ವೈದ್ಯರು ಮರಣಶಯ್ಯೆಯಲ್ಲಿರುವ ರೋಗಿಗೆ ನೀಡುತ್ತಿರುವ ಚಿಕಿತ್ಸೆ ಹಂತಹಂತವಾಗಿ ನಿಲ್ಲಿಸುವುದಕ್ಕೆ ಪರೋಕ್ಷ ದಯಾಮರಣ ಎನ್ನುತ್ತಾರೆ. ಇದು ಕಾನೂನುಬದ್ಧ. ಆದರೆ, ರೋಗಿ ಸಾಯಲು ಕಾರಣ ಆಗುವ ಚುಚ್ಚುಮದ್ದು, ಔಷಧ ನೀಡುವುದು ‘ಸಕ್ರಿಯ ದಯಾಮರಣ’ ಎನ್ನಿಸಿಕೊಳ್ಳುತ್ತದೆ. ಇದು ಅಕ್ರಮ.
ನವದೆಹಲಿ : ವೈದ್ಯರು ಮರಣಶಯ್ಯೆಯಲ್ಲಿರುವ ರೋಗಿಗೆ ನೀಡುತ್ತಿರುವ ಚಿಕಿತ್ಸೆ ಹಂತಹಂತವಾಗಿ ನಿಲ್ಲಿಸುವುದಕ್ಕೆ ಪರೋಕ್ಷ ದಯಾಮರಣ ಎನ್ನುತ್ತಾರೆ. ಇದು ಕಾನೂನುಬದ್ಧ. ಆದರೆ, ರೋಗಿ ಸಾಯಲು ಕಾರಣ ಆಗುವ ಚುಚ್ಚುಮದ್ದು, ಔಷಧ ನೀಡುವುದು ‘ಸಕ್ರಿಯ ದಯಾಮರಣ’ ಎನ್ನಿಸಿಕೊಳ್ಳುತ್ತದೆ. ಇದು ಅಕ್ರಮ.
ಪರೋಕ್ಷ ದಯಾಮರಣಕ್ಕೆ ಸುಪ್ರೀಂಕೋರ್ಟ್ ಅಸ್ತು
2005ರಲ್ಲಿ ‘ಕಾಮನ್ ಕಾಸ್’ ಎಂಬ ಸ್ವಯಂಸೇವಾ ಸಂಸ್ಥೆ ಪರೋಕ್ಷ ದಯಾಮರಣಕ್ಕೆ ಕಾನೂನಿನಲ್ಲಿ ಅವಕಾಶ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಮೊದಲು ಈ ಪ್ರಕರಣದ ವಿಚಾರಣೆ ನಡೆಸಿದ್ದ ತ್ರಿಸದಸ್ಯ ನ್ಯಾಯಪೀಠ 2014ರಲ್ಲಿ ಸಾಂವಿಧಾನಿಕ ಪೀಠಕ್ಕೆ ಅರ್ಜಿ ವರ್ಗಾಯಿಸಿತ್ತು. ಇದರ ತೀರ್ಪು ಈಗ ಹೊರಬಿದ್ದಿದೆ.
ಪರೋಕ್ಷ ದಯಾಮರಣ?
ಮರಣಶಯ್ಯೆಯಲ್ಲಿರುವ ರೋಗಿಯೊಬ್ಬರಿಗೆ ನೀಡಲಾಗುತ್ತಿರುವ ಚಿಕಿತ್ಸೆಯನ್ನು ವೈದ್ಯರು ಹಂತಹಂತವಾಗಿ ನಿಲ್ಲಿಸುವುದಕ್ಕೆ ಪರೋಕ್ಷ ದಯಾಮರಣ ಎನ್ನುತ್ತಾರೆ. ಇದು ಕಾನೂನುಬದ್ಧ. ಆದರೆ, ರೋಗಿಯೊಬ್ಬರು ಸಾಯಲು ಕಾರಣವಾಗುವ ಚುಚ್ಚುಮದ್ದು ಅಥವಾ ಔಷಧ ನೀಡುವುದು ‘ಸಕ್ರಿಯ ದಯಾಮರಣ’ ಎನ್ನಿಸಿಕೊಳ್ಳುತ್ತದೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ.
