪಾದಯಾತ್ರೆಗೆ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ
ತಲ್ಲಣಗೊಂಡ ಘಟನೆ ರಾಜ್ಯ ರಾಜಕಾರಣದ ಇತಿಹಾಸದ ಮೈಲಿಗಲ್ಲುಗಳು.
ಸದ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಪೂರೈಸುವುದರಲ್ಲಿದೆ. ಸರ್ಕಾರ ಸಂಖ್ಯಾಬಲದ ದೃಷ್ಟಿಯಿಂದ ಸದೃಢವಾಗಿದೆ. ಇಂತಹ ಸಂದರ್ಭದಲ್ಲಿ ರಾಜಕೀಯ ಲಾಭಗಳ ನಿರೀಕ್ಷೆಯಿಲ್ಲದೇ ಹೋರಾಟವನ್ನು ರೂಪಿಸುವುದು ಸವಾಲಿನ ಮಾತೇ ಸರಿ. ಈ ನಿಟ್ಟಿನಲ್ಲಿ ‘ಮೈಸೂರು ಚಲೋʼ ಮಾದರಿಯ ಬೃಹತ್ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳುವುದು, ಅದರಲ್ಲೂ ಮುಖ್ಯಮಂತ್ರಿಗಳ ತವರು ಜಿಲ್ಲೆಗೇ ಪಾದಯಾತ್ರೆಯನ್ನು ಕೊಂಡೊಯ್ಯಲು ಯೋಜಿತ ಸಿದ್ಧತೆ-ಬದ್ಧತೆಗಳು ಇರಲೇಬೇಕು. ಇದರ ಜೊತೆಗೇ ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗುವ ಜಾಣ್ಮೆಯೂ ಇರಬೇಕು.
ಈ ನಿಟ್ಟಿನಲ್ಲಿ ವಿಜಯೇಂದ್ರ ಅವರ ಪಾಲಿಗೆ ಪಕ್ಷದೊಳಗೆ ಮತ್ತು ಜೆಡಿಎಸ್ ಪಕ್ಷದೊಂದಿಗೆ ಸಮನ್ವಯತೆ ಸಾಧಿಸಿ ಈ ಕಾರ್ಯಕ್ರಮ ರೂಪಿಸುವ ಸವಾಲು ಮುಂದಿತ್ತು. ಅದರ ಜೊತೆ ಜೊತೆಗೇ ಎಷ್ಟೇ ಸಂಘಟನಾತ್ಮಕ ಚಟುವಟಿಕೆ ಹಮ್ಮಿಕೊಳ್ಳುತ್ತಿದ್ದರೂ ತಂದೆ ಯಡಿಯೂರಪ್ಪನವರ ಛಾಯೆಯಿಂದ ಇನ್ನೂ ಅವರು ಹೊರಬಂದಿಲ್ಲ ಎನ್ನುವ ಕೊಂಕು ಮಾತುಗಳೂ ಇದ್ದೇ ಇತ್ತು. ಮುಂದಿದ್ದ ಸವಾಲುಗಳನ್ನು ಸೂಕ್ಷ್ಮವಾಗಿ ನಿಭಾಯಿಸಿ ತಮ್ಮ ಸಂಘಟನಾ ಸಾಮರ್ಥ್ಯ ಬಿಂಬಿಸಲು ಈ ಅವಕಾಶವನ್ನು ಬಳಸಿಕೊಂಡು ಅವರು ಯಶಸ್ವಿಯಾದರು.
ಚೆನ್ನಾಗಿ ಸಾಥ್ ನೀಡಿದ ಜೆಡಿಎಸ್
ಜೆಡಿಎಸ್ ಕಾರ್ಯಕರ್ತರ ಜತೆಗೂಡಿ ಮೈತ್ರಿ ಬಾಂಧವ್ಯದ ನಡಿಗೆ ಕಾರ್ಯಕ್ರಮ ಇದಾಗಿದ್ದರೂ ಎರಡೂ ಪಕ್ಷಗಳು ತಮ್ಮ ಸಂಘಟನಾ ಸಾಮರ್ಥ್ಯದ ಶಕ್ತಿ ಪ್ರದರ್ಶನಕ್ಕೆ ಈ ಪಾದಯಾತ್ರೆಯನ್ನು ಬಳಸಿಕೊಂಡವು. ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಬೆಂಗಳೂರು ಸೇರಿದಂತೆ ಹಳೇ ಮೈಸೂರು ಭಾಗದ 4 ಜಿಲ್ಲೆಗಳ ತಮ್ಮ ಸಂಘಟನೆಯ ಪ್ರಬಲತೆ ಸಾಬೀತುಪಡಿಸಲು ಈ ಅವಕಾಶವನ್ನು ಯಶಸ್ವಿಯಾಗಿ ಬಳಸಿಕೊಂಡರು.
