ರುಪಾಯಿ ಮೌಲ್ಯ ಏಕೆ ಕುಸಿಯುತ್ತಿದೆ?

By Web Desk  |  First Published Aug 24, 2018, 10:54 AM IST

ರುಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ ದರವಾದ 70 ರು.ಗೆ ಕುಸಿದಿದೆ. ಇದು ಸದ್ದಿಲ್ಲದೆ ದೇಶದ ಆರ್ಥಿಕತೆ ಹಾಗೂ ಜನರ ಕಿಸೆಗೆ ಹೊಡೆತ ಹಾಕುತ್ತಿದೆ. ಇದು ಹೀಗೇ ಮುಂದುವರೆದರೆ ದೊಡ್ಡ ಸಂಕಷ್ಟ ಕಾದಿದೆ. ಕರೆನ್ಸಿ ಮಾರುಕಟ್ಟೆಯಲ್ಲಿ ಏನಾಗುತ್ತಿದೆ?


ನವದೆಹಲಿ (ಆ. 24): ಕೆಲ ವಾರಗಳಿಂದ ಅಮೆರಿಕನ್ ಡಾಲರ್ ಎದುರು ನಿರಂತರವಾಗಿ ಕುಸಿಯುತ್ತಿದ್ದ ಭಾರತೀಯ ರುಪಾಯಿ ಮೌಲ್ಯ ಈಗ ಇತಿಹಾಸದಲ್ಲೇ ಅತ್ಯಂತ ಕನಿಷ್ಠಕ್ಕೆ ಪಲ್ಟಿ ಹೊಡೆದಿದೆ.

ಇದೀಗ ಒಂದು ಡಾಲರ್ ಖರೀದಿಸಲು 70 ರುಪಾಯಿ ತೆರಬೇಕು. ನಾನೇನೂ ಡಾಲರ್ ಖರೀದಿ ಮಾಡುವುದಿಲ್ಲ, ಅಮೆರಿಕಕ್ಕೆ ಹೋಗುವವರು ಅಥವಾ ಡಾಲರ್‌ನಲ್ಲಿ ವ್ಯಾಪಾರ ಮಾಡುವವರು ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಾರೆ ಬಿಡಿ ಎಂದು ಜನಸಾಮಾನ್ಯರು ನಿಶ್ಚಿಂತೆಯಿಂದ ಇರುವಂತಿಲ್ಲ!

Tap to resize

Latest Videos

ಇದು ದೇಶದ ಪ್ರತಿಯೊಬ್ಬರಿಗೂ ಬಿಸಿ ಮುಟ್ಟಿಸುವ ವಿದ್ಯಮಾನ. ಒಂದೆಡೆ ಭಾರತದ ಆರ್ಥಿಕತೆ ಬೆಳೆಯುತ್ತಿದೆ. ಇನ್ನೊಂದೆಡೆ, ರುಪಾಯಿ ಮೌಲ್ಯ ಕುಸಿಯುತ್ತಿದೆ. ರುಪಾಯಿ ಮೌಲ್ಯ ಕುಸಿದಷ್ಟೂ ಆರ್ಥಿಕತೆ ಬೆಳೆದಿದ್ದರ ಲಾಭ ಜನರಿಗೆ ಸಿಗುವುದು ಕಡಿಮೆಯಾಗುತ್ತದೆ. ಏಕೆಂದರೆ ಅಗತ್ಯ ವಸ್ತುಗಳೆಲ್ಲ ದುಬಾರಿಯಾಗುತ್ತವೆ. ಅದರಿಂದ ಜನರ ಬದು ಕೂ ದುಬಾರಿಯಾಗುತ್ತದೆ. ಆತಂಕಕಾರಿ ಸಂಗತಿ ಏನೆಂದರೆ, 70 ಕ್ಕೆ ಕುಸಿದಿರುವ ರುಪಾಯಿ ಮೌಲ್ಯ ಇನ್ನಷ್ಟು ಕುಸಿದು 71 ಕ್ಕೇನಾದರೂ ಹೋದರೆ ನಾಲ್ಕೈದು ತಿಂಗಳಲ್ಲಿ 80 ಕ್ಕೂ ಕುಸಿಯಬಹುದು ಎಂದು ಕೆಲ ಆರ್ಥಿಕ ತಜ್ಞರು ಎಚ್ಚರಿಸುತ್ತಿದ್ದಾರೆ.

ರುಪಾಯಿ ಮೌಲ್ಯ ಕುಸಿತ ಅಂದ್ರೇನು?