ಜೀವಂತ ಉಯಿಲು?
ರೋಗಿಯೊಬ್ಬರು ತನಗೆ ಚಿಕಿತ್ಸೆ ಸಾಕು. ಸಾವು ಬೇಕು ಎಂದು ಸ್ವ ಇಚ್ಛೆಯಿಂದ ಲಿಖಿತ ಕಾಗದಪತ್ರವೊಂದನ್ನು ಸಿದ್ಧಪಡಿಸಿದರೆ ಅದಕ್ಕೆ ‘ಜೀವಂತ ಉಯಿಲು’ ಎನ್ನುತ್ತಾರೆ. ಚಿಕಿತ್ಸಾ ಹಂತದಲ್ಲೇ ವೈದ್ಯಕೀಯ ಮಂಡಳಿಯ ಅನುಮತಿ ಪಡೆದು ಇದನ್ನು ವೈದ್ಯರಿಗೆ ನೀಡಬೇಕಾಗುತ್ತದೆ. ಇದು ವೈದ್ಯರಿಗೆ ಹಂತಹಂತವಾಗಿ ಚಿಕಿತ್ಸೆ ನಿಲ್ಲಿಸಲು ಅನುವು ಮಾಡಿಕೊಡುತ್ತದೆ.
ಅರುಣಾ ಪ್ರಕರಣದ ಬಳಿಕವೂ ಮತ್ತೇಕೆ ತೀರ್ಪು?
ಮರಣಶಯ್ಯೆಯಲ್ಲೇ ದಶಕಗಳನ್ನು ಕಳೆದ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆ ಹಳದೀಪುರ ಮೂಲದ ದಾದಿ ಅರುಣಾ ಶಾನಭಾಗ ಅವರ ಪ್ರಕರಣದಲ್ಲಿ ಸುಪ್ರೀಂ ಕೋರ್ಟು 2011ರಲ್ಲೇ ತೀರ್ಪು ನೀಡಿ, ಅವರ ಪರೋಕ್ಷ ದಯಾಮರಣಕ್ಕೆ ಸಮ್ಮತಿ ನೀಡಿತ್ತು. ಆದರೆ ಅರುಣಾ ಪ್ರಕರಣದ ತೀರ್ಪು ಸೇರಿದಂತೆ ಇನ್ನೂ ಕೆಲವು ಇಂಥದ್ದೇ ಕೆಲವು ಪರೋಕ್ಷ ದಯಾಮರಣ ಪ್ರಕರಣಗಳ ತೀರ್ಪಿನಲ್ಲಿ ವ್ಯತ್ಯಾಸಗಳಿದ್ದವು. ಅಲ್ಲದೆ, ಜೀವಂತ ಉಯಿಲಿನ ಕ್ರಮಬದ್ಧತೆ ಹಾಗೂ ಈ ಬಗ್ಗೆ ನಿರ್ದಿಷ್ಟನಿಯಮಗಳು ಉಲ್ಲೇಖವಾಗಿರಲಿಲ್ಲ. ಹೀಗಾಗಿ ಈಗ ಅಂತಿಮವಾಗಿ ಪರೋಕ್ಷ ದಯಾಮರಣ ಮತ್ತು ಜೀವಂತ ಉಯಿಲಿನ ಬಗ್ಗೆ ಏಕರೂಪದ ಮಾರ್ಗದರ್ಶಿ ನಿಯಮಗಳನ್ನು ಸುಪ್ರೀಂ ಕೋರ್ಟ್ ರೂಪಿಸಿದೆ.
ಗೌರವಯುತ ಸಾವು ಕೂಡಾ, ಗೌರವಯುತ ಬದುಕಿನ ಭಾಗ ಎಂದು ಸ್ಪಷ್ಟಪಡಿಸಿರುವ ಸುಪ್ರೀಂಕೋರ್ಟ್, ಇನ್ನೆಂದೂ ಚೇತರಿಸಿಕೊಳ್ಳಲಾಗದಂತೆ ಮರಣಶಯ್ಯೆಯಲ್ಲಿರುವ ರೋಗಿಗಳು ‘ಜೀವಂತ ಉಯಿಲು’ಗಳನ್ನು ಬರೆದು ನೆಮ್ಮದಿಯಿಂದ ಕಣ್ಣು ಮುಚ್ಚಬಹುದು ಎಂಬ ಐತಿಹಾಸಿಕ ತೀರ್ಪು ನೀಡಿದೆ. ಈ ಮೂಲಕ ‘ಪರೋಕ್ಷ ದಯಾಮರಣ’ ಹಾಗೂ ‘ಜೀವಂತ ಉಯಿಲು’ಗಳು ಕಾನೂನುಬದ್ಧ ಎಂದು ಘೋಷಿಸಿದೆ.
