ತೀವ್ರ ವಿವಾದ ಹಾಗೂ ವಿರೋಧಕ್ಕೆ ಕಾರಣವಾಗಿದ್ದ, ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಗೋ ಹತ್ಯೆ ನಿಷೇಧ ಕಾಯ್ದೆ ಹಾಗೂ ಮತಾಂತರ ನಿಷೇಧ ಕಾಯ್ದೆಗಳ ತಿದ್ದುಪಡಿ ಅಥವಾ ಹಿಂಪಡೆಯುವ ವಿಧೇಯಕವನ್ನು ಸರ್ಕಾರ ಹಾಲಿ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇಲ್ಲ ಎಂದು ತಿಳಿದು ಬಂದಿದೆ.
ಬೆಂಗಳೂರು (ಜು.05): ತೀವ್ರ ವಿವಾದ ಹಾಗೂ ವಿರೋಧಕ್ಕೆ ಕಾರಣವಾಗಿದ್ದ, ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಗೋ ಹತ್ಯೆ ನಿಷೇಧ ಕಾಯ್ದೆ ಹಾಗೂ ಮತಾಂತರ ನಿಷೇಧ ಕಾಯ್ದೆಗಳ ತಿದ್ದುಪಡಿ ಅಥವಾ ಹಿಂಪಡೆಯುವ ವಿಧೇಯಕವನ್ನು ಸರ್ಕಾರ ಹಾಲಿ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇಲ್ಲ ಎಂದು ತಿಳಿದು ಬಂದಿದೆ. ಸರ್ಕಾರ ಅಸ್ತಿತ್ವಕ್ಕೆ ಬಂದ ಆರಂಭದಲ್ಲಿ ಈ ಎರಡು ಕಾಯ್ದೆಗಳನ್ನು ತಿದ್ದುಪಡಿ ಅಥವಾ ಹಿಂಪಡೆಯುವ ಸಂಬಂಧ ಅಧಿವೇಶನದಲ್ಲಿ ಮಸೂದೆ ಮಂಡಿಸುವುದಾಗಿ ಕಾನೂನು ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದರು. ಆದರೆ, ಪ್ರಸಕ್ತ ಅಧಿವೇಶನದಲ್ಲಿ ಈ ಕಾಯ್ದೆ ಮಂಡಿಸುವ ಬಗ್ಗೆ ಸರ್ಕಾರ ಈವರೆಗೆ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಗೊತ್ತಾಗಿದೆ.
ಪ್ರಮುಖವಾಗಿ ಈ ಎರಡು ಕಾಯ್ದೆಗಳ ಬಗ್ಗೆ ಪರ-ವಿರೋಧ ಅಭಿಪ್ರಾಯ ಇದೆ. ಸೂಕ್ಷ್ಮವಾಗಿರುವ ಇಂತಹ ಕಾಯ್ದೆಯನ್ನು ಏಕಾಏಕಿ ತಿದ್ದುಪಡಿ ಮಾಡುವುದರ ಬದಲು ಅಥವಾ ಹಿಂಪಡೆಯುವ ಬದಲು ಕಾನೂನು ತಜ್ಞರು, ವಿವಿಧ ಸಮುದಾಯದ ಮುಖಂಡರ ಅಭಿಪ್ರಾಯ ಪಡೆದು ನಂತರ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕೆಂಬ ಉದ್ದೇಶದಿಂದ ಈ ಅಧಿವೇಶನದಲ್ಲಿ ಮಂಡಿಸದಿರುವ ಚಿಂತನೆ ನಡೆಸಲಾಗಿದೆ. ಜತೆಗೆ ಶುಕ್ರವಾರ ಬಜೆಟ್ ಮಂಡನೆ ನಂತರ ಈ ಬಗ್ಗೆ ವ್ಯಾಪಕವಾಗಿ ಚರ್ಚೆ ನಡೆಯಬೇಕಾಗಿದೆ. ಇಂತಹ ಸಂದರ್ಭದಲ್ಲಿ ವಿವಾದಾತ್ಮಕ ಕಾಯ್ದೆಗಳ ಬಗ್ಗೆ ಸದನದಲ್ಲಿ ಚರ್ಚೆ ಶುರುವಾದರೆ ಉಳಿದ ಕಲಾಪಕ್ಕೆ ಅಡ್ಡಿಯಾಗಬಹುದು ಎಂಬ ಕಾರಣದಿಂದ ಸರ್ಕಾರ ಇಂತಹ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
ಗ್ಯಾರಂಟಿಗೆ ಬಿಜೆಪಿ ಹೋರಾಟ: ಬಿಎಸ್‌ವೈ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ
ಪರಿಷತ್ ಬಲಾಬಲ ಕಾರಣವಲ್ಲ: ವಿಧಾನಸಭೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಸಂಖ್ಯಾಬಲ ಇದೆ. ಆದರೆ ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್‌ಗೆ ಸಂಖ್ಯಾಬಲ ಇಲ್ಲ. ಹೀಗಾಗಿ ಕೆಳಮನೆಯಲ್ಲಿ ತಿದ್ದುಪಡಿ ಅಥವಾ ಹಿಂಪಡೆಯಲು ನಿರ್ಧರಿಸಿದರೂ ಸುಲಭವಾಗಿ ಅನುಮತಿ ಪಡೆಯಬಹುದು. ವಿಧಾನ ಪರಿಷತ್ತಿನಲ್ಲಿ ವಿಧೇಯಕ ಬಿದ್ದು ಹೋದರೂ ಮತ್ತೊಮ್ಮೆ ಕೆಳಮನೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲು ಸರ್ಕಾರಕ್ಕೆ ಅವಕಾಶವಿದೆ. ಆದರೆ ಅಂತಹ ಪರಿಸ್ಥಿತಿಗೆ ಹೋಗುವುದು ಬೇಡ ಎಂಬುದು ಹಿರಿಯ ನಾಯಕರ ಅಭಿಪ್ರಾಯವಾಗಿದೆ. ಒಟ್ಟಾರೆ ಹಾಲಿ ಅಧಿವೇಶನದಲ್ಲಿ ವಿವಾದಾತ್ಮಕ ಈ ಎರಡು ಕಾಯ್ದೆಗಳನ್ನು ಮಂಡಿಸದೇ ಇರುವ ನಿರ್ಧಾರವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ ಎಂದು ಮೂಲಗಳು ಹೇಳಿವೆ.
ರಾಜ್ಯ ಸರ್ಕಾರದ ವಿರುದ್ಧ ವಿವಿಧ ಮಠಾಧೀಶರ ಆಕ್ರೋಶ: ಕಾಂಗ್ರೆಸ್ ಸರ್ಕಾರದಿಂದ ಗೋಹತ್ಯೆ ಹಾಗೂ ಮತಾಂತರ ನಿಷೇಧ ಕಾಯ್ದೆಗಳನ್ನು ಹಿಂಪಡೆಯುವ ವಿಚಾರದಲ್ಲಿ ವ್ಯಗ್ರರಾಗಿರುವ ಕಲಬುರಗಿ ಜಿಲ್ಲೆಯ ವಿವಿಧ ಮಠಗಳ ಮಠಾಧೀಶರು ಈ ಕಾಯ್ದೆಗಳನ್ನು ವಾಪಸು ತೆಗೆದುಕೊಂಡರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಠಾಧೀಶರು, ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆಯಬಾರದು, ಗೋಹತ್ಯೆ ನಿಷೇಧ ಕಾಯ್ದೆ ವಾಪಾಸು ಪಡೆಯುವುದು ಸುಸಂಸ್ಕೃತ ಸಮಾಜಕ್ಕೆ ಅಪಮಾನ ಮಾಡಿದ ಹಾಗೆ, ಆದಾಗ್ಯೂ ವಾಪಸ್ ಪಡೆದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಬಿಜೆಪಿ 605 ಭರವಸೆಗಳಲ್ಲಿ ಎಷ್ಟು ಈಡೇರಿಸಿದೆ?: ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪ್ರಶ್ನೆ
ಶಾಂತಲಿಂಗೇಶ್ವರ ಸಂಸ್ಥಾನ ಮಠದ ಸಾಂತಲಿಂಗೇಶ್ವರ ಶರೀಗಳು, ಸುಗೆಶ್ವರ ಸಂಸ್ಥಾನ ಮಠ ವೀರಭದ್ರ ಶ್ರೀಗಳು, ಮಾಶಾಳ ಸಿದ್ಧಲಿಂಗೇಶ್ವರ ಸಂಸ್ಥಾನ ಹಿರೇಮಠದ ಕೇದಾರ ಶ್ರೀಗಳು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆದಲ್ಲಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ಶುರು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಗೋ ಹತ್ಯೆ ಮತ್ತು ಮತಾಂತರ ನಿಷೇಧ ಕಾಯ್ದೆಯನ್ನು ಬಿಜೆಪಿ ಆಡಳಿತದಲ್ಲಿ ಜಾರಿಗೆ ತಂದಿದ್ದು, ರಾಜ್ಯದಲ್ಲಿರುವ ಕಾಂಗ್ರೆಸ್ ಬಂದಾಕ್ಷಣ ಈ ಕಾನೂನು ತೆಗೆದುಹಾಕುತ್ತಿರೋದಕ್ಕೆ ಮಠಾಧೀಶರೆಲ್ಲರೂ ತೀವ್ರ ವಿರೋಧಿಸುವುದಾಗಿ ಹೇಳಿದರು.