ನೂರಾರು ಅಡಿ ಕೊರೆದರು ನೀರು ಸಿಗುತ್ತಿಲ್ಲ. ಜನರ ನೀರಿನ ದಾಹ ತೀರಿಸಲು ಕೂಡ ಜೀವಜಲವಿಲ್ಲ. ಇದು ಇಲ್ಲಿನ ಪರಿಸ್ಥಿತಿ.
ಹೂವಿನಹಡಗಲಿ : ಬರಗಾಲದಲ್ಲಿ ಜನರಿಗೆ ಕುಡಿಯುವ ನೀರು ಪೂರೈಕೆಗಾಗಿ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಾಡಳಿತ ಹರಸಾಹಸ ಪಡುತ್ತಿದೆ. ಟಾಸ್ಕ್ ಫೋರ್ಸ್ ಸಮಿತಿ ನಿರ್ಣಯದಂತೆ ತಾಲೂಕಿನ 68 ಕಡೆಗಳಲ್ಲಿ ಜನವರಿಂದ ಇಲ್ಲಿಯವರೆಗೆ ಕೊಳವೆ ಬಾವಿ ಕೊರೆಯಲಾಗಿದೆ. ಆದರೂ ನೀರಿನ ಬವಣೆ ಮಾತ್ರ ನೀಗಿಲ್ಲ.
ಕೆಲ ಹಳ್ಳಿಗಳಲ್ಲಿ ಜನರು ಕೂಲಿ ಬಿಟ್ಟು ನೀರಿಗಾಗಿ ಸರದಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ. ಈಗಾಗಲೇ ತಾಲೂಕಿನ 16 ಹಳ್ಳಿಗಳನ್ನು ಸಮಸ್ಯಾತ್ಮಕ ಹಳ್ಳಿಗಳೆಂದು ಗುರುತಿಸಲಾಗಿದ್ದು, ಇದರಲ್ಲಿ 11 ಹಳ್ಳಿಗಳಿಗೆ 17 ರೈತರ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಪಡೆದು ನೀರು ಪೂರೈಕೆ ಮಾಡಲಾಗುತ್ತಿದೆ. ತಾಲೂಕಿನ ಇಟಿಗಿ ಹೋಬಳಿ ಭಾಗದ ಕೆಂಚಮ್ಮನಹಳ್ಳಿ, ಎಂ.ಕಲ್ಲಳ್ಳಿ, ಹಿರೇಮಲ್ಲನಕೆರೆ, ಮಹಾಜನದಹಳ್ಳಿ, ತಳಕಲ್ಲು ಹಾಗೂ ಹಿರೇಹಡಗಲಿ ಹೋಬಳಿ ಕೇಂದ್ರ ವ್ಯಾಪ್ತಿಯ ಕೆ.ವೀರಾಪುರ, ದಾಸನಹಳ್ಳಿ, ನಡುವಿನಹಳ್ಳಿ ಹಾಗೂ ಹೂವಿನಹಡಗಲಿ ಹೋಬಳಿಯ ದಾಸರಹಳ್ಳಿ ತಾಂಡಾ, ಕಾಲ್ವಿ ತಾಂಡಾ, ಅಂಕ್ಲಿ ಸೇರಿದಂತೆ ಇತರೆ ಕಡೆಗಳಲ್ಲಿ ಒಟ್ಟು 68 ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. ಅದರಲ್ಲಿ 40 ರಲ್ಲಿ ಸಣ್ಣ ಪ್ರಮಾಣದ ನೀರಿದ್ದರೇ, ಉಳಿದ 18 ಕೊಳವೆ ಬಾವಿಗಳಲ್ಲಿ ನೀರೇ ಇಲ್ಲ. 400 - 500 ಅಡಿ ಆಳ ಕೊರೆದರೂ ನೀರು ಸಿಗುತ್ತಿಲ್ಲ.
