ಕಂಬಳದ ಬಳಿಕ ಟ್ರ್ಯಾಕ್‌ನಲ್ಲೂ ಓಡಿ ಗೆದ್ದ ಕರಾವಳಿಯ ಸಾಧಕ!| ಕಂಬಳದಲ್ಲಿ ಓಡುತ್ತಿದ್ದ ‘ಹಾರುವ ಬಂಟ’ ಆನಂದ ಶೆಟ್ಟಿ| 100, 200 ಮೀ. ಓಟದಲ್ಲಿ ರಾಷ್ಟ್ರೀಯ, ಏಷ್ಯಾಡ್ ಚಿನ್ನ
ಆತ್ಮಭೂಷಣ್
ಮಂಗಳೂರು[ಫೆ.19]: ಕಂಬಳದ ‘ಉಸೇನ್ ಬೋಲ್ಟ್’ ಶ್ರೀನಿವಾಸಗೌಡ ಸಾಧನೆ ಬಗ್ಗೆ ಸಾಕಷ್ಟುಚರ್ಚೆಯಾಗುತ್ತಿದೆ. ಕಂಬಳ ಕರೆಯಲ್ಲಿ ಓಡಿದವರು ಟ್ರ್ಯಾಕ್‌ನಲ್ಲಿ ಓಡುವುದು ಕಷ್ಟಸಾಧ್ಯ ಎಂಬ ಸಾರ್ವತ್ರಿಕ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆದರೆ, ಇದಕ್ಕೆ ಅಪವಾದ ಎಂಬಂತೆ ಕಂಬಳ ಗದ್ದೆಯಲ್ಲಿ ಓಡಿ ಬೆಳೆದು, ಸಿಂಥೆಟಿಕ್ ಟ್ರ್ಯಾಕ್‌ನಲ್ಲಿ ದೇಶಾದ್ಯಂತ ಹೆಸರು ಮಾಡಿದ ದಕ್ಷಿಣ ಕನ್ನಡ ಜಿಲ್ಲೆಯ ‘ಹಾರುವ ಬಂಟ’ (ಫ್ಲೈಯಿಂಗ್ ಬಂಟ್) ದಿ.ಆನಂದ ಶೆಟ್ಟಿಅವರ ಸಾಧನೆಯ ಕುರಿತಾದ ವರದಿ ಇಲ್ಲಿದೆ.
80ರ ದಶಕದಲ್ಲಿ ರಾಷ್ಟ್ರೀಯ ಅಥ್ಲೆಟಿಕ್ಸ್‌ನ 100, ಮತ್ತು 200 ಮೀಟರ್ ಓಟದಲ್ಲಿ ಸತತ 7 ವರ್ಷ ಚಾಂಪಿಯನ್, ಕಾಠ್ಮಂಡುವಿನಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಸೇರಿ ಅನೇಕ ಪ್ರಶಸ್ತಿಗಳಿಗೆ ಪಾತ್ರರಾಗಿದ್ದ ಆನಂದ ಶೆಟ್ಟಿಕರಾವಳಿ ಕರ್ನಾಟಕದ ಸಾಂಪ್ರದಾಯಿಕ ಕ್ರೀಡೆ ಕಂಬಳದ ಕೂಸು. ಬಾಲ್ಯದಿಂದಲೇ ಉತ್ತಮ ಅಥ್ಲೀಟ್ ಆಗಿದ್ದ ಆನಂದ ಶೆಟ್ಟಿಕಂಬಳ ಗದ್ದೆಯಿದ್ದೇ ಬೆಳೆದವರು. ಆದರೆ, ದುರ್ದೈವವಶಾತ್ ಈ ವಿಶಿಷ್ಟಅನುಭವ ಹಂಚಿಕೊಳ್ಳಲು ಅವರೀಗ ನಮ್ಮೊಂದಿಗಿಲ್ಲ.
ಕಂಬಳ ಗದ್ದೆಯಲ್ಲಿ ಮತ್ತೊಬ್ಬ ‘ಬೋಲ್ಟ್’: ಶ್ರೀನಿವಾಸರ ದಾಖಲೆ ಮುರಿದ ನಿಶಾಂತ್ ಶೆಟ್ಟಿ!