ಈ ಪಾದಯಾತ್ರೆ ಅತ್ಯಂತ ಯಶಸ್ವಿ ಎಂದು ಬಣ್ಣಿಸಲು ಹರಿದು ಬಂದ ಕಾರ್ಯಕರ್ತರ ಸಮೂಹ ಹಾಗೂ ಸಾಗಿ ಬಂದ ದಾರಿಯಲ್ಲಿ ಜನರು ತೋರಿದ ಪ್ರೀತಿ ವಿಶ್ವಾಸವನ್ನಷ್ಟೇ ನೋಡಿದರೆ ಆಗದು. ಆಳುವ ಸರ್ಕಾರದ ಮುಖ್ಯಮಂತ್ರಿ ‘ಮೈಸೂರು ಚಲೋ’ ಗೆ ಪ್ರತಿ ಸಮಾವೇಶ ಮೈಸೂರಲ್ಲಿ ಏರ್ಪಡಿಸಿದರೆಂದರೆ ಈ ಪಾದಯಾತ್ರೆಗೆ ಅವರು ಅಲುಗಾಡಿದ್ದಾರೆಂದೇ ಅರ್ಥೈಸಬೇಕಾಗಿದೆ, ಈ ಆಧಾರದ ಮೇಲೆ ಚಲೋ ಕಾರ್ಯಕ್ರಮ ಚಲೋ ಆಯಿತೆಂದು ಕಾರ್ಯಕರ್ತರಿಂದ ಬಣ್ಣಿಸಿಕೊಳ್ಳುತ್ತಿದೆ.
ಹಗರಣದಿಂದ ವಿಚಲಿತ ಸಿಎಂ
ಮುಡಾ ಹಗರಣದಿಂದ ವಿಚಲಿತಗೊಂಡವರಂತೆ ಮುಖ್ಯಮಂತ್ರಿಗಳು ಪ್ರತಿಕ್ರಿಯೆ ತೋರುತ್ತಿರುವುದು ಮತ್ತು ವರ್ತಿಸುತ್ತಿರುವುದನ್ನು ಅವರ ಹತ್ತಿರದವರೂ ಸಹ ಅಲ್ಲಗಳೆಯುತ್ತಿಲ್ಲ. ಮುಖ್ಯಮಂತ್ರಿಗಳ ಪತ್ನಿಗೆ ಮಂಜೂರಾಗಿರುವ 14 ನಿವೇಶನಗಳು ‘ಅಂಗೈ ಹುಣ್ಣಿಗೆ ಕನ್ನಡಿ ಬೇಕೆʼ ಎನ್ನುವ ರೀತಿಯಲ್ಲಿವೆ. ತಮ್ಮ ಪತ್ನಿ ಪಡೆದುಕೊಂಡಿರುವ ಜಮೀನಿನ ಮಾಲಿಕತ್ವದ ಗೊಂದಲ ಮತ್ತು ನಿಯಮಾವಳಿಗಳನ್ನು ಮೀರಿ ಪಡೆದಿರುವ 14 ನಿವೇಶನಗಳ ವಿಷಯದಲ್ಲಿ ಸರಣಿ ಪ್ರಮಾದಗಳಾಗಿರುವುದಕ್ಕೆ ಜನರ ಕೈಗೆ ತಲುಪಿರುವ ದಾಖಲೆಗಳು ಉತ್ತರ ಹೇಳುತ್ತಿವೆ.
