ತಾಯಿ, ಮಾವನ ಪ್ರಭಾವ ಬಳಸಿ ಟಿಕೆಟ್‌ ಪಡೆದಿಲ್ಲ: ಮುಖಾಮುಖಿ ಸಂದರ್ಶನದಲ್ಲಿ ಮೃಣಾಲ್‌ ಹೆಬ್ಬಾಳಕರ

By Kannadaprabha News  |  First Published Apr 20, 2024, 6:23 AM IST

ಎಂಜಿನೀಯರಿಂಗ್ ವ್ಯಾಸಂಗ ಮಾಡಿರುವ ಮೃಣಾಲ್‌ ಹೆಬ್ಬಾಳಕರ ಜಿಲ್ಲೆಯಲ್ಲಿ ನಾನಾ ಅಭಿವೃದ್ಧಿಯ ಕನಸುಗಳೊಂದಿಗೆ ಲೋಕಸಭಾ ಅಖಾಡಕ್ಕೆ ಧುಮುಕಿದ್ದಾರೆ. ಇದುವರೆಗೆ ಬಿಜೆಪಿ ಭದ್ರಕೋಟೆಯಾಗಿದ್ದ ಬೆಳಗಾವಿ ಕ್ಷೇತ್ರವನ್ನು ಕಾಂಗ್ರೆಸ್‌ ತನ್ನತ್ತ ಸೆಳೆಯಲು ಯುವ ನಾಯಕನನ್ನು ಕಣಕ್ಕಿಳಿಸಿದೆ. ಮೃಣಾಲ್‌ ಹೆಬ್ಬಾಳಕರ ಕನ್ನಡಪ್ರಭದೊಂದಿಗೆ ಮುಖಾಮುಖಿಯಾದಾಗ.
 


ಜಗದೀಶ ವಿರಕ್ತಮಠ

ಬೆಳಗಾವಿ (ಏ.20): ತಾಯಿಯ ಗರಡಿಯಲ್ಲಿ ರಾಜಕೀಯವಾಗಿ ಒಂದಿಷ್ಟು ಅನುಭವ ಪಡೆದುಕೊಂಡ ಮೃಣಾಲ್‌ ಹೆಬ್ಬಾಳಕರ ಈಗ ಬೆಳಗಾವಿ ಲೋಕಸಭಾ ಕ್ಷೇತ್ರದ ಯುವ ಅಭ್ಯರ್ಥಿ. ಗಡಿ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ ಹೆಬ್ಬಾಳಕರ ಕುಟುಂಬ ರಾಜಕೀಯವಾಗಿ ತಮ್ಮದೆಯಾದ ಛಾಪು ಮೂಡಿಸುವುದರ ಜತೆಗೆ ಹಿಡಿತ ಕೂಡ ಸಾಧಿಸುತ್ತಿದೆ. ಎಂಜಿನೀಯರಿಂಗ್ ವ್ಯಾಸಂಗ ಮಾಡಿರುವ ಮೃಣಾಲ್‌ ಹೆಬ್ಬಾಳಕರ ಜಿಲ್ಲೆಯಲ್ಲಿ ನಾನಾ ಅಭಿವೃದ್ಧಿಯ ಕನಸುಗಳೊಂದಿಗೆ ಲೋಕಸಭಾ ಅಖಾಡಕ್ಕೆ ಧುಮುಕಿದ್ದಾರೆ. ಇದುವರೆಗೆ ಬಿಜೆಪಿ ಭದ್ರಕೋಟೆಯಾಗಿದ್ದ ಬೆಳಗಾವಿ ಕ್ಷೇತ್ರವನ್ನು ಕಾಂಗ್ರೆಸ್‌ ತನ್ನತ್ತ ಸೆಳೆಯಲು ಯುವ ನಾಯಕನನ್ನು ಕಣಕ್ಕಿಳಿಸಿದೆ. ಮೃಣಾಲ ಹೆಬ್ಬಾಳಕರ ಕನ್ನಡಪ್ರಭದೊಂದಿಗೆ ಮುಖಾಮುಖಿಯಾದಾಗ.