ಈ ವರ್ಷದ ಜನವರಿಯಿಂದ ಜೂನ್ ನಡುವಿನ ವೇಳೆಯಲ್ಲಿ ಬ್ರಿಕ್ಸ್ ರಾಷ್ಟ್ರಗಳ ಕರೆನ್ಸಿ ಪೈಕಿ ಅತಿ ಹೆಚ್ಚು ಕುಸಿತ ಕಂಡಿರುವುದು ರಷ್ಯಾದ ರೂಬಲ್ ಹಾಗೂ ಭಾರತದ ರುಪಾಯಿ. ಒಂದು ದೇಶದ ಕರೆನ್ಸಿ ಮೌಲ್ಯ ಆ ದೇಶದ ಒಳಗೆ ಅಷ್ಟೇ ಇದ್ದು, ವಿದೇಶದಲ್ಲಿ ಅದರ ಮೌಲ್ಯ ಕಡಿಮೆಯಾದರೆ ಅದನ್ನೇ ಕರೆನ್ಸಿ ಮೌಲ್ಯದಲ್ಲಾದ ಕುಸಿತ ಎನ್ನುತ್ತಾರೆ. ಇಲ್ಲಿ ಎರಡು ಸೂಕ್ಷ್ಮ ಸಂಗತಿಗಳಿವೆ. ಒಂದು - ರುಪಾಯಿ ಅಪಮೌಲ್ಯ, ಇನ್ನೊಂದು- ರುಪಾಯಿ ಮೌಲ್ಯ ಕುಸಿತ. ರುಪಾಯಿ ಅಪಮೌಲ್ಯವನ್ನು ಸರ್ಕಾರ ಉದ್ದೇಶಪೂರ್ವಕವಾಗಿ (ಇದರ ಕಾರಣಗಳು ಸಂಕೀರ್ಣ) ಮಾಡುತ್ತದೆ.

ಕೆಲ ತಿಂಗಳ ಹಿಂದೆ ಇದನ್ನು ಮಾಡಲಾಗಿತ್ತು. ಇನ್ನು, ರುಪಾಯಿ ಮೌಲ್ಯ ಕುಸಿತ ಮಾರುಕಟ್ಟೆಯ ಶಕ್ತಿಗಳಿಂದ ಆಗುವುದು. ಇದರ ಮೇಲೆ ಸರ್ಕಾರಕ್ಕೆ ಅಥವಾ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ಗೆ ಹಿಡಿತ ಇರುವುದಿಲ್ಲ. ಈಗ ಆಗುತ್ತಿರುವುದು ರುಪಾಯಿ ಮೌಲ್ಯ ಕುಸಿತ. ಆದ್ದರಿಂದಲೇ ಇದು ಆತಂಕಕಾರಿ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ದಿನ, 1947 ರ ಆಗಸ್ಟ್ 15 ರಂದು ಭಾರತೀಯ ರುಪಾಯಿಯ ಮೌಲ್ಯವನ್ನು 1 ಅಮೆರಿಕನ್ ಡಾಲರ್‌ಗೆ 1 ರುಪಾಯಿ ಎಂದು ನಮ್ಮ ಸರ್ಕಾರ ನಿರ್ಧರಿಸಿತ್ತು.

ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಮಾನದಂಡಗಳ ಪ್ರಕಾರ ಇದನ್ನು ಮಾಡಲಾಗಿತ್ತು. ನಂತರ ಕ್ರಮೇಣ ಡಾಲರ್ ಶಕ್ತಿಶಾಲಿಯಾಗುತ್ತಾ ಹೋಗಿ, ರುಪಾಯಿ ದುರ್ಬಲವಾಗುತ್ತಾ ಬಂದು, ಇಂದು ಇವೆರಡು ಕರೆನ್ಸಿಗಳ ನಡುವೆ ಬಹಳ ಅಂತರ ಏರ್ಪಟ್ಟಿದೆ. ಪ್ರಸ್ತುತ 1 ಡಾಲರ್‌ಗೆ 70 ರುಪಾಯಿ ಆಗಿದೆ.

ರುಪಾಯಿ ಏಕೆ ಕುಸಿಯುತ್ತಿದೆ?

