ತಮ್ಮ ಕೃತ್ಯಗಳ ಕುರಿತು ಪರಸ್ಪರ ಮಾಹಿತಿ ಹಂಚಿಕೊಳ್ಳಲು ಈ ತಂಡ ತರಹೇವಾರಿ ತಂತ್ರಗಳನ್ನು ಮಾಡುತ್ತಿತ್ತು. ಪಾಸ್‌ವರ್ಡ್ ಹೊಂದಿದ ಪೆನ್‌ಡ್ರೈವ್ ಅನ್ನು ಕೊರಿಯರ್ ಮೂಲಕ ರವಾನಿಸುತ್ತಿತ್ತು. ಇ-ಮೇಲ್ ಮೂಲಕ ಸಂವಹನಕ್ಕಾಗಿ ‘ಡಾರ್ಕ್‌ನೆಟ್’ ಬಳಕೆ ಮಾಡುತ್ತಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮುಂಬೈ[ಸೆ.04]: ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಮಾಜಿ ಪ್ರಧಾನಿ ರಾಜೀವ್ ಗಾಂಧಿ ರೀತಿ ಕೊಲ್ಲುವುದಕ್ಕೆ ಸಂಚು ರೂಪಿಸಲು ಯತ್ನಿಸಿದ, ಮಾವೋವಾದಿ ನಕ್ಸಲರ ಜತೆ ನಂಟು ಹೊಂದಿದ ಹಾಗೂ ಭೀಮಾ- ಕೋರೆಗಾಂವ್ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆಪಾದನೆ ಎದುರಿಸುತ್ತಿರುವ ‘ನಗರವಾಸಿ ನಕ್ಸಲರ’ (ಅರ್ಬನ್ ನಕ್ಸಲ್) ಕುರಿತು ಒಂದೊಂದೇ ಕುತೂಹಲಕರ ಮಾಹಿತಿಗಳು ಬೆಳಕಿಗೆ ಬರುತ್ತಿವೆ.
ತಮ್ಮ ಕೃತ್ಯಗಳ ಕುರಿತು ಪರಸ್ಪರ ಮಾಹಿತಿ ಹಂಚಿಕೊಳ್ಳಲು ಈ ತಂಡ ತರಹೇವಾರಿ ತಂತ್ರಗಳನ್ನು ಮಾಡುತ್ತಿತ್ತು. ಪಾಸ್‌ವರ್ಡ್ ಹೊಂದಿದ ಪೆನ್‌ಡ್ರೈವ್ ಅನ್ನು ಕೊರಿಯರ್ ಮೂಲಕ ರವಾನಿಸುತ್ತಿತ್ತು. ಇ-ಮೇಲ್ ಮೂಲಕ ಸಂವಹನಕ್ಕಾಗಿ ‘ಡಾರ್ಕ್‌ನೆಟ್’ ಬಳಕೆ ಮಾಡುತ್ತಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ‘rise.in' ಎಂಬ ವೆಬ್‌ಸೈಟ್ ಬಳಸಿ ಡಾರ್ಕ್ ನೆಟ್ ಮುಖಾಂತರ ಈ ತಂಡ ಇ-ಮೇಲ್ ಗಳನ್ನು ರವಾನಿಸುತ್ತಿತ್ತು. ತಮ್ಮ ಸಂಚು, ಗುರಿ ಹಾಗೂ ಹಣಕಾಸು ಕುರಿತು ಇ-ಮೇಲ್‌ನಲ್ಲಿ ಚರ್ಚೆ ನಡೆಸುತ್ತಿತ್ತು ಎಂದು ಮೂಲಗಳು ತಿಳಿಸಿವೆ.
ತೆಲುಗಿನ ಕ್ರಾಂತಿಕಾರಿ ಕವಿ ವರವರ ರಾವ್ ಸೇರಿದಂತೆ ಐವರು ಎಡಪಂಥೀಯ ವಿಚಾರವಾದಿಗಳನ್ನು ಕಳೆದ ವಾರ ವಿವಿಧ ಆರೋಪಗಳಡಿ ಪುಣೆ ಪೊಲೀಸರು ದೇಶದ ವಿವಿಧೆಡೆ ಬಂಧಿಸಿದ್ದರು. ಎಲ್ಲರನ್ನೂ ಗೃಹಬಂಧನದಲ್ಲಿಡುವಂತೆ ಸುಪ್ರೀಂಕೋರ್ಟ್ ಸೂಚಿಸಿತ್ತು. ಸದ್ಯ ಎಲ್ಲರೂ ಗೃಹಬಂಧನದಲ್ಲಿದ್ದಾರೆ.
ಅಷ್ಟಕ್ಕೂ ಏನಿದು ಡಾರ್ಕ್’ನೆಟ್..?
ಇದು ಕಂಪ್ಯೂಟರ್‌ನ ಒಂದು ರಹಸ್ಯ ಲೋಕ. ಅಕ್ರಮ ಎಸಗಿದರೂ ಯಾರಿಗೂ ಗೊತ್ತಾಗಲ್ಲ. ಸಾಮಾನ್ಯವಾಗಿ ಇಂಟರ್ನೆಟ್ ಬಳಸುವ ವ್ಯಕ್ತಿಯನ್ನು ಐಪಿ ವಿಳಾಸದ ಮೂಲಕ ಪತ್ತೆ ಹಚ್ಚಬಹುದು. ಆದರೆ ಡಾರ್ಕ್‌ನೆಟ್ ಬಳಸುವವರ ಪತ್ತೆ ಹಚ್ಚುವುದು ತುಂಬಾ ಕಷ್ಟ. ಇಂಟರ್ನೆಟ್‌ನಲ್ಲಿ 3 ಸ್ತರಗಳಿವೆ. ಮೊದಲನೆಯದ್ದು - ನಾವು ಬಳಸುವ ಸರ್ಫೇಸ್ ವೆಬ್. 2ನೇಯದ್ದು ಡೀಪ್ ವೆಬ್. 3ನೆಯದ್ದೇ ಡಾರ್ಕ್‌ನೆಟ್. ಮೊಜಿಲ್ಲಾ ಅಥವಾ ಕ್ರೋಮ್ ಬ್ರೌಸರ್‌ಗಳ ಮೂಲಕ ಇದನ್ನು ಬಳಸಲಾಗದು. ‘ಟೋರ್’ ಸಾಫ್ಟ್‌ವೇರ್ ಮೂಲಕ ಡೀಪ್ ವೆಬ್ ಅಥವಾ ಡಾರ್ಕ್‌ನೆಟ್ ಸಂಪರ್ಕ ಸಾಧಿಸಬಹುದು. ಈ ಸಾಫ್ಟ್‌ವೇರ್ ಇಂಟರ್ನೆಟ್ ಪ್ರೊಟೊಕಾಲ್ ಬಚ್ಚಿಡಲಿದ್ದು, ಬಳಕೆದಾರನ ಮಾಹಿತಿ ಗೊತ್ತಾಗುವುದಿಲ್ಲ.