Tap to resize

Latest Videos

ಪ್ರಶ್ನೆ: ಚಿಕ್ಕ ವಯಸ್ಸಿನಲ್ಲಿ ದೊಡ್ಡ ಹೋರಾಟಕ್ಕೆ ಅಣಿಯಾಗಿದ್ದಿರಿ. ಇದು ಅನಿವಾರ್ಯ ಇತ್ತೆ? ಈಗಲೇ ಇದರ ಅಗತ್ಯ ನಿಮಗಿದೆ ಎಂದು ಅನಿಸಿದ್ದೇಕೆ?.
ಉ: ಅನಿವಾರ್ಯ ಎನ್ನುವುದಕ್ಕಿಂತ ಇದೊಂದು ಅವಕಾಶ. ಅವಕಾಶ ಸಿಕ್ಕಿದಾಗ ಸದುಪಯೋಗಪಡಸಿಕೊಳ್ಳಬೇಕು ಎನ್ನುವ ಮನೋಭಾವ ನನ್ನದು. ಜಿಲ್ಲೆಯ ನಾಯಕರು, ರಾಜ್ಯದ ನಾಯಕರು ಹಾಗೂ ರಾಷ್ಟ್ರೀಯ ನಾಯಕರು ಎಲ್ಲರೂ ಸೇರಿ ಒಟ್ಟಾಗಿ ತೀರ್ಮಾನ ತೆಗೆದುಕೊಂಡು ನನಗೆ ಟಿಕೆಟ್ ನೀಡಿದ್ದಾರೆ. ನನಗೀಗ 31 ವರ್ಷ. ಮತದಾನದ ಹಕ್ಕು ಬಂದು 13 ವರ್ಷಗಳಾಗಿವೆ. ರಾಜಕೀಯ ಮತ್ತು ಸಾಮಾಜಿಕ ಕೆಲಸಗಳಲ್ಲಿ ಕಳೆದ 10 ವರ್ಷಗಳಿಂದ ತೊಡಗಿದ್ದೇನೆ. ತಾಯಿ ಲಕ್ಷ್ಮೀ ಹೆಬ್ಬಾಳಕರ್ ಅವರು ಪ್ರತಿನಿಧಿಸುವ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಜನರೊಂದಿಗೆ ನಿಕಟವಾದ ಸಂಬಂಧವಿಟ್ಟುಕೊಂಡು ಒಂದಿಷ್ಟು ಅನುಭವ ಪಡೆದುಕೊಂಡಿದ್ದೇನೆ. ಒಬ್ಬ ಸಂಸದನಾಗಿ ಆ ಸ್ಥಾನದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬಲ್ಲೆ ಎನ್ನುವ ಆತ್ಮವಿಶ್ವಾಸ ನನ್ನಲ್ಲಿದೆ.

ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಇಂದು ಮೋದಿ ಸಮಾವೇಶ: ಸಿದ್ಧತೆ ಪರಿಶೀಲಿಸಿದ ವಿಜಯೇಂದ್ರ

ಪ್ರಶ್ನೆ: ರಾಷ್ಟ್ರ ರಾಜಕಾರಣಕ್ಕೆ ಹೋಗಲು ಇಚ್ಛಿಸಿರುವ ನಿಮಗೆ ಜನ ಏಕೆ ಮತ ಹಾಕಬೇಕು?
ಉ: ನಾನು ಒಬ್ಬ ಎಂಜಿನಿಯರ್ ಆಗಿ ನನ್ನ ಜೀವನದ ದಾರಿ ಕಂಡುಕೊಳ್ಳಬಹುದಿತ್ತು. ಆದರೆ, ಜನರ ಸೇವೆ ಮಾಡಲು, ಸಮಾಜ ಸೇವೆ ಮಾಡಲು ರಾಜಕೀಯ ಒಂದು ಮಾರ್ಗ ಎಂದು ನಂಬಿ ನಾನು ರಾಜಕೀಯವನ್ನು ಆಯ್ದುಕೊಂಡಿದ್ದೇನೆ. ತಾಯಿ ಲಕ್ಷ್ಮೀ ಹೆಬ್ಬಾಳಕರ ನನಗೆ ಆದರ್ಶ. ಅವರನ್ನು ನೋಡಿ, ಅವರು ಜನರ ಕಷ್ಟಕ್ಕೆ ಸ್ಪಂದಿಸುವ ರೀತಿ ನೋಡಿ, ಬಡವರ ಸೇವೆ ಮಾಡಬೇಕೆನ್ನುವ ಉದ್ದೇಶದಿಂದ ನಾನು ರಾಜಕೀಯಕ್ಕೆ ಬಂದೆ. ಇದರಲ್ಲೇ ನನ್ನ ಭವಿಷ್ಯ ಕಂಡುಕೊಳ್ಳಬೇಕೆಂದು ನಿರ್ಧರಿಸಿದೆ. ರಾಜಕೀಯದಿಂದ ದುಡ್ಡು ಮಾಡುವ ಅಗತ್ಯ ನನಗಿಲ್ಲ. ಜೀವನೋಪಾಯಕ್ಕೆ ನಮಗೆ ಉದ್ಯಮಗಳಿವೆ. ನನ್ನ ನೆಲಕ್ಕೆ ಏನಾದರೂ ಕೊಡುಗೆ ನೀಡಬೇಕೆನ್ನುವ ಉದ್ದೇಶದಿಂದ ನಾನು ಚುನಾವಣೆಗೆ ಸ್ಪರ್ಧಿಸಿದ್ದೇನೆ. ನನಗೆ ಒಂದು ಅವಕಾಶ ಕೊಡಿ ಎಂದು ಕೇಳುತ್ತಿದ್ದೇನೆ. ಜನರ ವಿಶ್ವಾಸ, ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿ ತೋರಿಸುತ್ತೇನೆ. ಕೆಲಸ ಮಾಡುವುದಕ್ಕೆ ನನ್ನ ತಾಯಿಯವರ ಆದರ್ಶ ನನ್ನ ಮುಂದಿದೆ.