‘ಜೀವಂತ ಉಯಿಲು’ಗಳನ್ನು ರೋಗಿಗಳು ಬರೆದರೆ, ಅವರಿಗೆ ಅಳವಡಿಸಲಾಗಿರುವ ಜೀವರಕ್ಷಕ ವ್ಯವಸ್ಥೆಗಳು ಹಾಗೂ ನೀಡಲಾಗುವ ಚಿಕಿತ್ಸೆಗಳನ್ನು ನಿಲ್ಲಿಸಲು ವೈದ್ಯರಿಗೆ ಅನುವಾಗಲಿದೆ. ಈ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪು ಮಹತ್ವ ಪಡೆದಿದೆ. ಜೊತೆಗೆ ಇಂಥದ್ದೊಂದು ತೀರ್ಪಿನ ಬಳಿಕ, ಕರ್ನಾಟಕ ಮೂಲದ ದಾದಿ ಅರುಣಾ ಶ್ಯಾನುಬಾಗ್ ಹಾಗೂ ಇದೇ ರೀತಿಯ ಇತರೆ ಕೆಲವು ಪ್ರಕರಣಗಳ ತೀರ್ಪಿನಲ್ಲಿ ಇದ್ದ ವ್ಯತ್ಯಾಸಗಳಿಗೆ ತೆರೆ ಎಳೆದಿದೆ.
ಅಶೋಕ್ ಭೂಷಣ್ ಅವರಿದ್ದ ಸಾಂವಿಧಾನಿಕ ಪೀಠ, ‘ಜೀವಂತವಾಗಿ ಇರಲು ಇಚ್ಛಿಸದ ವ್ಯಕ್ತಿಯು ಕೋಮಾವಸ್ಥೆಯಲ್ಲಿ ನರಳಬಾರದು. ಜೀವನದ ಹಕ್ಕು ಎಂದರೆ ಅದರಲ್ಲಿ ಚಿಕಿತ್ಸೆ ನಿರಾಕರಣೆ ಹಾಗೂ ಗೌರವದಿಂದ ಮರಣ ಅಪ್ಪುವುದು ಕೂಡ ಇರುತ್ತದೆ. ಪರೋಕ್ಷ ದಯಾಮರಣ ಹಾಗೂ ಜೀವಂತ ಉಯಿಲುಗಳು ಅನುಜ್ಞಾರ್ಹ’ ಎಂದು ಅಭಿಪ್ರಾಯಪಟ್ಟು, ಈ ಮೇಲಿನಂತೆ ತೀರ್ಪು ನೀಡಿತು.
ಇದೇ ಸಂದರ್ಭದಲ್ಲಿ ಜೀವಂತ ಉಯಿಲನ್ನು ಯಾರು ಬರೆಯಬಹುದು ಎಂಬ ಬಗ್ಗೆ ಮಾರ್ಗದರ್ಶಿ ನಿಯಮಗಳನ್ನು ಬಿಡುಗಡೆ ಮಾಡಿದ ಸಾಂವಿಧಾನಿಕ ಪೀಠ, ‘ಚೇತರಿಸಿಕೊಳ್ಳಲಾಗದ ಸ್ಥಿತಿಯಲ್ಲಿ ಇರುವ ರೋಗಿಗಳು ಪರೋಕ್ಷ ದಯಾಮರಣ ಕೋರಿ ‘ಜೀವಂತ ಉಯಿಲು’ಗಳನ್ನು ತಮ್ಮ ಪರಮಾಪ್ತ ಸ್ನೇಹಿತ ಅಥವಾ ಬಂಧುವಿನ ಮೂಲಕ ಬರೆಸಬಹುದು. ಬಳಿಕ ಈ ಉಯಿಲನ್ನು ಸಂಬಂಧಪಟ್ಟವೈದ್ಯಕೀಯ ಮಂಡಳಿಗೆ ಪರಿಶೀಲನೆಗಾಗಿ ರವಾನಿಸಬೇಕು. ವೈದ್ಯಕೀಯ ಮಂಡಳಿಯು ಇದಕ್ಕೆ ಅನುಮತಿಸಿದರೆ ಪರೋಕ್ಷ ದಯಾಮರಣ ಪ್ರಕ್ರಿಯೆ ಆರಂಭಿಸಬಹುದು’ ಎಂದು ಹೇಳಿದೆ.