ಇದರ ಮುಜುಗರದಿಂದ ತಪ್ಪಿಸಿಕೊಳ್ಳಲೆಂದೇ ಮುಖ್ಯಮಂತ್ರಿಗಳು ವಿಧಾನಮಂಡಲದ ಉಭಯ ಸದನಗಳಲ್ಲಿ ಸದರಿ ವಿಷಯದ ನಿಲುವಳಿ ಸೂಚನೆಗೆ ಅವಕಾಶ ನೀಡದೇ ನುಣುಚಿಕೊಂಡರು. ಇದು ಸಾಂವಿಧಾನಿಕ ವಿರೋಧಿ ನಡೆ, ಪ್ರಜಾತಂತ್ರ ವ್ಯವಸ್ಥೆಯನ್ನು ಅಪಮಾನಿಸಿದ ಪರಿ ಎಂದು ವಿರೋಧ ಪಕ್ಷಗಳು ಹೇಳುತ್ತಿವೆ.
ಸಮಾಜವಾದಿ ಹಿನ್ನೆಲೆಯ ಸಿದ್ದರಾಮಯ್ಯ ಕಾಂಗ್ರೆಸ್ 70ರ ದಶಕದಲ್ಲಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದಾಗ ಅದನ್ನು ತೀವ್ರವಾಗಿ ವಿರೋಧಿಸಿದ್ದ ಜನತಾ ಪರಿವಾರದಲ್ಲಿದ್ದರು. ಕಾಂಗ್ರೆಸ್ ಸೇರಿದ ನಂತರ ನಿರಂಕುಶ ಪ್ರಭುತ್ವದ ಸಂಸ್ಕೃತಿ ಮೈಗೂಡಿಸಿಕೊಂಡವರಂತೆ ಮುಡಾ ಹಗರಣದ ಕುರಿತು ಮುಕ್ತ ಚರ್ಚೆಗೆ ಅವಕಾಶ ಕೊಡದೇ ಸದನದ ಸದಸ್ಯರ ಹಕ್ಕು ಕಿತ್ತುಕೊಂಡಿದ್ದು ಸಮಾಜವಾದ ಮತ್ತು ಜನತಂತ್ರವಾದ ಎಂದು ಹೇಳಲು ಸಾಧ್ಯವೇ?
ವಿಧಾನಮಂಡಲದಲ್ಲಿ ಉತ್ತರ ಹೇಳಬೇಕಾದ ಸಿದ್ದರಾಮಯ್ಯ ತಮ್ಮ ಮೇಲಿನ ಸ್ವಜನ ಪಕ್ಷಪಾತ, 14 ನಿವೇಶನ ಪಡೆದ ರೀತಿ ನೀತಿ ಬಗ್ಗೆ ಮಾಧ್ಯಮಗೋಷ್ಠಿ ಕರೆದು ಪೂರಕವಲ್ಲದ ಬೆರಳೆಣಿಕೆಯ ದಾಖಲೆಗಳನ್ನಿಟ್ಟುಕೊಂಡು ಮಾಧ್ಯಮದವರನ್ನು ದಿಕ್ಕು ತಪ್ಪಿಸುವ ಏಕಪಕ್ಷೀಯ ವಾದ ಮಂಡಿಸಿದರು. ಆ ಪತ್ರಿಕಾಗೋಷ್ಠಿಯನ್ನು ಸ್ವಬಣ್ಣನೆ ಮತ್ತು ಭಂಡತನದ ಸಮರ್ಥನೆಗೆ ಬಳಸಿಕೊಂಡಿದ್ದು ರಾಜ್ಯದ ರಾಜಕೀಯ ಇತಿಹಾಸದಲ್ಲಿ ಒಂದು ದೊಡ್ಡ ಕಪ್ಪು ಚುಕ್ಕೆ ಎನ್ನಲೇಬೇಕು.