ಪ್ರಶ್ನೆ: ಬೆಳಗಾವಿ ಬಿಜೆಪಿ ಭದ್ರಕೋಟೆ. ಪ್ರಧಾನಿ ನರೇಂದ್ರ ಮೋದಿ ಅಲೆ ಕೂಡ ಹೆಚ್ಚಾಗಿದೆ. ಕಳೆದ ನಾಲ್ಕು ಅವಧಿಯಿಂದ ಬಿಜೆಪಿಯ ಅಲೆ ಇರುವ ಕ್ಷೇತ್ರವನ್ನು ತಾವೇಕೆ ಆಯ್ಕೆ ಮಾಡಿಕೊಂಡಿರಿ?
ಉ: ಬೆಳಗಾವಿ ಬಿಜೆಪಿಯ ಭದ್ರಕೋಟೆ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಕಳೆದ 4 ಅವಧಿ ಬಿಟ್ಟರೆ ಹಿಂದೆ ಇದು ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಯಾವ್ಯಾವುದೋ ಕಾರಣದಿಂದ 2004ರಿಂದ ಬಿಜೆಪಿ ವಶಕ್ಕೆ ಹೋಗಿರಬಹುದು. ಆದರೆ, ಕಾಂಗ್ರೆಸ್ ಇಲ್ಲಿ ಭದ್ರವಾದ ನೆಲೆ ಹೊಂದಿದೆ. 2014ರಲ್ಲಿ ನನ್ನ ತಾಯಿ ಲಕ್ಷ್ಮೀ ಹೆಬ್ಬಾಳಕರ ಸ್ಪರ್ಧಿಸಿದ್ದಾಗ ಮೋದಿ ಅಲೆಯಿಂದಾಗಿ ಮತ್ತು 2021ರ ಉಪ ಚುನಾವಣೆಯಲ್ಲಿ ಅನುಕಂಪದ ಅಲೆಯಿಂದಾಗಿ ಅಲ್ಪ ಮತಗಳಿಂದ ಪರಾಭವಗೊಂಡಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8ರಲ್ಲಿ 5 ವಿಧಾನಸಭಾ ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದೆ. ಹಾಗಾಗಿ ಕಾಂಗ್ರೆಸ್ ಇಲ್ಲಿ ಗಟ್ಟಿಯಾದ ನೆಲೆ ಹೊಂದಿದೆ. ಜತೆಗೆ, ಈ ಹಿಂದಿನ ಬಿಜೆಪಿ ಸಂಸದರಿಂದ ಜನ ಭ್ರಮನಿರಸನಗೊಂಡಿದ್ದಾರೆ. ಅವರಿಂದ ಯಾವುದೇ ಹೇಳಿಕೊಳ್ಳುವಂತಹ ಅಭಿವೃದ್ಧಿಯಾಗಿಲ್ಲ. ಹಾಗಾಗಿ ಜನ ಬದಲಾವಣೆ ಬಯಸಿದ್ದಾರೆ. ಬೆಳಗಾವಿ ನನ್ನ ಹುಟ್ಟೂರು, ನಾನು ಬೆಳೆದ ಊರು, ಹಾಗಾಗಿ ಸಹಜವಾಗಿ ನನ್ನ ಕ್ಷೇತ್ರವನ್ನೇ ನಾನು ಸೇವಾ ಕ್ಷೇತ್ರವಾಗಿ ಆಯ್ಕೆ ಮಾಡಿಕೊಂಡಿದ್ದೇನೆ.