ಈ ಸಂಬಂಧ ಶಾಸನ ಕೂಡ ರಚನೆಯಾಗಬೇಕು ಎಂದು ಹೇಳಿರುವ ನ್ಯಾಯಪೀಠ, ‘ಶಾಸನ ರಚನೆ ಆಗುವವರೆಗೆ ನಾವು ರೂಪಿಸಿರುವ ಮಾರ್ಗದರ್ಶಿ ನಿಯಮಗಳು ಜಾರಿಯಲ್ಲಿರುತ್ತವೆ’ ಎಂದು ತಿಳಿಸಿದೆ. ಮುಖ್ಯ ನ್ಯಾಯಾಧೀಶರು ಮತ್ತು ಇತರ 4 ನ್ಯಾಯಾಧೀಶರು ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ತೀರ್ಪುಗಳನ್ನು ಬರೆದಿದ್ದಾರಾದರೂ ‘ಜೀವಂತ ಉಯಿಲು ಅನುಜ್ಞಾರ್ಹ’ ಎಂದು ಎಲ್ಲರೂ ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ
ಜೀವಂತ ಉಯಿಲು ರಚನೆಗೆ ಸುರಕ್ಷಿತ ಮಾರ್ಗಸೂಚಿಗಳು
ನವದೆಹಲಿ: ಮರಣಶಯ್ಯೆಯಲ್ಲಿರುವ ರೋಗಿಗಳು ‘ಜೀವಂತ ಉಯಿಲು’ಗಳನ್ನು ಬರೆದು ನೆಮ್ಮದಿಯಿಂದ ಕಣ್ಣು ಮುಚ್ಚಬಹುದು ಎಂಬ ಐತಿಹಾಸಿಕ ತೀರ್ಪು ನೀಡಿದೆ. ಇದೇ ಸಂದರ್ಭದಲ್ಲಿ ಜೀವಂತ ಉಯಿಲನ್ನು ಯಾರು ಬರೆಯಬಹುದು ಎಂಬ ಬಗ್ಗೆ ಮಾರ್ಗದರ್ಶಿ ನಿಯಮಗಳನ್ನು ಬಿಡುಗಡೆ ಮಾಡಿದೆ. ಈ ಸಂಬಂಧ ಶಾಸನ ಕೂಡ ರಚನೆಯಾಗಬೇಕು ಎಂದು ಹೇಳಿರುವ ನ್ಯಾಯಪೀಠ, ‘ಶಾಸನ ರಚನೆ ಆಗುವವರೆಗೆ ನಾವು ರೂಪಿಸಿರುವ ಮಾರ್ಗದರ್ಶಿ ನಿಯಮಗಳು ಜಾರಿಯಲ್ಲಿರುತ್ತವೆ’ ಎಂದು ತಿಳಿಸಿದೆ.
- ವಿಷಯಕ್ಕೆ ಸಂಬಂಧಿಸಿದಂತೆ ಸಂಸತ್ತು ಕಾನೂನು ರಚಿಸುವವರೆಗೂ ಈ ಸುರಕ್ಷಿತ ಮಾರ್ಗಸೂಚಿಗಳು ಚಾಲ್ತಿಯಲ್ಲಿರುತ್ತವೆ.
- ಮಾನಸಿಕವಾಗಿ ಸದೃಢ, ಸುಸ್ಥಿರ ಆರೋಗ್ಯವಂತ ವಯಸ್ಕ ವ್ಯಕ್ತಿ ಮಾತ್ರ ಜೀವಂತ ಉಯಿಲು ನಿರ್ವಹಿಸಬಹುದು.