ದೊಡ್ಡ ಹಗರಣ ಮುಚ್ಚಿಹಾಕುವ ಯತ್ನ:
ಭಾರತದ ಇತಿಹಾಸದಲ್ಲಿ ವಿರೋಧ ಪಕ್ಷಗಳ ಹೋರಾಟ ಮತ್ತು ಪ್ರತಿಭಟನೆಗಳಿಗೆ ಪ್ರತಿಯಾಗಿ ಸಮಾವೇಶ ಹಮ್ಮಿಕೊಂಡು ತನ್ನ ಭ್ರಷ್ಟ ಹಗರಣಗಳಿಗೆ ರಕ್ಷಣೆ ಪಡೆಯುವ ಕಸರತ್ತು ನಡೆಸಿದ ಉದಾಹರಣೆ ಸಿಗುವುದು ದುರ್ಲಭ. ಇಂತಹ ಸಮಾವೇಶವೊಂದನ್ನು ಹಮ್ಮಿಕೊಳ್ಳುವ ಮೂಲಕ ಸಿದ್ದರಾಮಯ್ಯ ಮುಡಾದಲ್ಲಿ ನಡೆದಿರುವ 5000ಕ್ಕೂ ಹೆಚ್ಚು ನಿವೇಶನಗಳ 5000 ಕೋಟಿ ರುಪಾಯಿಗೂ ಹೆಚ್ಚು ಮೌಲ್ಯದ ಅಕ್ರಮ ಹಾಗೂ ಭ್ರಷ್ಟ ಹಗರಣಕ್ಕೆ ತಮ್ಮ 14 ನಿವೇಶನಗಳ ಕೋಟೆ ಕಟ್ಟಿ ರಕ್ಷಣೆ ಮಾಡಿಕೊಳ್ಳುವ ಪರಿಯಲ್ಲಿ ಪ್ರತಿ ಸಮಾವೇಶ ನಡೆಸಿದ್ದು, ವಿರೋಧ ಪಕ್ಷಗಳ ಹೋರಾಡುವ ಸಾಂವಿಧಾನಿಕ ಹಕ್ಕನ್ನು ಅಣಕಿಸಲು ನಡೆಸಿದ ಪ್ರಹಸನದಂತೆ ಜನರ ಕಣ್ಣಿಗೆ ರಾಚಿತು.
‘ಮೈಸೂರು ಚಲೋʼ ಪಾದಯಾತ್ರೆಯ ಬಿಸಿ ಆಡಳಿತ ಪಕ್ಷದ ಮುಖ್ಯಮಂತ್ರಿಗಳನ್ನು ಕಂಗೆಡಿಸುವ ಮಾದರಿಯಲ್ಲಿ ಪಾದಯಾತ್ರೆಗೆ ಪ್ರತಿಯಾಗಿ ಸಮಾವೇಶ ಹಮ್ಮಿಕೊಳ್ಳುವ ಮಟ್ಟಿಗೆ ಬಿಸಿ ಮುಟ್ಟಿಸಿತೆಂದರೆ ಬಿಜೆಪಿ-ಜೆಡಿಎಸ್ ಮೈತ್ರಿಯ ಮೈಸೂರು ಚಲೋ ಪಾದಯಾತ್ರೆ ‘ವಿಜಯದ ಸಂಕೇತ’ವನ್ನು ರಾಜ್ಯ ರಾಜಕಾರಣದಲ್ಲಿ ರವಾನಿಸಿದೆ.
ಬಿಜೆಪಿ ವರಿಷ್ಠರಿಂದ ಅನುಮತಿ ಪಡೆದುಕೊಂಡ ‘ಟಾಸ್ಕ್ʼ ಅಂತೂ ರಾಜ್ಯ ಬಿಜೆಪಿಗೆ ದೊಡ್ಡ ಪರೀಕ್ಷೆಯೇ ಆಗಿತ್ತು. ಇದು ರಾಜ್ಯ ಬಿಜೆಪಿ ಸಂಘಟನೆಗೆ ಒಂದು ಹೊಸ ಚೈತನ್ಯ ತಂದುಕೊಟ್ಟಿತು. ಕಾರ್ಯಕರ್ತರಲ್ಲಿ ಕಳೆದ ವಿಧಾನಸಭೆಯ ಸೋಲಿನ ಕಹಿ ಮರೆಯುವಂತೆ ಮಾಡಿತು. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಗರಿಗೆದರಿ ಓಡಾಡುವ ಪರಿಸ್ಥಿತಿ ಕಾರ್ಯಕರ್ತರ ಮನದಲ್ಲಿ ಮೂಡಲು ಕಾರಣವಾಯಿತು.