ಪ್ರಶ್ನೆ: ಪಂಚಮಸಾಲಿ ವಿಷಯ ಕೂಡ ಈಗೀಗ ಹೆಚ್ಚಾಗಿ ಕೇಳಿಬರುತ್ತಿದೆ. ಇಲ್ಲಿಯವರೆಗೆ ಇಲ್ಲದ ಈ ವಿಷಯ ಈಗೇಕೆ ಬಂತು?
ಉ: ನಾವು ಯಾವತ್ತೂ ಜಾತಿ, ಧರ್ಮವನ್ನು ರಾಜಕೀಯಕ್ಕೆ ಬಳಸಿದವರಲ್ಲ. ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ನಮ್ಮ ಇಡೀ ಕುಟುಂಬ ಸಂಪೂರ್ಣವಾಗಿ ತೊಡಗಿಸಿಕೊಂಡಿದೆ. ಹಾಗಂತ ನಾವು ಜಾತಿ ಹೆಸರಲ್ಲಿ ಎಂದೂ ಓಟು ಕೇಳಿಲ್ಲ. ಯಾವುದೋ ಸಂದರ್ಭದಲ್ಲಿ ಪತ್ರಕರ್ತರು ಪ್ರಶ್ನೆ ಕೇಳಿದಾಗ ನನ್ನ ತಾಯಿಯವರು ನಮ್ಮದು ವೀರರಾಣಿ ಕಿತ್ತೂರು ಚನ್ನಮ್ಮನ ವಂಶ, ನಮ್ಮ ಮೈಯಲ್ಲಿ ಹರಿಯುತ್ತಿರುವುದು ಪಂಚಮಸಾಲಿ ರಕ್ತ ಎಂದು ಉತ್ತರಿಸಿದ್ದರು. ಅದನ್ನೇ ಇಟ್ಟುಕೊಂಡು ಬಿಜೆಪಿಯವರು ಕ್ಷುಲ್ಲಕ ಜಾತಿ ರಾಜಕೀಯ ಮಾಡುತ್ತಿದ್ದಾರೆ. ಆ ರೀತಿ ಜಾತಿ ರಾಜಕೀಯ ಮಾಡಬೇಕಾದ ಅವಶ್ಯಕತೆ ನಮಗಿಲ್ಲ. ನಮ್ಮಸಂಸ್ಕೃತಿ ಎಂತಾದ್ದು, ನಮ್ಮ ಕೆಲಸ ಎಂತಾದ್ದು ಎನ್ನುವುದನ್ನು ಜನ ನೋಡಿದ್ದಾರೆ. ಜನ ಅವರ ಜಾತಿ ರಾಜಕಾರಣಕ್ಕೆ ಸೊಪ್ಪು ಹಾಕುವುದಿಲ್ಲ ಎನ್ನುವ ವಿಶ್ವಾಸ ನನಗಿದೆ.

