ಮತಾಂತರಕ್ಕೆ ಯತ್ನಿಸಿದ್ದ ಅಮೆರಿಕನ್ ಪ್ರಜೆ ಕೊಂದ ಅಂಡಮಾನ್ ಬುಡಕಟ್ಟು ಜನ?

By Web DeskFirst Published Nov 21, 2018, 1:21 PM IST
Highlights

ಹೋಗಬಾರದ ದ್ವೀಪಕ್ಕೆ ಹೋಗಿ ಬಾರದ ಲೋಕಕ್ಕೆ ಹೋದ ಅಮೆರಿಕ ಪ್ರಜೆ! ಅಂಡಮಾನ್ ದ್ವೀಪದಲ್ಲಿ ಬುಡಕಟ್ಟು ಜನರಿಂದ ಅಮೆರಿಕನ್ ಪ್ರವಾಸಿಗನ ಹತ್ಯೆ! ಜಾನ್ ಅಲೆನ್ ಚೌನನ್ನು ಕೊಂದು ಹಾಕಿದ ಸೆಂಟಿನಲೀಸ್ ಬುಡಕಟ್ಟು ಜನರು!
ಜಾನ್ ಅಲೆನ್ ಚೌ ಸಾಹಸಯಾತ್ರೆಗೆ ನೆರವಾಗಿದ್ದ ಮೀನುಗಾರರ ಬಂಧನ

ಪೋರ್ಟ್ ಬ್ಲೇರ್(ನ.21): ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಸಾಹಸಯಾತ್ರೆ ಕೈಗೊಂಡಿದ್ದ ಅಮೆರಿಕ ಪ್ರಜೆಯೊಬ್ಬ ಅಕ್ರಮವಾಗಿ ಅಂಡಮಾನ್ ದ್ವೀಪದೊಳಗೆ ಪ್ರವೇಶಿಸಿದ್ದು, ಸೆಂಟಿನಲೀಸ್ ಬುಡಕಟ್ಟು ಜನರು ಆತನನ್ನು ಕೊಂದು ಹಾಕಿದ್ದಾರೆ. 

ಅಂಡಮಾನ್ ದ್ವೀಪ ಸಮೂಹದ ಉತ್ತರ ಸೆಂಟಿನೆಲ್ ದ್ವೀಪದಲ್ಲಿ ಸೆಂಟಿನಲೀಸ್ ಬುಡಕಟ್ಟು ಜನರು ವಾಸಿಸುತ್ತಿದ್ದು, ಈ ಪ್ರದೇಶವನ್ನು ಭಾರತ ಸರ್ಕಾರ ಸಂರಕ್ಷಿತ ಪ್ರದೇಶ ಎಂದು ಘೋಷಿಸಿದೆ. ಆದರೆ ಅಮೆರಿಕ ಪ್ರಜೆ ಜಾನ್ ಅಲೆನ್ ಚೌ ಅಕ್ರಮವಾಗಿ ಈ ಪ್ರದೇಶವನ್ನು ಪ್ರವೇಶಿಸಿದ್ದರು ಎನ್ನಲಾಗಿದೆ.

ಜಾನ್ ಅಲೆನ್ ಚೌ ಅವರಿಗೆ ಇತರ ಏಳು ಮಂದಿ ಮೀನುಗಾರರು ಸಾಹಸಯಾತ್ರೆಗೆ ನೆರವಾಗಿದ್ದರು. ಅವರನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮೀನುಗಾರರ ಮೇಲೆ ಮೂಲನಿವಾಸಿ ಬಡುಕಟ್ಟುಗಳ ರಕ್ಷಣೆ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ. 

ಐದು ದಿನಗಳ ಹಿಂದೆ ಜಾನ್ ಅಲೆನ್ ಚೌ ಬುಡಕಟ್ಟು ಜನರ ಜತೆ ಮಾತನಾಡಲು ಹೋಗಿದ್ದರು ಎನ್ನಲಾಗಿದ್ದು, ಮೂಲನಿವಾಸಿಗಳು ಈತನನ್ನು ಶತ್ರುವೆಂದು ತಿಳಿದು ಹತ್ಯೆ ಮಾಡಿದ್ದಾರೆ. ಈ ಬುಡಕಟ್ಟು ಜನರು ಹೊರಜಗತ್ತಿನ ಜೊತೆ ಯಾವುದೇ ಸಂಪರ್ಕ ಇಟ್ಟುಕೊಳ್ಳಲು ಬಯಸುವದಿಲ್ಲ ಎನ್ನಲಾಗಿದೆ. 

ಇನ್ನು ಈ ಹಿಂದೆ ಒಟ್ಟು ಐದು ಬಾರಿ ಜಾನ್ ಈ ದ್ವೀಪಕ್ಕೆ ಭೇಟಿ ನೀಡಿದ್ದ ಎಂದು ಮತ್ತೊಂದು ವರದಿ ಹೇಳಿದೆ. ದ್ವೀಪದಲ್ಲಿ ಕ್ರೈಸ್ತ ಧರ್ಮದ ಪ್ರಚಾರ ನಡೆಸಲು ಈತ ಉದ್ದೇಶಿಸಿದ್ದ ಎಂದೂ ಹೇಳಲಾಗಿದೆ. ಆದರೆ ಈ ವರದಿಯನ್ನು ಇದುವರೆಗೆ ಯಾರೂ ದೃಢೀಕರಿಸಿಲ್ಲ. 

click me!