ಬಿಜೆಪಿಯಲ್ಲೇ ಕಾಲೆಳೆಯುವವರು
ರಾಜಕೀಯ ಪಕ್ಷಗಳಲ್ಲಿ ಕೆಲವರು ಹೊಂದಾಣಿಕೆ ರಾಜಕಾರಣ ಮಾಡಿಕೊಳ್ಳುತ್ತಾರೆಂಬ ಚರ್ಚೆ, ಅಪವಾದಗಳು ಚಾಲ್ತಿಯಲ್ಲಿ ಯಾವಾಗಲೂ ಇದ್ದೇ ಇದೆ. ಆದರೆ ಸಿದ್ದರಾಮಯ್ಯನವರ ವಿಚಾರದಲ್ಲಿ ಒಬ್ಬಿಬ್ಬ ಬಿಜೆಪಿಗರು ಈ ಹಿಂದಿನಿಂದಲೂ ಒಳ ಒಪ್ಪಂದ ಮಾಡಿಕೊಂಡು ಸದನದ ಒಳಗೆ ಹೊರಗೆ ಅವರ ಅನುಕೂಲಕ್ಕೆ ತಕ್ಕಂತೆ ಬಿಜೆಪಿಗೆ ಮುಜುಗುರ ಉಂಟುಮಾಡುವ ರೀತಿಯಲ್ಲಿ ಮಾಧ್ಯಮಗಳ ಮುಂದೆ ವರ್ತಿಸುತ್ತಿರುವುದು ‘ಬೆಕ್ಕು ಕಣ್ಣುಮುಚ್ಚಿಕೊಂಡು ಹಾಲು ಕುಡಿಯುವಂತೆʼ ಕಾಣುತ್ತಿದೆ. ಪಾದಯಾತ್ರೆಯ ಯಶಸ್ಸು ಕಂಡು ಬೆಳಗಾವಿಯಲ್ಲಿ ಇವರು ವಿಚಲಿತರಾದಂತೆ ವರ್ತಿಸುತ್ತಿರುವುದರ ದ್ಯೋತಕವಾಗಿ ಸಭೆಯೊಂದನ್ನು ನಡೆಸಿದ್ದಾರೆ. ತಮ್ಮ ಸಭೆಗೆ ಮತ್ತೊಂದು ಪಾದಯಾತ್ರೆಯ ಉದ್ದೇಶ ಎಂದು ಹೇಳಿಕೊಂಡಿರುವರಾದರೂ ಸಭೆಗೆ ಸೇರಿರುವವರೆಲ್ಲ ರಾಜ್ಯ ಬಿಜೆಪಿ ಅಧ್ಯಕ್ಷರ ಕಾಲು ಎಳೆಯಬೇಕೆಂಬ ಉದ್ದೇಶವಿಟ್ಟುಕೊಂಡಿದ್ದಾರೆ. ಒಂದೆಡೆ ಸೇರಿದ್ದ ಇವರೆಲ್ಲರೂ ಬಹುತೇಕವಾಗಿ ಕುಟುಂಬ ರಾಜಕಾರಣ ರಕ್ಷಣೆ ಮಾಡಿಕೊಂಡು ಬಂದವರೇ ಆಗಿದ್ದಾರೆ. ಹಾಸ್ಯಾಸ್ಪದವೆಂದರೆ ಇವರ ಭಿನ್ನರಾಗದ ವಿಷಯ ವಸ್ತು ಏನೆಂದರೆ ‘ಕುಟುಂಬ ರಾಜಕಾರಣವನ್ನು ವಿರೋಧಿಸುವುದು.’