ಪ್ರಶ್ನೆ: ಅನುಭವಿ ಹಾಗೂ ಮಾಜಿ ಸಿಎಂ ಜಗದೀಶ ಶೆಟ್ಟರ ಅವರು ತಮ್ಮ ಎದುರಾಳಿ. ಅವರನ್ನು ಎದುರಿಸುತ್ತೇನೆ ಎನ್ನಲು ನಿಮ್ಮ ಬಳಿ ಇರುವ ಅಸ್ತ್ರಗಳೇನು?
ಉ: ನಾವು ಚುನಾವಣೆ ಕಣಕ್ಕೆ ಧುಮುಕಿದಾಗ ಎದುರಾಳಿ ಯಾರು ಎನ್ನುವುದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಅದು ಯಾರೇ ಇದ್ದರೂ ಅವರನ್ನು ಹಗುರವಾಗಿ ಪರಿಗಣಿಸುವುದೂ ಇಲ್ಲ. ಜಗದೀಶ ಶೆಟ್ಟರ್ ವಯಸ್ಸಿನಲ್ಲಿ ಹಿರಿಯರಿರಬಹುದು, ಅಧಿಕಾರ ಅನುಭವಿಸಿದವರಿರಬಹುದು. ಆದರೆ ನಮ್ಮ ಬೆಳಗಾವಿ ಜಿಲ್ಲೆಗೆ ಅವರ ಕೊಡುಗೆ ಏನು? ಜಿಲ್ಲೆಗೆ ಎಷ್ಟು ಅನ್ಯಾಯ ಮಾಡಿದ್ದಾರೆ, ಜಿಲ್ಲೆಗೆ ಬಂದಂತಹ ಎಷ್ಟು ಯೋಜನೆಗಳನ್ನು ಹುಬ್ಬಳ್ಳಿ - ಧಾರವಾಡಕ್ಕೆ ಹೊತ್ತೊಯ್ದಿದ್ದಾರೆ ಎನ್ನುವುದು ಜನರಿಗೆ ಗೊತ್ತಿದೆ. ಬಿಜೆಪಿಯಿಂದ ಕಾಂಗ್ರೆಸ್‌ಗೆ ಹೋಗಿ, ಅಲ್ಲಿ ಮೋದಿಯವರನ್ನು, ಬಿಜೆಪಿ ನಾಯಕರನ್ನು, ಬಿಜೆಪಿ ಪಕ್ಷವನ್ನು ಹಿಗ್ಗಾಮುಗ್ಗಾ ಬಯ್ದು, ಮತ್ತೆ ವಾಪಸ್ ಬಂದು, ಧಾರವಾಡ ಟಿಕೆಟ್ ಕೇಳಿ ಅದು ಸಿಗದಿದ್ದಾಗ ಹಾವೇರಿ ಟಿಕೆಟ್ ಕೇಳಿ, ಅದೂ ಸಿಗದಿದ್ದಾಗ ಅಂತಿಮವಾಗಿ ತಮ್ಮ ಬೀಗರ ಟಿಕೆಟ್ ಕಸಿದುಕೊಂಡು ಬೆಳಗಾವಿಯಿಂದ ಸ್ಪರ್ಧಿಸುತ್ತಿದ್ದಾರೆ. ಅವರು ಎಷ್ಟು ಸ್ವಾರ್ಥ ರಾಜಕಾರಣಿ ಎನ್ನುವುದು ಇದರಿಂದಲೇ ಗೊತ್ತಾಗುತ್ತದೆ. ಅಲ್ಲದೆ, ಹುಬ್ಬಳ್ಳಿ- ಧಾರವಾಡದ ಜನರೇ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅವರನ್ನು ತಿರಸ್ಕರಿಸಿದ್ದಾರೆ. ಅಂತವರಿಗೆ ಬೆಳಗಾವಿ ಜನರು ಮಣೆ ಹಾಕಲು ಸಾಧ್ಯವೇ? ಅವರು ನನಗೆ ಮತ ಕೊಡಿ ಎಂದು ಎಲ್ಲಾದರೂ ಕೇಳುತ್ತಿದ್ದಾರಾ? ಕೇಳುವ ನೈತಿಕತೆ ಹೊಂದಿದ್ದಾರಾ? ಕೇವಲ ಮೋದಿ ಮುಖ ನೋಡಿ ಮತ ಕೊಡಿ ಎಂದು ಕೇಳುತ್ತಿದ್ದಾರೆ. ಅವರ ಇಂತಹ ನಾಯಕಕ್ಕೆ ಮರುಳಾಗುವಷ್ಟು ಬೆಳಗಾವಿಯ ಜನರು ಮುಗ್ದರಲ್ಲ.