ಮೊದಲ ಕಾರಣ ಕಚ್ಚಾತೈಲ ಬೆಲೆ ಏರಿಕೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರುತ್ತಿದೆ. ನಮ್ಮ ದೇಶ ಕೇವಲ ಶೇ.೨೦ರಷ್ಟು ತೈಲವನ್ನು ಮಾತ್ರ ಉತ್ಪಾದಿಸಿ, ಇನ್ನುಳಿದ ಶೇ.80 ರಷ್ಟನ್ನು ಇರಾಕ್, ಇರಾನ್, ಸೌದಿ ಅರೇಬಿಯಾ ಮುಂತಾದ ಗಲ್ಫ್ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತದೆ. ಹೀಗೆ ಆಮದು ಮಾಡಿಕೊಳ್ಳುವ ತೈಲಕ್ಕೆ ಡಾಲರ್‌ನಲ್ಲಿ ಹಣ ಪಾವತಿಸಬೇಕು. ತೈಲಕ್ಕೆ ಪಾವತಿಸುವ ಹಣದ ಮೊತ್ತ ಹೆಚ್ಚಿದಷ್ಟೂ ನಮ್ಮ ದೇಶ ಹೆಚ್ಚು ಡಾಲರ್ ಖರೀದಿಸಬೇಕು. ಡಾಲರ್‌ಗೆ ಬೇಡಿಕೆ ಹೆಚ್ಚಿದಷ್ಟೂ ಅದರ ಮೌಲ್ಯ ಹೆಚ್ಚುತ್ತದೆ. ಅಂದರೆ, ರುಪಾಯಿ ದುರ್ಬಲವಾಗುತ್ತದೆ. ಇದೊಂದು ಚೈನ್ ರಿಯಾಕ್ಷನ್.

ಇದರಿಂದಾಗಿ ದೇಶದ ಚಾಲ್ತಿ ಖಾತೆ ಕೊರತೆ ಹೆಚ್ಚುತ್ತದೆ. ಚಾಲ್ತಿ ಖಾತೆ ಕೊರತೆ ಅಂದರೆ, ರಫ್ತಿನಿಂದ ನಮಗೆ ಬರುವ ಆದಾಯಕ್ಕಿಂತ ಆಮದಿಗೆ ನಾವು ಪಾವತಿಸುವ ಹಣ ಜಾಸ್ತಿಯಿರುವುದು. ಹೀಗೆ ಆದಾಗ ದೇಶದ ಒಟ್ಟಾರೆ ಆರ್ಥಿಕತೆಗೆ  ಹೊರೆಯಾಗುತ್ತದೆ. ಅದು ರುಪಾಯಿಯನ್ನೂ ದುರ್ಬಲಗೊಳಿಸುತ್ತದೆ.

ಇದರ ಪರಿಣಾಮ ಏನು?
ಕಳೆದ ವರ್ಷ ನಮ್ಮ ದೇಶದ ದಿನನಿತ್ಯದ ತೈಲ ಅಗತ್ಯ 93,000 ಬ್ಯಾರಲ್ ಇತ್ತು. ಈ ವರ್ಷ ಇದು ಡಬಲ್ 1,90,000 ಕ್ಕೆ ತಲುಪುವ ಸಾಧ್ಯತೆಯಿದೆ. ಕಚ್ಚಾತೈಲಕ್ಕೆ ಬೇಡಿಕೆ ಹೆಚ್ಚಿದಷ್ಟೂ ದೇಶದ ಆಮದು ವೆಚ್ಚ ಏರುತ್ತ ಹೋಗುತ್ತದೆ.

ಇದರ ಪರಿಣಾಮ ಏನು?

ಸರಳವಾಗಿ ಹೇಳುವುದಾದರೆ, ಕಚ್ಚಾತೈಲ ಬೆಲೆ ಒಂದು ಬ್ಯಾರಲ್‌ಗೆ ೧೦ ಡಾಲರ್ ಏರಿಕೆಯಾದರೆ ಭಾರತದ ಜಿಡಿಪಿ (ಸಮಗ್ರ ರಾಷ್ಟ್ರೀಯ ಉತ್ಪನ್ನ) ಶೇ.0.2 ರಿಂದ 0.3 ರಷ್ಟು ಇಳಿಕೆಯಾಗುತ್ತದೆ! ಇನ್ನೊಂದು ಕಾರಣ - ಅಮೆರಿಕ ಮತ್ತು ಚೀನಾ ನಡುವಿನ ವಾಣಿಜ್ಯ ಸಮರ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾ ಸೇರಿದಂತೆ ಯುರೋಪಿಯನ್ ದೇಶಗಳು, ಭಾರತ ಹಾಗೂ ಇತರ ದೊಡ್ಡ ಆರ್ಥಿಕತೆಗಳಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳಿಗೆ ದುಬಾರಿ ತೆರಿಗೆ ವಿಧಿಸುತ್ತಿದ್ದಾರೆ.

ಇದಕ್ಕೆ ಪ್ರತೀಕಾರವೆಂಬಂತೆ ಭಾರತವೂ ಅಮೆರಿಕದ ವಸ್ತುಗಳಿಗೆ ತೆರಿಗೆ ಹೆಚ್ಚಿಸುತ್ತಿದೆ. ಇದರ ಪರಿಣಾಮ ನಮ್ಮ ದೇಶಕ್ಕೆ ಬರುವ ಅಮೆರಿಕದ ವಸ್ತುಗಳು ದುಬಾರಿಯಾಗುತ್ತಿವೆ ಮತ್ತು ಭಾರತೀಯ ಮಾರುಕಟ್ಟೆಯಿಂದ ಡಾಲರ್‌ನ ಹೊರಹರಿವು ಹೆಚ್ಚುತ್ತಿದೆ.