ಆನಂದ ಶೆಟ್ಟಿಮೂಲತಃ ದ.ಕ. ಜಿಲ್ಲೆಯ ಬಂಟ್ವಾಳದ ಮಾಣಿಯವರು. ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದವರು. ಶಾಲಾ ದಿನಗಳಲ್ಲೇ ಕಬಡ್ಡಿ ಹಾಗೂ 100 ಮೀಟರ್ ಓಟದಲ್ಲಿ ಆನಂದ್ ಶೆಟ್ಟಿಅವರದ್ದು ಎತ್ತಿದ ಕೈ. ಮಂಗಳೂರಿನಲ್ಲಿ ನಡೆದ ದಸರಾ ಕ್ರೀಡಾಕೂಟದಲ್ಲಿ ಮಿಂಚಿ ಎಲ್ಲರ ಗಮನ ಸೆಳೆದಿದ್ದರು. ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದ ನರೇಂದ್ರ ಕುಮಾರ್ ಎಂಬವರು ಆನಂದ ಶೆಟ್ಟಿಅವರಲ್ಲಿದ್ದ ಕ್ರೀಡಾಸಕ್ತಿ ಗುರುತಿಸಿದರೆ, ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅದಕ್ಕೆ ನೀರೆರೆದು ಪ್ರೋತ್ಸಾಹ ನೀಡಿದ್ದರು.
ಕೋಣಗಳ ಜತೆ ಆತ್ಮೀಯತೆ: ಬಾಲ್ಯದಿಂದಲೇ ಕಂಬಳ, ಕೋಣಗಳ ಕುರಿತು ವಿಶೇಷ ಪ್ರೀತಿ ಬೆಳೆಸಿಕೊಂಡಿದ್ದ ಆನಂದ ಶೆಟ್ಟಿಅವರು ಹೈಸ್ಕೂಲ್ ಶಿಕ್ಷಣ ಪೂರೈಸಿದ ಬಳಿಕ ಕಂಬಳದಲ್ಲಿ ಹೆಚ್ಚು ಸಕ್ರಿಯವಾಗಿದ್ದರು. ಕರಾವಳಿಯಲ್ಲಿ ಕಂಬಳ ಋುತು ಶುರುವಾಗುವುದು ಅಕ್ಟೋಬರ್‌ನಲ್ಲಿ. ಅಲ್ಲಿಂದ ಮಾಚ್‌ರ್ ವರೆಗೆ ಕಂಬಳದ್ದೇ ಹವಾ. ಕಂಬಳ ಸೀಸನ್ ಆರಂಭಕ್ಕೂ ಮುನ್ನ ಒಂದು ತಿಂಗಳು ಕೋಣಗಳಿಗೆ ಕಂಬಳ ಗದ್ದೆಯಲ್ಲಿ ತರಬೇತಿ ನೀಡುತ್ತಾರೆ. ಅಂಥ ತರಬೇತಿಯಲ್ಲಿ ಆನಂದ ಶೆಟ್ಟಿಯಾವತ್ತೂ ಸಕ್ರಿಯವಾಗಿರುತ್ತಿದ್ದರು.