ಪ್ರಶ್ನೆ: ನಿಮ್ಮ ತಾಯಿ ಸಚಿವೆಯಾಗಿದ್ದಾರೆ. ನಿಮ್ಮ ಮಾವ ಚನ್ನರಾಜ ಅವರು ಕೂಡ ಪರಿಷತ್‌ ಸದಸ್ಯರು. ಒಂದೇ ಕುಟುಂಬದಲ್ಲಿ ಇಬ್ಬರು ರಾಜಕೀಯದಲ್ಲಿರುವಾಗ ಮತ್ತೊಬ್ಬರನ್ನು ಜನರು ಒಪ್ಪುತ್ತಾರೆ ಎಂಬ ನಂಬಿಕೆ ನಿಮಗೆ ಹೇಗೆ ಬಂತು?
ಉ: ನನ್ನ ತಾಯಿಯವರು ಏಕಾಏಕಿ ಮಂತ್ರಿಯಾದವರಲ್ಲ. ಅವರು ಈ ಸ್ಥಾನಕ್ಕೆ ಹೋಗಿದ್ದರ ಹಿಂದೆ ಸುಮಾರು 25 ವರ್ಷಗಳ ಶ್ರಮವಿದೆ. ಬೂತ್ ಮಟ್ಟದಿಂದ ಹಿಡಿದು ಪಕ್ಷ ಸಂಘಟಿಸಿದ್ದಾರೆ. ಪಕ್ಷದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. 2 ಬಾರಿ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದಾರೆ. ಸೋತರೂ ಮನೆಯಲ್ಲಿ ಕುಳಿತುಕೊಳ್ಳದೆ ಜನ ಸೇವೆ ಮಾಡಿದ್ದಾರೆ. ಇಷ್ಟೆಲ್ಲ ಮಾಡಿದ ನಂತರ ಅವರು ಶಾಸಕರಾಗಿ, ಎರಡನೇ ಬಾರಿಗೆ ಆಯ್ಕೆಯಾದ ನಂತರ ಮಂತ್ರಿಯಾಗಿದ್ದಾರೆ. ನನ್ನ ಮಾವ ಚನ್ನರಾಜ ಕೂಡ 10 ವರ್ಷಗಳಿಗಿಂತ ಹೆಚ್ಚು ಪಕ್ಷ ಕಟ್ಟಿ ಬೆಳೆಸಿದ್ದಾರೆ. ಅವರ ಸಂಘಟನಾ ಚಾತುರ್ಯ ನೋಡಿ, ಸೇವೆ ಗುರುತಿಸಿ ಪಕ್ಷ ಅವರಿಗೆ ವಿಧಾನ ಪರಿಷತ್ ಟಿಕೆಟ್ ನೀಡಿತು. ಹಾಗೆಯೇ ನಾನು ಕೂಡ ತಾಯಿ ಅಥವಾ ಮಾವನ ಪ್ರಭಾವ ಬಳಸಿ ಟಿಕೆಟ್ ಪಡೆದಿಲ್ಲ. ಪಕ್ಷ ಸಂಘಟನೆ, ಸಮಾಜ ಸೇವೆ, ರಾಜಕೀಯದಲ್ಲಿ ನನ್ನ ಕೆಲಸ ನೋಡಿ ಪಕ್ಷದ ಮುಖಂಡರು ನನಗೆ ಈ ಅವಕಾಶ ಕೊಟ್ಟಿದ್ದಾರೆ. ಜನರು ನಮ್ಮ ಸಾಧನೆ, ಜನ ಸೇವೆ ನೋಡಿ ಬೆಂಬಲಿಸುತ್ತಾರೆ ಎನ್ನುವ ವಿಶ್ವಾಸ ನನಗಿದೆ.

ಪ್ರಶ್ನೆ: ಕ್ಷೇತ್ರದಲ್ಲಿ ಹಿರಿಯರು ಸೇರಿದಂತೆ ಹಲವರು ಆಕಾಂಕ್ಷಿಗಳಿದ್ದರೂ ಮೃಣಾಲ್‌ ಹೆಬ್ಬಾಳಕರಂತಹ ಯುವಕರಿಗೆ ಹೈಕಮಾಂಡ್‌ ಟಿಕೆಟ್‌ ಕೊಟ್ಟಿದ್ದೇಕೆ?
ಉ: ಈಗಾಗಲೆ ಹೇಳಿದಂತೆ ನಾನು ವಿದ್ಯಾರ್ಥಿಯಾದಾಗಿನಿಂದಲೂ ಎನ್ಎಸ್‌ಯುಐ ಮೂಲಕ ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತ ಬಂದಿದ್ದೇನೆ. ನಂತರ ಕೂಡ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಪಕ್ಷ ಕಟ್ಟುವಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದೇನೆ. ಜತೆಗೆ ಕಾಂಗ್ರೆಸ್ ಯುವ ಘಟಕದ ಜಿಲ್ಲಾ ಉಪಾಧ್ಯಕ್ಷನಾಗಿ ಸಹ ಇಡೀ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ. ಪಕ್ಷದ ಹಿರಿಯರೆಲ್ಲ ಸೇರಿಯೇ, ಇಂತಹ ಒಬ್ಬ ಕ್ರಿಯಾಶೀಲ ಯುವಕನಿಗೆ ಟಿಕೆಟ್ ಕೊಡೋಣ ಎಂದು ತೀರ್ಮಾನಿಸಿ ನನ್ನನ್ನು ಆಯ್ಕೆ ಮಾಡಿದ್ದಾರೆ.