ರುಪಾಯಿ ಬೆಲೆ ಕುಸಿಯಲು ಇನ್ನೊಂದು ಪ್ರಮುಖ ಕಾರಣವೆಂದರೆ ವಿದೇಶಿ ಹೂಡಿಕೆದಾರರು ಭಾರತದಲ್ಲಿ ಹೂಡಿಕೆ ಮಾಡಿರುವ ಹಣವನ್ನು ಹಿಂಪಡೆದು ಇತರ ಆಕರ್ಷಕ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುತ್ತಿರುವುದು. ಅವರು ಭಾರತದಲ್ಲಿರುವ ಷೇರು ಮಾರುವಾಗ ಅದಕ್ಕೆ ಡಾಲರ್‌ನಲ್ಲಿ ಪಾವತಿ ಕೇಳುತ್ತಾರೆ. ಅದರಿಂದ ಮತ್ತೆ ಡಾಲರ್ ಗೆ ಬೇಡಿಕೆ ಹೆಚ್ಚುತ್ತದೆ. ಅಚ್ಚರಿಯ ಸಂಗತಿ ಏನೆಂದರೆ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮೋದಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆಯೋ ಇಲ್ಲವೋ ಎಂಬ ಅಸ್ಥಿರತೆಯಿಂದಲೂ ರುಪಾಯಿ ಮೌಲ್ಯ ಕುಸಿಯುತ್ತಿದೆ!

ಜನರಿಗೆ ಗೊತ್ತಿಲ್ಲದೇ ಕಿಸೆಗೆ ತೂತು ರುಪಾಯಿ ಮೌಲ್ಯ ಕುಸಿಯುವುದು ವಾಣಿಜ್ಯೋದ್ಯಮಗಳಿಂದ ಹಿಡಿದು ಜನಸಾಮಾನ್ಯರವರೆಗೆ ಪ್ರತಿಯೊಬ್ಬರಿಗೂ ಕೆಟ್ಟ ಸುದ್ದಿಯೇ. ರುಪಾಯಿ ಮೌಲ್ಯ ಕುಸಿತದಿಂದ ಆಮದು ವಸ್ತುಗಳು, ವಿಶೇಷವಾಗಿ ತೈಲ, ಖಾದ್ಯತೈಲವೂ ಸೇರಿದಂತೆ ಎಲ್ಲವೂ ದುಬಾರಿಯಾಗುತ್ತವೆ. ಪೆಟ್ರೋಲ್, ಡೀಸೆಲ್ ದುಬಾರಿಯಾದರೆ ಹಣ್ಣು, ಹಾಲು, ತರಕಾರಿಯಿಂದ ಹಿಡಿದು ಸಿಮೆಂಟ್, ಕಬ್ಬಿಣ, ವಾಷಿಂಗ್ ಮಶೀನ್, ಟೀವಿಯವರೆಗೆ ಎಲ್ಲಾ ಗ್ರಾಹಕ ವಸ್ತುಗಳೂ
ದುಬಾರಿಯಾಗುತ್ತವೆ. ಅದರಿಂದ ಹಣದುಬ್ಬರ ಏರುತ್ತದೆ.

ವಿದೇಶಗಳಿಗೆ ಪ್ರವಾಸ ದುಬಾರಿಯಾಗುತ್ತದೆ. ಷೇರು ಮಾರುಕಟ್ಟೆಗಳಲ್ಲಿ ಮಾಡಿದ ಹೂಡಿಕೆಗೆ ಕಡಿಮೆ ಲಾಭ ಸಿಗುತ್ತದೆ. ನಮ್ಮಲ್ಲಿರುವ ಹಣದ ಕೊಳ್ಳುವ ಶಕ್ತಿಯೇ ಕಡಿಮೆಯಾಗುವುದರಿಂದ ಎಲ್ಲರಿಗೂ ಹೊರೆಯಾಗುತ್ತದೆ. ಹೊರದೇಶಗಳಿಗೆ ಕೆಲಸ ಮಾಡಿಕೊಡುವ ಐಟಿ ಕಂಪನಿಗಳು ಡಾಲರ್‌ನಲ್ಲಿ ಪಾವತಿ ಪಡೆಯುವುದರಿಂದ ಅವುಗಳಿಗೆ ಮಾತ್ರ ರುಪಾಯಿ ಮೌಲ್ಯ ಕುಸಿದಷ್ಟೂ ಲಾಭ ಹೆಚ್ಚು!  

click me!