1981ರ ವೇಳೆಗೆ ಅದೇ ವರ್ಷ ಅಂದರೆ 100, 200 ಮೀಟರ್ ಓಟದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವ ಒಂದು ವರ್ಷದ ಮೊದಲು ಬೋಳಂತೂರು ಕಂಬಳ ಗದ್ದೆಯಲ್ಲಿ ಆನಂದ ಶೆಟ್ಟಿಸಕ್ರಿಯರಾಗಿದ್ದರು. ತಮ್ಮ ಮಾವ ಮಾಣಿ ಸಂಜೀವ ಶೆಟ್ಟಿಅವರ ಕೋಣಗಳನ್ನು ತರಬೇತಿಗಾಗಿ ಓಡಿಸುತ್ತಿದ್ದರು. ಹೈಸ್ಕೂಲ್‌ನಲ್ಲೇ ಚುರುಕಿನ ಓಟಗಾರನಾಗಿದ್ದ ಆನಂದ ಶೆಟ್ಟಿಪ್ರಾಕ್ಟೀಸ್ ಟ್ರ್ಯಾಕ್‌ನಲ್ಲೂ ಕೋಣವನ್ನು ವೇಗವಾಗಿ ಓಡಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡುತ್ತಿದ್ದರು. ಕಂಬಳದಲ್ಲಿ ಅತೀವ ಆಸಕ್ತಿ ಇದ್ದುದರಿಂದ ಕಾರಣಕ್ಕೆ ಅವರೇ ಮುಂದೆ ನಿಂತು ಕಂಬಳಕ್ಕೆ ಕೋಣಗಳನ್ನು ಸಿದ್ಧಪಡಿಸುತ್ತಿದ್ದರು ಎನ್ನುತ್ತಾರೆ ಶೆಟ್ಟರ ಸಹಪಾಠಿ ವಿಜಯ ಕುಮಾರ್ ಕಂಗಿನಮನೆ. ಜತೆಗೆ, ಕೆಲ ಕಂಬಳಗಳಲ್ಲೂ ಆನಂದ ಶೆಟ್ಟಿಅವರು ಕೋಣಗಳನ್ನು ಓಡಿಸಿ ಸೈ ಎನಿಸಿದ್ದರು.
ವಿಶ್ವಖ್ಯಾತ ಉಸೇನ್ ಬೋಲ್ಟ್‌ಗಿಂತ ಸ್ಪೀಡಾಗಿ ಓಡಿದ ತುಳುನಾಡಿನ ಕಂಬಳವೀರ!
ಕಂಬಳ ಗದ್ದೆಯಿಂದ ಟ್ರ್ಯಾಕ್‌ಗೆ: ಕಂಬಳದ ಮೇಲೆ ಆಸಕ್ತಿ ಇದ್ದರೂ ಆನಂದ ಶೆಟ್ಟಿಅವರಿಗೆ ಹೆಸರು ತಂದುಕೊಟ್ಟಿದ್ದು ಮಾತ್ರ ಸಿಂಥೆಟಿಕ್ ಟ್ರ್ಯಾಕ್‌ನ ಓಟ. ನಿಟ್ಟೆಯ ಲೆಮಿನಾ ಸಂಸ್ಥೆಯ ಕ್ರೀಡಾಳುವಾಗಿ 100 ಮೀಟರ್ ಓಟದಲ್ಲಿ ವಿಶೇಷ ಸಾಧನೆ ತೋರಿದ್ದ ಆನಂದ ಶೆಟ್ಟಿಬಳಿಕ ದೇಶದ ಪ್ರತಿಷ್ಠಿತ ಟಾಟಾದ ಟೆಲ್ಕೋ ಕಂಪನಿಗೆ ಸೇರಿದರು. ಅಲ್ಲಿ ಕ್ರೀಡೆಯಲ್ಲಿ ಕಂಪನಿಯನ್ನು ಪ್ರತಿನಿಧಿಸುತ್ತಿದ್ದ ಅವರು 1982ರಿಂದ 89ರ ವರೆಗೆ 100 ಮೀಟರ್ ಓಟದಲ್ಲಿ ಸತತ 7 ವರ್ಷಗಳ ಕಾಲ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಕಂಬಳಗದ್ದೆಯಲ್ಲಿ ಬೆತ್ತ ಹಿಡಿದು ಕೋಣಗಳನ್ನು ಓಡಿಸಿದ ಹುಡುಗ ಅಂತಾರಾಷ್ಟ್ರೀಯಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವ ಮಟ್ಟಕ್ಕೆ ಬೆಳೆದದ್ದು, ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದು ದೇಶಕ್ಕೆ ಕೀರ್ತಿ ತಂದದ್ದೆಲ್ಲ ಇತಿಹಾಸ.