ಪ್ರಶ್ನೆ: ಪ್ರಚಾರದಲ್ಲಿ ಜನರಿಗೆ ನೀವು ಏನನ್ನು ಭರವಸೆಗಳನ್ನು ಮೂಡಿಸುತ್ತಿದ್ದಿರಿ? ಯಾವ ವಿಷಯಗಳನ್ನು ಪ್ರಚಾರದಲ್ಲಿ ಬಳಸಿಕೊಳ್ಳುತ್ತಿದ್ದಿರಿ?
ಉ: ಪ್ರಚಾರದಲ್ಲಿ ನಾವು ಯಾವುದೇ ಈಡೇರಿಸಲಾಗದ, ಜನರನ್ನು ಮರಳು ಮಾಡುವ ಭರವಸೆಗಳನ್ನು ನೀಡುತ್ತಿಲ್ಲ. ಇರುವ ವಾಸ್ತವಾಂಶವನ್ನು ಹೇಳುತ್ತಿದ್ದೇವೆ. ಹಿಂದಿನ ಸಂಸದರು ಯಾವುದೇ ರೀತಿಯ ಕೆಲಸ ಮಾಡದೆ ಕ್ಷೇತ್ರ ಹೇಗೆ ನಿರ್ಲಕ್ಷಿತವಾಗಿದೆ, ಅಭಿವೃದ್ಧಿಯಿಂದ ವಂಚಿತವಾಗಿದೆ ಎನ್ನುವುದನ್ನು ಹೇಳುತ್ತಿದ್ದೇನೆ. ಯುವಕರಿಗೆ ಉದ್ಯೋಗ ಸೃಷ್ಟಿ, ಕೃಷಿ, ಶಿಕ್ಷಣ, ಆರೋಗ್ಯ, ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೆ ನನಗಿರುವ ಕನಸುಗಳನ್ನು ಜನರೆದುರು ಬಿಚ್ಚಿಡುತ್ತಿದ್ದೇನೆ. ತನ್ಮೂಲಕ ಜನರಿಗೆ ನನ್ನ ಮೇಲೆ ವಿಶ್ವಾಸ ಮೂಡುವಂತೆ ಮಾಡುತ್ತಿದ್ದೇನೆ.

ಪ್ರಶ್ನೆ: ಬೆಳಗಾವಿ ಕ್ಷೇತ್ರದ ಅಭಿವೃದ್ಧಿಗೆ ತಮ್ಮ ರೂಪುರೇಷೆಗಳೇನು? ಕ್ಷೇತ್ರದ ಜನರು ನಿಮ್ಮಿಂದ ಏನನ್ನು ನಿರೀಕ್ಷೆ ಮಾಡಬಹುದು?
ಉ: ನಾನು ಹಲವಾರು ಕನಸುಗಳನ್ನು ಇಟ್ಟುಕೊಂಡು ಈ ಬಾರಿ ಚುನಾವಣೆ ಕಣಕ್ಕಿಳಿದಿದ್ದೇನೆ. ಈ ಜಿಲ್ಲೆಯ ಯುವಕರಿಗೆ ಉದ್ಯೋಗ ನೀಡುವ, ಅವರನ್ನು ಉದ್ಯಮಿಗಳನ್ನಾಗಿ ಮಾಡುವ ದೊಡ್ಡ ಕನಸನ್ನು ಹಾಕಿಕೊಂಡಿದ್ದೇನೆ. ಇಲ್ಲಿನ ಉದ್ಯಮಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಜತೆಗೆ, ಜಿಲ್ಲೆಗೆ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹರಿದುಬರುವಂತೆ ಮಾಡುವುದು. ಸಕಲ ಸೌಲಭ್ಯವನ್ನೊಳಗೊಂಡ ಲ್ಯಾಂಡ್ ಬ್ಯಾಂಕ್ ಸಿದ್ಧಪಡಿಸುವ ಮೂಲಕ (ಪ್ಲಗ್‌ ಆ್ಯಂಡ್ ಪ್ಲೇ ಫೆಸಿಲಿಟಿ) ಬೃಹತ್ ಉದ್ಯಮಗಳನ್ನು ಆಕರ್ಷಿಸುವುದು ನನ್ನ ಕನಸು. ಹುಬ್ಬಳ್ಳಿ - ಬೆಳಗಾವಿ ಮಾರ್ಗದಲ್ಲಿ ಇಂಡಸ್ಟ್ರಿಯಲ್ ಕಾರಿಡಾರ್ ಸ್ಥಾಪನೆ, ಜಿಲ್ಲೆಯಲ್ಲಿ ಕೌಶಾಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ), ಆಲ್ ಇಂಡಿಯಾ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಎಐಐಎಂಎಸ್‌) ಸೇರಿದಂತೆ ಪ್ರಮುಖ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳ ಸ್ಥಾಪನೆಗೆ ಯತ್ನ, ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ, ಮೆಡಿಕಲ್ ಟೂರಿಸಂ, ಜಿಲ್ಲೆಗೆ ಜನ ಮತ್ತು ಸರಕು ಸಾಗಾಣಿಕೆ ರೈಲ್ವೆ ಸಂಪರ್ಕ ಅಭಿವೃದ್ಧಿಪಡಿಸುವುದು, ಬೆಳಗಾವಿ - ಧಾರವಾಡ ರೈಲ್ವೆ ಮಾರ್ಗ ಕಾಮಗಾರಿಗೆ ವೇಗ ನೀಡಿ, ಆದಷ್ಟು ಶೀಘ್ರ ಕಾರ್ಯಾರಂಭಿಸುವಂತೆ ಮಾಡುವುದು, ರೈತರ ಉತ್ಪನ್ನಗಳನ್ನು ಸಂಗ್ರಹಿಸಲು ಕೋಲ್ಡ್ ಸ್ಟೋರೇಜ್ ನಿರ್ಮಾಣ, ರೇರಾ ಪ್ರಾದೇಶಿಕ ಕಚೇರಿ ಸ್ಥಾಪಿಸುವುದು, ಪ್ರತಿ ತಾಲೂಕಿನಲ್ಲಿ ಪ್ರತಿ ವರ್ಷ ಬೃಹತ್ ಉದ್ಯೋಗ ಮೇಳ ಮತ್ತು ಕೃಷಿ ಮೇಳಗಳನ್ನು ಸಂಘಟಿಸುವುದು, ಹೀಗೆ ಹಲವಾರು ಕನಸುಗಳನ್ನು ಇಟ್ಟುಕೊಂಡಿದ್ದೇನೆ. ಒಟ್ಟಾರೆ ಜಿಲ್ಲೆಯ ಜನರಿಗೆ ನೆಮ್ಮದಿಯ ಬದುಕು ಕಟ್ಟಿಕೊಡುವುದು ನನ್ನ ಮೊದಲ ಆದ್ಯತೆಯಾಗಲಿದೆ.