ಅಂತರ್ಜಲ ಪಾತಾಳ ಸೇರಿದ ಹಿನ್ನೆಲೆಯಲ್ಲಿ ಕೆಲವು ಕೊಳವೆ ಬಾವಿಗಳಲ್ಲಿ ನೀರು ಬಂದು ವಾರದೊಳಗೆ ಬತ್ತಿ ಹೋಗಿವೆ. ತಾಲೂಕಿನ ಎಂ.ಕಲ್ಲಳ್ಳಿ, ಕೆಂಚಮ್ಮನಹಳ್ಳಿ, ಕಗ್ಗಲಗಟ್ಟಿ ತಾಂಡಾ, ಹಿರೇಮಲ್ಲನಕೆರೆ, ಬಸರಹಳ್ಳಿ ತಾಂಡಾ, ದಾಸರಹಳ್ಳಿ ತಾಂಡಾ, ಬಸರಹಳ್ಳಿ, ಇಟ್ಟಿಗಿ, ತುಂಬಿನಕೆರೆ ಸಣ್ಣ ತಾಂಡಾ, ಉತ್ತಂಗಿ, ಬಿತ್ಯಾನ ತಾಂಡಾ ಈ ಹಳ್ಳಿಗಳಿಗೆ 17 ಬಾಡಿಗೆ ಕೊಳವೆ ಬಾವಿಗಳಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಉಳಿದಂತೆ ಮುನ್ನಚ್ಚರಿಕೆ ಕ್ರಮವಾಗಿ ಹಾಳ್ ತಿಮ್ಲಾಪುರ, ವಡ್ಡನಹಳ್ಳಿ ತಾಂಡಾ, ಕೆ.ವೀರಾಪುರ, ಕಾಲ್ವಿ ತಾಂಡಾ, ಅಂಕ್ಲಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ವಾರದೊಳಗೆ ಎದುರಾಗಲಿದೆ.
ಉಳಿದಂತೆ ತಾಲೂಕಿನ 11 ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಿಂದ 110 ಹಳ್ಳಿಗಳಿಗೆ ತುಂಗಭದ್ರಾ ನದಿಯಿಂದ ನೀರು ಪೂರೈಕೆಗೆ
ಕ್ರಮ ವಹಿಸಿದ್ದರೂ ನೀರಿನ ಬವಣೆ ಮಾತ್ರ ನೀಗುವ ಲಕ್ಷಣ ಕಾಣುತ್ತಿಲ್ಲ. ಸಿಂಗಟಾಲೂರು ಏತ ನೀರಾವರಿ ಬ್ಯಾರೇಜ್‌ನಲ್ಲಿ 1.272 ಟಿಎಂಸಿ ನೀರು ಸಂಗ್ರಹವಿದೆ. ಈ ನೀರು ಮುಂದಿನ ಜೂನ್ ತಿಂಗಳವರೆಗೂ ಆಗಲಿದೆ. ಆದರೆ, ಬ್ಯಾರೇಜ್ ಕೆಳಭಾಗದಲ್ಲಿ ನದಿ ಬತ್ತಿ ಹೋಗಿದ್ದು, ಸಣ್ಣ ಪ್ರಮಾಣದಲ್ಲಿ ನೀರು ಹರಿಯುತ್ತಿದೆ.
ವಾರಕ್ಕೆ ಆಗುವಷ್ಟು ನೀರು ಮಾತ್ರ ಸಂಗ್ರಹವಿದೆ ಎಂದು ಹೇಳಲಾಗುತ್ತಿದೆ. ಕೆ.ವೀರಾಪುರ, ಮಹಾಜನಹಳ್ಳಿ, ಎಂ.ಕಲ್ಲಳ್ಳಿಯಲ್ಲಿ ನಿತ್ಯ ಅರ್ಧ ಕಿ. ಮೀ ಉದ್ದ ನೀರಿಗಾಗಿ ಕೊಡಗಳ ಸರದಿ ಸಾಲು ಇರುತ್ತದೆ. ಸುಡು ಬಿಸಿಲಿನಲ್ಲಿ ನಿಂತು ನೀರು ತರಬೇಕಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇದ್ದರೂ ನೀರಿಗೆ ಪರದಾಟ ಮಾತ್ರ ತಪ್ಪಿಲ್ಲ.