ಕಂಬಳ ಗದ್ದೆಗೆ ಮರಳಲು ಅಡ್ಡಿ: ಆನಂದ ಶೆಟ್ಟಿಅವರಿಗೆ ಸಿಂಥೆಟಿಕ್ ಟ್ರ್ಯಾಕ್ ಜೊತೆಯಲ್ಲೇ ಕಂಬಳದಲ್ಲೂ ಸಾಧನೆ ಮಾಡಬೇಕೆಂಬ ತುಡಿತ ಇತ್ತು. ಆದರೆ ಒಮ್ಮೆ ಟ್ರ್ಯಾಕ್‌ಗಿಳಿದ ಮೇಲೆ ಕಂಬಳ ಗದ್ದೆಗೆ ಮರಳಿದರೆ ಎಲ್ಲಿ ಟ್ರ್ಯಾಕ್ ಮೇಲಿನ ಹಿಡಿತ ತಪ್ಪುತ್ತದೋ ಎಂಬ ಭೀತಿ ಅವರ ಕ್ರೀಡಾ ತರಬೇತುದಾರರಿಗಿತ್ತು. ಅಲ್ಲದೆ, ಕಂಬಳ ಗದ್ದೆಯಲ್ಲಿ ಓಡುವಾಗ ಅಪ್ಪಿತಪ್ಪಿ ಮುಗ್ಗರಿಸಿ ಬಿದ್ದರೆ, ಮತ್ತೆ ಟ್ರ್ಯಾಕ್‌ನಲ್ಲಿ ಓಡಿ ನಿರೀಕ್ಷಿತ ಸಾಧನೆ ಮಾಡಲು ಸಾಧ್ಯವಾಗದಿದ್ದರೆ ಎಂಬ ಆತಂಕ ಕೂಡ ಅವರನ್ನು ಕಾಡುತ್ತಿತ್ತು. ಇದೇ ಕಾರಣಕ್ಕೆ ಆನಂದ ಶೆಟ್ಟಿಗೆ ಮನಸ್ಸಿದ್ದರೂ ಕ್ರೀಡಾ ತರಬೇತುದಾರರು ಅವರನ್ನು ಕಂಬಳ ಗದ್ದೆಗೆ ಇಳಿಯಲು ಬಿಡಲಿಲ್ಲ(ಕ್ರೀಡಾ ಜೀವನದ ಉತ್ತುಂಗದ ಅವಧಿಯಲ್ಲಿ) ಎನ್ನುತ್ತಾರೆ ಅವರ ಒಡನಾಡಿ ವಿಜಯ ಕುಮಾರ್ ಕಂಗಿನಮನೆ.
ವಿಜಯ ಕುಮಾರ್ ಅವರು ಹೈಸ್ಕೂಲ್ ದಿನಗಳಿಂದಲೂ ಆನಂದ ಶೆಟ್ಟಿಅವರ ಬೆಂಚ್‌ಮೇಟ್. ನಂತರ ಸಹಪಾಠಿಯಂತೆ ಒಡನಾಡಿಯಾಗಿದ್ದವರು. ಆನಂದ ಶೆಟ್ಟಿಅವರು ಟ್ರ್ಯಾಕ್ ಹಾದಿ ತುಳಿದಾಗ, ವಿಜಯ ಕುಮಾರ್ ಮಾತ್ರ ಕಂಬಳದಲ್ಲೇ ಮುಂದುವರಿದರು. ಈಗ ವಿಜಯ ಕುಮಾರ್ 30 ವರ್ಷಗಳ ಅನುಭವಿ ಕಂಬಳ ಓಟಗಾರ, ಈಗ ಕಂಬಳಗಳ ತೀರ್ಪುಗಾರರು. ಆದರೆ, ಆನಂದ ಶೆಟ್ಟಿಅಪಘಾತದಲ್ಲಿ 2013ರಲ್ಲೇ ಕಾಲವಾಗಿದ್ದಾರೆ.
ವಿಶ್ವಖ್ಯಾತ ಉಸೇನ್ ಬೋಲ್ಟ್‌ಗಿಂತ ಸ್ಪೀಡಾಗಿ ಓಡಿದ ತುಳುನಾಡಿನ ಕಂಬಳವೀರ!