ಚುನಾವಣಾ ಪ್ರಚಾರವನ್ನು ಅರ್ಧಕ್ಕೇ ಮೊಟಕುಗೊಳಿಸಿದ ನಟ ದರ್ಶನ್: ಯಾಕೆ ಗೊತ್ತಾ?

ಪ್ರಶ್ನೆ: ಯುವಕರಾಗಿರುವ ತಾವು ಪಕ್ಷದ ಕಾರ್ಯಕರ್ತರು ಮತ್ತು ಹಿರಿಯರನ್ನು ಹೇಗೆ ಪರಿಗಣನೆ ಮಾಡುತ್ತೀರಿ?
ಉ: ನಾನು ಮೊದಲಿನಿಂದಲೂ ಅತ್ಯಂತ ಮೃದು ಸ್ವಭಾವದ ಹುಡುಗ. ಎಲ್ಲರನ್ನೂ ಗೌರವಪೂರ್ವಕವಾಗಿ, ಜತೆಗೆ ಕರೆದುಕೊಂಡು ಹೋಗುವ ಸ್ವಭಾವ ನನ್ನದು. ಜೊತೆಗೆ, ಹಿರಿಯರನ್ನು ಗೌರವಿಸುವುದು ನಮ್ಮ ಮನೆತನದಲ್ಲಿ ಬೆಳೆದುಬಂದಿರುವ ಸಂಸ್ಕೃತಿ. ನನ್ನ ತಾಯಿಯವರು, ಮನೆಯ ಹಿರಿಯರು ನನಗೆ ಅಂತಹ ಸಂಸ್ಕೃತಿಯನ್ನು ಕಲಿಸಿಕೊಟ್ಟಿದ್ದಾರೆ. ಸ್ಥಾನ ಮಾನ ಮುಖ್ಯವಲ್ಲ, ಮನುಷ್ಯತ್ವ ಮುಖ್ಯ ಎನ್ನುವುದರಲ್ಲಿ ನಂಬಿಕೆ ಹೊಂದಿರುವವನು ನಾನು. ದೊಡ್ಡವರು, ಸಣ್ಣವರು ಎನ್ನದೆ ಎಲ್ಲರಿಗೂ ಸಮಾನ ಗೌರವ ನೀಡಿ, ಎಲ್ಲರ ಆಶಿರ್ವಾದದೊಂದಿಗೆ, ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುತ್ತೇನೆ.

click me!