- ಆ ನಿರ್ವಾಹಕನಿಗೆ ಸಂವಹನ ಸಾಮರ್ಥ್ಯ, ಉದ್ದೇಶ ಮತ್ತು ಇಂತಹ ದಾಖಲೆ ಜಾರಿಗೊಳ್ಳುವುದರ ಪರಿಣಾಮ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇರಬೇಕು.
- ಈ ದಾಖಲೆ ಯಾವುದೇ ಪ್ರಭಾವ ಬೀರದ, ಸಮ್ಮತಿಯ ತಿಳುವಳಿಕೆಯ ಲಕ್ಷಣಗಳು ಮತ್ತು ಯಾವುದೇ ದೌರ್ಜನ್ಯವಿಲ್ಲದೆ ಸ್ವಯಂ ಜಾರಿಯಾಗಿರಬೇಕು.
- ಯಾವಾಗಿನಿಂದ ವೈದ್ಯಕೀಯ ಚಿಕಿತ್ಸೆ ಹಿಂಪಡೆಯಬಹುದು ಎಂಬುದನ್ನು ಸ್ಪಷ್ಟವಾಗಿ ನಮೂದಿಸಿರಬೇಕು.
- ಇಂತಹ ದಾಖಲೆ ಜಾರಿಗೊಳ್ಳುವುದರ ಪರಿಣಾಮ ಜಾರಿಗೊಳಿಸುವವನಿಗೆ ಸ್ಪಷ್ಟವಾಗಿ ಅರ್ಥವಾಗಿದೆ ಎಂದು ನಮೂದಿಸಿರಬೇಕು.
- ಸಂಬಂಧಿತ ಸಮಯದಲ್ಲಿ ನಿರ್ಧಾರ ಕೈಗೊಳ್ಳುವುದಕ್ಕೆ ಸಮರ್ಥನಾಗಿರುವ ದಾಖಲೆ ಜಾರಿಗೊಳಿಸುವ ಪೋಷಕ ಅಥವಾ ಹತ್ತಿರದ ಸಂಬಂಧಿಯ ಹೆಸರು ನಮೂದಿಸಿರಬೇಕು.
- ಪ್ರಕ್ರಿಯೆ ಜಾರಿಗೊಳ್ಳುವುದಕ್ಕೂ ಮುನ್ನಾ ಯಾವುದೇ ಸಂದರ್ಭದಲ್ಲಾದರೂ ದಾಖಲೆ ಹಿಂಪಡೆಯಬಹುದಾದ ಅಧಿಕಾರ ದಾಖಲೆ ಜಾರಿಗೊಳಿಸುವ ವ್ಯಕ್ತಿಗೆ ಇರುತ್ತದೆ.
- ವೈದ್ಯಕೀಯ ಮಂಡಳಿಯ ಅನುಮತಿ ಪಡೆದಿರಬೇಕು
- ಮಂಡಳಿಯ ಅನುಮತಿ ದೊರೆತಲ್ಲಿ, ಆಸ್ಪತ್ರೆ ಅದರ ಮಾಹಿತಿ ಜಿಲ್ಲಾಧಿಕಾರಿಗೆ ನೀಡಬೇಕು, ಜಿಲ್ಲಾಧಿಕಾರಿ ಜಿಲ್ಲಾ ವೈದ್ಯಾಧಿಕಾರಿಯನ್ನು ಅಧ್ಯಕ್ಷರನ್ನಾಗಿಸಿದ ಮೂವರು ತಜ್ಞರ ಸಮಿತಿ ರಚಿಸಬೇಕು
- ರೋಗಿಯ ಕುಟುಂಬಿಕರು, ಚಿಕಿತ್ಸೆ ನೀಡುವ ವೈದ್ಯರು, ಆಸ್ಪತ್ರೆ ಸಿಬ್ಬಂದಿ ನಡುವೆ ವಿಷಯಕ್ಕೆ ಸಂಬಂಧಿಸಿ ಭಿನ್ನಾಭಿಪ್ರಾಯ ಇದ್ದಲ್ಲಿ, ಅವರು ಹೈಕೋರ್ಟ್ ಮೆಟ್ಟಿಲೇರಬಹುದು