ಸಹವಾಸದಿಂದ ಸನ್ಯಾಸಿ ಕೆಟ್ಟ ಅಂತಾರಲ್ಲ ಹಾಗಾಗಿದೆ ಸಿದ್ದರಾಮಯ್ಯ ಪರಿಸ್ಥಿತಿ, ಸೋಮಣ್ಣ
ಪಕ್ಷ ಸಂಘಟನೆಗೆ ಹೊಸ ಉತ್ಸಾಹ
ಯಾರು ಏನು ಹೇಳಲಿ ಬಿಡಲಿ, ಮೈಸೂರು ಚಲೋ ಪಾದಯಾತ್ರೆ ಬಿಜೆಪಿ ಸಂಘಟನೆಗೆ, ಕಾರ್ಯಕರ್ತರ ಪಾಲಿಗೆ ಉತ್ಸಾಹದ ಮೆರುಗು ನೀಡಿರುವುದಂತೂ ಸತ್ಯ. ವರಿಷ್ಠ ಮಂಡಳಿಯೂ ಇದನ್ನು ಗಮನಿಸಿದೆ, ಅದರ ಮುಂದಿರುವುದು ರಾಜ್ಯದಲ್ಲಿ ಬಿಜೆಪಿ ಬಲಿಷ್ಠಗೊಳಿಸುವುದು, ಕಾಂಗ್ರೆಸ್ ಬೇರನ್ನು ಅಲುಗಾಡಿಸುವುದಕ್ಕೆ ಆದ್ಯತೆ ನೀಡುವುದೇ ಹೊರತು ಹತಾಶೆ, ಅತೃಪ್ತಿ ಹೊರಚೆಲ್ಲುವವರನ್ನು ಸಂತೈಸುವಷ್ಟು ಸಹನೆ ಕಾಯ್ದುಕೊಳ್ಳುವ ಅನಿವಾರ್ಯತೆ ಬಿಜೆಪಿ ವರಿಷ್ಠರಿಗಿಲ್ಲ ಎಂಬುದು ಅತೀ ಶೀಘ್ರದಲ್ಲಿಯೇ ಕೆಲವರಿಗೆ ಮನವರಿಕೆಯಾಗಲಿದೆ.
ಒಟ್ಟಿನಲ್ಲಿ ‘ಮೈಸೂರು ಚಲೋʼ ಧೂಳಿಗೆ ಅನೇಕಾನೇಕರು ಕಣ್ಣುಜ್ಜಿಕೊಳ್ಳುವಂತಾಗಿದ್ದನ್ನು ತಳ್ಳಿಹಾಕುವಂತಿಲ್ಲ. ಭ್ರಷ್ಟಾಚಾರ ಹಾಗೂ ಹಗರಣಗಳಿಂದ ಕಾಂಗ್ರೆಸ್ ಸರ್ಕಾರ ತಪ್ಪಿಸಿಕೊಳ್ಳುವುದು ಕೂಡ ಸುಲಭಕ್ಕೆ ಸಾಧ್ಯವಿಲ್ಲ.
ಪಾದಯಾತ್ರೆಗಳು ಮತ್ತು ಸಮಾವೇಶಗಳನ್ನು ಯಾವುದೇ ಚುನಾವಣೆಗಳ ಹೊಸ್ತಿಲಲ್ಲಿ ಹಮ್ಮಿಕೊಳ್ಳುವುದು ರಾಜಕೀಯ ಪಕ್ಷಗಳ ತಂತ್ರಗಾರಿಕೆ. ಬಳ್ಳಾರಿ ಪಾದಯಾತ್ರೆ ಮೂಲಕ ಇದೇ ತಂತ್ರ ಬಳಸಿ ಸಿದ್ದರಾಮಯ್ಯ ಅಧಿಕಾರದ ಸನಿಹಕ್ಕೂ ಬಂದಿದ್ದರು. ಆದರೆ, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕೆ ಕೇವಲ ಒಂದೂವರೆ ವರ್ಷವಾಗಿದೆ. ಇಂತಹ ಸಂದರ್ಭದಲ್ಲಿ ರಾಜಕೀಯ ಲಾಭಗಳ ನಿರೀಕ್ಷೆಯಿಲ್ಲದೇ ಹೋರಾಟ ರೂಪಿಸಿ, ರಾಜ್ಯದ ಒಳಿತಿಗಾಗಿ ಆಡಳಿತ ಪಕ್ಷವನ್ನು ಎಚ್ಚರಿಸುವ ಕಾರ್ಯದಲ್ಲಿ ವಿಜಯೇಂದ್ರ ಯಶಸ್ವಿಯಾಗಿದ್ದಾರೆ.